ಗುರುವಾರ, ಜೂನ್ 4, 2020

ಮಾವಿನಕಾಯಿ ಕಡಿಗಾಯಿ ಉಪ್ಪಿನಕಾಯಿ:

ಸಾಮಗ್ರಿಗಳು:
ದಪ್ಪ ಸಿಪ್ಪೆಯ ಹುಳಿ ಮಾವಿನಕಾಯಿ ಹೆಚ್ಚಿದ್ದು: 5 ಕಪ್
ದಪ್ಪ ಸಾಸಿವೆ: 1 ಕಪ್
ಜೀರಿಗೆ: 1/2 ಕಪ್ ಕಿಂತ ಸ್ವಲ್ಪ ಕಮ್ಮಿ
ಮೆಂತ್ಯ: 2 ಚಮಚ
ಅಚ್ಚ ಖಾರದ ಪುಡಿ: 1/2 ಕಪ್ (ಖಾರಕ್ಕೆ ತಕ್ಕಂತೆ ಹೆಚ್ಚು ಕಮ್ಮಿ ಮಾಡಿಕೊಳ್ಳಿ) 
ಲವಂಗ: 2-3
ಕಾಳುಮೆಣಸು: 1/2 ಚಮಚ
ಉಪ್ಪು: 1 ಕಪ್ ನಷ್ಟು (ನಾನು ಸಾಣಿಕಟ್ಟ ಕಲ್ಲುಪ್ಪು ಉಪಯೋಗಿಸಿದ್ದು) 
ಎಣ್ಣೆ: 1/4 ಕಪ್
ಇಂಗು: 1/2 ಚಮಚ

ವಿಧಾನ: 
ಮಾವಿನಕಾಯಿಯನ್ನು ತೊಳೆದು ನೀರು ಇರದಂತೆ ಶುಭ್ರ ಬಟ್ಟೆಯಲ್ಲಿ ಚೆನ್ನಾಗಿ ಒರೆಸಿ, ಸ್ವಲ್ಪ ಹೊತ್ತಿನ ನಂತರ ಕತ್ತರಿಸಿ ಇಟ್ಟುಕೊಳ್ಳಬೇಕು. ಉಪ್ಪನ್ನು ಹುರಿದು ತಣ್ಣಗಾಗಲು ಬಿಡಿ. ಗಾಳಿಯಾಡದ ಡಬ್ಬದಲ್ಲಿ ಕತ್ತರಿಸಿದ ಮಾವಿನಕಾಯಿ ಹೋಳುಗಳನ್ನು ಒಂದು ಮುಷ್ಟಿ ಹಾಕಿ ಮೇಲಿಂದ ಸ್ವಲ್ಪ ಉಪ್ಪು ಉದುರಿಸಿ, ಮತ್ತೆ ಮಾವಿನಕಾಯಿ ಹಾಕಿ ಉಪ್ಪು ಉದುರಿಸಿ. ಮಧ್ಯ ಮಧ್ಯ ಮೆಂತ್ಯ ಕಾಳುಗಳನ್ನೂ ಹೀಗೆಯೇ ಉದುರಿಸಿಕೊಳ್ಳಿ. ಹೀಗೆಯೇ ಪೂರ್ತಿ ಮಾವಿನಕಾಯಿ ಹೋಳುಗಳಿಗೂ ಮಾಡಿ. ಮೇಲಿಂದ ಎಣ್ಣೆ ಸುರಿದು (ಕಾಯಿಸಿ ಆರಿಸಿ ಬೇಕಾದರೂ ಹಾಕಬಹುದು. ನಾನು ಫ್ರೆಶ್ ತೆಂಗಿನೆಣ್ಣೆ ಹಾಕುವುದರಿಂದ ಹಾಗೆಯೇ ಹಾಕುತ್ತೇನೆ) ಮುಚ್ಚಳ ಮುಚ್ಚಿ 1-2 ದಿನ ಬಿಡಿ. ಉಪ್ಪು ನೀರಾದಂತೆ ಹೋಳುಗಳನ್ನು ಸ್ವಲ್ಪ ಮೇಲೆ ಕೆಳಗೆ ಮಾಡುತ್ತಿರಿ. 
ಈಗ ಮಸಾಲೆ ಪುಡಿ ಮಾಡಿಕೊಳ್ಳಿ. ಬಾಣಲೆಯಲ್ಲಿ ಸಾಸಿವೆಯನ್ನು ಹುರಿದು ಒಂದು ತಟ್ಟೆಗೆ ತೆಗೆದಿಟ್ಟಕೊಳ್ಳಿ. ನಂತರ ಜೀರಿಗೆ ಹಾಕಿ ಹುರಿದುಕೊಳ್ಳಿ. ಲವಂಗ, ಕಾಳುಮೆಣಸು ಹುರಿದುಕೊಳ್ಳಿ. ಎಲ್ಲವನ್ನೂ ತಣ್ಣಗಾಗಲು ಬಿಡಿ. ಮೊದಲು ಸಾಸಿವೆಯನ್ನು ಮಿಕ್ಸಿಗೆ ಹಾಕಿ ತರಿ ತರಿ ಪುಡಿ ಮಾಡಿ ತೆಗೆದುಕೊಳ್ಳಿ. ನಂತರ ಉಳಿದ ಹುರಿದ ಸಾಮಗ್ರಿ ಮತ್ತು ಇಂಗು ಸೇರಿಸಿ ಚೆನ್ನಾಗಿ ಪುಡಿ ಮಾಡಿ. ಒಂದು ಅಗಲವಾದ ಪಾತ್ರೆಗೆ ಮಾಡಿದ ಪುಡಿಗಳು, ಮೆಣಸಿನ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇದಕ್ಕೆ ಉಪ್ಪಿನಲ್ಲಿ ಹಾಕಿಟ್ಟ ಮಾವಿನಕಾಯಿ ಹೋಳುಗಳನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಗಾಳಿಯಾಡದಂತೆ ಜಾಡಿಯಲ್ಲಿ ತುಂಬಿಡಿ. ಹೋಳುಗಳನ್ನು ಸ್ವಲ್ಪ ಮೆತ್ತಗಾಗಿ ಹುಳಿ ಬಿಟ್ಟುಕೊಂಡ ನಂತರ ಉಪಯೋಗಿಸಿ.

ಶುಕ್ರವಾರ, ಮೇ 24, 2019

ಡ್ರೈ ಫ್ರೂಟ್ಸ್ ಲಡ್ಡು :

ಇದು ಸತ್ವಯುತ ಲಡ್ಡು. ಸಕ್ಕರೆ, ಬೆಲ್ಲ ಯಾವುದನ್ನೂ ಹಾಕದೇ ಮಾಡುವುದರಿಂದ ಆರೋಗ್ಯಕರ. ನೀರು ಹಾಕದೇ ಮಾಡುವುದರಿಂದ ಬೇಗ ಕೆಡುವುದೂ ಇಲ್ಲ. ಸಮಯವಿದ್ದಾಗ ಮಾಡಿಟ್ಟರೆ ಮಕ್ಕಳು ಹಸಿವು ಎಂದಾಗ ಕೊಡಬಹುದು. ಆಡುವ ಮಕ್ಕಳಿಗೆ ಶಕ್ತಿಯುತ, ರುಚಿ ಕೂಡ ಇರುವುದರಿಂದ ಮಕ್ಕಳು ತಂಟೆ ಮಾಡದೇ ತಿನ್ನುತ್ತಾರೆ. ವಾಲ್ನಟ್ ಅನ್ನು ಎಲ್ಲಾ ಮಕ್ಕಳು ಹಾಗೆಯೇ ತಿನ್ನಲು ಇಷ್ಟ ಪಡುವುದಿಲ್ಲ, ಏಕೆಂದರೆ ಅದು ತಿನ್ನಲು ರುಚಿಯಲ್ಲ.  ಆದರೆ ಇದು ಮೆದುಳಿನ ಬೆಳವಣಿಗೆಗೆ ಪೂರಕ. ಈ ಉಂಡೆಗೆ ಹಾಕಿದರೆ ಗೊತ್ತಾಗದಂತೆ ತಿನ್ನಿಸಬಹುದು.

ಸಾಮಗ್ರಿಗಳು :
ಬಾದಾಮಿ - 2 ಕಪ್
ಗೋಡಂಬಿ - 1 ಕಪ್
ಒಣ ದ್ರಾಕ್ಷಿ - 2 ಕಪ್
ವಾಲ್ನಟ್ - 1 ಕಪ್
ಪಿಸ್ತಾ (unsalted) - 1 ಕಪ್ 
ಖರ್ಜೂರ - 3 ಕಪ್
ಎಳ್ಳು - 1-2 ಚಮಚ
ತುಪ್ಪ -  3-4 ಚಮಚ
(ಸಾಮಗ್ರಿಗಳನ್ನು ನಿಮಗೆ ಬೇಕಾದಂತೆ ಹೆಚ್ಚು ಕಮ್ಮಿ ಮಾಡಿಕೊಳ್ಳಬಹುದು. ಗೋಡಂಬಿ ಉಷ್ಣ ಗುಣದ್ದಾಗಿದ್ದು ಸ್ವಲ್ಪ ಹಾಕಿದರೆ ಸಾಕು. ಎಳ್ಳಿನ ಬದಲು ಹುರಿದ ಗಸಗಸೆ ಆದರೂ ಚೆನ್ನಾಗಿರುತ್ತದೆ)

ವಿಧಾನ :
ದ್ರಾಕ್ಷಿ ಬಿಟ್ಟು ಉಳಿದ ಡ್ರೈ ಫ್ರೂಟ್ಸ್ ಗಳನ್ನ ಬೇರೆ ಬೇರೆಯಾಗಿ ಸಣ್ಣಗೆ ಹೆಚ್ಚಿ ಚೂರು ಮಾಡಿಕೊಳ್ಳಿ. ಬಾಣಲೆಗೆ ೧ ಚಮಚ ತುಪ್ಪ ಹಾಕಿ ಒಂದೊಂದಾಗಿ ಹೆಚ್ಚಿದ ಡ್ರೈ ಫ್ರೂಟ್ಸ್ ಗಳನ್ನು ಘಮ್ಮೆನ್ನುವಂತೆ ಹುರಿಯಿರಿ. 

ಖರ್ಜೂರವನ್ನು ಹುರಿಯದಿದ್ದರೂ ಆಗುತ್ತದೆ. ಖರ್ಜೂರವನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ (ನೀರು ಹಾಕಬಾರದು). ಬಾಣಲೆಗೆ ಸಾಮಗ್ರಿಗಳು, ಉಳಿದ ಒಂದು ಚಮಚ ತುಪ್ಪ ಮತ್ತು ರುಬ್ಬಿದ ಖರ್ಜೂರ ಹಾಕಿ ಸಣ್ಣ ಉರಿಯಲ್ಲಿ ಚೆನ್ನಾಗಿ ಮಿಕ್ಸ್ ಮಾಡಿ. ಉರಿ ಆರಿಸಿ ಸ್ವಲ್ಪ ಆರಲು ಬಿಟ್ಟು ಎಷ್ಟಾಗುತ್ತದೋ ಅಷ್ಟು ಬಿಸಿ ಇರುವಾಗಲೇ ಪುಟ್ಟ ಪುಟ್ಟ ಉಂಡೆ ಕಟ್ಟಿ. ಒಂದು ಪ್ಲೇಟ್ ನಲ್ಲಿ ಎಳ್ಳು ಅಥವಾ ಹುರಿದ ಗಸಗಸೆ ಹರವಿಕೊಂಡು ಅದರಲ್ಲಿ ಕಟ್ಟಿದ ಉಂಡೆಯನ್ನ ಹೊರಳಿಸಿ ಡಬ್ಬದಲ್ಲಿ ತುಂಬಿಡಿ. ಎರಡು ತಿಂಗಳವರೆಗೂ ಕೆಡದಂತೆ ಇರುವ ಈ ಉಂಡೆಯನ್ನು ಮಕ್ಕಳಿಗೆ ಕೊಟ್ಟರೆ ಖುಷಿಯಿಂದ ತಿನ್ನುತ್ತಾರೆ.




ಸೂಚನೆ: ಬೇರೆ ಬೇರೆ ತರಹದ ಖರ್ಜೂರ ಸಿಗುವುದರಿಂದ ಸಿಹಿಯಲ್ಲಿ ಕೂಡ ವ್ಯತ್ಯಾಸವಿರುತ್ತದೆ. ನಿಮ್ಮ ಸಿಹಿಗನುಗುಣವಾಗಿ ಹೆಚ್ಚು ಕಮ್ಮಿ ಹಾಕಿಕೊಳ್ಳಬಹುದು. 

ಬುಧವಾರ, ಮಾರ್ಚ್ 13, 2019

ಮಂಡಕ್ಕಿ ಒಗ್ಗರಣೆ (ಗಿರ್ಮಿಟ್ - ಉತ್ತರ ಕರ್ನಾಟಕ ಸ್ಟೈಲ್) :

ಸಾಮಗ್ರಿಗಳು :
ಮಂಡಕ್ಕಿ (ಪುರಿ) : 6-7 ಬೌಲ್ 
ಈರುಳ್ಳಿ : 1
ಟೊಮೇಟೊ : 1 
ಹುರಿಗಡಲೆ ಪುಡಿ : 5 ಟೇಬಲ್ ಚಮಚ 
ಹಸಿಮೆಣಸು : 5-6
ಅರಿಶಿನ ಪುಡಿ : 1/2 ಚಮಚ
ಶೇಂಗಾ : 4-5 ಟೇಬಲ್ ಚಮಚ 
ಉದ್ದಿನಬೇಳೆ : 1 ಚಮಚ 
ಸಾಸಿವೆ : 1/2 ಚಮಚ 
ಜೀರಿಗೆ : 1/2 ಚಮಚ 
ಕರಿಬೇವು : ಸ್ವಲ್ಪ 
ಕೊತ್ತಂಬರಿ ಸೊಪ್ಪು : ಸ್ವಲ್ಪ 
ಉಪ್ಪು : ಸ್ವಲ್ಪ 
ಲಿಂಬುರಸ : 1 ಟೇಬಲ್ ಚಮಚ 
ಎಣ್ಣೆ : 4-5 ಟೇಬಲ್ ಚಮಚ 

ವಿಧಾನ : ಮಂಡಕ್ಕಿಯನ್ನು ನೀರಿನಲ್ಲಿ ನೆನೆಸಿ ಸ್ವಲ್ಪ ಮೆತ್ತಗಾಗುತ್ತಿದ್ದಂತೇ ತೆಗೆದು ನೀರು ಹಿಂಡಿ ಒಂದು ಪಾತ್ರೆಗೆ ಹಾಕಿಟ್ಟುಕೊಳ್ಳಿ. ಬಾಣಲೆಗೆ ಎಣ್ಣೆ ಹಾಕಿ ಕಾಯಿಸಿ ಶೇಂಗಾ ಹಾಕಿ ಹುರಿಯಿರಿ, ಉದ್ದಿನ ಬೇಳೆ ಹಾಕಿ ಕೆಂಪಗಾದ ಮೇಲೆ ಜೀರಿಗೆ, ಸಾಸಿವೆ ಹಾಕಿ ಸಿಡಿಸಿ.  ಇದಕ್ಕೆ ಉದ್ದುದ್ದ ಸೀಳಿದ ಹಸಿಮೆಣಸಿನ ಕಾಯಿ, ಕರಿಬೇವು ಹಾಕಿ ಹುರಿದು, ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಹುರಿಯಿರಿ. ನಂತರ ಸಣ್ಣ ಹೆಚ್ಚಿದ ಟೊಮೇಟೊ ಹಾಕಿ ಸ್ವಲ್ಪ ಉಪ್ಪು ಹಾಕಿ (ಮಂಡಕ್ಕಿಯಲ್ಲಿ ಉಪ್ಪಿನಂಶ ಇರುವುದರಿಂದ ಸ್ವಲ್ಪ ಹಾಕಿದರೆ ಸಾಕು) ಟೊಮೇಟೊ ಮೆತ್ತಗಾಗುವವರೆಗೆ ಹುರಿಯಿರಿ. ಇದಕ್ಕೆ ಅರಿಶಿನ ಪುಡಿ ಹಾಕಿ ಮಿಕ್ಸ್ ಮಾಡಿ. ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪು, ರೆಡಿ ಮಾಡಿಟ್ಟ ಮಂಡಕ್ಕಿ ಹಾಕಿ, ಲಿಂಬು ರಸ, ಹುರಿಗಡಲೆ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಉರಿ ಆರಿಸಿ. ಬಿಸಿ ಬಿಸಿಯಾದ ಉತ್ತರ ಕರ್ನಾಟಕ ಶೈಲಿಯ ಒಗ್ಗರಣೆ ಮಂಡಕ್ಕಿ ಟೀ, ಕಾಫಿ ಜೊತೆ ಸವಿಯಿರಿ. ಇದರ ಜೊತೆ ಖಾರಕ್ಕೆ ಮೆಣಸಿನ ಕಾಯಿ ಬೇಕಿದ್ದಲ್ಲಿ : ಹಸಿಮೆಣಸಿನಕಾಯಿ ಸ್ವಲ್ಪ ಸೀಳಿ ಅದಕ್ಕೆ ಸ್ವಲ್ಪವೇ ಉಪ್ಪು ಹಾಕಿ (ಬೇಕಿದ್ದಲ್ಲಿ ಆಮಚೂರ್ ಪುಡಿ ಹಾಕಿ) ಎಣ್ಣೆಯಲ್ಲಿ ಹುರಿದು ತೆಗೆದಿಟ್ಟುಕೊಳ್ಳಿ. ಖಾರಕ್ಕೆ ಬೇಕಿದ್ದಲ್ಲಿ ಈ ಮೆಣಸನ್ನು ತಿನ್ನಲು ರುಚಿಯಾಗಿರುತ್ತದೆ. 


ಗುರುವಾರ, ಫೆಬ್ರವರಿ 21, 2019

ಬಾಣಂತಿ ಕಟ್ನೆ :

  ಇವತ್ತು ಬಾಣಂತಿಗೆ ಊಟಕ್ಕೆ ಮಾಡುವ ಕಟ್ನೆಯ ಬಗ್ಗೆ ತಿಳಿಯೋಣ. ಕಟ್ನೆ ಎಂದರೆ ಅನ್ನದ ಜೊತೆ ತಿನ್ನುವ ಗೊಜ್ಜಿನಂಥ ಒಂದು ಪದಾರ್ಥ. ಕನ್ನೆ ಕುಡಿ / ಸೊರ್ಲೆ ಕುಡಿ ಅಥವಾ ಎಲವರಿಗೆ ಕುಡಿ ಬಳಸಿ ಕಟ್ನೆ ಮಾಡುತ್ತಾರೆ, ಇದು ಎಲ್ಲರೂ ತಿನ್ನುವ ಪದಾರ್ಥ. ನಾ ಈಗ ಹೇಳ ಹೊರಟಿರುವುದು ಬಾಣಂತಿಗಾಗಿ ಮಾಡುವ ಸರ್ವ ಕುಡಿಗಳ ಕಟ್ನೆ. ಹಲವಾರು ಔಷಧಿಯುಕ್ತ ಕುಡಿಗಳನ್ನು ಹಾಕಿ ಇದನ್ನು ಮಾಡುತ್ತಾರೆ. ಶೀತ, ವಾತ ತಡೆಯಲು, ಮೈ ಕೈ ನೋವು ಕಮ್ಮಿಯಾಗಲು, ರೋಗ ನಿರೋಧಕ ಶಕ್ತಿಗೆ ಹೀಗೆ ಹಲವಾರು ಕಾರಣಗಳಿಗೆ ಒಟ್ಟಿನಲ್ಲಿ ಬಾಣಂತಿಗೆ ಶಕ್ತಿ ವರ್ಧಕವಾಗಿ ಈ ಹಸಿರು ಕುಡಿಗಳ ಕಟ್ನೆ ಸಹಾಯಕ. ಇವುಗಳಲ್ಲಿ ಎಷ್ಟು ಕುಡಿಗಳ ಲಭ್ಯತೆಯಿದೆಯೋ ಅಷ್ಟನ್ನು ನೀವು ಹಾಕಿಕೊಳ್ಳಬಹುದು. ನನ್ನ ಅಮ್ಮ ಇದನ್ನು ಮಾಡುವ ಸಂದರ್ಭದಲ್ಲಿ ಎಲವರಿಗೆ ಕುಡಿ, ದಾಳಿಂಬೆ ಕುಡಿ, ಮದರಂಗಿ ಕುಡಿಗಳು ಲಭ್ಯವಾಗಿಲ್ಲದ ಕಾರಣ ಅವುಗಳ ಫೋಟೋ ನನ್ನ ಬಳಿ ಇಲ್ಲ. ನೀವು ಇವುಗಳನ್ನೂ ಸೇರಿಸಿ ಮಾಡಿಕೊಳ್ಳಿ. ಬಾಣಂತಿಗೆ ಹಸಿ ತೆಂಗಿನ ಕಾಯಿ ಬಳಸಬಾರದು. ಒಣ ಕೊಬ್ಬರಿಯನ್ನೇ ಹಾಕಬೇಕು. 

ಸಾಮಗ್ರಿಗಳು :
ಕನ್ನೇ ಕುಡಿ (ಸೊರ್ಲೆ ಕುಡಿ) : 2 ಮುಷ್ಠಿ
ಎಲವರಿಗೆ ಕುಡಿ : 1 ಮುಷ್ಠಿ 
ಮದರಂಗಿ ಕುಡಿ : 2 
ದಾಳಿಂಬೆ ಕುಡಿ : 2 
ಪುನ್ನಾಗ ಕುಡಿ : 2
ಗೆಂಟಿಗೆ ಕುಡಿ : 2
ಮುಂಬೈ ಮಲ್ಲಿಗೆ ಕುಡಿ : 2
ವಾತಂಗಿ ಕುಡಿ : 4-5
ಶುಗರ್ ಸೊಪ್ಪು : 2 
ಸೂಜಿ ಮೆಣಸು ಕುಡಿ : 2
ಅಬ್ಬಲಿಗೆ / ಕನಕಾಂಬರ ಕುಡಿ : 2
ಗಣಿಕೆ ಕುಡಿ : 2
ತುಳಸಿ ಕುಡಿ : 2
ಅಗಸೆ ಕುಡಿ : 2
ಕಾಳುಮೆಣಸು ಎಲೆ : 2 
ನಾಗವಲ್ಲಿ ಎಲೆ : 2
ಹೊಳೆ (ಗುಡ್ಡೆ) ದಾಸವಾಳ (ಕೇಪುಳ) ಕುಡಿ : 2
ಮುತ್ತು ಮಲ್ಲಿಗೆ ಕುಡಿ : 2
ನಂದಿ ಬಟ್ಟಲು ಕುಡಿ : 2
ಮಧ್ಯಾಹ್ನ ಮಲ್ಲಿಗೆ ಕುಡಿ : 2
ದಾಲ್ಚಿನ್ನಿ ಕುಡಿ : 2 
ದಾಸವಾಳ ಕುಡಿ : 2
ಕಳ್ಳಂ ಕಡ್ಲೆ ಕುಡಿ : 2
ಲಕ್ಕಿ ಕುಡಿ : 2
ಲಿಂಬು ಕುಡಿ : 2
ಸೀಗೆ ಕುಡಿ : 2 
ಚಂದಕಲು ಮುಳ್ಳಿನ ಕುಡಿ : 2
ಕಸುವಿನ ಬಳ್ಳಿ : 2
ಇಲಿ ಕಿವಿ ಸೊಪ್ಪು : 2
ದುಂಡು ಮಲ್ಲಿಗೆ ಕುಡಿ : 2
ರಾಮ ತುಳಸಿ ಕುಡಿ : 2 

ಜೀರಿಗೆ : 3 ಟೇಬಲ್ ಚಮಚ 
ಬೋಳ ಕಾಳು (white pepper) : 1 ಟೇಬಲ್ ಚಮಚ 
ಒಣ ಕೊಬ್ಬರಿ : ಅರ್ಧ  

ವಿಧಾನ :
  ಎಲ್ಲಾ ಕುಡಿಗಳನ್ನು ಹುಳುಗಳಿಲ್ಲದಂತೆ ಸ್ವಚ್ಛ ಮಾಡಿ, ಚೆನ್ನಾಗಿ ತೊಳೆದುಕೊಳ್ಳಿ. ನಂತರ ಒಂದು ಪಾತ್ರೆಗೆ ಹಾಕಿ ನೀರು ಹಾಕಿ, ಜೀರಿಗೆ, ಬೋಳ ಕಾಳು ಹಾಕಿ 10-15 ನಿಮಿಷ ಚೆನ್ನಾಗಿ ಬೇಯಿಸಿ. ಕೊಬ್ಬರಿಯನ್ನು ಹೆಚ್ಚಿಕೊಳ್ಳಿ ಅಥವಾ ತುರಿದುಕೊಳ್ಳಿ. ಬೇಯಿಸಿದ ಮಿಶ್ರಣ ತಣ್ಣಗಾದ ಮೇಲೆ ಕೊಬ್ಬರಿ ಜೊತೆ ಸೇರಿಸಿ ರುಬ್ಬಿಕೊಳ್ಳಿ. ನಂತರ ನೀರು, ಉಪ್ಪು ಸೇರಿಸಿ ಕುದಿಸಿ. ಹಳೆಯ ಕಾಲದಲ್ಲಿ ಇದನ್ನು ಕಂಚಿನ ಅಥವಾ ಮಣ್ಣಿನ ಪಾತ್ರೆಯಲ್ಲಿ ದಿನಾಲೂ  ಕುದಿಸಿ ಇಡುತ್ತಿದ್ದರು. ಐದಾರು ದಿನಗಳವರೆಗೆ ಬಳಸಬಹುದು. ಬೇಕಿದ್ದಲ್ಲಿ ದಿನಾ ಬಡಿಸುವಾಗ ಸ್ವಲ್ಪ ಕಟ್ನೆಗೆ ತುಪ್ಪ, ಜಜ್ಜಿದ ಬೆಳ್ಳುಳ್ಳಿ ಒಗ್ಗರಣೆ ಮಾಡಿ ಹಾಕಬಹುದು. ಅಷ್ಟೂ ಕಟ್ನೆಗೆ ಒಗ್ಗರಣೆ ಮಾಡಿದರೆ ಐದಾರು ದಿನ ರುಚಿಯಾಗಿರುವುದಿಲ್ಲ. 


  ಮೊದಲೇ ತಿಳಿಸಿದಂತೆ ಎರಡು ತುತ್ತು ಅನ್ನಕ್ಕೆ ಜೀರಿಗೆ, ಮೆಣಸಿನ ಪುಡಿ ಹಾಕಿ ಆದ ಮೇಲೆ ಸ್ವಲ್ಪ ಅನ್ನಕ್ಕೆ ಒಂದು ದೊಡ್ಡ ಚಮಚ ತುಪ್ಪ ಮತ್ತು ಕಟ್ನೆ ಹಾಕಿ ಊಟ ಬಡಿಸಬೇಕು. ನಂತರ ಸ್ವಲ್ಪೇ ಅನ್ನಕ್ಕೆ ದೊಡ್ಡ ಸೌಟು ಗಟ್ಟಿ ಮೊಸರು ಬಡಿಸಬೇಕು. ಬಡಿಸುವ ಒಂದೇ ಸೌಟು ಬಿಸಿ ಅನ್ನಕ್ಕೆ ಇಷ್ಟೆಲ್ಲಾ ಆಗಬೇಕು ....!! ನೆನಪಿಡಿ ಬಾಣಂತಿಗೆ ಹಸುವಿನ ತುಪ್ಪ - ಹಾಲು - ಮೊಸರು ಶ್ರೇಷ್ಠ. 

  ಕುಡಿಗಳ ಪರಿಚಯಕ್ಕೆ ಫೋಟೋ ಹಾಕಿದ್ದೇನೆ. 





ಶುಕ್ರವಾರ, ಫೆಬ್ರವರಿ 8, 2019

ಹೊಳೆ ದಾಸವಾಳ ಬೇರಿನ ಕಷಾಯ:

   ಹೊಳೆ ದಾಸವಾಳ ಅಥವಾ ಗುಡ್ಡೆ ದಾಸವಾಳ ಎನ್ನುವ ಸಸ್ಯ ಮಲೆನಾಡು ಮತ್ತು ಕರಾವಳಿ ಪ್ರದೇಶಗಲ್ಲಿ ಹೆಚ್ಚಾಗಿ ಸಿಗುವ ಸಸ್ಯ. ಇದರಲ್ಲಿ ಬಿಳಿ ಮತ್ತು ಕೆಂಪು ಜಾತಿಗಳಿವೆ. ಕೆಂಪನೆ ಪುಟ್ಟ, ಸಿಹಿ ಮತ್ತು ಒಗರು ಮಿಶ್ರಿತ ಹಣ್ಣುಗಳಾಗುತ್ತವೆ. (ಕೆಳಗೆ ಹೂವು, ಹಣ್ಣು ಮತ್ತು ಬೇರಿನ ಚಿತ್ರ ಹಾಕಿದ್ದೇನೆ). ಇದರ ಬೇರನ್ನು ಕಿತ್ತು ತಂದು ಚೆನ್ನಾಗಿ ತೊಳೆದು, ಜಜ್ಜಿ ಕಷಾಯ ಮಾಡಿ ಬಾಣಂತಿಗೆ ಕುಡಿಯಲು ಕೊಡುತ್ತಾರೆ.  ಸ್ನಾನ ಮುಗಿಸಿ, ಬೆವರು ಇಳಿಸಿ ಸುಸ್ತಾಗಿ ಬೆಂಕಿ ಕಾಯಿಸುವಾಗ ಕೊಡುವ ಈ ಬಿಸಿ ಬಿಸಿ ಕಷಾಯ ಬಾಳಂತಿಯರಿಗೆ ಅಮೃತ ಕುಡಿದಷ್ಟು ಆನಂದ ನೀಡುತ್ತದೆ. ಅಲ್ಲದೇ ಮಧ್ಯಾಹ್ನ ಮತ್ತು ಸಂಜೆ ಊಟ ಮಾಡುವಾಗ ನೀರಿನ ಬದಲು ಈ ಕಷಾಯವನ್ನೇ ಕೊಡಲಾಗುತ್ತದೆ. ನೀರನ್ನು ಜಾಸ್ತಿ ಕುಡಿದರೆ ವಾತ ಎಂದು ಹೇಳಲಾಗುತ್ತದೆ. ಕುಡಿಯುವುದಾದರೂ ಬಿಸಿ ನೀರನ್ನು ಕುಡಿಯಬೇಕು. ತಂಪಾದ ಯಾವುದೇ ಪಾನೀಯ ಬಾಣಂತಿಯರಿಗೆ ವರ್ಜ್ಯ. ಈಗ ಈ ಕಷಾಯ ಮಾಡುವುದನ್ನು ಕಲಿಯೋಣ. 





ಸಾಮಗ್ರಿಗಳು :
ಗುಡ್ಡೆ ದಾಸವಾಳ ಬೇರು - ಒಂದು ಮುಷ್ಠಿ 
ಬೋಳ ಕಾಳು (white pepper) - 1 ಚಮಚ 
ಜೀರಿಗೆ - 2-3 ಚಮಚ 
ನೀರು - 4-5 ಲೀಟರ್ 

ವಿಧಾನ : 
ಮೊದಲು ದಾಸವಾಳ ಬೇರನ್ನು ತೊಳೆದು, ಸ್ವಲ್ಪ ಜಜ್ಜಿಕೊಳ್ಳಿ. ದೊಡ್ಡ ಪಾತ್ರೆಯಲ್ಲಿ ನೀರು ಹಾಕಿ ಅದಕ್ಕೆ ಉಳಿದೆಲ್ಲ ಸಾಮಗ್ರಿ ಹಾಕಿ ಕುದಿಸಲು ಇಡಿ. ನೀರು ಕುದಿದು  ಕಾಲು ಭಾಗದಷ್ಟಾದರೂ ಇಂಗಬೇಕು. ಕೆಂಪು ದಾಸವಾಳದ ಬೇರಾದರೆ ಕೆಂಪಗಿನ ಕಷಾಯ ಆಗುತ್ತದೆ. 

ನಂತರ ಉರಿ ಆರಿಸಿ. ಬಾಣಂತಿಗೆ ಕೊಡುವಾಗ ಒಂದು ಕಷಾಯಕ್ಕೆ ಕಾಲು ಲೋಟ ಅಥವಾ ಅದಕ್ಕಿಂತ ಕಮ್ಮಿ ಹಾಲು ಸೇರಿಸಿ ಬಿಸಿ ಬಿಸಿಯಾಗಿ ಕೊಡಿ. ಈ ಕಷಾಯ ಖಾಲಿ ಆಗುವವರೆಗೆ ದಿನಕ್ಕೊಮ್ಮೆ ಕುದಿಸಿ ಇಟ್ಟುಕೊಳ್ಳಿ. ಕುಡಿಯಲು ರುಚಿಯೆನಿಸುವ ಈ ಕಷಾಯ ಬಾಣಂತಿಯ ಬಾಯಾರಿಕೆ ಇಂಗಲು ಸಹಕಾರಿ. ನೆಗಡಿಯಾಗಂತೆ ನೋಡಿಕೊಳ್ಳಲು ಕೂಡ ಸಹಾಯಕ. 


ಬುಧವಾರ, ಫೆಬ್ರವರಿ 6, 2019

ಜೀರಿಗೆ ಮತ್ತು ಕಾಳುಮೆಣಸಿನ ಪುಡಿಗಳು : (ಬಾಣಂತಿಗೆ)

   ತಾಯ್ತನ ಪ್ರತಿ ಹೆಣ್ಣಿನ ಜೀವನದ ಮಹತ್ತರ ಘಟ್ಟ. ತಾಯಿಯಾದರೆ ಮರುಜೀವ ಪಡೆದಂತೆ ಎಂಬ ಮಾತಿದೆ. ಬಾಣಂತನದಲ್ಲಿ ಮೈಯಲ್ಲಿನ ನೀರನ್ನು ಪೂರ್ತಿ ಇಳಿಸಿ, ಮೈ ಇಳಿಸುವ ಪ್ರಕ್ರಿಯೆ ರೂಢಿಯಲ್ಲಿದೆ. ಅಂತೆಯೇ ರಕ್ತ ಕೂಡ ಕಮ್ಮಿಯಾಗುತ್ತದೆ ಬಾಳಂತನದ ಆಹಾರದಲ್ಲಿ. ಮೊದಲು ರಕ್ತ ಶುದ್ಧಿಗೆ ಮದ್ದು ಕೊಟ್ಟು, ತಿಂಗಳ ನಂತರ ರಕ್ತ ವೃದ್ಧಿಗೆ ಲೇಹ್ಯ ಕೊಡುವ ಪದ್ಧತಿ ನಮ್ಮಲ್ಲಿದೆ. ಲೇಹ್ಯಗಳ ತಯಾರಿಕೆಯನ್ನು ಮುಂದಿನ ಕಂತುಗಳಲ್ಲಿ ತಿಳಿಸಿಕೊಡುತ್ತೇನೆ. ಬಾಣಂತನ ಮುಗಿದ ನಂತರ ತಲೆ ಕೂದಲೆಲ್ಲಾ ಉದುರಲಾರಂಬಿಸಿ ಹೊಸ ಕೂದಲು ಬರುತ್ತದೆ. ಅಂತೆಯೇ ಮೈ ಚರ್ಮವೆಲ್ಲಾ ಕಪ್ಪಗಾಗಿ ಮುಂದಿನ ದಿನಗಳಲ್ಲಿ ಹೊಸ ಚರ್ಮ ಕೂಡ ಬರುತ್ತದೆ. ಈ ಬಾಣಂತಿ ಆರೈಕೆ ಒಂದೊಂದು ಊರಿನಲ್ಲಿ ಒಂದೊಂದು ಬಗೆಯದಾಗಿದೆ. ನಮ್ಮ ಊರಿನ ಕಡೆ ಮಲೆನಾಡಿನ ಅತೀ ತಂಪು ಹವಾಮಾನಕ್ಕೆ ತಕ್ಕಂತೆ ಔಷಧ ಪದ್ಧತಿ ರೂಢಿಯಲ್ಲಿದೆ.
   ಇವತ್ತಿನ ಪುಡಿಗಳ ವಿವರಣೆ ಮಗುವಿನ ಜನನದ ನಂತರ ಮೊದಲ ಊಟದಿಂದಲೇ ಬೇಕಾಗುವಂಥದ್ದು. ಆದ್ದರಿಂದ ಹೆರಿಗೆಯ ಒಂದು ವಾರ ಮುಂಚೆಯೇ ಇದನ್ನು ತಯಾರಿಸಿಟ್ಟುಕೊಳ್ಳುತ್ತಾರೆ.

ಮೊದಲಿಗೆ ಜೀರಿಗೆ ಪುಡಿ ಮಾಡುವುದನ್ನು ನೋಡೋಣ. ಇದಕ್ಕೆ ಹಸಿ ಜೀರಿಗೆ - ಬಿಸಿ ಜೀರಿಗೆ ಪುಡಿ ಎಂದು ಹೇಳುತ್ತಾರೆ. ಅಂದರೆ ಹಸಿ ಮತ್ತು ಹುರಿದ ಜೀರಿಗೆ ಎರಡನ್ನೂ ಸೇರಿಸಿ ಪುಡಿ ಮಾಡುವುದು.

ಸಾಮಗ್ರಿಗಳು:
ಜೀರಿಗೆ : 2 ಕಪ್
ತುಪ್ಪ : 1/2 ಚಮಚ


ವಿಧಾನ :
ಬಾಣಲೆಗೆ ತುಪ್ಪ ಹಾಕಿ ಒಂದು ಕಪ್ ಜೀರಿಗೆಯನ್ನು ಹುರಿದುಕೊಳ್ಳಿ. ಇದನ್ನು ಸ್ವಲ್ಪ ಆರಲು ಬಿಡಿ. ನಂತರ ಮಿಕ್ಸಿ ಜಾರಿಗೆ ಹುರಿದ ಜೀರಿಗೆ ಮತ್ತು ಒಂದು ಕಪ್ ಹಸಿ (ಹುರಿಯದೇ ಇರುವ) ಜೀರಿಗೆ ಹಾಕಿ ಪುಡಿ ಮಾಡಿ ಗಾಳಿಯಾಡದ ಡಬ್ಬಿಗೆ ತುಂಬಿಡಿ.

ಈಗ ಕಾಳು ಮೆಣಸಿನ ಪುಡಿ ಮಾಡುವುದನ್ನು ತಿಳಿಯೋಣ. ಇದು ಬಾಣಂತಿಗೆ ಹೆರಿಗೆಯ ನೋವು ಮತ್ತು ಸೊಂಟ, ಬೆನ್ನು ಇತ್ಯಾದಿ ನೋವುಗಳ ಶಮನಕ್ಕೆ, ಥಂಡಿಯಾಗದಿರಲು ಬಹು ಮುಖ್ಯ ಮನೆ ಮದ್ದು.

ಸಾಮಗ್ರಿಗಳು:
ಬಿಳಿ ಕಾಳುಮೆಣಸು (ಬೋಳ ಕಾಳು) : 1 ಕಪ್
ತುಪ್ಪ : 1 ಚಮಚ

ವಿಧಾನ :
 ಬಾಣಲೆಗೆ ತುಪ್ಪ ಹಾಕಿ ಕಾಳುಮೆಣಸು ಹಾಕಿ ಗಮ್ಮೆನ್ನುವಂತೆ ಹುರಿದು ತಣ್ಣಗಾದಮೇಲೆ ಮಿಕ್ಸಿಗೆ ಹಾಕಿ ಪುಡಿ ಮಾಡಿ. ಗಾಳಿಯಾಡದಂತೆ ಡಬ್ಬಿಯಲ್ಲಿ ತುಂಬಿಡಿ.


  ಬಾಣಂತಿಗೆ ಜಾಸ್ತಿ ಊಟವನ್ನು ಕೊಡುವುದಿಲ್ಲ. ಸಹಜ ಹೆರಿಗೆ ಪ್ರಕ್ರಿಯೆಯಲ್ಲಿ ಹೊಟ್ಟೆಯಲ್ಲಿನ ಜೀರ್ಣಾಂಗಗಳು ಸೋತಿರುವುದರಿಂದ ಹೆಚ್ಚು ಮತ್ತು ಗಟ್ಟಿ ಆಹಾರವನ್ನು ಜೀರ್ಣಿಸಿಕೊಳ್ಳುವ ಶಕ್ತಿ ಕಡಿಮೆ ಇರುವುದು ಒಂದು ಕಾರಣವಾದರೆ ಗರ್ಭಿಣಿಯಾದಾಗ ಬಂದ ಮೈ ಇಳಿಸುವುದಕ್ಕೂ ಊಟಕ್ಕೂ ಇರುವ ಸಂಬಂಧ ಮತ್ತೊಂದು ಕಾರಣ! ಆದ್ದರಿಂದ ಬಿಸಿ ಬಿಸಿಯಾದ ಮೆತ್ತಗಿನ ಅನ್ನವನ್ನು ಒಂದು ಸೌಟು ಬಡಿಸಿದರೆ ಅವತ್ತಿನ ಊಟ ಆದಂತೆ! ಅದರಲ್ಲೂ ಹಳೆಯ ಅಕ್ಕಿಯ ಅನ್ನವನ್ನೇ ಮಾಡಬೇಕು. ಮಲೆನಾಡಿನ ಹಳ್ಳಿಗಳಲ್ಲಿ ಕೆಂಪಕ್ಕಿಯ ಅನ್ನವನ್ನು ಮಾಡುತ್ತಾರೆ. ಬಿಳಿ ಅಕ್ಕಿಗಿಂತ ಕೆಂಪಕ್ಕಿ ಅದರಲ್ಲೂ ಹೊಸ ಅಕ್ಕಿ ಜೀರ್ಣವಾಗುವುದು ತಡವಾಗುತ್ತದೆ ಎಂದು ಈ ಪದ್ಧತಿ. ಈಗ ಈ ಪುಡಿಗಳನ್ನು ಸೇವಿಸುವುದರ ಬಗ್ಗೆ ಹೇಳುತ್ತೇನೆ. ಬಿಸಿ ಬಿಸಿಯಾಗಿ ಬಡಿಸಿದ ಅರ್ಧದಷ್ಟು ಅನ್ನಕ್ಕೆ ಒಂದು ದೊಡ್ಡ ಚಮಚ ತುಪ್ಪ ಹಾಕಿಕೊಂಡು ಅದಕ್ಕೆ 1/2 ಚಮಚ ಜೀರಿಗೆ ಪುಡಿ, 1/4 ಚಮಚ ಕಾಳುಮೆಣಸಿನ ಪುಡಿ ಹಾಕಿ ಸ್ವಲ್ಪ ಉಪ್ಪು ಹಾಕಿ ಕಲೆಸಿ ಮೊದಲು ಉಣ್ಣಬೇಕು. ನಂತರ ಉಳಿದ ಅನ್ನಕ್ಕೆ ಗಟ್ಟಿ ಮೊಸರನ್ನು (ಮಧ್ಯಾಹ್ನವಾದರೆ ಮೊಸರು, ಸಂಜೆ ಆದಲ್ಲಿ ಹಾಲು) ಹಾಕಿ ಉಣ್ಣಬೇಕು. ಹಾಲು, ಮೊಸರು ಎರಡೂ ಸೇರಿಸಿ ತಿನ್ನುವುದು ಒಳ್ಳೆಯದಲ್ಲ. ಈಗಿನ ಕಾಲದ ಔಷಧಿಗಳ ಪವರ್ ಜಾಸ್ತಿ ಇರುವುದರಿಂದ ಹೊಟ್ಟೆ ಉಷ್ಣ ಜಾಸ್ತಿ ಆಗಿ ಮರುದಿನ ಮಲ ವಿಸರ್ಜನೆ ಕಷ್ಟವಾಗಬಾರದೆಂದು ಸ್ವಲ್ಪ ಉಪ್ಪು ಹಾಕಿ ಬೇಯಿಸಿದ ತರಕಾರಿಯನ್ನು ಊಟದ ಜೊತೆ ಕೊಡಬಹುದು. ಅದರಲ್ಲೂ ವಾಯು, ನಂಜು ಇರುವಂಥ ತರಕಾರಿಗಳು ವರ್ಜ್ಯ. ಬಿಸಿ ಬಿಸಿ ಹಾಲನ್ನು ಬಾಣಂತಿ ಜಾಸ್ತಿ ಕುಡಿಯಬೇಕು. ಮಗುವಿಗೆ ಚೆನ್ನಾಗಿ ಎದೆ ಹಾಲು ಆಗವಲ್ಲಿ ಇದು ಸಹಾಯಕ. ಮುಂದಿನ ಸಂಚಿಕೆಗಳಲ್ಲಿ ಇನ್ನಷ್ಟು ಆರೈಕೆ/ ಔಷಧಿಗಳನ್ನು ತಿಳಿಸುತ್ತೇನೆ.....


-ಕಾವ್ಯಾ  

ಸೋಮವಾರ, ನವೆಂಬರ್ 19, 2018

ಮಂಡಕ್ಕಿ (ಪುರಿ) ಒಗ್ಗರಣೆ :

ಸಾಮಗ್ರಿಗಳು :
ಮಂಡಕ್ಕಿ : 1/4 ಕೆಜಿ 
ತೆಳ್ಳಗೆ ಹೆಚ್ಚಿದ ಒಣ ಕೊಬ್ಬರಿ : 1/2 ಕಪ್ 
ಹುರಿಗಡಲೆ : 1/2 ಕಪ್ 
ಶೇಂಗಾ : 1/2 ಕಪ್ 
ಬೆಳ್ಳುಳ್ಳಿ : 1 ಗಡ್ಡೆ (ಬೇಕಿದ್ದಲ್ಲಿ ಮಾತ್ರ)
ಉಪ್ಪು : 1/2 ಚಮಚ
ಸಕ್ಕರೆ ಪುಡಿ : 1/4 ಕಪ್ (ನಿಮ್ಮ ರುಚಿಗೆ ತಕ್ಕಷ್ಟು)

ಅಚ್ಚ ಮೆಣಸಿನ ಪುಡಿ : 2 ಚಮಚ 
ಅರಿಶಿನ ಪುಡಿ : 1/2 ಚಮಚ 
ಎಣ್ಣೆ : 5-6 ಚಮಚ 


ವಿಧಾನ :
ದಪ್ಪ ತಳದ ದೊಡ್ಡ ಪಾತ್ರೆಗೆ ಎಣ್ಣೆ ಹಾಕಿ ಕಾದ ಮೇಲೆ ಶೇಂಗಾ ಹಾಕಿ ಹುರಿದು, ಒಣ ಕೊಬ್ಬರಿ ಹಾಕಿ ಹುರಿಯಿರಿ. ಈಗ ಜಜ್ಜಿದ ಬೆಳ್ಳುಳ್ಳಿ ಹಾಕಿ ಹೊಂಬಣ್ಣ ಬರುವವರೆಗೆ ಹುರಿದು ಹುರಿಗಡಲೆ ಹಾಕಿ ಸ್ವಲ್ಪ ಹುರಿದು ಅದಕ್ಕೆ ಅರಿಶಿನ ಪುಡಿ, ಅಚ್ಚ ಮೆಣಸಿನ ಪುಡಿ ಹಾಕಿ ಉರಿ 
ಆರಿಸಿ. ಒಗ್ಗರಣೆ ತಣ್ಣಗಾದ ಮೇಲೆ ಅದಕ್ಕೆ ಉಪ್ಪು, ಸಕ್ಕರೆ ಪುಡಿ ಹಾಕಿ ಕಲಸಿ, ಮಂಡಕ್ಕಿ ಹಾಕಿ ಕಲಸಿ. ಮಂಡಕ್ಕಿ ಗರಿಗರಿ ಇಲ್ಲವಾದಲ್ಲಿ ಮತ್ತೆ ಸಣ್ಣ ಉರಿಯಲ್ಲಿ ಹುರಿಯಿರಿ. ಬಿಸಿ ಆರಿದ ಮೇಲೆ ಗಾಳಿಯಾಡದ ಡಬ್ಬದಲ್ಲಿ ತುಂಬಿಸಿಡಿ.  ಗರಿಗರಿಯಾದ ಮಂಡಕ್ಕಿ ಒಗ್ಗರಣೆ ಬಿಸಿ ಬಿಸಿ ಟೀ/ಕಾಫಿ ಜೊತೆ ಒಳ್ಳೆಯ ಸಂಗಾತಿ. 



ಸಲಹೆ: ಮಂಡಕ್ಕಿ ಗರಿ ಮಾಡಲು ಇನ್ನೊಂದು ಉಪಾಯವೆಂದರೆ ಶುಭ್ರವಾದ ಕಾಟನ್ ಬಟ್ಟೆ ಮೇಲೆ ಮಂಡಕ್ಕಿ ಹರವಿ ಅದರ ಮೇಲೆ ಇನ್ನೊಂದು ಕಾಟನ್ ಬಟ್ಟೆ ಮುಚ್ಚಿ 3-4 ಘಂಟೆ ಬಿಸಿಲಿನಲ್ಲಿ ಇಟ್ಟರೆ ಗರಿಗರಿಯಾಗುತ್ತದೆ.