ಮಂಗಳವಾರ, ಮೇ 7, 2013

ಕೊತ್ತಂಬರಿ ರೈಸ್

೨ ಕಪ್ ಕೊತ್ತಂಬರಿ ರೈಸ್ ಗೆ ಬೇಕಾಗುವ ಸಾಮಗ್ರಿಗಳು : ಕೊತ್ತಂಬರಿ ಸೊಪ್ಪು - ೧ ಕಪ್, ಗೋಡಂಬಿ - ೧೦ -೧೫, ಹಸಿಮೆಣಸು - ೨-೩ , ಶುಂಠಿ- ೧ ಇಂಚು, ಈರುಳ್ಳಿ - ೧/೨ ಕಪ್,

ಒಗ್ಗರಣೆಗೆ : ಜೀರಿಗೆ , ಸಾಸಿವೆ ಮತ್ತು ಕರಿಬೇವು,

ಮಾಡುವ ವಿಧಾನ : ಮೇಲೆ ಹೇಳಿದ ಪ್ರಮಾಣದಷ್ಟು ಕೊತ್ತಂಬರಿ ಸೊಪ್ಪು, ಹಸಿಮೆಣಸು , ಶುಂಠಿ ಹಾಗೂ ೫-೬ ಗೋಡಂಬಿಗಳನ್ನು ಮಿಕ್ಸಿ ಯಲ್ಲಿ ರುಬ್ಬಿಕೊಳ್ಳಬೇಕು .

ನಂತರ ಒಂದು ಬಾಣಲೆಗೆ ೨ ಟೀ ಚಮಚ ಎಣ್ಣೆ ಹಾಕಿ ಒಗ್ಗರಣೆಗೆ ಜೀರಿಗೆ, ಸಾಸಿವೆ  ಕರಿಬೇವು ಹಾಕಿ.
ಆಮೇಲೆ ೧/೨ ಕಪ್ ಈರುಳ್ಳಿ ಹಾಕಿ ಹೊಂಬಣ್ಣ ಬರುವ ತನಕ ಫ್ರೈ ಮಾಡಿ  ನಂತರ ಉಳಿದ ಗೋಡಂಬಿ ಮತ್ತು ರುಬ್ಬಿದ ಕೊತ್ತಂಬರಿ ಪೇಸ್ಟ್ ಹಾಕಿ ಹಸಿ ವಾಸನೆ ಹೋಗುವ ತನಕ ಫ್ರೈ ಮಾಡಿ. ಅದಕ್ಕೆ ರುಚಿ ಗೆ ತಕ್ಕಷ್ಟು ಉಪ್ಪು ಹಾಗೂ ಸ್ವಲ್ಪ  ನಿಂಬೆ ರಸ ಹಾಕಿ, ಅನ್ನ ಹಾಕಿ ಕಲಸಿರಿ.

ಗುರುವಾರ, ಮೇ 2, 2013

ಗೋಧಿ ಹಿಟ್ಟಿನ ಶಿರಾ


ಸಾಮಗ್ರಿ: ಗೋದಿ ಹಿಟ್ಟು 1.5 ಕಪ್, ತುಪ್ಪ 3/4 ಕಪ್, ಸಕ್ಕರೆ 2 ಕಪ್ (ಸಿಹಿ ಜಾಸ್ತಿ ಬೇಕಿದ್ದರೆ ಇನ್ನೂ 1/4 ಕಪ್ ಜಾಸ್ತಿ ತೆಗೆದುಕೊಳ್ಳಿ), ಬಿಸಿ ನೀರು 2 ಕಪ್, ಗೋಡಂಬಿ 8 - 10

ವಿಧಾನ: ಬಾಣಲೆಗೆ ತುಪ್ಪ ಹಾಕಿ ಅದು ಕರಗಿದ ಮೇಲೆ ಅದಕ್ಕೆ ಗೋದಿ ಹಿಟ್ಟು ಹಾಕಿ ಸಣ್ಣ ಉರಿಯಲ್ಲಿ ಹುರಿಯಿರಿ. ತುಪ್ಪ ಇರುವುದರಿಂದ ಮುದ್ದೆಯಂತೆ ಆಗುತ್ತದೆ. ಚೆನ್ನಾಗಿ ಕಲಕಿ ಹುರಿಯುತ್ತಿರಿ. ಸುಮಾರು 10 ನಿಮಿಷ ಬೇಕಾಗಬಹುದು. ಗೋದಿ ಹಿಟ್ಟು ಚೆನ್ನಾಗಿ ಹುರಿಯಬೇಕು ಇಲ್ಲವಾದಲ್ಲಿ ಶಿರಾ ಮೇಣದಂತಾಗುತ್ತದೆ / ತಿನ್ನುವಾಗ ಬಾಯಿಗೆ ಅಂಟುತ್ತದೆ. ಈ ಕಡೆ 2 ಕಪ್ ನೀರನ್ನು ಕುದಿಯಲು ಇಟ್ಟುಕೊಳ್ಳಿ. ಹಿಟ್ಟಿನ ಬಣ್ಣ ಸ್ವಲ್ಪ ಕೆಂಪಗಾಗುತ್ತದೆ, ಸೌಟಿಗೆ ಅಂಟದೇ ಬಿಟ್ಟುಕೊಳ್ಳುತ್ತದೆ ಮತ್ತು ತುಪ್ಪ ಮತ್ತು ಹಿಟ್ಟಿನ ಕಮ್ಮನೆ ಸುವಾಸನೆ ಬರಲಾರಂಭಿಸುತ್ತದೆ. ಹೀಗಾದಲ್ಲಿ ಹಿಟ್ಟು ಹುರಿದಿದೆ ಎಂದರ್ಥ. ಒಮ್ಮೆ ಸ್ಟವ್ ಆರಿಸಿ ಕುದಿಯುತ್ತಿರುವ ನೀರನ್ನು ನಿಧಾನವಾಗಿ ಹಾಕಿ. ಮತ್ತೆ ಸ್ಟವ್ ಹಚ್ಚಿ ಚೆನ್ನಾಗಿ ಕಲಕಿ. ಈಗ ಗೋಡಂಬಿ ಚೂರುಗಳನ್ನು ಹಾಕಿ. ಅರ್ಧ ನಿಮಿಷದೊಳಗೆ ಮಿಶ್ರಣ ಗಟ್ಟಿಯಾಗುತ್ತಾ ಬರುತ್ತದೆ. ಗಟ್ಟಿಯಾಗಿ ಮುದ್ದೆಯಂತಾದಾಗ ಇದಕ್ಕೆ ಸಕ್ಕರೆ ಹಾಕಿ ಚೆನ್ನಾಗಿ ಕಲಸಿ. ಬೇಕಿದ್ದರೆ ಏಲಕ್ಕಿ ಪುಡಿ ಹಾಕಿಕೊಳ್ಳಬಹುದು. ನನಗೆ ತುಪ್ಪ, ಹಿಟ್ಟಿನ ಸುವಾಸನೆಯೇ ಇಷ್ಟವಾಗುವುದರಿಂದ ನಾನು ಹಾಕುವುದಿಲ್ಲ. ಹಾಕಿದ ಸಕ್ಕರೆ ಕರಗುತ್ತಾ ಬಂದಂತೆ ಮತ್ತೆ ಸ್ವಲ್ಪ ತೆಳುವಾಗುತ್ತದೆ. ಮತ್ತೆ ಅದು ಗಟ್ಟಿಯಾಗುವವರೆಗೆ ಕಲಸುತ್ತಾ ಇರಿ. ಸಕ್ಕರೆ ಪೂರ್ತಿ ಕರಗಿ ಮಿಶ್ರಣ ಮುದ್ದೆಯಾಗುವ ತನಕ ಕಲಸುತ್ತಿರಿ. ಇಲ್ಲವಾದಲ್ಲಿ ತಳ ಹಿಡಿಯುತ್ತದೆ. ಮಿಶ್ರಣ ಸೌಟಿಗೆ ಅಂಟದೇ ಪೂರ್ತಿಯಾಗಿ ಕೆಳಗೆ ಬೀಳುವಂತಾದರೆ ಶಿರಾ ರೆಡಿ. ಗೋಡಂಬಿಯನ್ನು ಮೊದಲು ಹಾಕುವ ಬದಲು ಶಿರಾ ರೆಡಿ ಆದ ಮೇಲೆ ತುಪ್ಪದಲ್ಲಿ ಹುರಿದು ಕೂಡ ಹಾಕಬಹುದು. 


ಸೂಚನೆ: 1) ಬಿಸಿ ನೀರು ಹಾಕುವಾಗ ಸ್ಟವ್ ಆರಿಸಿ ದೂರದಿಂದ ಹಾಕಿ. ಕುದಿಯುತ್ತಿರುವ ನೀರಾದ್ದರಿಂದ ಹಿಟ್ಟಿಗೆ ಹಾಕಿದೊಡನೆ ಸ್ವಲ್ಪ ಸಿಡಿಯುವ ಸಂಭವವಿರುತ್ತದೆ. 
       2) ಮೇಲೆ ಹೇಳಿದ ತುಪ್ಪದ ಪ್ರಮಾಣ ಸರಿಯಾಗಿ ಹಿಟ್ಟಿಗೆ ಹೊಂದಿಕೊಳ್ಳುವಷ್ಟು ಮಾತ್ರವಿದೆ. ತುಪ್ಪ ಜಾಸ್ತಿ ಬಯಸುವವರು 1/4 ಕಪ್ ಜಾಸ್ತಿ ಹಾಕಿಕೊಳ್ಳಿ ಇಲ್ಲವಾದಲ್ಲಿ ಮೇಲಿನ ಪ್ರಮಾಣ ಸರಿಯಾಗಿರುತ್ತದೆ.
       3) ಈ ಶಿರಾಕ್ಕೆ ಬಾಳೇ ಹಣ್ಣನ್ನು ಕೂಡ ಹಾಕಬಹುದು. 1-2 ಚೆನ್ನಾಗಿ ಹಣ್ಣಾದ ಬಾಳೆಹಣ್ಣನ್ನು ಸಣ್ಣಗೆ ಹೆಚ್ಚಿಕೊಂಡು ಕುದಿಯುವ ನೀರು ಹಾಕಿದ ಕೂಡಲೇ ಹಾಕಿ ಆಮೇಲೆ ಸಕ್ಕರೆ ಹಾಕಿ. 

ಅಡುಗೆ ಮನೆಗೊಂದು ಟಿಪ್ಸ್ : ಅರಿಶಿನ ಪುಡಿ ಹಾಳಾಗದಂತೆ, ಹುಳು ಬರದಂತೆ ಇರಲು ಅದರಲ್ಲಿ ಸ್ವಲ್ಪ ಕಾಳು ಮೆಣಸು (ಕರಿ ಮೆಣಸು ಅಥವಾ ಬೋಳ ಕಾಳು) ಹಾಕಿಡಿ. ವರ್ಷಗಳವರೆಗೂ ಅರಿಶಿನ ಪುಡಿ ಹಾಳಾಗುವುದಿಲ್ಲ.