ಗುರುವಾರ, ಡಿಸೆಂಬರ್ 19, 2013

ಮಿಶ್ರ ತರಕಾರಿ ಸಾಗು

ಇದು ತೀರ ಸರಳವಾದ ವಿಧಾನ. 2-3 ತರಕಾರಿಗಳು ಸ್ವಲ್ಪ ಸ್ವಲ್ಪವೇ ಉಳಿದು ಹೋದರೆ ಈ ಸಾಗು ಮಾಡಿ ಖಾಲಿ ಮಾಡಬಹುದು...!!  ಚಪಾತಿ ತಿನ್ನುವುದರಿಂದ ಕೆಲವರಿಗೆ ಮೈ ಉಷ್ಣವು ಹೆಚ್ಚಿ ಬಾಯಿಯಲ್ಲಿ ಗುಳ್ಳೆಗಳು ಆಗುತ್ತವೆ. ಅಂಥವರು ಈ ರೀತಿ ತರಕಾರಿ ಸಾಗು / ಪಲ್ಯಗಳನ್ನು ಚಪಾತಿಯ ಜೊತೆ ಜಾಸ್ತಿ ಸೇವಿಸಿದಲ್ಲಿ ದೇಹದ ಉಷ್ಣವನ್ನು ಸಮತೋಲನದಲ್ಲಿ ಇಟ್ಟುಕೊಳ್ಳಬಹುದು. 

ಸಾಮಗ್ರಿಗಳು : ಸಣ್ಣಗೆ ಹೆಚ್ಚಿದ ಹುರುಳಿ ಕಾಯಿ (Beans) - ಸೀಮೆ ಬದನೆ / ಸೀಮೆ ಸೌತೆಕಾಯಿ (ನಾಲಿಗೆ ಸೌತೆಕಾಯಿ)  - ಆಲೂಗಡ್ಡೆ - ಕ್ಯಾರೆಟ್  - ಎಲ್ಲಾ ಸೇರಿ 2 ಕಪ್,  ಅರಿಶಿನ ಪುಡಿ ಚಿಟಿಕೆ, ತೆಂಗಿನ ತುರಿ 1 ಕಪ್, ಜೀರಿಗೆ 1/4 ಚಮಚ, ಹುರಿಗಡಲೆ (ಪುಟಾಣಿ) 1.5 ಚಮಚ, ಹಸಿಮೆಣಸಿನಕಾಯಿ 2-3, ಹೆಚ್ಚಿದ ಕೊತ್ತಂಬರಿ ಸೊಪ್ಪು  2-3 ಟೇಬಲ್ ಚಮಚ, ಚಕ್ಕೆ 1/4 ಇಂಚು (optional), ನಿಂಬೆ ರಸ 1-2 ಚಮಚ, ಉಪ್ಪು ರುಚಿಗೆ, ಸಕ್ಕರೆ 1/4 ಚಮಚ, ಕರಿಬೇವಿನ ಎಲೆಗಳು 8-10. 

ವಿಧಾನ : ಸಣ್ಣಗೆ ಹೆಚ್ಚಿದ ತರಕಾರಿಗಳನ್ನು ಪಾತ್ರೆಗೆ ಹಾಕಿ, ಒಂದೆರಡು ಕಪ್ ನೀರು ಹಾಕಿ, ಚಿಟಿಕೆ ಅರಿಶಿನ ಹಾಕಿ ಬೇಯಿಸಿ. 75% ಬೆಂದ ಮೇಲೆ ಸ್ವಲ್ಪ ಉಪ್ಪು ಸೇರಿಸಿ ಬೇಯಿಸಿ. ತುಂಬಾ ಮೆತ್ತಗೆ ಬೇಯುವುದು ಬೇಡ. 

ಅದು ಬೇಯುವಷ್ಟರಲ್ಲಿ ಮಿಕ್ಸರ್-ಗೆ ತೆಂಗಿನ ತುರಿ, ಜೀರಿಗೆ, ಹುರಿಗಡಲೆ, ಹಸಿಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು, ಬೇಕಿದ್ದಲ್ಲಿ ಸಣ್ಣ ಚಕ್ಕೆಯ ಚೂರು ಹಾಕಿ, ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. 


ತರಕಾರಿ ಬೆಂದ ಮೇಲೆ ಅದಕ್ಕೆ ರುಬ್ಬಿದ ಮಿಶ್ರಣ ಹಾಕಿ, ಉಪ್ಪು, ನಿಂಬೆರಸ, ಸಕ್ಕರೆ (optional), ಕರಿಬೇವು ಹಾಕಿ ನೀರು ಸೇರಿಸಿ ಕುದಿಸಿ (ಬೆಂದ ತರಕಾರಿ ಜೊತೆ ನೀರು ಇರುವುದರಿಂದ ನೋಡಿಕೊಂಡು ನೀರು ಸೇರಿಸಿ). ಪೂರಿ / ಚಪಾತಿ ಜೊತೆ ಸರ್ವ್ ಮಾಡಿ... 


    

ಸೂಚನೆ: ಈ ಸಾಗು ಖಾರ ಜಾಸ್ತಿ ಆದರೆ ಚೆನ್ನಾಗಿರುವುದಿಲ್ಲ.