ಶುಕ್ರವಾರ, ಅಕ್ಟೋಬರ್ 18, 2013

ಕ್ಯಾರೆಟ್ ಹೆಸರು ಕಾಳು ರೈಸ್:


ಇದು ತು೦ಬಾ ಸರಳ ವಿಧಾನ. ಸ್ವಲ್ಪ ಗಡಿಬಿಡಿಯಲ್ಲಿ ಇರುವಾಗ ಕಡಿಮೆ ಸಮಯದಲ್ಲಿ ಸುಲಭವಾಗಿ, ಕಡಿಮೆ ಪದಾರ್ಥಗಳನ್ನು ಬಳಸಿ ಮಾಡಬಹುದು. ಕ್ಯಾರೆಟ್ ಹೆಸರು ಕಾಳು ಆರೋಗ್ಯಕ್ಕೆ ಕೂಡ ಒಳ್ಳೆಯದು.

ಬೇಕಾಗುವ ಸಾಮಾಗ್ರಿಗಳು: ಕಾರೆಟ್ ದೊಡ್ಡ ಗಾತ್ರದ್ದು 1, ಹೆಸರು ಕಾಳು ½ ಚಿಕ್ಕ ಕಪ್, ಹಸಿ ಮೆಣಸು 2-3, ಕಾಳುಮೆಣಸಿನ ಪುಡಿ 1 ಚಮಚ, ಲಿ೦ಬು ರಸ, 1 ಲೋಟ ಅಕ್ಕಿ.

ಒಗ್ಗರಣೆಗೆ: ಸಾಸಿವೆ, ಎಣ್ಣೆ, ಕರಿಬೇವು, ಚಿಟಿಕೆ ಅರಿಶಿನ.



ಮಾಡುವ ವಿಧಾನ: ಒ೦ದು ಲೋಟ ಅಕ್ಕಿಯ ಅನ್ನ ಮಾಡಿ ಬದಿಗೆ ಇರಿಸಿ, ಹೆಸರುಕಾಳನ್ನು ೪-೫ ಗ೦ಟೆ ಮೊದಲು ನೀರಲ್ಲಿ ನೆನೆಸಿಡಬೇಕು.ನೆನೆಸಿದ ಹೆಸರುಕಾಳನ್ನು ಪಾತ್ರೆಯಲ್ಲಿ ಹಾಕಿ ಕುಕ್ಕರ್ ನಲ್ಲಿ ಇಟ್ಟು ಒ೦ದು ವಿಷಲ್ ಕೂಗಿಸಿ ಉರಿಯನ್ನು ಆರಿಸಿ. (ಹೆಸರುಕಾಳು ಜಾಸ್ತಿ ಬೆ೦ದರೆ ರುಚಿ ಕಳೆದುಕೊಳ್ಳುತ್ತದೆ) ಒ೦ದು ಬಾಣಲೆಯಲ್ಲಿ ಎಣ್ಣೆ ಹಾಕಿ ಅದು ಸ್ವಲ್ಪ ಬಿಸಿ ಅದ ಮೇಲೆ ಸಾಸಿವೆ ಕರಿಬೇವು, ಹಸಿಮೆಣಸು ಹಾಕಿ ಅದು ಚಿಟಪಟಿಸಿದ ನ೦ತರ ಅದಕ್ಕೆ ತುರಿದ ಕ್ಯಾರೆಟ್ ಜೊತೆ ಸ್ವಲ್ಪ ಉಪ್ಪು ಹಾಕಿ ಹುರಿಯಿರಿ, ೭೦% ಬೆ೦ದ ನ೦ತರ ಅದಕ್ಕೆ ಬೇಯಿಸಿದ ಹೆಸರುಕಾಳನ್ನು ಹಾಕಿ ಸ್ವಲ್ಪ ಕಾಳುಮೆಣಸಿನ ಪುಡಿ ಹಾಕಿ 2 ನಿಮಿಷ ಫ್ರೈ ಮಾಡಿ. ಉರಿಯನ್ನು ಆರಿಸಿ ಅನ್ನ ಹಾಕಿ ಕಲೆಸಿ. ರುಚಿ ನೋಡಿಕೊ೦ಡು ಉಪ್ಪು & ಲಿ೦ಬು ರಸ ಸೇರಿಸಿ.



ನಿಮ್ಮ ಅಡುಗೆಯ ಉಪಯೋಗಕ್ಕಾಗಿ: ಪಲ್ಯ ಬೇಯಿಸುವಾಗ ನೀರು ಹಾಕಿ ಹಾಗೆ ಬಟ್ಟಲನ್ನು ಮುಚ್ಚಿ ಇಟ್ಟು, ಸ್ವಲ್ಪ ಹೊತ್ತು ಅದನ್ನು ತೊಳೆಸದೆ ಇದ್ದರೆ ತರಕಾರಿ ತಳ ಹಿಡಿಯುತ್ತದೆ, ಅದಕ್ಕೆ ಬಟ್ಟಲನ್ನು ಮುಚ್ಚಿ ಅದರ ಮೇಲೆ ಸ್ವಲ್ಪ ನೀರು ಹಾಕಿ ಇಟ್ಟರೆ ಪಲ್ಯ ತಳ ಹಿಡಿಯದೆ ಚೆನ್ನಾಗಿ ಬೇಯುತ್ತದೆ.
 

ಗುರುವಾರ, ಅಕ್ಟೋಬರ್ 17, 2013

ಪೀಸ್ ಪುಲಾವ್ (ಹಸಿ ಬಟಾಣಿ ಪುಲಾವ್) :

ಸಾಮಗ್ರಿಗಳು: ಅಕ್ಕಿ 1 ಕಪ್, ಹಸಿ ಬಟಾಣಿ 1 ಕಪ್, ಮೀಡಿಯಂ ಗಾತ್ರದ ಈರುಳ್ಳಿ 1, ಚಕ್ಕೆ 1 ಇಂಚು, ಏಲಕ್ಕಿ 2, ಲವಂಗ 3-4, ಚಕ್ರ ಮೊಗ್ಗು ಸಣ್ಣ ಚೂರು, ಮೊಸರು ಮತ್ತು ಮೊಸರಿನ ಕೆನೆ ಸೇರಿ 2-3 ಚಮಚ, ಎಣ್ಣೆ 2-3 ಚಮಚ, ತುಪ್ಪ 1-2 ಚಮಚ, ಸಕ್ಕರೆ 1/4 ಚಮಚ (optional), ಉಪ್ಪು ರುಚಿಗೆ, ನಿಂಬೆ ರಸ 1-2 ಚಮಚ. 

ಪೇಸ್ಟ್ ಗೆ ಸಾಮಗ್ರಿಗಳು: ಹೆಚ್ಚಿದ ಕೊತ್ತಂಬರಿ ಸೊಪ್ಪು 2-3 ಚಮಚ, ಬೆಳ್ಳುಳ್ಳಿ 6-8 (ಮೀಡಿಯಂ) ಎಸಳು, ಹೆಚ್ಚಿದ ಈರುಳ್ಳಿ (ಸಣ್ಣ ಗಾತ್ರದ್ದು) 1, ಶುಂಠಿ 1 ಇಂಚು, ಹಸಿಮೆಣಸಿನ ಕಾಯಿ 2-3.  

ವಿಧಾನ : ಪೇಸ್ಟ್ ಸಾಮಗ್ರಿಗಳನ್ನು ಸ್ವಲ್ಪ ನೀರು ಹಾಕಿ ರುಬ್ಬಿ ನುಣ್ಣಗೆ ಪೇಸ್ಟ್ ಮಾಡಿಕೊಳ್ಳಿ. ಮೀಡಿಯಂ ಗಾತ್ರದ ಈರುಳ್ಳಿಯನ್ನು ಉದ್ದುದ್ದ ಹೆಚ್ಚಿಕೊಳ್ಳಿ. ಹಸಿ ಬಟಾಣಿಯ ಬೀನ್ಸ್ ಅನ್ನು ಬಿಡಿಸಿ ತೊಳೆದು ಒಂದು ಕಪ್ ನಷ್ಟು ರೆಡಿ ಮಾಡಿಕೊಳ್ಳಿ. ಅಕ್ಕಿಯನ್ನು ತೊಳೆದು ನೀರು ಬಸಿದಿಟ್ಟುಕೊಳ್ಳಿ. ಕುಕ್ಕರ್ ಗೆ ಎಣ್ಣೆ, ತುಪ್ಪ ಹಾಕಿ ಕಾದ ಮೇಲೆ ಹೆಚ್ಚಿದ ಈರುಳ್ಳಿ ಹಾಕಿ ಅದು ಚೆನ್ನಾಗಿ ಫ್ರೈ ಆದಮೇಲೆ ರುಬ್ಬಿಕೊಂಡ ಪೇಸ್ಟ್ ಹಾಕಿ ಹಸಿ ವಾಸನೆ ಹೋಗುವ ತನಕ ಫ್ರೈ ಮಾಡಿ. ನಂತರ ಚೂರು ಮಾಡಿದ ಚಕ್ಕೆ, ಲವಂಗ, ಏಲಕ್ಕಿ, ಚಕ್ರ ಮೊಗ್ಗಿನ ಚೂರು ಹಾಕಿ, ಅದಕ್ಕೆ ಹಸಿ ಬಟಾಣಿ ಹಾಕಿ ಒಮ್ಮೆ ಚೆನ್ನಾಗಿ ಕಲಸಿ. ನಂತರ ಅಕ್ಕಿ ಹಾಕಿ ಅರ್ಧ ನಿಮಿಷ ಫ್ರೈ ಮಾಡಿ. ಈಗ ಮೊಸರು ಮತ್ತು ಮೊಸರಿನ ಕೆನೆಗೆ ಒಂದು ಕಪ್ ನೀರು ಹಾಕಿ ಚೆನ್ನಾಗಿ ಕಲಕಿ ಅಕ್ಕಿಗೆ ಹಾಕಿ, ಅದರ ಮೇಲೆ ಮತ್ತೆ 1 1/4 ಕಪ್ ನೀರು ಹಾಕಿ. ಅಲ್ಲಿಗೆ ಒಟ್ಟೂ 2 1/4 ಕಪ್ ನೀರು ಹಾಕಿದಂತಾಯಿತು. ನಂತರ ಇದಕ್ಕೆ ಉಪ್ಪು, ನಿಂಬೆರಸ, ಬೇಕಿದ್ದಲ್ಲಿ 1/4 ಚಮಚ ಸಕ್ಕರೆ ಹಾಕಿ ಕಲಕಿ ರುಚಿ ನೋಡಿಕೊಂಡು ಬೇಕಿದ್ದಲ್ಲಿ ಸ್ವಲ್ಪ ಉಪ್ಪು - ಹುಳಿ ಸೇರಿಸಿ ಕುಕ್ಕರ್ ಮುಚ್ಚಿ 3 ವಿಸಲ್ ಕೂಗಿಸಿ. ಉಗಿ ಇಳಿದ ಮೇಲೆ ತೆಗೆದು ಒಮ್ಮೆ ಚೆನ್ನಾಗಿ ಮಿಕ್ಸ್ ಆಗುವಂತೆ ಕಲಸಿ, ರಾಯ್ತ / ಮೊಸರು ಬಜ್ಜಿಯೊಡನೆ ಸರ್ವ್ ಮಾಡಿ.  


ಅಡುಗೆ ಮನೆಗೊಂದು ಟಿಪ್ಸ್ :  ಉಪ್ಪಿಟ್ಟಿನ ರವೆ ಬೇಗನೆ ಹುಳು ಹಿಡಿಯುತ್ತದೆಯಲ್ಲವೇ...? ರವೆ ತಂದ ಮೇಲೆ ಅದನ್ನು ಬಾಣಲೆಗೆ ಹಾಕಿ ಸ್ವಲ್ಪ ಹುರಿದು ತಣ್ಣಗಾದ ಮೇಲೆ ಡಬ್ಬಿ ತುಂಬಿಡಿ.... ಬೇಗನೆ ಹಾಳಾಗುವುದಿಲ್ಲ.... 

ಮಂಗಳವಾರ, ಅಕ್ಟೋಬರ್ 1, 2013

ಹಾಗಲಕಾಯಿ ಪಲ್ಯ - 1


ಸಾಮಾಗ್ರಿಗಳು: ಹಾಗಲಕಾಯಿ 2, ಈರುಳ್ಳಿ 1, ತೆ೦ಗಿನಕಾಯಿ ತುರಿ1/2 ಕಪ್, ಹಸಿ ಮೆಣಸು4-5 (ಜಾಸ್ತಿ ಖಾರ ಇದ್ದರೆ ಒಳ್ಳೆಯದು), ಹುಣಸೆಹಣ್ಣಿನ ರಸ 2-3 ಚಮಚ,
ಒಗ್ಗರಣೆಗೆ:ಎಣ್ಣೆ ಸ್ವಲ್ಪ ಜಾಸ್ತಿ ಇದ್ದರೆ ಒಳ್ಳೆಯದು, ಸಾಸಿವೆ, ಚಿಟಿಕೆ ಇ೦ಗು & ಅರಿಶಿನ, ಕರಿಬೇವು

ವಿಧಾನ: ಹಾಗಲಕಾಯಿ ಮತ್ತು ಈರುಳ್ಳಿಯನ್ನು ಸಣ್ಣದಾಗಿ ಹೆಚ್ಚಿಕೊಳ್ಳಿ. ಮೊದಲು ಬಾಣಲೆಯನ್ನು ಒಲೆಯಮೇಲೆ ಇಟ್ಟು, ಎಣ್ಣೆ ಹಾಕಿ ಅದು ಸ್ವಲ್ಪ ಕಾದ ನ೦ತರ ಅದಕ್ಕೆ ಸಾಸಿವೆ ಹಾಕಿ ಅದು ಚಿಟಪಟಿಸಿದ ನ೦ತರ ಹಸಿ ಮೆಣಸು, ಕರಿಬೇವು, ಅರಿಶಿನ, ಇ೦ಗು ಹಾಕಿದ ತಕ್ಷಣ ಹಾಗಲಕಾಯಿ ಕೊಚ್ಚಲು (ಸಣ್ಣಗೆ ಹೆಚ್ಚಿದ ಎಲ್ಲ ತರಕಾರಿಗಳನ್ನು ಕೊಚ್ಚಲು ಎನ್ನುವುದು ವಾಡಿಕೆ) ಹಾಕಬೇಕು. ಅದಕ್ಕೆ ಉಪ್ಪು, ಹುಣಸೆಹಣ್ಣಿನ ರಸ ಹಾಕಿ 20 ನಿಮಿಷ ಸಣ್ಣ ಉರಿಯಲ್ಲಿ ಚೆನ್ನಾಗಿ ಹುರಿಯಿರಿ.ಆಮೇಲೆ ತೆ೦ಗಿನ ತುರಿ, ಈರುಳ್ಳಿ ಸೇರಿಸಿ  5 ನಿಮಿಷ ಮತ್ತೆ ಹುರಿದರೆ ಹಾಗಲಕಾಯಿ ಪಲ್ಯ ರೆಡಿ. ಇದು ಅನ್ನದ ಜೊತೆ ಚೆನ್ನಾಗಿರುತ್ತದೆ. (ಪಲ್ಯ ಮಾಡುವಾಗ ನೀರನ್ನು ಸೇರಿಸಬಾರದು).
ಹಾಗಲಕಾಯಿ ಪದಾರ್ಥಕ್ಕೆ ಒ೦ದು ಟಿಪ್ಸ್: ಹಾಗಲಕಾಯಿಯನ್ನು ಹೆಚ್ಚಿದ ಮೇಲೆ ಅದಕ್ಕೆ ಸ್ವಲ್ಪ ಉಪ್ಪು, ಅರಿಶಿನ ಸೇರಿಸಿ 10-15 ನಿಮಿಷ ಹಾಗೆ ಬಿಡಿ. ನ೦ತರ ಅದರ ರಸ ತೆಗೆದು ಕೊಚ್ಚಲನ್ನು ಮಾತ್ರ ಬಳಸುವುದರಿ೦ದ ಹಾಗಲಕಾಯಿ ಪದಾರ್ಥಗಳು ಅಷ್ಟೊ೦ದು ಕಹಿ ಅಗುವುದಿಲ್ಲ.