ಮಂಗಳವಾರ, ಜೂನ್ 23, 2015

ಅವಲಕ್ಕಿ ಬಿಸಿಬೇಳೆ ಬಾತ್:

ಸಾಮಗ್ರಿಗಳು:
ಹೆಚ್ಚಿದ ಮಿಶ್ರ ತರಕಾರಿಗಳು (ಆಲೂಗಡ್ಡೆ, ಬೀನ್ಸ್, ಕ್ಯಾರೆಟ್) - ಎಲ್ಲಾ ಸೇರಿ 1 ಕಪ್,
ಹೆಚ್ಚಿದ ಟೊಮೇಟೊ - 1/4 ಕಪ್,
ಹೆಚ್ಚಿದ ಕ್ಯಾಪ್ಸಿಕಂ - 1/4 ಕಪ್,
ತೊಗರಿ ಬೇಳೆ - 1/2 ಕಪ್,
ದಪ್ಪ ಅವಲಕ್ಕಿ - 1/2 ಕಪ್,
ಎಣ್ಣೆ - 4/5 ಚಮಚ,
ಸಾಸಿವೆ - 1/2 ಚಮಚ,
ಕರಿಬೇವು - 1 ಎಸಳು,
ಹುಣಸೆ ರಸ - ಸ್ವಲ್ಪ (ರುಚಿಗೆ ತಕ್ಕಷ್ಟು)
ಬೆಲ್ಲ - 1 ಚಮಚ,
ಶೇಂಗಾ - 4-5 ಚಮಚ,
ಅರಿಶಿನ ಪುಡಿ - ಚಿಟಿಕೆ,
ಬಿಸಿಬೇಳೆ ಬಾತ್  ಪೌಡರ್ - 2 ಚಮಚ,
ಉಪ್ಪು - ರುಚಿಗೆ 

ವಿಧಾನ :
ಮಿಶ್ರತರಕಾರಿಗಳನ್ನು (ಟೊಮೇಟೊ, ಕ್ಯಾಪ್ಸಿಕಂ ಬಿಟ್ಟು) ತೊಳೆದ ತೊಗರಿಬೇಳೆಯ ಜೊತೆ ಹಾಕಿ, ನೀರು, ಶೇಂಗಾ, ಸ್ವಲ್ಪ ಉಪ್ಪು, ಸ್ವಲ್ಪ ಎಣ್ಣೆ, ಅರಿಶಿನ ಪುಡಿ ಹಾಕಿ ಕುಕ್ಕರ್ ನಲ್ಲಿ ಬೇಯಿಸಿಕೊಳ್ಳಿ. ದಪ್ಪ ಅವಲಕ್ಕಿಯನ್ನು ತೊಳೆದು ಅರ್ಧ ಗಂಟೆ ನೀರಿನಲ್ಲಿ  ನೆನೆಸಿಟ್ಟುಕೊಳ್ಳಿ. ಬಾಣಲೆಗೆ ಎಣ್ಣೆ, ಸಾಸಿವೆ ಹಾಕಿ ಸಿಡಿಸಿ. ಇದಕ್ಕೆ ಕರಿಬೇವು, ಹೆಚ್ಚಿದ ಟೊಮೇಟೊ ಮತ್ತು ಕ್ಯಾಪ್ಸಿಕಂ ಹಾಕಿ ಫ್ರೈ ಮಾಡಿ. ಇದು ಬೆಂದ ಮೇಲೆ ಹುಣಸೆ ರಸ, ನೀರು, ಬೆಲ್ಲ, ಬಿಸಿಬೇಳೆ ಬಾತ್ ಪುಡಿ, ಉಪ್ಪು ಹಾಕಿ ಕುದಿಸಿ. ನಂತರ ಇದಕ್ಕೆ ಬೆಂದ ಮಿಶ್ರಣ ಮತ್ತು ನೆನೆಸಿಟ್ಟ ಅವಲಕ್ಕಿಯನ್ನು ನೀರು ಬಸಿದುಕೊಂಡು ಹಾಕಿ ಚೆನ್ನಾಗಿ ಕಲಕಿ ಬೇಕಿದ್ದಲಿ ಸ್ವಲ್ಪ ನೀರು ಹಾಕಿದರೆ ಬಿಸಿ ಬಿಸಿ ಅವಲಕ್ಕಿ ಬಿಸಿಬೇಳೆ ಬಾತ್ ಸಿದ್ಧ. 




ಸೋಮವಾರ, ಜೂನ್ 22, 2015

ಮ೦ಗಳೂರು ಬಜ್ಜಿ :


ಸಾಮಗ್ರಿಗಳು : ಮೈದಾಹಿಟ್ಟು 1 ಕಪ್, ಮೊಸರು 1/2 ಕಪ್, ಹಸಿಮೆಣಸು 4-5, ತೆ೦ಗಿನಕಾಯಿ (ಕೊಬ್ಬರಿ) ಚೂರುಗಳು 1-2 ಚಮಚ, ಸೋಡಾ ಚಿಟಿಕೆ, ಜೀರಿಗೆ 1/2 ಚಮಚ, ಕರಿಬೇವು 5-6 ಎಲೆ, ಉಪ್ಪು ರುಚಿಗೆ ತಕ್ಕಷ್ಟು, ಎಣ್ಣೆ ಕರಿಯಲು.



ವಿಧಾನ : ಮೊದಲು ಹಸಿಮೆಣಸು & ತೆ೦ಗಿನಕಾಯಿಯನ್ನು ಸಣ್ಣದಾಗಿ ಹೆಚ್ಚಿಕೊಳ್ಳಿ. ಇದಕ್ಕೆ ಮೈದಾಹಿಟ್ಟು ಸೋಡಾ, ಜೀರಿಗೆ, ಉಪ್ಪು, ಮೊಸರು, ಕರಿಬೇವು ಚೂರು ಮಾಡಿಕೊ೦ಡು ಹಾಕಿ ಬಜ್ಜಿ ಹಿಟ್ಟಿನ ಹದಕ್ಕೆ ಕಲೆಸಿಟ್ಟುಕೊಳ್ಳಿ. ಬಾಣಲಿಗೆ ಎಣ್ಣೆ ಹಾಕಿ ಕಾದ ಮೇಲೆ ಈ ಹಿಟ್ಟನ್ನು ಬಜ್ಜಿ ಥರ ಎಣ್ಣೆಯಲ್ಲಿ ಹೊ೦ಬಣ್ಣ ಬರುವವರೆಗೆ ಕರಿದರೆ ಬಿಸಿ ಬಿಸಿ ಮ೦ಗಳೂರು ಬಜ್ಜಿ ಸವಿಯಲು ಸಿದ್ಧ.
ಇದಕ್ಕೆ ಚಟ್ನಿ ಹಾಕಿಕೊ೦ಡು ತಿನ್ನಬೇಕು.

ಚಟ್ನಿ :
 ಸಾಮಗ್ರಿಗಳು : ಕಾಯಿತುರಿ, ಎಳ್ಳು, ಪುದಿನಾಸೊಪ್ಪು, ಪುಟಾಣಿಬೇಳೆ (ಹುರಿಗಡಲೆ), ಹಸಿಮೆಣಸು, ಉಪ್ಪು  ರುಚಿಗೆ ತಕ್ಕಷ್ಟು.
ವಿಧಾನ : ಪುದಿನಾಸೊಪ್ಪು ಹಸಿಮೆಣಸು ಎಳ್ಳು ಇವೆಲ್ಲವನ್ನು ಸ್ವಲ್ಪ ಎಣ್ಣೆ ಹಾಕಿ ಹುರಿದುಕೊ೦ಡು ಕಾಯಿತುರಿ ಉಪ್ಪು ಪುಟಾಣಿಬೇಳೆ ಹಾಕಿ ಸ್ವಲ್ಪ ನೀರು ಹಾಕಿ ರುಬ್ಬಿದರೆ ಚಟ್ನಿ ರೆಡಿ.

ಸೋಮವಾರ, ಜೂನ್ 15, 2015

ಟೊಮೇಟೊ ಸಾರು 1 (ತಿಳಿ ಸಾರು) :


ಸಾಮಗ್ರಿಗಳು : 
ತೊಗರಿ ಬೇಳೆ 1/4 ಕಪ್, ಟೊಮೇಟೊ 1, ರಸಂ ಪುಡಿ 1-1.5 ಟೇಬಲ್ ಚಮಚ (MTR ಅಥವಾ ಮನೆಯಲ್ಲೇ ಮಾಡಿದ ಪುಡಿ), ಹುಣಸೆ ಹಣ್ಣು ನೆಲ್ಲಿಕಾಯಿ ಗಾತ್ರ, ಬೆಲ್ಲ 1 ಟೇಬಲ್ ಚಮಚ, ಕೊತ್ತಂಬರಿ ಸೊಪ್ಪು 1 ಚಮಚ, ಕರಿಬೇವಿನ ಸೊಪ್ಪು ಸ್ವಲ್ಪ, ಹಸಿಮೆಣಸಿನ ಕಾಯಿ 1-2, ಒಣಮೆಣಸಿನ ಕಾಯಿ 2 ಚೂರು, ಎಣ್ಣೆ 3-4 ಚಮಚ, ಜೀರಿಗೆ -ಸಾಸಿವೆ ತಲಾ 1/2 ಚಮಚ, ತೆಂಗಿನ ತುರಿ (ಬೇಕಿದ್ದಲ್ಲಿ ಮಾತ್ರ) 1 ಚಮಚ, ಉಪ್ಪು ರುಚಿಗೆ. 

ವಿಧಾನ : 
ಹುಣಸೆ ಹಣ್ಣನ್ನು ನೀರಿನಲ್ಲಿ ಅರ್ಧ ಗಂಟೆ ನೆನೆಸಿ, ಕಿವುಚಿ ರಸ ತೆಗೆದಿಟ್ಟುಕೊಳ್ಳಿ. ತೊಗರಿಬೇಳೆ ಮತ್ತು ಟೊಮೇಟೊವನ್ನು ತೊಳೆದುಕೊಂಡು, ಬೇಳೆಗೆ ನೀರು, ಚಿಟಿಕೆ ಅರಿಶಿನ ಪುಡಿ, 1/4 ಚಮಚ ಎಣ್ಣೆ, 4 ಹೋಳುಗಳಾಗಿ ಸೀಳಿದ ಟೊಮೇಟೊ ಹಾಕಿ ಕುಕ್ಕರ್ ನಲ್ಲಿಟ್ಟು ಮೆತ್ತಗೆ ಬೇಯಿಸಿಕೊಳ್ಳಿ.  ಒಂದು ದಪ್ಪ ತಳದ ಪಾತ್ರೆ ಅಥವಾ ಬಾಣಲೆಗೆ ಎಣ್ಣೆ, ಒಣ ಮೆಣಸಿನ ಚೂರು, ಜೀರಿಗೆ, ಸಾಸಿವೆ ಹಾಕಿ ಸಿಡಿದ ಮೇಲೆ ಸೀಳಿಕೊಂಡ ಹಸಿಮೆಣಸಿನ ಕಾಯಿ, ಹುಣಸೆ ರಸ ಮತ್ತು ಅರ್ಧ ಕಪ್ ನೀರು ಹಾಕಿ.  ನಂತರ ಇದಕ್ಕೆ ಉಪ್ಪು, ರಸಂ ಪುಡಿ, ಬೆಲ್ಲ, ಕರಿಬೇವು ಹಾಕಿ ಕುದಿಸಿ. ಬೆಂದ ಬೇಳೆ ಮತ್ತು ಟೊಮೇಟೊವನ್ನು ಚೆನ್ನಾಗಿ ಸೌಟಿನಲ್ಲಿ ಅರೆದುಕೊಂಡು ಕುದಿಯುತ್ತಿರುವ ಮಿಶ್ರಣಕ್ಕೆ ಹಾಕಿ, ಕೊತ್ತಂಬರಿ ಸೊಪ್ಪು,  ತೆಂಗಿನ ತುರಿ ಮತ್ತು ನೀರು ಎಷ್ಟು ಬೇಕು ನೋಡಿಕೊಂಡು ಹಾಕಿ ಚೆನ್ನಾಗಿ ಕುದಿಸಿದರೆ ಬಿಸಿ ಬಿಸಿ ಸಾರು ಸಿಧ್ಧ. (ಇದೇ ಸಾರನ್ನು ಇನ್ನೊಮ್ಮೆ ಮಾಡುವಾಗ ಒಗ್ಗರಣೆಯ ಜೊತೆ ಬೆಳ್ಳುಳ್ಳಿ, ಈರುಳ್ಳಿ ಹಾಕಿಕೊಂಡು ಟ್ರೈ ಮಾಡಿ...!)



(ಈ ರೆಸಿಪಿ ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿತ್ತು.)