ಶುಕ್ರವಾರ, ಮೇ 26, 2017

ಮ್ಯಾಂಗೋ ಶಿರಾ (ಮ್ಯಾಂಗೋ ಕೇಸರಿಭಾತ್) :

ಸಾಮಗ್ರಿಗಳು :
ರವೆ / ಸೂಜಿ : 1 ಕಪ್ 
ನೀರು : 2 ಕಪ್
ಹಾಲು : 1 ಕಪ್  
ಸಕ್ಕರೆ : 1 1/4 ಕಪ್ 
ತುಪ್ಪ : 1/3 ಕಪ್ 
ಸಣ್ಣಗೆ ಹೆಚ್ಚಿದ ಮಾವಿನಹಣ್ಣು : 1/2 ಕಪ್ 
ಗೋಡಂಬಿ : 8-10 
ಕುಂಕುಮ ಕೇಸರಿ : 10-12 ದಳಗಳು  
ಉಪ್ಪು : 2 ಚಿಟಿಕೆ 

ವಿಧಾನ : 
ಕೇಸರಿಯನ್ನು ಎರಡು ಚಮಚ ಬಿಸಿ ಹಾಲಿನಲ್ಲಿ ನೆನೆಸಿಡಿ. ಬಾಣಲೆಗೆ ತುಪ್ಪ ಹಾಕಿ ರವೆ ಹಾಕಿ ಚೆನ್ನಾಗಿ ಹುರಿಯಿರಿ. ರವೆ ಸ್ವಲ್ಪ ಕೆಂಪಗಾಗಿ, ಘಮ್ಮನೆ ಸುವಾಸನೆ ಬಂದರೆ ರವೆ ಹುರಿದಿದೆ ಎಂದರ್ಥ. ರವೆ ಹುರಿಯಿತ್ತುರುವಾಗಲೇ ನೀರು ಮತ್ತು ಹಾಲನ್ನು ಸೇರಿಸಿ ಕುದಿಯಲು ಇಡಿ. ಹುರಿದ ರವೆಗೆ ಕುದಿಯುತ್ತಿರುವ ನೀರು ಮತ್ತು ಹಾಲನ್ನು ಹಾಕಿ ಕಲಕುತ್ತಾ ಬನ್ನಿ. ರವೆ ಹುರಿಯುತ್ತಿರುವ ಒಲೆಯನ್ನು ಸಣ್ಣ ಉರಿಯಲ್ಲಿಟ್ಟು ನೀರು ಹಾಕಿ, ಬಿಸಿ ನೀರು ಸಿಡಿಯುತ್ತದೆ. ಮೊದಲ ಸಲ ಮಾಡುತ್ತಿರುವವರಾದರೆ ನೀರು ಹಾಕಿ ಮಿಕ್ಸ್ ಮಾಡುವವರೆಗೆ ಒಮ್ಮೆ ಉರಿ ಆರಿಸಿಕೊಳ್ಳುವುದು ಉತ್ತಮ. ನಂತರ ನೆನೆಸಿಟ್ಟ ಕೇಸರಿ ದಳಗಳು, ಹೆಚ್ಚಿದ ಮಾವಿನಹಣ್ಣು, ಗೋಡಂಬಿ ಚೂರುಗಳನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ಮುಚ್ಚಳ ಮುಚ್ಚಿ ಒಂದೆರಡು ನಿಮಿಷ ಬೇಯಲು ಬಿಡಿ. ರವೆ ಬೆಂದ ಮೇಲೆ ಸಕ್ಕರೆ, ಉಪ್ಪು ಹಾಕಿ ಕಲಕುತ್ತಾ ಬನ್ನಿ. ಸಕ್ಕರೆ ಹಾಕಿದ ಮೇಲೆ ಮತ್ತೆ ಸ್ವಲ್ಪ ನೀರು ಬಿಟ್ಟುಕೊಳ್ಳುತ್ತದೆ. ಮಿಶ್ರಣ ಬಾಣಲೆಗೆ ಅಂಟಿಕೊಳ್ಳದಂತೆ ಸೌಟು ಮತ್ತು ಬಾಣಲೆಯನ್ನು ಬಿಡುವವರೆಗೂ ಚೆನ್ನಾಗಿ ಮಿಕ್ಸ್ ಮಾಡುತ್ತಿರಿ. ಮಿಶ್ರಣ ಬಾಣಲೆ ಅಂಚನ್ನು ಬಿಟ್ಟುಕೊಂಡ ಮೇಲೆ ಉರಿ ಆರಿಸಿ. ಈಗ ಮಾವಿನಹಣ್ಣಿನ ಶಿರಾವನ್ನು ಬಿಸಿ ಬಿಸಿಯಾಗಿ ಸವಿಯಿರಿ. 



ಸಲಹೆಗಳು :
1) ಒಂದು ವರ್ಷ ಮೇಲ್ಪಟ್ಟ ಮಕ್ಕಳಿಗೆ ಇದನ್ನು ಸಾಯಂಕಾಲದ ತಿಂಡಿಗೆ ಮಾಡಿಕೊಡಬಹುದು. ದೊಡ್ಡವರಿಗೂ ಇಷ್ಟವಾಗುವ ಸಿಹಿ ತಿನಿಸಿದು. ಮಕ್ಕಳಿಗೆ ಮಾಡುವಾಗ ಅಗಿದು ತಿನ್ನುವಷ್ಟು ಹಲ್ಲು ಬರದಿದ್ದರೆ ಗೋಡಂಬಿಯನ್ನು ಹಾಕಬೇಡಿ ಮತ್ತು ನೀರಿನ ಪ್ರಮಾಣಕ್ಕಿಂತ ಹಾಲಿನ ಪ್ರಮಾಣ ಜಾಸ್ತಿ ಹಾಕಿ. 

2) ಮಾವಿನಹಣ್ಣಿನ ಬದಲು ಕಿತ್ತಳೆ ಹಣ್ಣು, ಬಾಳೆಹಣ್ಣು ಅಥವಾ ಅನಾನಸ್ ಹಣ್ಣು ಹಾಕಿ ಮಾಡಿದರೂ ಚೆನ್ನಾಗಿರುತ್ತದೆ. 

3) ಗೋಡಂಬಿಯನ್ನು ತುಪ್ಪದಲ್ಲಿ ಹುರಿದು ಕೊನೆಯಲ್ಲಿ ಕೂಡ ಸೇರಿಸಬಹುದು. ಜೊತೆಗೆ ಒಣ ದ್ರಾಕ್ಷಿ ಹಾಕಬಹುದು ಆದರೆ ಮಾವಿನಹಣ್ಣಿನ ಜೊತೆ ಚೆನ್ನಾಗಿರುವುದಿಲ್ಲ. ಬೇರೆ ಹಣ್ಣನ್ನು ಹಾಕಿ ಮಾಡಿದಾಗ ಹಾಕಿಕೊಳ್ಳಿ. 

4) ಸೂಜಿ ರವೆಯ ಬದಲು ಚಿರೋಟಿ ರವೆಯಿಂದ ಮಾಡಿದರೂ ತುಂಬಾ ಚೆನ್ನಾಗಿ ಆಗುತ್ತದೆ.  

ಶುಕ್ರವಾರ, ಮೇ 12, 2017

ರವೆ ಸಂಡಿಗೆ :

ಸಾಮಗ್ರಿಗಳು:
ಉಪ್ಪಿಟ್ಟಿನ ರವೆ / ಸೂಜಿ ರವೆ : 1ಕಪ್ 
ನೀರು : 8 ಕಪ್ 
ಉಪ್ಪು : 1 ಚಮಚ 
ಹಸಿಮೆಣಸಿನ ಕಾಯಿ : 7-8
ಜೀರಿಗೆ : 1/2  ಚಮಚ
ಇಂಗು :1/2 ಚಮಚ 

ವಿಧಾನ :
ದೊಡ್ಡ ಪಾತ್ರೆಯಲ್ಲಿ 8 ಕಪ್ ನೀರು ಹಾಕಿ ಕುದಿಯಲು ಇಡಿ. ಹಸಿಮೆಣಸು ಮತ್ತು ಜೀರಿಗೆ ಪೇಸ್ಟ್ ಮಾಡಿಕೊಳ್ಳಿ. ಜೀರಿಗೆ ತರಿ ತರಿ ಇದ್ದರೂ ಆಯಿತು.

 ನೀರು ಕುದಿಯಲು ಶುರು ಆದ ಮೇಲೆ ರವೆ, ಉಪ್ಪು, ಇಂಗು ಹಾಕಿ ರವೆ ಗಂಟಾಗದಂತೆ ಮಧ್ಯಮ ಉರಿಯಲ್ಲಿ ಚೆನ್ನಾಗಿ ಕಲಕುತ್ತಿರಿ. ಸ್ವಲ್ಪ ದಪ್ಪ ಗಂಜಿಯಷ್ಟು ಗಟ್ಟಿಯಾದ ಮೇಲೆ ಉರಿ ಆರಿಸಬೇಕು.

 ಒಂದು ಚಮಚದಲ್ಲಿ ಮಿಶ್ರಣವನ್ನು ತೆಗೆದುಕೊಂಡು ತಟ್ಟೆಗೆ ಹಾಕಿದರೆ ಅದು ಹರಿದುಕೊಂಡು ಹೋಗದಷ್ಟು ಗಟ್ಟಿ ಇದ್ದರೆ ಸಾಕು. ತುಂಬಾ ದಪ್ಪಗಾದರೂ ಚೆನ್ನಾಗಿರುವುದಿಲ್ಲ. ತಣ್ಣಗಾದಂತೆ ಇನ್ನೂ ಗಟ್ಟಿಯಾಗುತ್ತಾ ಬರುತ್ತದೆ. ಒಂದು ಪ್ಲಾಸ್ಟಿಕ್ ಶೀಟ್ ಅನ್ನು ಬಿಸಿಲಿನಲ್ಲಿ ಹರವಿಕೊಂಡು ಹಾರಿ ಹೋಗದಂತೆ ಸುತ್ತಲೂ ಕಲ್ಲು ಇಡಿ. ಈಗ ಒಂದು ಬೌಲ್ ನಲ್ಲಿ ರವೆ  ಮಿಶ್ರಣವನ್ನು ತೆಗೆದುಕೊಂಡು ಒಂದು ಚಮಚದಿಂದ ಸಂಡಿಗೆ ಹಾಕುತ್ತಾ ಬನ್ನಿ.

 ಒಂದು ಅಥವಾ ಎರಡು ದಿನಕ್ಕೆ ಪೂರ್ತಿ ಒಣಗಿ ಪ್ಲಾಸ್ಟಿಕ್ ಬಿಡುತ್ತದೆ. ನಂತರ ಸಂಡಿಗೆಯನ್ನು ಪ್ಲಾಸ್ಟಿಕ್ ನಿಂದ ಬಿಡಿಸಿ ಒಂದು ಅಗಲವಾದ ತಟ್ಟೆಗೆ ಹಾಕಿ ಇನ್ನೊಂದು ದಿನ ಬಿಸಿಲಿನಲ್ಲಿ ಇಡಿ.

 ಗರಿ ಗರಿಯಾಗಿ ಒಣಗಿದ ಸಂಡಿಗೆಯನ್ನು ವರ್ಷದವರೆಗೆ ಗಾಳಿಯಾಡದ ಡಬ್ಬಿಯಲ್ಲಿ ಶೇಖರಿಸಿಡಬಹುದು. ಬೇಕಾದಾಗ ಕಾದ ಎಣ್ಣೆಯಲ್ಲಿ ಕರಿದು, ಬಿಸಿ ಬಿಸಿ ಅನ್ನ - ಸಾರು / ತೊವ್ವೆ ಜೊತೆ ಸವಿಯಬಹುದು.  
 

ಸಲಹೆ : ಹಸಿಮೆಣಸಿನ ಪೇಸ್ಟ್ ಬದಲು ಅಚ್ಚ ಖಾರದ ಪುಡಿಯನ್ನೂ ಬಳಸಬಹುದು ಮತ್ತು ಇಂಗು ಹಾಕುವ ಬದಲು ಬೆಳ್ಳುಳ್ಳಿ ಪೇಸ್ಟ್ ಕೂಡ ಹಾಕಬಹುದು. 

ಶುಕ್ರವಾರ, ಮೇ 5, 2017

ಮಜ್ಜಿಗೆ ಪಳದ್ಯ: ( 2 ವಿಧಾನಗಳು )

ವಿಧಾನ -1 :

ಸಾಮಗ್ರಿಗಳು:
ಮಜ್ಜಿಗೆ (ಸ್ವಲ್ಪ ದಪ್ಪ ಇರಬೇಕು, ಆದರೆ ಮೊಸರಲ್ಲ) - 2 ಲೋಟ,
ಉಪ್ಪು - ರುಚಿಗೆ, ಹಸಿಮೆಣಸು - 2,
ಜೀರಿಗೆ -  1/4 ಚಮಚ,
ಸಾಸಿವೆ - 1/4 ಚಮಚ,
ಕರಿಬೇವು - 4-5 ಎಲೆಗಳು,
ಬೆಳ್ಳುಳ್ಳಿ - 2 ಎಸಳು,
ಅರಿಶಿನಪುಡಿ - ಚಿಟಿಕೆ.ಎಣ್ಣೆ - 1 ಟೇ.ಚಮಚ


ವಿಧಾನ : ಮಜ್ಜಿಗೆಗೆ ಬೇಕಷ್ಟು ಉಪ್ಪು ಹಾಕಿ ಕದಡಿಟ್ಟುಕೊಳ್ಳಿ. ಒಗ್ಗರಣೆ ಸೌಟಿಗೆ ಸ್ವಲ್ಪ ಎಣ್ಣೆ ಹಾಕಿಕೊ೦ಡು ಬಿಸಿಯಾದ ಮೇಲೆ ಸಾಸಿವೆ, ಜೀರಿಗೆ, ಹಸಿಮೆಣಸಿನ ಚೂರುಗಳು, ಜಜ್ಜಿದ ಬೆಳ್ಳುಳ್ಳಿ, ಕರಿಬೇವು ಅರಿಶಿನ ಪುಡಿ ಹಾಕಿ ಈ ಒಗ್ಗರಣೆಯನ್ನು ಮಜ್ಜಿಗೆಗೆ ಹಾಕಿದರೆ ಮಜ್ಜಿಗೆ ಪಳದ್ಯ ರೆಡಿ.

ವಿಧಾನ -2 :

(2 ನೇ ವಿಧಾನದಲ್ಲಿ ಅರಿಶಿನ & ಜೀರಿಗೆ ಹಾಕುವುದಿಲ್ಲ. ಉದ್ದಿನಬೇಳೆ & ನೀರು ಒಗ್ಗರಣೆಗೆ ಹಾಕಬೇಕು. - ಮತ್ತೆಲ್ಲ ಅದೆ ಸಾಮಗ್ರಿಗಳು)

ಬಾಣಲೆಗೆ ಎಣ್ಣೆ ಹಾಕಿ ಅದು ಕಾದ ಮೇಲೆ ಉದ್ದಿನಬೇಳೆ, ಸಾಸಿವೆ, ಕರಿಬೇವು,ಹಸಿಮೆಣಸು, ಬೆಳ್ಳುಳ್ಳಿ ಹಾಕಿ ಹಾಗೆ 1 ನಿಮಿಷ ಬಿಟ್ಟು ನೀರು ಹಾಕಿ ಉಪ್ಪು ಹಾಕಿ ನೀರು ಕುದಿಬ೦ದ ಮೇಲೆ ಉರಿ ಆರಿಸಿ,, 3 ನಿಮಿಷ ಬಿಟ್ಟು ಮಜ್ಜಿಗೆ ಸೇರಿಸಿ.,, ಈಗ ಬಿಸಿ ಬಿಸಿ ಮಜ್ಜಿಗೆ ಪಳದ್ಯ ರೆಡಿ

ಸೂಚನೆ : ಮಜ್ಜಿಗೆ ಸ್ವಲ್ಪ ಹುಳಿ ಇದ್ದರೆ ಚೆನ್ನಾಗಿರುತ್ತದೆ.