ಗುರುವಾರ, ಜೂನ್ 4, 2020

ಮಾವಿನಕಾಯಿ ಕಡಿಗಾಯಿ ಉಪ್ಪಿನಕಾಯಿ:

ಸಾಮಗ್ರಿಗಳು:
ದಪ್ಪ ಸಿಪ್ಪೆಯ ಹುಳಿ ಮಾವಿನಕಾಯಿ ಹೆಚ್ಚಿದ್ದು: 5 ಕಪ್
ದಪ್ಪ ಸಾಸಿವೆ: 1 ಕಪ್
ಜೀರಿಗೆ: 1/2 ಕಪ್ ಕಿಂತ ಸ್ವಲ್ಪ ಕಮ್ಮಿ
ಮೆಂತ್ಯ: 2 ಚಮಚ
ಅಚ್ಚ ಖಾರದ ಪುಡಿ: 1/2 ಕಪ್ (ಖಾರಕ್ಕೆ ತಕ್ಕಂತೆ ಹೆಚ್ಚು ಕಮ್ಮಿ ಮಾಡಿಕೊಳ್ಳಿ) 
ಲವಂಗ: 2-3
ಕಾಳುಮೆಣಸು: 1/2 ಚಮಚ
ಉಪ್ಪು: 1 ಕಪ್ ನಷ್ಟು (ನಾನು ಸಾಣಿಕಟ್ಟ ಕಲ್ಲುಪ್ಪು ಉಪಯೋಗಿಸಿದ್ದು) 
ಎಣ್ಣೆ: 1/4 ಕಪ್
ಇಂಗು: 1/2 ಚಮಚ

ವಿಧಾನ: 
ಮಾವಿನಕಾಯಿಯನ್ನು ತೊಳೆದು ನೀರು ಇರದಂತೆ ಶುಭ್ರ ಬಟ್ಟೆಯಲ್ಲಿ ಚೆನ್ನಾಗಿ ಒರೆಸಿ, ಸ್ವಲ್ಪ ಹೊತ್ತಿನ ನಂತರ ಕತ್ತರಿಸಿ ಇಟ್ಟುಕೊಳ್ಳಬೇಕು. ಉಪ್ಪನ್ನು ಹುರಿದು ತಣ್ಣಗಾಗಲು ಬಿಡಿ. ಗಾಳಿಯಾಡದ ಡಬ್ಬದಲ್ಲಿ ಕತ್ತರಿಸಿದ ಮಾವಿನಕಾಯಿ ಹೋಳುಗಳನ್ನು ಒಂದು ಮುಷ್ಟಿ ಹಾಕಿ ಮೇಲಿಂದ ಸ್ವಲ್ಪ ಉಪ್ಪು ಉದುರಿಸಿ, ಮತ್ತೆ ಮಾವಿನಕಾಯಿ ಹಾಕಿ ಉಪ್ಪು ಉದುರಿಸಿ. ಮಧ್ಯ ಮಧ್ಯ ಮೆಂತ್ಯ ಕಾಳುಗಳನ್ನೂ ಹೀಗೆಯೇ ಉದುರಿಸಿಕೊಳ್ಳಿ. ಹೀಗೆಯೇ ಪೂರ್ತಿ ಮಾವಿನಕಾಯಿ ಹೋಳುಗಳಿಗೂ ಮಾಡಿ. ಮೇಲಿಂದ ಎಣ್ಣೆ ಸುರಿದು (ಕಾಯಿಸಿ ಆರಿಸಿ ಬೇಕಾದರೂ ಹಾಕಬಹುದು. ನಾನು ಫ್ರೆಶ್ ತೆಂಗಿನೆಣ್ಣೆ ಹಾಕುವುದರಿಂದ ಹಾಗೆಯೇ ಹಾಕುತ್ತೇನೆ) ಮುಚ್ಚಳ ಮುಚ್ಚಿ 1-2 ದಿನ ಬಿಡಿ. ಉಪ್ಪು ನೀರಾದಂತೆ ಹೋಳುಗಳನ್ನು ಸ್ವಲ್ಪ ಮೇಲೆ ಕೆಳಗೆ ಮಾಡುತ್ತಿರಿ. 
ಈಗ ಮಸಾಲೆ ಪುಡಿ ಮಾಡಿಕೊಳ್ಳಿ. ಬಾಣಲೆಯಲ್ಲಿ ಸಾಸಿವೆಯನ್ನು ಹುರಿದು ಒಂದು ತಟ್ಟೆಗೆ ತೆಗೆದಿಟ್ಟಕೊಳ್ಳಿ. ನಂತರ ಜೀರಿಗೆ ಹಾಕಿ ಹುರಿದುಕೊಳ್ಳಿ. ಲವಂಗ, ಕಾಳುಮೆಣಸು ಹುರಿದುಕೊಳ್ಳಿ. ಎಲ್ಲವನ್ನೂ ತಣ್ಣಗಾಗಲು ಬಿಡಿ. ಮೊದಲು ಸಾಸಿವೆಯನ್ನು ಮಿಕ್ಸಿಗೆ ಹಾಕಿ ತರಿ ತರಿ ಪುಡಿ ಮಾಡಿ ತೆಗೆದುಕೊಳ್ಳಿ. ನಂತರ ಉಳಿದ ಹುರಿದ ಸಾಮಗ್ರಿ ಮತ್ತು ಇಂಗು ಸೇರಿಸಿ ಚೆನ್ನಾಗಿ ಪುಡಿ ಮಾಡಿ. ಒಂದು ಅಗಲವಾದ ಪಾತ್ರೆಗೆ ಮಾಡಿದ ಪುಡಿಗಳು, ಮೆಣಸಿನ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇದಕ್ಕೆ ಉಪ್ಪಿನಲ್ಲಿ ಹಾಕಿಟ್ಟ ಮಾವಿನಕಾಯಿ ಹೋಳುಗಳನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಗಾಳಿಯಾಡದಂತೆ ಜಾಡಿಯಲ್ಲಿ ತುಂಬಿಡಿ. ಹೋಳುಗಳನ್ನು ಸ್ವಲ್ಪ ಮೆತ್ತಗಾಗಿ ಹುಳಿ ಬಿಟ್ಟುಕೊಂಡ ನಂತರ ಉಪಯೋಗಿಸಿ.

ಶುಕ್ರವಾರ, ಮೇ 24, 2019

ಡ್ರೈ ಫ್ರೂಟ್ಸ್ ಲಡ್ಡು :

ಇದು ಸತ್ವಯುತ ಲಡ್ಡು. ಸಕ್ಕರೆ, ಬೆಲ್ಲ ಯಾವುದನ್ನೂ ಹಾಕದೇ ಮಾಡುವುದರಿಂದ ಆರೋಗ್ಯಕರ. ನೀರು ಹಾಕದೇ ಮಾಡುವುದರಿಂದ ಬೇಗ ಕೆಡುವುದೂ ಇಲ್ಲ. ಸಮಯವಿದ್ದಾಗ ಮಾಡಿಟ್ಟರೆ ಮಕ್ಕಳು ಹಸಿವು ಎಂದಾಗ ಕೊಡಬಹುದು. ಆಡುವ ಮಕ್ಕಳಿಗೆ ಶಕ್ತಿಯುತ, ರುಚಿ ಕೂಡ ಇರುವುದರಿಂದ ಮಕ್ಕಳು ತಂಟೆ ಮಾಡದೇ ತಿನ್ನುತ್ತಾರೆ. ವಾಲ್ನಟ್ ಅನ್ನು ಎಲ್ಲಾ ಮಕ್ಕಳು ಹಾಗೆಯೇ ತಿನ್ನಲು ಇಷ್ಟ ಪಡುವುದಿಲ್ಲ, ಏಕೆಂದರೆ ಅದು ತಿನ್ನಲು ರುಚಿಯಲ್ಲ.  ಆದರೆ ಇದು ಮೆದುಳಿನ ಬೆಳವಣಿಗೆಗೆ ಪೂರಕ. ಈ ಉಂಡೆಗೆ ಹಾಕಿದರೆ ಗೊತ್ತಾಗದಂತೆ ತಿನ್ನಿಸಬಹುದು.

ಸಾಮಗ್ರಿಗಳು :
ಬಾದಾಮಿ - 2 ಕಪ್
ಗೋಡಂಬಿ - 1 ಕಪ್
ಒಣ ದ್ರಾಕ್ಷಿ - 2 ಕಪ್
ವಾಲ್ನಟ್ - 1 ಕಪ್
ಪಿಸ್ತಾ (unsalted) - 1 ಕಪ್ 
ಖರ್ಜೂರ - 3 ಕಪ್
ಎಳ್ಳು - 1-2 ಚಮಚ
ತುಪ್ಪ -  3-4 ಚಮಚ
(ಸಾಮಗ್ರಿಗಳನ್ನು ನಿಮಗೆ ಬೇಕಾದಂತೆ ಹೆಚ್ಚು ಕಮ್ಮಿ ಮಾಡಿಕೊಳ್ಳಬಹುದು. ಗೋಡಂಬಿ ಉಷ್ಣ ಗುಣದ್ದಾಗಿದ್ದು ಸ್ವಲ್ಪ ಹಾಕಿದರೆ ಸಾಕು. ಎಳ್ಳಿನ ಬದಲು ಹುರಿದ ಗಸಗಸೆ ಆದರೂ ಚೆನ್ನಾಗಿರುತ್ತದೆ)

ವಿಧಾನ :
ದ್ರಾಕ್ಷಿ ಬಿಟ್ಟು ಉಳಿದ ಡ್ರೈ ಫ್ರೂಟ್ಸ್ ಗಳನ್ನ ಬೇರೆ ಬೇರೆಯಾಗಿ ಸಣ್ಣಗೆ ಹೆಚ್ಚಿ ಚೂರು ಮಾಡಿಕೊಳ್ಳಿ. ಬಾಣಲೆಗೆ ೧ ಚಮಚ ತುಪ್ಪ ಹಾಕಿ ಒಂದೊಂದಾಗಿ ಹೆಚ್ಚಿದ ಡ್ರೈ ಫ್ರೂಟ್ಸ್ ಗಳನ್ನು ಘಮ್ಮೆನ್ನುವಂತೆ ಹುರಿಯಿರಿ. 

ಖರ್ಜೂರವನ್ನು ಹುರಿಯದಿದ್ದರೂ ಆಗುತ್ತದೆ. ಖರ್ಜೂರವನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ (ನೀರು ಹಾಕಬಾರದು). ಬಾಣಲೆಗೆ ಸಾಮಗ್ರಿಗಳು, ಉಳಿದ ಒಂದು ಚಮಚ ತುಪ್ಪ ಮತ್ತು ರುಬ್ಬಿದ ಖರ್ಜೂರ ಹಾಕಿ ಸಣ್ಣ ಉರಿಯಲ್ಲಿ ಚೆನ್ನಾಗಿ ಮಿಕ್ಸ್ ಮಾಡಿ. ಉರಿ ಆರಿಸಿ ಸ್ವಲ್ಪ ಆರಲು ಬಿಟ್ಟು ಎಷ್ಟಾಗುತ್ತದೋ ಅಷ್ಟು ಬಿಸಿ ಇರುವಾಗಲೇ ಪುಟ್ಟ ಪುಟ್ಟ ಉಂಡೆ ಕಟ್ಟಿ. ಒಂದು ಪ್ಲೇಟ್ ನಲ್ಲಿ ಎಳ್ಳು ಅಥವಾ ಹುರಿದ ಗಸಗಸೆ ಹರವಿಕೊಂಡು ಅದರಲ್ಲಿ ಕಟ್ಟಿದ ಉಂಡೆಯನ್ನ ಹೊರಳಿಸಿ ಡಬ್ಬದಲ್ಲಿ ತುಂಬಿಡಿ. ಎರಡು ತಿಂಗಳವರೆಗೂ ಕೆಡದಂತೆ ಇರುವ ಈ ಉಂಡೆಯನ್ನು ಮಕ್ಕಳಿಗೆ ಕೊಟ್ಟರೆ ಖುಷಿಯಿಂದ ತಿನ್ನುತ್ತಾರೆ.




ಸೂಚನೆ: ಬೇರೆ ಬೇರೆ ತರಹದ ಖರ್ಜೂರ ಸಿಗುವುದರಿಂದ ಸಿಹಿಯಲ್ಲಿ ಕೂಡ ವ್ಯತ್ಯಾಸವಿರುತ್ತದೆ. ನಿಮ್ಮ ಸಿಹಿಗನುಗುಣವಾಗಿ ಹೆಚ್ಚು ಕಮ್ಮಿ ಹಾಕಿಕೊಳ್ಳಬಹುದು. 

ಬುಧವಾರ, ಮಾರ್ಚ್ 13, 2019

ಮಂಡಕ್ಕಿ ಒಗ್ಗರಣೆ (ಗಿರ್ಮಿಟ್ - ಉತ್ತರ ಕರ್ನಾಟಕ ಸ್ಟೈಲ್) :

ಸಾಮಗ್ರಿಗಳು :
ಮಂಡಕ್ಕಿ (ಪುರಿ) : 6-7 ಬೌಲ್ 
ಈರುಳ್ಳಿ : 1
ಟೊಮೇಟೊ : 1 
ಹುರಿಗಡಲೆ ಪುಡಿ : 5 ಟೇಬಲ್ ಚಮಚ 
ಹಸಿಮೆಣಸು : 5-6
ಅರಿಶಿನ ಪುಡಿ : 1/2 ಚಮಚ
ಶೇಂಗಾ : 4-5 ಟೇಬಲ್ ಚಮಚ 
ಉದ್ದಿನಬೇಳೆ : 1 ಚಮಚ 
ಸಾಸಿವೆ : 1/2 ಚಮಚ 
ಜೀರಿಗೆ : 1/2 ಚಮಚ 
ಕರಿಬೇವು : ಸ್ವಲ್ಪ 
ಕೊತ್ತಂಬರಿ ಸೊಪ್ಪು : ಸ್ವಲ್ಪ 
ಉಪ್ಪು : ಸ್ವಲ್ಪ 
ಲಿಂಬುರಸ : 1 ಟೇಬಲ್ ಚಮಚ 
ಎಣ್ಣೆ : 4-5 ಟೇಬಲ್ ಚಮಚ 

ವಿಧಾನ : ಮಂಡಕ್ಕಿಯನ್ನು ನೀರಿನಲ್ಲಿ ನೆನೆಸಿ ಸ್ವಲ್ಪ ಮೆತ್ತಗಾಗುತ್ತಿದ್ದಂತೇ ತೆಗೆದು ನೀರು ಹಿಂಡಿ ಒಂದು ಪಾತ್ರೆಗೆ ಹಾಕಿಟ್ಟುಕೊಳ್ಳಿ. ಬಾಣಲೆಗೆ ಎಣ್ಣೆ ಹಾಕಿ ಕಾಯಿಸಿ ಶೇಂಗಾ ಹಾಕಿ ಹುರಿಯಿರಿ, ಉದ್ದಿನ ಬೇಳೆ ಹಾಕಿ ಕೆಂಪಗಾದ ಮೇಲೆ ಜೀರಿಗೆ, ಸಾಸಿವೆ ಹಾಕಿ ಸಿಡಿಸಿ.  ಇದಕ್ಕೆ ಉದ್ದುದ್ದ ಸೀಳಿದ ಹಸಿಮೆಣಸಿನ ಕಾಯಿ, ಕರಿಬೇವು ಹಾಕಿ ಹುರಿದು, ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಹುರಿಯಿರಿ. ನಂತರ ಸಣ್ಣ ಹೆಚ್ಚಿದ ಟೊಮೇಟೊ ಹಾಕಿ ಸ್ವಲ್ಪ ಉಪ್ಪು ಹಾಕಿ (ಮಂಡಕ್ಕಿಯಲ್ಲಿ ಉಪ್ಪಿನಂಶ ಇರುವುದರಿಂದ ಸ್ವಲ್ಪ ಹಾಕಿದರೆ ಸಾಕು) ಟೊಮೇಟೊ ಮೆತ್ತಗಾಗುವವರೆಗೆ ಹುರಿಯಿರಿ. ಇದಕ್ಕೆ ಅರಿಶಿನ ಪುಡಿ ಹಾಕಿ ಮಿಕ್ಸ್ ಮಾಡಿ. ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪು, ರೆಡಿ ಮಾಡಿಟ್ಟ ಮಂಡಕ್ಕಿ ಹಾಕಿ, ಲಿಂಬು ರಸ, ಹುರಿಗಡಲೆ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಉರಿ ಆರಿಸಿ. ಬಿಸಿ ಬಿಸಿಯಾದ ಉತ್ತರ ಕರ್ನಾಟಕ ಶೈಲಿಯ ಒಗ್ಗರಣೆ ಮಂಡಕ್ಕಿ ಟೀ, ಕಾಫಿ ಜೊತೆ ಸವಿಯಿರಿ. ಇದರ ಜೊತೆ ಖಾರಕ್ಕೆ ಮೆಣಸಿನ ಕಾಯಿ ಬೇಕಿದ್ದಲ್ಲಿ : ಹಸಿಮೆಣಸಿನಕಾಯಿ ಸ್ವಲ್ಪ ಸೀಳಿ ಅದಕ್ಕೆ ಸ್ವಲ್ಪವೇ ಉಪ್ಪು ಹಾಕಿ (ಬೇಕಿದ್ದಲ್ಲಿ ಆಮಚೂರ್ ಪುಡಿ ಹಾಕಿ) ಎಣ್ಣೆಯಲ್ಲಿ ಹುರಿದು ತೆಗೆದಿಟ್ಟುಕೊಳ್ಳಿ. ಖಾರಕ್ಕೆ ಬೇಕಿದ್ದಲ್ಲಿ ಈ ಮೆಣಸನ್ನು ತಿನ್ನಲು ರುಚಿಯಾಗಿರುತ್ತದೆ. 


ಗುರುವಾರ, ಫೆಬ್ರವರಿ 21, 2019

ಬಾಣಂತಿ ಕಟ್ನೆ :

  ಇವತ್ತು ಬಾಣಂತಿಗೆ ಊಟಕ್ಕೆ ಮಾಡುವ ಕಟ್ನೆಯ ಬಗ್ಗೆ ತಿಳಿಯೋಣ. ಕಟ್ನೆ ಎಂದರೆ ಅನ್ನದ ಜೊತೆ ತಿನ್ನುವ ಗೊಜ್ಜಿನಂಥ ಒಂದು ಪದಾರ್ಥ. ಕನ್ನೆ ಕುಡಿ / ಸೊರ್ಲೆ ಕುಡಿ ಅಥವಾ ಎಲವರಿಗೆ ಕುಡಿ ಬಳಸಿ ಕಟ್ನೆ ಮಾಡುತ್ತಾರೆ, ಇದು ಎಲ್ಲರೂ ತಿನ್ನುವ ಪದಾರ್ಥ. ನಾ ಈಗ ಹೇಳ ಹೊರಟಿರುವುದು ಬಾಣಂತಿಗಾಗಿ ಮಾಡುವ ಸರ್ವ ಕುಡಿಗಳ ಕಟ್ನೆ. ಹಲವಾರು ಔಷಧಿಯುಕ್ತ ಕುಡಿಗಳನ್ನು ಹಾಕಿ ಇದನ್ನು ಮಾಡುತ್ತಾರೆ. ಶೀತ, ವಾತ ತಡೆಯಲು, ಮೈ ಕೈ ನೋವು ಕಮ್ಮಿಯಾಗಲು, ರೋಗ ನಿರೋಧಕ ಶಕ್ತಿಗೆ ಹೀಗೆ ಹಲವಾರು ಕಾರಣಗಳಿಗೆ ಒಟ್ಟಿನಲ್ಲಿ ಬಾಣಂತಿಗೆ ಶಕ್ತಿ ವರ್ಧಕವಾಗಿ ಈ ಹಸಿರು ಕುಡಿಗಳ ಕಟ್ನೆ ಸಹಾಯಕ. ಇವುಗಳಲ್ಲಿ ಎಷ್ಟು ಕುಡಿಗಳ ಲಭ್ಯತೆಯಿದೆಯೋ ಅಷ್ಟನ್ನು ನೀವು ಹಾಕಿಕೊಳ್ಳಬಹುದು. ನನ್ನ ಅಮ್ಮ ಇದನ್ನು ಮಾಡುವ ಸಂದರ್ಭದಲ್ಲಿ ಎಲವರಿಗೆ ಕುಡಿ, ದಾಳಿಂಬೆ ಕುಡಿ, ಮದರಂಗಿ ಕುಡಿಗಳು ಲಭ್ಯವಾಗಿಲ್ಲದ ಕಾರಣ ಅವುಗಳ ಫೋಟೋ ನನ್ನ ಬಳಿ ಇಲ್ಲ. ನೀವು ಇವುಗಳನ್ನೂ ಸೇರಿಸಿ ಮಾಡಿಕೊಳ್ಳಿ. ಬಾಣಂತಿಗೆ ಹಸಿ ತೆಂಗಿನ ಕಾಯಿ ಬಳಸಬಾರದು. ಒಣ ಕೊಬ್ಬರಿಯನ್ನೇ ಹಾಕಬೇಕು. 

ಸಾಮಗ್ರಿಗಳು :
ಕನ್ನೇ ಕುಡಿ (ಸೊರ್ಲೆ ಕುಡಿ) : 2 ಮುಷ್ಠಿ
ಎಲವರಿಗೆ ಕುಡಿ : 1 ಮುಷ್ಠಿ 
ಮದರಂಗಿ ಕುಡಿ : 2 
ದಾಳಿಂಬೆ ಕುಡಿ : 2 
ಪುನ್ನಾಗ ಕುಡಿ : 2
ಗೆಂಟಿಗೆ ಕುಡಿ : 2
ಮುಂಬೈ ಮಲ್ಲಿಗೆ ಕುಡಿ : 2
ವಾತಂಗಿ ಕುಡಿ : 4-5
ಶುಗರ್ ಸೊಪ್ಪು : 2 
ಸೂಜಿ ಮೆಣಸು ಕುಡಿ : 2
ಅಬ್ಬಲಿಗೆ / ಕನಕಾಂಬರ ಕುಡಿ : 2
ಗಣಿಕೆ ಕುಡಿ : 2
ತುಳಸಿ ಕುಡಿ : 2
ಅಗಸೆ ಕುಡಿ : 2
ಕಾಳುಮೆಣಸು ಎಲೆ : 2 
ನಾಗವಲ್ಲಿ ಎಲೆ : 2
ಹೊಳೆ (ಗುಡ್ಡೆ) ದಾಸವಾಳ (ಕೇಪುಳ) ಕುಡಿ : 2
ಮುತ್ತು ಮಲ್ಲಿಗೆ ಕುಡಿ : 2
ನಂದಿ ಬಟ್ಟಲು ಕುಡಿ : 2
ಮಧ್ಯಾಹ್ನ ಮಲ್ಲಿಗೆ ಕುಡಿ : 2
ದಾಲ್ಚಿನ್ನಿ ಕುಡಿ : 2 
ದಾಸವಾಳ ಕುಡಿ : 2
ಕಳ್ಳಂ ಕಡ್ಲೆ ಕುಡಿ : 2
ಲಕ್ಕಿ ಕುಡಿ : 2
ಲಿಂಬು ಕುಡಿ : 2
ಸೀಗೆ ಕುಡಿ : 2 
ಚಂದಕಲು ಮುಳ್ಳಿನ ಕುಡಿ : 2
ಕಸುವಿನ ಬಳ್ಳಿ : 2
ಇಲಿ ಕಿವಿ ಸೊಪ್ಪು : 2
ದುಂಡು ಮಲ್ಲಿಗೆ ಕುಡಿ : 2
ರಾಮ ತುಳಸಿ ಕುಡಿ : 2 

ಜೀರಿಗೆ : 3 ಟೇಬಲ್ ಚಮಚ 
ಬೋಳ ಕಾಳು (white pepper) : 1 ಟೇಬಲ್ ಚಮಚ 
ಒಣ ಕೊಬ್ಬರಿ : ಅರ್ಧ  

ವಿಧಾನ :
  ಎಲ್ಲಾ ಕುಡಿಗಳನ್ನು ಹುಳುಗಳಿಲ್ಲದಂತೆ ಸ್ವಚ್ಛ ಮಾಡಿ, ಚೆನ್ನಾಗಿ ತೊಳೆದುಕೊಳ್ಳಿ. ನಂತರ ಒಂದು ಪಾತ್ರೆಗೆ ಹಾಕಿ ನೀರು ಹಾಕಿ, ಜೀರಿಗೆ, ಬೋಳ ಕಾಳು ಹಾಕಿ 10-15 ನಿಮಿಷ ಚೆನ್ನಾಗಿ ಬೇಯಿಸಿ. ಕೊಬ್ಬರಿಯನ್ನು ಹೆಚ್ಚಿಕೊಳ್ಳಿ ಅಥವಾ ತುರಿದುಕೊಳ್ಳಿ. ಬೇಯಿಸಿದ ಮಿಶ್ರಣ ತಣ್ಣಗಾದ ಮೇಲೆ ಕೊಬ್ಬರಿ ಜೊತೆ ಸೇರಿಸಿ ರುಬ್ಬಿಕೊಳ್ಳಿ. ನಂತರ ನೀರು, ಉಪ್ಪು ಸೇರಿಸಿ ಕುದಿಸಿ. ಹಳೆಯ ಕಾಲದಲ್ಲಿ ಇದನ್ನು ಕಂಚಿನ ಅಥವಾ ಮಣ್ಣಿನ ಪಾತ್ರೆಯಲ್ಲಿ ದಿನಾಲೂ  ಕುದಿಸಿ ಇಡುತ್ತಿದ್ದರು. ಐದಾರು ದಿನಗಳವರೆಗೆ ಬಳಸಬಹುದು. ಬೇಕಿದ್ದಲ್ಲಿ ದಿನಾ ಬಡಿಸುವಾಗ ಸ್ವಲ್ಪ ಕಟ್ನೆಗೆ ತುಪ್ಪ, ಜಜ್ಜಿದ ಬೆಳ್ಳುಳ್ಳಿ ಒಗ್ಗರಣೆ ಮಾಡಿ ಹಾಕಬಹುದು. ಅಷ್ಟೂ ಕಟ್ನೆಗೆ ಒಗ್ಗರಣೆ ಮಾಡಿದರೆ ಐದಾರು ದಿನ ರುಚಿಯಾಗಿರುವುದಿಲ್ಲ. 


  ಮೊದಲೇ ತಿಳಿಸಿದಂತೆ ಎರಡು ತುತ್ತು ಅನ್ನಕ್ಕೆ ಜೀರಿಗೆ, ಮೆಣಸಿನ ಪುಡಿ ಹಾಕಿ ಆದ ಮೇಲೆ ಸ್ವಲ್ಪ ಅನ್ನಕ್ಕೆ ಒಂದು ದೊಡ್ಡ ಚಮಚ ತುಪ್ಪ ಮತ್ತು ಕಟ್ನೆ ಹಾಕಿ ಊಟ ಬಡಿಸಬೇಕು. ನಂತರ ಸ್ವಲ್ಪೇ ಅನ್ನಕ್ಕೆ ದೊಡ್ಡ ಸೌಟು ಗಟ್ಟಿ ಮೊಸರು ಬಡಿಸಬೇಕು. ಬಡಿಸುವ ಒಂದೇ ಸೌಟು ಬಿಸಿ ಅನ್ನಕ್ಕೆ ಇಷ್ಟೆಲ್ಲಾ ಆಗಬೇಕು ....!! ನೆನಪಿಡಿ ಬಾಣಂತಿಗೆ ಹಸುವಿನ ತುಪ್ಪ - ಹಾಲು - ಮೊಸರು ಶ್ರೇಷ್ಠ. 

  ಕುಡಿಗಳ ಪರಿಚಯಕ್ಕೆ ಫೋಟೋ ಹಾಕಿದ್ದೇನೆ. 





ಶುಕ್ರವಾರ, ಫೆಬ್ರವರಿ 8, 2019

ಹೊಳೆ ದಾಸವಾಳ ಬೇರಿನ ಕಷಾಯ:

   ಹೊಳೆ ದಾಸವಾಳ ಅಥವಾ ಗುಡ್ಡೆ ದಾಸವಾಳ ಎನ್ನುವ ಸಸ್ಯ ಮಲೆನಾಡು ಮತ್ತು ಕರಾವಳಿ ಪ್ರದೇಶಗಲ್ಲಿ ಹೆಚ್ಚಾಗಿ ಸಿಗುವ ಸಸ್ಯ. ಇದರಲ್ಲಿ ಬಿಳಿ ಮತ್ತು ಕೆಂಪು ಜಾತಿಗಳಿವೆ. ಕೆಂಪನೆ ಪುಟ್ಟ, ಸಿಹಿ ಮತ್ತು ಒಗರು ಮಿಶ್ರಿತ ಹಣ್ಣುಗಳಾಗುತ್ತವೆ. (ಕೆಳಗೆ ಹೂವು, ಹಣ್ಣು ಮತ್ತು ಬೇರಿನ ಚಿತ್ರ ಹಾಕಿದ್ದೇನೆ). ಇದರ ಬೇರನ್ನು ಕಿತ್ತು ತಂದು ಚೆನ್ನಾಗಿ ತೊಳೆದು, ಜಜ್ಜಿ ಕಷಾಯ ಮಾಡಿ ಬಾಣಂತಿಗೆ ಕುಡಿಯಲು ಕೊಡುತ್ತಾರೆ.  ಸ್ನಾನ ಮುಗಿಸಿ, ಬೆವರು ಇಳಿಸಿ ಸುಸ್ತಾಗಿ ಬೆಂಕಿ ಕಾಯಿಸುವಾಗ ಕೊಡುವ ಈ ಬಿಸಿ ಬಿಸಿ ಕಷಾಯ ಬಾಳಂತಿಯರಿಗೆ ಅಮೃತ ಕುಡಿದಷ್ಟು ಆನಂದ ನೀಡುತ್ತದೆ. ಅಲ್ಲದೇ ಮಧ್ಯಾಹ್ನ ಮತ್ತು ಸಂಜೆ ಊಟ ಮಾಡುವಾಗ ನೀರಿನ ಬದಲು ಈ ಕಷಾಯವನ್ನೇ ಕೊಡಲಾಗುತ್ತದೆ. ನೀರನ್ನು ಜಾಸ್ತಿ ಕುಡಿದರೆ ವಾತ ಎಂದು ಹೇಳಲಾಗುತ್ತದೆ. ಕುಡಿಯುವುದಾದರೂ ಬಿಸಿ ನೀರನ್ನು ಕುಡಿಯಬೇಕು. ತಂಪಾದ ಯಾವುದೇ ಪಾನೀಯ ಬಾಣಂತಿಯರಿಗೆ ವರ್ಜ್ಯ. ಈಗ ಈ ಕಷಾಯ ಮಾಡುವುದನ್ನು ಕಲಿಯೋಣ. 





ಸಾಮಗ್ರಿಗಳು :
ಗುಡ್ಡೆ ದಾಸವಾಳ ಬೇರು - ಒಂದು ಮುಷ್ಠಿ 
ಬೋಳ ಕಾಳು (white pepper) - 1 ಚಮಚ 
ಜೀರಿಗೆ - 2-3 ಚಮಚ 
ನೀರು - 4-5 ಲೀಟರ್ 

ವಿಧಾನ : 
ಮೊದಲು ದಾಸವಾಳ ಬೇರನ್ನು ತೊಳೆದು, ಸ್ವಲ್ಪ ಜಜ್ಜಿಕೊಳ್ಳಿ. ದೊಡ್ಡ ಪಾತ್ರೆಯಲ್ಲಿ ನೀರು ಹಾಕಿ ಅದಕ್ಕೆ ಉಳಿದೆಲ್ಲ ಸಾಮಗ್ರಿ ಹಾಕಿ ಕುದಿಸಲು ಇಡಿ. ನೀರು ಕುದಿದು  ಕಾಲು ಭಾಗದಷ್ಟಾದರೂ ಇಂಗಬೇಕು. ಕೆಂಪು ದಾಸವಾಳದ ಬೇರಾದರೆ ಕೆಂಪಗಿನ ಕಷಾಯ ಆಗುತ್ತದೆ. 

ನಂತರ ಉರಿ ಆರಿಸಿ. ಬಾಣಂತಿಗೆ ಕೊಡುವಾಗ ಒಂದು ಕಷಾಯಕ್ಕೆ ಕಾಲು ಲೋಟ ಅಥವಾ ಅದಕ್ಕಿಂತ ಕಮ್ಮಿ ಹಾಲು ಸೇರಿಸಿ ಬಿಸಿ ಬಿಸಿಯಾಗಿ ಕೊಡಿ. ಈ ಕಷಾಯ ಖಾಲಿ ಆಗುವವರೆಗೆ ದಿನಕ್ಕೊಮ್ಮೆ ಕುದಿಸಿ ಇಟ್ಟುಕೊಳ್ಳಿ. ಕುಡಿಯಲು ರುಚಿಯೆನಿಸುವ ಈ ಕಷಾಯ ಬಾಣಂತಿಯ ಬಾಯಾರಿಕೆ ಇಂಗಲು ಸಹಕಾರಿ. ನೆಗಡಿಯಾಗಂತೆ ನೋಡಿಕೊಳ್ಳಲು ಕೂಡ ಸಹಾಯಕ. 


ಬುಧವಾರ, ಫೆಬ್ರವರಿ 6, 2019

ಜೀರಿಗೆ ಮತ್ತು ಕಾಳುಮೆಣಸಿನ ಪುಡಿಗಳು : (ಬಾಣಂತಿಗೆ)

   ತಾಯ್ತನ ಪ್ರತಿ ಹೆಣ್ಣಿನ ಜೀವನದ ಮಹತ್ತರ ಘಟ್ಟ. ತಾಯಿಯಾದರೆ ಮರುಜೀವ ಪಡೆದಂತೆ ಎಂಬ ಮಾತಿದೆ. ಬಾಣಂತನದಲ್ಲಿ ಮೈಯಲ್ಲಿನ ನೀರನ್ನು ಪೂರ್ತಿ ಇಳಿಸಿ, ಮೈ ಇಳಿಸುವ ಪ್ರಕ್ರಿಯೆ ರೂಢಿಯಲ್ಲಿದೆ. ಅಂತೆಯೇ ರಕ್ತ ಕೂಡ ಕಮ್ಮಿಯಾಗುತ್ತದೆ ಬಾಳಂತನದ ಆಹಾರದಲ್ಲಿ. ಮೊದಲು ರಕ್ತ ಶುದ್ಧಿಗೆ ಮದ್ದು ಕೊಟ್ಟು, ತಿಂಗಳ ನಂತರ ರಕ್ತ ವೃದ್ಧಿಗೆ ಲೇಹ್ಯ ಕೊಡುವ ಪದ್ಧತಿ ನಮ್ಮಲ್ಲಿದೆ. ಲೇಹ್ಯಗಳ ತಯಾರಿಕೆಯನ್ನು ಮುಂದಿನ ಕಂತುಗಳಲ್ಲಿ ತಿಳಿಸಿಕೊಡುತ್ತೇನೆ. ಬಾಣಂತನ ಮುಗಿದ ನಂತರ ತಲೆ ಕೂದಲೆಲ್ಲಾ ಉದುರಲಾರಂಬಿಸಿ ಹೊಸ ಕೂದಲು ಬರುತ್ತದೆ. ಅಂತೆಯೇ ಮೈ ಚರ್ಮವೆಲ್ಲಾ ಕಪ್ಪಗಾಗಿ ಮುಂದಿನ ದಿನಗಳಲ್ಲಿ ಹೊಸ ಚರ್ಮ ಕೂಡ ಬರುತ್ತದೆ. ಈ ಬಾಣಂತಿ ಆರೈಕೆ ಒಂದೊಂದು ಊರಿನಲ್ಲಿ ಒಂದೊಂದು ಬಗೆಯದಾಗಿದೆ. ನಮ್ಮ ಊರಿನ ಕಡೆ ಮಲೆನಾಡಿನ ಅತೀ ತಂಪು ಹವಾಮಾನಕ್ಕೆ ತಕ್ಕಂತೆ ಔಷಧ ಪದ್ಧತಿ ರೂಢಿಯಲ್ಲಿದೆ.
   ಇವತ್ತಿನ ಪುಡಿಗಳ ವಿವರಣೆ ಮಗುವಿನ ಜನನದ ನಂತರ ಮೊದಲ ಊಟದಿಂದಲೇ ಬೇಕಾಗುವಂಥದ್ದು. ಆದ್ದರಿಂದ ಹೆರಿಗೆಯ ಒಂದು ವಾರ ಮುಂಚೆಯೇ ಇದನ್ನು ತಯಾರಿಸಿಟ್ಟುಕೊಳ್ಳುತ್ತಾರೆ.

ಮೊದಲಿಗೆ ಜೀರಿಗೆ ಪುಡಿ ಮಾಡುವುದನ್ನು ನೋಡೋಣ. ಇದಕ್ಕೆ ಹಸಿ ಜೀರಿಗೆ - ಬಿಸಿ ಜೀರಿಗೆ ಪುಡಿ ಎಂದು ಹೇಳುತ್ತಾರೆ. ಅಂದರೆ ಹಸಿ ಮತ್ತು ಹುರಿದ ಜೀರಿಗೆ ಎರಡನ್ನೂ ಸೇರಿಸಿ ಪುಡಿ ಮಾಡುವುದು.

ಸಾಮಗ್ರಿಗಳು:
ಜೀರಿಗೆ : 2 ಕಪ್
ತುಪ್ಪ : 1/2 ಚಮಚ


ವಿಧಾನ :
ಬಾಣಲೆಗೆ ತುಪ್ಪ ಹಾಕಿ ಒಂದು ಕಪ್ ಜೀರಿಗೆಯನ್ನು ಹುರಿದುಕೊಳ್ಳಿ. ಇದನ್ನು ಸ್ವಲ್ಪ ಆರಲು ಬಿಡಿ. ನಂತರ ಮಿಕ್ಸಿ ಜಾರಿಗೆ ಹುರಿದ ಜೀರಿಗೆ ಮತ್ತು ಒಂದು ಕಪ್ ಹಸಿ (ಹುರಿಯದೇ ಇರುವ) ಜೀರಿಗೆ ಹಾಕಿ ಪುಡಿ ಮಾಡಿ ಗಾಳಿಯಾಡದ ಡಬ್ಬಿಗೆ ತುಂಬಿಡಿ.

ಈಗ ಕಾಳು ಮೆಣಸಿನ ಪುಡಿ ಮಾಡುವುದನ್ನು ತಿಳಿಯೋಣ. ಇದು ಬಾಣಂತಿಗೆ ಹೆರಿಗೆಯ ನೋವು ಮತ್ತು ಸೊಂಟ, ಬೆನ್ನು ಇತ್ಯಾದಿ ನೋವುಗಳ ಶಮನಕ್ಕೆ, ಥಂಡಿಯಾಗದಿರಲು ಬಹು ಮುಖ್ಯ ಮನೆ ಮದ್ದು.

ಸಾಮಗ್ರಿಗಳು:
ಬಿಳಿ ಕಾಳುಮೆಣಸು (ಬೋಳ ಕಾಳು) : 1 ಕಪ್
ತುಪ್ಪ : 1 ಚಮಚ

ವಿಧಾನ :
 ಬಾಣಲೆಗೆ ತುಪ್ಪ ಹಾಕಿ ಕಾಳುಮೆಣಸು ಹಾಕಿ ಗಮ್ಮೆನ್ನುವಂತೆ ಹುರಿದು ತಣ್ಣಗಾದಮೇಲೆ ಮಿಕ್ಸಿಗೆ ಹಾಕಿ ಪುಡಿ ಮಾಡಿ. ಗಾಳಿಯಾಡದಂತೆ ಡಬ್ಬಿಯಲ್ಲಿ ತುಂಬಿಡಿ.


  ಬಾಣಂತಿಗೆ ಜಾಸ್ತಿ ಊಟವನ್ನು ಕೊಡುವುದಿಲ್ಲ. ಸಹಜ ಹೆರಿಗೆ ಪ್ರಕ್ರಿಯೆಯಲ್ಲಿ ಹೊಟ್ಟೆಯಲ್ಲಿನ ಜೀರ್ಣಾಂಗಗಳು ಸೋತಿರುವುದರಿಂದ ಹೆಚ್ಚು ಮತ್ತು ಗಟ್ಟಿ ಆಹಾರವನ್ನು ಜೀರ್ಣಿಸಿಕೊಳ್ಳುವ ಶಕ್ತಿ ಕಡಿಮೆ ಇರುವುದು ಒಂದು ಕಾರಣವಾದರೆ ಗರ್ಭಿಣಿಯಾದಾಗ ಬಂದ ಮೈ ಇಳಿಸುವುದಕ್ಕೂ ಊಟಕ್ಕೂ ಇರುವ ಸಂಬಂಧ ಮತ್ತೊಂದು ಕಾರಣ! ಆದ್ದರಿಂದ ಬಿಸಿ ಬಿಸಿಯಾದ ಮೆತ್ತಗಿನ ಅನ್ನವನ್ನು ಒಂದು ಸೌಟು ಬಡಿಸಿದರೆ ಅವತ್ತಿನ ಊಟ ಆದಂತೆ! ಅದರಲ್ಲೂ ಹಳೆಯ ಅಕ್ಕಿಯ ಅನ್ನವನ್ನೇ ಮಾಡಬೇಕು. ಮಲೆನಾಡಿನ ಹಳ್ಳಿಗಳಲ್ಲಿ ಕೆಂಪಕ್ಕಿಯ ಅನ್ನವನ್ನು ಮಾಡುತ್ತಾರೆ. ಬಿಳಿ ಅಕ್ಕಿಗಿಂತ ಕೆಂಪಕ್ಕಿ ಅದರಲ್ಲೂ ಹೊಸ ಅಕ್ಕಿ ಜೀರ್ಣವಾಗುವುದು ತಡವಾಗುತ್ತದೆ ಎಂದು ಈ ಪದ್ಧತಿ. ಈಗ ಈ ಪುಡಿಗಳನ್ನು ಸೇವಿಸುವುದರ ಬಗ್ಗೆ ಹೇಳುತ್ತೇನೆ. ಬಿಸಿ ಬಿಸಿಯಾಗಿ ಬಡಿಸಿದ ಅರ್ಧದಷ್ಟು ಅನ್ನಕ್ಕೆ ಒಂದು ದೊಡ್ಡ ಚಮಚ ತುಪ್ಪ ಹಾಕಿಕೊಂಡು ಅದಕ್ಕೆ 1/2 ಚಮಚ ಜೀರಿಗೆ ಪುಡಿ, 1/4 ಚಮಚ ಕಾಳುಮೆಣಸಿನ ಪುಡಿ ಹಾಕಿ ಸ್ವಲ್ಪ ಉಪ್ಪು ಹಾಕಿ ಕಲೆಸಿ ಮೊದಲು ಉಣ್ಣಬೇಕು. ನಂತರ ಉಳಿದ ಅನ್ನಕ್ಕೆ ಗಟ್ಟಿ ಮೊಸರನ್ನು (ಮಧ್ಯಾಹ್ನವಾದರೆ ಮೊಸರು, ಸಂಜೆ ಆದಲ್ಲಿ ಹಾಲು) ಹಾಕಿ ಉಣ್ಣಬೇಕು. ಹಾಲು, ಮೊಸರು ಎರಡೂ ಸೇರಿಸಿ ತಿನ್ನುವುದು ಒಳ್ಳೆಯದಲ್ಲ. ಈಗಿನ ಕಾಲದ ಔಷಧಿಗಳ ಪವರ್ ಜಾಸ್ತಿ ಇರುವುದರಿಂದ ಹೊಟ್ಟೆ ಉಷ್ಣ ಜಾಸ್ತಿ ಆಗಿ ಮರುದಿನ ಮಲ ವಿಸರ್ಜನೆ ಕಷ್ಟವಾಗಬಾರದೆಂದು ಸ್ವಲ್ಪ ಉಪ್ಪು ಹಾಕಿ ಬೇಯಿಸಿದ ತರಕಾರಿಯನ್ನು ಊಟದ ಜೊತೆ ಕೊಡಬಹುದು. ಅದರಲ್ಲೂ ವಾಯು, ನಂಜು ಇರುವಂಥ ತರಕಾರಿಗಳು ವರ್ಜ್ಯ. ಬಿಸಿ ಬಿಸಿ ಹಾಲನ್ನು ಬಾಣಂತಿ ಜಾಸ್ತಿ ಕುಡಿಯಬೇಕು. ಮಗುವಿಗೆ ಚೆನ್ನಾಗಿ ಎದೆ ಹಾಲು ಆಗವಲ್ಲಿ ಇದು ಸಹಾಯಕ. ಮುಂದಿನ ಸಂಚಿಕೆಗಳಲ್ಲಿ ಇನ್ನಷ್ಟು ಆರೈಕೆ/ ಔಷಧಿಗಳನ್ನು ತಿಳಿಸುತ್ತೇನೆ.....


-ಕಾವ್ಯಾ  

ಸೋಮವಾರ, ನವೆಂಬರ್ 19, 2018

ಮಂಡಕ್ಕಿ (ಪುರಿ) ಒಗ್ಗರಣೆ :

ಸಾಮಗ್ರಿಗಳು :
ಮಂಡಕ್ಕಿ : 1/4 ಕೆಜಿ 
ತೆಳ್ಳಗೆ ಹೆಚ್ಚಿದ ಒಣ ಕೊಬ್ಬರಿ : 1/2 ಕಪ್ 
ಹುರಿಗಡಲೆ : 1/2 ಕಪ್ 
ಶೇಂಗಾ : 1/2 ಕಪ್ 
ಬೆಳ್ಳುಳ್ಳಿ : 1 ಗಡ್ಡೆ (ಬೇಕಿದ್ದಲ್ಲಿ ಮಾತ್ರ)
ಉಪ್ಪು : 1/2 ಚಮಚ
ಸಕ್ಕರೆ ಪುಡಿ : 1/4 ಕಪ್ (ನಿಮ್ಮ ರುಚಿಗೆ ತಕ್ಕಷ್ಟು)

ಅಚ್ಚ ಮೆಣಸಿನ ಪುಡಿ : 2 ಚಮಚ 
ಅರಿಶಿನ ಪುಡಿ : 1/2 ಚಮಚ 
ಎಣ್ಣೆ : 5-6 ಚಮಚ 


ವಿಧಾನ :
ದಪ್ಪ ತಳದ ದೊಡ್ಡ ಪಾತ್ರೆಗೆ ಎಣ್ಣೆ ಹಾಕಿ ಕಾದ ಮೇಲೆ ಶೇಂಗಾ ಹಾಕಿ ಹುರಿದು, ಒಣ ಕೊಬ್ಬರಿ ಹಾಕಿ ಹುರಿಯಿರಿ. ಈಗ ಜಜ್ಜಿದ ಬೆಳ್ಳುಳ್ಳಿ ಹಾಕಿ ಹೊಂಬಣ್ಣ ಬರುವವರೆಗೆ ಹುರಿದು ಹುರಿಗಡಲೆ ಹಾಕಿ ಸ್ವಲ್ಪ ಹುರಿದು ಅದಕ್ಕೆ ಅರಿಶಿನ ಪುಡಿ, ಅಚ್ಚ ಮೆಣಸಿನ ಪುಡಿ ಹಾಕಿ ಉರಿ 
ಆರಿಸಿ. ಒಗ್ಗರಣೆ ತಣ್ಣಗಾದ ಮೇಲೆ ಅದಕ್ಕೆ ಉಪ್ಪು, ಸಕ್ಕರೆ ಪುಡಿ ಹಾಕಿ ಕಲಸಿ, ಮಂಡಕ್ಕಿ ಹಾಕಿ ಕಲಸಿ. ಮಂಡಕ್ಕಿ ಗರಿಗರಿ ಇಲ್ಲವಾದಲ್ಲಿ ಮತ್ತೆ ಸಣ್ಣ ಉರಿಯಲ್ಲಿ ಹುರಿಯಿರಿ. ಬಿಸಿ ಆರಿದ ಮೇಲೆ ಗಾಳಿಯಾಡದ ಡಬ್ಬದಲ್ಲಿ ತುಂಬಿಸಿಡಿ.  ಗರಿಗರಿಯಾದ ಮಂಡಕ್ಕಿ ಒಗ್ಗರಣೆ ಬಿಸಿ ಬಿಸಿ ಟೀ/ಕಾಫಿ ಜೊತೆ ಒಳ್ಳೆಯ ಸಂಗಾತಿ. 



ಸಲಹೆ: ಮಂಡಕ್ಕಿ ಗರಿ ಮಾಡಲು ಇನ್ನೊಂದು ಉಪಾಯವೆಂದರೆ ಶುಭ್ರವಾದ ಕಾಟನ್ ಬಟ್ಟೆ ಮೇಲೆ ಮಂಡಕ್ಕಿ ಹರವಿ ಅದರ ಮೇಲೆ ಇನ್ನೊಂದು ಕಾಟನ್ ಬಟ್ಟೆ ಮುಚ್ಚಿ 3-4 ಘಂಟೆ ಬಿಸಿಲಿನಲ್ಲಿ ಇಟ್ಟರೆ ಗರಿಗರಿಯಾಗುತ್ತದೆ. 

ಶುಕ್ರವಾರ, ನವೆಂಬರ್ 2, 2018

ಮೆಂತ್ಯ ಹಿಟ್ಟಿನ ಮೊಸರು ಗೊಜ್ಜು :

ಹಿಂದಿನ ಸಂಚಿಕೆಯಲ್ಲಿ ಮೆಂತ್ಯ ಹಿಟ್ಟು ಮಾಡುವುದು ತಿಳಿಸಿದ್ದೆ. ಇಂದು ಆ ಹಿಟ್ಟನ್ನು ದಿಢೀರ್ ಮೊಸರು ಗೊಜ್ಜನ್ನು ಮಾಡುವ ವಿಧಾನ ತಿಳಿಯೋಣ. 2-3 ಅಡುಗೆ ಮಾಡಲು ಆಲಸ್ಯತನ ಉಂಟಾದಾಗ  ಒಂದು ಸಾರು / ಸಾಂಬಾರು ಮಾಡಿ ಈ ಗೊಜ್ಜನ್ನು ಮಾಡಿಬಿಟ್ಟರೆ ಅಂದಿನ ಅಡುಗೆಯ ಕಥೆ ಸಂಪೂರ್ಣವಾಗಿಬಿಡುತ್ತದೆ. 

ಸಾಮಗ್ರಿಗಳು :
ಮೆಂತ್ಯ ಹಿಟ್ಟು : 2 ಚಮಚ 
ಮೊಸರು : 2 ಕಪ್ 
ಸಣ್ಣ ಹೆಚ್ಚಿದ ಈರುಳ್ಳಿ : 1/4 ಕಪ್ 
ಒಣಮೆಣಸಿನ ಕಾಯಿ : 2-3 ಚೂರು 
ಹಸಿಮೆಣಸಿನ ಕಾಯಿ : 1-2 
ಎಣ್ಣೆ : 2 ಚಮಚ 
ಸಾಸಿವೆ: 1/2 ಚಮಚ 
ಉದ್ದಿನಬೇಳೆ : 1/2 ಚಮಚ 
ಉಪ್ಪು : ರುಚಿಗೆ 

ವಿಧಾನ :
 ಮೊಸರಿಗೆ ಮೆಂತ್ಯ ಹಿಟ್ಟು ಹಾಕಿ ಗಂಟಿಲ್ಲದಂತೆ ಕಲಸಿ. ಇದಕ್ಕೆ ಸಣ್ಣ ಹೆಚ್ಚಿದ ಈರುಳ್ಳಿ, ಉಪ್ಪು ಹಾಕಿ ಕಲಸಿ. ಒಗ್ಗರಣೆ ಸೌಟಿಗೆ ಎಣ್ಣೆ ಹಾಕಿ ಕಾಯಿಸಿ ಅದಕ್ಕೆ ಉದ್ದಿನಬೇಳೆ ಹಾಕಿ ಹೊಂಬಣ್ಣ ಬಂದ ಮೇಲೆ ಸಾಸಿವೆ ಹಾಕಿ ಚಿಟಪಟಾಯಿಸಿ, ಒಣ ಮೆಣಸಿನ ಚೂರು, ಹೆಚ್ಚಿದ ಹಸಿಮೆಣಸಿನಕಾಯಿ ಹಾಕಿ ಗೊಜ್ಜಿಗೆ ಒಗ್ಗರಣೆ ಮಾಡಿದರೆ ರುಚಿಯಾದ, ದಿಢೀರ್ ಮೊಸರು ಗೊಜ್ಜು ಅನ್ನದ ಜೊತೆ ಸವಿಯಲು ಸಿದ್ಧ. 


ಬುಧವಾರ, ಅಕ್ಟೋಬರ್ 31, 2018

ಮೆಂತ್ಯ ಹಿಟ್ಟು :

ಸಾಮಗ್ರಿಗಳು:
ಕಡ್ಲೆಬೇಳೆ : 2 ಕಪ್ 
ಹೆಸರುಬೇಳೆ : 1 ಕಪ್ 
ಉದ್ದಿನಬೇಳೆ : 2 ಚಮಚ 
ಮೆಂತ್ಯ ಕಾಳು : 1 ಚಮಚ 
ಜೀರಿಗೆ : 2 ಚಮಚ
ಧನಿಯಾ ಬೀಜ : 1 ಚಮಚ  
ಅಕ್ಕಿ : 2 ಚಮಚ 
ಸೂಜಿ ರವೆ : 4 ಚಮಚ 
ಅರಿಶಿನ ಪುಡಿ : 1/2 ಚಮಚ 
ಇಂಗು : 1/4 ಚಮಚ 

ವಿಧಾನ : 
ಅರಿಶಿನ ಪುಡಿ ಮತ್ತು ಇಂಗು ಹೊರತು ಪಡಿಸಿ ಉಳಿದೆಲ್ಲಾ ಸಾಮಗ್ರಿಗಳನ್ನು ಬೇರೆ ಬೇರೆಯಾಗಿ ಹುರಿದುಕೊಳ್ಳಿ (Dry fry). ತಣ್ಣಗಾದ ಮೇಲೆ ಎಲ್ಲವನ್ನೂ ಮಿಕ್ಸಿ ಜಾರಿಗೆ ಹಾಕಿ ಜೊತೆಗೆ ಅರಿಶಿನ ಪುಡಿ, ಇಂಗು ಸೇರಿಸಿ ನುಣ್ಣಗೆ ಪುಡಿ ಮಾಡಿ. ನೀರು ತಾಗಿಸದಂತೆ, ಗಾಳಿಯಾಡದ ಡಬ್ಬದಲ್ಲಿ ತುಂಬಿಟ್ಟರೆ 6-8 ತಿಂಗಳು ಕೆಡುವುದಿಲ್ಲ. ಬಿಸಿ ಬಿಸಿ ಅನ್ನಕ್ಕೆ ಉಪ್ಪು, ಬೆಣ್ಣೆ ಅಥವಾ ತುಪ್ಪದ ಜೊತೆ ಕಲಸಿ ತಿನ್ನಲು ಬಲು ರುಚಿ. ಅಲ್ಲದೆ ಬೆಳ್ಳುಳ್ಳಿ ಬಿಡಿಸಿ ಜಜ್ಜಿಕೊಂಡು ಅದನ್ನು ತುಪ್ಪದಲ್ಲಿ ಹೊಂಬಣ್ಣ ಬರುವವರೆಗೆ ಫ್ರೈ ಮಾಡಿ ಬಿಸಿ ಅನ್ನ, ಮೆಂತ್ಯ ಹಿಟ್ಟು ಸೇರಿಸಿ ಅದಕ್ಕೆ ಹಾಕಿ ಕಲಸಿ ತಿಂದರೆ ಆಹಾ.....!! ಮುಂದಿನ ಸಂಚಿಕೆಯಲ್ಲಿ ಮೆಂತ್ಯ ಹಿಟ್ಟಿನ ದಿಢೀರ್ ಗೊಜ್ಜು ಮಾಡಲು ಹೇಳಿಕೊಡುತ್ತೇನೆ. 


ಗುರುವಾರ, ಏಪ್ರಿಲ್ 19, 2018

ಖರ್ಜೂರ ಬಾದಾಮಿ ಮಿಲ್ಕ್ ಶೇಕ್ :

ಇದು ಮಕ್ಕಳಿಗೆ ಮತ್ತು ಗರ್ಭಿಣಿಯರಿಗೆ ಆರೋಗ್ಯಕರ ಪೇಯ. ಖರ್ಜೂರದಲ್ಲಿ ಕಬ್ಬಿಣದ ಅಂಶ ಜಾಸ್ತಿ ಇರುವುದರಿಂದ  ಕೆಂಪು ರಕ್ತದ ಕಣಗಳನ್ನು ಜಾಸ್ತಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ ಗರ್ಭಿಣಿಯರು ವಾರಕ್ಕೆರಡು ಮೂರು ಬಾರಿ ಸೇವಿಸಿದರೆ ಒಳ್ಳೆಯದು. 

ಸಾಮಗ್ರಿಗಳು: 
ಕಾಯಿಸಿ ತಣ್ಣಗಾದ ಹಾಲು : 2 ಗ್ಲಾಸ್ 
ಖರ್ಜೂರ : 8-10 
ನೆನೆಸಿದ ಬಾದಾಮಿ : 8-10 
ಜೇನುತುಪ್ಪ : 2 ಚಮಚ (ಖರ್ಜೂರ ಸಿಹಿ ಇರುವುದರಿಂದ ಜೇನುತುಪ್ಪ ಹಾಕಿದರೆ ಸಿಹಿ ಜಾಸ್ತಿ ಎನಿಸಿದರೆ ಬಿಡಬಹುದು)  

ವಿಧಾನ :
ಮಿಕ್ಸಿ ಜಾರ್ ಗೆ ಖರ್ಜೂರ, ನೆನೆಸಿದ ಬಾದಾಮಿ, ಸ್ವಲ್ಪ ಹಾಲು ಸೇರಿಸಿ ರುಬ್ಬಿಕೊಂಡು ಪಾತ್ರೆಗೆ ಹಾಕಿಕೊಳ್ಳಿ. ಅದಕ್ಕೆ ಉಳಿದ ಹಾಲು, ಜೇನುತುಪ್ಪ ಹಾಕಿ ಕಲಕಿ ಗ್ಲಾಸ್ ಗೆ ಬಗ್ಗಿಸಿದರೆ ಆರೋಗ್ಯಕರ ಪೇಯ ಕುಡಿಯಲು ರೆಡಿ. ಬೇಕಿದ್ದರೆ ಐಸ್ ಕ್ಯೂಬ್ಸ್ ಹಾಕಿ ಅಥವಾ ಹಾಲನ್ನು ಫ್ರಿಡ್ಜ್ ನಲ್ಲಿಟ್ಟು ತಣ್ಣಗೆ ಮಾಡಿ ಸೇರಿಸಿ ಕುಡಿಯಬಹುದು.  






ಶುಕ್ರವಾರ, ಏಪ್ರಿಲ್ 6, 2018

ಸೊಪ್ಪಿನ ಬಸ್ಸಾರು, ಪಲ್ಯ :

ಬಸ್ಸಾರು, ಮಸ್ಸೊಪ್ಪು ಮಾಡಲು ಎಲ್ಲಾ ಥರದ ಸೊಪ್ಪನ್ನು ಸ್ವಲ್ಪ ಸ್ವಲ್ಪ ಹಾಕಿ ಮಿಶ್ರಣ ಮಾಡಿ ಕೊಡುತ್ತಾರೆ. ಅದಕ್ಕೆ ಬೆರಕೆ ಸೊಪ್ಪು ಎಂದು ಹೆಸರು. ತಳ್ಳುಗಾಡಿಗಳಲ್ಲಿ ಹೆಚ್ಚಾಗಿ ಬೆರಕೆ ಸೊಪ್ಪು ಸಿಗುತ್ತದೆ. ಪಾಲಕ್, ಮೆಂತ್ಯ, ದಂಟಿನಸೊಪ್ಪು, ಚಿಲಕ್ ಹರಿವೆ, ಸಬ್ಬಸಿಗೆ, ಚಕ್ಕೋತ ಮುಂತಾದ ಯಾವುದೇ ಸೊಪ್ಪುಗಳನ್ನು ಸೇರಿಸಿ ಅಥವಾ ಒಂದೇ ಜಾತಿಯ ಸೊಪ್ಪಿನಿಂದ ಬಸ್ಸಾರು ಮಾಡಬಹುದು. ಅಲ್ಲದೇ ಹುರುಳಿ ಕಾಯಿ ಅಥವಾ ಕ್ಯಾಬೇಜ್ ಬಳಸಿ ಮಾಡಿದ ಬಸ್ಸಾರು ಕೂಡ ಚೆನ್ನಾಗಿರುತ್ತದೆ. ನಾನು ಕೇವಲ ಪಾಲಕ್ ಸೊಪ್ಪನ್ನು ಉಪಯೋಗಿಸಿ ಮಾಡಿದ್ದೆ. ಅದರ ಜೊತೆ ಯಾವುದೇ ಸೊಪ್ಪು ಸೇರಿಸಿ ಕೂಡ ನೀವು ಮಾಡಬಹುದು. 

ಬಸ್ಸಾರಿಗೆ ಸಾಮಗ್ರಿಗಳು : 
ಹೆಚ್ಚಿದ ಸೊಪ್ಪು : 2 ಕಪ್ 
ತೊಗರಿಬೇಳೆ : 1/2 ಕಪ್ 
ತೆಂಗಿನತುರಿ : 1/4 ಕಪ್ 
ಈರುಳ್ಳಿ : 1
ಟೊಮೇಟೊ : 1
ಬೆಳ್ಳುಳ್ಳಿ : 8-10 ಎಸಳು 
ಒಣಮೆಣಸಿನ ಕಾಯಿ : 5-6 
ಧನಿಯಾ ಬೀಜ : 1 ಚಮಚ 
ಜೀರಿಗೆ : 1/2 ಚಮಚ
ಕೊತ್ತಂಬರಿ ಸೊಪ್ಪು : 2-3 ಎಸಳು 
ಕರಿಬೇವು : 1 ಎಸಳು
ಹುಣಸೆ ಹಣ್ಣು : ನೆಲ್ಲಿಕಾಯಿ ಗಾತ್ರ  
ಎಣ್ಣೆ : 2 ಚಮಚ 
ಸಾಸಿವೆ : 1/2 ಚಮಚ 
ಉಪ್ಪು : ರುಚಿಗೆ ತಕ್ಕಷ್ಟು 

ವಿಧಾನ : 
ಬೇಳೆ ತೊಳೆದು ನೀರು ಹಾಕಿ ಒಲೆಯ ಮೇಲೆ ಬೇಯಲು ಇಡಿ. ಆ ಸಮಯದಲ್ಲಿ ಟೊಮೇಟೊ, ಈರುಳ್ಳಿ ಹೆಚ್ಚಿಟ್ಟುಕೊಳ್ಳಿ. ಹುಣಸೆಹಣ್ಣು ನೀರಿನಲ್ಲಿ ನೆನಸಿಡಿ. ಬೇಳೆ ಅರ್ಧ ಬೆಂದಾಗ ತೊಳೆದು ಹೆಚ್ಚಿಟ್ಟುಕೊಂಡ ಸೊಪ್ಪನ್ನು ಹಾಕಿ ಸ್ವಲ್ಪ ಉಪ್ಪು ಹಾಕಿ ಬೇಯಿಸಿ. ಸೊಪ್ಪು ಬೆಂದ ಮೇಲೆ ಪಾತ್ರೆಯ ಮೇಲೆ ಜಾಲರಿ ಇಟ್ಟು  ಬೆಂದ ಮಿಶ್ರಣವನ್ನು ಹಾಕಿ ಪೂರ್ತಿಯಾಗಿ ಬಸಿದುಕೊಳ್ಳಿ.

 ಈಗ ಒಂದು ಪಾನ್ ಒಲೆಯ ಮೇಲಿಟ್ಟು ಅದಕ್ಕೆ ಒಂದು ಚಮಚ ಎಣ್ಣೆ, ಧನಿಯಾ ಬೀಜ, ಜೀರಿಗೆ, ಒಣಮೆಣಸಿನ ಕಾಯಿ, ಬೆಳ್ಳುಳ್ಳಿ ಹಾಕಿ ಹುರಿದು ಅದಕ್ಕೆ ಈರುಳ್ಳಿ ಹಾಕಿ ಸ್ವಲ್ಪ ಫ್ರೈ ಮಾಡಿ. ನಂತರ ಟೊಮೇಟೊ ಹಾಕಿ ಹುರಿಯಿರಿ. ಈಗ ಕೊತ್ತಂಬರಿ ಸೊಪ್ಪು, ತೆಂಗಿನತುರಿ ಹಾಕಿ ಸ್ವಲ್ಪ ಹುರಿದು ಉರಿ ಆರಿಸಿ.

 ಇದು ತಣ್ಣಗಾದ ಮೇಲೆ ಮಿಕ್ಸಿಗೆ ಹಾಕಿ ಜೊತೆಗೆ ಬೇಯಿಸಿ ಬಸಿದ ಸೊಪ್ಪು ಬೇಳೆ  ಮಿಶ್ರಣವನ್ನು ೨ ಚಮಚ ಸೇರಿಸಿ, ಬಸಿದ ನೀರು ಹಾಕಿ ನುಣ್ಣಗೆ ರುಬ್ಬಿ. ಇದನ್ನು ಒಂದು ಪಾತ್ರೆಗೆ ಹಾಕಿ ಬಸಿದಿಟ್ಟ ನೀರು, ಉಪ್ಪು, ಕರಿಬೇವು ಸೇರಿಸಿ ಕುದಿಸಿ. ಕೊನೆಯಲ್ಲಿ ಎಣ್ಣೆ, ಸಾಸಿವೆ, ಬೇಕಿದ್ದಲ್ಲಿ ಸ್ವಲ್ಪ ಇಂಗು ಸೇರಿಸಿ ಒಗ್ಗರಣೆ ಮಾಡಿ. 



 ಪಲ್ಯಕ್ಕೆ ಸಾಮಗ್ರಿಗಳು :
ಬಸಿದಿಟ್ಟ ಸೊಪ್ಪು ಮತ್ತು ಬೇಳೆ 
ಈರುಳ್ಳಿ : 1 
ತೆಂಗಿನತುರಿ : 4 ಚಮಚ 
ಹಸಿಮೆಣಸಿನಕಾಯಿ : 3-4
ಲಿಂಬು ರಸ : 2-3 ಚಮಚ 
ಅರಿಶಿನ ಪುಡಿ : 1/4 ಚಮಚ (ಬೇಕಿದ್ದಲ್ಲಿ ಮಾತ್ರ) 
ಎಣ್ಣೆ : 2 ಚಮಚ 
ಸಾಸಿವೆ : 1/2 ಚಮಚ 
ಉಪ್ಪು: ರುಚಿಗೆ 

ವಿಧಾನ : 
ಬಾಣಲೆಗೆ ಎಣ್ಣೆ ಹಾಕಿ ಕಾಯಿಸಿ ಅದಕ್ಕೆ ಸಾಸಿವೆ ಹಾಕಿ ಚಿಟಪಟಾಯಿಸಿ. ಸೀಳಿಟ್ಟುಕೊಂಡ ಹಸಿಮೆಣಸಿನಕಾಯಿ, ಸಣ್ಣ ಹೆಚ್ಚಿದ ಈರುಳ್ಳಿ, ಅರಿಶಿನ ಹಾಕಿ ಹುರಿಯಿರಿ. ನಂತರ ಇದಕ್ಕೆ ತೆಂಗಿನತುರಿ, ಉಪ್ಪು, ಸೊಪ್ಪು - ಬೇಳೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಒಂದೆರಡು ನಿಮಿಷ ಬೇಯಿಸಿ. ಕೊನೆಯಲ್ಲಿ ಲಿಂಬು ರಸ ಸೇರಿಸಿದರೆ ಪಲ್ಯ ತಯಾರು. ಬಿಸಿ ಬಿಸಿ ರಾಗಿ ಮುದ್ದೆ ಅಥವಾ ಅನ್ನದ ಜೊತೆ ಅದ್ಭುತ ಸಂಗಾತಿ ಈ ಬಸ್ಸಾರು ಮತ್ತು ಪಲ್ಯ...... 

ಶುಕ್ರವಾರ, ಮಾರ್ಚ್ 23, 2018

ಮಂಡಕ್ಕಿ ಪಕೋಡ :


ಸಾಮಗ್ರಿಗಳು :
ಮಂಡಕ್ಕಿ (ಪ್ಲೈನ್ ಪುರಿ) : 4 ಕಪ್ 
ಆಲೂಗಡ್ಡೆ : 1 
ಈರುಳ್ಳಿ : 1 
ಕಡಲೆ ಹಿಟ್ಟು : ಸ್ವಲ್ಪ (1/2 ಕಪ್ ನಷ್ಟು)
ಸಣ್ಣ ಹೆಚ್ಚಿದ ಕೊತ್ತಂಬರಿ ಸೊಪ್ಪು : 2 ಚಮಚ 
ಆಮ್ಚೂರ್ ಪುಡಿ / ವಾಟೆ ಪುಡಿ : 1/2 ಚಮಚ 
ಅಚ್ಚ ಖಾರದಪುಡಿ : 1/2 ಚಮಚ 
ತುರಿದ ಶುಂಠಿ : 1/4 ಚಮಚ 
ಉಪ್ಪು: ರುಚಿಗೆ 
ಎಣ್ಣೆ : ಕರಿಯಲು 

ವಿಧಾನ :
ಮಂಡಕ್ಕಿಗೆ ನೀರು ಹಾಕಿ 1 ನಿಮಿಷ ನೆನೆಸಿ ನೀರು ಹಿಂಡಿ ತೆಗೆದು ಒಂದು ಬೌಲ್ ಗೆ ಹಾಕಿಕೊಳ್ಳಿ. ಇದಕ್ಕೆ ಆಲೂಗಡ್ಡೆ ಸಿಪ್ಪೆ ತೆಗೆದು ತುರಿದು ಹಾಕಿ. ನಂತರ ಈರುಳ್ಳಿ ಸಣ್ಣಗೆ ಹೆಚ್ಚಿ ಹಾಕಿ. ನಂತರ ಕೊತ್ತಂಬರಿ ಸೊಪ್ಪು, ಶುಂಠಿ, ಆಮಚೂರ್ ಪುಡಿ, ಖಾರದ ಪುಡಿ ಹಾಕಿಕೊಂಡು ಸ್ವಲ್ಪ ಸ್ವಲ್ಪವೇ ಕಡ್ಲೆ ಹಿಟ್ಟು ಹಾಕುತ್ತಾ ಕಲಸಿ. ಉಂಡೆಯಂತೆ ಕರಿಯಲು ಬರುವಷ್ಟು ಮಾತ್ರ ಕಡ್ಲೆ ಹಿಟ್ಟು ಹಾಕಬೇಕು. ಬೇಕೆನಿಸಿದಲ್ಲಿ  ಮಾತ್ರ ಸ್ವಲ್ಪ ನೀರು ಚಿಮುಕಿಸಿಕೊಂಡು ಕಲಸಿ. 

ನಂತರ ಪುಟ್ಟ ಪುಟ್ಟ ಉಂಡೆ ಮಾಡಿ ಸ್ವಲ್ಪ ತಟ್ಟಿ ಚಪ್ಪಟೆ ಮಾಡಿ ಕಾದ ಎಣ್ಣೆಯಲ್ಲಿ ಕರಿಯಿರಿ. ಗರಿಗರಿಯಾದ ಪಕೋಡಾವನ್ನು ಸಂಜೆ ಬಿಸಿ ಬಿಸಿ ಕಾಫಿ / ಟೀ ಜೊತೆ ಸವಿಯಿರಿ.



ಶುಕ್ರವಾರ, ಮಾರ್ಚ್ 9, 2018

ಮಗೆಕಾಯಿ / ಬಣ್ಣದ ಸೌತೆಕಾಯಿ ಸಿಹಿ ಇಡ್ಲಿ :

ಸಿರ್ಸಿ, ಸಿದ್ದಾಪುರ ಕಡೆ ಬೆಳೆಯುವ ಮಗೆಕಾಯಿ ಮಂಗಳೂರು ಸೌತೆ ಅಥವಾ ಬಣ್ಣದ ಸೌತೆಕಿಂತ ಸ್ವಲ್ಪ ಭಿನ್ನ. ಒಂದೇ ಜಾತಿಯೇ ಆದರೂ ಮಂಗಳೂರು ಸೌತೆಯಲ್ಲಿ  ಕೆಲವು ಸ್ವಲ್ಪ ಕಹಿ ಬರುತ್ತದೆ. ಕಹಿ ಇದ್ದರೆ ಕತ್ತರಿಸಿ ಸ್ವಲ್ಪ ಹೊತ್ತು ನೀರಿನಲ್ಲಿ ನೆನೆಸಿಟ್ಟು ಉಪಯೋಗಿಸಿದರೆ ಕಹಿ ಇರುವುದಿಲ್ಲವಂತೆ. 

ಸಾಮಗ್ರಿಗಳು :
ದೋಸೆ ಅಕ್ಕಿ :  2 ಕಪ್ 
ಕಡ್ಲೆ ಬೇಳೆ : 1/4 ಕಪ್ 
ಉದ್ದಿನಬೇಳೆ : 1/4 ಕಪ್ 
ಮೆಂತ್ಯ : 2 ಚಮಚ 
ಮಗೆಕಾಯಿ / ಬಣ್ಣದ ಸೌತೆ : 1- 1.5 
ಬೆಲ್ಲ : 1/2 - 3/4 ಕಪ್ 
ಉಪ್ಪು : ರುಚಿಗೆ 

ವಿಧಾನ :
ಅಕ್ಕಿಯನ್ನು ತೊಳೆದು ನೀರಿನಲ್ಲಿ ನೆನೆಸಿ.  ಕಡ್ಲೆಬೇಳೆ, ಉದ್ದಿನಬೇಳೆ, ಮೆಂತ್ಯ ಎಲ್ಲ ಸೇರಿಸಿ ತೊಳೆದು ನೀರು ಹಾಕಿ ಎಲ್ಲವನ್ನೂ 5-6 ಘಂಟೆ ನೆನೆಸಿಡಿ. ಮಗೆಕಾಯಿಯನ್ನು ಸಿಪ್ಪೆ ಮತ್ತು ಬೀಜ ತೆಗೆದು ಸಣ್ಣಗೆ ಹೆಚ್ಚಿ. ಒಂದು ಕಪ್ ಆದಷ್ಟು ಸಣ್ಣ ಹೆಚ್ಚಿದ ಹೋಳುಗಳನ್ನು ತೆಗೆದಿಟ್ಟುಕೊಳ್ಳಿ. ನೆನೆಸಿದ ಅಕ್ಕಿಯನ್ನು ನೀರು ಬಗ್ಗಿಸಿ  ಮಗೆಕಾಯಿ ಹೋಳನ್ನು ಸ್ವಲ್ಪ ಸ್ವಲ್ಪವೇ ಹಾಕುತ್ತಾ ನೀರು ಹಾಕದೇ ಇಡ್ಲಿ ಹಿಟ್ಟಿನ ಹದಕ್ಕೆ ಗಟ್ಟಿಯಾಗಿ, ತರಿ ತರಿಯಾಗಿ ರುಬ್ಬಿಕೊಳ್ಳಿ. ನಂತರ ಉಳಿದ ಕಡ್ಲೆಬೇಳೆ ಮಿಶ್ರಣವನ್ನು ನೀರು ಬಗ್ಗಿಸಿ ಮತ್ತೆ ಮಗೆಕಾಯಿ ಹೋಳಿನಲ್ಲಿ ನುಣ್ಣಗೆ, ಗಟ್ಟಿಯಾಗಿ ರುಬ್ಬಿ ಅಕ್ಕಿ ಮಿಶ್ರಣಕ್ಕೆ ಸೇರಿಸಿ ಕಲಸಿ.  ಒಂದು ಪಾತ್ರೆಗೆ ಒಂದು ಲೋಟ ನೀರು ಹಾಕಿ ಅದಕ್ಕೆ ಒಂದು ಸೌಟು ರುಬ್ಬಿದ ಹಿಟ್ಟು, ಅರ್ಧ ಕಪ್ ಬೆಲ್ಲ, ರುಚಿಗೆ ತಕ್ಕಷ್ಟು ಉಪ್ಪು, ಸಣ್ಣಗೆ ಹೆಚ್ಚಿ ತೆಗೆದಿಟ್ಟ ಮಗೆಕಾಯಿ ಹೋಳು ಹಾಕಿ ಸಣ್ಣ ಉರಿಯಲ್ಲಿ ಕೈ ಬಿಡದೇ ಕಲಕುತ್ತಾ ಮಿಶ್ರಣ ಸ್ವಲ್ಪ ದಪ್ಪ ಆಗುವವರೆಗೆ ಕಾಯಿಸಿ. ಇದು ತಣ್ಣಗಾದ ಮೇಲೆ ಉಳಿದ ಹಿಟ್ಟಿನ ಮಿಶ್ರಣಕ್ಕೆ ಸೇರಿಸಿ ಚೆನ್ನಾಗಿ ಕಲಸಿ. ಬೇಕಿದ್ದರೆ ರುಚಿ ನೋಡಿಕೊಂಡು ಬೆಲ್ಲ ಕಮ್ಮಿ ಇದ್ದಲ್ಲಿ ಸೇರಿಸಿಕೊಳ್ಳಬಹುದು. ರಾತ್ರಿ ಹಿಟ್ಟನ್ನು ತಯಾರು ಮಾಡಿ ಮುಚ್ಚಿಡಿ. ಇದು ಚೆನ್ನಾಗಿ ಹುದುಗಬೇಕು. ಆಗ ಮಾತ್ರ ಇಡ್ಲಿ ಮೆತ್ತಗೆ ಚೆನ್ನಾಗಿ ಆಗುತ್ತದೆ. ಬೆಳಿಗ್ಗೆ ಹುದುಗಿದ  ಹಿಟ್ಟನ್ನು ಮತ್ತೊಮ್ಮೆ ಚೆನ್ನಾಗಿ ಕಲಸಿ ಎಣ್ಣೆ ಸವರಿದ ಇಡ್ಲಿ ತಟ್ಟೆಯಲ್ಲಿ ಬೇಯಿಸಿದರೆ ಬಿಸಿ ಬಿಸಿಯಾದ ಮಗೆಕಾಯಿ ಸಿಹಿ ಇಡ್ಲಿ ತುಪ್ಪ ಮತ್ತು ಕಾಯಿ ಚಟ್ನಿಯೊಡನೆ ಸವಿಯಲು ಸಿದ್ಧ.



ಶುಕ್ರವಾರ, ಫೆಬ್ರವರಿ 23, 2018

ಉಪ್ಪಿಟ್ಟಿನ ಕಟ್ಲೆಟ್ : (By using leftover Upma)

ಬೆಳಿಗ್ಗೆ ತಿಂಡಿಗೆ ಮಾಡಿದ ಉಪ್ಪಿಟ್ಟು ಉಳಿದುಬಿಟ್ಟರೆ ಅದನ್ನು ಮತ್ತೆ ಮೂಸಿ ನೋಡುವವರೂ ಇರುವುದಿಲ್ಲ. ಹೆಂಗಸರು ಬಿಸಾಕಲು ಬೇಜಾರಾಗಿ ತಿನ್ನಬೇಕಾಗುತ್ತದೆ. ಆದರೆ ಉಳಿದ ಉಪ್ಪಿಟ್ಟಿನಿಂದ ಈ ಕಟ್ಲೆಟ್ ಮಾಡಿ ನೋಡಿ ಮನೆಯವರೆಲ್ಲಾ ಚಪ್ಪರಿಸಿಕೊಂಡು ಸವಿಯುತ್ತಾರೆ. ಮಕ್ಕಳಿಗಾದರೆ ಸ್ವಲ್ಪ ಖಾರ ಕಮ್ಮಿ ಹಾಕಿ ಮಾಡಿ ಮಕ್ಕಳೂ ಇಷ್ಟ ಪಟ್ಟು ತಿನ್ನುತ್ತಾರೆ. ಆಮೇಲೆ ದೊಡ್ಡವರಿಗೆ ಖಾರ ಹಾಕಿ ಮಾಡಿಕೊಡಿ. 

ಸಾಮಗ್ರಿಗಳು :
ಉಳಿದ ಉಪ್ಪಿಟ್ಟು : 1 ಕಪ್ 
ಬೇಯಿಸಿದ ಆಲೂಗಡ್ಡೆ : 2 ಮಧ್ಯಮ ಗಾತ್ರದ್ದು  
ಸಣ್ಣ ಹೆಚ್ಚಿದ ಮಿಶ್ರ ತರಕಾರಿ (ಕ್ಯಾರೆಟ್, ಕ್ಯಾಪ್ಸಿಕಂ, ಬೀನ್ಸ್) : 1/2 ಕಪ್ (ಉಪ್ಪಿಟ್ಟಿಗೆ ತರಕಾರಿ ಹಾಕದಿದ್ದರೆ ಇನ್ನು 1/4 ಕಪ್ ಜಾಸ್ತಿ ಬೇಕು) 
ಸಣ್ಣ ಹೆಚ್ಚಿದ ಈರುಳ್ಳಿ : 1 ಮಧ್ಯಮ ಗಾತ್ರದ್ದು 
ಸಣ್ಣ ಹೆಚ್ಚಿದ ಕೊತ್ತಂಬರಿ ಸೊಪ್ಪು : 2 ಟೇಬಲ್ ಚಮಚ 
ಶುಂಠಿ ಬೆಳ್ಳುಳ್ಳಿ ಪೇಸ್ಟ್ : 1 ಟೀ ಚಮಚ 
ಅಚ್ಚ ಖಾರದ ಪುಡಿ : 1/2 ಚಮಚ
ಗರಂ ಮಸಾಲಾ ಪುಡಿ :  1/4 ಟೀ ಚಮಚ 
ಲಿಂಬು ರಸ : 1 ಚಮಚ 
ಬ್ರೆಡ್ ಕ್ರಮ್ಸ್ ಅಥವಾ ಚಿರೋಟಿ ರವಾ : 1/2 - 3/4 ಕಪ್ 
ಎಣ್ಣೆ : ತವಾ ಫ್ರೈ ಮಾಡಲು
ಉಪ್ಪು: ರುಚಿಗೆ 

ವಿಧಾನ :
ಹೆಚ್ಚಿದ ತರಕಾರಿಗಳನ್ನು ಬೇಯಿಸಿಕೊಳ್ಳಿ. ಬ್ರೆಡ್ ಕ್ರಮ್ಸ್ ಗೆ ಎರಡು ಬ್ರೆಡ್ ಅನ್ನು ಚೂರು ಮಾಡಿ ಮಿಕ್ಸಿಗೆ ಹಾಕಿ ಪುಡಿ ಮಾಡಿಕೊಳ್ಳಬಹುದು, ಇಲ್ಲದಿದ್ದರೆ ಚಿರೋಟಿ ರವೆ ಆದರೂ ಆದೀತು. ಆಲೂಗಡ್ಡೆಯನ್ನು ನುಣ್ಣಗೆ ಮಸೆದು ಒಂದು ಪಾತ್ರೆಗೆ ಹಾಕಿಕೊಳ್ಳಿ. ಅದಕ್ಕೆ ಬ್ರೆಡ್ ಪುಡಿ / ಚಿರೋಟಿ ರವೆ, ಎಣ್ಣೆ ಬಿಟ್ಟು ಉಳಿದೆಲ್ಲ ಸಾಮಗ್ರಿಗಳನ್ನು ಹಾಕಿ ಚೆನ್ನಾಗಿ ಕಲಸಿಕೊಳ್ಳಿ.



 ಇದರಿಂದ ನಿಂಬೆ ಗಾತ್ರದ ಉಂಡೆ ಮಾಡಿಕೊಂಡು ಕಟ್ಲೆಟ್ ಆಕಾರಕ್ಕೆ ಚಪ್ಪಟೆಯಾಗಿ ತಟ್ಟಿಕೊಂಡು ಬ್ರೆಡ್ ಪುಡಿ ಅಥವಾ ಚಿರೋಟಿ ರವೆಯಲ್ಲಿ ಎರಡೂ ಕಡೆ ಚೆನ್ನಾಗಿ ಹೊರಳಿಸಿ ಕಾದ ತವಾ ಮೇಲೆ ಸ್ವಲ್ಪ ಎಣ್ಣೆ ಹಾಕಿ ಅದಕ್ಕೆ ತಟ್ಟಿಕೊಂಡ ಕಟ್ಲೆಟ್ ಹಾಕಿ, ಮೇಲಿಂದ ಮತ್ತೆ ಸ್ವಲ್ಪ ಎಣ್ಣೆ ಹಾಕಿ ಮುಚ್ಚಳ ಮುಚ್ಚಿ ಎರಡೂ ಕಡೆ ಬೇಯಿಸಿ (shallow fry). ಟೊಮೇಟೊ ಸಾಸ್ ಜೊತೆ ಸರ್ವ್ ಮಾಡಿ. 




ಶುಕ್ರವಾರ, ಫೆಬ್ರವರಿ 9, 2018

ಮೆಂತ್ಯ ಸೊಪ್ಪಿನ ಪುಡಿ ಪಲ್ಯ :

ಸಾಮಗ್ರಿಗಳು:
ಸಣ್ಣ ಹೆಚ್ಚಿದ ಮೆಂತ್ಯ ಸೊಪ್ಪು : 1.5 ಕಪ್ 
ಕಡ್ಲೆ ಬೇಳೆ : 3 ಟೇಬಲ್ ಚಮಚ 
ಉದ್ದಿನಬೇಳೆ : 1.5 ಟೇಬಲ್ ಚಮಚ 
ಒಣ ಕೊಬ್ಬರಿತುರಿ : 1/4 ಕಪ್ 
ಬಿಳಿ ಎಳ್ಳು : 1 ಟೇಬಲ್ ಚಮಚ 
ಒಣಮೆಣಸಿನಕಾಯಿ : 6-7
ಇಂಗು : 2-3 ಚಿಟಿಕೆ 
ಸಣ್ಣ ಹೆಚ್ಚಿದ ಈರುಳ್ಳಿ : 1/4 ಕಪ್ 
ವಾಟೆ ಪುಡಿ / ಆಮಚೂರ್ ಪುಡಿ : 1/4 ಚಮಚ 
ಸಕ್ಕರೆ : 1/4 ಟೀ ಚಮಚ 
ಎಣ್ಣೆ : 4-5 ಚಮಚ 
ಸಾಸಿವೆ: 1/4 ಚಮಚ 
ಉಪ್ಪು : ರುಚಿಗೆ 

ವಿಧಾನ :
ಮೆಂತ್ಯ ಸೊಪ್ಪು ಹೆಚ್ಚುವ ಮೊದಲು ಚೆನ್ನಾಗಿ ಬಿಡಿಸಿ ತೊಳೆದುಕೊಳ್ಳಿ. ಬಾಣಲೆಗೆ ಎಣ್ಣೆ ಹಾಕದೆಯೇ ಕಡ್ಲೆಬೇಳೆ, ಉದ್ದಿನಬೇಳೆ, ತುರಿದ ಕೊಬ್ಬರಿ, ಎಳ್ಳು ಎಲ್ಲವನ್ನೂ 'ಬೇರೆ-ಬೇರೆಯಾಗಿ' ಹುರಿದುಕೊಳ್ಳಿ. ನಂತರ ೨-೩ ಹನಿ ಎಣ್ಣೆ ಹಾಕಿ ಒಣಮೆಣಸಿನಕಾಯಿ ಹುರಿದುಕೊಳ್ಳಿ. ಈಗ ಹುರಿದ ಸಾಮಗ್ರಿಗಳು, ಇಂಗು ಸೇರಿಸಿ ಮಿಕ್ಸಿಗೆ ಹಾಕಿ ನೀರು ಹಾಕದೇ ತರಿತರಿಯಾಗಿ ಪುಡಿ ಮಾಡಿಕೊಳ್ಳಿ. ಬಾಣಲೆಗೆ ಎಣ್ಣೆ ಹಾಕಿ ಸಾಸಿವೆ ಹಾಕಿ ಸಿಡಿಸಿ. ಈರುಳ್ಳಿ ಹಾಕಿ ಫ್ರೈ ಮಾಡಿ. ನಂತರ ಹೆಚ್ಚಿದ ಸೊಪ್ಪು ಹಾಕಿ ಸ್ವಲ್ಪ ಉಪ್ಪು, ಸಕ್ಕರೆ ಹಾಕಿ ಚೆನ್ನಾಗಿ ಹುರಿಯಿರಿ. ನೀರು ಹಾಕುವ ಅವಶ್ಯಕತೆ ಇಲ್ಲ. ಉಪ್ಪು, ಸಕ್ಕರೆ ಹಾಕಿದಾಗ ಸೊಪ್ಪು ಸ್ವಲ್ಪ ನೀರಿನಂಶ ಬಿಡುತ್ತದೆ. ಅದರಲ್ಲೇ ಸಣ್ಣ ಉರಿಯಲ್ಲಿ ಬೇಯುವತನಕ  ಫ್ರೈ ಮಾಡಿ. ನಂತರ ಮತ್ತೆ ಪುಡಿಗೆ ಬೇಕಾಗುವಷ್ಟು ಉಪ್ಪು, ವಾಟೆಪುಡಿ / ಆಮಚೂರ್ ಪುಡಿ ಹಾಕಿ, ಮಾಡಿಟ್ಟುಕೊಂಡ ಪುಡಿ ಹಾಕಿ (ಖಾರ ಕಮ್ಮಿ ಎನಿಸಿದರೆ ಅಚ್ಚ ಖಾರದ ಪುಡಿ ಹಾಕಬಹುದು) ಚೆನ್ನಾಗಿ ಮಿಕ್ಸ್ ಮಾಡಿ ಉರಿ ಆರಿಸಿ.  ಬಿಸಿ ಬಿಸಿ ಅನ್ನದ ಜೊತೆ ಪಲ್ಯ ಸವಿದರೆ ಆಹಾ....! 





ಶುಕ್ರವಾರ, ಜನವರಿ 26, 2018

ಮೆಂತ್ಯ ಸೊಪ್ಪು - ತೊಗರಿಬೇಳೆ ಪಲ್ಯ :

ಸಾಮಗ್ರಿಗಳು :
ಮೆಂತ್ಯ ಸೊಪ್ಪು : 1 ಕಟ್ಟು
ತೊಗರಿಬೇಳೆ : 3-4 ಚಮಚ
ಸಣ್ಣ ಹೆಚ್ಚಿದ ಈರುಳ್ಳಿ : 1
ತೆಂಗಿನ ತುರಿ : 1/2 ಕಪ್
ಲಿಂಬು ರಸ / ವಾಟೆ ಪುಡಿ / ಆಮ್ಚೂರ್ ಪುಡಿ : ಹುಳಿಗೆ ತಕ್ಕಷ್ಟು
ಹಸಿಮೆಣಸಿನ ಕಾಯಿ : 2-3
ಎಣ್ಣೆ : 4 ಚಮಚ
ಸಾಸಿವೆ : 1/2 ಚಮಚ
ಸಕ್ಕರೆ : 1 ಚಮಚ
ಉಪ್ಪು : ರುಚಿಗೆ

ವಿಧಾನ :
ಮೆಂತ್ಯ ಸೊಪ್ಪನ್ನು ಚೆನ್ನಾಗಿ ತೊಳೆದು ಸಣ್ಣಗೆ ಹೆಚ್ಚಿ. ತೊಗರಿಬೇಳೆ ತೊಳೆದು ಸ್ವಲ್ಪ ಗಟ್ಟಿ ಇರುವಂತೆ (ಪೂರ್ತಿ ಬೆಂದು ಕರಗದಂತೆ) ಬೇಯಿಸಿಕೊಳ್ಳಿ. ಹಸಿಮೆಣಸಿನಕಾಯಿ ಉದ್ದುದ್ದ ಸೀಳಿಕೊಳ್ಳಿ. ಬಾಣಲೆಗೆ ಎಣ್ಣೆ, ಸಾಸಿವೆ ಹಾಕಿ ಚಿಟಪಟಾಯಿಸಿ. ಅದಕ್ಕೆ ಹೆಚ್ಚಿದ ಈರುಳ್ಳಿ ಹಾಕಿ ಫ್ರೈ ಮಾಡಿ. ಈಗ ಹೆಚ್ಚಿದ ಮೆಂತ್ಯ ಸೊಪ್ಪು ಹಾಕಿ ಸ್ವಲ್ಪ ಉಪ್ಪು, ಸಕ್ಕರೆ ಹಾಕಿ ಸೊಪ್ಪನ್ನು ಚೆನ್ನಾಗಿ ಫ್ರೈ ಮಾಡಿ. ಉಪ್ಪು, ಸಕ್ಕರೆ ಹಾಕಿ ಫ್ರೈ ಮಾಡುವುದರಿಂದ ಮೆಂತ್ಯ ಸೊಪ್ಪಿನ ಕಹಿ ಅಂಶ ಹೋಗುತ್ತದೆ. ನಂತರ ಬೇಯಿಸಿದ ಬೇಳೆ, ಸ್ವಲ್ಪ ನೀರು, ಮುಂಚೆ ಹಾಕಿರುವ ಉಪ್ಪನ್ನು ಗಮನದಲ್ಲಿಟ್ಟುಕೊಂಡು ಇನ್ನು ಸ್ವಲ್ಪ ಉಪ್ಪು, ವಾಟೆ ಪುಡಿ / ಆಮ್ಚೂರ್ ಪುಡಿ (ಲಿಂಬುರಸ ಆದರೆ ಕೊನೆಯಲ್ಲಿ ಉರಿ ಆರಿಸಿ ಹಾಕಿ), ತೆಂಗಿನತುರಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. 1-2 ನಿಮಿಷ ಮುಚ್ಚಳ ಮುಚ್ಚಿ ಬೇಯಿಸಿ, ನೀರು ಆರಿಸಿದರೆ ಮೆಂತ್ಯ ಸೊಪ್ಪು - ತೊಗರಿಬೇಳೆ ಪಲ್ಯ ಸಿದ್ಧ. ಅನ್ನ ಮತ್ತು ಚಪಾತಿಯ ಜೊತೆ ಚೆನ್ನಾಗಿರುತ್ತದೆ. 


ಶುಕ್ರವಾರ, ಜನವರಿ 12, 2018

ಹಸಿ ಅರಿಶಿನ ಕೊಂಬಿನ ತಂಬುಳಿ :

ಅರಿಶಿನದ ಗಿಡವನ್ನು ಮನೆಯಲ್ಲೇ ಬೆಳೆದುಕೊಂಡರೆ ಅದರಿಂದ ರುಚಿಕರ ತಂಬುಳಿ, ಗೊಜ್ಜು ಮಾಡಬಹುದು. ಬೇಕಾದಾಗ ಮಣ್ಣು ಅಗೆದು ಅರಿಶಿನ ಕೊಂಬು ಕಿತ್ತು ಫ್ರೆಶ್ ಆಗಿ ಅಡುಗೆ ತಯಾರಿಸಬಹುದು. ಆರೋಗ್ಯಕ್ಕೂ ತುಂಬಾ ಒಳ್ಳೆಯದು ಅರಿಶಿನ ಜೊತೆಗೆ ಹಾಲಿನ ಕೆನೆಯ ಜೊತೆ ತೇಯ್ದು ಮುಖಕ್ಕೆ ಹಚ್ಚಿಕೊಂಡರೆ ಮುಖದ ಕಾಂತಿಯೂ ದ್ವಿಗುಣಗೊಳ್ಳುತ್ತದೆ. 

ಸಾಮಗ್ರಿಗಳು :
ಹಸಿ ಅರಿಶಿನ ಕೊಂಬು : 1/2 ಇಂಚು 
ತೆಂಗಿನ ತುರಿ : 1 ಕಪ್ 
ಬೆಲ್ಲ : 3-4 ಟೇಬಲ್ ಚಮಚ 
ಮಜ್ಜಿಗೆ ಅಥವಾ ಮೊಸರು : 1/2 ಕಪ್ 
ಎಣ್ಣೆ : 1 ಚಮಚ 
ಸಾಸಿವೆ: 1/2 ಚಮಚ 
ಒಣ ಮೆಣಸಿನಕಾಯಿ : 1/2 
ಉಪ್ಪು : ರುಚಿಗೆ 

ವಿಧಾನ: 
ಅರಿಶಿನ ಕೊಂಬನ್ನು ಚೆನ್ನಾಗಿ ತೊಳೆದು ತೆಳ್ಳಗೆ ಸ್ಲೈಸ್ ಮಾಡಿಕೊಳ್ಳಿ. ತೆಂಗಿನ ತುರಿಗೆ ಹೆಚ್ಚಿದ ಅರಿಶಿನ ಸೇರಿಸಿ ನುಣ್ಣಗೆ ರುಬ್ಬಿ ಒಂದು ಪಾತ್ರೆಗೆ ಹಾಕಿ. ಅದಕ್ಕೆ ಮಜ್ಜಿಗೆ ಹಾಕಿ. ಮೊಸರು ಹಾಕುವುದಾದರೆ ಸೌಟಿನಿಂದ ಗಂಟಿಲ್ಲದಂತೆಕಲಕಿ ಹಾಕಿ, ಅರ್ಧ - ಮುಕ್ಕಾಲು ಕಪ್ ನೀರು, ಬೆಲ್ಲ, ರುಚಿಗೆ  ತಕ್ಕಷ್ಟು ಉಪ್ಪು ಹಾಕಿ ಕಲಕಿ. ಒಗ್ಗರಣೆ ಸೌಟಿಗೆ ಎಣ್ಣೆ ಹಾಕಿ ಕಾಯಿಸಿ ಅದಕ್ಕೆ ಒಣ ಮೆಣಸಿನ ಚೂರು, ಸಾಸಿವೆ ಹಾಕಿ ಚಿಟಪಟಾಯಿಸಿ ಯಂಬುಳಿಗೆ ಒಗ್ಗರಣೆ ಮಾಡಿ, ಒಣ ಮೆಣಸನ್ನು ಕೈಯಿಂದ ನುರಿಯಿರಿ. ಅನ್ನದ ಜೊತೆ ಸವಿಯಿರಿ. 


ಶುಕ್ರವಾರ, ಡಿಸೆಂಬರ್ 29, 2017

ಹಲಸಿನ ಗುಜ್ಜೆ ಕರ್ರಿ (ಎಳೆ ಹಲಸಿನಕಾಯಿ ಮಸಾಲಾ ಸಾಂಬಾರ್) :

ಎಳೆ ಹಲಸಿನಕಾಯಿ / ಹಲಸಿನ ಗುಜ್ಜೆಯನ್ನು ಕತ್ತರಿಸಿ ಸಿಪ್ಪೆ ತೆಗೆದು, ಮಧ್ಯದ ಮೂಗು (ಗಟ್ಟಿ ಭಾಗ) ತೆಗೆದು (ಚಿತ್ರದಲ್ಲಿರುವಂತೆ) ಉದ್ದುದ್ದ ಹೋಳು ಮಾಡಿ ಕುಕ್ಕರ್ ನಲ್ಲಿ ಬೇಯಿಸಿಕೊಳ್ಳಿ. ನಂತರ ಅದನ್ನು ಸಾಂಬಾರ್ ಗೆ ಬೇಕಾದಂತೆ ಹೆಚ್ಚಿಕೊಳ್ಳಿ. 


ಸಾಮಗ್ರಿಗಳು : 
ಬೇಯಿಸಿದ ಹಲಸಿನ ಗುಜ್ಜೆ ಹೋಳು :3 ಕಪ್ 
ತೆಂಗಿನ ತುರಿ :1.5 ಕಪ್ 
ಒಣ ಮೆಣಸಿನಕಾಯಿ : 6-7 
ಕೊತ್ತಂಬರಿ ಬೀಜ : 1.5 ಚಮಚ 
ಜೀರಿಗೆ : 3/4 ಚಮಚ 
ಉದ್ದಿನ ಬೇಳೆ : 1/4 ಚಮಚ 
ಬಿಳಿ ಎಳ್ಳು : 1/4 ಚಮಚ 
ಚಕ್ಕೆ : 1/2 ಇಂಚು 
ಲವಂಗ : 3
ಹೆಚ್ಚಿದ ಕೊತ್ತಂಬರಿ ಸೊಪ್ಪು : 4 ಟೇಬಲ್ ಚಮಚ 
ಬೆಳ್ಳುಳ್ಳಿ : 5-6 ಎಸಳು 
ಶುಂಠಿ : 1/2 ಇಂಚು 
ಈರುಳ್ಳಿ : 1 
ಹುಣಸೆಹಣ್ಣು : ಸಣ್ಣ ಲಿಂಬೆ ಗಾತ್ರ 
ಎಣ್ಣೆ : 8-10 ಚಮಚ 
ಉಪ್ಪು : ರುಚಿಗೆ 

ವಿಧಾನ :
ಈರುಳ್ಳಿಯನ್ನು ಉದ್ದುದ್ದ ಹೆಚ್ಚಿಕೊಳ್ಳಿ. ಹುಣಸೆಹಣ್ಣು ನೀರಿನಲ್ಲಿ ನೆನೆಸಿಕೊಳ್ಳಿ. ಬಾಣಲೆಗೆ 1 ಚಮಚ ಎಣ್ಣೆ ಹಾಕಿ. ಅದಕ್ಕೆ ಒಣಮೆಣಸಿನಕಾಯಿ, ಉದ್ದಿನಬೇಳೆ,  ಕೊತ್ತಂಬರಿ ಬೀಜ, ಜೀರಿಗೆ, ಚಕ್ಕೆ, ಲವಂಗ, ಎಳ್ಳು ಹಾಕಿ ಹದವಾಗಿ ಹುರಿದುಕೊಳ್ಳಿ. ಕೊನೆಯಲ್ಲಿ ತೆಂಗಿನತುರಿಯನ್ನೂ ಸೇರಿಸಿ ಹುರಿದರೆ ರುಚಿ ಚೆನ್ನಾಗಿರುತ್ತದೆ. ಕೊತ್ತಂಬರಿಸೊಪ್ಪು, ಬೆಳ್ಳುಳ್ಳಿ, ಶುಂಠಿ ಮಿಕ್ಸಿಗೆ ಹಾಕಿ ಪೇಸ್ಟ್ ಮಾಡಿಕೊಳ್ಳಿ. ದಪ್ಪ ತಳದ ಪಾತ್ರೆಗೆ ಉಳಿದ ಎಣ್ಣೆ ಹಾಕಿ ಹೆಚ್ಚಿದ ಈರುಳ್ಳಿ ಹಾಕಿ ಚೆನ್ನಾಗಿ ಫ್ರೈ ಮಾಡಿ. ಅದಕ್ಕೆ ಕೊತ್ತಂಬರಿ ಸೊಪ್ಪಿನ ಪೇಸ್ಟ್ ಹಾಕಿ ಹಸಿ ವಾಸನೆ ಹೋಗುವವರೆಗೆ ಫ್ರೈ ಮಾಡಿ. ಇತ್ತ ಹುರಿದ ಮಿಶ್ರಣ, ತೆಂಗಿನತುರಿ, ನೆನೆಸಿಟ್ಟ ಹುಣಸೆಹಣ್ಣು, ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಈರುಳ್ಳಿ ಮಿಶ್ರಣ ಫ್ರೈ ಆದಮೇಲೆ ಅದಕ್ಕೆ ಬೇಯಿಸಿ ಹೆಚ್ಚಿದ ಹಲಸಿನ ಗುಜ್ಜೆ ಹೋಳು, ಉಪ್ಪು, ರುಬ್ಬಿದ ಮಸಾಲೆ  ಹಾಕಿ ಸಾಂಬಾರ್ ಹದಕ್ಕೆ ನೀರು ಸೇರಿಸಿ ಕುದಿಸಿದರೆ ಗುಜ್ಜೆ ಕರ್ರಿ ಸಿದ್ಧ. ಬಿಸಿ ಬಿಸಿ ಅನ್ನದ ಜೊತೆ ಚೆನ್ನಾಗಿರುತ್ತದೆ. ದೋಸೆ, ಚಪಾತಿಯ ಜೊತೆಯೂ ಸವಿಯಬಹುದು. 





ಶುಕ್ರವಾರ, ಡಿಸೆಂಬರ್ 15, 2017

ಪಾಲಕ್ ಮಟರ್ ಸಬ್ಜಿ / Green pease with spinach sabji : (Restaurant style)

ಸಾಮಗ್ರಿಗಳು:
ಪಾಲಕ್ ಸೊಪ್ಪು : 1 ಕಟ್ಟು (ಮಧ್ಯಮ ಗಾತ್ರದ ಕಟ್ಟು)
ಬಿಡಿಸಿದ ಹಸಿ ಬಟಾಣಿ (ಮಟರ್) : 2 ಕಪ್
ಸಣ್ಣ ಹೆಚ್ಚಿದ ಟೊಮೇಟೊ : 1.5 ಕಪ್
ಸಣ್ಣ ಹೆಚ್ಚಿದ ಈರುಳ್ಳಿ : 1 ಕಪ್
ಶುಂಠಿ : 1/4 ಇಂಚು
ಬೆಳ್ಳುಳ್ಳಿ : 3-4 ಎಸಳು
ಶುಂಠಿ ಬೆಳ್ಳುಳ್ಳಿ ಪೇಸ್ಟ್ : 1 ಚಮಚ
ಹಸಿಮೆಣಸಿನಕಾಯಿ : 1
ಅಚ್ಚ ಖಾರದ ಪುಡಿ : 1 ಚಮಚ
ಧನಿಯಾ ಪುಡಿ : 1/2 ಚಮಚ
ಗರಂ ಮಸಾಲಾ ಪುಡಿ : 1/2 ಚಮಚ
ಕಸೂರಿ ಮೇಥಿ : 1/2 ಚಮಚ
ಸಕ್ಕರೆ : 1/2 ಚಮಚ
ಜೀರಿಗೆ : 1/2 ಚಮಚ
ಎಣ್ಣೆ ಮತ್ತು ಬೆಣ್ಣೆ : ತಲಾ 1 ಚಮಚ
ಉಪ್ಪು: ರುಚಿಗೆ

ವಿಧಾನ :
ಚೆನ್ನಾಗಿ ತೊಳೆದ ಪಾಲಕ್ ಸೊಪ್ಪು, ಶುಂಠಿ, ಬೆಳ್ಳುಳ್ಳಿ ಎಸಳು, ಹಸಿ ಮೆಣಸು ಎಲ್ಲವನ್ನು ಕುದಿಯುತ್ತಿರುವ ನೀರಿಗೆ ಹಾಕಿ ಸ್ಟವ್ ಆರಿಸಿ 30 ಸೆಕೆಂಡ್ ಮುಚ್ಚಿಡಿ. ನಂತರ ನೀರನ್ನು ಒಂದು ಪಾತ್ರೆಯಲ್ಲಿ ಬಸಿದಿಟ್ಟು, ಪಾಲಕ್ ಮಿಶ್ರಣವನ್ನು ಪ್ಲೇಟ್ ಗೆ ಹಾಕಿ ಆರಲು ಬಿಡಿ. ಪಾನ್ ಒಲೆಯ ಮೇಲಿಟ್ಟು ಎಣ್ಣೆ, ಬೆಣ್ಣೆ ಹಾಕಿ ಕಾಯಿಸಿ ಜೀರಿಗೆ ಹಾಕಿ ಫ್ರೈ ಮಾಡಿ. ಅದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಹೆಚ್ಚಿದ ಈರುಳ್ಳಿ ಹಾಕಿ ಚೆನ್ನಾಗಿ ಫ್ರೈ ಮಾಡಿ. ನಂತರ ಹೆಚ್ಚಿದ ಟೊಮೇಟೊ, ಸ್ವಲ್ಪ ಉಪ್ಪು ಹಾಕಿ ಸಣ್ಣ ಉರಿಯಲ್ಲಿ ಟೊಮೇಟೊ ಮೆತ್ತಗಾಗುವವರೆಗೆ ಫ್ರೈ ಮಾಡಿ. ನಂತರ ಹಸಿ ಬಟಾಣಿ ಹಾಕಿ ಒಂದು ಕಪ್ ನೀರು (ಪಾಲಕ್ ಬೇಯಿಸಿ ಬಸಿದ ನೀರನ್ನೇ ಹಾಕಿ) ಹಾಕಿ ಮುಚ್ಚಳ ಮುಚ್ಚಿ ಬೇಯಿಸಿ, ಇತ್ತ ತಣ್ಣಗಾದ ಪಾಲಕ್ ಮಿಶ್ರಣವನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ಬಟಾಣಿ ಬೆಂದ ಮೇಲೆ ಅದಕ್ಕೆ ಧನಿಯಾ ಪುಡಿ, ಅಚ್ಚ ಖಾರದಪುಡಿ, ಗರಂ ಮಸಾಲಾ ಪುಡಿ ಹಾಕಿ ಮಿಕ್ಸ್ ಮಾಡಿ, ಪಾಲಕ್ ಪೇಸ್ಟ್, ಉಪ್ಪು, ಸಕ್ಕರೆ ಹಾಕಿ,  ಎಷ್ಟು ಬೇಕು ನೋಡಿಕೊಂಡು ಬಸಿದಿಟ್ಟ ನೀರು ಹಾಕಿ, ಕಸೂರಿ ಮೇಥಿ ಹಾಕಿ ಕುದಿಸಿ. ಪುಲ್ಕ, ರೋಟಿ, ಚಪಾತಿ, ಪೂರಿ ಜೊತೆ ಸವಿಯಲು ಪಾಲಕ್ ಮಟರ್ / green peas with spinach sabji ಸಿದ್ಧ.