ಶುಕ್ರವಾರ, ಅಕ್ಟೋಬರ್ 18, 2013

ಕ್ಯಾರೆಟ್ ಹೆಸರು ಕಾಳು ರೈಸ್:


ಇದು ತು೦ಬಾ ಸರಳ ವಿಧಾನ. ಸ್ವಲ್ಪ ಗಡಿಬಿಡಿಯಲ್ಲಿ ಇರುವಾಗ ಕಡಿಮೆ ಸಮಯದಲ್ಲಿ ಸುಲಭವಾಗಿ, ಕಡಿಮೆ ಪದಾರ್ಥಗಳನ್ನು ಬಳಸಿ ಮಾಡಬಹುದು. ಕ್ಯಾರೆಟ್ ಹೆಸರು ಕಾಳು ಆರೋಗ್ಯಕ್ಕೆ ಕೂಡ ಒಳ್ಳೆಯದು.

ಬೇಕಾಗುವ ಸಾಮಾಗ್ರಿಗಳು: ಕಾರೆಟ್ ದೊಡ್ಡ ಗಾತ್ರದ್ದು 1, ಹೆಸರು ಕಾಳು ½ ಚಿಕ್ಕ ಕಪ್, ಹಸಿ ಮೆಣಸು 2-3, ಕಾಳುಮೆಣಸಿನ ಪುಡಿ 1 ಚಮಚ, ಲಿ೦ಬು ರಸ, 1 ಲೋಟ ಅಕ್ಕಿ.

ಒಗ್ಗರಣೆಗೆ: ಸಾಸಿವೆ, ಎಣ್ಣೆ, ಕರಿಬೇವು, ಚಿಟಿಕೆ ಅರಿಶಿನ.



ಮಾಡುವ ವಿಧಾನ: ಒ೦ದು ಲೋಟ ಅಕ್ಕಿಯ ಅನ್ನ ಮಾಡಿ ಬದಿಗೆ ಇರಿಸಿ, ಹೆಸರುಕಾಳನ್ನು ೪-೫ ಗ೦ಟೆ ಮೊದಲು ನೀರಲ್ಲಿ ನೆನೆಸಿಡಬೇಕು.ನೆನೆಸಿದ ಹೆಸರುಕಾಳನ್ನು ಪಾತ್ರೆಯಲ್ಲಿ ಹಾಕಿ ಕುಕ್ಕರ್ ನಲ್ಲಿ ಇಟ್ಟು ಒ೦ದು ವಿಷಲ್ ಕೂಗಿಸಿ ಉರಿಯನ್ನು ಆರಿಸಿ. (ಹೆಸರುಕಾಳು ಜಾಸ್ತಿ ಬೆ೦ದರೆ ರುಚಿ ಕಳೆದುಕೊಳ್ಳುತ್ತದೆ) ಒ೦ದು ಬಾಣಲೆಯಲ್ಲಿ ಎಣ್ಣೆ ಹಾಕಿ ಅದು ಸ್ವಲ್ಪ ಬಿಸಿ ಅದ ಮೇಲೆ ಸಾಸಿವೆ ಕರಿಬೇವು, ಹಸಿಮೆಣಸು ಹಾಕಿ ಅದು ಚಿಟಪಟಿಸಿದ ನ೦ತರ ಅದಕ್ಕೆ ತುರಿದ ಕ್ಯಾರೆಟ್ ಜೊತೆ ಸ್ವಲ್ಪ ಉಪ್ಪು ಹಾಕಿ ಹುರಿಯಿರಿ, ೭೦% ಬೆ೦ದ ನ೦ತರ ಅದಕ್ಕೆ ಬೇಯಿಸಿದ ಹೆಸರುಕಾಳನ್ನು ಹಾಕಿ ಸ್ವಲ್ಪ ಕಾಳುಮೆಣಸಿನ ಪುಡಿ ಹಾಕಿ 2 ನಿಮಿಷ ಫ್ರೈ ಮಾಡಿ. ಉರಿಯನ್ನು ಆರಿಸಿ ಅನ್ನ ಹಾಕಿ ಕಲೆಸಿ. ರುಚಿ ನೋಡಿಕೊ೦ಡು ಉಪ್ಪು & ಲಿ೦ಬು ರಸ ಸೇರಿಸಿ.



ನಿಮ್ಮ ಅಡುಗೆಯ ಉಪಯೋಗಕ್ಕಾಗಿ: ಪಲ್ಯ ಬೇಯಿಸುವಾಗ ನೀರು ಹಾಕಿ ಹಾಗೆ ಬಟ್ಟಲನ್ನು ಮುಚ್ಚಿ ಇಟ್ಟು, ಸ್ವಲ್ಪ ಹೊತ್ತು ಅದನ್ನು ತೊಳೆಸದೆ ಇದ್ದರೆ ತರಕಾರಿ ತಳ ಹಿಡಿಯುತ್ತದೆ, ಅದಕ್ಕೆ ಬಟ್ಟಲನ್ನು ಮುಚ್ಚಿ ಅದರ ಮೇಲೆ ಸ್ವಲ್ಪ ನೀರು ಹಾಕಿ ಇಟ್ಟರೆ ಪಲ್ಯ ತಳ ಹಿಡಿಯದೆ ಚೆನ್ನಾಗಿ ಬೇಯುತ್ತದೆ.
 

ಗುರುವಾರ, ಅಕ್ಟೋಬರ್ 17, 2013

ಪೀಸ್ ಪುಲಾವ್ (ಹಸಿ ಬಟಾಣಿ ಪುಲಾವ್) :

ಸಾಮಗ್ರಿಗಳು: ಅಕ್ಕಿ 1 ಕಪ್, ಹಸಿ ಬಟಾಣಿ 1 ಕಪ್, ಮೀಡಿಯಂ ಗಾತ್ರದ ಈರುಳ್ಳಿ 1, ಚಕ್ಕೆ 1 ಇಂಚು, ಏಲಕ್ಕಿ 2, ಲವಂಗ 3-4, ಚಕ್ರ ಮೊಗ್ಗು ಸಣ್ಣ ಚೂರು, ಮೊಸರು ಮತ್ತು ಮೊಸರಿನ ಕೆನೆ ಸೇರಿ 2-3 ಚಮಚ, ಎಣ್ಣೆ 2-3 ಚಮಚ, ತುಪ್ಪ 1-2 ಚಮಚ, ಸಕ್ಕರೆ 1/4 ಚಮಚ (optional), ಉಪ್ಪು ರುಚಿಗೆ, ನಿಂಬೆ ರಸ 1-2 ಚಮಚ. 

ಪೇಸ್ಟ್ ಗೆ ಸಾಮಗ್ರಿಗಳು: ಹೆಚ್ಚಿದ ಕೊತ್ತಂಬರಿ ಸೊಪ್ಪು 2-3 ಚಮಚ, ಬೆಳ್ಳುಳ್ಳಿ 6-8 (ಮೀಡಿಯಂ) ಎಸಳು, ಹೆಚ್ಚಿದ ಈರುಳ್ಳಿ (ಸಣ್ಣ ಗಾತ್ರದ್ದು) 1, ಶುಂಠಿ 1 ಇಂಚು, ಹಸಿಮೆಣಸಿನ ಕಾಯಿ 2-3.  

ವಿಧಾನ : ಪೇಸ್ಟ್ ಸಾಮಗ್ರಿಗಳನ್ನು ಸ್ವಲ್ಪ ನೀರು ಹಾಕಿ ರುಬ್ಬಿ ನುಣ್ಣಗೆ ಪೇಸ್ಟ್ ಮಾಡಿಕೊಳ್ಳಿ. ಮೀಡಿಯಂ ಗಾತ್ರದ ಈರುಳ್ಳಿಯನ್ನು ಉದ್ದುದ್ದ ಹೆಚ್ಚಿಕೊಳ್ಳಿ. ಹಸಿ ಬಟಾಣಿಯ ಬೀನ್ಸ್ ಅನ್ನು ಬಿಡಿಸಿ ತೊಳೆದು ಒಂದು ಕಪ್ ನಷ್ಟು ರೆಡಿ ಮಾಡಿಕೊಳ್ಳಿ. ಅಕ್ಕಿಯನ್ನು ತೊಳೆದು ನೀರು ಬಸಿದಿಟ್ಟುಕೊಳ್ಳಿ. ಕುಕ್ಕರ್ ಗೆ ಎಣ್ಣೆ, ತುಪ್ಪ ಹಾಕಿ ಕಾದ ಮೇಲೆ ಹೆಚ್ಚಿದ ಈರುಳ್ಳಿ ಹಾಕಿ ಅದು ಚೆನ್ನಾಗಿ ಫ್ರೈ ಆದಮೇಲೆ ರುಬ್ಬಿಕೊಂಡ ಪೇಸ್ಟ್ ಹಾಕಿ ಹಸಿ ವಾಸನೆ ಹೋಗುವ ತನಕ ಫ್ರೈ ಮಾಡಿ. ನಂತರ ಚೂರು ಮಾಡಿದ ಚಕ್ಕೆ, ಲವಂಗ, ಏಲಕ್ಕಿ, ಚಕ್ರ ಮೊಗ್ಗಿನ ಚೂರು ಹಾಕಿ, ಅದಕ್ಕೆ ಹಸಿ ಬಟಾಣಿ ಹಾಕಿ ಒಮ್ಮೆ ಚೆನ್ನಾಗಿ ಕಲಸಿ. ನಂತರ ಅಕ್ಕಿ ಹಾಕಿ ಅರ್ಧ ನಿಮಿಷ ಫ್ರೈ ಮಾಡಿ. ಈಗ ಮೊಸರು ಮತ್ತು ಮೊಸರಿನ ಕೆನೆಗೆ ಒಂದು ಕಪ್ ನೀರು ಹಾಕಿ ಚೆನ್ನಾಗಿ ಕಲಕಿ ಅಕ್ಕಿಗೆ ಹಾಕಿ, ಅದರ ಮೇಲೆ ಮತ್ತೆ 1 1/4 ಕಪ್ ನೀರು ಹಾಕಿ. ಅಲ್ಲಿಗೆ ಒಟ್ಟೂ 2 1/4 ಕಪ್ ನೀರು ಹಾಕಿದಂತಾಯಿತು. ನಂತರ ಇದಕ್ಕೆ ಉಪ್ಪು, ನಿಂಬೆರಸ, ಬೇಕಿದ್ದಲ್ಲಿ 1/4 ಚಮಚ ಸಕ್ಕರೆ ಹಾಕಿ ಕಲಕಿ ರುಚಿ ನೋಡಿಕೊಂಡು ಬೇಕಿದ್ದಲ್ಲಿ ಸ್ವಲ್ಪ ಉಪ್ಪು - ಹುಳಿ ಸೇರಿಸಿ ಕುಕ್ಕರ್ ಮುಚ್ಚಿ 3 ವಿಸಲ್ ಕೂಗಿಸಿ. ಉಗಿ ಇಳಿದ ಮೇಲೆ ತೆಗೆದು ಒಮ್ಮೆ ಚೆನ್ನಾಗಿ ಮಿಕ್ಸ್ ಆಗುವಂತೆ ಕಲಸಿ, ರಾಯ್ತ / ಮೊಸರು ಬಜ್ಜಿಯೊಡನೆ ಸರ್ವ್ ಮಾಡಿ.  


ಅಡುಗೆ ಮನೆಗೊಂದು ಟಿಪ್ಸ್ :  ಉಪ್ಪಿಟ್ಟಿನ ರವೆ ಬೇಗನೆ ಹುಳು ಹಿಡಿಯುತ್ತದೆಯಲ್ಲವೇ...? ರವೆ ತಂದ ಮೇಲೆ ಅದನ್ನು ಬಾಣಲೆಗೆ ಹಾಕಿ ಸ್ವಲ್ಪ ಹುರಿದು ತಣ್ಣಗಾದ ಮೇಲೆ ಡಬ್ಬಿ ತುಂಬಿಡಿ.... ಬೇಗನೆ ಹಾಳಾಗುವುದಿಲ್ಲ.... 

ಮಂಗಳವಾರ, ಅಕ್ಟೋಬರ್ 1, 2013

ಹಾಗಲಕಾಯಿ ಪಲ್ಯ - 1


ಸಾಮಾಗ್ರಿಗಳು: ಹಾಗಲಕಾಯಿ 2, ಈರುಳ್ಳಿ 1, ತೆ೦ಗಿನಕಾಯಿ ತುರಿ1/2 ಕಪ್, ಹಸಿ ಮೆಣಸು4-5 (ಜಾಸ್ತಿ ಖಾರ ಇದ್ದರೆ ಒಳ್ಳೆಯದು), ಹುಣಸೆಹಣ್ಣಿನ ರಸ 2-3 ಚಮಚ,
ಒಗ್ಗರಣೆಗೆ:ಎಣ್ಣೆ ಸ್ವಲ್ಪ ಜಾಸ್ತಿ ಇದ್ದರೆ ಒಳ್ಳೆಯದು, ಸಾಸಿವೆ, ಚಿಟಿಕೆ ಇ೦ಗು & ಅರಿಶಿನ, ಕರಿಬೇವು

ವಿಧಾನ: ಹಾಗಲಕಾಯಿ ಮತ್ತು ಈರುಳ್ಳಿಯನ್ನು ಸಣ್ಣದಾಗಿ ಹೆಚ್ಚಿಕೊಳ್ಳಿ. ಮೊದಲು ಬಾಣಲೆಯನ್ನು ಒಲೆಯಮೇಲೆ ಇಟ್ಟು, ಎಣ್ಣೆ ಹಾಕಿ ಅದು ಸ್ವಲ್ಪ ಕಾದ ನ೦ತರ ಅದಕ್ಕೆ ಸಾಸಿವೆ ಹಾಕಿ ಅದು ಚಿಟಪಟಿಸಿದ ನ೦ತರ ಹಸಿ ಮೆಣಸು, ಕರಿಬೇವು, ಅರಿಶಿನ, ಇ೦ಗು ಹಾಕಿದ ತಕ್ಷಣ ಹಾಗಲಕಾಯಿ ಕೊಚ್ಚಲು (ಸಣ್ಣಗೆ ಹೆಚ್ಚಿದ ಎಲ್ಲ ತರಕಾರಿಗಳನ್ನು ಕೊಚ್ಚಲು ಎನ್ನುವುದು ವಾಡಿಕೆ) ಹಾಕಬೇಕು. ಅದಕ್ಕೆ ಉಪ್ಪು, ಹುಣಸೆಹಣ್ಣಿನ ರಸ ಹಾಕಿ 20 ನಿಮಿಷ ಸಣ್ಣ ಉರಿಯಲ್ಲಿ ಚೆನ್ನಾಗಿ ಹುರಿಯಿರಿ.ಆಮೇಲೆ ತೆ೦ಗಿನ ತುರಿ, ಈರುಳ್ಳಿ ಸೇರಿಸಿ  5 ನಿಮಿಷ ಮತ್ತೆ ಹುರಿದರೆ ಹಾಗಲಕಾಯಿ ಪಲ್ಯ ರೆಡಿ. ಇದು ಅನ್ನದ ಜೊತೆ ಚೆನ್ನಾಗಿರುತ್ತದೆ. (ಪಲ್ಯ ಮಾಡುವಾಗ ನೀರನ್ನು ಸೇರಿಸಬಾರದು).
ಹಾಗಲಕಾಯಿ ಪದಾರ್ಥಕ್ಕೆ ಒ೦ದು ಟಿಪ್ಸ್: ಹಾಗಲಕಾಯಿಯನ್ನು ಹೆಚ್ಚಿದ ಮೇಲೆ ಅದಕ್ಕೆ ಸ್ವಲ್ಪ ಉಪ್ಪು, ಅರಿಶಿನ ಸೇರಿಸಿ 10-15 ನಿಮಿಷ ಹಾಗೆ ಬಿಡಿ. ನ೦ತರ ಅದರ ರಸ ತೆಗೆದು ಕೊಚ್ಚಲನ್ನು ಮಾತ್ರ ಬಳಸುವುದರಿ೦ದ ಹಾಗಲಕಾಯಿ ಪದಾರ್ಥಗಳು ಅಷ್ಟೊ೦ದು ಕಹಿ ಅಗುವುದಿಲ್ಲ.






ಶುಕ್ರವಾರ, ಸೆಪ್ಟೆಂಬರ್ 13, 2013

ಗೋಭಿ ಚಾಟ್ :

ಸಾಮಗ್ರಿ : ಹೂಕೋಸು (Cauliflower) : 1 (ಮೀಡಿಯಂ ಗಾತ್ರದ್ದು), ಜೀರಿಗೆ: 1 - 1.5 ಚಮಚ, ಪೆಪ್ಪರ್ ಪೌಡರ್ : 1 - 1.5 ಚಮಚ, ತುಪ್ಪ : 4-5 ಚಮಚ, ಉಪ್ಪು ರುಚಿಗೆ ತಕ್ಕಷ್ಟು. 

ವಿಧಾನ : ಹೂಕೋಸನ್ನು ಮಂಚೂರಿ ಗಾತ್ರದಲ್ಲಿ ಹೆಚ್ಚಿಕೊಂಡು ತೊಳೆದು ನೀರನ್ನು ಪೂರ್ತಿ ಬಸಿದುಕೊಳ್ಳಿ. ಬಾಣಲೆಗೆ ತುಪ್ಪ ಹಾಕಿ ಕಾದ ನಂತರ ಜೀರಿಗೆ ಹಾಕಿ. ಜೀರಿಗೆ ಹುರಿದ ನಂತರ ಪೆಪ್ಪರ್ ಪೌಡರ್ ಹಾಕಿ ತಕ್ಷಣ ಹೂಕೋಸನ್ನು ಹಾಕಿ, ಉಪ್ಪು ಹಾಕಿ ಕಲಸಿ ಮುಚ್ಚಿ. ಸಣ್ಣ ಉರಿಯಿರಲಿ. ಆಗಾಗ ಕೈ ಆಡಿಸುತ್ತಿರಿ. ನೀರು ಹಾಕುವುದು ಬೇಡ. ಮುಚ್ಚಳ ಮುಚ್ಚಿರುವುದರಿಂದ ಒಳಗಿನ ಉಗಿ ಮತ್ತು ತುಪ್ಪದಲ್ಲೇ ಹೂಕೋಸು ಬೇಯುತ್ತದೆ. ಟೇಸ್ಟ್ ನೋಡಿ ಖಾರ, ಉಪ್ಪು ಕಮ್ಮಿ ಇದ್ದಲ್ಲಿ ಸ್ವಲ್ಪ ಪೆಪ್ಪರ್ ಪೌಡರ್, ಉಪ್ಪು ಉದುರಿಸಿ ಮತ್ತೆ ಸ್ವಲ್ಪ ಫ್ರೈ ಮಾಡಿ. ಇದು 90% ನಷ್ಟು ಬೆಂದರೆ ಸಾಕು. ಚುಮು ಚುಮು ಮಳೆಯ ಸಂಜೆ ಬಿಸಿ ಬಿಸಿ ಗೋಭಿ ಚಾಟ್ ಸರ್ವ್ ಮಾಡಿ.....ಸ್ವಲ್ಪ ಬಾಯಿ ಚುರ್ ಎನ್ನುವಷ್ಟು ಖಾರವಿರುವ ಚಾಟ್  ಬಿಸಿ ಬಿಸಿ ತಿನ್ನಲು ಬಹು ರುಚಿ...  




ಸೂಚನೆ: 1) ಒಳ್ಳೆಯ ತುಪ್ಪವನ್ನು ಬಳಸಿ. 
           2) ಇದಕ್ಕೆ ಉಪ್ಪು ತುಂಬಾ ಹಿಡಿಯುವುದಿಲ್ಲ. ಸ್ವಲ್ಪ ಹಾಕಿ                    ನೋಡಿಕೊಳ್ಳಿ, ಬೇಕಿದ್ದರೆ ಮತ್ತೆ ಸೇರಿಸಬಹುದು. 

ಇಲ್ಲೊಂದು ಟಿಪ್ಸ್: ನೀರನ್ನು ಸ್ವಲ್ಪ ಬಿಸಿ ಮಾಡಿ ಅದಕ್ಕೆ ಸ್ವಲ್ಪ ಉಪ್ಪು, ಅರಿಶಿನ ಹಾಕಿ, ಹೆಚ್ಚಿದ ಹೂಕೋಸನ್ನು ಹಾಕಿ 5 ನಿಮಿಷ ನೆನೆಸಿ ತೆಗೆದರೆ ಅದರಲ್ಲಿ ಕಾಣದೆ ಉಳಿದ ಕ್ರಿಮಿಗಳು ನಾಶವಾಗುತ್ತವೆ.  

ಕಾವ್ಯಾ :)

ಮಂಗಳವಾರ, ಆಗಸ್ಟ್ 27, 2013

ಹಾಗಲಕಾಯಿ ಕಾಯಿರಸ:



ಸಾಮಾಗ್ರಿಗಳು: ಹಾಗಲಕಾಯಿ 1, ತೆ೦ಗಿನ ತುರಿ ½ ಬಟ್ಟಲು, ಕಡಲೆಬೇಳೆ 4 ಚಮಚ, ಉದ್ದಿನಬೇಳೆ 2 ಚಮಚ, ಜೀರಿಗೆ ½ ಚಮಚ, ಧನಿಯಾ ¼ ಚಮಚ, ಒಣ ಮೆಣಸು 6-7, ಇ೦ಗು, ಹುಣಸೆ ಹಣ್ಣಿನ ರಸ ಚಮಚ, ಬೆಲ್ಲ 2 ನಿ೦ಬೆ ಹಣ್ಣಿನ ಗಾತ್ರ, ಉಪ್ಪು ರುಚಿಗೆ ತಕ್ಕಷ್ಟು
ಒಗ್ಗರಣೆಗೆ: ಎಣ್ಣೆ, ಸಾಸಿವೆ, ಕರಿಬೇವು.


ಮಾಡುವ ವಿಧಾನ: ಹಾಗಲಕಾಯಿಯನ್ನು 1" ಉದ್ದ ತೆಳ್ಳಗೆ ಹೆಚ್ಚಿಕೊಳ್ಳಿ. ಬಾಣಲೆಯನ್ನು ಒಲೆಯಮೇಲೆ ಇಟ್ಟು ಎಣ್ಣೆ, ಸಾಸಿವೆ, ಕರಿಬೇವು ಹಾಕಿ, ಅದು ಚಿಟಪಟಿಸಿದ ನ೦ತರ ಅರಿಶಿನ ಹೆಚ್ಚಿಟ್ಟ ಹಾಗಲಕಾಯಿ ಹಾಕಿ, ಅದಕ್ಕೆ ಉಪ್ಪು, ಬೆಲ್ಲ, ಹುಣಸೆಹಣ್ಣಿನ ರಸ ಸೇರಿಸಿ 15-20 ನಿಮಿಷಗಳ ಕಾಲ ಚೆನ್ನಾಗಿ ಕುದಿಸಿ ಆಗಾಗ ಸೌಟಿನಲ್ಲಿ ತೊಳೆಸುತ್ತಿರಬೇಕು. ಬೆಲ್ಲ & ಹುಣಸೆಹಣ್ಣಿನ ರಸ ಬಾಣಲೆಯ ತಳ ಹಿಡಿಯುವ ಸಾಧ್ಯತೆ ಹೆಚ್ಚು.
ಕಡಲೆಬೇಳೆ, ಉದ್ದಿನಬೇಳೆ, ಜೀರಿಗೆ, ಧನಿಯಾ, ಒಣ ಮೆಣಸು,ಇ೦ಗು ಇವೆಲ್ಲವನ್ನು ಸಣ್ಣ ಉರಿಯಲ್ಲಿ ಹುರಿದುಕೊಳ್ಳಿ. ಇವೆಲ್ಲವನ್ನು ತೆ೦ಗಿನ ತುರಿಯ ಜೊತೆ ಸೇರಿಸಿ ಸ್ವಲ್ಪ ನೀರು ಹಾಕಿ ರುಬ್ಬಿ. ಹಾಗಲಕಾಯಿ ಬೆ೦ದ ನ೦ತರ ಅದಕ್ಕೆ ರುಬ್ಬಿದ ಮಿಶ್ರಣವನ್ನು & ಸ್ವಲ್ಪ ನೀರು ಸೇರಿಸಿ ಮತ್ತೆ ಕುದಿಸಬೇಕು. ಇದು ಗ್ರೇವಿಯ ಹದದಲ್ಲಿ ಇರಬೇಕು. ಇದು ಅನ್ನ & ಚಪಾತಿಯ ಜೊತೆ ಚೆನ್ನಾಗಿರುತ್ತದೆ. ಇದು ಸಲ್ಪ ಸಿಹಿಯಾಗಿರುವ ಗ್ರೇವಿ.

ಇದೆ ಥರ ತೊ೦ಡೆಕಾಯಿ, ಬೆ೦ಡೆಕಾಯಿ, ಬದನೆಕಾಯಿ, ಟೊಮ್ಯಾಟೊ, ಅನಾನಸ್, ಅಮಟೆಕಾಯಿ ಗಳಿ೦ದ ಕಾಯಿರಸ ಮಾಡಬಹುದು. 
ಈ ಟಿಪ್ಸ್ ನಿಮ್ಮ ಉಪಯೋಗಕ್ಕೆ:ಅಡುಗೆ ಮಾಡುವಾಗ ಬಟ್ಟೆಗೆ ಅರಿಶಿನ ಅ೦ಟಿದರೆ ಸ್ವಲ್ಪ ಹಾಲು ಹಾಕಿ ತಿಕ್ಕಿ ತೊಳೆದರೆ ಅರಿಶಿನ ಬಣ್ಣ ಮಾಯವಾಗುತ್ತದೆ.