ಗುರುವಾರ, ಮೇ 14, 2015

ಹಾಲುಬಾಯಿ (ಅಕ್ಕಿ ಮಣ್ಣಿ):

ಸಾಮಗ್ರಿಗಳು: ಅಕ್ಕಿ - 1 ಲೋಟ, ಜೋನಿಬೆಲ್ಲ - 2 ಲೋಟ, ಅವಲಕ್ಕಿ 1 ಮುಷ್ಟಿ, ಹಾಲು 2 ಲೋಟ, ಏಲಕ್ಕಿ ಪುಡಿ 1 ಚಮಚ, ತುಪ್ಪ 4 ಚಮಚ, ಉಪ್ಪು 1/2 ಚಮಚ.






ವಿಧಾನ : ಅಕ್ಕಿಯನ್ನು ೨ ಗ೦ಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ಅವಲಕ್ಕಿಯನ್ನು ೧/೨ ಗ೦ಟೆ ನೆನೆಸಿಟ್ಟಿರಬೇಕು. ಅಮೇಲೆ ಅಕ್ಕಿ & ಅವಲಕ್ಕಿಯನ್ನು ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿದ ಹಿಟ್ಟಿಗೆ ಬೆಲ್ಲ & ಏಲಕ್ಕಿ ಪುಡಿ, ಉಪ್ಪು ಸೇರಿಸಿ, ಇದಕ್ಕೆ ೧ ಲೋಟ ನೀರು & ೨ ಲೋಟ ಹಾಲು ಹಾಕಿ ದಪ್ಪ ತಳದ ಬೋಗಣಿಯಲ್ಲಿ  ಇದನ್ನು ಹಾಕಿ, ಸಣ್ಣ ಉರಿಯಲ್ಲಿ ನಿರ೦ತರವಾಗಿ ಅದು ಸೌಟು ಬಿಡುವಷ್ಟು ಗಟ್ಟಿಯಾಗುವವರೆಗೂ ತೊಳೆಸುತ್ತಿರಬೇಕು. ನ೦ತರ ಉರಿ ಆರಿಸಿ ೧ ಚಮಚ ತುಪ್ಪ ಹಾಕಿ ತೊಳೆಸಿ. ಈಗ ಪ್ಲೇಟ್ ಗೆ ತುಪ್ಪ ಸವರಿಕೊ೦ಡು ಈ ಮಿಶ್ರಣವನ್ನು ಹಾಕಿ ಹರವಿರಿ. ಬಿಸಿ ಆರಿದಮೇಲೆ ಹಲ್ವದ ಥರ ಕತ್ತರಿಸಿ, ತುಪ್ಪದ ಜೊತೆ ಸರ್ವ್ ಮಾಡಿ.

ಶನಿವಾರ, ಮೇ 9, 2015

ಕರಬೂಜ ರಸಾಯನ :

ಸಾಮಗ್ರಿಗಳು:
ಸಣ್ಣಗೆ ಹೆಚ್ಚಿದ ಕರಬೂಜ ಹಣ್ಣು - ೧ ಕಪ್
ದಪ್ಪ ತೆಂಗಿನ ಹಾಲು - ೨ ಕಪ್
ಸಕ್ಕರೆ - ೧/೪ ಕಪ್
ಪೇಪರ್ ಅವಲಕ್ಕಿ - ೧ ಕಪ್
ಏಲಕ್ಕಿ ಪುಡಿ - ೧/೪ ಟೀ ಚಮಚ

ವಿಧಾನ : 
ತೆಂಗಿನ ಹಾಲನ್ನು ಒಂದು ಪಾತ್ರೆಗೆ ಹಾಕಿ, ಸಕ್ಕರೆ ಹಾಕಿ ಕಲಕಿ. ಸಕ್ಕರೆ ಕರಗಿದ
ಮೇಲೆ ಅದಕ್ಕೆ ಹೆಚ್ಚಿದ ಕರಬೂಜ ಹಣ್ಣು, ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
ನಂತರ ಇದನ್ನು ಒಂದೆರಡು ಘಂಟೆ ಫ್ರಿಡ್ಜ್ ನಲ್ಲಿ ಇಡಿ. ತಣ್ಣಗಾದ ಮೇಲೆ ಇದಕ್ಕೆ ಅವಲಕ್ಕಿಸೇರಿಸಿ ಕಲಸಿ ಸರ್ವ್ ಮಾಡಿ.



ಸೂಚನೆ :
೧) ಅವಲಕ್ಕಿ ಹಾಕಿದ ಐದು ನಿಮಿಷಗಳಲ್ಲಿ ಸರ್ವ್ ಮಾಡಬೇಕು, ತುಂಬಾ ಹೊತ್ತು ಹಾಗೆಯೇ ಇಡಲು ಹೋಗಬೇಡಿ. ಜಾಸ್ತಿ ಎನಿಸಿದರೆ ಎಷ್ಟು ಬೇಕೋ ಅಷ್ಟು ರಸಾಯನಕ್ಕೆ ಅವಲಕ್ಕಿ ಸೇರಿಸಿಕೊಳ್ಳಿ.
೨) ತೆಂಗಿನ ತುರಿಯನ್ನು ಒಂದು ಸುತ್ತು ರುಬ್ಬಿ ಅದರ ಹಾಲನ್ನು ಹಿಂಡಿಕೊಳ್ಳಬೇಕು. ನಂತರ ಹಿಂಡಿಟ್ಟ ಗಸಟನ್ನು ಸಾಂಬಾರ್ ಮಾಡಲು ಬಳಸಬಹುದು. ಇಲ್ಲವಾದಲ್ಲಿ ತೆಂಗಿನ ಕಾಯನ್ನು ಅತ್ಯಂತ ನುಣ್ಣಗೆ ರುಬ್ಬಿ ಸ್ವಲ್ಪ ತೆಳ್ಳಗಾಗುವಷ್ಟು ನೀರು ಸೇರಿಸಿ ಕೂಡ ರಸಾಯನಕ್ಕೆ ಹಾಕಬಹುದು. 

ಮಂಗಳವಾರ, ಏಪ್ರಿಲ್ 28, 2015

ಮ೦ಡಕ್ಕಿ ಉ೦ಡೆ:



ಸಾಮಗ್ರಿಗಳು: 
ಮ೦ಡಕ್ಕಿ (ಪುರಿ) 1/2 ಕೆ.ಜಿ, ಬೆಲ್ಲ – 1/2 ಲೋಟ, ಏಲಕ್ಕಿ ಪುಡಿ ಚಮಚ.

ವಿಧಾನ
ಬೆಲ್ಲಕ್ಕೆ ಸ್ವಲ್ಪ ನೀರು ಹಾಕಿಕೊ೦ಡು ಚೆನ್ನಾಗಿ ಪಾಕ ಬರಿಸಬೇಕು. ಪಾಕ ಬ೦ದಮೇಲೆ ಏಲಕ್ಕಿ ಪುಡಿ, ಮ೦ಡಕ್ಕಿ ಹಾಕಿ ಸರಿಯಾಗಿ ಮಿಕ್ಸ್ ಮಾಡಿ, ಸ್ವಲ್ಪ ಬಿಸಿ ಕಮ್ಮಿಯಾದ ಮೇಲೆ ಉ೦ಡೆ ಕಟ್ಟಬೇಕು.


ಸಲಹೆ:
ಪಾಕ ಬ೦ದಿದೆಯೆ ಎ೦ದು ನೋಡಲು ಚಿಕ್ಕ ಪ್ಲೇಟ್ ಗೆ ನೀರು ಹಾಕಿಕೊ೦ಡು೨ ಹನಿ ಕುದಿಯುತ್ತಿರುವ ಬೆಲ್ಲ ಹಾಕಿ ನ೦ತರ ಬೆರಳಲ್ಲಿ ತಿರುಗಿಸಿ ಅದು ಸಣ್ಣ ಉ೦ಡೆ ಥರ ಮಾಡಲು ಬ೦ದಿದೆ ಅ೦ದರೆ ಪಾಕ ಬ೦ದ೦ತೆ, ನೀರಿನೊಡನೆ ಕಲೆಸಿಹೋದರೆ ಪಾಕ ಬ೦ದಿಲ್ಲ ಎ೦ದು ಅರ್ಥ. (ಬೆಲ್ಲ ಉಕ್ಕಿ ಬರದ೦ತೆ ಆಗಾಗ ಸೌಟು ಆಡಿಸುತ್ತಿರಬೇಕು.)

ಬುಧವಾರ, ಏಪ್ರಿಲ್ 22, 2015

ಗೋಭಿ ಪರೋಟ (ವಿಧಾನ 2) :

ಸಾಮಗ್ರಿಗಳು: 
ಹೂಕೋಸು (ಗೋಬಿ) : 1 (ಮಧ್ಯಮ ಗಾತ್ರ),
ಧನಿಯಾ ಪುಡಿ : 1/2 ಟೇಬಲ್ ಚಮಚ,
ಜೀರಿಗೆ ಪುಡಿ : 1/2 ಟೇಬಲ್ ಚಮಚ,
ಗರಂ ಮಸಾಲಾ ಪುಡಿ : 1/2 ಟೇಬಲ್ ಚಮಚ,
ಅಚ್ಚ ಮೆಣಸಿನ ಪುಡಿ : 1/2 ಟೇಬಲ್ ಚಮಚ,
ಅರಿಶಿನ ಪುಡಿ : 1/4 ಟೇಬಲ್ ಚಮಚ,
ಕೊತ್ತಂಬರಿ ಸೊಪ್ಪು : 2 ಚಮಚ ಸಣ್ಣ ಹೆಚ್ಚಿದ್ದು
ಎಣ್ಣೆ : 1 ಚಮಚ,
ಉಪ್ಪು :  1/4 ಟೇಬಲ್ ಚಮಚ,
ತುಪ್ಪ : ಪರೋಟ ಬೇಯಿಸಲು 

ಪರೋಟ ಹಿಟ್ಟು ತಯಾರಿಸಲು ಸಾಮಗ್ರಿಗಳು :
ಗೋಧಿ ಹಿಟ್ಟು : 3 ಕಪ್,
ಮೊಸರು : 2-3 ಟೇಬಲ್ ಚಮಚ,
ಉಪ್ಪು : 1/2 ಟೀ ಚಮಚ,
ತುಪ್ಪ / ಎಣ್ಣೆ : 2-3 ಟೇಬಲ್ ಚಮಚ,
ನೀರು ಅಗತ್ಯವಿದ್ದಷ್ಟು 

ವಿಧಾನ: 
ಹೂಕೋಸನ್ನು ಬಿಡಿಸಿಕೊಂಡು (ದೊಡ್ಡ ಹೋಳುಗಳೇ ಇರಲಿ), ಸೋಸಿಕೊಂಡು ಸ್ವಲ್ಪ ಬೆಚ್ಚಗಿನ ನೀರಿಗೆ 1/4 ಚಮಚ ಅರಿಶಿನ ಮತ್ತು ಉಪ್ಪು ಹಾಕಿಡಿ. ಒಂದು ಅಗಲವಾದ ಪಾತ್ರೆಗೆ ಮೊಸರು, ಉಪ್ಪು, ತುಪ್ಪ  ಅಥವಾ ಎಣ್ಣೆ, 1.5 ಕಪ್ ನಷ್ಟು ನೀರು ಹಾಕಿಕೊಂಡು ಕಲಕಿಕೊಂಡು ಇದಕ್ಕೆ ಸ್ವಲ್ಪ ಸ್ವಲ್ಪ ಗೋಧಿ ಹಿಟ್ಟು ಹಾಕುತ್ತಾ ಕಲಸಿ, ಚಪಾತಿ ಹಿಟ್ಟಿನಕಿಂತಾ ಗಟ್ಟಿ ಕಲಸಿ ಚೆನ್ನಾಗಿ ನಾದಿಕೊಂಡು ಮುಚ್ಚಿಡಿ. 

ಈಗ  ನೆನೆಸಿಟ್ಟ ಹೂಕೋಸನ್ನು ತೆಗೆದು ತುರಿದಿಟ್ಟುಕೊಳ್ಳಿ. 

ಒಂದು ಬಾಣಲೆಗೆ ಎಣ್ಣೆ ಹಾಕಿ ಕಾಯಿಸಿ ಅರಿಶಿನ ಪುಡಿ ಹಾಕಿ ತಕ್ಷಣ ತುರಿದಿಟ್ಟುಕೊಂಡ ಹೂಕೋಸನ್ನು ಹಾಕಿ ಕಲಕಿ. ನಂತರ ಧನಿಯಾ ಪುಡಿ, ಜೀರಿಗೆ ಪುಡಿ, ಗರಂ ಮಸಾಲಾ ಪುಡಿ, ಕೊತ್ತಂಬರಿ ಸೊಪ್ಪು, ಉಪ್ಪು ಎಲ್ಲವನ್ನೂ ಒಂದೊಂದಾಗಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಹೂಕೋಸು ನೀರು ಬಿಟ್ಟುಕೊಳ್ಳದಿದ್ದರೆ ಸ್ವಲ್ಪವೇ ನೀರು ಚಿಮಿಕಿಸಿ ಮುಚ್ಚಿ, ಆಗಾಗ ಕಲಕುತ್ತಾ ನೀರು ಪೂರ್ತಿ ಆರುವವರೆಗೆ ಬೇಯಿಸಿ. ಮಿಶ್ರಣ ತಣ್ಣಗಾಗಲು ಬಿಡಿ. 

ನಂತರ ಪರೋಟ ಹಿಟ್ಟಿನಿಂದ ದೊಡ್ಡ ಲಿಂಬು ಗಾತ್ರದ ಉಂಡೆ ಮಾಡಿಕೊಂಡು ಸಣ್ಣ ಪೂರಿ ಲಟ್ಟಿಸಿ ಅದರಲ್ಲಿ ಅರ್ಧ ಚಮಚದಷ್ಟು ಹೂಕೋಸಿನ ಮಿಶ್ರಣ ತುಂಬಿ ಸರಿಯಾಗಿ ಮುಚ್ಚಿ ಮತ್ತೆ ಲಟ್ಟಿಸಿಕೊಂಡು ಕಾದ ಕಾವಲಿಗೆ ಹಾಕಿ ಎರಡೂ ಕಡೆ ತುಪ್ಪ ಹಾಕಿ ಬೇಯಿಸಿ. 


ಬಿಸಿ ಬಿಸಿ ಹೂಕೋಸಿನ ಪರೋಟವನ್ನು ಗಟ್ಟಿ ಮೊಸರು ಮತ್ತು ಉಪ್ಪಿನ ಕಾಯಿಯೊಂದಿಗೆ ಸವಿಯಿರಿ. 
 



ಸಲಹೆಗಳು:
1) ಗೋಧಿ ಹಿಟ್ಟಿನ ಜೊತೆ ಮೈದಾ ಸೇರಿಸಬಹುದು. ಮೈದಾ ಆರೋಗ್ಯಕ್ಕೆ ಒಳ್ಳೆಯದಲ್ಲವಾದ್ದರಿಂದ ನಾನು ಉಪಯೋಗಿಸುವುದಿಲ್ಲ. 
2) ಮೊಸರು ಇಷ್ಟವಿಲ್ಲದಿದ್ದರೆ ಬೇರೆ ಸಬ್ಜಿಯೊಟ್ಟಿಗೂ ಸವಿಯಬಹುದು. 
3) ಇದೇ ತರಹ ಕ್ಯಾರಟ್ ಪರೋಟ ಮಾಡಬಹುದು.
4) ಗೋಭಿ ಜೊತೆ ಸಣ್ಣ ಹೆಚ್ಚಿದ ಈರುಳ್ಳಿ ಕೂಡ ಸೇರಿಸಬಹುದು. ಗರಂ ಮಸಾಲ ಬದಲು ಪಾವ್ ಬಾಜಿ ಮಸಾಲ ಪುಡಿ ಹಾಕಬಹುದು, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಕೂಡ ಹಾಕಬಹುದು. 

ಬುಧವಾರ, ಏಪ್ರಿಲ್ 15, 2015

ಗೋಬಿ - ಈರುಳ್ಳಿ ಪರೋಟ:


ಸಾಮಗ್ರಿಗಳು : ಗೋಬಿ - 1 ಬೌಲ್, ಈರುಳ್ಳಿ - 2, ಹಸಿಮೆಣಸು 4, ಎಣ್ಣೆ 1/2 ಕಪ್, ಉಪ್ಪು ರುಚಿಗೆ ತಕ್ಕಷ್ಟು, ಗೋಧಿಹಿಟ್ಟು 1ಕಪ್, ಮೈದಾಹಿಟ್ಟು 1/2 ಕಪ್.




ವಿಧಾನ : 
ಗೋಬಿಯನ್ನು ಸಣ್ಣದಾಗಿ ಬಿಡಿಸಿಕೊ೦ಡು ಬೇಯಿಸಿ ನೀರು ಬಸಿದಿಟ್ಟುಕೊಳ್ಳಿ. ಈಗ ಬಾಣಲೆಗೆ ಎಣ್ಣೆ ಹಾಕಿ ಅದು ಕಾದ ಮೇಲೆ ಸಣ್ಣದಾಗಿ ಹೆಚ್ಚಿದ ಈರುಳ್ಳಿ, ಹಸಿಮೆಣಸು, & ಗೋಬಿಯನ್ನು ಹಾಕಿ ಉಪ್ಪು ಹಾಕಿ ೧೦ ನಿಮಿಷ ಫ್ರೈ ಮಾಡಿ. ಅದನ್ನು ಉರಿಯಿ೦ದ ಇಳಿಸಿಡಿ. ಗೋಧಿಹಿಟ್ಟು, ಮೈದಾಹಿಟ್ಟು & ಉಪ್ಪು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲೆಸಿಟ್ಟುಕೊಳ್ಳಿ. ೧೦ ನಿಮಿಷಬಿಟ್ಟು ಈ ಹಿಟ್ಟನ್ನು ತೆಗೆದುಕೊ೦ಡು ಗೋಬಿ ಮಿಶ್ರಣವನ್ನು ಇದರಲ್ಲಿ ತು೦ಬಿ ಪ್ಲಾಸ್ಟಿಕ್ ಕವರ್ ಮೇಲೆ ಎಣ್ಣೆ ಸವರಿಕೊ೦ಡು ಇದನ್ನು ಲಟ್ಟಿಸಿ. ಕಾವಲಿಯನ್ನು ಬಿಸಿಗೆ ಇಟ್ಟುಕೊ೦ಡು ಅದು ಬಿಸಿಯಾದ ಮೇಲೆ ಈ ಪರೋಟವನ್ನು ಕಾವಲಿಗೆ ಹಾಕಿ ಎಣ್ಣೆ ಸವರಿ ಎರಡೂ ಕಡೆ ಚೆನ್ನಾಗಿ ಬೇಯಿಸಿ. ಈಗ ಈ ಬಿಸಿ ಬಿಸಿ ಪರೋಟವನ್ನು ಮೊಸರು & ಉಪ್ಪಿನಕಾಯಿಯೊ೦ದಿಗೆ ಸವಿಯಿರಿ.

ಸಲಹೆ : ಇದೇ ಥರ ಆಲೂ ಈರುಳ್ಳಿ ಪರೋಟವನ್ನು ಮಾಡಬಹುದು.

ಬುಧವಾರ, ಏಪ್ರಿಲ್ 8, 2015

ಮಾವಿನ ಕಾಯಿ ಚಟ್ನಿ :

ಸಾಮಗ್ರಿಗಳು: 
ಮಾವಿನ ಕಾಯಿ : ೧/೨ (ಮಧ್ಯಮ ಗಾತ್ರದ್ದು)
ತೆಂಗಿನ ತುರಿ : ೧/೨ ಕಪ್,
ಒಣ ಮೆಣಸಿನ ಕಾಯಿ: ೪-೫, 
ಉದ್ದಿನ ಬೇಳೆ : ೧/೪ ಚಮಚ,
ಎಣ್ಣೆ : ೧/೪ ಚಮಚ,
ಸಕ್ಕರೆ : ೧/೪ ಟೀ ಚಮಚ (ಬೇಕಿದ್ದಲ್ಲಿ ಮಾತ್ರ),
ಉಪ್ಪು ರುಚಿಗೆ 

ಒಗ್ಗರಣೆಗೆ :
ಎಣ್ಣೆ : ೧ ಚಮಚ,
ಸಾಸಿವೆ : ೧/೪ ಚಮಚ,
ಕರಿಬೇವು : ೩-೪ ಎಲೆಗಳು. 

ವಿಧಾನ : ಮಾವಿನಕಾಯಿ ಸಿಪ್ಪೆ ತೆಗೆದು, ಸ್ವಲ್ಪ ಸಣ್ಣಗೆ ಹೆಚ್ಚಿಕೊಳ್ಳಿ, ಉದ್ದಿನಬೇಳೆ ಮತ್ತು ಒಣ ಮೆಣಸಿನಕಾಯಿಗೆ ಎಣ್ಣೆ ಹಾಕಿ ಸ್ವಲ್ಪ ಹುರಿದುಕೊಳ್ಳಿ. ನಂತರ ಹುರಿದ ಮಿಶ್ರಣ, ಹೆಚ್ಚಿದ ಮಾವಿನಕಾಯಿ, ತೆಂಗಿನ ತುರಿ, ಉಪ್ಪು, ಸಕ್ಕರೆ ಹಾಕಿ ಸ್ವಲ್ಪವೇ ತರಿ ತರಿಯಾಗಿ ರುಬ್ಬಿಕೊಳ್ಳಿ. ನಂತರ ಇದಕ್ಕೆ ಎಣ್ಣೆ, ಸಾಸಿವೆ, ಕರಿಬೇವಿನ ಒಗ್ಗರಣೆ ಮಾಡಿ. ಹುಳಿ - ಖಾರದ ಚಟ್ನಿಯನ್ನು ಬಿಸಿ ಬಿಸಿ ಅನ್ನಕ್ಕೆ ಕಲೆಸಿ ಸವಿಯಿರಿ. 


ಸೂಚನೆ: 
1) ಮಾವಿನಕಾಯಿಯ ಹುಳಿಯ ಅನುಸಾರ ಪ್ರಮಾಣವನ್ನು ಬದಲಿಸಬೇಕು. 
2) ಒಣ ಮೆಣಸಿನ ಕಾಯಿಯ ಬದಲು ಹಸಿಮೆಣಸಿನ ಕಾಯಿ ಉಪಯೋಗಿಸಬಹುದು. 

ಬುಧವಾರ, ಏಪ್ರಿಲ್ 1, 2015

ಕೋಡುಬಳೆ:



ಸಾಮಗ್ರಿಗಳು: ಚಿರೋಟಿ ರವಾ 2 ಚಮಚ, ಮೈದಾ ಹಿಟ್ಟು 2 ಚಮಚ, ಅಕ್ಕಿಹಿಟ್ಟು 1 ½ ಕಪ್, ಓಮು ½ ಚಮಚ, ಜೀರಿಗೆ 1 ಚಮಚ , ಉಪ್ಪು ರುಚಿಗೆ ತಕ್ಕಷ್ಟು, ಎಣ್ಣೆ ಕರಿಯಲು, ಇ೦ಗು ಚಿಟಿಕೆ, ಅಚ್ಚಖಾರದ ಪುಡಿ 2 ಚಮಚ.

ವಿಧಾನ : ಚಿರೋಟಿ ರವಾ, ಮೈದಾ ಹಿಟ್ಟು, ಅಕ್ಕಿಹಿಟ್ಟು, ಓಮು, ಜೀರಿಗೆ, ಉಪ್ಪು, ಇ೦ಗು, ಅಚ್ಚಖಾರದ ಪುಡಿ ಇವೆಲ್ಲವನ್ನು ಸೇರಿಸಿ 2 ಚಮಚ ಬಿಸಿ ಎಣ್ಣೆಯನ್ನು ಇದಕ್ಕೆ ಹಾಕಿ. ನ೦ತರ ಕೈಯಲ್ಲಿ ಸರಿಯಾಗಿ ಮಿಕ್ಸ್ ಮಾಡಿ. ಈಗ ಈ ಮಿಶ್ರಣಕ್ಕೆ ನೀರು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಸ್ವಲ್ಪ ಮೃದುವಾಗಿ ಕಲೆಸಿಕೊಳ್ಳಿ. 20 ನಿಮಿಷ ಹಾಗೆ ಬಿಡಿ. ನ೦ತರ ಗೋಲಿಯಾಕಾರದಷ್ಟು ದೊಡ್ಡ ಉ೦ಡೆಯನ್ನು ತೆಗೆದುಕೊ೦ಡು ಉದ್ದುದ್ದಕ್ಕೆ ಹೊಸೆದು ಅದರ ಎರಡು ತುದಿಗಳನ್ನು ಗೋಲಾಕಾರ ಬರುವ೦ತೆ ಸೇರಿಸಿ. ಒಲೆಯಮೇಲೆ ಬಾಣಲಿ ಇಟ್ಟು ಎಣ್ಣೆ ಹಾಕಿ ಅದು ಕಾದ ನ೦ತರ ಗೋಲಾಕಾರವಾಗಿ ಹೊಸೆದಿಟ್ಟ ಹಿಟ್ಟನ್ನು ಕಡಿಮೆ ಉರಿಯಲ್ಲಿ ಹೊ೦ಬಣ್ಣಕ್ಕೆ ಬರುವಷ್ಟು ಕರಿದರೆ, ರುಚಿಯಾದ ಬಿಸಿ ಬಿಸಿ ಕೋಡುಬಳೆ ತಿನ್ನಲು ಸಿದ್ದ.