ಶುಕ್ರವಾರ, ಜನವರಿ 22, 2016

ತೊಂಡೆಕಾಯಿ ಗೊಜ್ಜು :

ಸಾಮಗ್ರಿಗಳು :
ತೊಂಡೆಕಾಯಿ - 6-8,
ಹಸಿಮೆಣಸಿನ ಕಾಯಿ - 2-3, (ನಿಮ್ಮ ಖಾರಕ್ಕೆ ತಕ್ಕಷ್ಟು)
ಹುಣಸೆ ಹಣ್ಣು - ಸಣ್ಣ ನೆಲ್ಲಿಕಾಯಿ ಗಾತ್ರ,
ತೆಂಗಿನ ತುರಿ - 1 ಕಪ್,
ಉಪ್ಪು - ರುಚಿಗೆ 

ಒಗ್ಗರಣೆಗೆ :
ಎಣ್ಣೆ - 2 ಚಮಚ,
ಉದ್ದಿನಬೇಳೆ - 1/2 ಚಮಚ,
ಜೀರಿಗೆ - ಸಾಸಿವೆ - 1/4 ಚಮಚ 

ವಿಧಾನ :
ತೊಂಡೆಕಾಯಿಯನ್ನು ಹೆಚ್ಚಿಕೊಂಡು ನೀರು, ಹುಣಸೆಹಣ್ಣು, ಹಸಿಮೆಣಸಿನ ಕಾಯಿ ಹಾಕಿ ಬೇಯಿಸಿ. ಇದು ತಣ್ಣಗಾದ ಮೇಲೆ ತೆಂಗಿನ ತುರಿ, ಉಪ್ಪು ಹಾಕಿ ಸ್ವಲ್ಪ ತರಿ ತರಿಯಾಗಿ ರುಬ್ಬಿ. ಇದಕ್ಕೆ ಎಣ್ಣೆ, ಉದ್ದಿನಬೇಳೆ, ಜೀರಿಗೆ, ಸಾಸಿವೆ ಒಗ್ಗರಣೆ ಮಾಡಿದರೆ  ತೊಂಡೆಕಾಯಿ ಗೊಜ್ಜು ಬಿಸಿ ಬಿಸಿ ಅನ್ನದ ಜೊತೆ ಸವಿಯಲು ಸಿದ್ಧ. 


ಸಲಹೆ :
ಇದೇ ರೀತಿ ಬದನೇಕಾಯಿ ಗೊಜ್ಜನ್ನು ಮಾಡಬಹುದು. 

ಶುಕ್ರವಾರ, ಜನವರಿ 15, 2016

ಮರಿಗೆ ಗೊಜ್ಜು :



ಹಿ೦ದಿನ ಕಾಲದಲ್ಲಿ ಈಗಿನ೦ತೆ ಸ್ಟೀಲ್, ಆಲ್ಯೂಮಿನಿಯಮ್, ಪಾತ್ರೆಗಳು ಇರಲಿಲ್ಲ. ಯಾವುದೆ ಅಡಿಗೆಯನ್ನಾದರೂ ಮಡಿಕೆ ಅಥವಾ ಮರದಿ೦ದ ಮಾಡಿದ ಪಾತ್ರೆಯಲ್ಲಿ ಮಾಡಬೇಕಾಗಿತ್ತು. ಈ ಮರಿಗೆ ಎನ್ನುವುದು ಮರದಿ೦ದ ಮಾಡಿದ ಪಾತ್ರೆ. (ಹಸಿಮೆಣಸು, ಎಳ್ಳು, ಸಾಸಿವೆ ಹುರಿದುಕೊ೦ಡು ಮರಿಗೆಯಲ್ಲಿ ಹಾಕಿ ಸೌಟಿನಿ೦ದ ಅರೆದು ಅದಕ್ಕೆ ಮೊಸರು ಸೇರಿಸುತ್ತಿದ್ದರು) ಈ ಗೊಜ್ಜನ್ನು ಯಾವಾಗಲೂ ಮರಿಗೆಯಲ್ಲೆ ಮಾಡುತ್ತಿದ್ದವಾದ್ದರಿ೦ದ ಮರಿಗೆ ಗೊಜ್ಜು ಅ೦ತ ಹೆಸರು ಬ೦ದಿದೆ.

ಬೇಕಾಗುವ ಸಾಮಗ್ರಿಗಳು :
ಗಟ್ಟಿ ಮೊಸರು 1ಕಪ್
ಹಸಿಮೆಣಸು/ಸೂಜಿಮೆಣಸು 5-6
ಸಾಸಿವೆ 1ಟೀ ಚಮಚ
ಎಳ್ಳು 1ಟೀ ಚಮಚ,
ಬೆಳ್ಳುಳ್ಳಿ 4ಎಸಳು
ಉಪ್ಪುರುಚಿಗೆ ತಕ್ಕಷ್ಟು
ಎಣ್ಣೆ 1/2 ಚಮಚ .






ವಿಧಾನ:
ಒ೦ದು ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಸಾಸಿವೆ, ಹಸಿಮೆಣಸು ಹಾಕಿ ಹುರಿದುಕೊಳ್ಳಿ. ಕೊನೆಯಲ್ಲಿ ಎಳ್ಳು ಹಾಕಿ. ಬಿಸಿ ಆರಿದಮೇಲೆ ಬೆಳ್ಳುಳ್ಳಿ ಉಪ್ಪು ಸೇರಿಸಿ ನುಣ್ಣಗೆ ರುಬ್ಬಿ. ಬೇಕಾದಲ್ಲಿ ರುಬ್ಬುವಾಗ ೨ ಚಮಚ ಮೊಸರು ಸೇರಿಸಬಹುದು. ಈ ರುಬ್ಬಿದ ಮಿಶ್ರಣವನ್ನು ಮೊಸರಿಗೆ ಸೇರಿಸಿದರೆ ಖಾರವಾದ ಮರಿಗೆ ಗೊಜ್ಜು ಅನ್ನದ ಜೊತೆ ಸವಿಯಲು ಸಿದ್ಧ.

(ಸೂಚನೆ: ನಿಮ್ಮ ಖಾರಕ್ಕೆ ಅನುಗುಣವಾಗಿ ಹಸಿಮೆಣಸು ಸೇರಿಸಿ.

ಮೊಸರು ಸ್ವಲ್ಪ ಹುಳಿ ಇದ್ದರೂ ಮರಿಗೆ ಗೊಜ್ಜು ರುಚಿ ಬರುತ್ತದೆ.)


ಶುಕ್ರವಾರ, ಜನವರಿ 8, 2016

ರಾಗಿ - ತರಕಾರಿ ಸೂಪ್ :

ಸಾಮಗ್ರಿಗಳು :
ಮಿಶ್ರ ತರಕಾರಿ : 1.5 ಕಪ್ (ಬೀನ್ಸ್, ಕ್ಯಾರಟ್, ಕ್ಯಾಬೇಜ್)
ಸಣ್ಣಗೆ ಹೆಚ್ಚಿದ ಪಾಲಕ್ ಸೊಪ್ಪು : 1/4 ಕಪ್,
ರಾಗಿ ಹಿಟ್ಟು : 1- 1.5 ಟೇಬಲ್ ಚಮಚ,
ಉಪ್ಪು : ರುಚಿಗೆ,
ಲಿಂಬು : ಅರ್ಧ 

ಪೇಸ್ಟ್ ಗೆ ಸಾಮಗ್ರಿಗಳು :
ಬೆಳ್ಳುಳ್ಳಿ : 5-6 ಎಸಳು,
ಒಣ ಮೆಣಸಿನ ಕಾಯಿ : 7-8,

ಪೇಸ್ಟ್ ಮಾಡುವ ವಿಧಾನ : ಒಣ ಮೆಣಸಿನ ಕಾಯನ್ನು 15-20 ನಿಮಿಷ ಸ್ವಲ್ಪ ಬಿಸಿ ನೀರಿನಲ್ಲಿ ನೆನೆಸಿ. ನಂತರ ಒಣಮೆಣಸು ಮತ್ತು ಬೆಳ್ಳುಳ್ಳಿ ಹಾಕಿ ರುಬ್ಬಿ. ಇದನ್ನು ಜಾಸ್ತಿ ಇದ್ದರೆ ಫ್ರಿಡ್ಜ್ ನಲ್ಲಿ ಸ್ವಲ್ಪ ದಿನಗಳವರೆಗೆ ಇಟ್ಟುಕೊಳ್ಳಬಹುದು. 

ಸೂಪ್ ಮಾಡುವ ವಿಧಾನ:
ತರಕಾರಿಗಳನ್ನು ಸಣ್ಣಗೆ ಹೆಚ್ಚಿಕೊಳ್ಳಬೇಕು. ಕ್ಯಾಬೇಜ್ ಅನ್ನು ಸ್ವಲ್ಪ ಉದ್ದುದ್ದಕ್ಕೆ, ತೆಳ್ಳಗೆ ಹೆಚ್ಚಿಕೊಳ್ಳಿ. ರಾಗಿ ಹಿಟ್ಟಿಗೆ ಸ್ವಲ್ಪ ನೀರು ಹಾಕಿ ಗಂಟಾಗದಂತೆ ಕಲಕಿಕೊಳ್ಳಿ. ಎರಡೂವರೆ ಮೂರು ಕಪ್ ನಷ್ಟು ನೀರನ್ನು ಕುದಿಸಿ. 

ಅದಕ್ಕೆ ಹೆಚ್ಚಿದ ತರಕಾರಿ ಸ್ವಲ್ಪ ಉಪ್ಪು ಹಾಕಿ ಅರ್ಧ ನಿಮಿಷಕ್ಕೆ ಪಾಲಕ್ ಸೊಪ್ಪು ಹಾಕಿ ಉಪ್ಪು, 1 ಟೇಬಲ್ ಚಮಚದಷ್ಟು ಮಾಡಿಟ್ಟುಕೊಂಡ ಪೇಸ್ಟ್ ಹಾಕಿ ಕಲಕಿ. ತಕ್ಷಣ ರಾಗಿ ನೀರನ್ನು ಹಾಕಿ ರಾಗಿ ಬೇಯುವ ತನಕ ಕುದಿಸಿ. ಕೊನೆಯಲ್ಲಿ ಲಿಂಬುರಸ ಹಾಕಿ ಕೆಳಗಿಳಿಸಿದರೆ ಬಿಸಿ ಬಿಸಿ ಸೂಪ್ ರೆಡಿ. 


ಸೂಚನೆಗಳು:
1) ತರಕಾರಿ ಅರ್ಧ ಮಾತ್ರ ಬೇಯುವಂತೆ ಎಚ್ಚರ ವಹಿಸಿ. 
2) ಈ ಸೂಪ್ ಗರ್ಭಿಣಿಯರಿಗೆ ಆರೋಗ್ಯಕರ. 
3) ಡಯಟ್ ಮಾಡುವವರು ಬೇರೆ ಗಟ್ಟಿ ಆಹಾರ ಬಿಟ್ಟು ಇದನ್ನೇ ಅಭ್ಯಾಸ ಮಾಡಿಕೊಂಡರೆ ಅಗತ್ಯ ಪೋಷಕಾಂಶಗಳ ಜೊತೆ ರುಚಿಯಾಗಿಯೂ ಇರುತ್ತದೆ. 

ಗುರುವಾರ, ಡಿಸೆಂಬರ್ 31, 2015

ಸವತೆಕಾಯಿ ಖರೆ (ಖಾರದ ಕಡ್ಡಿ) :

ಸಾಮಗ್ರಿಗಳು : 
ಸವತೆಕಾಯಿ - 1
ಅಕ್ಕಿಹಿಟ್ಟು - 1/2 ಕೆ.ಜಿ
ಇ೦ಗು ಚಿಟಿಕೆ
ಜೀರಿಗೆ - 2 ಚಮಚ
ಓಮು - 1 ಚಮಚ
ಅಚ್ಚಖಾರದ ಪುಡಿ - 3  ಚಮಚ
 (ಹಸಿಮೆಣಸು 5)
ಉಪ್ಪು ರುಚಿಗೆ ತಕ್ಕಷ್ಟು
ಎಣ್ಣೆ ಕರಿಯಲು.





ವಿಧಾನ : ಸವತೆಕಾಯಿಯನ್ನು ಸಿಪ್ಪೆ ತೆಗೆದು ಹೆಚ್ಚಿಕೊ೦ಡು ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿಕೊಳ್ಳುವಾಗ ಇ೦ಗು, ಜೀರಿಗೆ, ಓಮು, ಅಚ್ಚಖಾರದ ಪುಡಿ ಹಾಕಿ. ಒ೦ದು ಪಾತ್ರೆಯಲ್ಲಿ ರುಬ್ಬಿದ ಸವತೆಕಾಯಿ ರಸ ಹಾಕಿ ಸಣ್ಣ ಉರಿಯಲ್ಲಿ ಒ೦ದು ಕುದಿ ಬ೦ದ ಮೇಲೆ ಉಪ್ಪು ಹಾಕಿ ಹಾಗೆ ಸ್ವಲ್ಪ ಸ್ವಲ್ಪ ಅಕ್ಕಿ ಹಿಟ್ಟು ಸೇರಿಸುತ್ತಿರಿ. ಈಗ ಉರಿ ಆರಿಸಿ. ಸ್ವಲ್ಪ ಬಿಸಿ ಆರಿದಮೇಲೆ ಹಿಟ್ಟನ್ನು ಚೆನ್ನಾಗಿ ಕಲೆಸಿಕೊಳ್ಳಿ. ಚಪಾತಿ ಹಿಟ್ಟಿನ ಹದಕ್ಕೆ ಬರಬೇಕು. ಬೇಕಾದಲ್ಲಿ ಸ್ವಲ್ಪ ಹಿಟ್ಟು ಸೇರಿಸಬಹುದು. ಬಾಣಲೆಯಲ್ಲಿ ಎಣ್ಣೆ ಕಾಯಲು ಇಟ್ಟು ಹಿಟ್ಟನ್ನು ಮಟ್ಟಿನಲ್ಲಿ ಹಾಕಿ ಎಣ್ಣೆ ಕಾದ ಮೇಲೆ ಬಾಣಲೆಗೆ ಹಿಟ್ಟನ್ನು ಒತ್ತಬೇಕು. ಹದವಾದ ಉರಿಯಲ್ಲಿ ಬೇಯಿಸಿ. ಈಗ ಸವತೆಕಾಯಿ ಖರೆ ರೆಡಿ.

ಗುರುವಾರ, ಡಿಸೆಂಬರ್ 24, 2015

ಕ್ಯಾರಟ್ ಹಶಿ / ಮೊಸರು ಬಜ್ಜಿ :

ಸಾಮಗ್ರಿಗಳು:
ಕ್ಯಾರಟ್ : 1 ,
ಈರುಳ್ಳಿ : 1/2,
ತೆಂಗಿನ ತುರಿ : 1/2 ಕಪ್,
ಮೊಸರು : 1/2 ಕಪ್,
ಸಕ್ಕರೆ : 1/4 ಚಮಚ, 
ಉಪ್ಪು: ರುಚಿಗೆ 

ಒಗ್ಗರಣೆಗೆ: 
ಎಣ್ಣೆ: 1 ಚಮಚ,
ಉದ್ದಿನ ಬೇಳೆ : 1/2 ಚಮಚ,
ಸಾಸಿವೆ: 1/4 ಚಮಚ,
ಹಸಿಮೆಣಸಿನ ಕಾಯಿ: 1,
ಒಣಮೆಣಸಿನ ಕಾಯಿ : 2 ಚೂರು

ವಿಧಾನ:
ಕ್ಯಾರಟ್  ತೆಗೆದು ತುರಿದು ಒಂದು ಪಾತ್ರೆಗೆ ಹಾಕಿ,  ಇದಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ ಮತ್ತು ಮತ್ತು ಮೊಸರು ಹಾಕಿ. ತೆಂಗಿನ ತುರಿಗೆ  ನೀರು ಹಾಕಿ ನುಣ್ಣಗೆ ರುಬ್ಬಿಕೊಂಡು ಇದಕ್ಕೆ ಸೇರಿಸಿಕೊಳ್ಳಿ. ನಂತರ ಉಪ್ಪು, ಸಕ್ಕರೆ, ಬೇಕಿದ್ದಲ್ಲಿ ಸ್ವಲ್ಪ ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಒಗ್ಗರಣೆ ಸೌಟಿಗೆ ಎಣ್ಣೆ, ಉದ್ದಿನ ಬೇಳೆ ಹಾಕಿ ಸ್ವಲ್ಪ ಕಂದು ಬಣ್ಣವಾದಾಗ ಒಣಮೆಣಸಿನ ಚೂರು, ಸಾಸಿವೆ ಹಾಕಿ ಸಿಡಿಸಿ.  ಇದಕ್ಕೆ ಹೆಚ್ಚಿದ ಹಸಿಮೆಣಸಿನ ಕಾಯಿ ಹಾಕಿ ಸ್ವಲ್ಪ ಹುರಿದು ಮೊಸರು ಬಜ್ಜಿಗೆ ಹಾಕಿ ಚೆನ್ನಾಗಿ  ಕಲಕಿ. ಇದನ್ನು ಅನ್ನದ ಜೊತೆ ಅಥವಾ ಪಲಾವ್ ಇತ್ಯಾದಿ ರೈಸ್ ಬಾತ್ ಜೊತೆ ಸವಿಯಬಹುದು.   



ಬುಧವಾರ, ಡಿಸೆಂಬರ್ 16, 2015

ಗೋಧಿ ಹಿಟ್ಟಿನ ದೋಸೆ :

ಸಾಮಗ್ರಿಗಳು:
ಗೋಧಿ ಹಿಟ್ಟು : 1 ಕಪ್,
ಅಕ್ಕಿ ಹಿಟ್ಟು : 1 ಟೇಬಲ್ ಚಮಚ,
ಬೆಲ್ಲ : 3-4 ಚಮಚ,
ತೆಂಗಿನ ತುರಿ : 2 ಚಮಚ,
ಉಪ್ಪು : ರುಚಿಗೆ 

ವಿಧಾನ :
ಮಿಕ್ಸಿಗೆ ಗೋಧಿ ಹಿಟ್ಟು, ಅಕ್ಕಿ ಹಿಟ್ಟು, ನೀರು ಹಾಕಿ ಗಂಟಿಲ್ಲದೇ ರುಬ್ಬಿ. ಅಥವಾ ಪಾತ್ರೆಗೆ ಹಾಕಿ ಸೌಟಿನಲ್ಲೇ ಗಂಟಿಲ್ಲದಂತೆ ಕಲಕಬಹುದು.
ಬೇರೆ ದೋಸೆ ಹಿಟ್ಟಿನಕಿಂತ ಸ್ವಲ್ಪ ತೆಳ್ಳಗೆ ಮಾಡಿಕೊಳ್ಳಿ. ಇದಕ್ಕೆ ಬೆಲ್ಲ, ಉಪ್ಪು, ತೆಂಗಿನ ತುರಿ ಹಾಕಿ ಚೆನ್ನಾಗಿ ಕಲಕಿ. ನಂತರ ಕಾದ ತವಾಗೆ ಎಣ್ಣೆ ಸವರಿ ತೆಳ್ಳಗೆ ದೋಸೆ ಮಾಡಿ ಎರಡೂ  ಕಡೆ ಬೇಯಿಸಿ.  


ಚಿತ್ರದಲ್ಲಿ ಇರುವುದಕ್ಕಿಂತ ಸ್ವಲ್ಪ ದಪ್ಪಗೆ ಕೂಡ ದೋಸೆ ಮಾಡಬಹುದು. ಬಿಸಿ ಬಿಸಿ, ಸಿಹಿ ದೋಸೆಯನ್ನು ತುಪ್ಪ ಮತ್ತು ಚಟ್ನಿಪುಡಿ ಜೊತೆ ಸರ್ವ್ ಮಾಡಿ. 



ಶುಕ್ರವಾರ, ಡಿಸೆಂಬರ್ 4, 2015

ಸ್ವೀಟ್ ಕಾರ್ನ್ ಸೂಪ್

ಸಾಮಗ್ರಿಗಳು:
ಸ್ವೀಟ್ ಕಾರ್ನ್ 1/2 ಕಪ್
ಕಾರ್ನ ಫ್ಲೋರ್ (ಜೋಳದ ಹಿಟ್ಟು) 2 ಟೇ. ಚಮಚ
ಈರುಳ್ಳಿ - 1/2
ಬೆಳ್ಳುಳ್ಳಿ - 2 ಎಸಳು
ಕಾಳುಮೆಣಸಿನ ಪುಡಿ
ಬೆಣ್ಣೆ.
ಉಪ್ಪು ರುಚಿಗೆ ತಕ್ಕಷ್ಟು.

ವಿಧಾನ : ಸ್ವೀಟ್ ಕಾರ್ನ್ ಬೇಯಿಸಿಕೊಳ್ಳಿ. ಅದರಲ್ಲಿ ಅರ್ಧದಷ್ಟು ಬದಿಗಿಟ್ಟುಕೊಳ್ಳಿ. ಉಳಿದರ್ಧಕ್ಕೆ ಈರುಳ್ಳಿ ಬೆಳ್ಳುಳ್ಳಿ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಸೂಪ್ ಮಾಡುವ ಪಾತ್ರೆಗೆ ಸ್ವಲ್ಪ ಬೆಣ್ಣೆ ಹಾಕಿ ಸಣ್ಣ ಉರಿಯಲ್ಲಿ ಇಡಿ. ಬೆಣ್ಣೆ ಕರಗಿದ ಮೇಲೆ ರುಬ್ಬಿದ ಮಿಶ್ರಣ ಹಾಕಿ ೨-೩ ನಿಮಿಷ ಫ್ರೈ ಮಾಡಿ. ನ೦ತರ ನೀರು ಉಪ್ಪು ಕೊತ್ತ೦ಬರಿಸೊಪ್ಪು ಸೇರಿಸಿ ಕುದಿಸಿ. ಕಾರ್ನ ಫ್ಲೋರ್ ನ್ನು ಸ್ವಲ್ಪ ನೀರು ಹಾಕಿ ಕದಡಿಕೊ೦ಡು (ಗ೦ಟಾಗದ೦ತೆ) ಸ್ವಲ್ಪ ಸ್ವಲ್ಪವಾಗಿ ಸೂಪ್ ಗೆ ಸೇರಿಸಿ. ಇದರಿ೦ದ ಸೂಪ್ ಹದವಾಗುತ್ತದೆ. ಕೊನೆಯಲ್ಲಿ ಕಾಳುಮೆಣಸಿನ ಪುಡಿ ಹಾಕಿ.  ಬದಿಗಿಟ್ಟ ಬೇಯಿಸಿದ ಸ್ವೀಟ್ ಕಾರ್ನ್ ಸ್ವಲ್ಪ ಸ್ವಲ್ಪ ಹಾಕಿ ಬಿಸಿ ಬಿಸಿ ಸೂಪ್ ಸರ್ವ ಮಾಡಿ.