ಸೋಮವಾರ, ನವೆಂಬರ್ 25, 2013

ಅಕ್ಕಿ - ರಾಗಿ ತಾಳಿಪಿಟ್ಟು (ವಡಪೆ / ರೊಟ್ಟಿ)

ಸಾಮಗ್ರಿ: ಸೌತೆಕಾಯಿ 1 (ಮೀಡಿಯಂ ಗಾತ್ರದ್ದು), ಕ್ಯಾರೆಟ್ 1, ಅಕ್ಕಿ ಹಿಟ್ಟು 2-3 ಕಪ್, ರಾಗಿ ಹಿಟ್ಟು 2-3 ಚಮಚ, ತೆಂಗಿನ ತುರಿ 2-3 ಚಮಚ, ಹೆಚ್ಚಿದ ಕೊತ್ತಂಬರಿ ಸೊಪ್ಪು1 ಚಮಚ (optional), ಸಣ್ಣಗೆ ಹೆಚ್ಚಿದ ಕರಿಬೇವು 1/2 ಚಮಚ, ಅಚ್ಚ ಮೆಣಸಿನ ಪುಡಿ 1 ಚಮಚ, ಎಣ್ಣೆ ಸ್ವಲ್ಪ, ಉಪ್ಪು ರುಚಿಗೆ. 



ವಿಧಾನ: ಸೌತೆಕಾಯಿ ಮತ್ತು ಕ್ಯಾರೆಟ್ ಸಿಪ್ಪೆ ತೆಗೆದು ಬೇರೆ ಬೇರೆಯಾಗಿ ತುರಿದುಕೊಳ್ಳಿ. ಒಂದು ಬಾಣಲೆಗೆ ತುರಿದ ಸೌತೆಕಾಯಿ ಹಾಕಿ ಒಲೆಯ ಮೇಲಿಡಿ.  ಸಣ್ಣಗೆ ಕುದಿ ಬರಲು ಶುರುವಾದಾಗ ತುರಿದ ಕ್ಯಾರೆಟ್ ಹಾಕಿ ಸ್ವಲ್ಪ ಬಿಸಿ ಮಾಡಿ ಅದಕ್ಕೆ ರಾಗಿ ಹಿಟ್ಟು ಹಾಕಿ ಕೆಳಗಿಳಿಸಿಕೊಂಡು,  ಅಕ್ಕಿ ಹಿಟ್ಟು, ತೆಂಗಿನ ತುರಿ, ಕೊತ್ತಂಬರಿ ಸೊಪ್ಪು, ಕರಿಬೇವು,  ಅಚ್ಚ ಮೆಣಸಿನ ಪುಡಿ, ಉಪ್ಪು ಹಾಕಿ ಕಲಸಿ. ಅಕ್ಕಿ ಹಿಟ್ಟನ್ನು ಒಮ್ಮೆಗೇ ಹಾಕದೇ ಸ್ವಲ್ಪ -ಸ್ವಲ್ಪ ಹಾಕುತ್ತ ಕಲಸಿ. ನೀರು ಹಾಕುವುದು ಬೇಡವಾದ್ದರಿಂದ ಕಲಸಿದ ಮಿಶ್ರಣ ಗಟ್ಟಿಯಾದರೆ ರೊಟ್ಟಿ ಗಟ್ಟಿಯಾಗುತ್ತದೆ. ಕಲಸಿದ ಮಿಶ್ರಣ ಎಣ್ಣೆ ಸವರಿಕೊಂಡ ಕೈಗೆ ಅಂಟದೇ ತಟ್ಟಲು ಬರುವಷ್ಟು ಗಟ್ಟಿಯಾದರೆ ಸಾಕು. (ರೊಟ್ಟಿ ತಟ್ಟಲು ಖಾಲಿಯಾದ ಎಣ್ಣೆ ಕವರ್ ಅನ್ನು ಕತ್ತರಿಸಿಕೊಂಡರೆ ಚೆನ್ನಾಗಾಗುತ್ತದೆ, ತೆಳುವಾದ ಅಲ್ಯೂಮಿನಿಯಂ ಹಾಳೆಯ ಮೇಲೆ ಕೂಡ ತಟ್ಟಬಹುದು). ಮಿಶ್ರಣವನ್ನು ಸಣ್ಣ ಕಿತ್ತಳೆ ಗಾತ್ರದ ಉಂಡೆ ಮಾಡಿಕೊಂಡು ಎಣ್ಣೆ ಸವರಿದ ಕವರ್ ಮೇಲಿಟ್ಟು ಕೈಗೆ ಎಣ್ಣೆ ಸವರಿಕೊಳ್ಳುತ್ತಾ ತೆಳುವಾಗಿ ತಟ್ಟಿ,  ತವಾ / ಕಾವಲಿಗೆ ಹಾಕಿ ಮೇಲಿನಿಂದ ಸ್ವಲ್ಪ ಎಣ್ಣೆ ಹಾಕಿ ಮುಚ್ಚಿ ಎರಡೂ ಕಡೆ ಬೇಯಿಸಿ, ಚೆಟ್ನಿ ಪುಡಿ - ಬೆಣ್ಣೆ ಅಥವಾ ಕಾಯಿ ಚೆಟ್ನಿ - ತುಪ್ಪದ ಜೊತೆ ಸವಿಯಿರಿ. 



ರೊಟ್ಟಿಗೊಂದು ಸಲಹೆ : ತಟ್ಟಿದ ಈ ರೊಟ್ಟಿಯನ್ನು ಕವರ್ ನಿಂದ ಬಿಡಿಸಿ ಕೈಗೆ ಹಾಕಿಕೊಂಡು ತವಾ ಮೇಲೆ ಹಾಕಬಹುದು.  ಸೌತೆಕಾಯಿ, ರಾಗಿ ಹಿಟ್ಟು ಹಾಕಿರುವುದರಿಂದ ಕವರ್ ಸಮೇತ ತವಾ ಮೇಲೆ ಮಗುಚಿ ಕವರ್ ಬಿಡಿಸುವ ಅಗತ್ಯವಿಲ್ಲ, ಕೈ ಇಂದ ತೆಗೆದು ಹಾಕಲು ಬರುತ್ತದೆ.

ಬುಧವಾರ, ನವೆಂಬರ್ 20, 2013

ಕ್ಯಾರೆಟ್ ಮಿಲ್ಕ್ ಶೇಕ್ :



ಬೇಕಾಗುವ ಸಾಮಾಗ್ರಿಗಳು: ಕ್ಯಾರೆಟ್ 2 ದೊಡ್ಡ ಗಾತ್ರದ್ದು, ಹಾಲು 1 ಲೀಟರ್ , ಗೋಡ೦ಬಿ 10-12, ಏಲಕ್ಕಿ 2, ಸಕ್ಕರೆ - ನಿಮ್ಮ ರುಚಿಗೆ ತಕ್ಕ೦ತೆ.




ಮಾಡುವ ವಿಧಾನ: ಕ್ಯಾರೆಟ್ ನ್ನು ತುರಿದುಕೊಳ್ಳಿ. ½ ಕಪ್ ಹಾಲು & ತುರಿದ ಕ್ಯಾರೆಟ್ ಹಾಕಿ 10 ನಿಮಿಷ ಬೇಯಿಸಿ (ಹಸಿ ವಾಸನೆ ಹೋಗುತ್ತದೆ). ಅದು ಆರಿದ ಮೇಲೆ ಬೇಯಿಸಿದ ಕ್ಯಾರೆಟ್ ಜೊತೆ ಗೋಡ೦ಬಿ ಹಾಕಿ ತರಿ ತರಿಯಾಗಿ ರುಬ್ಬಿಕೊ೦ಡು ಮತ್ತೆ ಹಾಲು, ಸಕ್ಕರೆ ಏಲಕ್ಕಿ ಸೇರಿಸಿ 10 ನಿಮಿಷ ಚೆನ್ನಾಗಿ ಕುದಿಸಿ ಉರಿ ಆರಿಸಿ. ಬಿಸಿ ಆರಿದ ಮೇಲೆ 2೦ ನಿಮಿಷ ಫ್ರಿಡ್ಜ್ ನಲ್ಲಿ ಇಟ್ಟು ಆಮೇಲೆ ಸರ್ವ ಮಾಡಿ.