ಬುಧವಾರ, ಸೆಪ್ಟೆಂಬರ್ 24, 2014

ಮೆಂತ್ಯ ಸೊಪ್ಪಿನ ತೊವ್ವೆ :

ಸಾಮಗ್ರಿಗಳು :
ಮೆಂತ್ಯ ಸೊಪ್ಪು : 1 ಕಟ್ಟು ಅಥವಾ ಸಣ್ಣಗೆ ಹೆಚ್ಚಿದ್ದು 1 ಕಪ್,
ತೆಂಗಿನ ತುರಿ : 1/2 ಕಪ್,
ತೊಗರಿಬೇಳೆ : 1/2 ಕಪ್,
ಅರಿಶಿನ : 1/4 ಚಮಚ, 
ಹಸಿಮೆಣಸಿನ ಕಾಯಿ : 2-3,
ಜೀರಿಗೆ : 1 ಟೀ ಚಮಚ,
ಸಾಸಿವೆ : 1/2 ಟೀ ಚಮಚ,
ಬೆಳ್ಳುಳ್ಳಿ : 6-8 ಎಸಳು,
ಕರಿಬೇವು : ಸ್ವಲ್ಪ,
ಎಣ್ಣೆ : 3-4ಚಮಚ,
ಸಕ್ಕರೆ : 1/4 ಟೀ ಚಮಚ,
ಉಪ್ಪು: ರುಚಿಗೆ,
ನಿಂಬೆ ರಸ : 2 ಟೇಬಲ್ ಚಮಚ

ವಿಧಾನ: 
ತೊಗರಿ ಬೇಳೆಯನ್ನು  ತೊಳೆದು ನೀರು, 1/4 ಚಮಚ ಎಣ್ಣೆ, ಚಿಟಿಕೆ ಅರಿಶಿನ ಪುಡಿ ಹಾಕಿ ಕುಕ್ಕರ್ ನಲ್ಲಿಟ್ಟು ಚೆನ್ನಾಗಿ ಬೇಯಿಸಿಕೊಳ್ಳಿ. ಒಂದು ಪಾತ್ರೆಗೆ ಒಂದು ಚಮಚ ಎಣ್ಣೆ ಹಾಕಿಕೊಂಡು, ತೊಳೆದು ಸಣ್ಣಗೆ ಹೆಚ್ಚಿದ ಮೆಂತ್ಯಸೊಪ್ಪು ಮತ್ತು ಸ್ವಲ್ಪ ಉಪ್ಪು ಹಾಕಿ ಅರ್ಧ ನಿಮಿಷ ಹುರಿಯಿರಿ. ನಂತರ ಇದಕ್ಕೆ ಸ್ವಲ್ಪ ನೀರು, ಸಕ್ಕರೆ, ನಿಂಬೆ ರಸ ಹಾಕಿ ಬೇಯಿಸಿ. ಮಿಕ್ಸಿ ಜಾರ್ ಗೆ ತೆಂಗಿನ ತುರಿ, ಜೀರಿಗೆ, ಸ್ವಲ್ಪ ಅರಿಶಿನ  ಪುಡಿ, ಹಸಿ ಮೆಣಸಿನ ಕಾಯಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.  ಸೊಪ್ಪು ಬೆಂದ ನಂತರ ಬೇಯಿಸಿಟ್ಟ ತೊಗರಿಬೇಳೆಯನ್ನು ಸೌಟಿನಿಂದ ಚೆನ್ನಾಗಿ ಅರೆದು ಹಾಕಿ, ರುಬ್ಬಿದ ಮಿಶ್ರಣವನ್ನು ಸೇರಿಸಿ, ಉಪ್ಪು, ಕರಿಬೇವು ಹಾಕಿ, ಸಾಂಬಾರ್ ಹದಕ್ಕೆ ನೀರು ಸೇರಿಸಿ ಕುದಿಸಿ. ಒಗ್ಗರಣೆ ಸೌಟಿಗೆ  ಎಣ್ಣೆ, ಸಾಸಿವೆ, ಜಜ್ಜಿದ ಬೆಳ್ಳುಳ್ಳಿ ಹಾಕಿ ಫ್ರೈ ಮಾಡಿ ಕುದಿಯುತ್ತಿರುವ ತೊವ್ವೆಗೆ ಹಾಕಿ ಒಂದೆರಡು ನಿಮಿಷ ಕುದಿಸಿ ಕೆಳಗಿಳಿಸಿ. ಬಿಸಿ ಬಿಸಿ ಅನ್ನ, ಮೆಂತ್ಯ ಸೊಪ್ಪಿನ ತೊವ್ವೆ ಜೊತೆ ಹಪ್ಪಳ / ಸಂಡಿಗೆ ಇದ್ದಾರೆ ಆಹಾ .....!!


ಅಡುಗೆ ಮನೆಗೆ ಸಲಹೆ : ಫ್ರಿಡ್ಜ್ ವಾಸನೆ ಆಗಿದ್ದರೆ ತಾಜಾ ಬ್ರೆಡ್ ತುಂಡೊಂದನ್ನು ಫ್ರಿಡ್ಜ್ ಒಳಗಿಟ್ಟರೆ ವಾಸನೆ ಕಮ್ಮಿಯಾಗುತ್ತದೆ. 

ಶುಕ್ರವಾರ, ಸೆಪ್ಟೆಂಬರ್ 19, 2014

ಬಾಳೇಹಣ್ಣಿನ ರೊಟ್ಟಿ:



ಸಾಮಗ್ರಿಗಳು : 
ಚೆನ್ನಾಗಿ ಕಳಿತ ಬಾಳೇಹಣ್ಣು 4 (ಪಚಬಾಳೆ)
ಗೋಧಿಹಿಟ್ಟು 2.5 ಕಪ್ 
ಬೆಲ್ಲ/ಸಕ್ಕರೆ 5-6 ಚಮಚ 
ಉಪ್ಪು ರುಚಿಗೆ ತಕ್ಕಷ್ಟು.





ವಿಧಾನ : ಬಾಳೇಹಣ್ಣು,ಬೆಲ್ಲ/ಸಕ್ಕರೆ, ಉಪ್ಪು ಇವೆಲ್ಲವನ್ನು ಮಿಕ್ಸಿಯಲ್ಲಿ ಹಾಕಿ ನುಣ್ಣಗೆ (ನೀರು ಹಾಕಬಾರದು) ರುಬ್ಬಿಕೊಳ್ಳಿ. ಈ ರಸವನ್ನು ಒ೦ದು ಪಾತ್ರೆಯಲ್ಲಿ ಹಾಕಿ ಅದಕ್ಕೆ ಗೋಧಿಹಿಟ್ಟು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲೆಸಿಕೊಳ್ಳಿ. 10 ನಿಮಿಷ ಆ ಹಿಟ್ಟನ್ನು ಹಾಗೆ ಬಿಡಿ. ನ೦ತರ ರೊಟ್ಟಿ ಲಟ್ಟಿಸಿ ಕಾವಲಿಯ ಮೇಲೆ ಚೆನ್ನಾಗಿ ಬೇಯಿಸಿದರೆ, ಬಾಳೇಹಣ್ಣಿನ ರೊಟ್ಟಿ ಸವಿಯಲು ಸಿದ್ದ. ಈ ರೊಟ್ಟಿಯ ಜೊತೆ ತುಪ್ಪ/ಬೆಣ್ಣೆ, ಚಟ್ನಿಪುಡಿ ಇದ್ದರೆ ತಿನ್ನಲು ತು೦ಬಾ ಚೆನ್ನಾಗಿರುತ್ತದೆ.


 

ಬುಧವಾರ, ಸೆಪ್ಟೆಂಬರ್ 10, 2014

ಕ್ಯಾಪ್ಸಿಕಂ - ಶೇಂಗಾ ಸಬ್ಜಿ :

ಸಾಮಗ್ರಿಗಳು: 
ಕ್ಯಾಪ್ಸಿಕಂ - 2 (ದೊಡ್ಡದು),
ಶೇಂಗಾ (ಕಡ್ಲೆ ಕಾಯಿ) - 1/4 ಕಪ್,
ಬಿಳಿ ಎಳ್ಳು - 2 ಟೀ ಚಮಚ, 
ಜೀರಿಗೆ - 2 ಟೀ ಚಮಚ,
ಎಣ್ಣೆ - 3-4 ಟೇಬಲ್ ಚಮಚ,
ಹುಣಸೆ ರಸ - 1 ಟೇಬಲ್ ಚಮಚ,
ಅರಿಶಿನ ಪುಡಿ - 1/2 ಟೀ ಚಮಚ,
ಅಚ್ಚ ಮೆಣಸಿನ ಪುಡಿ - 1 ಟೀ ಚಮಚ,
ಧನಿಯಾ ಪುಡಿ - 1.5 ಟೀ ಚಮಚ,
ಜೀರಿಗೆ ಪುಡಿ - 1.5 ಟೀ ಚಮಚ,
ಸಾಸಿವೆ - 1 ಟೀ ಚಮಚ,
ಮೆಂತ್ಯ ಕಾಳು - 1/2 ಟೀ ಚಮಚ,
ಉಪ್ಪು - ರುಚಿಗೆ 

ಮಸಾಲೆಗೆ ಬೇಕಾಗುವ ಸಾಮಗ್ರಿಗಳು:
ಈರುಳ್ಳಿ - 1 (ದೊಡ್ಡದು),
ಟೊಮೇಟೊ - 3 (ಮಧ್ಯಮ ಗಾತ್ರ),
ಶುಂಠಿ - 1 ಇಂಚು,
ಬೆಳ್ಳುಳ್ಳಿ - 5-6 ಎಸಳು,
ತೆಂಗಿನ ತುರಿ - 2-3 ಟೇಬಲ್ ಚಮಚ

ವಿಧಾನ : ಒಂದು ಬಾಣಲೆಗೆ ಶೇಂಗಾ ಹಾಕಿ ಹುರಿಯಿರಿ. ಅದು ಹುರಿಯುತ್ತಾ ಬಂತು ಎನ್ನುವಾಗ ಜೀರಿಗೆ ಹಾಕಿ. ಜೀರಿಗೆ ಚಿಟಪಟಾಯಿಸಿದಾಗ ಎಳ್ಳು ಹಾಕಿ ಉರಿ ಆರಿಸಿ, ತಣ್ಣಗಾಗಲು ಬಿಡಿ. ಕ್ಯಾಪ್ಸಿಕಂ ಅನ್ನು ಉದ್ದುದ್ದ ಅಥವಾ ನಿಮಗೆ ಬೇಕಾದ ಅಳತೆಯಲ್ಲಿ ಹೆಚ್ಚಿಕೊಳ್ಳಿ. 

ಬಾಣಲೆಯಲ್ಲಿರುವ ಶೇಂಗಾ ಮಿಶ್ರಣವನ್ನು ಮಿಕ್ಸಿಗೆ ಹಾಕಿ ನೀರು ಹಾಕದೇ ತರಿ ತರಿಯಾಗಿ ಪುಡಿ ಮಾಡಿ. ಅದೇ ಬಾಣಲೆಗೆ 2 ಚಮಚ ಎಣ್ಣೆ ಹಾಕಿ ಹೆಚ್ಚಿದ ಕ್ಯಾಪ್ಸಿಕಂ ಹಾಕಿ, ಸ್ವಲ್ಪ ಉಪ್ಪು ಹಾಕಿ 2-3 ನಿಮಿಷ ಸಣ್ಣ ಉರಿಯಲ್ಲಿ ಫ್ರೈ ಮಾಡಿ. ಇದನ್ನು ಒಂದು ತಟ್ಟೆಗೆ ಹಾಕಿಕೊಳ್ಳಿ. ನಂತರ ಮಸಾಲೆ ಸಾಮಗ್ರಿಗಳೆಲ್ಲವನ್ನು ಮಿಕ್ಸಿಗೆ ಹಾಕಿ ನೀರು ಹಾಕದೆ ನುಣ್ಣಗೆ ರುಬ್ಬಿಕೊಳ್ಳಿ. 

ಅದೇ ಬಾಣಲೆಯನ್ನು ಒಲೆಯ ಮೇಲಿಟ್ಟು ಉಳಿದ ಎಣ್ಣೆ ಹಾಕಿ ಕಾದ ನಂತರ ಮೆಂತ್ಯ ಕಾಳು, ಜೀರಿಗೆ, ಸಾಸಿವೆ ಹಾಕಿ ಅದು ಸಿಡಿದ ಮೇಲೆ ರುಬ್ಬಿದ ಮಸಾಲೆ ಹಾಕಿ ಹಸಿ ವಾಸನೆ ಹೋಗುವ ತನಕ ಹುರಿಯಿರಿ. ನಂತರ ಇದಕ್ಕೆ ಅಚ್ಚ ಮೆಣಸಿನ ಪುಡಿ, ಅರಿಶಿನ ಪುಡಿ, ಧನಿಯಾ ಪುಡಿ, ಜೀರಿಗೆ ಪುಡಿ, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ಪುಡಿ ಮಾಡಿದ ಶೇಂಗಾ ಮಿಶ್ರಣ ಹಾಕಿ ಒಂದು ನಿಮಿಷ ಬೇಯಿಸಿ. ನಂತರ ಹುಣಸೆ ರಸ, ಒಂದು ಕಪ್ ನೀರು (ಗ್ರೇವಿ ಎಷ್ಟು ತೆಳ್ಳಗೆ ಬೇಕು ಅಷ್ಟು ನೀರು) ಹಾಕಿ ಮುಚ್ಚಿ 1-2 ನಿಮಿಷ ಕುದಿಸಿ. ಇದು ಚೆನ್ನಾಗಿ ಕುದಿಯುತ್ತಿರುವಾಗ ಫ್ರೈ ಮಾಡಿ ಇಟ್ಟುಕೊಂಡ ಕ್ಯಾಪ್ಸಿಕಂ ಹಾಕಿ, ಬೇಕಿದ್ದರೆ ಸ್ವಲ್ಪ ನೀರು ಹಾಕಿ ಕುದಿಸಿ ಸ್ಟವ್ ಆರಿಸಿ. 


ಬಿಸಿ ಬಿಸಿ ಕ್ಯಾಪ್ಸಿಕಂ - ಶೇಂಗಾ ಸಬ್ಜಿಯನ್ನು ಚಪಾತಿ / ಪುಲ್ಕಾ / ಜೋಳದ ರೊಟ್ಟಿ / ದೋಸೆ ಜೊತೆ ಸವಿಯಿರಿ. ಅನ್ನದ ಜೊತೆ ಕೂಡ ಒಳ್ಳೆಯ ಕಾಂಬಿನೇಶನ್....!  


ಸೂಚನೆ : ಕ್ಯಾಪ್ಸಿಕಂ ಅನ್ನು ಎಣ್ಣೆಯಲ್ಲಿ ಫ್ರೈ ಮಾಡಿ ಕೊನೆಯಲ್ಲಿ ಸೇರಿಸುವುದರಿಂದ ತಿನ್ನುವಾಗ crispy ಅನುಭವ ಆಗುತ್ತದೆ.     

ಸೌಂದರ್ಯ ಸಲಹೆ: ಮೊಡವೆ ತೊಂದರೆ ಇರುವವರು ice cubes ನಿಂದ ದಿನಾಲೂ ಸ್ವಲ್ಪ ಹೊತ್ತು ಮಸಾಜ್ ಮಾಡುತ್ತಿದ್ದರೆ ಮೊಡವೆಗಳು ಕಮ್ಮಿ ಆಗಿ ಮುಖ ನಯವಾಗುತ್ತದೆ.  

ಗುರುವಾರ, ಸೆಪ್ಟೆಂಬರ್ 4, 2014

ಚಕ್ಕುಲಿ:



ಸಾಮಗ್ರಿಗಳು: ಅಕ್ಕಿ ಹಿಟ್ಟು 1 ಕೆ.ಜಿ, ಜೀರಿಗೆ 4 ಚಮಚ, ಉದ್ದಿನ ಬೇಳೆ 150 ಗ್ರಾ೦, ಕಡಲೆ ಬೇಳೆ 1/4 ಕೆ.ಜಿ, ಓಮು 3 ಚಮಚ, ಎಳ್ಳು 4 ಚಮಚ, ಕೆ೦ಪು ಮೆಣಸಿನ ಪುಡಿ 5 ಚಮಚ. ಎಣ್ಣೆ 1 ಲೀ.




ವಿಧಾನ: ಉದ್ದಿನ ಬೇಳೆ, ಕಡಲೆ ಬೇಳೆಯನ್ನು ಸಣ್ಣ ಉರಿಯಲ್ಲಿ ಹುರಿದುಕೊಳ್ಳಬೇಕು. ಇದಕ್ಕೆ ಜೀರಿಗೆ, ಓಮು,ಕೆ೦ಪು ಮೆಣಸಿನ ಪುಡಿ ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಿ. ನೀರನ್ನು ಕುದಿಸಿ ಅದಕ್ಕೆ ಉಪ್ಪು ಎಳ್ಳು ಹಾಕಿ ಅಕ್ಕಿ ಹಿಟ್ಟನ್ನು ಸ್ವಲ್ಪ ಸ್ವಲ್ಪವೆ ಹಾಕುತ್ತ ಗ೦ಟು ಆಗದ೦ತೆ ಕಲೆಸಿಕೊಳ್ಳಿ. ಈಗ ಪುಡಿಮಾಡಿದ ಬೇಳೆ ಮಿಶ್ರಣವನ್ನು ಅದಕ್ಕೆ ಹಾಕಿ. ಚಪಾತಿ ಹಿಟ್ಟಿನ ಹದಕ್ಕೆ ಕಲೆಸಿಕೊಳ್ಳಿ. ಈಗ ಚಕ್ಕುಲಿ ಮಟ್ಟಿನಲ್ಲಿ ಹಿಟ್ಟನ್ನು ಹಾಕಿ ಚಕ್ಕುಲಿ ಒತ್ತಿರಿ. ದಪ್ಪ ತಳದ ಬಾಣಲೆಗೆ ಎಣ್ಣೆ ಹಾಕಿ ಅದು ಸರಿಯಾಗಿ ಬಿಸಿ ಆದ ಮೇಲೆ ಚಕ್ಕುಲಿ ಆಕಾರದಲ್ಲಿ ಒತ್ತಿಟ್ಟ ಹಿಟ್ಟನ್ನು ಬಾಣಲೆಗೆ ಹಾಕಿ ಚೆನ್ನಾಗಿ ಕರಿಯಿರಿ.


ಸೂಚನೆ: ಚಕ್ಕುಲಿ ಬೆ೦ದಿರುವುದು ತಿಳಿಯುವುದು ಬಹಳ ಸುಲಭ. ಎಣ್ಣೆಗೆ ಚಕ್ಕುಲಿ ಹಾಕಿದ ಮೇಲೆ ಒ೦ದು ಥರದ ಶಬ್ದ (ಸಪ್ಪಳ) ಬರಲು ಶುರುವಾಗುತ್ತದೆ. ಆ ಸದ್ದು ಬರುವುದು ಕಡಿಮೆಯಾಗಿದೆ ಅಥವಾ ನಿ೦ತಿದೆ ಅ೦ದರೆ ಚಕ್ಕುಲಿ ಬೆ೦ದಿದೆ ಎ೦ದು ಅರ್ಥ.