ಶನಿವಾರ, ಡಿಸೆಂಬರ್ 31, 2016

ಡ್ರೈ ಫ್ರೂಟ್ಸ್ ಲಡ್ಡು:(ಒಣ ಹಣ್ಣಿನ ಲಾಡು)

ಸಾಮಗ್ರಿಗಳು:
ಒಣ ಹಣ್ಣುಗಳು - ಬಾದಾಮಿ, ದ್ರಾಕ್ಷಿ, ಗೋಡ೦ಬಿ, ಪಿಸ್ತಾ, ಖರ್ಜೂರ - 1 ಕಪ್
ಖೊವ - 25 ಗ್ರಾ೦,

ಜೇನುತುಪ್ಪ - 4 ಟೇ.ಚಮಚ

ವಿಧಾನ : ಒಣ ಹಣ್ಣುಗಳನ್ನು ಸಣ್ಣ ಸಣ್ಣ ಚೂರುಗಳಾಗಿ ಮಾಡಿಕೊಳ್ಳಿ.(ಮಿಕ್ಸಿಗೆ ಹಾಕಿ ಒ೦ದು ಸಲ ತಿರುವಿದರು ಸಾಕು) ಖೋವಾವನ್ನು ಮಿಕ್ಸಿಗೆ ಹಾಕಿ ಪುಡಿ ಮಾಡಿಕೊ೦ಡು ಕತ್ತರಿಸಿಟ್ಟ ಒಣ ಹಣ್ಣುಗಳಿಗೆ ಸೇರಿಸಿ. ಎಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿಕೊ೦ಡು ಸ್ವಲ್ಪ ಜೇನುತುಪ್ಪ ಹಾಕಿ ಉ೦ಡೆ ಮಾಡಿ.

ಇದು ತು೦ಬಾ ಸುಲಭದ ಸಿಹಿ ತಿ೦ಡಿ. ಮಕ್ಕಳ ಆರೋಗ್ಯಕ್ಕೆ ಉತ್ತಮ ಕೂಡ ಹೌದು.
ಸೂಚನೆ : ಕೆ೦ಪು ಗುಲಾಬಿ ದಳಗಳನ್ನು ಹಾಕಬಹುದು. ಗುಲಾಬಿ ದಳಗಳನ್ನು ನೆರಳಿನಲ್ಲಿ ಒಣಗಿಸಿ ಹಾಗೆ ಕೈಯಲ್ಲಿ ಪುಡಿ ಮಾಡಿ ಕೊನೆಯಲ್ಲಿ ಉ೦ಡೆಮಾಡುವಾಗ ಹಾಕಬಹುದು.



ನಮ್ಮ ಪಾಕಶಾಲೆ ಓದುಗರಿಗೆಲ್ಲಾ ಹೊಸ ವರ್ಷದ ಶುಭಾಶಯಗಳು.

ಶುಕ್ರವಾರ, ಡಿಸೆಂಬರ್ 23, 2016

ಸ್ವೀಟ್ ಕಾರ್ನ್ ಸಬ್ಜಿ :


ಸಾಮಗ್ರಿಗಳು:
ಬಿಡಿಸಿದ ಸ್ವೀಟ್ ಕಾರ್ನ್: 1.5 ಕಪ್
ಫಾರಂ ಟೊಮೇಟೊ : 2
ಈರುಳ್ಳಿ: 2
ಕ್ಯಾಪ್ಸಿಕಂ : 1 ಸಣ್ಣದು
ಗೋಡಂಬಿ : 10-12
ಕಸೂರಿ ಮೇಥಿ : 1 ಚಮಚ
ಗರಂ ಮಸಾಲಾ ಪುಡಿ: 1 ಟೀ ಚಮಚ
ಜೀರಿಗೆ ಪುಡಿ: 1/2 ಟೀ ಚಮಚ
ಧನಿಯಾ ಪುಡಿ: 1/2 ಟೀ ಚಮಚ
ಅಚ್ಚ ಮೆಣಸಿನ ಪುಡಿ : 1/2 ಟೀ ಚಮಚ
ಹಸಿಮೆಣಸಿನ ಕಾಯಿ: 2-3
ಕೊತ್ತಂಬರಿ ಸೊಪ್ಪು : 1/2 ಚಮಚ
ಎಣ್ಣೆ : 3-4 ಚಮಚ
ಶುಂಠಿ -ಬೆಳ್ಳುಳ್ಳಿ ಪೇಸ್ಟ್: 1 ಟೀ ಚಮಚ
ಉಪ್ಪು : ರುಚಿಗೆ

ವಿಧಾನ:
ಗೋಡಂಬಿಯನ್ನು 1 ಘಂಟೆ ನೀರಿನಲ್ಲಿ ನೆನೆಸಿಡಿ. ಟೊಮೇಟೊ, ಈರುಳ್ಳಿ, ಕ್ಯಾಪ್ಸಿಕಂ ಗಳನ್ನ ಸಣ್ಣದಾಗಿ ಹೆಚ್ಚಿಕೊಳ್ಳಿ. ಬಾಣಲೆಗೆ ಎಣ್ಣೆ ಹಾಕಿ ಕಾದ ನಂತರ ಈರುಳ್ಳಿ ಹಾಕಿ ಸ್ವಲ್ಪ ಫ್ರೈ ಮಾಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಹಸಿ ವಾಸನೆ ಹೋಗುವ ತನಕ ಫ್ರೈ ಮಾಡಿ. ನಂತರ ಟೊಮೇಟೊ ಸ್ವಲ್ಪ ಉಪ್ಪು ಹಾಕಿ ಮೆತ್ತಗಾಗುವವರೆಗೆ ಫ್ರೈ ಮಾಡಿ. ಇದಕ್ಕೆ ಕ್ಯಾಪ್ಸಿಕಂ ಹಾಕಿ ಫ್ರೈ ಮಾಡಿ. ನಂತರ ಸ್ವೀಟ್ ಕಾರ್ನ್ ಹಾಕಿ ಒಂದು ನಿಮಿಷ ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ ಬೇಯಿಸಿ, ಉರಿ ಆರಿಸಿ.  ನೀರು ಹಾಕುವ ಅಗತ್ಯವಿಲ್ಲ. ಮಿಕ್ಸಿ ಜಾರ್ ಗೆ ನೆನೆಸಿದ ಗೋಡಂಬಿ ಜೊತೆ ಫ್ರೈ ಮಾಡಿದ ಮಿಶ್ರಣವನ್ನು 2-3 ಚಮಚದಷ್ಟು ಹಾಕಿ ರುಬ್ಬಿ  ಪೇಸ್ಟ್ ಮಾಡಿಕೊಳ್ಳಿ. ಈಗ ಉಳಿದ ಮಿಶ್ರಣ ಇರುವ ಬಾಣಲೆಗೆ ಉರಿ ಹಚ್ಚಿ ಅದಕ್ಕೆ ಗರಂ ಮಸಾಲಾ ಪುಡಿ, ಜೀರಿಗೆ ಪುಡಿ, ಧನಿಯಾ ಪುಡಿ, ಅಚ್ಚ ಮೆಣಸಿನ ಪುಡಿ, ಕಸೂರಿ ಮೇಥಿ, ಕೊತ್ತಂಬರಿ ಸೊಪ್ಪು, ಉದ್ದ ಸೀಳಿದ ಹಸಿಮೆಣಸಿನ ಕಾಯಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ಅರ್ಧ ನಿಮಿಷ ಫ್ರೈ ಮಾಡಿ. ನಂತರ ರುಬ್ಬಿದ ಮಿಶ್ರಣ ಹಾಕಿ, ಸಬ್ಜಿ ಎಷ್ಟು ಗಟ್ಟಿ ಬೇಕು ನೋಡಿಕೊಂಡು ನೀರು ಹಾಕಿಕೊಳ್ಳಿ.. ಉಪ್ಪು ಹಾಕಿ ಚೆನ್ನಾಗಿ ಕುದಿಸಿ. ಈಗ ಬಿಸಿ ಬಿಸಿಯಾದ ಸ್ವೀಟ್ ಕಾರ್ನ್ ಸಬ್ಜಿಯನ್ನು ಚಪಾತಿ, ಪುಲ್ಕ, ರೋಟಿ, ಪೂರಿ ಜೊತೆ ಸರ್ವ್ ಮಾಡಿ. 





ಶುಕ್ರವಾರ, ಡಿಸೆಂಬರ್ 16, 2016

ಅಮಟೆಕಾಯಿ ಸಾಸಿವೆ:

ಸಾಮಗ್ರಿಗಳು : ಅಮಟೆಕಾಯಿ - 2, ತೆ೦ಗಿನತುರಿ - 1/2 ಕಪ್, ಸಾಸಿವೆ 1/2 ಟೀ ಚಮಚ, ಹಸಿಮೆಣಸು - 2-3, ಅರಿಶಿನಪುಡಿ ಚಿಟಿಕೆ, ಮೊಸರು 1/2 ಕಪ್.






ವಿಧಾನ : ಅಮಟೆಕಾಯಿಯನ್ನು ಹೆರೆದುಕೊ೦ಡು ಅದಕ್ಕೆ ತೆ೦ಗಿನತುರಿ, ಸಾಸಿವೆ, ಹಸಿಮೆಣಸು, ಅರಿಶಿನಪುಡಿ ಇವೆಲ್ಲವನ್ನು ಹಾಕಿ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿ. ರುಬ್ಬಿದ ಮಿಶ್ರಣಕ್ಕೆ ಉಪ್ಪು ಮೊಸರು ಸೇರಿಸಿದರೆ ಅಮಟೆಕಾಯಿ ಸಾಸಿವೆ ಅನ್ನದ ಜೊತೆ ತಿನ್ನಲು ಸಿದ್ಧ.


ಸೂಚನೆ : ಅಮಟೆಕಾಯಿ ಹುಳಿ ಇರುವುದರಿ೦ದ ಹಾಕುವ ಮೊಸರು ಹುಳಿ ಇರಬಾರದು.
ಇದೇ ರೀತಿ ಹಸಿ ಮಾವಿನಕಾಯಿ ಸಾಸಿವೆ ಕೂಡ ಮಾಡಬಹುದು.

ಶುಕ್ರವಾರ, ಡಿಸೆಂಬರ್ 9, 2016

ಸ್ವೀಟ್ ಕಾರ್ನ್ ಚಿತ್ರಾನ್ನ :

ಸಾಮಗ್ರಿಗಳು :
ಅಕ್ಕಿ : 1 1/4 ಕಪ್ 
ಸ್ವೀಟ್ ಕಾರ್ನ್ : 1 ಕಪ್ 
ನಿಂಬೆ ರಸ : 1-2 ಚಮಚ 
ಎಣ್ಣೆ : 3-4 ಚಮಚ 
ಹಸಿಮೆಣಸಿನ ಕಾಯಿ : 2-3 
ಕರಿಬೇವು : 1 ಎಸಳು 
ಉದ್ದಿನ ಬೇಳೆ : 1/2 ಚಮಚ 
ಸಾಸಿವೆ : 1/2 ಚಮಚ 
ಅರಿಶಿನ ಪುಡಿ : 1/4 ಚಮಚ 
ಸಕ್ಕರೆ : 1/2 ಚಮಚ 
ತೆಂಗಿನ ತುರಿ : 3 ಚಮಚ 
ಕೊತ್ತಂಬರಿ ಸೊಪ್ಪು : 1/2 ಚಮಚ 
ಉಪ್ಪು : ರುಚಿಗೆ 

ವಿಧಾನ : 
ಅಕ್ಕಿಯಿಂದ ಉದುರಾದ ಅನ್ನ ಮಾಡಿಕೊಳ್ಳಿ. ಸ್ವೀಟ್ ಕಾರ್ನ್ ಗೆ ಸ್ವಲ್ಪವೇ ಉಪ್ಪು ಹಾಕಿ ಬೇಯಿಸಿ ಬಸಿದುಕೊಳ್ಳಿ. ಇತ್ತ ಬಾಣಲೆಗೆ ಎಣ್ಣೆ ಹಾಕಿ ಕಾದ ಮೇಲೆ ಉದ್ದಿನ ಬೇಳೆ ಹಾಕಿ ಹೊಂಬಣ್ಣ ಬಂದ ಮೇಲೆ ಸಾಸಿವೆ ಹಾಕಿ ಚಿಟಪಟಾಯಿಸಿ. ಇದಕ್ಕೆ ಹೆಚ್ಚಿದ ಹಸಿಮೆಣಸಿನಕಾಯಿ, ಕರಿಬೇವು, ಅರಿಶಿನ ಪುಡಿ ಹಾಕಿ, ಬೇಯಿಸಿದ ಕಾರ್ನ್ ಹಾಕಿ ಸ್ವಲ್ಪ ಫ್ರೈ ಮಾಡಿ. ಇದಕ್ಕೆ ತೆಂಗಿನ ತುರಿ ಹಾಕಿ ಅರ್ಧ ನಿಮಷ ಫ್ರೈ ಮಾಡಿಕೊಂಡು ನಿಂಬೆ ರಸ, ಉಪ್ಪು ಹಾಕಿ ಮಿಕ್ಸ್ ಮಾಡಿ ಉರಿ ಆರಿಸಿ. ಈಗ ಕೊತ್ತಂಬರಿ ಸೊಪ್ಪು, ಅನ್ನ ಹಾಕಿ ಕಲಸಿದರೆ ಸ್ವೀಟ್ ಕಾರ್ನ್ ರೈಸ್ ಸವಿಯಲು ಸಿದ್ಧ. 

ಗುರುವಾರ, ಡಿಸೆಂಬರ್ 1, 2016

ಅಕ್ಕಿ ತಾಳಿಪಿಟ್ಟು (ವಡಪೆ)

ಸಾಮಗ್ರಿಗಳು:
ಅಕ್ಕಿ ಹಿಟ್ಟು - 2 ಕಪ್ಸ್,
ಸವತೆಕಾಯಿ - 2
ಈರುಳ್ಳಿ - 3
ಕೊತ್ತ೦ಬರಿ ಸೊಪ್ಪು 1 ಹಿಡಿ
ಕರಿಬೇವು 8-10 ಎಲೆಗಳು,
ಹಸಿಮೆಣಸು 5-6
ಜೀರಿಗೆ 1 ಟೇಬಲ್ ಚಮಚ ,  
ಉಪ್ಪು ರುಚಿಗೆ ತಕ್ಕಷ್ಟು, ಎಣ್ಣೆ ½ ಕಪ್.







ವಿಧಾನ: ಈರುಳ್ಳಿಯನ್ನು ಸಣ್ಣದಾಕಿ ಹೆಚ್ಚಿಕೊಳ್ಳಿ. ಸವತೆಕಾಯಿಯನ್ನು ತುರಿದುಕೊಳ್ಳಿ. ಹಸಿಮೆಣಸು,ಕೊತ್ತ೦ಬರಿ ಸೊಪ್ಪು, ಜೀರಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ದಪ್ಪತಳದ ಬಾಣಲೆಗೆ ತುರಿದಿಟ್ಟ ಸವತೆಕಾಯಿ ರುಬ್ಬಿದ ಮಿಶ್ರಣ ಹಾಕಿ ಅದು ಸ್ವಲ್ಪ ಬಿಸಿ ಬ೦ದ ಮೇಲೆ ಉಪ್ಪು, ಈರುಳ್ಳಿ, ಸಣ್ಣಗೆ ಕತ್ತರಿಸಿದ ಕರಿಬೇವು, ಸಣ್ಣಗೆ ಹೆಚ್ಚಿದ ಕೊತ್ತ೦ಬರಿ ಸೊಪ್ಪು ಹಾಕಿ ನ೦ತರ ಸ್ವಲ್ಪ ಅಕ್ಕಿ ಹಿಟ್ಟು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಹಾಗೆ ಉರಿ ಆರಿಸಿ. ನ೦ತರ ಉಳಿದ ಅಕ್ಕಿ ಹಿಟ್ಟು ಸೇರಿಸಿ. ಈ ಹಿಟ್ಟು ಬಿಸಿ ಆರಿದ ಮೇಲೆ ಚೆನ್ನಾಗಿ ಕಲೆಸಿಕೊಳ್ಳಿ. ಬೇಕಾದಲ್ಲಿ ಬಿಸಿ ನೀರು ಸೇರಿಸಿ.  ಹಿಟ್ಟನ್ನು ಸ್ವಲ್ಪ ತೆಳ್ಳಗೆ ಕಲೆಸಿಕೊಳ್ಳಿ. ಕೈಯಲ್ಲಿ ಆರಾಮಾಗಿ ತಟ್ಟಲು ಬರುವ೦ತಿರಬೇಕು. (ಹಿಟ್ಟು ಸ್ವಲ್ಪ ಗಟ್ಟಿಯಾಗಿದೆ ಎ೦ದು ಅನಿಸಿದರೆ ಸ್ವಲ್ಪ ಮೊಸರು ಸೇರಿಸಿ ಕಲೆಸಿಕೊಳ್ಳಿ). ಈ ಹಿಟ್ಟನ್ನು ಚಪಾತಿ ಹಿಟ್ಟಿನ ಉ೦ಡೆ ಗಾತ್ರ ಮಾಡಿಕೊ೦ಡು ಪ್ಲಾಸ್ಟಿಕ್ ಹಾಳೆಗೆ (ಅಕ್ಕಿ ಹಿಟ್ಟಿನ ಕವರ್,ಎಣ್ಣೆ ಕವರ್ ಕತ್ತರಿಸಿ ಬಳಸಬಹುದು.) ಎಣ್ಣೆ ಸವರಿಕೊ೦ಡು ಹಿಟ್ಟಿನ ಉ೦ಡೆ ಇಟ್ಟು ಕೈಗೆ ಸ್ವಲ್ಪ ಎಣ್ಣೆ ಸವರಿಕೊ೦ಡು ತೆಳ್ಳಗೆ ತಟ್ಟಿ ಕಾದ ಕಾವಲಿಯ ಮೇಲೆ ಹಾಕಿ ಮೇಲಿನಿ೦ದ ಸ್ವಲ್ಪ ಎಣ್ಣೆ ಹಾಕಿ ಎರಡೂ ಕಡೆ ಬೇಯಿಸಿ.




ಚಟ್ನಿ ಅಥವಾ ತುಪ್ಪ ಬೆಲ್ಲದ ಜೊತೆ ತಿನ್ನಬಹುದು.

ಗುರುವಾರ, ನವೆಂಬರ್ 24, 2016

ಅರಳು - ಶೇಂಗಾ ಉಂಡೆ :

ಸಾಮಗ್ರಿಗಳು :
ಅರಳು: 1 ಕಪ್ 
ಶೇಂಗಾ : 1 ಕಪ್ 
ಹುರಿಗಡಲೆ : 1/4 ಕಪ್ 
ತೆಂಗಿನ ತುರಿ / ಕೊಬ್ಬರಿ ತುರಿ : 1 ಕಪ್ 
ಗಸಗಸೆ : 2 ಚಮಚ (ಬೇಕಿದ್ದಲ್ಲಿ ಮಾತ್ರ) 
ಬೆಲ್ಲ : 1 1/4 ಕಪ್ 

ವಿಧಾನ :
ಬೆಲ್ಲಕ್ಕೆ ಸ್ವಲ್ಪ ನೀರು ಹಾಕಿ ಒಲೆಯ ಮೇಲಿಟ್ಟುಕೊಂಡು ಆಗಾಗ ಕಲಕುತ್ತಿರಿ. ಇತ್ತ ಶೇಂಗಾ ಹುರಿದು ಮೇಲಿನ ಹೊಟ್ಟು ತೆಗೆದು ಎರಡು ಭಾಗ ಮಾಡಿಕೊಳ್ಳಿ. ಗಸಗಸೆಯನ್ನು ಹುರಿದಿಟ್ಟುಕೊಳ್ಳಿ. ಅರಳನ್ನು ಬೇಕಾದರೆ ಒಮ್ಮೆ ಮಿಕ್ಸಿ ಗೆ ಹಾಕಿ ತರಿ ತರಿ ಪುಡಿ ಮಾಡಿಕೊಳ್ಳಬಹುದು ಅಥವಾ ಹಾಗೆಯೇ ಹಾಕಬಹುದು. ತೆಂಗಿನ ತುರಿಯನ್ನು ಒಮ್ಮೆ ಮಿಕ್ಸಿಗೆ ಹಾಕಿ ತರಿ ತರಿ ಮಾಡಿಕೊಳ್ಳಿ. ಕೊಬ್ಬರಿ ತುರಿಯಾದರೆ ಸ್ವಲ್ಪ ಹುರಿದು ಹಾಗೆಯೇ ಹಾಕಬಹುದು. ಬೆಲ್ಲ ಒಂದೆಳೆ ಪಾಕಕ್ಕೆ ಬಂದ ಮೇಲೆ ಒಡೆದು ರೆಡಿ ಮಾಡಿಟ್ಟ ಶೇಂಗಾ, ತೆಂಗಿನ ತುರಿ / ಕೊಬ್ಬರಿ ತುರಿ, ಹುರಿಗಡಲೆ, ಅರಳು ಎಲ್ಲವನ್ನೂ ಹಾಕಿ ಕೈ ಬಿಡದೆ ಚೆನ್ನಾಗಿ ಕಲಕುತ್ತಿರಿ. ಮಿಶ್ರಣ ಸುತ್ತಲೂ ಅಂಟಲು ಶುರುವಾದಾಗ ಉರಿ ಆರಿಸಿ ತಣ್ಣಗಾಗಲು ಬಿಡಿ. ಪೂರ್ತಿ ತಣ್ಣಗಾದರೆ ಗಟ್ಟಿಯಾಗುತ್ತದೆ. 

ನಿಮಗೆ ಉಂಡೆ ಕಟ್ಟಲು ಸಾಧ್ಯವಾಗುವಷ್ಟು ಬಿಸಿ ಇರುವಾಗಲೇ ಕೈಗೆ ಸ್ವಲ್ಪ ನೀರು ಮುಟ್ಟಿಕೊಂಡು ನಿಂಬೆ ಗಾತ್ರದ ಉಂಡೆ ಕಟ್ಟಿ. ಕೊನೆಯಲ್ಲಿ ಗಟ್ಟಿಯಾಗಿ ಮಿಶ್ರಣ ಪಾತ್ರೆಗೆ ಅಂಟಿಕೊಂಡರೆ ಮತ್ತೆ ಸ್ವಲ್ಪ ಬಿಸಿ ಮಾಡಿಕೊಂಡು ಉಂಡೆ ಕಟ್ಟಿ. ಅಗಿದಷ್ಟೂ ರುಚಿ ಹೆಚ್ಚಿಸುವ ಉಂಡೆಯನ್ನು ಸವಿದು ನೋಡಿ.... 
 



ಸಲಹೆಗಳು:
1) ಒಂದು ಸಣ್ಣ ಪ್ಲೇಟ್ ಗೆ ನೀರು ಹಾಕಿಕೊಂಡು ಪಾಕವನ್ನು ನೀರೊಳಗೆ ಹಾಕಿ ಬೆರಳಲ್ಲಿ ಮುಟ್ಟಿದರೆ ಉಂಡೆಯಂತೆ ಬಂದರೆ ಪಾಕ ಬಂದಂತೆ. 
2) ಶೇಂಗಾ-ಅರಳು- ಹುರಿಗಡಲೆ - ಕೊಬ್ಬರಿ ಇವುಗಳಲ್ಲಿ ಯಾವುದೇ ಅಳತೆಯನ್ನು ನಿಮ್ಮಿಷ್ಟಕ್ಕೆ ಅನುಸಾರ ಬದಲಿಸಿಕೊಳ್ಳಬಹುದು. 

ಮಂಗಳವಾರ, ನವೆಂಬರ್ 15, 2016

ಘೀ ರೈಸ್ (ತುಪ್ಪದ ಅನ್ನ):

ಸಾಮಗ್ರಿಗಳು : ಅನ್ನ - 1 ಕಪ್,  ಈರುಳ್ಳಿ - 1, ಹಸಿಮೆಣಸು - 2, ಜೀರಿಗೆ - 1ಟೀ. ಚಮಚ,  ತುಪ್ಪ - 2.5 ಟೇ. ಚಮಚ,  ಚಕ್ಕೆ- 1", ಲವ೦ಗ - 2,ಗೋಡ೦ಬಿ - 5-6, ಉಪ್ಪು.

 

ವಿಧಾನ : ಅನ್ನವನ್ನು ಉದುರುದುರಾಗಿ ಮಾಡಿಟ್ಟುಕೊಳ್ಳಿ. ಬಾಣಲೆಯನ್ನು ಒಲೆಯಮೇಲೆ ಇಟ್ಟು ಸಣ್ಣ ಉರಿ ಮಾಡಿ ಅದಕ್ಕೆ ತುಪ್ಪ, ಚಕ್ಕೆ, ಲವ೦ಗ ಹಾಕಿ 2 ನಿಮಿಷ ಹುರಿಯಿರಿ ಹಾಗೆ ಗೋಡ೦ಬಿ ಚೂರುಗಳನ್ನು ಹಾಕಿ ಹೊ೦ಬಣ್ಣ ಬ೦ದ ಮೇಲೆ ಹಸಿಮೆಣಸು ಜೀರಿಗೆ ಈರುಳ್ಳಿ ಹಾಕಿ 5 ನಿಮಿಷ ಫ್ರೈ ಮಾಡಿ ಕೊನೆಯಲ್ಲಿ ಉಪ್ಪು ಹಾಕಿ ಅನ್ನ ಸೇರಿಸಿ ಸರಿಯಾಗಿ ಮಿಕ್ಸ್ ಮಾಡಿದರೆ ಬಿಸಿ ಬಿಸಿ ಘೀ ರೈಸ್ ಸವಿಯಲು ಸಿದ್ಧ.

ಸೂಚನೆ :ಯಾವುದಾದರು ಗ್ರೇವಿಯ ಜೊತೆ ಘೀ ರೈಸ್ ತಿನ್ನುವುದಾದರೆ ಹಸಿ ಮೆಣಸು ಹಾಕುವ ಅಗತ್ಯವಿಲ್ಲ.

ಸೋಮವಾರ, ನವೆಂಬರ್ 7, 2016

ಮೂಲಂಗಿ ಸೊಪ್ಪಿನ ಸಲಾಡ್ :

ಸಾಮಗ್ರಿಗಳು:
ಮೂಲಂಗಿ ಗಿಡ (ಸೊಪ್ಪು) : 4-5,
ಈರುಳ್ಳಿ: 1,
ವಾಟೆ ಪುಡಿ / ಅಮ್ಚೂರ್ ಪುಡಿ : 1/2 ಚಮಚ,
ತೆಂಗಿನ ತುರಿ : 2 ಚಮಚ,
ಹಸಿಮೆಣಸಿನ ಕಾಯಿ: 2-3,
ಉದ್ದಿನ ಬೇಳೆ: 1/2 ಚಮಚ,
ಸಾಸಿವೆ: 1/4 ಚಮಚ,
ಎಣ್ಣೆ: 1 ಚಮಚ,
ಉಪ್ಪು: ರುಚಿಗೆ 

ವಿಧಾನ:
ಮೂಲಂಗಿ ಗಿಡವನ್ನು ಮೂಲಂಗಿಯಿಂದ ಬೇರ್ಪಡಿಸಿ ಚೆನ್ನಾಗಿ ತೊಳೆದು, ಸಣ್ಣಗೆ ಹೆಚ್ಚಿಕೊಳ್ಳಿ. ಇದಕ್ಕೆ ಉಪ್ಪು ಮತ್ತು ವಾಟೆ ಪುಡಿ / ಅಮ್ಚೂರ್ ಪುಡಿ ಹಾಕಿ ಚೆನ್ನಾಗಿ ಕಲಸಿಡಿ. ಹೀಗೆಯೇ ಅರ್ಧ ಗಂಟೆ ಬಿಟ್ಟರೆ ಸೊಪ್ಪಿನಲ್ಲಿರುವ ಕಹಿ ಅಂಶ ಹೋಗುತ್ತದೆ. ನಂತರ ಇದಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ, ತೆಂಗಿನ ತುರಿ ಹಾಕಿ. ಒಗ್ಗರಣೆ ಸೌಟಿಗೆ ಎಣ್ಣೆ ಹಾಕಿ ಕಾಯಿಸಿ ಉದ್ದಿನ ಬೇಳೆ ಹಾಕಿ ಸ್ವಲ್ಪ ಕೆಂಪಗಾದ ಮೇಲೆ ಸಾಸಿವೆ ಹಾಕಿ ಸಿಡಿಸಿ, ಅದಕ್ಕೆ ಸಣ್ಣಗೆ ಹೆಚ್ಚಿದ ಹಸಿಮೆಣಸಿನ ಕಾಯಿ ಹಾಕಿ ಹುರಿದು ಸೊಪ್ಪಿಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈಗ ಮೂಲಂಗಿ ಸೊಪ್ಪಿನ ಸಲಾಡ್ ಊಟದ ಜೊತೆ ಸವಿಯಲು ಸಿದ್ಧ. 


ಸಲಹೆ:
1) ಹಸಿ ಮೂಲಂಗಿ ಇಷ್ಟ ಪಡುವವರು ಮೂಲಂಗಿಯನ್ನು ಸಣ್ಣಗೆ ಹೆಚ್ಚಿ ಸಲಾಡ್ ಗೆ ಸೇರಿಸಿಕೊಳ್ಳಬಹುದು 

2) ಡಯಟ್ ಮಾಡುವವರು ಒಗ್ಗರಣೆ ಹಾಕದೇ (ತೆಂಗಿನ ತುರಿ ಹಾಕದಿದ್ದರೂ ಒಳ್ಳೆಯದು) ಸ್ವಲ್ಪ ಪೆಪ್ಪರ್ ಪುಡಿ ಹಾಕಿ ತಿನ್ನಬಹುದು. 

ಗುರುವಾರ, ಅಕ್ಟೋಬರ್ 27, 2016

ಹುಣಸೆ ಹಣ್ಣಿನ ಅಪ್ಪೆಹುಳಿ (ಹುಳಸೆ ಹುಳಿ):

ಸಾಮಗ್ರಿಗಳು : ಹುಣಸೆಹಣ್ಣು - ಚಿಕ್ಕ ನಿ೦ಬೆ ಹಣ್ಣಿನ ಗಾತ್ರ, ಈರುಳ್ಳಿ -1 , ಎಣ್ಣೆ 1/2
ಚಮಚ, ಒಣಮೆಣಸು - 1, ಸಾಸಿವೆ - 1/2
ಚಮಚ, ಬೆಲ್ಲ  -2 ಚಮಚ , ಉಪ್ಪು.






ವಿಧಾನ : ಹುಣಸೆಹಣ್ಣನ್ನು 15 ನಿಮಿಷ ನೀರಲ್ಲಿ ನೆನೆಸಿಡಿ. ಈಗ ಹುಣಸೆ ರಸ ತೆಗೆದು ಅದಕ್ಕೆ 2 ಲೋಟ ನೀರು ಹಾಕಿ. ಈಗ ಉಪ್ಪು ಬೆಲ್ಲ ಹಾಕಿ ಕಲಕಿ. ಒಗ್ಗರಣೆ ಸೌಟನ್ನು ಒಲೆಯ ಮೇಲಿಟ್ಟು ಸಣ್ಣ ಉರಿ ಇಟ್ಟುಕೊಳ್ಳಿ ಅದಕ್ಕೆ ಎಣ್ಣೆ ಹಾಕಿ ಬಿಸಿ ಆದ ಮೇಲೆ ಸಾಸಿವೆ ಹಾಗೂ ಒಣಮೆಣಸು ಹಾಕಿ ಚಿಟಪಟ ಆದ ಮೇಲೆ ಈ ಒಗ್ಗರಣೆಯನ್ನು ಹುಣಸೇನೀರಿಗೆ ಹಾಕಿ ನ೦ತರ ಇದಕ್ಕೆ ಈರುಳ್ಳಿಯನ್ನು ಸಣ್ಣದಾಗಿ ಹೆಚ್ಚಿ ಹಾಕಿದರೆ ಹುಣಸೆ ಹಣ್ಣಿನ ಅಪ್ಪೆಹುಳಿ (ಹುಳಸೆ ಹುಳಿ) ಅನ್ನದ ಜೊತೆ ಸವಿಯಲು ಸಿದ್ದ.

ಭಾನುವಾರ, ಅಕ್ಟೋಬರ್ 23, 2016

ಹೆಸರುಬೇಳೆ ಪಾಯಸ :

ಹೆಸರುಬೇಳೆ ಪಾಯಸವನ್ನು ಶಿವರಾತ್ರಿ ಹಬ್ಬಕ್ಕೆ ನೈವೇದ್ಯಕ್ಕೆ ಮಾಡುವ ಪದ್ಧತಿ ಕೆಲವೆಡೆ ಇದೆ. ಈ ಪಾಯಸ ತಿನ್ನುವುದರಿಂದ ರಾತ್ರಿ ಜಾಗರಣೆ ಮಾಡಿದರೆ ದೇಹದ ಉಷ್ಣತೆ ಜಾಸ್ತಿಯಾಗದೇ ತಂಪಾಗಿರುತ್ತದೆ. ಬೇರೆ ಯಾವುದೇ ಹಬ್ಬಕ್ಕೂ ನೈವೇದ್ಯಕ್ಕೆ ಮಾಡಬಹುದು. 
ಸಾಮಗ್ರಿಗಳು:
ಹೆಸರುಬೇಳೆ 1.5 ಕಪ್,
ಬೆಲ್ಲ 1/2 ಕಪ್,
ಸಕ್ಕರೆ 1/2 ಕಪ್,
ತೆಂಗಿನ ತುರಿ 1 ಕಪ್,
ಹಾಲು 1/2 ಕಪ್,
ಏಲಕ್ಕಿ ಪುಡಿ 1/4 ಚಮಚ,
ಗೋಡಂಬಿ 8-10,
ಉಪ್ಪು 1/4 ಚಮಚ 

ವಿಧಾನ :
ಹೆಸರುಬೇಳೆ ತೊಳೆದುಕೊಂಡು ನೀರು ಹಾಕಿ ಕುಕ್ಕರ್ ನಲ್ಲಿ ಎರಡು ಕೂಗು ಕೂಗಿಸಿ ಅಥವಾ ಹಾಗೆಯೇ ಪಾತ್ರೆಯಲ್ಲಿ ಹಾಕಿ ಒಲೆಯ ಮೇಲಿಟ್ಟು ಬೇಯಿಸಬಹುದು. ಬೇಳೆ ಪೂರ್ತಿ ಕರಗುವಷ್ಟು ಬೇಯಿಸಬಾರದು,  ತೆಂಗಿನ ತುರಿಗೆ ಏಲಕ್ಕಿ ಪುಡಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಬೆಂದ ಹೆಸರುಬೇಳೆಗೆ ಹಾಲು, ರುಬ್ಬಿದ ತೆಂಗಿನಕಾಯಿ, ಗೋಡಂಬಿ ಚೂರುಗಳು, ಸಕ್ಕರೆ ಮತ್ತು ಬೆಲ್ಲ ಹಾಕಿ ಬೇಕಿದ್ದರೆ ಸ್ವಲ್ಪ ನೀರು ಹಾಕಿ ಕುದಿಯಲು ಬಿಡಿ. ಹೆಸರುಬೇಳೆ ಬೇಗ  ತಳಹಿಡಿಯುತ್ತದೆ, ಆಗಾಗ ಕಲಕುತ್ತಿರಿ. ಚೆನ್ನಾಗಿ  ಕುದಿ ಬಂದ ಮೇಲೆ ಉರಿ ಆರಿಸಿ. ಬಿಸಿ ಬಿಸಿ ಪಾಯಸಕ್ಕೆ ತುಪ್ಪ ಹಾಕಿಕೊಂಡು ಸವಿದರೆ ಆಹಾ ...! 


ಶುಕ್ರವಾರ, ಅಕ್ಟೋಬರ್ 14, 2016

ಅಕ್ಕಿ ವಡೆ:

ಸಾಮಗ್ರಿಗಳು: ಉದ್ದಿನಬೇಳೆ - 2 ಕಪ್, ಅಕ್ಕಿ (ದೊಡ್ಡ ಮುಳ್ಳರೆ / ಬಾಳೆಸುಳಿ) - 2 ಕಪ್, ಜೀರಿಗೆ 1 ಟೀ ಚಮಚ , ಓಮು 1/2 ಟೀ ಚಮಚ, ಇ೦ಗು ಚಿಟಿಕೆ, ಹಸಿ ಮೆಣಸು 2,  ಉಪ್ಪು.

ವಿಧಾನ : ಅಕ್ಕಿಯನ್ನು 1 ಗ೦ಟೆ ನೀರಿನಲ್ಲಿ ನೆನೆಹಾಕಿ. ಹಾಗೆ ಉದ್ದಿನಬೇಳೆಯನ್ನು ಬೇರೆ ಪಾತ್ರೆಯಲ್ಲಿ 1 ತಾಸು ನೆನೆಹಾಕಿ. ಈಗ ಅಕ್ಕಿಯಲ್ಲಿನ ನೀರನ್ನು ಪೂರ್ಣವಾಗಿ ತೆಗೆದು ಕಾಟನ್ ಬಟ್ಟೆಯಲ್ಲಿ 1/2 ಗ೦ಟೆ ಹರವಿಡಿ. ನ೦ತರ ಈ ಅಕ್ಕಿಯನ್ನು ಮಿಕ್ಸಿಯಲ್ಲಿ ತರಿ ತರಿ ಪುಡಿ ಮಾಡಿಕೊಳ್ಳಿ. ದೊಡ್ಡ ರವಾ (ಉಪ್ಪಿಟ್ಟಿನ ರವೆ) ಹದಕ್ಕೆ ಅಕ್ಕಿ ಕಡಿ ಇರಬೇಕು.ಇದನ್ನು ಜರಡಿ ಹಿಡಿದು ನುಣುಪಾದ ಹಿಟ್ಟನ್ನು ತೆಗೆದುಬಿಡಿ. ಮಿಕ್ಸಿ ಜಾರಿಗೆ ಜೀರಿಗೆ, ಓಮು, ಇ೦ಗು, ಹಸಿಮೆಣಸು, ಉಪ್ಪು ಹಾಕಿ ಪುಡಿ ಮಾಡಿಕೊ೦ಡು ಅಕ್ಕಿ ಕಡಿಗೆ ಸೇರಿಸಿ. ಈಗ ಇದಕ್ಕೆ ನುಣ್ಣಗೆ ರುಬ್ಬಿಕೊ೦ಡ ಉದ್ದಿನಬೇಳೆಯ ಹಿಟ್ಟನ್ನು ಹಾಕುತ್ತ ಚೆನ್ನಾಗಿ ಕಲೆಸಿ ಹಾಗೆ 1/2 ಗ೦ಟೆಗಳ ಕಾಲ ಇಡಿ. ನ೦ತರ ಮತ್ತೆ ತಿಕ್ಕಿ ತಿಕ್ಕಿ ಕಲೆಸಿ ಬೇಕಾದಲ್ಲಿ ಉದ್ದಿನಹಿಟ್ಟು ಸೇರಿಸಿ. ಚಪಾತಿ ಹಿಟ್ಟಿಗಿ೦ತ ಸ್ವಲ್ಪ ಮೆದು ಇರಬೇಕು.

ಈಗ ಬಾಣಲೆಯನ್ನು ಒಲೆಯ ಮೆಲೆ ಇಟ್ಟು ಉರಿ ದೊಡ್ಡ ಮಾಡಿ. ಬಾಳೆ ಎಲೆ / ಎಣ್ಣೆ ಕವರ್ ಗೆ ದಪ್ಪಗೆ ಎಣ್ಣೆ ಹಚ್ಚಿಕೊ೦ಡು ಪುರಿ ಉ೦ಡೆಯಷ್ಟು ದೊಡ್ಡ ಹಿಟ್ಟು ತೆಗೆದುಕೊ೦ಡು ಕೈಯಲ್ಲಿ ಚೆನ್ನಾಗಿ ತಿಕ್ಕಿ ಉ೦ಡೆ ಮಾಡಿ ಲಟ್ಟಿಸಿ. ಹೊಗೆ ಬರುವಷ್ಟು ಎಣ್ಣೆ ಕಾದಿರ ಬೇಕು. ಈಗ ಲಟ್ಟಿಸಿದ ಹಿಟ್ಟನ್ನು ಎಣ್ಣೆಯಲ್ಲಿ ಬಿಡಿ. (ಎಣ್ಣೆಗೆ ಹಾಕುವಾಗ ಬಹಳ ನಾಜೂಕಿನಿ೦ದ ಹಾಕಬೇಕು. ಇಲ್ಲದಿದ್ದರೆ ಅದು ಮಡಚಿ ವಡೆ ಉಬ್ಬುವುದಿಲ್ಲ). ಈಗ ಗರಿ ಗರಿ ಅಕ್ಕಿ ವಡೆ ತಿನ್ನಲು ಸಿದ್ಧ. ಅನ್ನ ಸಾ೦ಬಾರ್ ಊಟ ಮಾಡುವಾಗ ಅಕ್ಕಿ ವಡೆ ಒಳ್ಳೆಯ ಜೊತೆಯಾಗುತ್ತದೆ.

ಶುಕ್ರವಾರ, ಅಕ್ಟೋಬರ್ 7, 2016

ಚಕ್ಕುಲಿ ಪಾಯಸ :

ಸಾಮಗ್ರಿಗಳು :
ಚಕ್ಕುಲಿ : 12-15
ತೆಂಗಿನತುರಿ : 1 ಕಪ್ 
ಹಾಲು : 1 ಕಪ್ 
ಬೆಲ್ಲ : 3/4 - 1 ಕಪ್ 
ಏಲಕ್ಕಿ ಪುಡಿ : 1/4 ಚಮಚ 

ವಿಧಾನ : 
ಒಂದು ಪಾತ್ರೆಯಲ್ಲಿ 3-4 ಕಪ್ ನೀರನ್ನು ಕುದಿಯಲು ಇಡಿ. ಈಗ ಚಕ್ಕುಲಿಯನ್ನು ಸಣ್ಣ ಸಣ್ಣ ತುಂಡು ಮಾಡಿಕೊಂಡು ಕುದಿಯುತ್ತಿರುವ ನೀರಿಗೆ ಹಾಕಿ ಉರಿ ಆರಿಸಿ ಅರ್ಧ ನಿಮಿಷ ಬಿಡಿ. ನಂತರ ಇದರಿಂದ ಪೂರ್ತಿಯಾಗಿ ನೀರನ್ನು ಬಸಿದುಕೊಳ್ಳಿ. 

ತೆಂಗಿನತುರಿಗೆ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಒಂದು ಪಾತ್ರೆಗೆ ರುಬ್ಬಿದ ತೆಂಗಿನತುರಿ, ಬೆಲ್ಲ  ಮತ್ತು ಏಲಕ್ಕಿ ಪುಡಿ ಹಾಕಿ ಕುದಿಯಲು ಇಡಿ.  ಕುದಿ ಬಂದ ಮೇಲೆ ಇದಕ್ಕೆ ಬಿಸಿ ಹಾಲು ಹಾಕಿ  ಒಂದು ಕುದಿ ಬಂದ ಮೇಲೆ ರೆಡಿ ಮಾಡಿಟ್ಟುಕೊಂಡ ಚಕ್ಕುಲಿ ಹಾಕಿ ತಕ್ಷಣ ಸರ್ವ್ ಮಾಡಿ. 


ಸೂಚನೆಗಳು :
1) ಚಕ್ಕುಲಿ ಮಾಡುವ ವಿಧಾನಕ್ಕೆ: http://gelatiyarapakashale.blogspot.in/2014/09/blog-post.html 
ಇಲ್ಲಿ ನೋಡಿ. ಮತ್ತು ಮಾಡುವಾಗ ಮೆಣಸಿನ ಪುಡಿ ಹಾಕಬೇಡಿ. 
2) ಚಕ್ಕುಲಿ ಹಾಕಿ ತುಂಬಾ ಹೊತ್ತು ಬಿಟ್ಟರೆ ಪೂರ್ತಿ ಮೆತ್ತಗಾಗಿ ಕರಗಿಹೋಗುತ್ತದೆ. ಉಳಿದೆಲ್ಲವನ್ನೂ ರೆಡಿ ಮಾಡಿಟ್ಟುಕೊಂಡು ಬಡಿಸುವ ಸಮಯದಲ್ಲಿ ಚಕ್ಕುಲಿ ಕುದಿಯುವ ನೀರಿಗೆ ಹಾಕಿ ತೆಗೆದು ಪಾಯಸಕ್ಕೆ ಹಾಕಬೇಕು. 
3) ಅರ್ಧ ಬೆಲ್ಲ ಮತ್ತು ಅರ್ಧದಷ್ಟು ಸಕ್ಕರೆ ಕೂಡ ಹಾಕಬಹುದು. 

ಶುಕ್ರವಾರ, ಸೆಪ್ಟೆಂಬರ್ 30, 2016

ಅತಿರಸ/ಅತ್ರಾಸ/ಕಜ್ಜಾಯ:

ಸಾಮಗ್ರಿಗಳು: ಅಕ್ಕಿ ಹಿಟ್ಟು- ೧ ಕಪ್, ಬೆಲ್ಲ - ೧ ೧/೨ ಕಪ್, ಎಳ್ಳು ೨ ಚಮಚ, ತೆ೦ಗಿನತುರಿ ೧ ಕಪ್, ಏಲಕ್ಕಿಪುಡಿ ೧/೪ ಟೀ ಚಮಚ, ಕರಿಯಲು ಎಣ್ಣೆ.



ವಿಧಾನ : ಒ೦ದು ದಪ್ಪ ತಳದ ಪಾತ್ರೆಯಲ್ಲಿ ಬೆಲ್ಲ ಹಾಕಿ ಅದಕ್ಕೆ ನೀರು/ಹಾಲು ಹಾಕಿ ಕುದಿಸಿ ಆಗಾಗ ತಳಹಿಡಿಯದ೦ತೆ ಕೈಯಾಡಿಸಿ ಬೆಲ್ಲದ ನೀರು ಬೆಳಿ ನೊರೆ ಬರಲು ಶುರುವಾದಮೇಲೆ ಅದಕ್ಕೆ ಎಳ್ಳು, ತೆ೦ಗಿನತುರಿ, ಏಲಕ್ಕಿಪುಡಿ ಹಾಕಿ ಮತ್ತೆ ೫ ನಿಮಿಷ ಬಿಡಿ. ನ೦ತರ ಉರಿ ಸಣ್ಣ ಮಾಡಿ ಅಕ್ಕಿ ಹಿಟ್ಟು ಸೇರಿಸುತ್ತಾ ಬನ್ನಿ. ಗ೦ಟಾಗದ೦ತೆ ತೊಳೆಸುತ್ತಿರಬೇಕು. ಮಿಶ್ರಣವು ಪಾತ್ರೆಬಿಡಲು ಶುರುವಾದಮೇಲೆ ಉರಿ ಆರಿಸಿ. ಈ ಮಿಶ್ರಣ ತಣ್ಣಗಾದ ಮೇಲೆ ಪುರಿ ಥರ ಚಿಕ್ಕ ಚಿಕ್ಕ ಉ೦ಡೆ ಮಾಡಿಟ್ಟುಕೊಳ್ಳಿ.ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಲು ಇಡಿ. ಈಗ ಬಾಳೆ ಎಲೆ ಅಥವಾ ಎಣ್ಣೆ ಕವರ್ ಗೆ ಎಣ್ಣೆ ಸವರಿಕೊ೦ಡು ಕೈಗೂ ಸ್ವಲ್ಪ ಎಣ್ಣೆ ಸವರಿಕೊ೦ಡು ಅದನ್ನು ತಟ್ಟಿ ಕಾದ ಎಣ್ಣೆಯಲ್ಲಿ ಬೇಯಿಸಿ ಬೆ೦ದ ಮೇಲೆ ಮತ್ತೊ೦ದು ಚಪ್ಪಟೆ ಸೌಟು ತೆಗೆದುಕೊ೦ಡು ಬಾಣಲೆ ಇ೦ದ ತೆಗೆದ ತಕ್ಷಣ ಎಣ್ಣೆಯನ್ನು ಹಿ೦ಡಿ ತೆಗೆಯಿರಿ. ಈಗ ಗರಿ ಗರಿಯಾದ ಅತಿರಸ/ಅತ್ರಾಸ/ಕಜ್ಜಾಯ ತಿನ್ನಲು ಸಿದ್ಧ.

ಸೋಮವಾರ, ಸೆಪ್ಟೆಂಬರ್ 19, 2016

ಸೋರೆಕಾಯಿ ತಿರುಳಿನ ಗೊಜ್ಜು :

ಸೋರೆಕಾಯಿ ಸಾಂಬಾರ್, ಪಲ್ಯ, ಪಾಯಸ ಮಾಡುವಾಗ ತಿರುಳು ಹಾಕಿದರೆ ಚೆನ್ನಾಗಿರರುವುದಿಲ್ಲ. ಆದ್ದರಿಂದ ಎಳೆಯ ಅಥವಾ ತುಂಬಾ ಬಲಿತು ಬೀಜ ಗಟ್ಟಿಯಾಗದ ತಿರುಳನ್ನು ತೆಗೆದು ಈ ಗೊಜ್ಜು ಮಾಡಿ ನೋಡಿ. 

ಸಾಮಗ್ರಿಗಳು: 
ಹೆಚ್ಚಿಕೊಂಡ ಸೋರೆಕಾಯಿ (ಹಾಲುಗುಂಬಳ) ತಿರುಳು : 1 ಕಪ್
ತೆಂಗಿನ ತುರಿ : 1/2 ಕಪ್
ಹುಣಸೆ ಹಣ್ಣು : ನೆಲ್ಲಿಕಾಯಿ ಗಾತ್ರ 
ಬೆಲ್ಲ : 1 ಟೇಬಲ್ ಚಮಚ 
ಹಸಿಮೆಣಸಿನ ಕಾಯಿ : 2-3 (ನಿಮ್ಮ ಖಾರಕ್ಕೆ ತಕ್ಕಷ್ಟು)
ಉಪ್ಪು : ರುಚಿಗೆ 

ಒಗ್ಗರಣೆಗೆ :
ಎಣ್ಣೆ : 1 ಚಮಚ 
ಉದ್ದಿನ ಬೇಳೆ : 1/2 ಚಮಚ
ಸಾಸಿವೆ : 1/2 ಚಮಚ 


ವಿಧಾನ : 
ಸೋರೆಕಾಯಿ ತಿರುಳನ್ನು ನೀರು, ಹುಣಸೆಹಣ್ಣು, ಬೆಲ್ಲ ಹಸಿಮೆಣಸಿನ ಕಾಯಿ ಹಾಕಿ ಬೇಯಿಸಿಕೊಳ್ಳಿ. ಮಿಕ್ಸಿ ಜಾರ್ ಗೆ ತೆಂಗಿನ ತುರಿ, ಉಪ್ಪು, ಸ್ವಲ್ಪ ನೀರು (ಬೇಯಿಸಿದ ನೀರಿದ್ದರೆ ಅದನ್ನೇ ಹಾಕಿ) ಹಾಕಿ ಎರಡು ಸುತ್ತು ರುಬ್ಬಿ. ನಂತರ ಬೇಯಿಸಿಕೊಂಡ ಮಿಶ್ರಣ ಹಾಕಿ ತರಿ ತರಿಯಾಗಿ ರುಬ್ಬಿಕೊಂಡು ಎಣ್ಣೆ, ಉದ್ದಿನ ಬೇಳೆ, ಸಾಸಿವೆ ಒಗ್ಗರಣೆ ಮಾಡಿದರೆ ಸರಳ ಹಾಗೂ ರುಚಿಕರವಾದ, ಹುಳಿ - ಸಿಹಿ ಗೊಜ್ಜು ಸಿದ್ಧ. ಇದನ್ನು ಅನ್ನದ ಜೊತೆ ಸವಿದು ನೋಡಿ. ದೋಸೆಯ ಜೊತೆ ಸಹ ಚೆನ್ನಾಗಿರುತ್ತದೆ. 

ಸಲಹೆ: ನಾಟಿ ಸೋರೆಕಾಯಿ (ಮನೆಯಲ್ಲೇ ಬೆಳೆದಿದ್ದು) ಆದರೆ ಇನ್ನೂ ಚೆನ್ನಾಗಿರುತ್ತದೆ. 


ಸೋಮವಾರ, ಸೆಪ್ಟೆಂಬರ್ 12, 2016

ಗೋಧಿ ನುಚ್ಚಿನ ಪಾಯಸ :


ಸಾಮಗ್ರಿಗಳು:
ದೊಡ್ಡ ಅಥವಾ ಮಧ್ಯಮ ಗೋಧಿ ನುಚ್ಚು (ಕಡಿ): 1.5 ಕಪ್
ಹಾಲು : 2 ಕಪ್
ತೆಂಗಿನ ತುರಿ :1/2 ಕಪ್
ಸಕ್ಕರೆ :3 ಕಪ್
ಒಣ ದ್ರಾಕ್ಷಿ : 1 ಚಮಚ
ಗೋಡಂಬಿ : 8
ಖರ್ಜೂರ : 4-5
ತುಪ್ಪ : 2 ಚಮಚ 
ಉಪ್ಪು: 1/4 ಚಮಚ

ವಿಧಾನ:
ಗೋಧಿ ನುಚ್ಚನ್ನು 4-5 ಘಂಟೆ ನೀರಿನಲ್ಲಿ ನೆನೆಸಿಕೊಳ್ಳಿ. ನಂತರ ಆ ನೀರಿನ ಜೊತೆಯೇ ಕುಕ್ಕರ್ ನಲ್ಲಿ ೩ ವಿಶಲ್ ಕೂಗಿಸಿ ಬೇಯಿಸಿಕೊಳ್ಳಿ. ಇದನ್ನು ದಪ್ಪ ತಳದ ಪಾತ್ರೆಗೆ ಹಾಕಿ ಹಾಲು, ಸಕ್ಕರೆ ಹಾಕಿ ಒಲೆಯ ಮೇಲಿಡಿ. ಇತ್ತ ತೆಂಗಿನ ತುರಿಗೆ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಂಡು ಪಾಯಸಕ್ಕೆ ಹಾಕಿ. ದ್ರಾಕ್ಷಿ, ಗೋಡಂಬಿ ಚೂರುಗಳು ಮತ್ತು ಉಪ್ಪು ಹಾಕಿ ಚೆನ್ನಾಗಿ ಕುದಿಸಿ. ಪಾಯಸ ದಪ್ಪ ಅನಿಸಿದರೆ ಹಾಲು / ನೀರು ಸೇರಿಸಿ ಕುದಿಸಿ. ಕೊನೆಯಲ್ಲಿ ಖರ್ಜೂರವನ್ನು ಸಣ್ಣದಾಗಿ ಹೆಚ್ಚಿಕೊಂಡು ತುಪ್ಪದಲ್ಲಿ ಹುರಿದು ಪಾಯಸಕ್ಕೆ ಹಾಕಿದರೆ ರುಚಿಯಾದ ಪಾಯಸ ಸಿದ್ಧ. 


ಸಲಹೆ :
1) ಗೋಧಿ ಕಡಿ / ನುಚ್ಚಿನ ಬದಲು ಗೋಧಿಯಿಂದಲೇ ಪಾಯಸ  ಮಾಡಬಹುದು. ಆದರೆ ರಾತ್ರಿಯಿಡೀ ಗೋಧಿಯನ್ನು ನೆನೆಸಿಟ್ಟು ಮಾಡಬೇಕು. ಪೂರ್ತಿ ಗೋಧಿ ಅಗಿಯಲು ಸಿಗುವದರಿಂದ ಗೋಧಿ ಪಾಯಸ ಕೂಡ ಚೆನ್ನಾಗಿರುತ್ತದೆ. 
2) ಹಾಲನ್ನು ಹಾಕುವಾಗ ಪಾಯಸ ನಿಮಗೆ ಎಷ್ಟು ದಪ್ಪ ಬೇಕು ನೋಡಿಕೊಂಡು ಹಾಕಿಕೊಳ್ಳಿ. ಪೂರ್ತಿ ಹಾಲನ್ನು ಒಮ್ಮೆಲೇ ಹಾಕಿಕೊಳ್ಳಬೇಡಿ. 
3) ಸಕ್ಕರೆ ಬದಲು ಬೆಲ್ಲ ಕೂಡ ಹಾಕಬಹುದು. ಅಥವಾ ಬೆಲ್ಲ ಸಕ್ಕರೆ ಎರಡನ್ನೂ ಹಾಕಿ ಮಾಡಬಹುದು. 

ಶುಕ್ರವಾರ, ಸೆಪ್ಟೆಂಬರ್ 9, 2016

ಹಾಗಲಕಾಯಿ ಹುಳಿ ಗೊಜ್ಜು:

ಸಾಮಗ್ರಿಗಳು: 
ಹಾಗಲಕಾಯಿ - ೧ ದೊಡ್ಡದು, 
ಬೆಲ್ಲ - ೧/೨ ಕಪ್, 
ಹುಣಸೆಹಣ್ಣಿನ ರಸ - ೧/೨ ಕಪ್,
ಸೂಜಿ ಮೆಣಸು - ೧೦-೧೨( ಖಾರದ ಹಸಿ ಮೆಣಸು - ೪ ),
ಉಪ್ಪು ರುಚಿಗೆ ತಕ್ಕಷ್ಟು, 
ಎಣ್ಣೆ ೨ ಚಮಚ, 
ಸಾಸಿವೆ - ೧/೨ ಚಮಚ, 
ಕರಿಬೇವು ೫-೬ ಎಲೆ, ಅರಿಶಿನ ಚಿಟಿಕೆ.







ವಿಧಾನ : ಹಾಗಲಕಾಯಿಯನ್ನು ಒ೦ದಿ೦ಚು ಉದ್ದಕೆ ತೆಳ್ಳಗೆ ಹೆಚ್ಚಿಕೊಳ್ಳಿ. ದಪ್ಪ ತಳದ ಪಾತ್ರೆ / ಬಾಣಲೆಯನ್ನು ಒಲೆಯಮೇಲಿಟ್ಟು ಅದಕ್ಕೆ ಎಣ್ಣೆ ಹಾಕಿ ಅದು ಕಾದ ಮೇಲೆ ಸಾಸಿವೆ,ಅರಿಶಿನ, ಕರಿಬೇವು ಹಾಕಿ, ಸಾಸಿವೆ ಚಟಪಟಿಸಿದ ಮೇಲೆ ಹೆಚ್ಚಿಟ್ಟ ಹಾಗಲಕಾಯಿ, ಬೆಲ್ಲ, ಉಪ್ಪು, ಹುಣಸೆಹಣ್ಣಿನ ರಸ ಹಾಕಿ ಸಣ್ಣ ಉರಿಯಲ್ಲಿ ೧೫-೨೦ ನಿಮಿಷ ಕುದಿಸಿ ಆಗಾಗ ತಳ ಹಿಡಿಯದ೦ತೆ ಸೌಟಿನಲ್ಲಿ ತೊಳೆಸುತ್ತಿರಿ. ಇದು ಗಟ್ಟಿ ಚಟ್ನಿಯ ಹದಕ್ಕೆ ಬ೦ದ ಮೇಲೆ ಉರಿ ಆರಿಸಿ ಇಡಿ. ಇದನ್ನು ೮-೧೦ ದಿನಗಳವರೆಗೆ ಇಡಬಹುದು.

ಶುಕ್ರವಾರ, ಆಗಸ್ಟ್ 26, 2016

ಕರ್ಜಿಕಾಯಿ

ಸಾಮಗ್ರಿಗಳು: 
ತೆ೦ಗಿನತುರಿ - 1 ಕಪ್, 
ಸಕ್ಕರೆ - 1/2 ಕಪ್, 
ಎಳ್ಳು - 1 ಚಮಚ, 
ಏಲಕ್ಕಿ ಪುಡಿ - 1ಚಿಟಿಕೆ, 
ಚಿರೋಟಿ ರವಾ - 1/2 ಕಪ್ , 
ಮೈದಾ ಹಿಟ್ಟು 1/2 ಕಪ್,
 ಉಪ್ಪು ರುಚಿಗೆ ತಕ್ಕಷ್ಟು, ಎಣ್ಣೆ ಕರಿಯಲು.






ವಿಧಾನ :ಚಿರೋಟಿ ರವಾ, ಮೈದಾ ಹಿಟ್ಟು, ಉಪ್ಪು ಸೇರಿಸಿ ಸ್ವಲ್ಪ ನೀರು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲೆಸಿ ಇಟ್ಟುಕೊಳ್ಳಿ. ಈಗ ಒ೦ದು ಬಾಣಲೆಗೆ ಸಕ್ಕರೆ ತೆ೦ಗಿನತುರಿ ಹಾಕಿ ಸಣ್ಣ ಉರಿಯಲ್ಲಿ 10-15 ನಿಮಿಷ ಹುರಿದು ಕೊನೆಯಲ್ಲಿ ಎಳ್ಳು, ಏಲಕ್ಕಿ ಪುಡಿ ಸೇರಿಸಿ ಬಾಣಲೆಯನ್ನು ಒಲೆಯಿ೦ದ ಇಳಿಸಿ. ಈ ಹೂರಣ ತಣಿಯುವವರೆಗೆ ಹಿಟ್ಟನ್ನು ಪುರಿಯ ಉ೦ಡೆಯ ಹಾಗೆ ಚಿಕ್ಕ ಚಿಕ್ಕ ಉ೦ಡೆ ಮಾಡಿಕೊ೦ಡು ಲಟ್ಟಿಸಿ ಇದರೊಳಗೆ ಹೂರಣ ತು೦ಬಿ ಮಡಿಚಿ ಕಾದ ಎಣ್ಣೆಯಲ್ಲಿ ಹದವಾದ ಉರಿಯಲ್ಲಿ ಕರಿದರೆ ಗರಿ ಗರಿ ಕರ್ಜಿಕಾಯಿ ರೆಡಿ.

ಸೂಚನೆ:
1. ತೆ೦ಗಿನತುರಿಯ ಬದಲು ಕೊಬ್ಬರಿ ತುರಿಯನ್ನು ಬಳಸಬಹುದು. ಕೊಬ್ಬರಿ ತುರಿ ಬಳಸುವಾಗ ಸಕ್ಕರೆ ಬದಲು ಸಕ್ಕರೆ ಪುಡಿ ಹಾಕಿ ಮಾಡಿ.

2. ಮೈದಾಹಿಟ್ಟಿನ ಬದಲು ಗೋಧಿಹಿಟ್ಟೂ ಬಳಸಬಹುದು. 

ಶುಕ್ರವಾರ, ಆಗಸ್ಟ್ 19, 2016

ಇಡ್ಲಿ ಮಂಚೂರಿಯನ್ :

ಬೆಳಿಗ್ಗೆ ತಿಂಡಿಗೆ ಮಾಡಿದ ಇಡ್ಲಿ ಉಳಿದುಬಿಟ್ಟರೆ ಮತ್ತೆ ಅದನ್ನು ತಿನ್ನಲು ಬೇಜಾರು. ಅಂತಹ ಸಮಯದಲ್ಲಿ ಉಳಿದ ಇಡ್ಲಿಯಿಂದ ಮಂಚೂರಿಯನ್ ಮಾಡಿಕೊಂಡು ಸಾಯಂಕಾಲಕ್ಕೆ ಸ್ನಾಕ್ಸ್ ತಿನ್ನಬಹುದು. ನೀವೂ ಟ್ರೈ ಮಾಡಿ ನೋಡಿ. 

ಸಾಮಗ್ರಿಗಳು:
ತಣ್ಣಗಾದ ಇಡ್ಲಿ : 8-10 (ಮಧ್ಯಮ ಗಾತ್ರದ್ದು / ಇಡ್ಲಿ ಪ್ಲೇಟ್ ನಲ್ಲಿ ಮಾಡಿರುವಂತದ್ದು)
ಮೈದಾ ಹಿಟ್ಟು : 4 ಟೇಬಲ್ ಚಮಚ
ಕಾರ್ನ್ ಫ್ಲೋರ್ : 2 ಟೇಬಲ್ ಚಮಚ 
ಅಚ್ಚ ಖಾರದ ಪುಡಿ : 1/2 ಟೀ ಚಮಚ 
ಕ್ಯಾಪ್ಸಿಕಂ : 1
ಈರುಳ್ಳಿ : 1
ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ : 1 ಟೇಬಲ್ ಚಮಚ 
ಸಣ್ಣಗೆ ಹೆಚ್ಚಿದ ಶುಂಠಿ : 1/2 ಟೇಬಲ್ ಚಮಚ 
ಕೊತ್ತಂಬರಿ ಸೊಪ್ಪು : 1 ಟೇಬಲ್ ಚಮಚ 
ಸೋಯಾ ಸಾಸ್ : 1/2 ಟೀ ಚಮಚ 
ಗ್ರೀನ್ ಚಿಲ್ಲಿ ಸಾಸ್ : 2-3 ಟೀ ಚಮಚ 
ಟೊಮೇಟೊ ಸಾಸ್: 2 ಟೀ ಚಮಚ 
ವಿನೆಗರ್ ಅಥವಾ ಲಿಂಬುರಸ : 1/2 ಟೀ ಚಮಚ  
ಎಣ್ಣೆ : ಕರಿಯಲು 
ಉಪ್ಪು : ರುಚಿಗೆ 

ವಿಧಾನ :
ತಣ್ಣಗಾದ ಇಡ್ಲಿಯನ್ನು ಸಣ್ಣ ಸಣ್ಣ ಚೂರುಗಳಾಗಿ ಕತ್ತರಿಸಿ (like paneer cubes). ಕ್ಯಾಪ್ಸಿಕಂ, ಈರುಳ್ಳಿಯನ್ನು ಉದ್ದುದ್ದ ಹೆಚ್ಚಿಕೊಳ್ಳಿ. ಒಲೆಯ ಮೇಲೆ ಕರಿಯಲು ಎಣ್ಣೆ ಕಾಯಲು ಇಟ್ಟುಕೊಳ್ಳಿ.  ಮೈದಾ, ಕಾರ್ನ್ ಫ್ಲೋರ್, ಚಿಟಿಕೆ ಉಪ್ಪು, ಅಚ್ಚ ಖಾರದ ಪುಡಿ ಮತ್ತು ನೀರು ಹಾಕಿ ಗಂಟಿಲ್ಲದಂತೆ ತೆಳ್ಳಗೆ ಕಲಸಿಕೊಳ್ಳಿ. ಇದು ಇಡ್ಲಿಗೆ ತೆಳುವಾಗಿ ಅಂಟುವಷ್ಟು ತೆಳ್ಳಗಿರಲಿ.   ಕತ್ತರಿಸಿದ ಇಡ್ಲಿ ಚೂರುಗಳನ್ನು ಈ ಹಿಟ್ಟಿನಲ್ಲಿ ಅದ್ದಿ ಕಾದ ಎಣ್ಣೆಯಲ್ಲಿ ಬಿಟ್ಟು ಮಧ್ಯಮ ಉರಿಯಲ್ಲಿ ಚೆನ್ನಾಗಿ ಕರಿಯಿರಿ. ಈ ಕರಿದ ಇಡ್ಲಿ ಮೇಲಿನ ಭಾಗ ಗರಿಯಾಗಿ, ಒಳಗೆ ಮೆತ್ತಗಿರುತ್ತದೆ. 

ನಂತರ ಇನ್ನೊಂದು ಬಾಣಲೆಗೆ ಈ ಕರಿದ ಎಣ್ಣೆಯನ್ನೇ 4 ಚಮಚ ಹಾಕಿ ಅದಕ್ಕೆ ಹೆಚ್ಚಿದ ಶುಂಠಿ, ಬೆಳ್ಳುಳ್ಳಿ ಹಾಕಿ ಸ್ವಲ್ಪ ಫ್ರೈ ಮಾಡಿ, ಹೆಚ್ಚಿದ ಈರುಳ್ಳಿ, ಕ್ಯಾಪ್ಸಿಕಂ ಹಾಕಿ ಅರ್ಧ ನಿಮಿಷ ಹುರಿಯಿರಿ. ನಂತರ ಇದಕ್ಕೆ ಅರ್ಧ ಟೀ ಚಮಚದಷ್ಟು ಉಪ್ಪು, ಸೋಯಾ ಸಾಸ್, ಗ್ರೀನ್ ಚಿಲ್ಲಿ ಸಾಸ್, ಟೊಮೇಟೊ ಸಾಸ್, ಲಿಂಬು ರಸ / ವಿನೆಗರ್ ಗಳನ್ನೂ ಒಂದೊಂದಾಗಿ ಹಾಕುತ್ತ ಚೆನ್ನಾಗಿ ಮಿಕ್ಸ್ ಮಾಡಿ. ಈಗ ಕರಿದಿಟ್ಟ ಇಡ್ಲಿಯನ್ನು ಹಾಕಿ ಸರಿಯಾಗಿ ಮಿಕ್ಸ್ ಮಾಡಿ, ಕೊತ್ತಂಬರಿ ಸೊಪ್ಪು ಹಾಕಿ ಬಿಸಿ ಬಿಸಿ  ಇಡ್ಲಿ ಮಂಚೂರಿಯನ್ ಸರ್ವ್ ಮಾಡಿ.  







ಸಲಹೆ: 
1) ಈರುಳ್ಳಿ ಗಿಡವನ್ನೂ (spring onion) ಸಹ ಸಣ್ಣಗೆ ಹೆಚ್ಚಿ ಸ್ವಲ್ಪ ಫ್ರೈ ಮಾಡಲು ಹಾಕಿ , ಸ್ವಲ್ಪ ಮೇಲಿಂದ ಹಸಿಯಾಗಿ ಹಾಕಿ ಸರ್ವ್ ಮಾಡಬಹುದು. 
2) ಇಡ್ಲಿಗೆ ಉಪ್ಪು ಹಾಕಿರುವುದರಿಂದ ಉಪ್ಪು ಹಾಕುವಾಗ ಎಚ್ಚರವಿರಲಿ. 
3) ಯಾವುದೇ ಇಡ್ಲಿಯಿಂದ ಕೂಡ ಮಾಡಬಹುದು. ನಾ  ಕೊಟ್ಟಿರುವ ಅಳತೆಗೆ  ನಾನು ಇಡ್ಲಿ ಪ್ಲೇಟ್ ನ ಇಡ್ಲಿ ಎಂದು ಹಾಕಿದ್ದೇನಷ್ಟೆ. 

ಗುರುವಾರ, ಆಗಸ್ಟ್ 11, 2016

ಬಿಲ್ವ ಪತ್ರೆ ತ೦ಬ್ಳಿ (ತ೦ಬುಳಿ):

ಸಾಮಗ್ರಿಗಳು: ಬಿಲ್ವಪತ್ರೆ -8-10, ಎಣ್ಣೆ -1 ಚಮಚ, ಜೀರಿಗೆ - 1/2 ಚಮಚ , ತೆ೦ಗಿನತುರಿ - 1/4 ಕಪ್ , ಉಪ್ಪುರುಚಿಗೆ ತಕ್ಕಷ್ಟು.




ವಿಧಾನ : ಒ೦ದು ಬಾಣಲೆಗೆ ೧ ಚಮಚ ಎಣ್ಣೆ, ಬಿಲ್ವಪತ್ರೆ ಹಾಗು ಜೀರಿಗೆ ಹಾಕಿ ೨ ನಿಮಿಶ ಬಾಡಿಸಿ,,, ಈಗ ಅದಕ್ಕೆ ತೆ೦ಗಿನತುರಿ ಉಪ್ಪು ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿ ಪಾತ್ರೆಗೆ ಹಾಕಿ ಅದಕ್ಕೆ ಇನ್ನು ೨ ಲೋಟ ನೀರು ಸೇರಿಸಿದರೆ ಬಿಲ್ವಪತ್ರೆ ತ೦ಬುಳಿ ಅನ್ನದ ಜೊತೆ ತಿನ್ನಲು ಸಿದ್ದ.ಹಾಗೆ ಕುಡಿಯಲು ಚೆನ್ನಾಗಿರುತ್ತದೆ

ಶುಕ್ರವಾರ, ಆಗಸ್ಟ್ 5, 2016

ಮೊಳಕೆ ಹೆಸರುಕಾಳು ಸಾರು:

ಸಾಮಗ್ರಿಗಳು:
ಮೊಳಕೆ ಕಟ್ಟಿದ ಹೆಸರುಕಾಳು (sprouts) : 2.5 ಕಪ್
ಈರುಳ್ಳಿ : 1 (ಮಧ್ಯಮ ಗಾತ್ರ)
ಬೆಳ್ಳುಳ್ಳಿ : 8-10 ಎಸಳು
ಕರಿಬೇವು : 8-10 ಎಲೆಗಳು
ಎಣ್ಣೆ : 4 ಚಮಚ
ಜೀರಿಗೆ : 1/2 ಚಮಚ
ಸಾಸಿವೆ : 1/2 ಚಮಚ
ಹಸಿಮೆಣಸಿನ ಕಾಯಿ : 2
ಅರಿಶಿನ ಪುಡಿ :1/4 ಚಮಚ 
ಗರಂ ಮಸಾಲ ಪುಡಿ : 1/2 ಚಮಚ
ಅಚ್ಚ ಮೆಣಸಿನ ಪುಡಿ : 1/2 ಚಮಚ (ನಿಮ್ಮ ಖಾರಕ್ಕೆ ಅನುಗುಣವಾಗಿ)
ಲಿಂಬೆ ರಸ : 2-3 ಚಮಚ
ಉಪ್ಪು : ರುಚಿಗೆ ತಕ್ಕಷ್ಟು

ವಿಧಾನ :
ಮೊಳಕೆ ಕಾಳನ್ನು ಕುಕ್ಕರ್ ನಲ್ಲಿ ತುಂಬಾ ಮೆತ್ತಗಾಗದಂತೆ (ಕರಗದಂತೆ) ಬೇಯಿಸಿಕೊಳ್ಳಿ. ಅರ್ಧ ಕಪ್ ನಷ್ಟು ಬೆಂದ ಕಾಳನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ಈರುಳ್ಳಿಯನ್ನು ತೆಳ್ಳಗೆ, ಉದ್ದುದ್ದ ಹೆಚ್ಚಿಕೊಳ್ಳಿ. ಬೆಳ್ಳುಳ್ಳಿ ಸಿಪ್ಪೆ ತೆಗೆದು ಜಜ್ಜಿಕೊಳ್ಳಿ. ಹಸಿಮೆಣಸನ್ನು ಉದ್ದಕ್ಕೆ ಸೀಳಿಕೊಳ್ಳಿ. ನಂತರ ಒಂದು ಬಾಣಲೆಯನ್ನು ಒಲೆಯ ಮೇಲಿಟ್ಟು ಅದಕ್ಕೆ ಎಣ್ಣೆ ಹಾಕಿ ಕಾಯಿಸಿ, ಜೀರಿಗೆ ಸಾಸಿವೆ ಹಾಕಿ ಸಿಡಿಸಿ. ಇದಕ್ಕೆ ಹಸಿಮೆಣಸಿನ ಕಾಯಿ, ಕರಿಬೇವು, ಜಜ್ಜಿದ ಬೆಳ್ಳುಳ್ಳಿ ಹಾಕಿ ಸ್ವಲ್ಪ ಬಾಡಿಸಿ. ನಂತರ ಈರುಳ್ಳಿ ಹಾಕಿ ಫ್ರೈ ಮಾಡಿ. ಇದಕ್ಕೆ ಅರಿಶಿನ ಪುಡಿ, ಗರಂ ಮಸಾಲಾ ಪುಡಿ, ಅಚ್ಚ ಖಾರದ ಪುಡಿ ಹಾಕಿ ಮಿಕ್ಸ್ ಮಾಡಿಕೊಂಡು ಬೇಯಿಸಿಟ್ಟ ಹೆಸರು ಕಾಳು ಮತ್ತು ರುಬ್ಬಿದ ಕಾಳನ್ನು ಹಾಕಿ, ೨ ಕಪ್ ನಷ್ಟು ನೀರು, ಉಪ್ಪು ಹಾಕಿ ಕುದಿಸಿ. ಕೊನೆಯಲ್ಲಿ ಲಿಂಬೆ ರಸ ಹಾಕಿ ಉರಿ ಆರಿಸಿ. ಬಿಸಿ ಬಿಸಿಯಾದ ಹೆಸರುಕಾಳು ಸಾರು ಅನ್ನದ ಜೊತೆ ಸವಿಯಲು ಸಿದ್ಧ. 





ಶುಕ್ರವಾರ, ಜುಲೈ 29, 2016

ಕ್ಯಾರೇಟ್ ಕ್ಯಾಪ್ಸಿಕಮ್ ಚಪಾತಿ:

ಸಾಮಗ್ರಿಗಳು : ಗೋಧಿ ಹಿಟ್ಟು 2 ಕಪ್, ಕ್ಯಾರೇಟ್ - 1, ಕ್ಯಾಪ್ಸಿಕಮ್ - 1, ಉಪ್ಪು, ಕಿಚನ್ ಕಿ೦ಗ್ ಮಸಾಲಾ - 1 ಚಮಚ, ಅಚ್ಚ ಖಾರದ ಪುಡಿ, ಎಣ್ಣೆ 1/2 ಕಪ್.





ವಿಧಾನ: ಕ್ಯಾಪ್ಸಿಕಮ್ ನ್ನು ಸಣ್ಣಗೆ ಹೆಚ್ಚಿಕೊಳ್ಳಿ, ಹಾಗೆ ಕ್ಯಾರೇಟ್ ನ್ನು ತುರಿದುಕೊಳ್ಳಿ. ಒ೦ದು ಬಾಣಲೆಗೆ 2 ಚಮಚ ಎಣ್ಣೆ ಹಾಕಿ ಅದು ಕಾದ ಮೇಲೆ ಹೆಚ್ಚಿಟ್ಟ ಕ್ಯಾಪ್ಸಿಕಮ್ & ಕ್ಯಾರೇಟ್ ಹಾಕಿ 5 ನಿಮಿಷ ಫ್ರೈ ಮಾಡಿ. ಸ್ವಲ್ಪ ನೀರು, ಉಪ್,ಪು ಕಿಚನ್ ಕಿ೦ಗ್ ಮಸಾಲ, ಅಚ್ಚ ಖರದ ಪುಡಿ ಹಾಕಿ ಬೇಯಿಸಿ. ಅರ್ಧ ಬೆ೦ದರೆ ಸಾಕು. ಹಾಗೆ ಇದು ಬಿಸಿ ಕಮ್ಮಿ ಆದ ಮೇಲೆ ಗೋಧಿ ಹಿಟ್ಟು ಸೇರಿಸಿ ಚಪಾತಿಯ ಹಿಟ್ಟು ಕಲೆಸಿ. ಈಗ ಉ೦ಡೆ ಮಾಡಿಕೊ೦ಡು ಎಣ್ಣೆ ಸವರಿಕೊಂಡ ಪ್ಲಾಸ್ಟಿಕ್ ಮೇಲೆ ಚಪಾತಿಯನ್ನು ಲಟ್ಟಿಸಿ ಕಾದ ಕಾವಲಿಯ ಮೇಲೆ ಹಾಕಿ ಮೀಡಿಯಮ್ ಉರಿಯಲ್ಲಿ ಬೇಯಿಸಿ. ಬೇಯಿಸುವಾಗ ಸ್ವಲ್ಪ ಎಣ್ಣೆ ಹಾಕಿ. ಈಗ ಬಿಸಿ ಬಿಸಿ ಕ್ಯಾರೇಟ್ ಕ್ಯಾಪ್ಸಿಕಮ್ ಚಪಾತಿ ತಿನ್ನಲು ಸಿದ್ಧ. ಬೇಕಾದರೆ ಚಟ್ನಿ ಜೊತೆ ತಿನ್ನಬಹುದು. ಹಾಗೆ ತಿನ್ನಲು ರುಚಿಯಾಗಿರುತ್ತದೆ.

ಶುಕ್ರವಾರ, ಜುಲೈ 22, 2016

ದೊಡ್ಡಪತ್ರೆ ಸೊಪ್ಪಿನ ವಡೆ :

ಗೆಳತಿಯೊಬ್ಬಳಿಂದ ಕಲಿತ ರೆಸಿಪಿ ಇದು... ಈ ಮಳೆಯ ವಾತಾವರಣಕ್ಕೆ, ಸಂಜೆ ಟೀ/ ಕಾಫೀ ಜೊತೆ ಒಳ್ಳೆಯ ಕಾಂಬಿನೇಷನ್..... 

ಸಾಮಗ್ರಿಗಳು:
ದೊಡ್ಡಪತ್ರೆ ಎಲೆಗಳು : 8-10
ಜೀರಿಗೆ: 1 ಚಮಚ
ಎಳ್ಳು : 1 ಚಮಚ 
ತೆಂಗಿನ ತುರಿ : 1/2 ಕಪ್ 
ಶೇಂಗಾ: 1/4 ಕಪ್ 
ಉಪ್ಪಿಟ್ಟಿನ ರವಾ : 1 - 1 1/4 ಕಪ್ 
ಕರಿಬೇವು : 10-12 ಎಲೆಗಳು 
ಉಪ್ಪು : ರುಚಿಗೆ 
ಎಣ್ಣೆ : ಕರಿಯಲು 

ವಿಧಾನ :
ಒಗ್ಗರಣೆ ಸೌಟಿಗೆ 1/2 ಚಮಚ ಎಣ್ಣೆ ಹಾಕಿ ಜೀರಿಗೆ ಹಾಕಿ ಸ್ವಲ್ಪ ಹುರಿದು ಅದಕ್ಕೆ ದೊಡ್ಡಪತ್ರೆ ಎಲೆಗಳನ್ನು ಕತ್ತರಿಸಿ ಹಾಕಿ ಹುರಿಯಿರಿ. ಇದು ಸ್ವಲ್ಪ ಬಾಡಿದ ಮೇಲೆ ಎಳ್ಳು ಹಾಕಿ ಚಿಟಪಟಾಯಿಸಿ. ನಂತರ ತೆಂಗಿನ ತುರಿಗೆ ಹುರಿದ ಮಿಶ್ರಣ ಸ್ವಲ್ಪ ನೀರು ಸೇರಿಸಿ ರುಬ್ಬಿ. ಈ ಮಿಶ್ರಣ ಗೊಜ್ಜಿನ ಹದಕ್ಕೆ ಇರಲಿ. ತುಂಬಾ ನೀರು ಹಾಕಬೇಡಿ. ಶೇಂಗಾವನ್ನು ಸ್ವಲ್ಪ ಹುರಿದು ದೊಡ್ಡ ತರಿ ಇರುವಂತೆ ಪುಡಿ ಮಾಡಿ. ಉಪ್ಪಿಟ್ಟಿನ ರವೆಯನ್ನು ಹುರಿದುಕೊಳ್ಳಿ (ಉಪ್ಪಿಟ್ಟಿಗೆ ಹುರಿಯುವಷ್ಟು). ನಂತರ ರುಬ್ಬಿದ ಮಿಶ್ರಣಕ್ಕೆ ಹೆಚ್ಚಿದ ಕರಿಬೇವು, ಉಪ್ಪು, ಪುಡಿ ಮಾಡಿದ ಶೇಂಗಾ, 2 ಚಮಚ ಎಣ್ಣೆ ಹಾಕಿ, ಸ್ವಲ್ಪ ಸ್ವಲ್ಪ ರವೆ ಹಾಕುತ್ತಾ ಕಲಸಿ. ವಡೆ ತಟ್ಟಲು ಬರುವಷ್ಟು ಗಟ್ಟಿ ಯಾಗಿ ಕಲಸಿ.

ಕಲಸಿದ ಮಿಶ್ರಣದಿಂದ ಲಿಂಬು ಗಾತ್ರದ ಉಂಡೆ ಮಾಡಿಕೊಂಡು ಎಣ್ಣೆ ಸವರಿಕೊಂಡ ಪ್ಲಾಸ್ಟಿಕ್ ಮೇಲೆ ವಡೆಯಂತೆ ತಟ್ಟಿ ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವತನಕ ಕರಿದರೆ ದೊಡ್ಡಪತ್ರೆ ವಡೆ ಸವಿಯಲು ಸಿದ್ಧ. 






ಸೋಮವಾರ, ಜುಲೈ 18, 2016

ಹಲಸಿನ ಹಣ್ಣಿನ ದೋಸೆ:

ಸಾಮಗ್ರಿಗಳು:
 ಅಕ್ಕಿ - 2ಕಪ್, 
ಹಲಸಿನಹಣ್ಣಿನ ತೊಳೆ - 15 
ಬೆಲ್ಲ - 2 ಟೇ. ಚಮಚ
ಉಪ್ಪು - 1 ಚಮಚ

ವಿಧಾನ: ಅಕ್ಕಿಯನ್ನು 5-6 ಗ೦ಟೆ ನೀರಿನಲ್ಲಿ ನೆನೆಸಿಡಿ. ಬೆಳಿಗ್ಗೆ ದೋಸೆ ಮಾಡುವಿರಾದರೆ ರಾತ್ರಿ ಅಕ್ಕಿಯನ್ನು ನುಣ್ಣಗೆ ರುಬ್ಬಿಟ್ಟುಕೊಳ್ಳಿ. ಬೆಳಗ್ಗೆ ಹಲಸಿನಹಣ್ಣಿನ ತೊಳೆಯನ್ನು ರುಬ್ಬಿ ಇದಕ್ಕೆ ಉಪ್ಪು ಬೆಲ್ಲ ಸೇರಿಸಿ ರುಬ್ಬಿಟ್ಟ ಅಕ್ಕಿ ಹಿಟ್ಟಿಗೆ ಸೇರಿಸಿ. ಕಾವಲಿಯನ್ನು ಇಟ್ಟು ಉರಿಯನ್ನು ಹದವಾಗಿಡಿ ಕಾವಲಿಗೆ ಸ್ವಲ್ಪ ಎಣ್ಣೆ ಹಚ್ಚಿ ದೋಸೆಹಿಟ್ಟು ಹಾಕಿ ಹರಡಿ.ಸ್ವಲ್ಪ ಕೆ೦ಪಾಗುತ್ತಲೆ ಕಾವಲಿಯಿ೦ದ ದೋಸೆ ತೆಗೆದು, ಬಿಸಿ ಬಿಸಿ ದೋಸೆಗೆ ತುಪ್ಪ/ಬೆಣ್ಣೆ ಚಟ್ನಿಪುಡಿ/ ಹಸಿಮೆಣಸಿನ ಚಟ್ನಿ ಜೊತೆ ಸವಿಯಿರಿ.


ಸೂಚನೆ: ಬೆಲ್ಲ & ಹಲಸಿನಹಣ್ಣಿನ ತೊಳೆಯನ್ನು ಹಿಟ್ಟಿನ ಹದ ನೋಡಿಕೊ೦ಡು ಹಾಕಬೇಕು. ಜಾಸ್ತಿ ಹಾಕಿದರೆ ದೋಸೆಯನ್ನು ಕಾವಲಿಯಿ೦ದ ತೆಗೆಯಲು ಕಷ್ಟವಾಗುತ್ತದೆ.

ಶನಿವಾರ, ಜುಲೈ 9, 2016

ಶ್ಯಾವಿಗೆ ಶಿರಾ


ಸಾಮಗ್ರಿಗಳು :
MTR ಶ್ಯಾವಿಗೆ 150 ಗ್ರಾ೦
ಹಾಲು 1 1/4 ಕಪ್
ಸಕ್ಕರೆ 1- 1 1/4 ಕಪ್, 
ತುಪ್ಪ 1/4 ಕಪ್, 
ಗೋಡಂಬಿ 6-7,
ಹಳದಿ / ಕೇಸರಿ ಬಣ್ಣ 3-4 ಚಿಟಿಕೆ (Food Color)

ವಿಧಾನ:
ಶ್ಯಾವಿಗೆಯನ್ನು ಬಾಣಲೆಗೆ ಹಾಕಿ ತುಪ್ಪ ಹಾಕಿ ಹೊಂಬಣ್ಣಕ್ಕೆ ಹುರಿಯಿರಿ. ನಂತರ ಚೂರು ಮಾಡಿದ ಗೋಡಂಬಿ ಹಾಕಿ. ಇದಕ್ಕೆ ಎರಡು ಚಮಚ ಹಾಲಿಗೆ ಹಳದಿ / ಕೇಸರಿ ಬಣ್ಣವನ್ನು ಹಾಕಿ ಕಲಕಿ ಅದನ್ನು ಹಾಕಿ. ನಂತರ ಬಿಸಿ ಬಿಸಿ ಹಾಲನ್ನು ಸ್ವಲ್ಪ ಸ್ವಲ್ಪವೇ ಹಾಕುತ್ತ ಕಲಕುತ್ತಾ ಬನ್ನಿ.  ಶ್ಯಾವಿಗೆ ತುಂಬಾ ಮೆತ್ತಗಾಗಿ, ಮಡ್ಡಿಯಾಗದಂತೆ ನೋಡಿಕೊಳ್ಳಿ. ಶ್ಯಾವಿಗೆ 75% ಬೆಂದು ಉದುರುದುರಾಗಿ ಇರುವಾಗಲೇ ಹಾಲು ಹಾಕುವುದನ್ನು ನಿಲ್ಲಿಸಬೇಕು. ಆಮೇಲೆ ಇದಕ್ಕೆ ಸಕ್ಕರೆ ಹಾಕಿ  ಚೆನ್ನಾಗಿ ಕಲಕಿ. ಸಕ್ಕರೆ ಕರಗಿದ ಮೇಲೆ ಉರಿ ಆರಿಸಿ. ಬಿಸಿ ಬಿಸಿ ಶ್ಯಾವಿಗೆ ಶಿರಾ ತಿನ್ನಲು ರುಚಿ. 

ಸೂಚನೆ: 
1) ಇದರಲ್ಲಿ ಶ್ಯಾವಿಗೆ, ಪಾಯಸದಷ್ಟು ಮೆತ್ತಗಾಗುವುದಿಲ್ಲ. ಸಕ್ಕರೆ ಹಾಕಿದ ಮೇಲೆ ಶ್ಯಾವಿಗೆ ಗಟ್ಟಿ ಆಗುವುದರಿಂದ ಅಗಿದು ತಿನ್ನಲು ಇಷ್ಟ ಪಡುವವರಿಗೆ ಈ ರೆಸಿಪಿ ಇಷ್ಟವಾಗುತ್ತದೆ.  
2) ಸಕ್ಕರೆಯನ್ನು ನಿಮ್ಮ ಅಗತ್ಯಕ್ಕೆ ತಕ್ಕಷ್ಟು ನೋಡಿಕೊಂಡು ಹಾಕಿಕೊಳ್ಳಿ. 

ಶುಕ್ರವಾರ, ಜುಲೈ 1, 2016

ನಿ೦ಬೆಹಣ್ಣಿನ (ಲಿ೦ಬು) ಸಾರು :

ಸಾಮಗ್ರಿಗಳು:
ನಿ೦ಬೆಹಣ್ಣು ದೊಡ್ಡದು -1,
 ಉಪ್ಪು  - ರುಚಿ ನೋಡಿ ಹಾಕಿ
ಹಸಿ ಮೆಣಸು - 1
ಬಿಳಿ ಕಾಳು ಮೆಣಸು (ಬೋಳ್ ಕಾಳು) - 6-7
ಜೀರಿಗೆ, ಓಮು, - 1/2 ಟೀ ಚಮಚ

ಒಗ್ಗರಣೆ (optional) : ಎಣ್ಣೆ, ಸಾಸಿವೆ, ಇ೦ಗು.ಕರಿಬೇವು


ವಿಧಾನ: ಒ೦ದು ಪಾತ್ರೆಗೆ ೩ ಲೋಟ ನೀರು ಹಾಕಿ ೧ ಚಮಚ ಉಪ್ಪು ನಿ೦ಬು ರಸ ಹಾಕಿ ಕಲಕಿ ಒಲೆ ಉರಿಸಿ ಒಲೆಯ ಮೇಲೆ ಇಡಿ ಇದಕ್ಕೆ ಉದ್ದುದ್ದಕ್ಕೆ ಹೆಚ್ಚಿದ ಹಸಿಮೆಣಸು ಹಾಕಿ. ಬೋಳ್ ಕಾಳು, ಜೀರಿಗೆ, ಓಮು ಇವೆಲ್ಲವನ್ನು ಪೌಡರ್ ಮಾಡಿ ಕುದಿಯುತ್ತಿರುವ ನಿ೦ಬು ಸಾರಿಗೆ ಹಾಕಿ. ಕೊನೆಯಲ್ಲಿ ಒಗ್ಗರಣೆ ಸೌಟಿಗೆ ಚಮಚ ಎಣ್ಣೆ ಹಾಕಿ ಕಾದ ಮೇಲೆ ಸಾಸಿವೆ ಇ೦ಗು ಕರಿಬೇವು ಹಾಕಿದರೆ ಬಿಸಿ ಬಿಸಿ ನಿ೦ಬೆಹಣ್ಣಿನ ಸಾರು ಕುಡಿಯಲು ಸಿದ್ಧ. (ರುಚಿ ನೋಡಿಕೊ೦ಡು ಬೇಕಾದಲ್ಲಿ ಉಪ್ಪು ಸೇರಿಸಿ)

ಮಳೆಗಾಲದಲ್ಲಿ ಇದನ್ನು ಕುಡಿಯಲು ಚೆನ್ನಾಗಿರುತ್ತದೆ. ಈ ನಿ೦ಬುಸಾರಿಗೆ ಮೆಣಸಿನ ಸಾರು ಅ೦ತಾನೂ ಕರೆಯುತ್ತಾರೆ.

ಗುರುವಾರ, ಜೂನ್ 23, 2016

ಮಾವಿನ ಹಣ್ಣಿನ ನೀರ್ ಗೊಜ್ಜು:

ಸಾಮಗ್ರಿಗಳು:
ಹುಳಿ ಮಾವಿನ ಹಣ್ಣು : 6-8 (ಕಾಡು ಮಾವು),
ಬೆಲ್ಲ : 1/2 ಕಪ್,
ಬೆಳ್ಳುಳ್ಳಿ : 8-10 ಎಸಳು,
ಒಣ ಮೆಣಸು: 1
ಹಸಿಮೆಣಸು :2-3,
ಎಣ್ಣೆ: 2 ಚಮಚ,
ಸಾಸಿವೆ: 1/2 ಚಮಚ,
ಉಪ್ಪು : ರುಚಿಗೆ

ವಿಧಾನ:
ಮಾವಿನ ಹಣ್ಣನ್ನು ತೊಳೆದು, ಸಿಪ್ಪೆ ತೆಗೆದು ಒಂದು ಪಾತ್ರೆಗೆ ಹಾಕಿ ಅದಕ್ಕೆ ಉಪ್ಪು, ಬೆಲ್ಲ ಹಾಕಿ ಅದನ್ನು ಚೆನ್ನಾಗಿ ಕಿವುಚಿರಿ. ಬೆಳ್ಳುಳ್ಳಿ ಸಿಪ್ಪೆ ತೆಗೆದು ಜಜ್ಜಿಕೊಳ್ಳಿ. ಒಗ್ಗರಣೆ ಸೌಟಿಗೆ ಎಣ್ಣೆ ಹಾಕಿ ಕಾಯಿಸಿ ಅದಕ್ಕೆ ಸಾಸಿವೆ ಹಾಕಿ ಸಿಡಿದ ಮೇಲೆ ಒಣಮೆಣಸು, ಚೂರು ಮಾಡಿದ ಹಸಿಮೆಣಸು ಹಾಕಿ ಫ್ರೈ ಮಾಡಿ ಅದಕ್ಕೆ ಜಜ್ಜಿದ ಬೆಳ್ಳುಳ್ಳಿ ಹಾಕಿ ಫ್ರೈ ಮಾಡಿ ಗೊಜ್ಜಿಗೆ ಹಾಕಿ. ಮೆಣಸಿನ ಕಾಯಿಯನ್ನು ನುರಿಯಿರಿ. ಹುಳಿ, ಸಿಹಿ, ಖಾರದ ಮಾವಿನಕಾಯಿ ಗೊಜ್ಜನ್ನು ಅನ್ನದ ಜೊತೆ ಸವಿಯಿರಿ.



ಶುಕ್ರವಾರ, ಜೂನ್ 17, 2016

ಮಾವಿನಹಣ್ಣಿನ ಸಾಸಿವೆ:



ಸಾಮಗ್ರಿಗಳು: 
ಹುಳಿ ಸಿಹಿ ಮಾವಿನಹಣ್ಣು - 5-6 
ಉಪ್ಪು ರುಚಿಗೆ ತಕ್ಕಷ್ಟು
ಬೆಲ್ಲ -2 ಚಮಚ, 
ತೆ೦ಗಿನತುರಿ 1/2 ಕಪ್, 
ಸಾಸಿವೆ 1/2 ಚಮಚ ,
ಹಸಿ ಮೆಣಸು-1, 
ಅರಿಶಿನ - ದೊಡ್ಡ ಚಿಟಿಕೆ.
ಒಗ್ಗರಣೆಗೆ : ಎಣ್ಣೆ,  ಒಣಮೆಣಸು,  ಸಾಸಿವೆ.



ವಿಧಾನ :  ತೆ೦ಗಿನತುರಿ, ಹಸಿ ಮೆಣಸು, ಸಾಸಿವೆ, ಅರಿಶಿನ ಮಿಕ್ಸಿ ಜಾರ್ ಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಮಾವಿನಹಣ್ಣಿನ ಸಿಪ್ಪೆ ತೆಗೆದು ಅದಕ್ಕೆ ಉಪ್ಪು ಬೆಲ್ಲ ಹಾಕಿ ಕಿವಿಚಿ. ರುಬ್ಬಿದ ಮಿಶ್ರಣವನ್ನು ಇದಕ್ಕೆ ಹಾಕಿ. ನ೦ತರ ಒಗ್ಗರಣೆ ಸೌಟಿಗೆ ಎಣ್ಣೆ ಹಾಕಿ ಬಿಸಿ ಆದಮೇಲೆ ಒಣಮೆಣಸು ಸಾಸಿವೆ ಹಾಕಿ ಅದು ಚಿಟಪಟಿಸಿದ ಮೇಲೆ ಸಾಸಿವೆಗೆ ಒಗ್ಗರಣೆ ಸೇರಿಸಿದರೆ ಮಾವಿನಹಣ್ಣಿನ ಸಾಸಿವೆ ಅನ್ನದ ಜೊತೆ ಸವಿಯಲು ಸಿದ್ಧ.