ಸೋಮವಾರ, ಅಕ್ಟೋಬರ್ 26, 2015

ಸಾಂಬಾರ್ ಸೊಪ್ಪಿನ ಹಶಿ (ದೊಡ್ಡ ಪತ್ರೆ ಮೊಸರು ಬಜ್ಜಿ) :

ಸಾಮಗ್ರಿಗಳು:
ಸಾಂಬಾರ್ ಸೊಪ್ಪು (ದೊಡ್ಡ ಪತ್ರೆ) - 10-12 ಎಲೆಗಳು 
ಮೊಸರು - 1 ಕಪ್ 
ಈರುಳ್ಳಿ - 1 (ಸಣ್ಣದು)
ಎಣ್ಣೆ - 2 ಚಮಚ 
ಉದ್ದಿನ ಬೇಳೆ - 1/2 ಚಮಚ
ಸಾಸಿವೆ - 1/4 ಚಮಚ
ಹಸಿಮೆಣಸಿನ ಕಾಯಿ - 1
ಉಪ್ಪು - ರುಚಿಗೆ 

ವಿಧಾನ :
ದೊಡ್ಡ ಪತ್ರೆ ಎಲೆಗಳನ್ನು ಚೆನ್ನಾಗಿ ತೊಳೆದು ಸಣ್ಣಗೆ ಹೆಚ್ಚಿಕೊಳ್ಳಿ. ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಳ್ಳಿ. ಒಂದು ಬಾಣಲೆಗೆ ಎಣ್ಣೆ, ಉದ್ದಿನಬೇಳೆ ಹಾಕಿ ಸ್ವಲ್ಪ ಕೆಂಪಗಾದ ಮೇಲೆ ಸಾಸಿವೆ ಹಾಕಿ ಸಿಡಿಸಿ, ಹೆಚ್ಚಿಕೊಂಡ ಹಸಿಮೆಣಸು ಹಾಕಿ. ನಂತರ ಇದಕ್ಕೆ ಹೆಚ್ಚಿಕೊಂಡ ಸೊಪ್ಪು ಹಾಕಿ ಸಣ್ಣ ಉರಿಯಲ್ಲಿ 2-3 ನಿಮಿಷ ಹುರಿಯಿರಿ. ನಂತರ ಹೆಚ್ಚಿಕೊಂಡ ಈರುಳ್ಳಿ ಹಾಕಿ ಅರ್ಧ ನಿಮಿಷ ಹುರಿದು (ಈರುಳ್ಳಿ ಪೂರ್ತಿ ಹುರಿಯದೇ ಸ್ವಲ್ಪ ಹಸಿಯಾಗೇ ಇರಲಿ), ಉರಿ ಆರಿಸಿ. ತಣ್ಣಗಾದ ಮೇಲೆ ಮೊಸರು, ಉಪ್ಪು ಹಾಕಿ ಕಲಕಿ. ಈಗ ದೊಡ್ಡ ಪತ್ರೆ ಹಶಿ / ಮೊಸರು ಬಜ್ಜಿ ಅನ್ನ ಅಥವಾ ಪಲಾವ್ ಜೊತೆ ಸವಿಯಲು ಸಿಧ್ಧ.  


ಸಲಹೆ:
ಇದೇ ರೀತಿ ಮೆಂತ್ಯ ಸೊಪ್ಪನ್ನು ಸಣ್ಣಗೆ ಹೆಚ್ಚಿ ಮೇಲೆ ಹೇಳಿದಂತೆ ಒಗ್ಗರಣೆ ಮಾಡಿ ಸೊಪ್ಪು ಹಾಕಿ, ಸ್ವಲ್ಪ ಉಪ್ಪು, ಚಿಟಿಕೆ ಸಕ್ಕರೆ ಹಾಕಿ ಹುರಿದು ಹಶಿ ಮಾಡಬಹುದು. ಇದಕ್ಕೆ ಹೆಚ್ಚಿದ ಹಸಿ ಈರುಳ್ಳಿಯನ್ನು ಹಾಕಬೇಕು. 

ಬುಧವಾರ, ಅಕ್ಟೋಬರ್ 21, 2015

ನಿ೦ಬೆ ಹಣ್ಣಿನ ತ೦ಬುಳಿ:

ಸಾಮಗ್ರಿಗಳು : 
ನಿ೦ಬೆಹಣ್ಣು ೧
ತೆ೦ಗಿನತುರಿ ೧/೨ ಕಪ್
ಉಪ್ಪು ರುಚಿಗೆ ತಕ್ಕಷ್ಟು
ಸಕ್ಕರೆ ೧ ಟೇ ಚಮಚ

ಒಗ್ಗರಣೆಗೆ : ಎಣ್ಣೆ ೧/೨ ಚಮಚ, ಸಾಸಿವೆ ೧/೪ ಚಮಚ, ಒಣಮೆಣಸು 1.

ವಿಧಾನ: ತೆ೦ಗಿನತುರಿಯನ್ನು ನುಣ್ಣಗೆ ರುಬ್ಬಿಕೊ೦ಡು ಅದಕ್ಕೆ ೨ ಲೋಟ ನೀರು, ಉಪ್ಪು, ಸಕ್ಕರೆ ಹಾಕಿ ಹಾಕಿ ಕದಡಿ ನ೦ತರ ನಿ೦ಬೆರಸ ಬೆರೆಸಿ. ರುಚಿ ನೋಡಿಕೊ೦ಡು ಉಪ್ಪು ಹಾಕಿ. ನ೦ತರ ಒಗ್ಗರಣೆ ಸೌಟಿನಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿಕೊ೦ಡು  ಅದಕ್ಕೆ ಸಾಸಿವೆ ಒಣ ಮೆಣಸು ಹಾಕಿ ೧ ನಿಮಿಷ ಫ್ರೈ ಮಾಡಿ ಒಗ್ಗರಣೆ ಹಾಕಿದರೆ ಸಿಹಿ ಹುಳಿ ನಿ೦ಬೆಹಣ್ಣನ ತ೦ಬುಳಿ ಅನ್ನದ ಜೊತೆ ಸವಿಯಲು ಸಿದ್ಧ.

ಗುರುವಾರ, ಅಕ್ಟೋಬರ್ 15, 2015

ಅವಲಕ್ಕಿ ಚುಡ್ವಾ :


ಸಾಮಗ್ರಿಗಳು : ಪೇಪರ್ ಅವಲಕ್ಕಿ 1/2 ಕಿ. ಗ್ರಾ೦
 ಕಡ್ಲೇಬೀಜ 100 ಗ್ರಾ೦(ಶೇ೦ಗಾ)
ಹುರಿಗಡಲೆ 2 ಚಮಚ
ಇ೦ಗು ಚಿಟಿಕೆ
 ಉಪ್ಪು ರುಚಿಗೆ ತಕ್ಕಷ್ಟು
 ಸಕ್ಕರೆ ಪುಡಿ ರುಚಿಗೆ ತಕ್ಕಷ್ಟು
 ಅಚ್ಚ ಖಾರದಪುಡಿ 3 ಚಮಚ 
 ಕಡಲೇಬೇಳೆ ಚಮಚ
 ಉದ್ದಿನಬೇಳೆ 11/2 ಚಮಚ
 ಜೀರಿಗೆ 1ಚಮಚ 
 ಧನಿಯಾ 1 ಚಮಚ
 ಕರಿಬೇವು, ಎಣ್ಣೆ 3 ಚಮಚ,
 ಸಾಸಿವೆ 1 ಚಮಚ.
ವಿಧಾನ : ಅವಲಕ್ಕಿಯನ್ನು ಶುಭ್ರವಾದ ಬಟ್ಟೆಯಲ್ಲಿ ಹಾಕಿ ಹರಡಿ ತೆಳುವಾದ ಬಟ್ಟೆ ಮುಚ್ಚಿ ಬಿಸಿಲಿನಲ್ಲಿ ೨ ಗ೦ಟೆಗಳ ಕಾಲ ಒಣಗಿಸಿ.  ಕಡಲೇಬೇಳೆ, ಉದ್ದಿನಬೇಳೆ, ಜೀರಿಗೆ, ಧನಿಯಾ, ಇವನ್ನು ಸಣ್ಣ ಉರಿಯಲ್ಲಿ ಹುರಿದುಕೊ೦ಡು ಇ೦ಗು ಸೇರಿಸಿ ಪೌಡರ್ ಮಾಡಿಟ್ಟುಕೊಳ್ಳಿ. ಬಾಣಲೆಗೆ ಎಣ್ಣೆ ಹಾಕಿಕೊ೦ಡು, ಅದು ಕಾದಮೇಲೆ ಶೇ೦ಗಾವನ್ನು ಹುರಿದು ತೆಗೆದಿಟ್ಟುಕೊಳ್ಳಿ ಈಗ ಕಾದ ಎಣ್ಣೆಗೆ ಸಾಸಿವೆ, ಕರಿಬೇವು, ಹಾಕಿ ಉರಿ ಆರಿಸಿ. ಈಗ ಇದಕ್ಕೆ ಪುಡಿ ಮಾಡಿಟ್ಟ ಮಸಾಲೆ, ಉಪ್ಪು ಸಕ್ಕರೆಪುಡಿ, ಖಾರದ ಪುಡಿ ಅವಲಕ್ಕಿ ಎಲ್ಲವನ್ನು ಸೇರಿಸಿ ಚೆನ್ನಾಗಿ ಮಿ‍ಕ್ಸ್ ಮಾಡಿ ಕೊನೆಯಲ್ಲಿ ಹುರಿಗಡಲೆ & ಶೇ೦ಗಾ ಸೇರಿಸಿದರೆ ಕುರುಮ್ ಕುರುಮ್ ಅವಲಕ್ಕಿ ಚುಡ್ವಾ ಚಹಾದ ಜೊತೆ ಸವಿಯಲು ಸಿದ್ಧ.

ಗುರುವಾರ, ಅಕ್ಟೋಬರ್ 8, 2015

ಅಕ್ಕಿ ಹಪ್ಪಳ :

ಸಾಮಗ್ರಿಗಳು :
ದೋಸೆ ಅಕ್ಕಿ : ೧ ಕಿಗ್ರಾಂ,
ಸಬ್ಬಕ್ಕಿ : ೧/೪ ಕಿಗ್ರಾಂ,
ನೀರು & ಉಪ್ಪು

ಹಪ್ಪಳ ಒತ್ತಲು ಪ್ರೆಸ್ಸಿಂಗ್ ಮಷೀನ್ ಅಥವಾ ರೋಟಿ ಮೇಕರ್ ಬೇಕು. ಮತ್ತು ಹಪ್ಪಳ ಒಣಗಿಸಲು ದೊಡ್ಡ ಪ್ಲಾಸ್ಟಿಕ್ ಅಥವಾ ತೆಳ್ಳಗಿನ ಸಿಂಥೆಟಿಕ್ ಸೀರೆ ಆದರೂ ನಡೆದೀತು. 

ಮಸಾಲೆಗೆ ಸಾಮಗ್ರಿಗಳು :
ಹಸಿಮೆಣಸಿನ ಕಾಯಿ : ೧೦-೧೫,
ಜೀರಿಗೆ : ೨ ಚಮಚ,
ಇಂಗು : ೧/೪ ಚಮಚ

ವಿಧಾನ:
    ಅಕ್ಕಿಯನ್ನು ಚೆನ್ನಾಗಿ ತೊಳೆದು ನೆರಳಿನಲ್ಲಿ ಒಣಗಿಸಿಕೊಳ್ಳಿ. ನಂತರ ಇದಕ್ಕೆ ಸಬ್ಬಕ್ಕಿ ಸೇರಿಸಿ ಗಿರಣಿಯಲ್ಲಿ ನುಣ್ಣಗೆ ಹಿಟ್ಟು ಮಾಡಿಸಿಕೊಳ್ಳಿ.
    ಒಂದು ದಪ್ಪ ತಳದ, ದೊಡ್ಡ ಪಾತ್ರೆಯಲ್ಲಿ ೨.೫ - ೩ ಲೀಟರ್ ನಷ್ಟು ನೀರು ಹಾಕಿ ಕುದಿಸಿ. ಮಸಾಲೆ ಸಾಮಗ್ರಿಗಳನ್ನು ಮಿಕ್ಸಿಗೆ ಹಾಕಿ ಪೇಸ್ಟ್ ಮಾಡಿಕೊಳ್ಳಿ. ನೀರು ಚೆನ್ನಾಗಿ ಕುದಿಯುವಾಗ ರುಬ್ಬಿದ ಮಿಶ್ರಣ, ಉಪ್ಪು, ಅಕ್ಕಿ-ಸಬ್ಬಕ್ಕಿ ಹಿಟ್ಟು ಹಾಕಿ ೧೫-೨೦ ನಿಮಿಷ ಸಣ್ಣ ಉರಿಯಲ್ಲಿ, ಕಲಕುತ್ತಾ ಬೇಯಿಸಿ. ನೀರು ಆರಿ ಹಿಟ್ಟು ಗಟ್ಟಿಯಾಗಬೇಕು. ತಿಕ್ಕಿ ಉಂಡೆ ಮಾಡುವಷ್ಟು ಗಟ್ಟಿಯಾಗಬೇಕು. (ಕಮ್ಮಿ ನೀರು ಹಾಕಿ ಜಾಸ್ತಿ ಹೊತ್ತು ಬೇಯಿಸದಿದ್ದರೆ ಹಪ್ಪಳ ಕರಿದಾಗ ಚೆನ್ನಾಗಿ ಅರಳುವುದಿಲ್ಲ.) 

ಹಿಟ್ಟು ಸ್ವಲ್ಪ ತಣ್ಣಗಾದ ಮೇಲೆ ಕೈಗೆ ಸ್ವಲ್ಪ ಎಣ್ಣೆ ಸವರಿಕೊಂಡು ನೆಲ್ಲಿಕಾಯಿ ಗಾತ್ರದ ಹಿಟ್ಟು ತೆಗೆದುಕೊಂಡು ಚೆನ್ನಾಗಿ ತಿಕ್ಕಿ ತಿಕ್ಕಿ ಉಂಡೆ ಮಾಡಿಕೊಳ್ಳಿ. ತೊಳೆದ ಹಾಲಿನ ಕವರ್ ಕತ್ತರಿಸಿಕೊಂಡು, ಎಣ್ಣೆ ಸವರಿ ಒಂದನ್ನು ಪ್ರೆಸ್ಸಿಂಗ್ ಮಷೀನ್ ನಲ್ಲಿಟ್ಟು ಅದರ ಮೇಲೆ ಒಂದು ಉಂಡೆ ಇಟ್ಟು ಮೇಲಿಂದ ಇನ್ನೊಂದು ಪ್ಲಾಸ್ಟಿಕ್ ಇಟ್ಟು ಒತ್ತಿ.ಹಪ್ಪಳ ಒಣಗಿಸುವ ಪ್ಲಾಸ್ಟಿಕ್/ ಬಟ್ಟೆ ಮೇಲೆ ಒಂದೊಂದಾಗಿ ಹಾಕುತ್ತಾ ಬನ್ನಿ. ಎಲ್ಲಾ ಮುಗಿದ ಮೇಲೆ ಬಿಸಿಲಿನಲ್ಲಿ ಒಣಗಿಸಿ. 

ಖಡಕ್ ಬಿಸಿಲಿದ್ದರೆ ಒಂದು ದಿನ ಒಣಗಿದರೆ ಸಾಕು. ಇದನ್ನು ಗಾಳಿ ಆಡದ ಡಬ್ಬದಲ್ಲಿ ತುಂಬಿಡಿ. ಒಂದು ವರ್ಷಕ್ಕೂ ಹೆಚ್ಚು ದಿನ ಕೆಡದಂತೆ ಇಡಬಹುದು. 
    ಊಟಕ್ಕೆ ಸಾಂಬಾರ್, ತೊವ್ವೆ, ತಿಳಿಸಾರು ಮಾಡಿದಾಗ ಕಾದ ಎಣ್ಣೆಯಲ್ಲಿ ಹಪ್ಪಳ ಕರಿದುಕೊಳ್ಳಿ. 

ಶುಕ್ರವಾರ, ಅಕ್ಟೋಬರ್ 2, 2015

ಮೋದಕ:

ಸಾಮಗ್ರಿಗಳು : ಗೋಧಿ ಹಿಟ್ಟು 1 ಕಪ್, ತೆ೦ಗಿನಕಾಯಿ ತುರಿ 1 ಕಪ್ , ಬೆಲ್ಲ (ಸಕ್ಕರೆ) 1/2 ಕಪ್ , ಎಳ್ಳು - 1 ಚಮಚ, ಏಲಕ್ಕಿ ಪುಡಿ 1/2 ಚಮಚ, ಎಣ್ಣೆ ಕರಿಯಲು.

ವಿಧಾನ : ಗೋಧಿಹಿಟ್ಟನ್ನು ಚಪಾತಿ ಹಿಟ್ಟಿನ ಹದಕ್ಕೆ ಕಲೆಸಿಕೊಳ್ಳಿ. ಒ೦ದು ಪಾತ್ರೆಗೆ ತೆ೦ಗಿನತುರಿ ಬೆಲ್ಲ ಹಾಕಿ ಚೆನ್ನಾಗಿ ಕಾಯಿಸಿ. ಆಗಾಗ ಅಡಿ ಹಿಡಿಯದ೦ತೆ ತೊಳೆಸುತ್ತಲೆ ಇರಬೇಕು. ಈ ಹೂರಣ ಹದಕ್ಕೆ ಬರಲು  15-20 ನಿಮಿಷ ಕಾಯಿಸ ಬೇಕಾಗುತ್ತದೆ. ಈಗ ಗೋಧಿಹಿಟ್ಟನ್ನು ಚಿಕ್ಕ ಚಿಕ್ಕ (ಚಿಕ್ಕ ನೆಲ್ಲಿಕಾಯಿ ಗಾತ್ರ) ಉ೦ಡೆ ಮಾಡಿಕೊ೦ಡು ಚಪಾತಿ ಥರ ತೆಳ್ಳಗೆ ಹಿಟ್ಟು ಬಳಸಿ ಲಟ್ಟಿಸಿಕೊಳ್ಳಿ (ಇದಕ್ಕೆ ಮೋದಕದ ಹಾಳೆ ಎನ್ನುತ್ತಾರೆ) . ಬಿಸಿ ಆರಿದ ಹೂರಣವನ್ನು ಚಿತ್ರದಲ್ಲಿ ತೋರಿಸಿದ೦ತೆ ಮೋದಕದ ಹಾಳೆಯಲ್ಲಿ ಮಡಿಸಿಟ್ಟುಕೊಳ್ಳಿ. ಎಣ್ಣೆಯನ್ನು ಬಾಣಲೆಗೆ ಹಾಕಿ ಎಣ್ಣೆ ಕಾದ ಮೇಲೆ ಇದನ್ನು ಹಾಕಿ ಸಣ್ಣ ಉರಿಯಲ್ಲಿ ಹೊ೦ಬಣ್ಣ ಬರುವ ವರೆಗೆ ಬೇಯಿಸಿ. ಈಗ ಮೋದಕ ರೆಡಿ.