ಗುರುವಾರ, ಜನವರಿ 28, 2016

ಫ್ರೈಡ್ ಇಡ್ಲಿ:

ಬೆಳಿಗ್ಗೆ ತಿ೦ಡಿಗೆ ಮಾಡಿದ ಇಡ್ಲಿ ಮಿಕ್ಕಿದ್ಯಾ? ಸುಮ್ನೆ ವೇಸ್ಟ ಅಗುತ್ತೆ ಅ೦ದ್ಕೊಬೇಡಿ. ಸ೦ಜೆಗೆ ಅದೇ ಮಿಕ್ಕಿದ ಇಡ್ಲಿಯಿ೦ದ ಸ್ನ್ಯಾಕ್ಸ್ ಮಾಡಬಹುದು. ಇಡ್ಲಿ ಇ೦ದ ಉಪ್ಪಿಟ್ಟು ಅ೦ದ್ಕೊತ್ತಾ ಇದೀರಾ? ಉಪ್ಪಿಟ್ಟು ಅಲ್ವೆ ಅಲ್ಲ. ಇದು ತು೦ಬಾ ಸುಲಭವಾಗಿ ಮಾಡುವ೦ಥ ಫ್ರೈಡ್ ಇಡ್ಲಿ :)

ಸಾಮಗ್ರಿಗಳು :
ತಣ್ಣಗಾದ ಇಡ್ಲಿ - 6
 ಕರಿಯಲು ಎಣ್ಣೆ - 250 ಗ್ರಾ೦
 ಚಾಟ್ ಮಸಾಲಾ -3/4 ಚಮಚ
 ಅಚ್ಚ ಖಾರದ ಪುಡಿ 1 ಚಮಚ

.

ವಿಧಾನ : ತಣ್ಣಗಾದ ಇಡ್ಲಿಯನ್ನು ಚಾಕುವಿನಲ್ಲಿ ಚಿಕ್ಕ ಚಿಕ್ಕ ಚೂರುಗಳನ್ನು (ಪನ್ನೀರ್ ಸ್ಕ್ವೇರ್ ಥರ) ಮಾಡಿಕೊಳ್ಳಿ. ಎಣ್ಣೆಯನ್ನು ಬಾಣಗೆಲೆ ಹಾಕಿ ಕಾದ ನ೦ತರ ಕಟ್ ಮಾಡಿಟ್ಟ ಇಡ್ಲಿ ಚೂರುಗಳನ್ನು ಹಾಕಿ ಮಿಡಿಯಮ್ ಉರಿಯಲ್ಲಿ ಹೊ೦ಬಣ್ಣ ಬರುವವರೆಗೆ ಕರಿದು ಅದನ್ನು ಎಣ್ಣೆಯಿ೦ದ ತೆಗೆದು ಒ೦ದು ಪಾತ್ರೆಗೆ ಹಾಕಿ. ಬಿಸಿ ಬಿಸಿ ಇರುವಾಗಲೇ ಚಾಟ್ ಮಸಾಲಾ, ಅಚ್ಚ ಖಾರದ ಪುಡಿ ಹಾಕಿ ಮಿಕ್ಸ್ ಮಾಡಿದರೆ ಬಿಸಿ ಬಿಸಿಯಾದ ಗರಿ ಗರಿ  ಫ್ರೈಡ್ ಇಡ್ಲಿ ತಿನ್ನಲು ಸಿದ್ದ.

ಟೊಮ್ಯಾಟೊ ಸಾಸ್ ನ್ನು ಹಾಕಿಕೊ೦ಡು ತಿನ್ನಬಹುದು. ಹಾಗೆ ತಿನ್ನಲು ಕೂಡ ಚೆನ್ನಾಗಿರುತ್ತದೆ.

ಟಿಪ್ಸ್ : ಚಾಟ್ ಮಸಾಲಾದ ಬದಲು ಮತ್ತೆ ಯಾವುದಾದರು ನಿಮ್ಮಿಷ್ಟದ ಮಸಾಲಾ ಪೌಡರ್ ಸೇರಿಸಬಹುದು.

ಶುಕ್ರವಾರ, ಜನವರಿ 22, 2016

ತೊಂಡೆಕಾಯಿ ಗೊಜ್ಜು :

ಸಾಮಗ್ರಿಗಳು :
ತೊಂಡೆಕಾಯಿ - 6-8,
ಹಸಿಮೆಣಸಿನ ಕಾಯಿ - 2-3, (ನಿಮ್ಮ ಖಾರಕ್ಕೆ ತಕ್ಕಷ್ಟು)
ಹುಣಸೆ ಹಣ್ಣು - ಸಣ್ಣ ನೆಲ್ಲಿಕಾಯಿ ಗಾತ್ರ,
ತೆಂಗಿನ ತುರಿ - 1 ಕಪ್,
ಉಪ್ಪು - ರುಚಿಗೆ 

ಒಗ್ಗರಣೆಗೆ :
ಎಣ್ಣೆ - 2 ಚಮಚ,
ಉದ್ದಿನಬೇಳೆ - 1/2 ಚಮಚ,
ಜೀರಿಗೆ - ಸಾಸಿವೆ - 1/4 ಚಮಚ 

ವಿಧಾನ :
ತೊಂಡೆಕಾಯಿಯನ್ನು ಹೆಚ್ಚಿಕೊಂಡು ನೀರು, ಹುಣಸೆಹಣ್ಣು, ಹಸಿಮೆಣಸಿನ ಕಾಯಿ ಹಾಕಿ ಬೇಯಿಸಿ. ಇದು ತಣ್ಣಗಾದ ಮೇಲೆ ತೆಂಗಿನ ತುರಿ, ಉಪ್ಪು ಹಾಕಿ ಸ್ವಲ್ಪ ತರಿ ತರಿಯಾಗಿ ರುಬ್ಬಿ. ಇದಕ್ಕೆ ಎಣ್ಣೆ, ಉದ್ದಿನಬೇಳೆ, ಜೀರಿಗೆ, ಸಾಸಿವೆ ಒಗ್ಗರಣೆ ಮಾಡಿದರೆ  ತೊಂಡೆಕಾಯಿ ಗೊಜ್ಜು ಬಿಸಿ ಬಿಸಿ ಅನ್ನದ ಜೊತೆ ಸವಿಯಲು ಸಿದ್ಧ. 


ಸಲಹೆ :
ಇದೇ ರೀತಿ ಬದನೇಕಾಯಿ ಗೊಜ್ಜನ್ನು ಮಾಡಬಹುದು. 

ಶುಕ್ರವಾರ, ಜನವರಿ 15, 2016

ಮರಿಗೆ ಗೊಜ್ಜು :ಹಿ೦ದಿನ ಕಾಲದಲ್ಲಿ ಈಗಿನ೦ತೆ ಸ್ಟೀಲ್, ಆಲ್ಯೂಮಿನಿಯಮ್, ಪಾತ್ರೆಗಳು ಇರಲಿಲ್ಲ. ಯಾವುದೆ ಅಡಿಗೆಯನ್ನಾದರೂ ಮಡಿಕೆ ಅಥವಾ ಮರದಿ೦ದ ಮಾಡಿದ ಪಾತ್ರೆಯಲ್ಲಿ ಮಾಡಬೇಕಾಗಿತ್ತು. ಈ ಮರಿಗೆ ಎನ್ನುವುದು ಮರದಿ೦ದ ಮಾಡಿದ ಪಾತ್ರೆ. (ಹಸಿಮೆಣಸು, ಎಳ್ಳು, ಸಾಸಿವೆ ಹುರಿದುಕೊ೦ಡು ಮರಿಗೆಯಲ್ಲಿ ಹಾಕಿ ಸೌಟಿನಿ೦ದ ಅರೆದು ಅದಕ್ಕೆ ಮೊಸರು ಸೇರಿಸುತ್ತಿದ್ದರು) ಈ ಗೊಜ್ಜನ್ನು ಯಾವಾಗಲೂ ಮರಿಗೆಯಲ್ಲೆ ಮಾಡುತ್ತಿದ್ದವಾದ್ದರಿ೦ದ ಮರಿಗೆ ಗೊಜ್ಜು ಅ೦ತ ಹೆಸರು ಬ೦ದಿದೆ.

ಬೇಕಾಗುವ ಸಾಮಗ್ರಿಗಳು :
ಗಟ್ಟಿ ಮೊಸರು 1ಕಪ್
ಹಸಿಮೆಣಸು/ಸೂಜಿಮೆಣಸು 5-6
ಸಾಸಿವೆ 1ಟೀ ಚಮಚ
ಎಳ್ಳು 1ಟೀ ಚಮಚ,
ಬೆಳ್ಳುಳ್ಳಿ 4ಎಸಳು
ಉಪ್ಪುರುಚಿಗೆ ತಕ್ಕಷ್ಟು
ಎಣ್ಣೆ 1/2 ಚಮಚ .


ವಿಧಾನ:
ಒ೦ದು ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಸಾಸಿವೆ, ಹಸಿಮೆಣಸು ಹಾಕಿ ಹುರಿದುಕೊಳ್ಳಿ. ಕೊನೆಯಲ್ಲಿ ಎಳ್ಳು ಹಾಕಿ. ಬಿಸಿ ಆರಿದಮೇಲೆ ಬೆಳ್ಳುಳ್ಳಿ ಉಪ್ಪು ಸೇರಿಸಿ ನುಣ್ಣಗೆ ರುಬ್ಬಿ. ಬೇಕಾದಲ್ಲಿ ರುಬ್ಬುವಾಗ ೨ ಚಮಚ ಮೊಸರು ಸೇರಿಸಬಹುದು. ಈ ರುಬ್ಬಿದ ಮಿಶ್ರಣವನ್ನು ಮೊಸರಿಗೆ ಸೇರಿಸಿದರೆ ಖಾರವಾದ ಮರಿಗೆ ಗೊಜ್ಜು ಅನ್ನದ ಜೊತೆ ಸವಿಯಲು ಸಿದ್ಧ.

(ಸೂಚನೆ: ನಿಮ್ಮ ಖಾರಕ್ಕೆ ಅನುಗುಣವಾಗಿ ಹಸಿಮೆಣಸು ಸೇರಿಸಿ.

ಮೊಸರು ಸ್ವಲ್ಪ ಹುಳಿ ಇದ್ದರೂ ಮರಿಗೆ ಗೊಜ್ಜು ರುಚಿ ಬರುತ್ತದೆ.)


ಶುಕ್ರವಾರ, ಜನವರಿ 8, 2016

ರಾಗಿ - ತರಕಾರಿ ಸೂಪ್ :

ಸಾಮಗ್ರಿಗಳು :
ಮಿಶ್ರ ತರಕಾರಿ : 1.5 ಕಪ್ (ಬೀನ್ಸ್, ಕ್ಯಾರಟ್, ಕ್ಯಾಬೇಜ್)
ಸಣ್ಣಗೆ ಹೆಚ್ಚಿದ ಪಾಲಕ್ ಸೊಪ್ಪು : 1/4 ಕಪ್,
ರಾಗಿ ಹಿಟ್ಟು : 1- 1.5 ಟೇಬಲ್ ಚಮಚ,
ಉಪ್ಪು : ರುಚಿಗೆ,
ಲಿಂಬು : ಅರ್ಧ 

ಪೇಸ್ಟ್ ಗೆ ಸಾಮಗ್ರಿಗಳು :
ಬೆಳ್ಳುಳ್ಳಿ : 5-6 ಎಸಳು,
ಒಣ ಮೆಣಸಿನ ಕಾಯಿ : 7-8,

ಪೇಸ್ಟ್ ಮಾಡುವ ವಿಧಾನ : ಒಣ ಮೆಣಸಿನ ಕಾಯನ್ನು 15-20 ನಿಮಿಷ ಸ್ವಲ್ಪ ಬಿಸಿ ನೀರಿನಲ್ಲಿ ನೆನೆಸಿ. ನಂತರ ಒಣಮೆಣಸು ಮತ್ತು ಬೆಳ್ಳುಳ್ಳಿ ಹಾಕಿ ರುಬ್ಬಿ. ಇದನ್ನು ಜಾಸ್ತಿ ಇದ್ದರೆ ಫ್ರಿಡ್ಜ್ ನಲ್ಲಿ ಸ್ವಲ್ಪ ದಿನಗಳವರೆಗೆ ಇಟ್ಟುಕೊಳ್ಳಬಹುದು. 

ಸೂಪ್ ಮಾಡುವ ವಿಧಾನ:
ತರಕಾರಿಗಳನ್ನು ಸಣ್ಣಗೆ ಹೆಚ್ಚಿಕೊಳ್ಳಬೇಕು. ಕ್ಯಾಬೇಜ್ ಅನ್ನು ಸ್ವಲ್ಪ ಉದ್ದುದ್ದಕ್ಕೆ, ತೆಳ್ಳಗೆ ಹೆಚ್ಚಿಕೊಳ್ಳಿ. ರಾಗಿ ಹಿಟ್ಟಿಗೆ ಸ್ವಲ್ಪ ನೀರು ಹಾಕಿ ಗಂಟಾಗದಂತೆ ಕಲಕಿಕೊಳ್ಳಿ. ಎರಡೂವರೆ ಮೂರು ಕಪ್ ನಷ್ಟು ನೀರನ್ನು ಕುದಿಸಿ. 

ಅದಕ್ಕೆ ಹೆಚ್ಚಿದ ತರಕಾರಿ ಸ್ವಲ್ಪ ಉಪ್ಪು ಹಾಕಿ ಅರ್ಧ ನಿಮಿಷಕ್ಕೆ ಪಾಲಕ್ ಸೊಪ್ಪು ಹಾಕಿ ಉಪ್ಪು, 1 ಟೇಬಲ್ ಚಮಚದಷ್ಟು ಮಾಡಿಟ್ಟುಕೊಂಡ ಪೇಸ್ಟ್ ಹಾಕಿ ಕಲಕಿ. ತಕ್ಷಣ ರಾಗಿ ನೀರನ್ನು ಹಾಕಿ ರಾಗಿ ಬೇಯುವ ತನಕ ಕುದಿಸಿ. ಕೊನೆಯಲ್ಲಿ ಲಿಂಬುರಸ ಹಾಕಿ ಕೆಳಗಿಳಿಸಿದರೆ ಬಿಸಿ ಬಿಸಿ ಸೂಪ್ ರೆಡಿ. 


ಸೂಚನೆಗಳು:
1) ತರಕಾರಿ ಅರ್ಧ ಮಾತ್ರ ಬೇಯುವಂತೆ ಎಚ್ಚರ ವಹಿಸಿ. 
2) ಈ ಸೂಪ್ ಗರ್ಭಿಣಿಯರಿಗೆ ಆರೋಗ್ಯಕರ. 
3) ಡಯಟ್ ಮಾಡುವವರು ಬೇರೆ ಗಟ್ಟಿ ಆಹಾರ ಬಿಟ್ಟು ಇದನ್ನೇ ಅಭ್ಯಾಸ ಮಾಡಿಕೊಂಡರೆ ಅಗತ್ಯ ಪೋಷಕಾಂಶಗಳ ಜೊತೆ ರುಚಿಯಾಗಿಯೂ ಇರುತ್ತದೆ.