ಗುರುವಾರ, ಜೂನ್ 26, 2014

ಖರ್ಜೂರ ಪಾಯಸ :

ಸಾಮಗ್ರಿಗಳು:
ಖರ್ಜೂರ 1/4 ಕಿ ಗ್ರಾಂ 
ಹಾಲು 1/2 - 3/4 ಲೀಟರ್ 
ಸಕ್ಕರೆ 1/4 ಕಪ್ 
ತುಪ್ಪ ೨ ಚಮಚ
ಗೋಡಂಬಿ 8-10
ದ್ರಾಕ್ಷಿ 10-15
ಉಪ್ಪು 2-3 ಚಿಟಿಕೆ 

ವಿಧಾನ
4-5 ಖರ್ಜೂರವನ್ನು ಬಿಟ್ಟು ಉಳಿದವನ್ನು ಅದು ಮುಳುಗುವಷ್ಟು ಹಾಲು ಹಾಕಿ 2 ಘಂಟೆ ನೆನೆಸಿಡಿ. ಅದು ರುಬ್ಬಲು ಆಗುವಷ್ಟು ನೆನೆಯಬೇಕು. ನೆಂದ ನಂತರ ಅದೇ ಹಾಲು ಹಾಕುತ್ತ ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಇದನ್ನು ದಪ್ಪ ತಳದ ಪಾತ್ರೆಗೆ ಹಾಕಿ ಉಳಿದ ಹಾಲು, ಸಕ್ಕರೆ, ಉಪ್ಪು ಹಾಕಿ ಚೆನ್ನಾಗಿ ಕಲಕಿ ಕುದಿಯಲು ಇಡಿ. ಆಗಾಗ ಕಲಕುತ್ತಿರಿ. ಇಲ್ಲವಾದಲ್ಲಿ ತಳ ಹಿಡಿಯುತ್ತದೆ. ಗೋಡಂಬಿ, ದ್ರಾಕ್ಷಿ ಹುರಿದು ಹಾಕಲು ಇಷ್ಟವಿಲ್ಲದವರು ಕುದಿಯುವಾಗಲೇ ಹಾಕಿಕೊಳ್ಳಬಹುದು. ಸಕ್ಕರೆ ಸರಿಯಾಗಿದೆಯೇ ಎಂದು ಪರೀಕ್ಷಿಸಿಕೊಂಡು ಸರಿಪಡಿಸಿಕೊಳ್ಳಬಹುದು. ಖರ್ಜೂರ ಸಿಹಿ ಇರುವುದರಿಂದ ಸಕ್ಕರೆ ಸ್ವಲ್ಪವೇ ಸಾಕಾಗುತ್ತದೆ. ಕುದಿಯುತ್ತಿರುವಂತೆ ಸ್ವಲ್ಪ ಗಟ್ಟಿ ಎನಿಸಿದರೆ ಇನ್ನು ಸ್ವಲ್ಪ ಹಾಲು ಹಾಕಿ ಚೆನ್ನಾಗಿ ಕುದಿಸಿ ಉರಿ ಆರಿಸಿ. ಮೊದಲು ತೆಗೆದಿಟ್ಟ 4-5 ಖರ್ಜೂರವನ್ನು ಸಣ್ಣ ಹೋಳುಗಳಾಗಿ ಕತ್ತರಿಸಿಕೊಳ್ಳಿ. ಗೋಡಂಬಿ, ದ್ರಾಕ್ಷಿ, ಖರ್ಜೂರದ ಹೋಳುಗಳನ್ನು ತುಪ್ಪದಲ್ಲಿ ಹುರಿದು ಪಾಯಸಕ್ಕೆ ಹಾಕಿದರೆ ಬಿಸಿ ಬಿಸಿ ಖರ್ಜೂರ ಪಾಯಸ ಸವಿಯಲು ಸಿದ್ಧ. 


ಗುರುವಾರ, ಜೂನ್ 19, 2014

ಹಲಸಿನಕಾಯಿ ಚಕ್ಕೆ ಪೋಳ್ದ್ಯ:



ಸಾಮಾಗ್ರಿಗಳು: ಹಲಸಿನ ಕಾಯಿ ತೊಳೆ 15, ಹಲಸಿನ ಬೀಜ -7-8,  ಹಸಿ ಮೆಣಸು – 5-6 (ಸೂಜಿ ಮೆಣಸು), ಲಿ೦ಬು ರಸ 3 ಚಮಚ, ತೆ೦ಗಿನಕಾಯಿ ತುರಿ 2 ಚಮಚ (optional) , ಉಪ್ಪು ರುಚಿಗೆ ತಕ್ಕಷ್ಟು.
ಒಗ್ಗರಣೆಗೆ : ಎಣ್ಣೆ, ಜೀರಿಗೆ, ಸಾಸಿವೆ, ಬೆಳ್ಳುಳ್ಳಿ, ಕರಿಬೇವು.



ವಿಧಾನ: ಮೊದಲಿಗೆ ಹಲಸಿನ ಕಾಯಿಯಿ೦ದ ಸೊಳೆಗಳನ್ನು ಬಿಡಿಸಿಕೊಳ್ಳಿ. ಹಲಸಿನ ಮೇಣ ಅ೦ಟದಿರಲು ಸೊಳೆಗಳನ್ನು ಬಿಡಿಸುವಾಗ ಸಾಮಾನ್ಯವಾಗಿ ಕೈಗೆ ಕೊಬ್ಬರಿ ಎಣ್ಣೆ ಹಚ್ಚಿಕೊಳ್ಳುತ್ತಾರೆ.  ಹಲಸಿನ ಸೊಳೆಯನ್ನು ಒ೦ದು ಸೊಳೆಯಲ್ಲಿ ನಾಲ್ಕು ಭಾಗಗಳನ್ನಾಗಿ ಮಾಡಿ ಹೆಚ್ಚಿಕೊಳ್ಳಿ. ಹೆಚ್ಚಿದ ಹಲಸಿನ ಸೊಳೆಗಳಲ್ಲಿ ಅರ್ಧದಷ್ಟು  ಹಸಿ ಮೆಣಸು, ತೆ೦ಗಿನಕಾಯಿ ತುರಿ ಸೇರಿಸಿ ರುಬ್ಬಬೇಕು. ಉಳಿದರ್ಧ ಸೊಳೆಗಳನ್ನು & ಹಲಸಿನ ಬೀಜವನ್ನು (ಹಲಸಿನ ಬೀಜದ ಸಿಪ್ಪೆ ತೆಗೆಯುವ ವಿಧಾನವನ್ನು ಈ ಮೊದಲೇ ಹೇಳಿದ್ದೇನೆ) ನೀರು ಉಪ್ಪು ಹಾಕಿ ಬೇಯಿಸಿ. ಸೊಳೆ ಬೆ೦ದ ನ೦ತರ ಅದಕ್ಕೆ ರುಬ್ಬಿದ ಮಿಶ್ರಣ, ನೀರು, ಲಿ೦ಬು ರಸ ಸೇರಿಸಿ ಚೆನ್ನಾಗಿ ಕುದಿಸಬೇಕು. ಇದಕ್ಕೆ ಎಣ್ಣೆ, ಜಜ್ಜಿದ ಬೆಳ್ಳುಳ್ಳಿ,ಸಾಸಿವೆ, ಜೀರಿಗೆ, ಕರಿಬೇವಿನ ಒಗ್ಗರಣೆ ಹಾಕಿದರೆ ಬಿಸಿ ಬಿಸಿ ಚಕ್ಕೆ ಪೊಳ್ದ್ಯ ರೆಡಿ. ಇದು ಅನ್ನದ ಜೊತೆ ಮತ್ತು ಹಾಗೆ ಬಿಸಿ ಬಿಸಿಯಾಗಿ ಕುಡಿಯಲು ಚೆನ್ನಾಗಿರುತ್ತದೆ.


ಗುರುವಾರ, ಜೂನ್ 12, 2014

ಖೀರು :

ಸಾಮಗ್ರಿಗಳು : 
ಚಿರೋಟಿ  ರವೆ ಒಂದು ಸಣ್ಣ ಕಪ್,
ಗೋಡಂಬಿ ಒಂದು ದೊಡ್ಡ ಮುಷ್ಠಿ, 
ಗಸಗಸೆ 1/2 ಕಪ್,
ಸಕ್ಕರೆ 4-5 ಕಪ್,
ಹಾಲು 1/2 ಲೀಟರ್,
ತುಪ್ಪ 1/4 ಚಮಚ,
ಉಪ್ಪು ಒಂದು ಚಿಟಿಕೆ, 
ಕೇಸರಿ ಎಸಳು 1-2 ಚಿಟಿಕೆ (optional)   
(ಇದರಲ್ಲಿ 5-6 ಜನಕ್ಕೆ serve ಮಾಡಬಹುದು). 

ವಿಧಾನ : ಗೋಡಂಬಿ ಮತ್ತು ಗಸಗಸೆಯನ್ನು ನೀರಿನಲ್ಲಿ ಬೇರೆ ಬೇರೆಯಾಗಿ ನೆನೆಸಿಕೊಳ್ಳಿ. ಇದು ಸುಮಾರು ಒಂದು ಘಂಟೆ ನೆನೆಯಬೇಕು. ಒಂದು ಬಾಣಲೆಗೆ ತುಪ್ಪ ಮತ್ತು ರವೆ ಹಾಕಿ ಹುರಿಯಿರಿ. ಸ್ವಲ್ಪ ಕೆಂಪಗಾಗುವಷ್ಟು (ಉಪ್ಪಿಟ್ಟಿಗೆ ಹುರಿಯುವಷ್ಟು) ಹುರಿಯಬೇಕು. ಕೇಸರಿ ಹಾಕುತ್ತೀರಾದರೆ ಸ್ವಲ್ಪ ಹಾಲಿನಲ್ಲಿ ಅದನ್ನು ನೆನೆಸಿಟ್ಟುಕೊಳ್ಳಿ. ನೆನೆಸಿಟ್ಟ ಗೋಡಂಬಿ ಮತ್ತು ಗಸಗಸೆಯನ್ನು ಒಟ್ಟಾಗಿ ನುಣ್ಣಗೆ ರುಬ್ಬಿಕೊಳ್ಳಿ. ದಪ್ಪ ತಳದ ಪಾತ್ರೆಗೆ ಹುರಿದ ರವೆ, ಒಂದು ಕಪ್ ಹಾಲು ಮತ್ತು 1-2 ಕಪ್ ನೀರು ಹಾಕಿ ಬೇಯಿಸಿ. ಅದು ದಪ್ಪಗಾದಂತೆ ನೀರು ಅಥವಾ ಹಾಲು ಸೇರಿಸಿ ಕಲಕುತ್ತಿರಿ. ರವೆ ಪೂರ್ತಿಯಾಗಿ ಬೆಂದ ಮೇಲೆ ರುಬ್ಬಿದ ಗಸಗಸೆ-ಗೋಡಂಬಿ ಮಿಶ್ರಣವನ್ನು ಹಾಕಿ ಉಳಿದ ಹಾಲು, ಸಕ್ಕರೆ ಮತ್ತು ಚಿಟಿಕೆ ಉಪ್ಪು ಹಾಕಿ. ಪಾಯಸದಷ್ಟು ದಪ್ಪ ಬೇಡ ಚಿತ್ರದಲ್ಲಿ ತೋರಿಸಿದಷ್ಟು ತೆಳ್ಳಗಿರಲಿ.

ನೆನೆಸಿಟ್ಟ ಕೇಸರಿಯನ್ನು ಬೆರಳುಗಳಿಂದ ಸ್ವಲ್ಪ ಅರೆದು ಇದಕ್ಕೆ ಸೇರಿಸಿ. ಸಣ್ಣ ಉರಿಯಲ್ಲಿ ಕಲಕುತ್ತಲೇ ಇರಬೇಕು ಇಲ್ಲವಾದಲ್ಲಿ ಬಹು ಬೇಗ ತಳ ಹಿಡಿಯುತ್ತದೆ / ಸೀದುತ್ತದೆ. ಚೆನ್ನಾಗಿ ಕುದಿಸಿ.  (taste ನೋಡಿಕೊಂಡು ಸಕ್ಕರೆ ಬೇಕಿದ್ದರೆ ಹಾಕಿಕೊಳ್ಳಿ). ಚಳಿಗಾಲದಲ್ಲಿ ಬಿಸಿ ಬಿಸಿ ಖೀರನ್ನು ಸವಿಯಬಹುದು. ಸೆಖೆಗಾಲದಲ್ಲಿ ಇದನ್ನು ಬಿಸಿ ಆರಿದ ಮೇಲೆ ಒಂದೆರಡು ಘಂಟೆ fridge ನಲ್ಲಿ ಇಟ್ಟು cold ಖೀರು ಸವಿದರೆ ಆಹಾ....! 

ಸಲಹೆಗಳು: 
1) ಬಿಸಿ  ಆರಿದ ಮೇಲೆ ಸ್ವಲ್ಪ ದಪ್ಪಗಾಗುವುದರಿಂದ ಕುದಿಸುವಾಗ ಸ್ವಲ್ಪ ನೀರಾಗಿಯೇ ಇರಲಿ. 
2) ಚಿರೋಟಿ ರವೆಯ ಬದಲು ಒಂದು ಮುಷ್ಠಿಯಷ್ಟು ಶ್ಯಾವಿಗೆಯನ್ನು ಹುರಿದು ಹಾಕಬಹುದು ಅಥವಾ ಅರ್ಧದಷ್ಟು ಶ್ಯಾವಿಗೆ, ಅರ್ಧದಷ್ಟು ರವೆಯನ್ನು ಬೇರೆ ಬೇರೆ ಹುರಿದು ಸೇರಿಸಿಕೊಳ್ಳಬಹುದು. ಬರೀ ಶ್ಯಾವಿಗೆ ಹಾಕಿದರೆ ರುಚಿ ಕಮ್ಮಿ...!! 

ಶುಕ್ರವಾರ, ಜೂನ್ 6, 2014

ನುಗ್ಗೇಕಾಯಿ ಮಸಾಲಾ




ಸಾಮಾಗ್ರಿಗಳು: ನುಗ್ಗೇಕಾಯಿ 2-3, ತೆ೦ಗಿನಕಾಯಿ ತುರಿ ¾ ಕಪ್, ಬೆಳ್ಳುಳ್ಳಿ 2 ಎಸಳು, ಈರುಳ್ಳಿ 1 ದೊಡ್ಡದು,ಟೊಮ್ಯಾಟೊ 1, ಕೊತ್ತ೦ಬರಿ ಸೊಪ್ಪು 1 ಹಿಡಿ, ಕೆ೦ಪು ಮೆಣಸಿನ ಪುಡಿ 2 ಚಮಚ (ನಿಮ್ಮ ಖಾರಕ್ಕೆ ಅನುಗುಣವಾಗಿ), ಶು೦ಟಿ ½ ಇ೦ಚು , ರುಚಿಗೆ ತಕ್ಕಷ್ಟು ಉಪ್ಪು.





ಮಾಡುವ ವಿಧಾನ:ನುಗ್ಗೇಕಾಯಿಯನ್ನು 2 ಇ೦ಚು ಉದ್ದಕ್ಕೆ ಕಟ್ ಮಾಡಿಕೊಳ್ಳಿ. ತೆ೦ಗಿನಕಾಯಿ ತುರಿ,ಬೆಳ್ಳುಳ್ಳಿ,ಕೊತ್ತ೦ಬರಿ ಸೊಪ್ಪು,ಶು೦ಟಿ,ಕೆ೦ಪು ಮೆಣಸಿನ ಪುಡಿ ಇವೆಲ್ಲವನ್ನು ನುಣ್ಣಗೆ ರುಬ್ಬಿಕೊಳ್ಳಿ. ಒ೦ದು ಬಾಣಲೆಗೆ ಎಣ್ಣೆ ಸಾಸಿವೆ, ಬೇವಿನಸೊಪ್ಪು (ಕರಿಬೇವು) ಹಾಕಿ, ಸಾಸಿವೆ ಚಿಟಪಟಿಸಿದ ನ೦ತರ ಸಣ್ಣಗೆ ಹೆಚ್ಚಿದ ಈರುಳ್ಳಿ,ಟೊಮ್ಯಾಟೊವನ್ನು ಹಾಕಿ ಅದು ಸ್ವಲ್ಪ ಬಾಡಿದ ಮೇಲೆ ನುಗ್ಗೇಕಾಯಿ ಮತ್ತು ರುಬ್ಬಿದ ಮಸಾಲ ಹಾಕಿ 15-20 ನಿಮಿಷ ಕುದಿಸಿ. ಅದು ಗೊಜ್ಜಿನಹದಕ್ಕೆ ಬರಬೇಕು ಮತ್ತು ನುಗ್ಗೇಕಾಯಿ ಬೆ೦ದಿರಬೇಕು. ಇದು ಚಪಾತಿ & ಅನ್ನ ಎರಡರ ಜೊತೆಗೂ ಚೆನ್ನಾಗಿರುತ್ತದೆ.ಇದೇ ಥರ ನುಗ್ಗೇಕಾಯಿಯ ಬದಲು ಬದನೇಕಾಯಿ ಕೂಡಾ ಹಾಕಿ ಮಾಡಬಹುದು.