ಶುಕ್ರವಾರ, ಮಾರ್ಚ್ 23, 2018

ಮಂಡಕ್ಕಿ ಪಕೋಡ :


ಸಾಮಗ್ರಿಗಳು :
ಮಂಡಕ್ಕಿ (ಪ್ಲೈನ್ ಪುರಿ) : 4 ಕಪ್ 
ಆಲೂಗಡ್ಡೆ : 1 
ಈರುಳ್ಳಿ : 1 
ಕಡಲೆ ಹಿಟ್ಟು : ಸ್ವಲ್ಪ (1/2 ಕಪ್ ನಷ್ಟು)
ಸಣ್ಣ ಹೆಚ್ಚಿದ ಕೊತ್ತಂಬರಿ ಸೊಪ್ಪು : 2 ಚಮಚ 
ಆಮ್ಚೂರ್ ಪುಡಿ / ವಾಟೆ ಪುಡಿ : 1/2 ಚಮಚ 
ಅಚ್ಚ ಖಾರದಪುಡಿ : 1/2 ಚಮಚ 
ತುರಿದ ಶುಂಠಿ : 1/4 ಚಮಚ 
ಉಪ್ಪು: ರುಚಿಗೆ 
ಎಣ್ಣೆ : ಕರಿಯಲು 

ವಿಧಾನ :
ಮಂಡಕ್ಕಿಗೆ ನೀರು ಹಾಕಿ 1 ನಿಮಿಷ ನೆನೆಸಿ ನೀರು ಹಿಂಡಿ ತೆಗೆದು ಒಂದು ಬೌಲ್ ಗೆ ಹಾಕಿಕೊಳ್ಳಿ. ಇದಕ್ಕೆ ಆಲೂಗಡ್ಡೆ ಸಿಪ್ಪೆ ತೆಗೆದು ತುರಿದು ಹಾಕಿ. ನಂತರ ಈರುಳ್ಳಿ ಸಣ್ಣಗೆ ಹೆಚ್ಚಿ ಹಾಕಿ. ನಂತರ ಕೊತ್ತಂಬರಿ ಸೊಪ್ಪು, ಶುಂಠಿ, ಆಮಚೂರ್ ಪುಡಿ, ಖಾರದ ಪುಡಿ ಹಾಕಿಕೊಂಡು ಸ್ವಲ್ಪ ಸ್ವಲ್ಪವೇ ಕಡ್ಲೆ ಹಿಟ್ಟು ಹಾಕುತ್ತಾ ಕಲಸಿ. ಉಂಡೆಯಂತೆ ಕರಿಯಲು ಬರುವಷ್ಟು ಮಾತ್ರ ಕಡ್ಲೆ ಹಿಟ್ಟು ಹಾಕಬೇಕು. ಬೇಕೆನಿಸಿದಲ್ಲಿ  ಮಾತ್ರ ಸ್ವಲ್ಪ ನೀರು ಚಿಮುಕಿಸಿಕೊಂಡು ಕಲಸಿ. 

ನಂತರ ಪುಟ್ಟ ಪುಟ್ಟ ಉಂಡೆ ಮಾಡಿ ಸ್ವಲ್ಪ ತಟ್ಟಿ ಚಪ್ಪಟೆ ಮಾಡಿ ಕಾದ ಎಣ್ಣೆಯಲ್ಲಿ ಕರಿಯಿರಿ. ಗರಿಗರಿಯಾದ ಪಕೋಡಾವನ್ನು ಸಂಜೆ ಬಿಸಿ ಬಿಸಿ ಕಾಫಿ / ಟೀ ಜೊತೆ ಸವಿಯಿರಿ.



ಶುಕ್ರವಾರ, ಮಾರ್ಚ್ 9, 2018

ಮಗೆಕಾಯಿ / ಬಣ್ಣದ ಸೌತೆಕಾಯಿ ಸಿಹಿ ಇಡ್ಲಿ :

ಸಿರ್ಸಿ, ಸಿದ್ದಾಪುರ ಕಡೆ ಬೆಳೆಯುವ ಮಗೆಕಾಯಿ ಮಂಗಳೂರು ಸೌತೆ ಅಥವಾ ಬಣ್ಣದ ಸೌತೆಕಿಂತ ಸ್ವಲ್ಪ ಭಿನ್ನ. ಒಂದೇ ಜಾತಿಯೇ ಆದರೂ ಮಂಗಳೂರು ಸೌತೆಯಲ್ಲಿ  ಕೆಲವು ಸ್ವಲ್ಪ ಕಹಿ ಬರುತ್ತದೆ. ಕಹಿ ಇದ್ದರೆ ಕತ್ತರಿಸಿ ಸ್ವಲ್ಪ ಹೊತ್ತು ನೀರಿನಲ್ಲಿ ನೆನೆಸಿಟ್ಟು ಉಪಯೋಗಿಸಿದರೆ ಕಹಿ ಇರುವುದಿಲ್ಲವಂತೆ. 

ಸಾಮಗ್ರಿಗಳು :
ದೋಸೆ ಅಕ್ಕಿ :  2 ಕಪ್ 
ಕಡ್ಲೆ ಬೇಳೆ : 1/4 ಕಪ್ 
ಉದ್ದಿನಬೇಳೆ : 1/4 ಕಪ್ 
ಮೆಂತ್ಯ : 2 ಚಮಚ 
ಮಗೆಕಾಯಿ / ಬಣ್ಣದ ಸೌತೆ : 1- 1.5 
ಬೆಲ್ಲ : 1/2 - 3/4 ಕಪ್ 
ಉಪ್ಪು : ರುಚಿಗೆ 

ವಿಧಾನ :
ಅಕ್ಕಿಯನ್ನು ತೊಳೆದು ನೀರಿನಲ್ಲಿ ನೆನೆಸಿ.  ಕಡ್ಲೆಬೇಳೆ, ಉದ್ದಿನಬೇಳೆ, ಮೆಂತ್ಯ ಎಲ್ಲ ಸೇರಿಸಿ ತೊಳೆದು ನೀರು ಹಾಕಿ ಎಲ್ಲವನ್ನೂ 5-6 ಘಂಟೆ ನೆನೆಸಿಡಿ. ಮಗೆಕಾಯಿಯನ್ನು ಸಿಪ್ಪೆ ಮತ್ತು ಬೀಜ ತೆಗೆದು ಸಣ್ಣಗೆ ಹೆಚ್ಚಿ. ಒಂದು ಕಪ್ ಆದಷ್ಟು ಸಣ್ಣ ಹೆಚ್ಚಿದ ಹೋಳುಗಳನ್ನು ತೆಗೆದಿಟ್ಟುಕೊಳ್ಳಿ. ನೆನೆಸಿದ ಅಕ್ಕಿಯನ್ನು ನೀರು ಬಗ್ಗಿಸಿ  ಮಗೆಕಾಯಿ ಹೋಳನ್ನು ಸ್ವಲ್ಪ ಸ್ವಲ್ಪವೇ ಹಾಕುತ್ತಾ ನೀರು ಹಾಕದೇ ಇಡ್ಲಿ ಹಿಟ್ಟಿನ ಹದಕ್ಕೆ ಗಟ್ಟಿಯಾಗಿ, ತರಿ ತರಿಯಾಗಿ ರುಬ್ಬಿಕೊಳ್ಳಿ. ನಂತರ ಉಳಿದ ಕಡ್ಲೆಬೇಳೆ ಮಿಶ್ರಣವನ್ನು ನೀರು ಬಗ್ಗಿಸಿ ಮತ್ತೆ ಮಗೆಕಾಯಿ ಹೋಳಿನಲ್ಲಿ ನುಣ್ಣಗೆ, ಗಟ್ಟಿಯಾಗಿ ರುಬ್ಬಿ ಅಕ್ಕಿ ಮಿಶ್ರಣಕ್ಕೆ ಸೇರಿಸಿ ಕಲಸಿ.  ಒಂದು ಪಾತ್ರೆಗೆ ಒಂದು ಲೋಟ ನೀರು ಹಾಕಿ ಅದಕ್ಕೆ ಒಂದು ಸೌಟು ರುಬ್ಬಿದ ಹಿಟ್ಟು, ಅರ್ಧ ಕಪ್ ಬೆಲ್ಲ, ರುಚಿಗೆ ತಕ್ಕಷ್ಟು ಉಪ್ಪು, ಸಣ್ಣಗೆ ಹೆಚ್ಚಿ ತೆಗೆದಿಟ್ಟ ಮಗೆಕಾಯಿ ಹೋಳು ಹಾಕಿ ಸಣ್ಣ ಉರಿಯಲ್ಲಿ ಕೈ ಬಿಡದೇ ಕಲಕುತ್ತಾ ಮಿಶ್ರಣ ಸ್ವಲ್ಪ ದಪ್ಪ ಆಗುವವರೆಗೆ ಕಾಯಿಸಿ. ಇದು ತಣ್ಣಗಾದ ಮೇಲೆ ಉಳಿದ ಹಿಟ್ಟಿನ ಮಿಶ್ರಣಕ್ಕೆ ಸೇರಿಸಿ ಚೆನ್ನಾಗಿ ಕಲಸಿ. ಬೇಕಿದ್ದರೆ ರುಚಿ ನೋಡಿಕೊಂಡು ಬೆಲ್ಲ ಕಮ್ಮಿ ಇದ್ದಲ್ಲಿ ಸೇರಿಸಿಕೊಳ್ಳಬಹುದು. ರಾತ್ರಿ ಹಿಟ್ಟನ್ನು ತಯಾರು ಮಾಡಿ ಮುಚ್ಚಿಡಿ. ಇದು ಚೆನ್ನಾಗಿ ಹುದುಗಬೇಕು. ಆಗ ಮಾತ್ರ ಇಡ್ಲಿ ಮೆತ್ತಗೆ ಚೆನ್ನಾಗಿ ಆಗುತ್ತದೆ. ಬೆಳಿಗ್ಗೆ ಹುದುಗಿದ  ಹಿಟ್ಟನ್ನು ಮತ್ತೊಮ್ಮೆ ಚೆನ್ನಾಗಿ ಕಲಸಿ ಎಣ್ಣೆ ಸವರಿದ ಇಡ್ಲಿ ತಟ್ಟೆಯಲ್ಲಿ ಬೇಯಿಸಿದರೆ ಬಿಸಿ ಬಿಸಿಯಾದ ಮಗೆಕಾಯಿ ಸಿಹಿ ಇಡ್ಲಿ ತುಪ್ಪ ಮತ್ತು ಕಾಯಿ ಚಟ್ನಿಯೊಡನೆ ಸವಿಯಲು ಸಿದ್ಧ.