ಶುಕ್ರವಾರ, ಆಗಸ್ಟ್ 26, 2016

ಕರ್ಜಿಕಾಯಿ

ಸಾಮಗ್ರಿಗಳು: 
ತೆ೦ಗಿನತುರಿ - 1 ಕಪ್, 
ಸಕ್ಕರೆ - 1/2 ಕಪ್, 
ಎಳ್ಳು - 1 ಚಮಚ, 
ಏಲಕ್ಕಿ ಪುಡಿ - 1ಚಿಟಿಕೆ, 
ಚಿರೋಟಿ ರವಾ - 1/2 ಕಪ್ , 
ಮೈದಾ ಹಿಟ್ಟು 1/2 ಕಪ್,
 ಉಪ್ಪು ರುಚಿಗೆ ತಕ್ಕಷ್ಟು, ಎಣ್ಣೆ ಕರಿಯಲು.






ವಿಧಾನ :ಚಿರೋಟಿ ರವಾ, ಮೈದಾ ಹಿಟ್ಟು, ಉಪ್ಪು ಸೇರಿಸಿ ಸ್ವಲ್ಪ ನೀರು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲೆಸಿ ಇಟ್ಟುಕೊಳ್ಳಿ. ಈಗ ಒ೦ದು ಬಾಣಲೆಗೆ ಸಕ್ಕರೆ ತೆ೦ಗಿನತುರಿ ಹಾಕಿ ಸಣ್ಣ ಉರಿಯಲ್ಲಿ 10-15 ನಿಮಿಷ ಹುರಿದು ಕೊನೆಯಲ್ಲಿ ಎಳ್ಳು, ಏಲಕ್ಕಿ ಪುಡಿ ಸೇರಿಸಿ ಬಾಣಲೆಯನ್ನು ಒಲೆಯಿ೦ದ ಇಳಿಸಿ. ಈ ಹೂರಣ ತಣಿಯುವವರೆಗೆ ಹಿಟ್ಟನ್ನು ಪುರಿಯ ಉ೦ಡೆಯ ಹಾಗೆ ಚಿಕ್ಕ ಚಿಕ್ಕ ಉ೦ಡೆ ಮಾಡಿಕೊ೦ಡು ಲಟ್ಟಿಸಿ ಇದರೊಳಗೆ ಹೂರಣ ತು೦ಬಿ ಮಡಿಚಿ ಕಾದ ಎಣ್ಣೆಯಲ್ಲಿ ಹದವಾದ ಉರಿಯಲ್ಲಿ ಕರಿದರೆ ಗರಿ ಗರಿ ಕರ್ಜಿಕಾಯಿ ರೆಡಿ.

ಸೂಚನೆ:
1. ತೆ೦ಗಿನತುರಿಯ ಬದಲು ಕೊಬ್ಬರಿ ತುರಿಯನ್ನು ಬಳಸಬಹುದು. ಕೊಬ್ಬರಿ ತುರಿ ಬಳಸುವಾಗ ಸಕ್ಕರೆ ಬದಲು ಸಕ್ಕರೆ ಪುಡಿ ಹಾಕಿ ಮಾಡಿ.

2. ಮೈದಾಹಿಟ್ಟಿನ ಬದಲು ಗೋಧಿಹಿಟ್ಟೂ ಬಳಸಬಹುದು. 

ಶುಕ್ರವಾರ, ಆಗಸ್ಟ್ 19, 2016

ಇಡ್ಲಿ ಮಂಚೂರಿಯನ್ :

ಬೆಳಿಗ್ಗೆ ತಿಂಡಿಗೆ ಮಾಡಿದ ಇಡ್ಲಿ ಉಳಿದುಬಿಟ್ಟರೆ ಮತ್ತೆ ಅದನ್ನು ತಿನ್ನಲು ಬೇಜಾರು. ಅಂತಹ ಸಮಯದಲ್ಲಿ ಉಳಿದ ಇಡ್ಲಿಯಿಂದ ಮಂಚೂರಿಯನ್ ಮಾಡಿಕೊಂಡು ಸಾಯಂಕಾಲಕ್ಕೆ ಸ್ನಾಕ್ಸ್ ತಿನ್ನಬಹುದು. ನೀವೂ ಟ್ರೈ ಮಾಡಿ ನೋಡಿ. 

ಸಾಮಗ್ರಿಗಳು:
ತಣ್ಣಗಾದ ಇಡ್ಲಿ : 8-10 (ಮಧ್ಯಮ ಗಾತ್ರದ್ದು / ಇಡ್ಲಿ ಪ್ಲೇಟ್ ನಲ್ಲಿ ಮಾಡಿರುವಂತದ್ದು)
ಮೈದಾ ಹಿಟ್ಟು : 4 ಟೇಬಲ್ ಚಮಚ
ಕಾರ್ನ್ ಫ್ಲೋರ್ : 2 ಟೇಬಲ್ ಚಮಚ 
ಅಚ್ಚ ಖಾರದ ಪುಡಿ : 1/2 ಟೀ ಚಮಚ 
ಕ್ಯಾಪ್ಸಿಕಂ : 1
ಈರುಳ್ಳಿ : 1
ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ : 1 ಟೇಬಲ್ ಚಮಚ 
ಸಣ್ಣಗೆ ಹೆಚ್ಚಿದ ಶುಂಠಿ : 1/2 ಟೇಬಲ್ ಚಮಚ 
ಕೊತ್ತಂಬರಿ ಸೊಪ್ಪು : 1 ಟೇಬಲ್ ಚಮಚ 
ಸೋಯಾ ಸಾಸ್ : 1/2 ಟೀ ಚಮಚ 
ಗ್ರೀನ್ ಚಿಲ್ಲಿ ಸಾಸ್ : 2-3 ಟೀ ಚಮಚ 
ಟೊಮೇಟೊ ಸಾಸ್: 2 ಟೀ ಚಮಚ 
ವಿನೆಗರ್ ಅಥವಾ ಲಿಂಬುರಸ : 1/2 ಟೀ ಚಮಚ  
ಎಣ್ಣೆ : ಕರಿಯಲು 
ಉಪ್ಪು : ರುಚಿಗೆ 

ವಿಧಾನ :
ತಣ್ಣಗಾದ ಇಡ್ಲಿಯನ್ನು ಸಣ್ಣ ಸಣ್ಣ ಚೂರುಗಳಾಗಿ ಕತ್ತರಿಸಿ (like paneer cubes). ಕ್ಯಾಪ್ಸಿಕಂ, ಈರುಳ್ಳಿಯನ್ನು ಉದ್ದುದ್ದ ಹೆಚ್ಚಿಕೊಳ್ಳಿ. ಒಲೆಯ ಮೇಲೆ ಕರಿಯಲು ಎಣ್ಣೆ ಕಾಯಲು ಇಟ್ಟುಕೊಳ್ಳಿ.  ಮೈದಾ, ಕಾರ್ನ್ ಫ್ಲೋರ್, ಚಿಟಿಕೆ ಉಪ್ಪು, ಅಚ್ಚ ಖಾರದ ಪುಡಿ ಮತ್ತು ನೀರು ಹಾಕಿ ಗಂಟಿಲ್ಲದಂತೆ ತೆಳ್ಳಗೆ ಕಲಸಿಕೊಳ್ಳಿ. ಇದು ಇಡ್ಲಿಗೆ ತೆಳುವಾಗಿ ಅಂಟುವಷ್ಟು ತೆಳ್ಳಗಿರಲಿ.   ಕತ್ತರಿಸಿದ ಇಡ್ಲಿ ಚೂರುಗಳನ್ನು ಈ ಹಿಟ್ಟಿನಲ್ಲಿ ಅದ್ದಿ ಕಾದ ಎಣ್ಣೆಯಲ್ಲಿ ಬಿಟ್ಟು ಮಧ್ಯಮ ಉರಿಯಲ್ಲಿ ಚೆನ್ನಾಗಿ ಕರಿಯಿರಿ. ಈ ಕರಿದ ಇಡ್ಲಿ ಮೇಲಿನ ಭಾಗ ಗರಿಯಾಗಿ, ಒಳಗೆ ಮೆತ್ತಗಿರುತ್ತದೆ. 

ನಂತರ ಇನ್ನೊಂದು ಬಾಣಲೆಗೆ ಈ ಕರಿದ ಎಣ್ಣೆಯನ್ನೇ 4 ಚಮಚ ಹಾಕಿ ಅದಕ್ಕೆ ಹೆಚ್ಚಿದ ಶುಂಠಿ, ಬೆಳ್ಳುಳ್ಳಿ ಹಾಕಿ ಸ್ವಲ್ಪ ಫ್ರೈ ಮಾಡಿ, ಹೆಚ್ಚಿದ ಈರುಳ್ಳಿ, ಕ್ಯಾಪ್ಸಿಕಂ ಹಾಕಿ ಅರ್ಧ ನಿಮಿಷ ಹುರಿಯಿರಿ. ನಂತರ ಇದಕ್ಕೆ ಅರ್ಧ ಟೀ ಚಮಚದಷ್ಟು ಉಪ್ಪು, ಸೋಯಾ ಸಾಸ್, ಗ್ರೀನ್ ಚಿಲ್ಲಿ ಸಾಸ್, ಟೊಮೇಟೊ ಸಾಸ್, ಲಿಂಬು ರಸ / ವಿನೆಗರ್ ಗಳನ್ನೂ ಒಂದೊಂದಾಗಿ ಹಾಕುತ್ತ ಚೆನ್ನಾಗಿ ಮಿಕ್ಸ್ ಮಾಡಿ. ಈಗ ಕರಿದಿಟ್ಟ ಇಡ್ಲಿಯನ್ನು ಹಾಕಿ ಸರಿಯಾಗಿ ಮಿಕ್ಸ್ ಮಾಡಿ, ಕೊತ್ತಂಬರಿ ಸೊಪ್ಪು ಹಾಕಿ ಬಿಸಿ ಬಿಸಿ  ಇಡ್ಲಿ ಮಂಚೂರಿಯನ್ ಸರ್ವ್ ಮಾಡಿ.  







ಸಲಹೆ: 
1) ಈರುಳ್ಳಿ ಗಿಡವನ್ನೂ (spring onion) ಸಹ ಸಣ್ಣಗೆ ಹೆಚ್ಚಿ ಸ್ವಲ್ಪ ಫ್ರೈ ಮಾಡಲು ಹಾಕಿ , ಸ್ವಲ್ಪ ಮೇಲಿಂದ ಹಸಿಯಾಗಿ ಹಾಕಿ ಸರ್ವ್ ಮಾಡಬಹುದು. 
2) ಇಡ್ಲಿಗೆ ಉಪ್ಪು ಹಾಕಿರುವುದರಿಂದ ಉಪ್ಪು ಹಾಕುವಾಗ ಎಚ್ಚರವಿರಲಿ. 
3) ಯಾವುದೇ ಇಡ್ಲಿಯಿಂದ ಕೂಡ ಮಾಡಬಹುದು. ನಾ  ಕೊಟ್ಟಿರುವ ಅಳತೆಗೆ  ನಾನು ಇಡ್ಲಿ ಪ್ಲೇಟ್ ನ ಇಡ್ಲಿ ಎಂದು ಹಾಕಿದ್ದೇನಷ್ಟೆ. 

ಗುರುವಾರ, ಆಗಸ್ಟ್ 11, 2016

ಬಿಲ್ವ ಪತ್ರೆ ತ೦ಬ್ಳಿ (ತ೦ಬುಳಿ):

ಸಾಮಗ್ರಿಗಳು: ಬಿಲ್ವಪತ್ರೆ -8-10, ಎಣ್ಣೆ -1 ಚಮಚ, ಜೀರಿಗೆ - 1/2 ಚಮಚ , ತೆ೦ಗಿನತುರಿ - 1/4 ಕಪ್ , ಉಪ್ಪುರುಚಿಗೆ ತಕ್ಕಷ್ಟು.




ವಿಧಾನ : ಒ೦ದು ಬಾಣಲೆಗೆ ೧ ಚಮಚ ಎಣ್ಣೆ, ಬಿಲ್ವಪತ್ರೆ ಹಾಗು ಜೀರಿಗೆ ಹಾಕಿ ೨ ನಿಮಿಶ ಬಾಡಿಸಿ,,, ಈಗ ಅದಕ್ಕೆ ತೆ೦ಗಿನತುರಿ ಉಪ್ಪು ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿ ಪಾತ್ರೆಗೆ ಹಾಕಿ ಅದಕ್ಕೆ ಇನ್ನು ೨ ಲೋಟ ನೀರು ಸೇರಿಸಿದರೆ ಬಿಲ್ವಪತ್ರೆ ತ೦ಬುಳಿ ಅನ್ನದ ಜೊತೆ ತಿನ್ನಲು ಸಿದ್ದ.ಹಾಗೆ ಕುಡಿಯಲು ಚೆನ್ನಾಗಿರುತ್ತದೆ

ಶುಕ್ರವಾರ, ಆಗಸ್ಟ್ 5, 2016

ಮೊಳಕೆ ಹೆಸರುಕಾಳು ಸಾರು:

ಸಾಮಗ್ರಿಗಳು:
ಮೊಳಕೆ ಕಟ್ಟಿದ ಹೆಸರುಕಾಳು (sprouts) : 2.5 ಕಪ್
ಈರುಳ್ಳಿ : 1 (ಮಧ್ಯಮ ಗಾತ್ರ)
ಬೆಳ್ಳುಳ್ಳಿ : 8-10 ಎಸಳು
ಕರಿಬೇವು : 8-10 ಎಲೆಗಳು
ಎಣ್ಣೆ : 4 ಚಮಚ
ಜೀರಿಗೆ : 1/2 ಚಮಚ
ಸಾಸಿವೆ : 1/2 ಚಮಚ
ಹಸಿಮೆಣಸಿನ ಕಾಯಿ : 2
ಅರಿಶಿನ ಪುಡಿ :1/4 ಚಮಚ 
ಗರಂ ಮಸಾಲ ಪುಡಿ : 1/2 ಚಮಚ
ಅಚ್ಚ ಮೆಣಸಿನ ಪುಡಿ : 1/2 ಚಮಚ (ನಿಮ್ಮ ಖಾರಕ್ಕೆ ಅನುಗುಣವಾಗಿ)
ಲಿಂಬೆ ರಸ : 2-3 ಚಮಚ
ಉಪ್ಪು : ರುಚಿಗೆ ತಕ್ಕಷ್ಟು

ವಿಧಾನ :
ಮೊಳಕೆ ಕಾಳನ್ನು ಕುಕ್ಕರ್ ನಲ್ಲಿ ತುಂಬಾ ಮೆತ್ತಗಾಗದಂತೆ (ಕರಗದಂತೆ) ಬೇಯಿಸಿಕೊಳ್ಳಿ. ಅರ್ಧ ಕಪ್ ನಷ್ಟು ಬೆಂದ ಕಾಳನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ಈರುಳ್ಳಿಯನ್ನು ತೆಳ್ಳಗೆ, ಉದ್ದುದ್ದ ಹೆಚ್ಚಿಕೊಳ್ಳಿ. ಬೆಳ್ಳುಳ್ಳಿ ಸಿಪ್ಪೆ ತೆಗೆದು ಜಜ್ಜಿಕೊಳ್ಳಿ. ಹಸಿಮೆಣಸನ್ನು ಉದ್ದಕ್ಕೆ ಸೀಳಿಕೊಳ್ಳಿ. ನಂತರ ಒಂದು ಬಾಣಲೆಯನ್ನು ಒಲೆಯ ಮೇಲಿಟ್ಟು ಅದಕ್ಕೆ ಎಣ್ಣೆ ಹಾಕಿ ಕಾಯಿಸಿ, ಜೀರಿಗೆ ಸಾಸಿವೆ ಹಾಕಿ ಸಿಡಿಸಿ. ಇದಕ್ಕೆ ಹಸಿಮೆಣಸಿನ ಕಾಯಿ, ಕರಿಬೇವು, ಜಜ್ಜಿದ ಬೆಳ್ಳುಳ್ಳಿ ಹಾಕಿ ಸ್ವಲ್ಪ ಬಾಡಿಸಿ. ನಂತರ ಈರುಳ್ಳಿ ಹಾಕಿ ಫ್ರೈ ಮಾಡಿ. ಇದಕ್ಕೆ ಅರಿಶಿನ ಪುಡಿ, ಗರಂ ಮಸಾಲಾ ಪುಡಿ, ಅಚ್ಚ ಖಾರದ ಪುಡಿ ಹಾಕಿ ಮಿಕ್ಸ್ ಮಾಡಿಕೊಂಡು ಬೇಯಿಸಿಟ್ಟ ಹೆಸರು ಕಾಳು ಮತ್ತು ರುಬ್ಬಿದ ಕಾಳನ್ನು ಹಾಕಿ, ೨ ಕಪ್ ನಷ್ಟು ನೀರು, ಉಪ್ಪು ಹಾಕಿ ಕುದಿಸಿ. ಕೊನೆಯಲ್ಲಿ ಲಿಂಬೆ ರಸ ಹಾಕಿ ಉರಿ ಆರಿಸಿ. ಬಿಸಿ ಬಿಸಿಯಾದ ಹೆಸರುಕಾಳು ಸಾರು ಅನ್ನದ ಜೊತೆ ಸವಿಯಲು ಸಿದ್ಧ.