ಮಂಗಳವಾರ, ಮಾರ್ಚ್ 19, 2013

ಬದನೆ ಮಸಾಲಾ:


ಸಾಮಗ್ರಿ: ಬಲೂನ್  ಬದನೆ(ದಪ್ಪ - ಕರಿ ಬದನೆ ಕಾಯಿ) 1, ಶೇಂಗಾ (ಕಡ್ಲೆ ಕಾಯಿ) ಪುಡಿ 1 ಕಪ್, ಪುಟಾಣಿ (ಹುರಿಗಡಲೆ) ಪುಡಿ 1/2 ಕಪ್, ಸಣ್ಣಗೆ ಹೆಚ್ಚಿದ ಈರುಳ್ಳಿ 2, ಬೆಳ್ಳುಳ್ಳಿ 15-20 ಎಸಳು, ಅಚ್ಚ ಮೆಣಸಿನ ಪುಡಿ ಖಾರಕ್ಕೆ, ಬೆಲ್ಲ/ಸಕ್ಕರೆ 1 - 1.5 ಚಮಚ, ಉಪ್ಪು- ನಿಂಬೆ ರಸ / ವಾಟೆ ಪುಡಿ ರುಚಿಗೆ ತಕ್ಕಷ್ಟು.  ಒಗ್ಗರಣೆಗೆ: ಎಣ್ಣೆ, ಜೀರಿಗೆ, ಸಾಸಿವೆ, ಕರಿಬೇವು.

ವಿಧಾನ: ಬದನೆ ಕಾಯಿಯನ್ನು ಮಧ್ಯದಲ್ಲಿ 4 ಭಾಗವಾಗಿ ಸೀಳಿಕೊಂಡು  1.5" ನಷ್ಟು ಉದ್ದಕ್ಕೆ, ತೆಳುವಾಗಿ ಸ್ಲೈಸ್ ಮಾಡಿಕೊಳ್ಳಿ. ಶೇಂಗಾ ಸ್ವಲ್ಪ ಹುರಿದು ತರಿ ತರಿಯಾಗಿ ಪುಡಿ ಮಾಡಿ, ಹುರಿಗಡಲೆಯನ್ನು ಬೇರೆಯಾಗಿಯೇ ತರಿ ತರಿಯಾಗಿ ಪುಡಿ ಮಾಡಿಕೊಳ್ಳಿ. ಬೆಳ್ಳುಳ್ಳಿಯನ್ನು ಸಣ್ಣದಾಗಿ ಹೆಚ್ಚಿಕೊಳ್ಳಿ. ನಂತರ ಬಾಣಲೆಗೆ 5-6 ಟೇಬಲ್ ಸ್ಪೂನ್ ಎಣ್ಣೆ ಹಾಕಿ ಕಾದ ನಂತರ ಜೀರಿಗೆ ಸಾಸಿವೆ ಹಾಕಿ. ಅದು ಚಟ-ಪಟಾಯಿಸಿದಾಗ ಕರಿಬೇವು, ಹೆಚ್ಚಿದ ಬೆಳ್ಳುಳ್ಳಿ ಹಾಕಿ ಬಾಡಿಸಿ. ನಂತರ ಹೆಚ್ಚಿದ ಈರುಳ್ಳಿ ಹಾಕಿ ಬಾಡಿಸಿ. ಅದಕ್ಕೆ ಹೆಚ್ಚಿದ ಬದನೆ ಹಾಕಿ ಅದು ಬೇಯುವಷ್ಟು ನೀರು, ರುಚಿಗೆ ತಕ್ಕಷ್ಟು ಉಪ್ಪು, ವಾಟೆ ಪುಡಿ/ನಿಂಬೆ ರಸ, ಅಚ್ಚ ಮೆಣಸಿನ ಪುಡಿ, ಬೆಲ್ಲ ಹಾಕಿ ಮುಚ್ಚಿ ಬೇಯಿಸಿ. ಚೆನ್ನಾಗಿ ಬೆಂದು ಮೆತ್ತಗಾದಾಗ ಕಡ್ಲೆ ಕಾಯಿ ಪುಡಿ, ಹುರಿಗಡಲೆ ಪುಡಿ ಉದುರಿಸಿ ಚೆನ್ನಾಗಿ ಕಲಸಿ. ನೀರು ಕಮ್ಮಿ ಆದರೆ ಸ್ವಲ್ಪ ನೀರು ಹಾಕಿ, (ಉಪ್ಪು- ಖಾರ ಸರಿಯಾಗಿದೆಯೇ ಎಂದು ಪರೀಕ್ಷಿಸಿ ಸರಿ ಪಡಿಸಿಕೊಳ್ಳಬಹುದು) 2-3 ನಿಮಿಷ ಬೇಯಿಸಿ (ಇದು ಗ್ರೇವಿಯ ಹದಕ್ಕೆ ಇರುವಷ್ಟು ನೀರು ಹಾಕಿ). ಬೇಕಾದರೆ ಕೊತ್ತಂಬರಿ ಸೊಪ್ಪು ಹಾಕಿಕೊಳ್ಳಬಹುದು. ಈ ಮಸಾಲ ಸ್ವಲ್ಪವೇ ಸಿಹಿ, ಹದವಾದ ಖಾರ ಇರಲಿ. ಇದು ಪೂರಿ, ಚಪಾತಿ, ದೋಸೆ ಜೊತೆ ಚೆನ್ನಾಗಿರುತ್ತದೆ. 




ಕಾವ್ಯಾ :)





ಬುಧವಾರ, ಮಾರ್ಚ್ 13, 2013

ಕೆಸುವಿನ ಸೊಪ್ಪಿನ (Colocasia leaves) ಕರ್ಕ್ಲಿ :

ಬೇಕಾಗುವ ಸಾಮಾಗ್ರಿಗಳು: ಕೆಸುವಿನ ಸೊಪ್ಪು 25-30 ಎಲೆಗಳು, ಜೀರಿಗೆ ½ ಚಮಚ , ಹಸಿ ಮೆಣಸು – 5-6(ಸೂಜಿ ಮೆಣಸು), ಬೆಳ್ಳುಳ್ಳಿ 6-7, ಓಮು ¼ ಚಮಚ ,ಸಾಸಿವೆ ½ ಚಮಚ , ಎಣ್ಣೆ 2 . ಹುಣಸೆ ರಸ/ಲಿ೦ಬು ರಸ/ವಾಟೆ ಪುಡಿ, ಉಪ್ಪು ರುಚಿಗೆ ತಕ್ಕಷ್ಟು.

ವಿಧಾನ: ಮೊದಲು ಸೊಪ್ಪನ್ನು ಹೆಚ್ಚಿಕೊಳ್ಳಿ, ಅದಕ್ಕೆ ಸ್ವಲ್ಪ ನೀರು, ಹುಣಸೆ ರಸ,ಹಸಿಮೆಣಸಿನ ಪೇಸ್ಟ, ಉಪ್ಪು ಹಾಕಿ ಚೆನ್ನಾಗಿ ಬೇಯಿಸಿ. ಸೂಪ್ಪು ಕರಗುವಷ್ಟು ಬೇಯಿಸಬೇಕು. ಬೆ೦ದ ಸೊಪ್ಪನ್ನು ಸೌಟಿನಲ್ಲಿ ಚೆನ್ನಾಗಿ ಕಲಸಿರಿ. ಅಮೇಲೆ ಅದಕ್ಕೆ ಬೆಳ್ಳುಳ್ಳಿ, ಜೀರಿಗೆ, ಓಮು, ಸಾಸಿವೆ & ಒ೦ದು ಒಣ ಮೆಣಸು ಹಾಕಿ ಒಗ್ಗರಣೆ ಕೊಡಿ. ಇದು ಅನ್ನದ ಜೊತೆ ಚೆನ್ನಾಗಿರುತ್ತದೆ.

ವಿ.ಸೂ: ಎಲ್ಲ ಕೆಸುವಿನ ಸೊಪ್ಪಿನಿ೦ದ ಇದನ್ನು ಮಾಡಲು ಬರುವುದಿಲ್ಲ. ಮುಖ್ಯವಾಗಿ ಮಳೆಗಾಲದಲ್ಲಿ ಬೆಳೆಯುವ ಸೊಪ್ಪಿನಿ೦ದ ಮಾಡುತ್ತಾರೆ. ಇದು ಚಿಕ್ಕ ಚಿಕ್ಕ ಗಿಡವಾಗಿರುತ್ತದೆ. ತು೦ಬಾ ದೊಡ್ಡದಾಗಿ ಬೆಳೆಯುವ ಕೆಸುವಿನ ಗಿಡದ ಸೊಪ್ಪಿನಿ೦ದ ಇದನ್ನು ಮಾಡಲು ಬರುವುದಿಲ್ಲ

ಸೊಪ್ಪನ್ನು ಹೆಚ್ಚುವಾಗ ಕೈಗೆ ಕೊಬ್ಬರಿ ಎಣ್ಣೆ ಸವರಿಕೊ೦ಡರೆ ಕೈ ತುರಿಕೆ ಕಡಿಮೆ


ಗುರುವಾರ, ಮಾರ್ಚ್ 7, 2013

ಹುಣಸೆ ಹಣ್ಣಿನ ಚಿತ್ರಾನ್ನ




ಸಾಮಗ್ರಿ: ಅಕ್ಕಿ 1 ಕಪ್, ಹುಣಸೆ ರಸ ಅರ್ಧ ಕಪ್, ಬೆಲ್ಲ 3-4 ಚಮಚ, ಉಪ್ಪು ರುಚಿಗೆ ತಕ್ಕಷ್ಟು, ತೆಂಗಿನ ತುರಿ 2-3 ಚಮಚ, ಈರುಳ್ಳಿ 1, ಬೆಳ್ಳುಳ್ಳಿ 6-7 ಎಸಳು, ಹಸಿಮೆಣಸಿನ ಕಾಯಿ 2, ಒಣ ಮೆಣಸಿನ ಕಾಯಿ 1. 
ಒಗ್ಗರಣೆಗೆ: ಎಣ್ಣೆ 4-5 ಚಮಚ, ಕಡ್ಲೆ ಕಾಯಿ ಸ್ವಲ್ಪ, ಉದ್ದಿನ ಬೇಳೆ 1 ಚಮಚ, ಜೀರಿಗೆ-ಸಾಸಿವೆ ಅರ್ಧ ಚಮಚ, ಕರಿಬೇವು ಸ್ವಲ್ಪ, ಅರಿಶಿನ ಪುಡಿ ಸ್ವಲ್ಪ. 

ವಿಧಾನ: ಅಕ್ಕಿ ತೊಳೆದು ಅನ್ನ ಮಾಡಿಟ್ಟುಕೊಳ್ಳಿ. ಹಸಿಮೆಣಸನ್ನು ಹೆಚ್ಚಿಕೊಳ್ಳಿ. ಈರುಳ್ಳಿಯನ್ನು ಸಣ್ಣಗೆ ಹೆಚ್ಚಿ, ಬೆಳ್ಳುಳ್ಳಿಯನ್ನು ಜಜ್ಜಿಕೊಳ್ಳಿ.  ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿಕೊಂಡು ಕಡ್ಲೆ ಕಾಯಿ ಬೀಜ ಹಾಕಿ ಸ್ವಲ್ಪ ಹುರಿದ ಮೇಲೆ ಉದ್ದಿನ ಬೇಳೆ ಹಾಕಿ. ಇದು ಬಂಗಾರದ ಬಣ್ಣಕ್ಕೆ ತಿರುಗಿದಾಗ ಒಣ ಮೆಣಸಿನ ಚೂರುಗಳು, ಜೀರಿಗೆ, ಸಾಸಿವೆ, ಹಾಕಿ. ಇದು ಚಟ ಪಟ ಸಿಡಿದಾಗ ಹಸಿಮೆಣಸಿನ ಕಾಯಿ, ಕರಿಬೇವು, ಅರಿಶಿನ ಪುಡಿ ಹಾಕಿ, ನಂತರ ಜಜ್ಜಿದ ಬೆಳ್ಳುಳ್ಳಿ ಹಾಕಿ, ಇದು ಫ್ರೈ ಆದಾಗ ಹೆಚ್ಚಿದ ಈರುಳ್ಳಿ ಹಾಕಿ ಫ್ರೈ ಮಾಡಿ. ನಂತರ ಇದಕ್ಕೆ ಹುಣಸೆ ರಸ (ಸುಮಾರು ಒಂದು ಲಿಂಬೆ ಗಾತ್ರದಷ್ಟು ಹುಣಸೆ ಹಣ್ಣನ್ನು 15 ನಿಮಿಷ ನೀರಿನಲ್ಲಿ ನೆನೆಸಿ ಕಿವುಚಿ ರಸ ತೆಗೆದಿಟ್ಟುಕೊಳ್ಳಿ), ಬೆಲ್ಲ, ಉಪ್ಪು ಹಾಕಿ ಕುದಿಸಿ. ಈ ಮಿಶ್ರಣವನ್ನು ಸುಮಾರು 5-6 ನಿಮಿಷ ಕುದಿಸಿ. ಇದು ನೀರಿನ ಅಂಶ ಆರಿ ಗೊಜ್ಜಿನಂತೆ ಗಟ್ಟಿಯಾಗುತ್ತದೆ. ಕೆಳಗಿಳಿಸಿ ಅನ್ನ ಹಾಕಿ ಕಲಸಿ (ಒಮ್ಮೆ ರುಚಿ ನೋಡಿಕೊಂಡು ಹುಳಿ ಜಾಸ್ತಿ ಇದ್ದರೆ  ಸ್ವಲ್ಪ ಉಪ್ಪು-ಸಕ್ಕರೆ ಹಾಕಿ ಕಲಸಿ). ಈಗ ಹುಳಿ -ಸಿಹಿ ಚಿತ್ರಾನ್ನ ಸವಿಯಲು ಸಿದ್ಧ.