ಗುರುವಾರ, ಮಾರ್ಚ್ 7, 2013

ಹುಣಸೆ ಹಣ್ಣಿನ ಚಿತ್ರಾನ್ನ




ಸಾಮಗ್ರಿ: ಅಕ್ಕಿ 1 ಕಪ್, ಹುಣಸೆ ರಸ ಅರ್ಧ ಕಪ್, ಬೆಲ್ಲ 3-4 ಚಮಚ, ಉಪ್ಪು ರುಚಿಗೆ ತಕ್ಕಷ್ಟು, ತೆಂಗಿನ ತುರಿ 2-3 ಚಮಚ, ಈರುಳ್ಳಿ 1, ಬೆಳ್ಳುಳ್ಳಿ 6-7 ಎಸಳು, ಹಸಿಮೆಣಸಿನ ಕಾಯಿ 2, ಒಣ ಮೆಣಸಿನ ಕಾಯಿ 1. 
ಒಗ್ಗರಣೆಗೆ: ಎಣ್ಣೆ 4-5 ಚಮಚ, ಕಡ್ಲೆ ಕಾಯಿ ಸ್ವಲ್ಪ, ಉದ್ದಿನ ಬೇಳೆ 1 ಚಮಚ, ಜೀರಿಗೆ-ಸಾಸಿವೆ ಅರ್ಧ ಚಮಚ, ಕರಿಬೇವು ಸ್ವಲ್ಪ, ಅರಿಶಿನ ಪುಡಿ ಸ್ವಲ್ಪ. 

ವಿಧಾನ: ಅಕ್ಕಿ ತೊಳೆದು ಅನ್ನ ಮಾಡಿಟ್ಟುಕೊಳ್ಳಿ. ಹಸಿಮೆಣಸನ್ನು ಹೆಚ್ಚಿಕೊಳ್ಳಿ. ಈರುಳ್ಳಿಯನ್ನು ಸಣ್ಣಗೆ ಹೆಚ್ಚಿ, ಬೆಳ್ಳುಳ್ಳಿಯನ್ನು ಜಜ್ಜಿಕೊಳ್ಳಿ.  ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿಕೊಂಡು ಕಡ್ಲೆ ಕಾಯಿ ಬೀಜ ಹಾಕಿ ಸ್ವಲ್ಪ ಹುರಿದ ಮೇಲೆ ಉದ್ದಿನ ಬೇಳೆ ಹಾಕಿ. ಇದು ಬಂಗಾರದ ಬಣ್ಣಕ್ಕೆ ತಿರುಗಿದಾಗ ಒಣ ಮೆಣಸಿನ ಚೂರುಗಳು, ಜೀರಿಗೆ, ಸಾಸಿವೆ, ಹಾಕಿ. ಇದು ಚಟ ಪಟ ಸಿಡಿದಾಗ ಹಸಿಮೆಣಸಿನ ಕಾಯಿ, ಕರಿಬೇವು, ಅರಿಶಿನ ಪುಡಿ ಹಾಕಿ, ನಂತರ ಜಜ್ಜಿದ ಬೆಳ್ಳುಳ್ಳಿ ಹಾಕಿ, ಇದು ಫ್ರೈ ಆದಾಗ ಹೆಚ್ಚಿದ ಈರುಳ್ಳಿ ಹಾಕಿ ಫ್ರೈ ಮಾಡಿ. ನಂತರ ಇದಕ್ಕೆ ಹುಣಸೆ ರಸ (ಸುಮಾರು ಒಂದು ಲಿಂಬೆ ಗಾತ್ರದಷ್ಟು ಹುಣಸೆ ಹಣ್ಣನ್ನು 15 ನಿಮಿಷ ನೀರಿನಲ್ಲಿ ನೆನೆಸಿ ಕಿವುಚಿ ರಸ ತೆಗೆದಿಟ್ಟುಕೊಳ್ಳಿ), ಬೆಲ್ಲ, ಉಪ್ಪು ಹಾಕಿ ಕುದಿಸಿ. ಈ ಮಿಶ್ರಣವನ್ನು ಸುಮಾರು 5-6 ನಿಮಿಷ ಕುದಿಸಿ. ಇದು ನೀರಿನ ಅಂಶ ಆರಿ ಗೊಜ್ಜಿನಂತೆ ಗಟ್ಟಿಯಾಗುತ್ತದೆ. ಕೆಳಗಿಳಿಸಿ ಅನ್ನ ಹಾಕಿ ಕಲಸಿ (ಒಮ್ಮೆ ರುಚಿ ನೋಡಿಕೊಂಡು ಹುಳಿ ಜಾಸ್ತಿ ಇದ್ದರೆ  ಸ್ವಲ್ಪ ಉಪ್ಪು-ಸಕ್ಕರೆ ಹಾಕಿ ಕಲಸಿ). ಈಗ ಹುಳಿ -ಸಿಹಿ ಚಿತ್ರಾನ್ನ ಸವಿಯಲು ಸಿದ್ಧ.  

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ