ಶುಕ್ರವಾರ, ಅಕ್ಟೋಬರ್ 31, 2014

ಬಾಳೇಹಣ್ಣಿನ ಸುಟ್ಟೇವು / ಸಿಹಿ ಬಜ್ಜಿ



ಸಾಮಗ್ರಿಗಳು: ಪಚಬಾಳೇಹಣ್ಣು 3, ಅಕ್ಕಿ 2 ಲೋಟ, ಬೆಲ್ಲ  100 ಗ್ರಾ೦,ಎಣ್ಣೆ 1/4 ಲೀಟರ್,ಉಪ್ಪು ರುಚಿಗೆ ತಕ್ಕಷ್ಟು.



ಮಾಡುವ ವಿಧಾನ: ಅಕ್ಕಿಯನ್ನು ಚೆನ್ನಾಗಿ ತೊಳೆದು 2-3 ಗ೦ಟೆ ನೆನೆಸಿಡಿ. ನ೦ತರ ನೀರನ್ನು ಬಸಿದು ಬಾಳೇಹಣ್ಣನ್ನು ಚಿಕ್ಕ ಚಿಕ್ಕ ಚೂರು ಮಾಡಿ ಅಕ್ಕಿ ಜೊತೆ ಮಿಕ್ಸಿಯಲ್ಲಿ ಸ್ವಲ್ಪ ನೀರು ಹಾಕಿ ನುಣ್ಣಗೆ ಆದಷ್ಟು ಗಟ್ಟಿಯಾಗಿ ರುಬ್ಬಿಕೊಳ್ಳಿ. ಇದನ್ನು ದಪ್ಪ ತಳದ ಪಾತ್ರೆಗೆ ಹಾಕಿ ಉಪ್ಪು & ಬೆಲ್ಲ ಸೇರಿಸಿ ಹಿಟ್ಟು ಸ್ವಲ್ಪ ಗಟ್ಟಿಯಾಗುವವರೆಗೆ ಕಾಯಿಸಬೇಕು. (ಚಿತ್ರದಲ್ಲಿ ತೋರಿಸಿದಷ್ಟು ಗಟ್ಟಿಯಾಗಿ ಕಾಯಿಸಬೇಕು ಅ೦ತೇನಿಲ್ಲ,,, ಸ್ವಲ್ಪ ತೆಳ್ಳಗೆ ಇದ್ದರು ನಡೆಯುತ್ತದೆ) ಬಿಡದೆ ಕಲಕುತ್ತಲೇ ಇರಬೇಕು ಇಲ್ಲವಾದರೆ ತಳ ಹಿಡಿಯುತ್ತದೆ. ಕಾಯಿಸುವಾಗ ಹಿಟ್ಟು ಗ೦ಟಾಗದ೦ತೆ ನೋಡಿಕೊಳ್ಳಿ. ನ೦ತರ ಉರಿ ಆರಿಸಿ ಬಿಸಿ ಹಿಟ್ಟನ್ನು ತಣ್ಣಗಾಗಲು ಬಿಡಿ. ಬಾಣಲೆಗೆ ಎಣ್ಣೆ ಹಾಕಿಕೊ೦ಡು ಅದು ಕಾದ ನ೦ತರ, ಬಿಸಿ ಆರಿದ ಹಿಟ್ಟನ್ನು ಕೈಗೆ ಸ್ವಲ್ಪ ಸ್ವಲ್ಪ ತೆಗೆದುಕೊ೦ಡು (ದೊಡ್ಡ ನೆಲ್ಲಿಕಾಯಿ ಗಾತ್ರ) ಬಾಣಲೆಗೆ ಹಾಕಿ ಮಧ್ಯಮ ಉರಿಯಲ್ಲಿ ಹೊ೦ಬಣ್ಣ ಬರುವವರೆಗೆ ಕರಿಯಿರಿ.

 ಮತ್ತೊ೦ದು ವಿಧಾನ: ಬಾಳೇಹಣ್ಣನ್ನು ನುಣ್ಣಗೆ ನೀರು ಹಾಕದೆ ಹಾಗೆ ರುಬ್ಬಿಕೊಳ್ಳಿ (ಅಥವಾ ಕೈ ಅಲ್ಲೇ ಚೆನ್ನಾಗಿ ಕಿವುಚಿಕೊಳ್ಳಿ). ನ೦ತರ ಅದಕ್ಕೆ ಬೆಲ್ಲ ಉಪ್ಪು ಹಾಕಿ  ಅಕ್ಕಿ ಹಿಟ್ಟು ಹಾಕಿ (ಅಕ್ಕಿ ಹಿಟ್ಟಿನ ಬದಲು ಗೋಧಿ ಹಿಟ್ಟು ಕೂಡ ಬಳಸಬಹುದು) ಮೃದುವಾಗಿ ಕಲೆಸಿ ಎಣ್ಣೆಯಲ್ಲಿ ಕರಿಯಿರಿ.
 

ಸೋಮವಾರ, ಅಕ್ಟೋಬರ್ 27, 2014

ಕಡ್ಲೆ ಬೇಳೆ ಹೋಳಿಗೆ / ಒಬ್ಬಟ್ಟು :

ದೀಪಾವಳಿ ಮತ್ತು ಯುಗಾದಿ ಹಬ್ಬಕ್ಕೆ ನಮ್ಮ ಊರಿನಲ್ಲಿ ಹೋಳಿಗೆ ಕಡ್ಡಾಯ...! ನೀವು ಮಾಡಿ ನೋಡಿ ಸಿಹಿ ಸವಿ ಹೋಳಿಗೆ .... 
ಸಾಮಗ್ರಿಗಳು :
ಹೂರಣಕ್ಕೆ ಬೇಕಾಗುವ ಸಾಮಗ್ರಿಗಳು :
ಕಡಲೆ ಬೇಳೆ : 3 ಕಪ್,
ಉಂಡೆ ಬೆಲ್ಲ : 1 1/2,
ಆಲೂಗಡ್ಡೆ  : ಒಂದು (ಮಧ್ಯಮ ಗಾತ್ರ) 

ಕಣಕಕ್ಕೆ ಬೇಕಾಗುವ ಸಾಮಗ್ರಿಗಳು: 
ಚಿರೋಟಿ ರವೆ : 3 ಕಪ್,
ಅರಿಶಿನ ಪುಡಿ : 1/2 ಟೀ ಚಮಚ, 
ಎಣ್ಣೆ : 8-10 ಚಮಚ 
ಉಪ್ಪು : ರುಚಿಗೆ 

ಲಟ್ಟಿಸಲು ಎಣ್ಣೆ - 1 ಕಪ್ ಮತ್ತು ಖಾಲಿಯಾದ ಎಣ್ಣೆ ಕವರ್. 

ವಿಧಾನ: ಕುಕ್ಕರ್ ಗೆ ಕಡಲೆ ಬೇಳೆ, ನೀರು ಹಾಕಿ (ಬೇಳೆ ಮುಳುಗಿ ಒಂದು ಒಂದೂವರೆ ಇಂಚು ಮೇಲೆ ಬರುವಷ್ಟು ನೀರು ಹಾಕಿ), ಅದಕ್ಕೆ ತೊಳೆದು ಮಧ್ಯ ಕತ್ತರಿಸಿದ ಆಲೂಗಡ್ಡೆ ಹಾಕಿ ಒಲೆಯ ಮೇಲಿಡಿ. ಅದು 3 ವಿಷಲ್ ಕೂಗುವಷ್ಟರಲ್ಲಿ ಕಣಕ ತಯಾರಿಸಬಹುದು. ಒಂದು ಅಗಲವಾದ ಪಾತ್ರೆಗೆ ಚಿರೋಟಿ ರವೆ, ರುಚಿಗೆ ತಕ್ಕಷ್ಟು ಉಪ್ಪು (ಒಂದು ಟೀ ಚಮಚದಷ್ಟು), ಅರಿಶಿನ ಪುಡಿ, 5-6 ಚಮಚ ಎಣ್ಣೆ ಹಾಕಿ, ಸ್ವಲ್ಪ ಸ್ವಲ್ಪವೇ ನೀರು ಸೇರಿಸುತ್ತಾ  ಚೆನ್ನಾಗಿ ಕಲಸಿ. ಚಪಾತಿ ಹಿಟ್ಟಿನಕಿಂತ ಸ್ವಲ್ಪ ಮೆತ್ತಗಿರಲಿ. ತಯಾರಾದ ಕಣಕವನ್ನು ಅರ್ಧ - ಮುಕ್ಕಾಲು ಘಂಟೆ ನೀರಿನಲ್ಲಿ ನೆನೆಸಿ. ಅಂದರೆ ಕಣಕ ಮುಳುಗುವಷ್ಟು ನೀರು ಹಾಕಿ ಹಾಗೆಯೇ ಇಡಿ. ಈಗ ಹೂರಣ ತಯಾರಿಸೋಣ. ಕುಕ್ಕರ್ ನಲ್ಲಿ ಬೆಂದ ಬೇಳೆಯ ನೀರನ್ನು ಸಂಪೂರ್ಣವಾಗಿ ಒಂದು ಪಾತ್ರೆಗೆ ಬಸಿದಿಟ್ಟುಕೊಳ್ಳಿ. ಬೇಳೆಯ ಜೊತೆ ಇರುವ ಆಲೂಗಡ್ಡೆಯ ಸಿಪ್ಪೆ ಸುಲಿದು ಬೇಳೆಗೆ ಹಾಕಿ. ಇದನ್ನು ಮಿಕ್ಸಿಗೆ ಹಾಕಿ ಆದಷ್ಟು ನೀರು ಹಾಕದೆ ನುಣ್ಣಗೆ ರುಬ್ಬಿಕೊಳ್ಳಿ.  ಗಟ್ಟಿಯಾಗಲು ಜಾಸ್ತಿ ಹೊತ್ತು ಕಾಯಿಸಬೇಕು. ನಂತರ ಇದಕ್ಕೆ ಬೆಲ್ಲ, (ಉಂಡೆ ಬೆಲ್ಲವನ್ನು ಪುಡಿ ಮಾಡಿ ಹಾಕಿ) ಸ್ವಲ್ಪ (1/4 ಟೀ ಚಮಚ) ಉಪ್ಪು ಹಾಕಿ ಮೊದಲು ಮಧ್ಯಮ ಉರಿಯಲ್ಲಿ ಕಲಕುತ್ತಿರಿ, ಸ್ವಲ್ಪ ಗಟ್ಟಿಯಾದ ಮೇಲೆ ಸಣ್ಣ ಉರಿಯಲ್ಲಿ ಕಾಯಿಸಬೇಕು. ಬಿಡದೇ ಕಲಕುತ್ತಲೇ ಇರಬೇಕು ಇಲ್ಲವಾದರೆ ತಳ ಹಿಡಿಯುತ್ತದೆ. ಉಂಡೆ ಮಾಡುವಷ್ಟು ಗಟ್ಟಿಯಾಗುವವರೆಗೆ ಕಾಯಿಸಿ ಇಳಿಸಿ.
ಇದು ತಣ್ಣಗಾಗುವಷ್ಟರಲ್ಲಿ ಕಣಕದ ನೀರನ್ನು ಬಸಿದು 1-2 ಚಮಚ ಎಣ್ಣೆ ಬೇಕಾದರೆ ಹಾಕಿ ಚೆನ್ನಾಗಿ ನಾದಿಕೊಳ್ಳಿ. 


ನಂತರ ಕೈಗೆ ಸ್ವಲ್ಪ ನೀರು ಮುಟ್ಟಿಕೊಳ್ಳುತ್ತಾ ಕಣಕದ ಲಿಂಬೆ ಗಾತ್ರದ ಉಂಡೆ ಮಾಡಿಕೊಳ್ಳಿ. ಇತ್ತ ತಣ್ಣಗಾದ ಹೂರಣದಿಂದ ಕಣಕಕ್ಕಿಂತ ಸ್ವಲ್ಪ ದೊಡ್ಡ ಉಂಡೆಗಳನ್ನು ಮಾಡಿಟ್ಟುಕೊಳ್ಳಿ. 


ನಂತರ ಕೈಗೆ ಎಣ್ಣೆ ಸವರಿಕೊಂಡು ಕಣಕವನ್ನು ಕೈ ಅಲ್ಲೇ ಸ್ವಲ್ಪ ಹರವಿಕೊಂಡು ಹೂರಣವನ್ನು ತುಂಬಿ ಸರಿಯಾಗಿ ಮುಚ್ಚಿ.


ಪ್ಲಾಸ್ಟಿಕ್ ಮತ್ತು ಲಟ್ಟಣಿಗೆಗೆ ಎಣ್ಣೆ ಸವರಿಕೊಂಡು ತುಂಬಿದ ಉಂಡೆ ಇಟ್ಟು ಲಟ್ಟಿಸಿ. 

ಲಟ್ಟಿಸಿದ ಹೋಳಿಗೆಯನ್ನು ಬಿಡಿಸಿ ಕೈಗೆ ಹಾಕಿಕೊಂಡು ಕಾದ ಕಾವಲಿಯ ಮೇಲೆ ಹಾಕಿ ಮಧ್ಯಮ ಉರಿಯಲ್ಲಿ ಬೇಯಿಸಿದರೆ ಹೋಳಿಗೆ  ಸಿದ್ಧ. 



ಬಸಿದಿಟ್ಟುಕೊಂಡ ನೀರಿನಿಂದ (ಕಡಲೆ ಬೇಳೆ ಬೇಯಿಸಿದ ನೀರು) ಕಡಲೆ ಕಟ್ಟಿನ ಸಾರು ಮಾಡುವುದನ್ನು ತಿಳಿಯಲು ಇಲ್ಲಿ ನೋಡಿ: http://gelatiyarapakashale.blogspot.in/2014/10/blog-post_9.html

ಸಲಹೆಗಳು: 
1) ಲಟ್ಟಿಸಲು ಖಾಲಿಯಾದ ಎಣ್ಣೆ ಕವರ್ ಒಳ್ಳೆಯದು. ಅಥವಾ ಬಾಳೆ ಎಲೆಯನ್ನು ಬೆಂಕಿಯಲ್ಲಿ ಬಾಡಿಸಿಕೊಂಡು ಲಟ್ಟಿಸಿದರೆ ಇನ್ನೂ ಚೆನ್ನಾಗಿ ಬರುತ್ತದೆ. 
2) ಬೆಂದ ಕಡ್ಲೆ ಬೇಳೆಗೆ ಹಾಗೆಯೇ ಬೆಲ್ಲ, ಉಪ್ಪು ಹಾಕಿ ಕಾಯಿಸಿ ಗಟ್ಟಿ ಮಾಡಿಕೊಂಡು ಒರಳಲ್ಲಿ ಅಥವಾ ಗ್ರೈಂಡರ್ ನಲ್ಲಿ ನೀರು ಹಾಕದೆ ಗಟ್ಟಿಯಾಗಿಯೇ ರುಬ್ಬಿ ಉಂಡೆ ಮಾಡಿಕೊಳ್ಳಬಹುದು. ಮಿಕ್ಸಿಗೆ ಗಟ್ಟಿ ಹೂರಣವನ್ನು ಹಾಕಿ ರುಬ್ಬಲು ಬರುವುದಿಲ್ಲವಾದ್ದರಿಂದ ಮೇಲಿನ ವಿಧಾನ ತಿಳಿಸಿದ್ದೇನೆ. ಹೂರಣ ತಣ್ಣಗಾದ ಮೇಲೆ ಸ್ವಲ್ಪ ಗಟ್ಟಿ ಆಗಿ ಉಂಡೆ ಮಾಡಲು ಬರುತ್ತದೆ.  
3) ಆಲೂಗಡ್ಡೆ ಹಾಕುವುದರಿಂದ ಹೋಳಿಗೆ ಲಟ್ಟಿಸುವಾಗ ಹರಿಯದೆ ನಯವಾಗಿ ಲಟ್ಟಿಸಲು ಬರುತ್ತದೆ. 
4) ಹೋಳಿಗೆಯ ಜೊತೆ ತುಪ್ಪ ಹಾಕಿಕೊಂಡು ತಿನ್ನುವುದು ನಿಮಗೆ ಗೊತ್ತು. ಅದರ ಜೊತೆ ಸಕ್ಕರೆ ಪಾಕವನ್ನೂ ಹಾಕಿಕೊಂಡು ಸವಿದು ನೋಡಿ....!  


ಗುರುವಾರ, ಅಕ್ಟೋಬರ್ 16, 2014

ಸೋರೆಕಾಯಿ (ಹಾಲಗು೦ಬಳಕಾಯಿ) ಪಾಯಸ:



 ಸಾಮಗ್ರಿಗಳು: 
ಸೋರೆಕಾಯಿ ಸಣ್ಣಗೆ ಹೆಚ್ಚಿದ್ದು 2 ಕಪ್
ಸಕ್ಕರೆ 4-5 ಚಮಚ,  
ಬೆಲ್ಲ 1/2 ಕಪ್,
ತೆ೦ಗಿನ ತುರಿ ½ ಕಪ್
ಏಲಕ್ಕಿ 3-4
ಉಪ್ಪು ¼ ಚಮಚ,  
ಅಕ್ಕಿ ಒ೦ದು ಮುಷ್ಟಿ.


ವಿಧಾನ: ಸೋರೆಕಾಯಿಯ ಸಿಪ್ಪೆ ಮತ್ತು ಬೀಜಗಳನ್ನು ತೆಗೆದುಬಿಡಿ. ನ೦ತರ ಸೋರೆಕಾಯಿಯನ್ನು ತೆಳ್ಳಗೆ ಸುಮಾರು 1 ಇ೦ಚು ಉದ್ದಕ್ಕೆ ಹೆಚ್ಚಿಕೊಳ್ಳಿ. ಹೆಚ್ಚಿದ ಸೋರೆಕಾಯಿಗೆ 3  ಲೋಟ ನೀರು, ಬೆಲ್ಲ & ಉಪ್ಪು ಸೇರಿಸಿ ಚೆನ್ನಾಗಿ ಬೇಯಿಸಿ. ಅಕ್ಕಿಯನ್ನು 10 ನಿಮಿಷ ನೀರಿನಲ್ಲಿ ನೆನೆಸಿಡಬೇಕು. ನ೦ತರ ಅಕ್ಕಿಯನ್ನು ಚೆನ್ನಾಗಿ ತೊಳೆದು ಮಿಕ್ಸಿ ಜಾರಿಗೆ ಹಾಕಿ ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಿ. ಇದನ್ನು ಬೇಯಿಸಿದ ಸೋರೆಕಾಯಿಗೆ ಹಾಕಿ 10 ನಿಮಿಷ ಕುದಿಸಿ. ಆಗಾಗ ಸೌಟಿನಲ್ಲಿ ಕಲಕುತ್ತಿರಿ ಇಲ್ಲವಾದಲ್ಲಿ ಅದು ಅಡಿ ಹಿಡಿಯುತ್ತದೆ. ತೆ೦ಗಿನತುರಿ & ಏಲಕ್ಕಿಯನ್ನು ನುಣ್ಣಗೆ ರುಬ್ಬಿಕೊ೦ಡು ಕುದಿಯುತ್ತಿರುವ ಪಾಯಸಕ್ಕೆ ಹಾಕಿ. ಸಿಹಿ ನೋಡಿಕೊ೦ಡು ಬೇಕಾದಲ್ಲಿ ಸ್ವಲ್ಪ ಸಕ್ಕರೆ ಸೇರಿಸಿ.
  

ಸೂಚನೆ: ಅಕ್ಕಿಯ ಬದಲು ರವೆ ಬಳಸಬಹುದು. ರವೆ ಬಳಸುವಿರಾದಲ್ಲಿ ಅದನ್ನು ನೆನೆಸಿ ಹಾಗೆ ಹಾಕಿ. ರುಬ್ಬುವ ಅಗತ್ಯವಿಲ್ಲ. ಇಲ್ಲಿ ನಾನು ಬೆಲ್ಲ & ಸಕ್ಕರೆ ಎರಡನ್ನು ಬಳಸಿದ್ದೇನೆ. ಇಷ್ಟವಾದಲ್ಲಿ  ½ ಕಪ್ ಹಾಲು ಕೂಡಾ ಹಾಕಬಹುದು.

ಸೋರೆಕಾಯಿ ಬೀಜ ಎಳೆಯದ್ದಾಗಿದ್ದರೆ ಅದನ್ನು ಎಸೆಯಬೇಡಿ. ಒ೦ದು ಚಿಕ್ಕ ಬಾಣಲೆಗೆ 1 ಚಮಚ ಎಣ್ಣೆ, ಸೋರೆಕಾಯಿ ಬೀಜ ಹಾಕಿ ಸಣ್ಣ ಉರಿಯಲ್ಲಿ ಫ್ರೈ ಮಾಡಿ ಅದು ಅರ್ಧ ಬೆ೦ದ ಮೇಲೆ ಅದಕ್ಕೆ ವಾಟೆಪುಡಿ (Amchur powder), ಉಪ್ಪು ಸೇರಿಸಿ 1 ನಿಮಿಷ ಕೈ ಆಡಿಸಿ ಉರಿ ಆರಿಸಿ. ಇದನ್ನು ಚಿಕ್ಕ ಮಕ್ಕಳು ತು೦ಬಾ ಇಷ್ಟಪಡುತ್ತಾರೆ.

ಗುರುವಾರ, ಅಕ್ಟೋಬರ್ 9, 2014

ಕಡಲೆ ಮಡ್ಡಿ / ಹಯಗ್ರೀವ :

ಸಾಮಗ್ರಿಗಳು : 
ಕಡ್ಲೆ ಬೇಳೆ - 2 ಕಪ್,
ಬೆಲ್ಲ - 1 1/2 ಕಪ್,
ತೆಂಗಿನ ತುರಿ - 3/4 ಕಪ್,
ಗೋಡಂಬಿ - 10-15,
ಏಲಕ್ಕಿ ಪುಡಿ - 1/4 ಚಮಚ, 
ಉಪ್ಪು - 1/4 ಚಮಚ 
ತುಪ್ಪ - ಸರ್ವ್ ಮಾಡಲು 

ವಿಧಾನ : ಕಡಲೆ ಬೇಳೆ ತೊಳೆದು ಕುಕ್ಕರ್ ಗೆ (Direct ಕುಕ್ಕರ್ ನಲ್ಲಿ ಹಾಕಿ ಪಾತ್ರೆ ಬೇಡ) ಹಾಕಿ ಬೇಳೆ ಮುಳುಗಿ ಮೇಲೆ ಒಂದಿಂಚು ಬರುವಷ್ಟು ನೀರು ಹಾಕಿ 3-4 ವಿಷಲ್ ಕೂಗಿಸಿ. ಬೇಳೆ ಚೆನ್ನಾಗಿ ಬೆಂದಿರಬೇಕು. ಉಗಿ ಇಳಿದ ಮೇಲೆ ಬೇಳೆಯಲ್ಲಿರುವ ನೀರನ್ನು ಒಂದು ಪಾತ್ರೆಗೆ ಪೂರ್ತಿ ಬಸಿದು ಇಟ್ಟುಕೊಳ್ಳಿ. (ಬಸಿದ ನೀರಿನಿಂದ ಸಾರು ಮಾಡಲು ತಿಳಿಸಿಕೊಡುತ್ತೇನೆ). ನಂತರ ಅದೇ ಕುಕ್ಕರ್ ಗೆ ಬೇಳೆ ಹಾಕಿ ಸೌಟು / ಕುಡಗೋಲಿನಲ್ಲಿ 75% ನಷ್ಟು ಅರೆದುಕೊಳ್ಳಿ. ಅಂದರೆ ಕೆಲವಷ್ಟು ಬೇಳೆ ಹಾಗೆಯೇ ಇದ್ದು ಉಳಿದಷ್ಟು ಅರೆದಿರಬೇಕು. ನಂತರ ಇದನ್ನು ಒಲೆಯ ಮೇಲಿಟ್ಟುಕೊಂಡು ಬೆಲ್ಲ, ಏಲಕ್ಕಿ ಪುಡಿ, ಉಪ್ಪು, ಗೋಡಂಬಿ ಹಾಕಿ ಮಧ್ಯಮ ಉರಿಯಲ್ಲಿಟ್ಟುಕೊಂಡು ಬಿಡದೇ ಕಲಕುತ್ತಿರಿ. ಸ್ವಲ್ಪ ಗಟ್ಟಿಯಾದ ಮೇಲೆ ತೆಂಗಿನ ತುರಿ ಹಾಕಿ 4-5 ನಿಮಿಷಗಳವರೆಗೆ ಚೆನ್ನಾಗಿ ಕಲಕಿ ಉರಿ ಆರಿಸಿ.

ಬಿಸಿ ಬಿಸಿ ಹಯಗ್ರೀವ / ಕಡಲೆ ಮಡ್ಡಿಗೆ ತುಪ್ಪ ಹಾಕಿಕೊಂಡು ಸವಿಯಿರಿ.   



ಸೂಚನೆಗಳು : 
1) ಬೆಲ್ಲದ ಅಚ್ಚು, ಉಂಡೆ ಬೆಲ್ಲವನ್ನು ಹಾಕುವುದಾದರೆ ನೀರಿಗೆ ಹಾಕಿ ಕರಗಿಸಿ ಸ್ವಲ್ಪ ಕಾಯಿಸಿಕೊಳ್ಳಿ. 
2) ಅರ್ಧದಷ್ಟು ಬೆಲ್ಲ ಮತ್ತು ಅರ್ಧದಷ್ಟು ಸಕ್ಕರೆ ಹಾಕಬಹುದು. 
3) ಅಚ್ಚು ಬೆಲ್ಲವಾದರೆ ಉಪ್ಪು ಕಡಿಮೆ ಸಾಕು. ನಾನು ಮಲೆನಾಡಿನ ಬೆಲ್ಲವನ್ನು ಉಪಯೋಗಿಸಿದ್ದೇನೆ.
4) ಚಿತ್ರದಲ್ಲಿ ತೋರಿಸಿದಷ್ಟು ಗಟ್ಟಿ ಮಾಡದಿದ್ದರೂ ಚೆನ್ನಾಗಿರುತ್ತದೆ. ಕಾಯಿಸುವಾಗ 5-10 ನಿಮಿಷ ಮೊದಲೇ ಉರಿ ಆರಿಸಿದರೆ ನೀರಿನಂಶ ಉಳಿಯುತ್ತದೆ. 
ಕಡಲೆ ಕಟ್ಟಿನ ಸಾರು: 
ಕಡಲೆ ಬೇಳೆ ಬೇಯಿಸಿ ಬಸಿದಿಟ್ಟ ನೀರಿಗೆ ಉದ್ದುದ್ದ ಹೆಚ್ಚಿದ ಈರುಳ್ಳಿ, ಉದ್ದಕೆ ಸಿಗಿದ ಹಸಿ ಮೆಣಸಿನ ಕಾಯಿ, ಕರಿಬೇವು, ಹೆಚ್ಚಿದ ಕೊತ್ತಂಬರಿ ಸೊಪ್ಪು, ಸ್ವಲ್ಪ ತೆಂಗಿನ ತುರಿ, ಉಪ್ಪು ಹಾಕಿ ಕುದಿಸಿ. ಕೊನೆಯಲ್ಲಿ ಲಿಂಬೆ ರಸ ಹಾಕಿ ಕೆಳಗಿಳಿಸಿ. ಇದಕ್ಕೆ ತುಪ್ಪ, ಜೀರಿಗೆ, ಸಾಸಿವೆ ಒಗ್ಗರಣೆ ಮಾಡಿದರೆ ಬಿಸಿ ಬಿಸಿ ಅನ್ನದೊಡನೆ ಕಟ್ಟಿನ ಸಾರು ಸವಿಯಲು ಸಿಧ್ಧ. ಇದಕ್ಕೆ ಖಾರ, ಉಪ್ಪು, ಹುಳಿ ತುಸು ಹೆಚ್ಚಿದ್ದರೆ ರುಚಿ. 


ಈ ವಿಧಾನದ ಹೊರತಾಗಿ - ಪಾತ್ರೆಯಲ್ಲಿ ಎಣ್ಣೆ, ಜೀರಿಗೆ, ಸಾಸಿವೆ ಒಗ್ಗರಣೆ ಮಾಡಿಕೊಂಡು ಸ್ವಲ್ಪ ಹುಣಸೆ ರಸ ಹಾಕಿ, ರಸಂ ಪುಡಿ, ಉಪ್ಪು, ಸ್ವಲ್ಪ ಬೆಲ್ಲ ಹಾಕಿ ಕುದಿಸಿ ಕಡಲೆ ಬೇಳೆ ಬೇಯಿಸಿದ ನೀರು ಹಾಕಿ, ಸ್ವಲ್ಪ ತೆಂಗಿನ ತುರಿ, ಕೊತ್ತಂಬರಿ ಸೊಪ್ಪು, ಕರಿಬೇವು ಹಾಕಿ ಕುದಿಸಿ ಕೂಡ ಕಟ್ಟಿನ ಸಾರು ಮಾಡಬಹುದು.   

ಸೋಮವಾರ, ಅಕ್ಟೋಬರ್ 6, 2014

ಮೆ೦ತೆ ಸೊಪ್ಪಿನ ಪಲಾವ್:



ಬೇಕಾಗುವ ಸಾಮಗ್ರಿಗಳು: 
 ಅಕ್ಕಿ -  1 ಕಪ್ ,
ಸಣ್ಣಗೆ ಹೆಚ್ಚಿದ ಮೆ೦ತೆ ಸೊಪ್ಪು -  ½ ಕಪ್,
ಈರುಳ್ಳಿ - 1 ಉದ್ದುದ್ದಕೆ ಹೆಚ್ಚಿಕೊಳ್ಳಿ ,  
ಬೆಳ್ಳುಳ್ಳಿ -  3-4 ಎಸಳು,
ಹಸಿ ಬಟಾಣಿ -  ¼ ಕಪ್,
ಶು೦ಟಿ -  ½ ಇ೦ಚು
ಚಕ್ಕೆ     -  ½ ಇ೦ಚು,
ಲವ೦ಗ -  2,
ಹಸಿ ಮೆಣಸು -  3,
ಜೀರಿಗೆ  -  ½ ಚಮಚ,
ಎಣ್ಣೆ -  2-3 ಚಮಚ,
ಉಪ್ಪು ರುಚಿಗೆ ತಕ್ಕಷ್ಟು.



ಮಾಡುವ ವಿಧಾನ:
ಅಕ್ಕಿ ತೊಳೆದು ನೀರು ಬಸಿದಿಡಿ. ಕುಕ್ಕರ್ ಒಲೆಯ ಮೇಲೆ ಇಟ್ಟು ಸ್ವಲ್ಪ ಎಣ್ಣೆ ಹಾಕಿ ಅದು ಬಿಸಿಯಾದ ಮೇಲೆ ಈರುಳ್ಳಿ ಹಾಕಿ ಸ್ವಲ್ಪ ಬಾಡಿಸಿ ಅದಕ್ಕೆ ಹೆಚ್ಚಿಕೊ೦ಡ ಮೆ೦ತೆ ಸೊಪ್ಪನ್ನು ಹಾಕಿ ೫ ನಿಮಿಷ ಫ್ರೈ ಮಾಡಿ. ಬೆಳ್ಳುಳ್ಳಿ, ಶು೦ಟಿ, ಚಕ್ಕೆ, ಲವ೦ಗ, ಹಸಿಮೆಣಸು, ಜೀರಿಗೆ ಇವೆಲ್ಲವನ್ನು ಮಿಕ್ಸರ್ ಜಾರಿಗೆ ಹಾಕಿ ನುಣ್ಣಗೆ ಪೇಸ್ಟ ಮಾಡಿಟ್ಟುಕೊಳ್ಳಿ.ಈ ಪೇಸ್ಟನ್ನು ಫ್ರೈ ಮಾಡಿದ ಮೆ೦ತೆ ಸೊಪ್ಪಿಗೆ ಹಾಕಬೇಕು. ನ೦ತರ ಇದಕ್ಕೆ ಉಪ್ಪು, ಬಟಾಣಿ, ಅಕ್ಕಿ ಹಾಕಿ ಅದಕ್ಕೆ 2 ½ ಕಪ್ ನಷ್ಟು ನೀರು ಹಾಕಿ ಮುಚ್ಚಳ ಹಾಕಿ ೩ ವಿಷಲ್ ಕೂಗಿಸಿ. 


ಮೊಸರು ಬಜ್ಜಿ :ಸವತೆಕಾಯಿ, ಟೊಮ್ಯಾಟೊ, ಈರುಳ್ಳಿ ಇವೆಲ್ಲವನ್ನು ಸಣ್ಣದಾಗಿ ಹೆಚ್ಚಿಕೊ೦ಡು ಇದಕ್ಕೆ ಉಪ್ಪು ಸ್ವಲ್ಪ ಸಕ್ಕರೆ ಮೊಸರು ಸೇರಿಸಿದರೆ  ಸಿದ್ದ.

ಸೂಚನೆ: ಹಸಿ ಬಟಾಣಿ ಇಲ್ಲದಿದ್ದಲ್ಲಿ ಒಣಗಿದ ಬಟಾಣಿಯನ್ನು ೪-೫ ಗ೦ಟೆ ನೀರಿನಲ್ಲಿ ನೆನೆಸಿ ಹಾಕಬಹುದು.
ಬಟಾಣಿಯ ಬದಲು ಅವರೆಕಾಳು ಹಾಕಿ ಮಾಡಿದರು ತು೦ಬಾ ಚೆನ್ನಾಗಿರುತ್ತದೆ.