ಗುರುವಾರ, ಅಕ್ಟೋಬರ್ 9, 2014

ಕಡಲೆ ಮಡ್ಡಿ / ಹಯಗ್ರೀವ :

ಸಾಮಗ್ರಿಗಳು : 
ಕಡ್ಲೆ ಬೇಳೆ - 2 ಕಪ್,
ಬೆಲ್ಲ - 1 1/2 ಕಪ್,
ತೆಂಗಿನ ತುರಿ - 3/4 ಕಪ್,
ಗೋಡಂಬಿ - 10-15,
ಏಲಕ್ಕಿ ಪುಡಿ - 1/4 ಚಮಚ, 
ಉಪ್ಪು - 1/4 ಚಮಚ 
ತುಪ್ಪ - ಸರ್ವ್ ಮಾಡಲು 

ವಿಧಾನ : ಕಡಲೆ ಬೇಳೆ ತೊಳೆದು ಕುಕ್ಕರ್ ಗೆ (Direct ಕುಕ್ಕರ್ ನಲ್ಲಿ ಹಾಕಿ ಪಾತ್ರೆ ಬೇಡ) ಹಾಕಿ ಬೇಳೆ ಮುಳುಗಿ ಮೇಲೆ ಒಂದಿಂಚು ಬರುವಷ್ಟು ನೀರು ಹಾಕಿ 3-4 ವಿಷಲ್ ಕೂಗಿಸಿ. ಬೇಳೆ ಚೆನ್ನಾಗಿ ಬೆಂದಿರಬೇಕು. ಉಗಿ ಇಳಿದ ಮೇಲೆ ಬೇಳೆಯಲ್ಲಿರುವ ನೀರನ್ನು ಒಂದು ಪಾತ್ರೆಗೆ ಪೂರ್ತಿ ಬಸಿದು ಇಟ್ಟುಕೊಳ್ಳಿ. (ಬಸಿದ ನೀರಿನಿಂದ ಸಾರು ಮಾಡಲು ತಿಳಿಸಿಕೊಡುತ್ತೇನೆ). ನಂತರ ಅದೇ ಕುಕ್ಕರ್ ಗೆ ಬೇಳೆ ಹಾಕಿ ಸೌಟು / ಕುಡಗೋಲಿನಲ್ಲಿ 75% ನಷ್ಟು ಅರೆದುಕೊಳ್ಳಿ. ಅಂದರೆ ಕೆಲವಷ್ಟು ಬೇಳೆ ಹಾಗೆಯೇ ಇದ್ದು ಉಳಿದಷ್ಟು ಅರೆದಿರಬೇಕು. ನಂತರ ಇದನ್ನು ಒಲೆಯ ಮೇಲಿಟ್ಟುಕೊಂಡು ಬೆಲ್ಲ, ಏಲಕ್ಕಿ ಪುಡಿ, ಉಪ್ಪು, ಗೋಡಂಬಿ ಹಾಕಿ ಮಧ್ಯಮ ಉರಿಯಲ್ಲಿಟ್ಟುಕೊಂಡು ಬಿಡದೇ ಕಲಕುತ್ತಿರಿ. ಸ್ವಲ್ಪ ಗಟ್ಟಿಯಾದ ಮೇಲೆ ತೆಂಗಿನ ತುರಿ ಹಾಕಿ 4-5 ನಿಮಿಷಗಳವರೆಗೆ ಚೆನ್ನಾಗಿ ಕಲಕಿ ಉರಿ ಆರಿಸಿ.

ಬಿಸಿ ಬಿಸಿ ಹಯಗ್ರೀವ / ಕಡಲೆ ಮಡ್ಡಿಗೆ ತುಪ್ಪ ಹಾಕಿಕೊಂಡು ಸವಿಯಿರಿ.   



ಸೂಚನೆಗಳು : 
1) ಬೆಲ್ಲದ ಅಚ್ಚು, ಉಂಡೆ ಬೆಲ್ಲವನ್ನು ಹಾಕುವುದಾದರೆ ನೀರಿಗೆ ಹಾಕಿ ಕರಗಿಸಿ ಸ್ವಲ್ಪ ಕಾಯಿಸಿಕೊಳ್ಳಿ. 
2) ಅರ್ಧದಷ್ಟು ಬೆಲ್ಲ ಮತ್ತು ಅರ್ಧದಷ್ಟು ಸಕ್ಕರೆ ಹಾಕಬಹುದು. 
3) ಅಚ್ಚು ಬೆಲ್ಲವಾದರೆ ಉಪ್ಪು ಕಡಿಮೆ ಸಾಕು. ನಾನು ಮಲೆನಾಡಿನ ಬೆಲ್ಲವನ್ನು ಉಪಯೋಗಿಸಿದ್ದೇನೆ.
4) ಚಿತ್ರದಲ್ಲಿ ತೋರಿಸಿದಷ್ಟು ಗಟ್ಟಿ ಮಾಡದಿದ್ದರೂ ಚೆನ್ನಾಗಿರುತ್ತದೆ. ಕಾಯಿಸುವಾಗ 5-10 ನಿಮಿಷ ಮೊದಲೇ ಉರಿ ಆರಿಸಿದರೆ ನೀರಿನಂಶ ಉಳಿಯುತ್ತದೆ. 
ಕಡಲೆ ಕಟ್ಟಿನ ಸಾರು: 
ಕಡಲೆ ಬೇಳೆ ಬೇಯಿಸಿ ಬಸಿದಿಟ್ಟ ನೀರಿಗೆ ಉದ್ದುದ್ದ ಹೆಚ್ಚಿದ ಈರುಳ್ಳಿ, ಉದ್ದಕೆ ಸಿಗಿದ ಹಸಿ ಮೆಣಸಿನ ಕಾಯಿ, ಕರಿಬೇವು, ಹೆಚ್ಚಿದ ಕೊತ್ತಂಬರಿ ಸೊಪ್ಪು, ಸ್ವಲ್ಪ ತೆಂಗಿನ ತುರಿ, ಉಪ್ಪು ಹಾಕಿ ಕುದಿಸಿ. ಕೊನೆಯಲ್ಲಿ ಲಿಂಬೆ ರಸ ಹಾಕಿ ಕೆಳಗಿಳಿಸಿ. ಇದಕ್ಕೆ ತುಪ್ಪ, ಜೀರಿಗೆ, ಸಾಸಿವೆ ಒಗ್ಗರಣೆ ಮಾಡಿದರೆ ಬಿಸಿ ಬಿಸಿ ಅನ್ನದೊಡನೆ ಕಟ್ಟಿನ ಸಾರು ಸವಿಯಲು ಸಿಧ್ಧ. ಇದಕ್ಕೆ ಖಾರ, ಉಪ್ಪು, ಹುಳಿ ತುಸು ಹೆಚ್ಚಿದ್ದರೆ ರುಚಿ. 


ಈ ವಿಧಾನದ ಹೊರತಾಗಿ - ಪಾತ್ರೆಯಲ್ಲಿ ಎಣ್ಣೆ, ಜೀರಿಗೆ, ಸಾಸಿವೆ ಒಗ್ಗರಣೆ ಮಾಡಿಕೊಂಡು ಸ್ವಲ್ಪ ಹುಣಸೆ ರಸ ಹಾಕಿ, ರಸಂ ಪುಡಿ, ಉಪ್ಪು, ಸ್ವಲ್ಪ ಬೆಲ್ಲ ಹಾಕಿ ಕುದಿಸಿ ಕಡಲೆ ಬೇಳೆ ಬೇಯಿಸಿದ ನೀರು ಹಾಕಿ, ಸ್ವಲ್ಪ ತೆಂಗಿನ ತುರಿ, ಕೊತ್ತಂಬರಿ ಸೊಪ್ಪು, ಕರಿಬೇವು ಹಾಕಿ ಕುದಿಸಿ ಕೂಡ ಕಟ್ಟಿನ ಸಾರು ಮಾಡಬಹುದು.   

2 ಕಾಮೆಂಟ್‌ಗಳು:

  1. ನೂರು ವರ್ಷ ಆಯಸ್ಸು ನಿಮಗೂ ಮತ್ತು ನಿಮ್ಮ. ಬ್ಲಾಗಿಗೆ ಕಣ್ರೀ.
    ಹಯಗ್ರೀವದ ರೆಸಿಪಿಯನ್ನು ಈವತ್ತು ಹುಡುಕುತ್ತಿದ್ದೆ. ಈವತ್ತೇ ಪೋಸ್ಟ್ ಮಾಡಿ ಉಪಕಾರ ಮಾಡಿದಿರಿ.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಓಹ್ ಧನ್ಯೋಸ್ಮಿ ....! :) ಹುಡುಕುತ್ತಿದ್ದಂತೆಯೇ ಸಿಗುವಂತಾಗಿದ್ದಕ್ಕೆ ತುಂಬಾ ಖುಷಿಯಾಯ್ತು .... :) ಹಾಗಾದರೆ ಮುಂಬರುವ ಹಬ್ಬದಲ್ಲಿ ಸವಿಯಿರಿ ಹಯಗ್ರೀವವನ್ನು....!

      ಅಳಿಸಿ