ಶುಕ್ರವಾರ, ಮಾರ್ಚ್ 28, 2014

ಬದನೇಕಾಯಿ ಹಶಿ (ಮೊಸರು ಬಜ್ಜಿ) - 2

ಬೇಕಾಗುವ ಸಾಮಗ್ರಿಗಳು: ಸಣ್ಣಗೆ ಹೆಚ್ಚಿದ ಬದನೇಕಾಯಿ 1/2 ಕಪ್, ಸಣ್ಣಗೆ ಹೆಚ್ಚಿದ ಈರುಳ್ಳಿ 1/4 ಕಪ್, ತೆಂಗಿನ ತುರಿ 1/2 ಕಪ್, ಮೊಸರು 1/2 ಕಪ್, ಎಣ್ಣೆ 3-4 ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಹಸಿಮೆಣಸಿನ ಕಾಯಿ 1-2, ಉದ್ದಿನ ಬೇಳೆ 1/2 ಚಮಚ, ಸಾಸಿವೆ 1/4 ಚಮಚ



ವಿಧಾನ: ಹೆಚ್ಚಿದ ಬದನೆಕಾಯಿಗೆ ಸ್ವಲ್ಪ ಉಪ್ಪು ಉದುರಿಸಿ ಕಲಸಿ 10 ನಿಮಿಷ ಬಿಟ್ಟು ನಂತರ ಅದನ್ನು ಹಿಂಡಿ ನೀರು ತೆಗೆದಿಟ್ಟುಕೊಳ್ಳಿ. ಒಂದು ಬಾಣಲೆಗೆ ಎಣ್ಣೆ, ಉದ್ದಿನಬೇಳೆ ಹಾಕಿ ಸ್ವಲ್ಪ ಕೆಂಪಗಾದ ಮೇಲೆ ಸಾಸಿವೆ ಹಾಕಿ ಸಿಡಿಸಿ, ಹೆಚ್ಚಿದ ಹಸಿ ಮೆಣಸಿನಕಾಯಿ ಹಾಕಿ, ಈರುಳ್ಳಿ ಹಾಕಿ ಹುರಿಯಿರಿ. ಈರುಳ್ಳಿ ಚೆನ್ನಾಗಿ ಹುರಿದ ಮೇಲೆ ತಯಾರಿಸಿಟ್ಟ ಬದನೇಕಾಯಿ ಹಾಕಿ ಸಣ್ಣ ಉರಿಯಲ್ಲಿ ಹುರಿಯಿರಿ. ಬದನೇಕಾಯಿ ಚೆನ್ನಾಗಿ ಹುರಿದು ಬೆಂದ ಮೇಲೆ ಉರಿ ಆರಿಸಿ ತಣ್ಣಗಾಗಲು ಬಿಡಿ. ಅಷ್ಟರಲ್ಲಿ ತೆಂಗಿನ ತುರಿಗೆ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ತಣ್ಣಗಾದ ಬದನೆ ಮಿಶ್ರಣಕ್ಕೆ ರುಬ್ಬಿದ ಮಿಶ್ರಣ, ಮೊಸರು, ಉಪ್ಪು ಹಾಕಿ ಕಲಕಿದರೆ ಬದನೇಕಾಯಿ ಹಶಿ ಅನ್ನದ ಜೊತೆ ಸವಿಯಲು ಸಿದ್ಧ...... 


ಸಲಹೆ : 
1) ಬದನೆಕಾಯಿಗೆ ಉಪ್ಪು ಹಾಕಿ ನೀರನ್ನು ಹಿಂಡುವುದರಿಂದ ಮಾಡಿದ ಅಡುಗೆ ಕಪ್ಪಗಾಗುವುದಿಲ್ಲ. 
2) ಮೊಸರು ಜಾಸ್ತಿ ಹುಳಿ ಎನಿಸಿದರೆ ಎರಡು ದೊಡ್ಡ ಚಿಟಿಕೆಯಷ್ಟು ಸಕ್ಕರೆ ಹಾಕಿ. 

ಸೋಮವಾರ, ಮಾರ್ಚ್ 17, 2014

ಬದನೇಕಾಯಿ ಖಾರದ ಚಟ್ನಿ



ಸಾಮಾಗ್ರಿಗಳು: ಬದನೇಕಾಯಿ 1, ಕೆ೦ಪುಮೆಣಸಿನ ಪುಡಿ- 3 ಚಮಚ,  ಈರುಳ್ಳಿ- 2, ಒಗ್ಗರಣೆಗೆ - ಎಣ್ಣೆ, ಕರಿಬೇವು, ಸಾಸಿವೆ, ಉಪ್ಪು ರುಚಿಗೆ ತಕ್ಕಷ್ಟು, ಬೆಲ್ಲ (optional)



ವಿಧಾನ: ಬದನೇಕಾಯಿಯನ್ನು ಚಿತ್ರದಲ್ಲಿ ತೋರಿಸಿದ೦ತೆ ದೊಡ್ಡ ದೊಡ್ಡ ಹೋಳುಗಳನ್ನಾಗಿ ಹೆಚ್ಚಿಕೊಳ್ಳಿ. ಒ೦ದು ಬಾಣಲೆಗೆ ಎಣ್ಣೆ ಹಾಕಿ ಅದು ಕಾದ ನ೦ತರ ಸಾಸಿವೆ, ಕರಿಬೇವು ಹಾಕಿ. ಹೆಚ್ಚಿಟ್ಟ ಬದನೇಕಾಯಿ ಹೋಳಿನ ಜೊತೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಅದು ಬೇಯುವವರೆಗೆ ಫ್ರೈ ಮಾಡಿ. ಈರುಳ್ಳಿಯನ್ನು ಹೆಚ್ಚಿಕೊ೦ಡು ಅದಕ್ಕೆ ಕೆ೦ಪುಮೆಣಸಿನ ಪುಡಿ (ಖಾರ ಜಾಸ್ತಿ ಬೇಕು) ಹಾಕಿ ತರಿ ತರಿಯಾಗಿ ರುಬ್ಬಿಕೊಳ್ಳಿ. ಬೆ೦ದ ಬದನೇಕಾಯಿಗೆ ರುಬ್ಬಿದ ಈರುಳ್ಳಿ ಮಿಶ್ರಣವನ್ನು ಹಾಕಿ ನಿಮಿಷ ಫ್ರೈ ಮಾಡಿ.(ಬೇಕಾದಲ್ಲಿ ಸ್ವಲ್ಪ ಬೆಲ್ಲವನ್ನು ಸೇರಿಸಬಹುದು). ಇದು ರೊಟ್ಟಿಗೆ ಮತ್ತು ಅನ್ನದ ಜೊತೆ ಕೂಡಾ ಚೆನ್ನಾಗಿರುತ್ತದೆ.


ಬುಧವಾರ, ಮಾರ್ಚ್ 12, 2014

ಬದನೆಕಾಯಿ ಮೊಸರು ಬಜ್ಜಿ (ಹಶಿ)


     

ಸಾಮಗ್ರಿ: ಬಲೂನ್ ಬದನೆ 1 (ಇದ್ದುದರಲ್ಲೇ ಚಿಕ್ಕದು), ತೆಂಗಿನ ತುರಿ 1 ಕಪ್, ಮೊಸರು 1 ಕಪ್, ಈರುಳ್ಳಿ ಸಣ್ಣದು 1
ಒಗ್ಗರಣೆಗೆ: ಎಣ್ಣೆ, ಉದ್ದಿನ ಬೇಳೆ, ಎಳ್ಳು - ಚಿಟಿಕೆ, ಹಸಿಮೆಣಸಿನ ಕಾಯಿ 1

ವಿಧಾನ : ಬದನೇಕಾಯಿಗೆ ಎಣ್ಣೆ ಸವರಿಕೊಂಡು ಒಲೆಯ ಮೇಲಿಟ್ಟು ಚೆನ್ನಾಗಿ ಸುಡಬೇಕು. ಸಿಪ್ಪೆ ಪೂರ್ತಿ ಕಪ್ಪಗಾದರೆ ಒಳಗಡೆ ಬೇಯುತ್ತದೆ. ಹಾಗೆಯೇ ಸುತ್ತಲೂ ಬೇಯಿಸಿ. ತಣ್ಣಗಾದ ಮೇಲೆ ನೀರಿನಲ್ಲಿ ಕೈ ನೆನೆಸಿಕೊಳ್ಳುತ್ತಾ ಸಿಪ್ಪೆ ತೆಗೆಯಿರಿ. ಸೌಟಿನಿಂದ (ಕೆಳಗೆ ತೋರಿಸಿದಂತೆ) ಹೆಚ್ಚಿಕೊಳ್ಳಿ. 




ತೆಂಗಿನ ತುರಿಯನ್ನು ನೀರು ಹಾಕಿ ನುಣ್ಣಗೆ ರುಬ್ಬಿಕೊಂಡು ಹೆಚ್ಚಿದ ಬದನೇಕಾಯಿ ಹಾಕಿ, ಮೊಸರು, ಉಪ್ಪು, ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ. ನಂತರ ಎಣ್ಣೆ, ಉದ್ದಿನ ಬೇಳೆ, ಎಳ್ಳು, ಹೆಚ್ಚಿದ ಹಸಿಮೆಣಸಿನ ಕಾಯಿ ಹಾಕಿ ಒಗ್ಗರಣೆ ಮಾಡಿದರೆ ಬದನೇಕಾಯಿ ಮೊಸರು ಬಜ್ಜಿ ಅನ್ನದ ಜೊತೆ ಸವಿಯಲು ಸಿದ್ಧ.




ಸೂಚನೆ: ಬದನೇಕಾಯಿಯನ್ನು ಇಡಿಯಾಗಿಯೇ ಸುಡುವುದರಿಂದ ಸಿಪ್ಪೆ ತೆಗೆದ ನಂತರ ಒಮ್ಮೆ ಸೀಳಿ ಒಳಗಡೆ ಕೆಡುಕಿಲ್ಲವೆಂದು ಖಚಿತ ಪಡಿಸಿಕೊಂಡು ಹೆಚ್ಚಿ.