ಶುಕ್ರವಾರ, ಡಿಸೆಂಬರ್ 26, 2014

ಗಿರಮಿಟ್ಟು:



ಸಾಮಗ್ರಿಗಳು: ಮ೦ಡಕ್ಕಿ (ಕಳ್ಳೆ ಪುರಿ) ¼ ಕೆ.ಜಿ, ಟೊಮ್ಯಾಟೊ 2, ಈರುಳ್ಳಿ 2, ಹಸಿಮೆಣಸು 4, ಬೆಳ್ಳುಳ್ಳಿ 2 ಎಸಳು, ಕೊತ್ತ೦ಬರಿ ಸೊಪ್ಪು 1 ಹಿಡಿ, ಹುರಿಗಡಲೆ ಪುಡಿ (ಪುಟಾಣಿ ಪುಡಿ) 4 ಚಮಚ, ಎಣ್ಣೆ 3 ಚಮಚ, ಕರಿಬೇವು 8-10 ಎಲೆಗಳು, ಉಪ್ಪು ರುಚಿಗೆ ತಕ್ಕಷ್ಟು.


ವಿಧಾನ : ಟೊಮ್ಯಾಟೊ, ಈರುಳ್ಳಿ, ಹಸಿಮೆಣಸನ್ನು ಸಣ್ಣಗೆ ಹೆಚ್ಚಿಟ್ಟುಕೊಳ್ಳಿ, ಒ೦ದು ಬಾಣಲೆಗೆ ಎಣ್ಣೆ ಹಾಕಿಕೊ೦ಡು ಸ್ವಲ್ಪ ಕಾದ ಮೇಲೆ ಕರಿಬೇವು, ಹೆಚ್ಚಿದ ಟೊಮ್ಯಾಟೊ, ಈರುಳ್ಳಿ, ಹಸಿಮೆಣಸು, ಜಜ್ಜಿಕೊ೦ಡ ಬೆಳ್ಳುಳ್ಳಿ, ಉಪ್ಪು ಹಾಕಿ ಚೆನ್ನಾಗಿ ಬಾಡಿಸಿಕೊ೦ಡು ಉರಿ ಆರಿಸಿ. ಈ ಮಸಾಲೆ ಪೂರ್ತಿ ಬಿಸಿ ಆರಿದಮೇಲೆ ಈ ಮಸಾಲೆಯನ್ನು ಮ೦ಡಕ್ಕಿ ಜೊತೆ ಸೇರಿಸಿ ಚೆನ್ನಾಗಿ ತಿರುವಿರಿ. ಇದನ್ನು ಪ್ಲೇಟ್ ಗೆ ಹಾಕಿ ಮೇಲೆ ಹುರಿಗಡಲೆ ಪುಡಿ, ಸಣ್ಣದಾಗಿ ಹೆಚ್ಚಿದ ಈರುಳ್ಳಿ, & ಕೊತ್ತ೦ಬರಿ ಸೊಪ್ಪನ್ನು ಉದುರಿಸಿ ತಕ್ಷಣ ಸರ್ವ ಮಾಡಿ.

ಗುರುವಾರ, ಡಿಸೆಂಬರ್ 18, 2014

ರವೆ - ಉದ್ದಿನ ದೋಸೆ :

ನನ್ನ ಅಜ್ಜಿ ಈ ದೋಸೆಯನ್ನು ಒಪ್ಪತ್ತು (ವ್ರತ), ಹಬ್ಬ-ಹರಿದಿನಗಳ ಬೆಳಿಗ್ಗೆ ತಿಂಡಿಗೆ ಮಾಡುತ್ತಿದ್ದರು. ಅಕ್ಕಿ ಉಪಯೋಗಿಸದ ಇದು ಮುಸರೆಯಲ್ಲ ಎಂಬ ಕಾರಣಕ್ಕೆ..! ಅವಲಕ್ಕಿ ಮಾಡಿದರೆ ನಾವೆಲ್ಲಾ ತಿನ್ನುತ್ತಿರಲಿಲ್ಲವಲ್ಲ..... :) ಜೊತೆಗೆ ಸುಲಭದ ತಿಂಡಿ ಆದ್ದರಿಂದ ಅಡುಗೆ ಕಲಿಯುತ್ತಿರುವವರು / ಬ್ರಹ್ಮಚಾರಿ ಹುಡುಗರು ಮಾಡಿಕೊಳ್ಳಬಹುದು. :) 

ಸಾಮಗ್ರಿಗಳು: 
ಗೋಧಿ ರವೆ (ಉಪ್ಪಿಟ್ಟಿನ ರವೆ) : 1 1/4 ಕಪ್,
ಉದ್ದಿನ ಬೇಳೆ : 1/2 ಕಪ್,
ಉಪ್ಪು : ರುಚಿಗೆ 

ವಿಧಾನ : 
ಉದ್ದಿನ ಬೇಳೆಯನ್ನು ತೊಳೆದು  3-4 ಘಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ ಅಥವಾ ಬೆಳಿಗ್ಗೆ ನೆನೆಸಿಡಿ. ರಾತ್ರಿ ಇದನ್ನು ನುಣ್ಣಗೆ ರುಬ್ಬಿ ಮುಚ್ಚಿಡಿ. ಬೆಳಿಗ್ಗೆ ಎನ್ನುವಷ್ಟರಲ್ಲಿ ಸ್ವಲ್ಪ  ಹುದುಗು ಬಂದಿರುತ್ತದೆ. ಬೆಳಿಗ್ಗೆ ರವೆ ಮುಳುಗುವಷ್ಟು ನೀರು ಹಾಕಿ ಅರ್ಧ ಗಂಟೆಗಳ ಕಾಲ ನೆನೆಸಿಡಿ. ನಂತರ ರುಬ್ಬಿದ ಉದ್ದಿನ ಬೇಳೆಗೆ ನೆಂದ ರವೆ ಸೇರಿಸಿ, ಉಪ್ಪು ಸೇರಿಸಿ ಚೆನ್ನಾಗಿ ಕಲಸಿ 15-20 ನಿಮಿಷ ಬಿಟ್ಟು ಕಾದ ತವಾ ಮೇಲೆ ದೋಸೆ ಎರೆದು ಎರಡೂ ಕಡೆ ಚೆನ್ನಾಗಿ ಬೇಯಿಸಿ. 



ಬಿಸಿ ಬಿಸಿ ದೋಸೆಯನ್ನು ತುಪ್ಪ ಮತ್ತು ಚಟ್ನಿಯ ಜೊತೆ ಸವಿಯಿರಿ. 

ಸೂಚನೆ : 
೧) ರವೆ ನೆಂದ ಮೇಲೆ ನೀರು ಜಾಸ್ತಿ ಇದ್ದಲ್ಲಿ ಬಸಿದುಕೊಳ್ಳಿ. 
೨) ಈ ಮಿಶ್ರಣ ಉಳಿದ ದೋಸೆ ಹಿಟ್ಟಿನ ಮಿಶ್ರಣಕ್ಕಿಂತ ಗಟ್ಟಿ ಇರಲಿ. ಇಡ್ಲಿ ಹಿಟ್ಟಿನಕಿಂತ ಸ್ವಲ್ಪ ತೆಳ್ಳಗಿರಲಿ.    

ಚಟ್ನಿ :
ಸಾಮಗ್ರಿಗಳು :
ತೆಂಗಿನ ತುರಿ : 1 ಕಪ್,
ಒಣ ಮೆಣಸಿನ ಕಾಯಿ : 4-5, 
ಉದ್ದಿನ ಬೇಳೆ : 1/2 ಚಮಚ,
ಬಿಳಿ ಎಳ್ಳು: 1/4 ಚಮಚ,  
ಹುಣಸೆಹಣ್ಣು : ಸಣ್ಣ ಚೂರು, (ನೀರಿನಲ್ಲಿ ನೆನೆಸಿಕೊಳ್ಳಿ) 
ಬೆಲ್ಲ : 1.5 ಚಮಚ,
ಎಣ್ಣೆ : 1/4 ಚಮಚ, 
ಉಪ್ಪು : ರುಚಿಗೆ  

ವಿಧಾನ : 
ಉದ್ದಿನ ಬೇಳೆ, ಒಣ ಮೆಣಸಿನ ಕಾಯಿಗೆ ಎಣ್ಣೆ ಹಾಕಿ ಹುರಿದು ಕೊನೆಯಲ್ಲಿ ಎಳ್ಳು ಹಾಕಿ ಹುರಿದುಕೊಳ್ಳಿ. ಮಿಕ್ಸಿ ಜಾರ್ ಗೆ ಹುರಿದ ಮಿಶ್ರಣದ ಜೊತೆ ಉಳಿದೆಲ್ಲಾ ಸಾಮಗ್ರಿ ಸೇರಿಸಿ ರುಬ್ಬಿದರೆ ಚಟ್ನಿ ಸಿದ್ಧ. 

ಶುಕ್ರವಾರ, ಡಿಸೆಂಬರ್ 12, 2014

ನಿಪ್ಪಟ್ಟು:



ಸಾಮಗ್ರಿಗಳು: ಚಿರೋಟಿ ರವಾ 2 ಚಮಚ, ಮೈದಾ ಹಿಟ್ಟು 2 ಚಮಚ, ಅಕ್ಕಿಹಿಟ್ಟು 1.5 ಕಪ್, ಉಪ್ಪು ರುಚಿಗೆ ತಕ್ಕಷ್ಟು, ಎಣ್ಣೆ ಕರಿಯಲು, ಇ೦ಗು, ಅಚ್ಚಖಾರದ ಪುಡಿ 1 ಚಮಚ (ಖಾರ ಜಾಸ್ತಿ ಇಷ್ಟಪಡುವವರು ಇನ್ನು ½ ಚಮಚ ಮೆಣಸಿನ ಪುಡಿ ಸೇರಿಸಬಹುದು), ಶೇ೦ಗಾ ¼ ಕಪ್, ಹುರಿಗಡಲೆ (ಪುಟಾಣಿ ಬೇಳೆ) 2 ಚಮಚ , ಕರಿಬೇವು 8-10 ಎಲೆಗಳು, ಓಮು ¼ ಚಮಚ , ಜೀರಿಗೆ ½ ಚಮಚ.






ವಿಧಾನ :  ಶೇ೦ಗಾವನ್ನು ಸಣ್ಣ ಉರಿಯಲ್ಲಿ ಹುರಿದುಕೊಳ್ಳಿ. ಅದು ಬಿಸಿ ಆರಿದ ಮೇಲೆ ಶೇ೦ಗಾ, ಹುರಿಗಡಲೆ ಯನ್ನು ಮಿಕ್ಸಿಗೆ ಹಾಕಿ ತರಿ ತರಿಯಾಗಿ ಮಾಡಿ ಇಟ್ಟುಕೊಳ್ಳಬೇಕು. ಚಿರೋಟಿ ರವಾ, ಮೈದಾ ಹಿಟ್ಟು, ಅಕ್ಕಿಹಿಟ್ಟು, ಉಪ್ಪು, ಇ೦ಗು, ಅಚ್ಚಖಾರದ ಪುಡಿ, ಸಣ್ಣಗೆ ಹೆಚ್ಚಿದ ಕರಿಬೇವು, ಓಮು, ಜೀರಿಗೆ, ತರಿತರಿ ಮಾಡಿಕೊ೦ಡ ಶೇ೦ಗಾ & ಹುರಿಗಡಲೆ, ಇವೆಲ್ಲವನ್ನು ಮಿಕ್ಸ್ ಮಾಡಿಕೊ೦ಡು 2 ಚಮಚ ಎಣ್ಣೆಯನ್ನು ಬಿಸಿ ಮಾಡಿ ಈ ಹಿಟ್ಟಿಗೆ ಹಾಕಿ ಕಲಸಿಕೊಳ್ಳಿ. ನ೦ತರ ನೀರು ಹಾಕಿಕೊ೦ಡು ಚಪಾತಿ ಹಿಟ್ಟಿನ ಹದಕ್ಕೆ ಸ್ವಲ್ಪ ಮೃದುವಾಗಿ ಕಲೆಸಿಕೊಳ್ಳಬೇಕು. 10 ನಿಮಿಷ ಕಲೆಸಿದ ಹಿಟ್ಟನ್ನು ಹಾಗೆ ಬಿಡಿ. ಕೈಯಲ್ಲಿ ಸ್ವಲ್ಪ ಹಿಟ್ಟು ತೆಗೆದುಕೊ೦ಡು, ಉ೦ಡೆಮಾಡಿ ಪ್ಲಾಸ್ಟಿಕ್ ಕವರ್ ಗೆ ಸ್ವಲ್ಪ ಎಣ್ಣೆ ಹಚ್ಚಿಕೊ೦ಡು ಪೂರಿಯಷ್ಟು ದೊಡ್ಡದಾಗಿ ತೆಳ್ಳಗೆ ಕೈಯಲ್ಲಿ ತಟ್ಟಿ. ನ೦ತರ ಇದನ್ನು ಕಾದ ಎಣ್ಣೆಗೆ ಹಾಕಿ ಹೊ೦ಬಣ್ಣ ಬರುವವರೆಗೆ ಕರಿದರೆ. ಗರಿಗರಿಯಾದ ನಿಪ್ಪಟ್ಟು ತಿನ್ನಲು ಸಿದ್ದ.


 

ಮಂಗಳವಾರ, ಡಿಸೆಂಬರ್ 2, 2014

ಸ್ವೀಟ್ ಕಾರ್ನ್ ಪಾಲಕ್ ಸಬ್ಜಿ :

ಸಾಮಗ್ರಿಗಳು : 
ಸ್ವೀಟ್ ಕಾರ್ನ್ : 1 ಕಪ್,
ಧನಿಯ ಪುಡಿ : 1 ಟೇಬಲ್ ಚಮಚ,
ಜೀರಿಗೆ ಪುಡಿ : 1 ಟೇಬಲ್ ಚಮಚ,
ಅರಿಶಿನ ಪುಡಿ : 1/4 ಟೀ ಚಮಚ,
ಗರಂ ಮಸಾಲಾ ಪುಡಿ : 1/4 ಟೇಬಲ್ ಚಮಚ,
ತುಪ್ಪ : 1 ಟೇಬಲ್ ಚಮಚ,
ಹಾಲು: 1/2 ಕಪ್,
ಉಪ್ಪು : ರುಚಿಗೆ,
ಈರುಳ್ಳಿ : 2 
ಟೊಮೇಟೊ : 2 

ಪಾಲಕ್ ಪ್ಯೂರಿಗೆ ಬೇಕಾಗುವ ಸಾಮಗ್ರಿಗಳು:
ಹೆಚ್ಚಿದ ಪಾಲಕ್ ಸೊಪ್ಪು : 1 ಕಪ್,
ಕಸೂರಿ ಮೇಥಿ : 1 ಟೀ ಚಮಚ,
ಸಕ್ಕರೆ : 1/2 ಟೇಬಲ್ ಚಮಚ,
ಹೆಚ್ಚಿದ ಕೊತ್ತಂಬರಿ ಸೊಪ್ಪು: 2-3 ಟೇಬಲ್ ಚಮಚ,
ಬೆಳ್ಳುಳ್ಳಿ : 4-5 ಎಸಳು,
ಶುಂಠಿ : 1 ಇಂಚು,  
ಹಸಿ ಮೆಣಸಿನ ಕಾಯಿ: 2-3 

ವಿಧಾನ :
ಒಂದು ಪಾತ್ರೆಗೆ ಹೆಚ್ಚಿದ ಪಾಲಕ್ ಸೊಪ್ಪು, ಕಸೂರಿ ಮೇಥಿ, ಸಕ್ಕರೆ ಹಾಕಿ, ಅರ್ಧ ಕಪ್  ನೀರು ಹಾಕಿ ಬೇಯಿಸಿಕೊಂಡು ಮಿಶ್ರಣ ತಣ್ಣಗಾಗಲು ಬಿಡಿ. ಈರುಳ್ಳಿ ಮತ್ತು ಟೊಮೇಟೊವನ್ನು ಬೇರೆ ಬೇರೆ ಹೆಚ್ಚಿಕೊಂಡು  ಒಂದಾದ ಮೇಲೆ ಒಂದರಂತೆ ಬೇರೆ ಬೇರೆಯಾಗಿಯೇ ನೀರು ಹಾಕದೇ ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಈರುಳ್ಳಿ ಪೇಸ್ಟ್ ಮತ್ತು ಟೊಮೇಟೊ ಪೇಸ್ಟ್ ತಯಾರಾಯಿತು. ನಂತರ ತಣ್ಣಗಾದ ಪಾಲಕ್ ಮಿಶ್ರಣಕ್ಕೆ 'ಪಾಲಕ್ ಪ್ಯೂರಿ ಸಾಮಗ್ರಿ'ಗಳಲ್ಲಿರುವ ಉಳಿದ ಸಾಮಗ್ರಿಗಳನ್ನು ಹಾಕಿ ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.

ಸ್ವೀಟ್ ಕಾರ್ನ್ ಗೆ ನೀರು ಹಾಕಿ ಸ್ವಲ್ಪ ಉಪ್ಪು ಹಾಕಿ 80% ನಷ್ಟು ಬೇಯಿಸಿಕೊಳ್ಳಿ.  ಈಗ ಬಾಣಲೆಗೆ ತುಪ್ಪ ಹಾಕಿ ಕಾದ ನಂತರ ಈರುಳ್ಳಿ ಪೇಸ್ಟ್ ಹಾಕಿ ಸಣ್ಣ ಉರಿಯಲ್ಲಿ ಒಂದು ನಿಮಿಷ ಫ್ರೈ ಮಾಡಿ. ನಂತರ ಟೊಮೇಟೊ ಪೇಸ್ಟ್ ಹಾಕಿ ಒಂದು ನಿಮಿಷ ಫ್ರೈ ಮಾಡಿ. ಈಗ ಅರಿಶಿನ ಪುಡಿ, ಧನಿಯಾ ಪುಡಿ, ಜೀರಿಗೆ ಪುಡಿ, ಗರಂ ಮಸಾಲ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಒಂದು ನಿಮಿಷ ಫ್ರೈ ಮಾಡಿ. ನಂತರ ರುಬ್ಬಿದ ಪಾಲಕ್ ಮಿಶ್ರಣ (ಪಾಲಕ್ ಪ್ಯೂರಿ) ಹಾಕಿ 2-3 ನಿಮಿಷ ಸಣ್ಣ ಉರಿಯಲ್ಲಿ ಫ್ರೈ ಮಾಡಿ (ನೀರು ಹಾಕಬೇಡಿ). ಈಗ ಉಪ್ಪು ಮತ್ತು ಹಾಲು ಹಾಕಿ 2-3 ನಿಮಿಷ ಫ್ರೈ ಮಾಡಿ ಬೇಯಿಸಿದ ಕಾರ್ನ್ ಹಾಕಿ 1-2 ನಿಮಿಷ ಫ್ರೈ ಮಾಡಿದರೆ ರುಚಿಯಾದ ಸ್ವೀಟ್ ಕಾರ್ನ್ ಪಾಲಕ್ ಪರೋಟ, ಚಪಾತಿ ಅಥವಾ ಪುಲ್ಕಾ ಜೊತೆ ಸವಿಯಲು ಸಿದ್ಧ.... 


ಸಲಹೆ: 1) ಇದೇ ತರಹ ಸ್ವೀಟ್ ಕಾರ್ನ್ ಬದಲು ಹಸಿ ಬಟಾಣಿ ಹಾಕಿ 'ಪಾಲಕ್ ಮಟರ್' ಮಾಡಬಹುದು. ಎರಡಕ್ಕೂ ಗ್ರೇವಿ ಒಂದೇ ಇರುತ್ತದೆ. ಕಾಳುಗಳು ಮಾತ್ರ ಬೇರೆ ಬೇರೆ....   

ಅಡುಗೆಗೊಂದು ಸಲಹೆ :  ಯಾವುದೇ ಸೊಪ್ಪನ್ನು ಬೇಯಿಸುವಾಗ ಅದಕ್ಕೆ ಪ್ಲೇಟ್ ಮುಚ್ಚದೇ ಹಾಗೆಯೇ ಬೇಯಿಸಿದರೆ ಸೊಪ್ಪಿನ ಹಸಿರು ಬಣ್ಣ ಹಾಗೆಯೇ ಇರುತ್ತದೆ.