ಗುರುವಾರ, ಅಕ್ಟೋಬರ್ 27, 2016

ಹುಣಸೆ ಹಣ್ಣಿನ ಅಪ್ಪೆಹುಳಿ (ಹುಳಸೆ ಹುಳಿ):

ಸಾಮಗ್ರಿಗಳು : ಹುಣಸೆಹಣ್ಣು - ಚಿಕ್ಕ ನಿ೦ಬೆ ಹಣ್ಣಿನ ಗಾತ್ರ, ಈರುಳ್ಳಿ -1 , ಎಣ್ಣೆ 1/2
ಚಮಚ, ಒಣಮೆಣಸು - 1, ಸಾಸಿವೆ - 1/2
ಚಮಚ, ಬೆಲ್ಲ  -2 ಚಮಚ , ಉಪ್ಪು.


ವಿಧಾನ : ಹುಣಸೆಹಣ್ಣನ್ನು 15 ನಿಮಿಷ ನೀರಲ್ಲಿ ನೆನೆಸಿಡಿ. ಈಗ ಹುಣಸೆ ರಸ ತೆಗೆದು ಅದಕ್ಕೆ 2 ಲೋಟ ನೀರು ಹಾಕಿ. ಈಗ ಉಪ್ಪು ಬೆಲ್ಲ ಹಾಕಿ ಕಲಕಿ. ಒಗ್ಗರಣೆ ಸೌಟನ್ನು ಒಲೆಯ ಮೇಲಿಟ್ಟು ಸಣ್ಣ ಉರಿ ಇಟ್ಟುಕೊಳ್ಳಿ ಅದಕ್ಕೆ ಎಣ್ಣೆ ಹಾಕಿ ಬಿಸಿ ಆದ ಮೇಲೆ ಸಾಸಿವೆ ಹಾಗೂ ಒಣಮೆಣಸು ಹಾಕಿ ಚಿಟಪಟ ಆದ ಮೇಲೆ ಈ ಒಗ್ಗರಣೆಯನ್ನು ಹುಣಸೇನೀರಿಗೆ ಹಾಕಿ ನ೦ತರ ಇದಕ್ಕೆ ಈರುಳ್ಳಿಯನ್ನು ಸಣ್ಣದಾಗಿ ಹೆಚ್ಚಿ ಹಾಕಿದರೆ ಹುಣಸೆ ಹಣ್ಣಿನ ಅಪ್ಪೆಹುಳಿ (ಹುಳಸೆ ಹುಳಿ) ಅನ್ನದ ಜೊತೆ ಸವಿಯಲು ಸಿದ್ದ.

ಭಾನುವಾರ, ಅಕ್ಟೋಬರ್ 23, 2016

ಹೆಸರುಬೇಳೆ ಪಾಯಸ :

ಹೆಸರುಬೇಳೆ ಪಾಯಸವನ್ನು ಶಿವರಾತ್ರಿ ಹಬ್ಬಕ್ಕೆ ನೈವೇದ್ಯಕ್ಕೆ ಮಾಡುವ ಪದ್ಧತಿ ಕೆಲವೆಡೆ ಇದೆ. ಈ ಪಾಯಸ ತಿನ್ನುವುದರಿಂದ ರಾತ್ರಿ ಜಾಗರಣೆ ಮಾಡಿದರೆ ದೇಹದ ಉಷ್ಣತೆ ಜಾಸ್ತಿಯಾಗದೇ ತಂಪಾಗಿರುತ್ತದೆ. ಬೇರೆ ಯಾವುದೇ ಹಬ್ಬಕ್ಕೂ ನೈವೇದ್ಯಕ್ಕೆ ಮಾಡಬಹುದು. 
ಸಾಮಗ್ರಿಗಳು:
ಹೆಸರುಬೇಳೆ 1.5 ಕಪ್,
ಬೆಲ್ಲ 1/2 ಕಪ್,
ಸಕ್ಕರೆ 1/2 ಕಪ್,
ತೆಂಗಿನ ತುರಿ 1 ಕಪ್,
ಹಾಲು 1/2 ಕಪ್,
ಏಲಕ್ಕಿ ಪುಡಿ 1/4 ಚಮಚ,
ಗೋಡಂಬಿ 8-10,
ಉಪ್ಪು 1/4 ಚಮಚ 

ವಿಧಾನ :
ಹೆಸರುಬೇಳೆ ತೊಳೆದುಕೊಂಡು ನೀರು ಹಾಕಿ ಕುಕ್ಕರ್ ನಲ್ಲಿ ಎರಡು ಕೂಗು ಕೂಗಿಸಿ ಅಥವಾ ಹಾಗೆಯೇ ಪಾತ್ರೆಯಲ್ಲಿ ಹಾಕಿ ಒಲೆಯ ಮೇಲಿಟ್ಟು ಬೇಯಿಸಬಹುದು. ಬೇಳೆ ಪೂರ್ತಿ ಕರಗುವಷ್ಟು ಬೇಯಿಸಬಾರದು,  ತೆಂಗಿನ ತುರಿಗೆ ಏಲಕ್ಕಿ ಪುಡಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಬೆಂದ ಹೆಸರುಬೇಳೆಗೆ ಹಾಲು, ರುಬ್ಬಿದ ತೆಂಗಿನಕಾಯಿ, ಗೋಡಂಬಿ ಚೂರುಗಳು, ಸಕ್ಕರೆ ಮತ್ತು ಬೆಲ್ಲ ಹಾಕಿ ಬೇಕಿದ್ದರೆ ಸ್ವಲ್ಪ ನೀರು ಹಾಕಿ ಕುದಿಯಲು ಬಿಡಿ. ಹೆಸರುಬೇಳೆ ಬೇಗ  ತಳಹಿಡಿಯುತ್ತದೆ, ಆಗಾಗ ಕಲಕುತ್ತಿರಿ. ಚೆನ್ನಾಗಿ  ಕುದಿ ಬಂದ ಮೇಲೆ ಉರಿ ಆರಿಸಿ. ಬಿಸಿ ಬಿಸಿ ಪಾಯಸಕ್ಕೆ ತುಪ್ಪ ಹಾಕಿಕೊಂಡು ಸವಿದರೆ ಆಹಾ ...! 


ಶುಕ್ರವಾರ, ಅಕ್ಟೋಬರ್ 14, 2016

ಅಕ್ಕಿ ವಡೆ:

ಸಾಮಗ್ರಿಗಳು: ಉದ್ದಿನಬೇಳೆ - 2 ಕಪ್, ಅಕ್ಕಿ (ದೊಡ್ಡ ಮುಳ್ಳರೆ / ಬಾಳೆಸುಳಿ) - 2 ಕಪ್, ಜೀರಿಗೆ 1 ಟೀ ಚಮಚ , ಓಮು 1/2 ಟೀ ಚಮಚ, ಇ೦ಗು ಚಿಟಿಕೆ, ಹಸಿ ಮೆಣಸು 2,  ಉಪ್ಪು.

ವಿಧಾನ : ಅಕ್ಕಿಯನ್ನು 1 ಗ೦ಟೆ ನೀರಿನಲ್ಲಿ ನೆನೆಹಾಕಿ. ಹಾಗೆ ಉದ್ದಿನಬೇಳೆಯನ್ನು ಬೇರೆ ಪಾತ್ರೆಯಲ್ಲಿ 1 ತಾಸು ನೆನೆಹಾಕಿ. ಈಗ ಅಕ್ಕಿಯಲ್ಲಿನ ನೀರನ್ನು ಪೂರ್ಣವಾಗಿ ತೆಗೆದು ಕಾಟನ್ ಬಟ್ಟೆಯಲ್ಲಿ 1/2 ಗ೦ಟೆ ಹರವಿಡಿ. ನ೦ತರ ಈ ಅಕ್ಕಿಯನ್ನು ಮಿಕ್ಸಿಯಲ್ಲಿ ತರಿ ತರಿ ಪುಡಿ ಮಾಡಿಕೊಳ್ಳಿ. ದೊಡ್ಡ ರವಾ (ಉಪ್ಪಿಟ್ಟಿನ ರವೆ) ಹದಕ್ಕೆ ಅಕ್ಕಿ ಕಡಿ ಇರಬೇಕು.ಇದನ್ನು ಜರಡಿ ಹಿಡಿದು ನುಣುಪಾದ ಹಿಟ್ಟನ್ನು ತೆಗೆದುಬಿಡಿ. ಮಿಕ್ಸಿ ಜಾರಿಗೆ ಜೀರಿಗೆ, ಓಮು, ಇ೦ಗು, ಹಸಿಮೆಣಸು, ಉಪ್ಪು ಹಾಕಿ ಪುಡಿ ಮಾಡಿಕೊ೦ಡು ಅಕ್ಕಿ ಕಡಿಗೆ ಸೇರಿಸಿ. ಈಗ ಇದಕ್ಕೆ ನುಣ್ಣಗೆ ರುಬ್ಬಿಕೊ೦ಡ ಉದ್ದಿನಬೇಳೆಯ ಹಿಟ್ಟನ್ನು ಹಾಕುತ್ತ ಚೆನ್ನಾಗಿ ಕಲೆಸಿ ಹಾಗೆ 1/2 ಗ೦ಟೆಗಳ ಕಾಲ ಇಡಿ. ನ೦ತರ ಮತ್ತೆ ತಿಕ್ಕಿ ತಿಕ್ಕಿ ಕಲೆಸಿ ಬೇಕಾದಲ್ಲಿ ಉದ್ದಿನಹಿಟ್ಟು ಸೇರಿಸಿ. ಚಪಾತಿ ಹಿಟ್ಟಿಗಿ೦ತ ಸ್ವಲ್ಪ ಮೆದು ಇರಬೇಕು.

ಈಗ ಬಾಣಲೆಯನ್ನು ಒಲೆಯ ಮೆಲೆ ಇಟ್ಟು ಉರಿ ದೊಡ್ಡ ಮಾಡಿ. ಬಾಳೆ ಎಲೆ / ಎಣ್ಣೆ ಕವರ್ ಗೆ ದಪ್ಪಗೆ ಎಣ್ಣೆ ಹಚ್ಚಿಕೊ೦ಡು ಪುರಿ ಉ೦ಡೆಯಷ್ಟು ದೊಡ್ಡ ಹಿಟ್ಟು ತೆಗೆದುಕೊ೦ಡು ಕೈಯಲ್ಲಿ ಚೆನ್ನಾಗಿ ತಿಕ್ಕಿ ಉ೦ಡೆ ಮಾಡಿ ಲಟ್ಟಿಸಿ. ಹೊಗೆ ಬರುವಷ್ಟು ಎಣ್ಣೆ ಕಾದಿರ ಬೇಕು. ಈಗ ಲಟ್ಟಿಸಿದ ಹಿಟ್ಟನ್ನು ಎಣ್ಣೆಯಲ್ಲಿ ಬಿಡಿ. (ಎಣ್ಣೆಗೆ ಹಾಕುವಾಗ ಬಹಳ ನಾಜೂಕಿನಿ೦ದ ಹಾಕಬೇಕು. ಇಲ್ಲದಿದ್ದರೆ ಅದು ಮಡಚಿ ವಡೆ ಉಬ್ಬುವುದಿಲ್ಲ). ಈಗ ಗರಿ ಗರಿ ಅಕ್ಕಿ ವಡೆ ತಿನ್ನಲು ಸಿದ್ಧ. ಅನ್ನ ಸಾ೦ಬಾರ್ ಊಟ ಮಾಡುವಾಗ ಅಕ್ಕಿ ವಡೆ ಒಳ್ಳೆಯ ಜೊತೆಯಾಗುತ್ತದೆ.

ಶುಕ್ರವಾರ, ಅಕ್ಟೋಬರ್ 7, 2016

ಚಕ್ಕುಲಿ ಪಾಯಸ :

ಸಾಮಗ್ರಿಗಳು :
ಚಕ್ಕುಲಿ : 12-15
ತೆಂಗಿನತುರಿ : 1 ಕಪ್ 
ಹಾಲು : 1 ಕಪ್ 
ಬೆಲ್ಲ : 3/4 - 1 ಕಪ್ 
ಏಲಕ್ಕಿ ಪುಡಿ : 1/4 ಚಮಚ 

ವಿಧಾನ : 
ಒಂದು ಪಾತ್ರೆಯಲ್ಲಿ 3-4 ಕಪ್ ನೀರನ್ನು ಕುದಿಯಲು ಇಡಿ. ಈಗ ಚಕ್ಕುಲಿಯನ್ನು ಸಣ್ಣ ಸಣ್ಣ ತುಂಡು ಮಾಡಿಕೊಂಡು ಕುದಿಯುತ್ತಿರುವ ನೀರಿಗೆ ಹಾಕಿ ಉರಿ ಆರಿಸಿ ಅರ್ಧ ನಿಮಿಷ ಬಿಡಿ. ನಂತರ ಇದರಿಂದ ಪೂರ್ತಿಯಾಗಿ ನೀರನ್ನು ಬಸಿದುಕೊಳ್ಳಿ. 

ತೆಂಗಿನತುರಿಗೆ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಒಂದು ಪಾತ್ರೆಗೆ ರುಬ್ಬಿದ ತೆಂಗಿನತುರಿ, ಬೆಲ್ಲ  ಮತ್ತು ಏಲಕ್ಕಿ ಪುಡಿ ಹಾಕಿ ಕುದಿಯಲು ಇಡಿ.  ಕುದಿ ಬಂದ ಮೇಲೆ ಇದಕ್ಕೆ ಬಿಸಿ ಹಾಲು ಹಾಕಿ  ಒಂದು ಕುದಿ ಬಂದ ಮೇಲೆ ರೆಡಿ ಮಾಡಿಟ್ಟುಕೊಂಡ ಚಕ್ಕುಲಿ ಹಾಕಿ ತಕ್ಷಣ ಸರ್ವ್ ಮಾಡಿ. 


ಸೂಚನೆಗಳು :
1) ಚಕ್ಕುಲಿ ಮಾಡುವ ವಿಧಾನಕ್ಕೆ: http://gelatiyarapakashale.blogspot.in/2014/09/blog-post.html 
ಇಲ್ಲಿ ನೋಡಿ. ಮತ್ತು ಮಾಡುವಾಗ ಮೆಣಸಿನ ಪುಡಿ ಹಾಕಬೇಡಿ. 
2) ಚಕ್ಕುಲಿ ಹಾಕಿ ತುಂಬಾ ಹೊತ್ತು ಬಿಟ್ಟರೆ ಪೂರ್ತಿ ಮೆತ್ತಗಾಗಿ ಕರಗಿಹೋಗುತ್ತದೆ. ಉಳಿದೆಲ್ಲವನ್ನೂ ರೆಡಿ ಮಾಡಿಟ್ಟುಕೊಂಡು ಬಡಿಸುವ ಸಮಯದಲ್ಲಿ ಚಕ್ಕುಲಿ ಕುದಿಯುವ ನೀರಿಗೆ ಹಾಕಿ ತೆಗೆದು ಪಾಯಸಕ್ಕೆ ಹಾಕಬೇಕು. 
3) ಅರ್ಧ ಬೆಲ್ಲ ಮತ್ತು ಅರ್ಧದಷ್ಟು ಸಕ್ಕರೆ ಕೂಡ ಹಾಕಬಹುದು.