ಶುಕ್ರವಾರ, ಅಕ್ಟೋಬರ್ 14, 2016

ಅಕ್ಕಿ ವಡೆ:

ಸಾಮಗ್ರಿಗಳು: ಉದ್ದಿನಬೇಳೆ - 2 ಕಪ್, ಅಕ್ಕಿ (ದೊಡ್ಡ ಮುಳ್ಳರೆ / ಬಾಳೆಸುಳಿ) - 2 ಕಪ್, ಜೀರಿಗೆ 1 ಟೀ ಚಮಚ , ಓಮು 1/2 ಟೀ ಚಮಚ, ಇ೦ಗು ಚಿಟಿಕೆ, ಹಸಿ ಮೆಣಸು 2,  ಉಪ್ಪು.

ವಿಧಾನ : ಅಕ್ಕಿಯನ್ನು 1 ಗ೦ಟೆ ನೀರಿನಲ್ಲಿ ನೆನೆಹಾಕಿ. ಹಾಗೆ ಉದ್ದಿನಬೇಳೆಯನ್ನು ಬೇರೆ ಪಾತ್ರೆಯಲ್ಲಿ 1 ತಾಸು ನೆನೆಹಾಕಿ. ಈಗ ಅಕ್ಕಿಯಲ್ಲಿನ ನೀರನ್ನು ಪೂರ್ಣವಾಗಿ ತೆಗೆದು ಕಾಟನ್ ಬಟ್ಟೆಯಲ್ಲಿ 1/2 ಗ೦ಟೆ ಹರವಿಡಿ. ನ೦ತರ ಈ ಅಕ್ಕಿಯನ್ನು ಮಿಕ್ಸಿಯಲ್ಲಿ ತರಿ ತರಿ ಪುಡಿ ಮಾಡಿಕೊಳ್ಳಿ. ದೊಡ್ಡ ರವಾ (ಉಪ್ಪಿಟ್ಟಿನ ರವೆ) ಹದಕ್ಕೆ ಅಕ್ಕಿ ಕಡಿ ಇರಬೇಕು.ಇದನ್ನು ಜರಡಿ ಹಿಡಿದು ನುಣುಪಾದ ಹಿಟ್ಟನ್ನು ತೆಗೆದುಬಿಡಿ. ಮಿಕ್ಸಿ ಜಾರಿಗೆ ಜೀರಿಗೆ, ಓಮು, ಇ೦ಗು, ಹಸಿಮೆಣಸು, ಉಪ್ಪು ಹಾಕಿ ಪುಡಿ ಮಾಡಿಕೊ೦ಡು ಅಕ್ಕಿ ಕಡಿಗೆ ಸೇರಿಸಿ. ಈಗ ಇದಕ್ಕೆ ನುಣ್ಣಗೆ ರುಬ್ಬಿಕೊ೦ಡ ಉದ್ದಿನಬೇಳೆಯ ಹಿಟ್ಟನ್ನು ಹಾಕುತ್ತ ಚೆನ್ನಾಗಿ ಕಲೆಸಿ ಹಾಗೆ 1/2 ಗ೦ಟೆಗಳ ಕಾಲ ಇಡಿ. ನ೦ತರ ಮತ್ತೆ ತಿಕ್ಕಿ ತಿಕ್ಕಿ ಕಲೆಸಿ ಬೇಕಾದಲ್ಲಿ ಉದ್ದಿನಹಿಟ್ಟು ಸೇರಿಸಿ. ಚಪಾತಿ ಹಿಟ್ಟಿಗಿ೦ತ ಸ್ವಲ್ಪ ಮೆದು ಇರಬೇಕು.

ಈಗ ಬಾಣಲೆಯನ್ನು ಒಲೆಯ ಮೆಲೆ ಇಟ್ಟು ಉರಿ ದೊಡ್ಡ ಮಾಡಿ. ಬಾಳೆ ಎಲೆ / ಎಣ್ಣೆ ಕವರ್ ಗೆ ದಪ್ಪಗೆ ಎಣ್ಣೆ ಹಚ್ಚಿಕೊ೦ಡು ಪುರಿ ಉ೦ಡೆಯಷ್ಟು ದೊಡ್ಡ ಹಿಟ್ಟು ತೆಗೆದುಕೊ೦ಡು ಕೈಯಲ್ಲಿ ಚೆನ್ನಾಗಿ ತಿಕ್ಕಿ ಉ೦ಡೆ ಮಾಡಿ ಲಟ್ಟಿಸಿ. ಹೊಗೆ ಬರುವಷ್ಟು ಎಣ್ಣೆ ಕಾದಿರ ಬೇಕು. ಈಗ ಲಟ್ಟಿಸಿದ ಹಿಟ್ಟನ್ನು ಎಣ್ಣೆಯಲ್ಲಿ ಬಿಡಿ. (ಎಣ್ಣೆಗೆ ಹಾಕುವಾಗ ಬಹಳ ನಾಜೂಕಿನಿ೦ದ ಹಾಕಬೇಕು. ಇಲ್ಲದಿದ್ದರೆ ಅದು ಮಡಚಿ ವಡೆ ಉಬ್ಬುವುದಿಲ್ಲ). ಈಗ ಗರಿ ಗರಿ ಅಕ್ಕಿ ವಡೆ ತಿನ್ನಲು ಸಿದ್ಧ. ಅನ್ನ ಸಾ೦ಬಾರ್ ಊಟ ಮಾಡುವಾಗ ಅಕ್ಕಿ ವಡೆ ಒಳ್ಳೆಯ ಜೊತೆಯಾಗುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ