ಶುಕ್ರವಾರ, ಸೆಪ್ಟೆಂಬರ್ 30, 2016

ಅತಿರಸ/ಅತ್ರಾಸ/ಕಜ್ಜಾಯ:

ಸಾಮಗ್ರಿಗಳು: ಅಕ್ಕಿ ಹಿಟ್ಟು- ೧ ಕಪ್, ಬೆಲ್ಲ - ೧ ೧/೨ ಕಪ್, ಎಳ್ಳು ೨ ಚಮಚ, ತೆ೦ಗಿನತುರಿ ೧ ಕಪ್, ಏಲಕ್ಕಿಪುಡಿ ೧/೪ ಟೀ ಚಮಚ, ಕರಿಯಲು ಎಣ್ಣೆ.



ವಿಧಾನ : ಒ೦ದು ದಪ್ಪ ತಳದ ಪಾತ್ರೆಯಲ್ಲಿ ಬೆಲ್ಲ ಹಾಕಿ ಅದಕ್ಕೆ ನೀರು/ಹಾಲು ಹಾಕಿ ಕುದಿಸಿ ಆಗಾಗ ತಳಹಿಡಿಯದ೦ತೆ ಕೈಯಾಡಿಸಿ ಬೆಲ್ಲದ ನೀರು ಬೆಳಿ ನೊರೆ ಬರಲು ಶುರುವಾದಮೇಲೆ ಅದಕ್ಕೆ ಎಳ್ಳು, ತೆ೦ಗಿನತುರಿ, ಏಲಕ್ಕಿಪುಡಿ ಹಾಕಿ ಮತ್ತೆ ೫ ನಿಮಿಷ ಬಿಡಿ. ನ೦ತರ ಉರಿ ಸಣ್ಣ ಮಾಡಿ ಅಕ್ಕಿ ಹಿಟ್ಟು ಸೇರಿಸುತ್ತಾ ಬನ್ನಿ. ಗ೦ಟಾಗದ೦ತೆ ತೊಳೆಸುತ್ತಿರಬೇಕು. ಮಿಶ್ರಣವು ಪಾತ್ರೆಬಿಡಲು ಶುರುವಾದಮೇಲೆ ಉರಿ ಆರಿಸಿ. ಈ ಮಿಶ್ರಣ ತಣ್ಣಗಾದ ಮೇಲೆ ಪುರಿ ಥರ ಚಿಕ್ಕ ಚಿಕ್ಕ ಉ೦ಡೆ ಮಾಡಿಟ್ಟುಕೊಳ್ಳಿ.ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಲು ಇಡಿ. ಈಗ ಬಾಳೆ ಎಲೆ ಅಥವಾ ಎಣ್ಣೆ ಕವರ್ ಗೆ ಎಣ್ಣೆ ಸವರಿಕೊ೦ಡು ಕೈಗೂ ಸ್ವಲ್ಪ ಎಣ್ಣೆ ಸವರಿಕೊ೦ಡು ಅದನ್ನು ತಟ್ಟಿ ಕಾದ ಎಣ್ಣೆಯಲ್ಲಿ ಬೇಯಿಸಿ ಬೆ೦ದ ಮೇಲೆ ಮತ್ತೊ೦ದು ಚಪ್ಪಟೆ ಸೌಟು ತೆಗೆದುಕೊ೦ಡು ಬಾಣಲೆ ಇ೦ದ ತೆಗೆದ ತಕ್ಷಣ ಎಣ್ಣೆಯನ್ನು ಹಿ೦ಡಿ ತೆಗೆಯಿರಿ. ಈಗ ಗರಿ ಗರಿಯಾದ ಅತಿರಸ/ಅತ್ರಾಸ/ಕಜ್ಜಾಯ ತಿನ್ನಲು ಸಿದ್ಧ.

ಸೋಮವಾರ, ಸೆಪ್ಟೆಂಬರ್ 19, 2016

ಸೋರೆಕಾಯಿ ತಿರುಳಿನ ಗೊಜ್ಜು :

ಸೋರೆಕಾಯಿ ಸಾಂಬಾರ್, ಪಲ್ಯ, ಪಾಯಸ ಮಾಡುವಾಗ ತಿರುಳು ಹಾಕಿದರೆ ಚೆನ್ನಾಗಿರರುವುದಿಲ್ಲ. ಆದ್ದರಿಂದ ಎಳೆಯ ಅಥವಾ ತುಂಬಾ ಬಲಿತು ಬೀಜ ಗಟ್ಟಿಯಾಗದ ತಿರುಳನ್ನು ತೆಗೆದು ಈ ಗೊಜ್ಜು ಮಾಡಿ ನೋಡಿ. 

ಸಾಮಗ್ರಿಗಳು: 
ಹೆಚ್ಚಿಕೊಂಡ ಸೋರೆಕಾಯಿ (ಹಾಲುಗುಂಬಳ) ತಿರುಳು : 1 ಕಪ್
ತೆಂಗಿನ ತುರಿ : 1/2 ಕಪ್
ಹುಣಸೆ ಹಣ್ಣು : ನೆಲ್ಲಿಕಾಯಿ ಗಾತ್ರ 
ಬೆಲ್ಲ : 1 ಟೇಬಲ್ ಚಮಚ 
ಹಸಿಮೆಣಸಿನ ಕಾಯಿ : 2-3 (ನಿಮ್ಮ ಖಾರಕ್ಕೆ ತಕ್ಕಷ್ಟು)
ಉಪ್ಪು : ರುಚಿಗೆ 

ಒಗ್ಗರಣೆಗೆ :
ಎಣ್ಣೆ : 1 ಚಮಚ 
ಉದ್ದಿನ ಬೇಳೆ : 1/2 ಚಮಚ
ಸಾಸಿವೆ : 1/2 ಚಮಚ 


ವಿಧಾನ : 
ಸೋರೆಕಾಯಿ ತಿರುಳನ್ನು ನೀರು, ಹುಣಸೆಹಣ್ಣು, ಬೆಲ್ಲ ಹಸಿಮೆಣಸಿನ ಕಾಯಿ ಹಾಕಿ ಬೇಯಿಸಿಕೊಳ್ಳಿ. ಮಿಕ್ಸಿ ಜಾರ್ ಗೆ ತೆಂಗಿನ ತುರಿ, ಉಪ್ಪು, ಸ್ವಲ್ಪ ನೀರು (ಬೇಯಿಸಿದ ನೀರಿದ್ದರೆ ಅದನ್ನೇ ಹಾಕಿ) ಹಾಕಿ ಎರಡು ಸುತ್ತು ರುಬ್ಬಿ. ನಂತರ ಬೇಯಿಸಿಕೊಂಡ ಮಿಶ್ರಣ ಹಾಕಿ ತರಿ ತರಿಯಾಗಿ ರುಬ್ಬಿಕೊಂಡು ಎಣ್ಣೆ, ಉದ್ದಿನ ಬೇಳೆ, ಸಾಸಿವೆ ಒಗ್ಗರಣೆ ಮಾಡಿದರೆ ಸರಳ ಹಾಗೂ ರುಚಿಕರವಾದ, ಹುಳಿ - ಸಿಹಿ ಗೊಜ್ಜು ಸಿದ್ಧ. ಇದನ್ನು ಅನ್ನದ ಜೊತೆ ಸವಿದು ನೋಡಿ. ದೋಸೆಯ ಜೊತೆ ಸಹ ಚೆನ್ನಾಗಿರುತ್ತದೆ. 

ಸಲಹೆ: ನಾಟಿ ಸೋರೆಕಾಯಿ (ಮನೆಯಲ್ಲೇ ಬೆಳೆದಿದ್ದು) ಆದರೆ ಇನ್ನೂ ಚೆನ್ನಾಗಿರುತ್ತದೆ. 


ಸೋಮವಾರ, ಸೆಪ್ಟೆಂಬರ್ 12, 2016

ಗೋಧಿ ನುಚ್ಚಿನ ಪಾಯಸ :


ಸಾಮಗ್ರಿಗಳು:
ದೊಡ್ಡ ಅಥವಾ ಮಧ್ಯಮ ಗೋಧಿ ನುಚ್ಚು (ಕಡಿ): 1.5 ಕಪ್
ಹಾಲು : 2 ಕಪ್
ತೆಂಗಿನ ತುರಿ :1/2 ಕಪ್
ಸಕ್ಕರೆ :3 ಕಪ್
ಒಣ ದ್ರಾಕ್ಷಿ : 1 ಚಮಚ
ಗೋಡಂಬಿ : 8
ಖರ್ಜೂರ : 4-5
ತುಪ್ಪ : 2 ಚಮಚ 
ಉಪ್ಪು: 1/4 ಚಮಚ

ವಿಧಾನ:
ಗೋಧಿ ನುಚ್ಚನ್ನು 4-5 ಘಂಟೆ ನೀರಿನಲ್ಲಿ ನೆನೆಸಿಕೊಳ್ಳಿ. ನಂತರ ಆ ನೀರಿನ ಜೊತೆಯೇ ಕುಕ್ಕರ್ ನಲ್ಲಿ ೩ ವಿಶಲ್ ಕೂಗಿಸಿ ಬೇಯಿಸಿಕೊಳ್ಳಿ. ಇದನ್ನು ದಪ್ಪ ತಳದ ಪಾತ್ರೆಗೆ ಹಾಕಿ ಹಾಲು, ಸಕ್ಕರೆ ಹಾಕಿ ಒಲೆಯ ಮೇಲಿಡಿ. ಇತ್ತ ತೆಂಗಿನ ತುರಿಗೆ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಂಡು ಪಾಯಸಕ್ಕೆ ಹಾಕಿ. ದ್ರಾಕ್ಷಿ, ಗೋಡಂಬಿ ಚೂರುಗಳು ಮತ್ತು ಉಪ್ಪು ಹಾಕಿ ಚೆನ್ನಾಗಿ ಕುದಿಸಿ. ಪಾಯಸ ದಪ್ಪ ಅನಿಸಿದರೆ ಹಾಲು / ನೀರು ಸೇರಿಸಿ ಕುದಿಸಿ. ಕೊನೆಯಲ್ಲಿ ಖರ್ಜೂರವನ್ನು ಸಣ್ಣದಾಗಿ ಹೆಚ್ಚಿಕೊಂಡು ತುಪ್ಪದಲ್ಲಿ ಹುರಿದು ಪಾಯಸಕ್ಕೆ ಹಾಕಿದರೆ ರುಚಿಯಾದ ಪಾಯಸ ಸಿದ್ಧ. 


ಸಲಹೆ :
1) ಗೋಧಿ ಕಡಿ / ನುಚ್ಚಿನ ಬದಲು ಗೋಧಿಯಿಂದಲೇ ಪಾಯಸ  ಮಾಡಬಹುದು. ಆದರೆ ರಾತ್ರಿಯಿಡೀ ಗೋಧಿಯನ್ನು ನೆನೆಸಿಟ್ಟು ಮಾಡಬೇಕು. ಪೂರ್ತಿ ಗೋಧಿ ಅಗಿಯಲು ಸಿಗುವದರಿಂದ ಗೋಧಿ ಪಾಯಸ ಕೂಡ ಚೆನ್ನಾಗಿರುತ್ತದೆ. 
2) ಹಾಲನ್ನು ಹಾಕುವಾಗ ಪಾಯಸ ನಿಮಗೆ ಎಷ್ಟು ದಪ್ಪ ಬೇಕು ನೋಡಿಕೊಂಡು ಹಾಕಿಕೊಳ್ಳಿ. ಪೂರ್ತಿ ಹಾಲನ್ನು ಒಮ್ಮೆಲೇ ಹಾಕಿಕೊಳ್ಳಬೇಡಿ. 
3) ಸಕ್ಕರೆ ಬದಲು ಬೆಲ್ಲ ಕೂಡ ಹಾಕಬಹುದು. ಅಥವಾ ಬೆಲ್ಲ ಸಕ್ಕರೆ ಎರಡನ್ನೂ ಹಾಕಿ ಮಾಡಬಹುದು. 

ಶುಕ್ರವಾರ, ಸೆಪ್ಟೆಂಬರ್ 9, 2016

ಹಾಗಲಕಾಯಿ ಹುಳಿ ಗೊಜ್ಜು:

ಸಾಮಗ್ರಿಗಳು: 
ಹಾಗಲಕಾಯಿ - ೧ ದೊಡ್ಡದು, 
ಬೆಲ್ಲ - ೧/೨ ಕಪ್, 
ಹುಣಸೆಹಣ್ಣಿನ ರಸ - ೧/೨ ಕಪ್,
ಸೂಜಿ ಮೆಣಸು - ೧೦-೧೨( ಖಾರದ ಹಸಿ ಮೆಣಸು - ೪ ),
ಉಪ್ಪು ರುಚಿಗೆ ತಕ್ಕಷ್ಟು, 
ಎಣ್ಣೆ ೨ ಚಮಚ, 
ಸಾಸಿವೆ - ೧/೨ ಚಮಚ, 
ಕರಿಬೇವು ೫-೬ ಎಲೆ, ಅರಿಶಿನ ಚಿಟಿಕೆ.







ವಿಧಾನ : ಹಾಗಲಕಾಯಿಯನ್ನು ಒ೦ದಿ೦ಚು ಉದ್ದಕೆ ತೆಳ್ಳಗೆ ಹೆಚ್ಚಿಕೊಳ್ಳಿ. ದಪ್ಪ ತಳದ ಪಾತ್ರೆ / ಬಾಣಲೆಯನ್ನು ಒಲೆಯಮೇಲಿಟ್ಟು ಅದಕ್ಕೆ ಎಣ್ಣೆ ಹಾಕಿ ಅದು ಕಾದ ಮೇಲೆ ಸಾಸಿವೆ,ಅರಿಶಿನ, ಕರಿಬೇವು ಹಾಕಿ, ಸಾಸಿವೆ ಚಟಪಟಿಸಿದ ಮೇಲೆ ಹೆಚ್ಚಿಟ್ಟ ಹಾಗಲಕಾಯಿ, ಬೆಲ್ಲ, ಉಪ್ಪು, ಹುಣಸೆಹಣ್ಣಿನ ರಸ ಹಾಕಿ ಸಣ್ಣ ಉರಿಯಲ್ಲಿ ೧೫-೨೦ ನಿಮಿಷ ಕುದಿಸಿ ಆಗಾಗ ತಳ ಹಿಡಿಯದ೦ತೆ ಸೌಟಿನಲ್ಲಿ ತೊಳೆಸುತ್ತಿರಿ. ಇದು ಗಟ್ಟಿ ಚಟ್ನಿಯ ಹದಕ್ಕೆ ಬ೦ದ ಮೇಲೆ ಉರಿ ಆರಿಸಿ ಇಡಿ. ಇದನ್ನು ೮-೧೦ ದಿನಗಳವರೆಗೆ ಇಡಬಹುದು.