ಸಂಜೆಗೆ ಬಿಸಿ ತಿನಿಸು / snacks ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಸಂಜೆಗೆ ಬಿಸಿ ತಿನಿಸು / snacks ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಬುಧವಾರ, ಮಾರ್ಚ್ 13, 2019

ಮಂಡಕ್ಕಿ ಒಗ್ಗರಣೆ (ಗಿರ್ಮಿಟ್ - ಉತ್ತರ ಕರ್ನಾಟಕ ಸ್ಟೈಲ್) :

ಸಾಮಗ್ರಿಗಳು :
ಮಂಡಕ್ಕಿ (ಪುರಿ) : 6-7 ಬೌಲ್ 
ಈರುಳ್ಳಿ : 1
ಟೊಮೇಟೊ : 1 
ಹುರಿಗಡಲೆ ಪುಡಿ : 5 ಟೇಬಲ್ ಚಮಚ 
ಹಸಿಮೆಣಸು : 5-6
ಅರಿಶಿನ ಪುಡಿ : 1/2 ಚಮಚ
ಶೇಂಗಾ : 4-5 ಟೇಬಲ್ ಚಮಚ 
ಉದ್ದಿನಬೇಳೆ : 1 ಚಮಚ 
ಸಾಸಿವೆ : 1/2 ಚಮಚ 
ಜೀರಿಗೆ : 1/2 ಚಮಚ 
ಕರಿಬೇವು : ಸ್ವಲ್ಪ 
ಕೊತ್ತಂಬರಿ ಸೊಪ್ಪು : ಸ್ವಲ್ಪ 
ಉಪ್ಪು : ಸ್ವಲ್ಪ 
ಲಿಂಬುರಸ : 1 ಟೇಬಲ್ ಚಮಚ 
ಎಣ್ಣೆ : 4-5 ಟೇಬಲ್ ಚಮಚ 

ವಿಧಾನ : ಮಂಡಕ್ಕಿಯನ್ನು ನೀರಿನಲ್ಲಿ ನೆನೆಸಿ ಸ್ವಲ್ಪ ಮೆತ್ತಗಾಗುತ್ತಿದ್ದಂತೇ ತೆಗೆದು ನೀರು ಹಿಂಡಿ ಒಂದು ಪಾತ್ರೆಗೆ ಹಾಕಿಟ್ಟುಕೊಳ್ಳಿ. ಬಾಣಲೆಗೆ ಎಣ್ಣೆ ಹಾಕಿ ಕಾಯಿಸಿ ಶೇಂಗಾ ಹಾಕಿ ಹುರಿಯಿರಿ, ಉದ್ದಿನ ಬೇಳೆ ಹಾಕಿ ಕೆಂಪಗಾದ ಮೇಲೆ ಜೀರಿಗೆ, ಸಾಸಿವೆ ಹಾಕಿ ಸಿಡಿಸಿ.  ಇದಕ್ಕೆ ಉದ್ದುದ್ದ ಸೀಳಿದ ಹಸಿಮೆಣಸಿನ ಕಾಯಿ, ಕರಿಬೇವು ಹಾಕಿ ಹುರಿದು, ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಹುರಿಯಿರಿ. ನಂತರ ಸಣ್ಣ ಹೆಚ್ಚಿದ ಟೊಮೇಟೊ ಹಾಕಿ ಸ್ವಲ್ಪ ಉಪ್ಪು ಹಾಕಿ (ಮಂಡಕ್ಕಿಯಲ್ಲಿ ಉಪ್ಪಿನಂಶ ಇರುವುದರಿಂದ ಸ್ವಲ್ಪ ಹಾಕಿದರೆ ಸಾಕು) ಟೊಮೇಟೊ ಮೆತ್ತಗಾಗುವವರೆಗೆ ಹುರಿಯಿರಿ. ಇದಕ್ಕೆ ಅರಿಶಿನ ಪುಡಿ ಹಾಕಿ ಮಿಕ್ಸ್ ಮಾಡಿ. ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪು, ರೆಡಿ ಮಾಡಿಟ್ಟ ಮಂಡಕ್ಕಿ ಹಾಕಿ, ಲಿಂಬು ರಸ, ಹುರಿಗಡಲೆ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಉರಿ ಆರಿಸಿ. ಬಿಸಿ ಬಿಸಿಯಾದ ಉತ್ತರ ಕರ್ನಾಟಕ ಶೈಲಿಯ ಒಗ್ಗರಣೆ ಮಂಡಕ್ಕಿ ಟೀ, ಕಾಫಿ ಜೊತೆ ಸವಿಯಿರಿ. ಇದರ ಜೊತೆ ಖಾರಕ್ಕೆ ಮೆಣಸಿನ ಕಾಯಿ ಬೇಕಿದ್ದಲ್ಲಿ : ಹಸಿಮೆಣಸಿನಕಾಯಿ ಸ್ವಲ್ಪ ಸೀಳಿ ಅದಕ್ಕೆ ಸ್ವಲ್ಪವೇ ಉಪ್ಪು ಹಾಕಿ (ಬೇಕಿದ್ದಲ್ಲಿ ಆಮಚೂರ್ ಪುಡಿ ಹಾಕಿ) ಎಣ್ಣೆಯಲ್ಲಿ ಹುರಿದು ತೆಗೆದಿಟ್ಟುಕೊಳ್ಳಿ. ಖಾರಕ್ಕೆ ಬೇಕಿದ್ದಲ್ಲಿ ಈ ಮೆಣಸನ್ನು ತಿನ್ನಲು ರುಚಿಯಾಗಿರುತ್ತದೆ. 


ಸೋಮವಾರ, ನವೆಂಬರ್ 19, 2018

ಮಂಡಕ್ಕಿ (ಪುರಿ) ಒಗ್ಗರಣೆ :

ಸಾಮಗ್ರಿಗಳು :
ಮಂಡಕ್ಕಿ : 1/4 ಕೆಜಿ 
ತೆಳ್ಳಗೆ ಹೆಚ್ಚಿದ ಒಣ ಕೊಬ್ಬರಿ : 1/2 ಕಪ್ 
ಹುರಿಗಡಲೆ : 1/2 ಕಪ್ 
ಶೇಂಗಾ : 1/2 ಕಪ್ 
ಬೆಳ್ಳುಳ್ಳಿ : 1 ಗಡ್ಡೆ (ಬೇಕಿದ್ದಲ್ಲಿ ಮಾತ್ರ)
ಉಪ್ಪು : 1/2 ಚಮಚ
ಸಕ್ಕರೆ ಪುಡಿ : 1/4 ಕಪ್ (ನಿಮ್ಮ ರುಚಿಗೆ ತಕ್ಕಷ್ಟು)

ಅಚ್ಚ ಮೆಣಸಿನ ಪುಡಿ : 2 ಚಮಚ 
ಅರಿಶಿನ ಪುಡಿ : 1/2 ಚಮಚ 
ಎಣ್ಣೆ : 5-6 ಚಮಚ 


ವಿಧಾನ :
ದಪ್ಪ ತಳದ ದೊಡ್ಡ ಪಾತ್ರೆಗೆ ಎಣ್ಣೆ ಹಾಕಿ ಕಾದ ಮೇಲೆ ಶೇಂಗಾ ಹಾಕಿ ಹುರಿದು, ಒಣ ಕೊಬ್ಬರಿ ಹಾಕಿ ಹುರಿಯಿರಿ. ಈಗ ಜಜ್ಜಿದ ಬೆಳ್ಳುಳ್ಳಿ ಹಾಕಿ ಹೊಂಬಣ್ಣ ಬರುವವರೆಗೆ ಹುರಿದು ಹುರಿಗಡಲೆ ಹಾಕಿ ಸ್ವಲ್ಪ ಹುರಿದು ಅದಕ್ಕೆ ಅರಿಶಿನ ಪುಡಿ, ಅಚ್ಚ ಮೆಣಸಿನ ಪುಡಿ ಹಾಕಿ ಉರಿ 
ಆರಿಸಿ. ಒಗ್ಗರಣೆ ತಣ್ಣಗಾದ ಮೇಲೆ ಅದಕ್ಕೆ ಉಪ್ಪು, ಸಕ್ಕರೆ ಪುಡಿ ಹಾಕಿ ಕಲಸಿ, ಮಂಡಕ್ಕಿ ಹಾಕಿ ಕಲಸಿ. ಮಂಡಕ್ಕಿ ಗರಿಗರಿ ಇಲ್ಲವಾದಲ್ಲಿ ಮತ್ತೆ ಸಣ್ಣ ಉರಿಯಲ್ಲಿ ಹುರಿಯಿರಿ. ಬಿಸಿ ಆರಿದ ಮೇಲೆ ಗಾಳಿಯಾಡದ ಡಬ್ಬದಲ್ಲಿ ತುಂಬಿಸಿಡಿ.  ಗರಿಗರಿಯಾದ ಮಂಡಕ್ಕಿ ಒಗ್ಗರಣೆ ಬಿಸಿ ಬಿಸಿ ಟೀ/ಕಾಫಿ ಜೊತೆ ಒಳ್ಳೆಯ ಸಂಗಾತಿ. 



ಸಲಹೆ: ಮಂಡಕ್ಕಿ ಗರಿ ಮಾಡಲು ಇನ್ನೊಂದು ಉಪಾಯವೆಂದರೆ ಶುಭ್ರವಾದ ಕಾಟನ್ ಬಟ್ಟೆ ಮೇಲೆ ಮಂಡಕ್ಕಿ ಹರವಿ ಅದರ ಮೇಲೆ ಇನ್ನೊಂದು ಕಾಟನ್ ಬಟ್ಟೆ ಮುಚ್ಚಿ 3-4 ಘಂಟೆ ಬಿಸಿಲಿನಲ್ಲಿ ಇಟ್ಟರೆ ಗರಿಗರಿಯಾಗುತ್ತದೆ. 

ಶುಕ್ರವಾರ, ಮಾರ್ಚ್ 23, 2018

ಮಂಡಕ್ಕಿ ಪಕೋಡ :


ಸಾಮಗ್ರಿಗಳು :
ಮಂಡಕ್ಕಿ (ಪ್ಲೈನ್ ಪುರಿ) : 4 ಕಪ್ 
ಆಲೂಗಡ್ಡೆ : 1 
ಈರುಳ್ಳಿ : 1 
ಕಡಲೆ ಹಿಟ್ಟು : ಸ್ವಲ್ಪ (1/2 ಕಪ್ ನಷ್ಟು)
ಸಣ್ಣ ಹೆಚ್ಚಿದ ಕೊತ್ತಂಬರಿ ಸೊಪ್ಪು : 2 ಚಮಚ 
ಆಮ್ಚೂರ್ ಪುಡಿ / ವಾಟೆ ಪುಡಿ : 1/2 ಚಮಚ 
ಅಚ್ಚ ಖಾರದಪುಡಿ : 1/2 ಚಮಚ 
ತುರಿದ ಶುಂಠಿ : 1/4 ಚಮಚ 
ಉಪ್ಪು: ರುಚಿಗೆ 
ಎಣ್ಣೆ : ಕರಿಯಲು 

ವಿಧಾನ :
ಮಂಡಕ್ಕಿಗೆ ನೀರು ಹಾಕಿ 1 ನಿಮಿಷ ನೆನೆಸಿ ನೀರು ಹಿಂಡಿ ತೆಗೆದು ಒಂದು ಬೌಲ್ ಗೆ ಹಾಕಿಕೊಳ್ಳಿ. ಇದಕ್ಕೆ ಆಲೂಗಡ್ಡೆ ಸಿಪ್ಪೆ ತೆಗೆದು ತುರಿದು ಹಾಕಿ. ನಂತರ ಈರುಳ್ಳಿ ಸಣ್ಣಗೆ ಹೆಚ್ಚಿ ಹಾಕಿ. ನಂತರ ಕೊತ್ತಂಬರಿ ಸೊಪ್ಪು, ಶುಂಠಿ, ಆಮಚೂರ್ ಪುಡಿ, ಖಾರದ ಪುಡಿ ಹಾಕಿಕೊಂಡು ಸ್ವಲ್ಪ ಸ್ವಲ್ಪವೇ ಕಡ್ಲೆ ಹಿಟ್ಟು ಹಾಕುತ್ತಾ ಕಲಸಿ. ಉಂಡೆಯಂತೆ ಕರಿಯಲು ಬರುವಷ್ಟು ಮಾತ್ರ ಕಡ್ಲೆ ಹಿಟ್ಟು ಹಾಕಬೇಕು. ಬೇಕೆನಿಸಿದಲ್ಲಿ  ಮಾತ್ರ ಸ್ವಲ್ಪ ನೀರು ಚಿಮುಕಿಸಿಕೊಂಡು ಕಲಸಿ. 

ನಂತರ ಪುಟ್ಟ ಪುಟ್ಟ ಉಂಡೆ ಮಾಡಿ ಸ್ವಲ್ಪ ತಟ್ಟಿ ಚಪ್ಪಟೆ ಮಾಡಿ ಕಾದ ಎಣ್ಣೆಯಲ್ಲಿ ಕರಿಯಿರಿ. ಗರಿಗರಿಯಾದ ಪಕೋಡಾವನ್ನು ಸಂಜೆ ಬಿಸಿ ಬಿಸಿ ಕಾಫಿ / ಟೀ ಜೊತೆ ಸವಿಯಿರಿ.



ಶುಕ್ರವಾರ, ಫೆಬ್ರವರಿ 23, 2018

ಉಪ್ಪಿಟ್ಟಿನ ಕಟ್ಲೆಟ್ : (By using leftover Upma)

ಬೆಳಿಗ್ಗೆ ತಿಂಡಿಗೆ ಮಾಡಿದ ಉಪ್ಪಿಟ್ಟು ಉಳಿದುಬಿಟ್ಟರೆ ಅದನ್ನು ಮತ್ತೆ ಮೂಸಿ ನೋಡುವವರೂ ಇರುವುದಿಲ್ಲ. ಹೆಂಗಸರು ಬಿಸಾಕಲು ಬೇಜಾರಾಗಿ ತಿನ್ನಬೇಕಾಗುತ್ತದೆ. ಆದರೆ ಉಳಿದ ಉಪ್ಪಿಟ್ಟಿನಿಂದ ಈ ಕಟ್ಲೆಟ್ ಮಾಡಿ ನೋಡಿ ಮನೆಯವರೆಲ್ಲಾ ಚಪ್ಪರಿಸಿಕೊಂಡು ಸವಿಯುತ್ತಾರೆ. ಮಕ್ಕಳಿಗಾದರೆ ಸ್ವಲ್ಪ ಖಾರ ಕಮ್ಮಿ ಹಾಕಿ ಮಾಡಿ ಮಕ್ಕಳೂ ಇಷ್ಟ ಪಟ್ಟು ತಿನ್ನುತ್ತಾರೆ. ಆಮೇಲೆ ದೊಡ್ಡವರಿಗೆ ಖಾರ ಹಾಕಿ ಮಾಡಿಕೊಡಿ. 

ಸಾಮಗ್ರಿಗಳು :
ಉಳಿದ ಉಪ್ಪಿಟ್ಟು : 1 ಕಪ್ 
ಬೇಯಿಸಿದ ಆಲೂಗಡ್ಡೆ : 2 ಮಧ್ಯಮ ಗಾತ್ರದ್ದು  
ಸಣ್ಣ ಹೆಚ್ಚಿದ ಮಿಶ್ರ ತರಕಾರಿ (ಕ್ಯಾರೆಟ್, ಕ್ಯಾಪ್ಸಿಕಂ, ಬೀನ್ಸ್) : 1/2 ಕಪ್ (ಉಪ್ಪಿಟ್ಟಿಗೆ ತರಕಾರಿ ಹಾಕದಿದ್ದರೆ ಇನ್ನು 1/4 ಕಪ್ ಜಾಸ್ತಿ ಬೇಕು) 
ಸಣ್ಣ ಹೆಚ್ಚಿದ ಈರುಳ್ಳಿ : 1 ಮಧ್ಯಮ ಗಾತ್ರದ್ದು 
ಸಣ್ಣ ಹೆಚ್ಚಿದ ಕೊತ್ತಂಬರಿ ಸೊಪ್ಪು : 2 ಟೇಬಲ್ ಚಮಚ 
ಶುಂಠಿ ಬೆಳ್ಳುಳ್ಳಿ ಪೇಸ್ಟ್ : 1 ಟೀ ಚಮಚ 
ಅಚ್ಚ ಖಾರದ ಪುಡಿ : 1/2 ಚಮಚ
ಗರಂ ಮಸಾಲಾ ಪುಡಿ :  1/4 ಟೀ ಚಮಚ 
ಲಿಂಬು ರಸ : 1 ಚಮಚ 
ಬ್ರೆಡ್ ಕ್ರಮ್ಸ್ ಅಥವಾ ಚಿರೋಟಿ ರವಾ : 1/2 - 3/4 ಕಪ್ 
ಎಣ್ಣೆ : ತವಾ ಫ್ರೈ ಮಾಡಲು
ಉಪ್ಪು: ರುಚಿಗೆ 

ವಿಧಾನ :
ಹೆಚ್ಚಿದ ತರಕಾರಿಗಳನ್ನು ಬೇಯಿಸಿಕೊಳ್ಳಿ. ಬ್ರೆಡ್ ಕ್ರಮ್ಸ್ ಗೆ ಎರಡು ಬ್ರೆಡ್ ಅನ್ನು ಚೂರು ಮಾಡಿ ಮಿಕ್ಸಿಗೆ ಹಾಕಿ ಪುಡಿ ಮಾಡಿಕೊಳ್ಳಬಹುದು, ಇಲ್ಲದಿದ್ದರೆ ಚಿರೋಟಿ ರವೆ ಆದರೂ ಆದೀತು. ಆಲೂಗಡ್ಡೆಯನ್ನು ನುಣ್ಣಗೆ ಮಸೆದು ಒಂದು ಪಾತ್ರೆಗೆ ಹಾಕಿಕೊಳ್ಳಿ. ಅದಕ್ಕೆ ಬ್ರೆಡ್ ಪುಡಿ / ಚಿರೋಟಿ ರವೆ, ಎಣ್ಣೆ ಬಿಟ್ಟು ಉಳಿದೆಲ್ಲ ಸಾಮಗ್ರಿಗಳನ್ನು ಹಾಕಿ ಚೆನ್ನಾಗಿ ಕಲಸಿಕೊಳ್ಳಿ.



 ಇದರಿಂದ ನಿಂಬೆ ಗಾತ್ರದ ಉಂಡೆ ಮಾಡಿಕೊಂಡು ಕಟ್ಲೆಟ್ ಆಕಾರಕ್ಕೆ ಚಪ್ಪಟೆಯಾಗಿ ತಟ್ಟಿಕೊಂಡು ಬ್ರೆಡ್ ಪುಡಿ ಅಥವಾ ಚಿರೋಟಿ ರವೆಯಲ್ಲಿ ಎರಡೂ ಕಡೆ ಚೆನ್ನಾಗಿ ಹೊರಳಿಸಿ ಕಾದ ತವಾ ಮೇಲೆ ಸ್ವಲ್ಪ ಎಣ್ಣೆ ಹಾಕಿ ಅದಕ್ಕೆ ತಟ್ಟಿಕೊಂಡ ಕಟ್ಲೆಟ್ ಹಾಕಿ, ಮೇಲಿಂದ ಮತ್ತೆ ಸ್ವಲ್ಪ ಎಣ್ಣೆ ಹಾಕಿ ಮುಚ್ಚಳ ಮುಚ್ಚಿ ಎರಡೂ ಕಡೆ ಬೇಯಿಸಿ (shallow fry). ಟೊಮೇಟೊ ಸಾಸ್ ಜೊತೆ ಸರ್ವ್ ಮಾಡಿ. 




ಶುಕ್ರವಾರ, ಜುಲೈ 14, 2017

ಬನ್ ಮಸಾಲಾ :

ಸಾಮಗ್ರಿಗಳು: 
ಬನ್ - 4,
ಈರುಳ್ಳಿ  - 2, 
ಟೊಮ್ಯಾಟೊ - 2,
ಸವತೆಕಾಯಿ - 1,
ಕ್ಯಾರೇಟ್ - 1, 
ಕ್ಯಾಬೇಜ್ - 2 ಎಲೆಗಳು, 
ಕೆ೦ಪು ಮೆಣಸಿನ ಪುಡಿ - 1 ಟೇ. ಚಮಚ (ನಿಮ್ಮ ರುಚಿಗೆ ಅನುಗುಣವಾಗಿ)
ಗರ೦ ಮಸಾಲಾ ಪೌಡರ್ - 1/2 ಟೀ.ಚಮಚ
ಉಪ್ಪು - ರುಚಿಗೆ ಅನುಗುಣವಾಗಿ
ಎಣ್ಣೆ  - 1 ಟೇ. ಚಮಚ, ಬೆಣ್ಣೆ 







ವಿಧಾನ :ಈರುಳ್ಳಿ, ಕ್ಯಾಬೇಜ್ & ಟೊಮ್ಯಾಟೊವನ್ನು ಉದ್ದುದ್ದಕ್ಕೆ ತೆಳ್ಳಗೆ ಹೆಚ್ಚಿಕೊಳ್ಳಿ. ಕ್ಯಾರೇಟ್ ತುರಿದಿಟ್ಟುಕೊಳ್ಳಬೇಕು, ಸವತೆಕಾಯಿಯನ್ನು ತೆಳ್ಳಗೆ ಗಾಲಿ ಗಾಲಿ ಯಾಗಿ ಕತ್ತರಿಸ ಬೇಕು.  ಒ೦ದು ಬಾಣಲೆಗೆ ಎಣ್ಣೆ ಹಾಕಿ ಅದು ಕಾದ ಮೇಲೆ ಹೆಚ್ಚಿಟ್ಟ ಈರುಳ್ಳಿ ಹಾಕಿ ಫ್ರೈ ಮಾಡಿ ಹಾಗೆ ಟೊಮ್ಯಾಟೊ ಹಾಕಿ ಈಗ ಉಪ್ಪು, ಕೆ೦ಪು ಮೆಣಸಿನ ಪುಡಿ, ಗರ೦ ಮಸಾಲಾ ಪೌಡರ್ ಹಾಕಿ ೫ ನಿಮಿಷ  ಫ್ರೈ ಮಾಡಿ ಬದಿಗಿರಿಸಿ. ಸಣ್ಣ ಉರಿಯಲ್ಲಿ ಕಾವಲಿ ಇಟ್ಟು ಅದಕ್ಕೆ ಬೆಣ್ಣೆ ಸವರಿ ಬನ್ ಮಧ್ಯದಲ್ಲಿ ಕತ್ತರಿಸಿ (ಚಿತ್ರದಲ್ಲಿ ತೋರಿಸಿದ೦ತೆ)ಎರಡು ಕಡೆ ಸ್ವಲ್ಪ ರೋಸ್ಟ ಮಾಡಿ ನ೦ತರ ಮಧ್ಯದಲ್ಲಿ ಈರುಳ್ಳಿ ಟೊಮ್ಯಾಟೊ ಮಸಾಲೆ ಹಾಕಿ ಹೆಚ್ಚಿಟ್ಟ ಸವತೆಕಾಯಿ, ಕ್ಯಾರೇಟ್, ಕ್ಯಾಬೇಜ್ ಹಾಕಿ ಮತ್ತೊ೦ದು ಬನ್ ಭಾಗವನ್ನು ಮುಚ್ಚಿಟ್ಟರೆ ಮಸಾಲ ಬನ್ ಸವಿಯಲು ಸಿದ್ಧ.

(ಸೂಚನೆ: ಆಲು ಕಟ್ಲೆಟ್ ಮಾಡಿಕೊ೦ಡು ಇದರ ಮಧ್ಯ ಇಟ್ಟಲ್ಲಿ ಅದೆ ಬರ್ಗರ್, ವಿಧಾನ ಇನ್ನೊಮ್ಮೆ ಹೇಳುವೆ)

ಶುಕ್ರವಾರ, ಜುಲೈ 7, 2017

ಬೇಬಿ ಕಾರ್ನ್ ಮಂಚೂರಿಯನ್ ವಿಥ್ ಗ್ರೇವಿ :

ಸಾಮಗ್ರಿಗಳು :
ಅರ್ಧ ಇಂಚು ಉದ್ದ ಹೆಚ್ಚಿದ ಬೇಬಿ ಕಾರ್ನ್ : 3 ಕಪ್ 
ಉದ್ದ ಹೆಚ್ಚಿದ ಕ್ಯಾಪ್ಸಿಕಂ : 1 ಕಪ್ 
ಸಣ್ಣ ಹೆಚ್ಚಿದ ಸ್ಪ್ರಿಂಗ್ ಆನಿಯನ್ : 2 ಕಪ್ (ಅಥವಾ ಉದ್ದ ಹೆಚ್ಚಿದ ಈರುಳ್ಳಿ: 2 ಕಪ್)
ತುಂಬಾ ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ : 1 ಟೇಬಲ್ ಚಮಚ 
ತುಂಬಾ ಸಣ್ಣಗೆ ಹೆಚ್ಚಿದ ಶುಂಠಿ : 1/2 ಟೇಬಲ್ ಚಮಚ 
ತುಂಬಾ ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ : 1 ಟೇಬಲ್ ಚಮಚ 
ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು : 2 ಟೇಬಲ್ ಚಮಚ 
ಮೈದಾ ಹಿಟ್ಟು : 1 ಕಪ್ 
ಕಾರ್ನ್ ಫ್ಲೋರ್ : 3/4 ಕಪ್ 
ಅಚ್ಚ ಮೆಣಸಿನ ಪುಡಿ : 1 ಚಮಚ 
ಟೊಮೇಟೊ ಸಾಸ್ : 2 ಟೇಬಲ್ ಚಮಚ 
ಸೋಯಾ ಸಾಸ್ : 1 ಟೇಬಲ್ ಚಮಚ  
ಗ್ರೀನ್ ಚಿಲ್ಲಿ ಸಾಸ್ : 3 ಟೇಬಲ್ ಚಮಚ 
ಸಕ್ಕರೆ : 1/4 ಚಮಚ 
ಲಿಂಬು ರಸ : 1/2 ಚಮಚ (ಅಥವಾ ವಿನೆಗರ್ ಸ್ವಲ್ಪ) 
ಉಪ್ಪು : ರುಚಿಗೆ 
ಕರಿಯಲು ಮತ್ತು ಹುರಿಯಲು : ಎಣ್ಣೆ 

ವಿಧಾನ :
ಒಂದು ಚಮಚ ಕಾರ್ನ್ ಫ್ಲೋರ್ ಅನ್ನು ಒಂದು ಕಪ್ ಗೆ ಹಾಕಿ ಕಾಲು ಕಪ್ ನೀರು ಹಾಕಿ ಕಲಕಿಡಿ. ಕರಿಯಲು ಎಣ್ಣೆ ಕಾಯಲು ಇಟ್ಟುಕೊಳ್ಳಿ. ಉಳಿದ ಕಾರ್ನ್ ಫ್ಲೋರ್ ಮತ್ತು ಮೈದಾ ಸೇರಿಸಿ ಅದಕ್ಕೆ ಉಪ್ಪು, ಮೆಣಸಿನ ಪುಡಿ, ನೀರು ಹಾಕಿ ಗಂಟಿಲ್ಲದಂತೆ ಕಲಸಿ. ಕಲಸಿದ ಹಿಟ್ಟು ಬಜ್ಜಿ ಹಿಟ್ಟಿನಕಿಂತ ತೆಳ್ಳಗಿರಲಿ. ಇದಕ್ಕೆ ಹೆಚ್ಚಿಟ್ಟ ಬೇಬಿ ಕಾರ್ನ್ ಹಾಕಿ ಕಲಸಿಕೊಂಡು ಕಾದ ಎಣ್ಣೆಯಲ್ಲಿ ಬಿಡಿ ಬಿಡಿಯಾಗುವಂತೆ ಬಿಟ್ಟು ಗರಿ ಗರಿಯಾಗಿ ಕರಿದುಕೊಳ್ಳಿ. ಅಗಲವಾದ ಪ್ಯಾನ್ ಗೆ 3-4 ಟೇಬಲ್ ಚಮಚ ಎಣ್ಣೆ ಹಾಕಿ ಅದಕ್ಕೆ ಸಣ್ಣಗೆ ಹೆಚ್ಚಿಕೊಂಡ ಶುಂಠಿ ಮತ್ತು ಬೆಳ್ಳುಳ್ಳಿ ಹಾಕಿ ಫ್ರೈ ಮಾಡಿ. ಇದಕ್ಕೆ ಹೆಚ್ಚಿಕೊಂಡ ಕ್ಯಾಪ್ಸಿಕಂ ಹಾಕಿ ಸ್ವಲ್ಪ ಫ್ರೈ ಮಾಡಿಕೊಳ್ಳಿ. ನಂತರ ಹೆಚ್ಚಿದ ಸ್ಪ್ರಿಂಗ್ ಆನಿಯನ್ ಅಲ್ಲಿ 2 ಚಮಚ ತೆಗೆದಿಟ್ಟು ಉಳಿದದ್ದನ್ನು ಹಾಕಿ ಒಮ್ಮೆ ಫ್ರೈ ಮಾಡಿ. ಇದಕ್ಕೆ ಸೋಯಾ ಸಾಸ್, ಟೊಮೇಟೊ ಸಾಸ್, ಗ್ರೀನ್ ಚಿಲ್ಲಿ ಸಾಸ್, ಸ್ವಲ್ಪ ಉಪ್ಪು, ಸಕ್ಕರೆ, ಲಿಂಬು ರಸ / ವಿನೆಗರ್ ಎಲ್ಲವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇದಕ್ಕೆ ಮೊದಲೇ ಕಲಕಿಟ್ಟ ಕಾರ್ನ್ ಫ್ಲೋರ್ ನೀರನ್ನು ಹಾಕಿ ಕೈ ಬಿಡದೆ ಕಲಕುತ್ತಿರಿ ಗ್ರೇವಿ ತುಂಬಾ ದಪ್ಪಗಾದರೆ ಇನ್ನು ಸ್ವಲ್ಪ ನೀರು ಹಾಕಿಕೊಂಡು ಒಂದೆರಡು ಕುದಿ ಬರುವವರೆಗೆ ಕಲಕುತ್ತಿರಿ. ನಂತರ ಕರಿದಿಟ್ಟುಕೊಂಡ ಬೇಬಿ ಕಾರ್ನ್ ಹಾಕಿ ಮಿಕ್ಸ್ ಮಾಡಿ ಉರಿ ಆರಿಸಿ. ಈಗ ಕೊತ್ತಂಬರಿ ಸೊಪ್ಪು ಮತ್ತು ಉಳಿದ ಸ್ಪ್ರಿಂಗ್ ಆನಿಯನ್ ಹಾಕಿ ಸರ್ವ್ ಮಾಡಿ. 

ಸಲಹೆ :  ಸ್ಪ್ರಿಂಗ್ ಆನಿಯನ್ ಇಲ್ಲದಿದ್ದಲ್ಲಿ ಈರುಳ್ಳಿ ಉದ್ದುದ್ದ ಹೆಚ್ಚಿ, ಬೆಳ್ಳುಳ್ಳಿ ಫ್ರೈ ಆದಮೇಲೆ ಹಾಕಿಕೊಂಡು ಫ್ರೈ ಮಾಡಿಕೊಳ್ಳಬೇಕು. 

ಶುಕ್ರವಾರ, ಮೇ 19, 2017

ಅವಲಕ್ಕಿ ಪಕೋಡ

ಸಾಮಗ್ರಿಗಳು: 
ದಪ್ಪ ಅವಲಕ್ಕಿ - 1/4 ಕೆ.ಜಿ
ಕಡಲೆಹಿಟ್ಟು,  - 2 ಟೇ. ಚಮಚ
ಈರುಳ್ಳಿ,  - 2
ಕೊತ್ತ೦ಬರಿ ಸೊಪ್ಪು
ಒಣಮೆಣಸಿನ ಪುಡಿ  - 1 ಚಮಚ
ಜೀರಿಗೆ, ಓಮು,  - ತಲಾ1 ಟೀ
ಉಪ್ಪು - ರುಚಿಗೆ ತಕ್ಕಷ್ಟು
ಎಣ್ಣೆ- ಕರಿಯಲು.




ವಿಧಾನ : ದಪ್ಪ ಅವಲಕ್ಕಿಯನ್ನು ನೀರಿನಲ್ಲಿ ತೊಳೆದು ಸ್ವಲ್ಪ ನೀರು ಹಾಕಿ ನಿಮಿಶ ನೆನೆಸಿಡಿ.ಅವಲಕ್ಕಿ ಮೆತ್ತಗಾದಮೇಲೆ ಅದಕ್ಕೆ ಕಡಲೆಹಿಟ್ಟು, ಉದ್ದುದ್ದ ಹೆಚ್ಚಿದ ಈರುಳ್ಳಿ, ಒಣಮೆಣಸಿನ ಪುಡಿ, ಜೀರಿಗೆ, ಓಮು, ಸಣ್ಣಗೆ ಹೆಚ್ಚಿದ ಕೊತ್ತ೦ಬರಿ ಸೊಪ್ಪು, ಉಪ್ಪು ಹಾಕಿ ಸ್ವಲ್ಪ ನೀರು ಹಾಕಿ ಕಲೆಸಿಕೊಳ್ಳಿ. ಈಗ ಕಲೆಸಿಟ್ಟ ಹಿಟ್ಟಿನ ರುಚಿ ನೋಡಿಕೊ೦ಡು ಬೇಕಾದಲ್ಲಿ ಉಪ್ಪು/ಖಾರ ಸೇರಿಸಿ. (ಬಜ್ಜಿ ಹಿಟ್ಟಿಗಿ೦ತ ಸ್ವಲ್ಪ ಗಟ್ಟಿ ಇರಲಿ). ಬಾಣಲೆಯಲ್ಲಿ ಎಣ್ಣೆ ಹಾಕಿ ಕಾದ ನ೦ತರ ಈ ಹಿಟ್ಟನ್ನು ಬಜ್ಜಿ ಥರ ಎಣ್ಣೆಯಲ್ಲಿ ಹೊ೦ಬಣ್ಣ ಬರುವವರೆಗೆ ಕರಿದರೆ ಗರಿ ಗರಿಯಾದ ಅವಲಕ್ಕಿ ಪಕೋಡ ಸವಿಯಲು ಸಿದ್ದ.

ಗುರುವಾರ, ಮಾರ್ಚ್ 30, 2017

ಅವಲಕ್ಕಿ ಬಾತ್ :

ಸಾಮಗ್ರಿಗಳು :
ದಪ್ಪ ಅವಲಕ್ಕಿ- 1 ಕಪ್,
ಹಸಿ ಬಟಾಣಿ - 1/4 ಕಪ್,
ಈರುಳ್ಳಿ - 1,
ಟೊಮೇಟೊ - 1 (ಬೇಕಿದ್ದಲ್ಲಿ ಮಾತ್ರ) 
ಹಸಿಮೆಣಸಿನಕಾಯಿ - 1,
ತೆಂಗಿನ ತುರಿ - 4 ಚಮಚ,
ರಸಂ ಪುಡಿ - 1/2 ಚಮಚ,
ಅರಿಶಿನ ಪುಡಿ - 1/4 ಚಮಚ,
ಎಣ್ಣೆ - 4-5 ಚಮಚ,
ಉದ್ದಿನ ಬೇಳೆ - 1/2 ಚಮಚ,
ಸಾಸಿವೆ - 1/4 ಚಮಚ,
ಕರಿಬೇವು - 6-8 ಎಲೆಗಳು,
ಸಕ್ಕರೆ- 1 ಚಮಚ,
ಉಪ್ಪು - ರುಚಿಗೆ 

ವಿಧಾನ :
ಮೊದಲು ಅವಲಕ್ಕಿಯನ್ನು ತೊಳೆದು, ನೀರು ಹಾಕಿ 15-20 ನಿಮಿಷ ನೆನೆಸಿಡಿ. ಮೆತ್ತಗಾಗಬೇಕು, ಆದರೆ ತುಂಬಾ ಗಂಜಿಯಾಗುವಷ್ಟು ಮೆತ್ತಗಾಗಬಾರದು. ಈರುಳ್ಳಿ ಮತ್ತು ಟೊಮ್ಯಾಟೊವನ್ನು ಸಣ್ಣಗೆ ಹೆಚ್ಚಿಕೊಳ್ಳಿ. ಹಸಿಮೆಣಸಿನಕಾಯಿಯನ್ನು ಉದ್ದ ಸೀಳಿಕೊಳ್ಳಿ.  ಹಸಿಬಟಾಣಿಗೆ ನೀರು ಮತ್ತು ಚಿಟಿಕೆ ಉಪ್ಪು ಹಾಕಿ ಬೇಯಿಸಿಕೊಳ್ಳಿ. ನೆಂದ ಅವಲಕ್ಕಿಯ ನೀರನ್ನು ಪೂರ್ತಿಯಾಗಿ ಬಸಿದುಕೊಂಡು ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಸಕ್ಕರೆ ಹಾಕಿ ಕಲಸಿಟ್ಟುಕೊಳ್ಳಿ. ಬಾಣಲೆಯನ್ನು ಒಲೆಯ ಮೇಲಿಟ್ಟು ಎಣ್ಣೆ ಹಾಕಿ ಕಾದ ಮೇಲೆ ಉದ್ದಿನ ಬೇಳೆ ಹಾಕಿ, ಅದು ಹೊಂಬಣ್ಣ ಬಂದ ಮೇಲೆ ಸಾಸಿವೆ ಹಾಕಿ ಚಿಟಪಟಾಯಿಸಿ. ಇದಕ್ಕೆ ಹಸಿಮೆಣಸಿನಕಾಯಿ, ಕರಿಬೇವು ಹಾಕಿ ಒಮ್ಮೆ ಹುರಿದು, ಹೆಚ್ಚಿದ ಈರುಳ್ಳಿ ಹಾಕಿ ಫ್ರೈ ಮಾಡಿ. ನಂತರ ಹೆಚ್ಚಿದ ಟೊಮೇಟೊ ಹಾಕಿ ಮೆತ್ತಗಾಗುವವರೆಗೆ ಹುರಿಯಿರಿ. ಇದಕ್ಕೆ ಬೇಯಿಸಿಕೊಂಡ ಬಟಾಣಿ, ತೆಂಗಿನತುರಿ, ಅರಿಶಿನ ಪುಡಿ, ರಸಂ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಅವಲಕ್ಕಿ ಹಾಕಿ ಕಲಸಿ. ಬೇಕಿದ್ದಲ್ಲಿ ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿದರೆ ಬಿಸಿ ಬಿಸಿ ಅವಲಕ್ಕಿ ರೆಡಿ. ಸರ್ವ್ ಮಾಡುವಾಗ ಗರಿ ಗರಿ ಸೇವ್ ಅಥವಾ mixture ಅನ್ನು ಮೇಲಿಂದ ಉದುರಿಸಿ ಕೊಡಿ. ಇದು ಬೆಳಗ್ಗಿನ ಉಪಹಾರಕ್ಕೆ ಅಥವಾ ಸಂಜೆಯ ಟೀ / ಕಾಫೀ ಜೊತೆ ಕೂಡ ಮಾಡಿಕೊಳ್ಳಬಹುದು. 

ಶುಕ್ರವಾರ, ಮಾರ್ಚ್ 17, 2017

ಹಲಸಿನ ಕಾಯಿ ಮಂಚೂರಿ :

ಸಾಮಗ್ರಿಗಳು:
ಹಲಸಿನ ಕಾಯಿ (ಸಿಪ್ಪೆ, ಮಧ್ಯದ ಗಟ್ಟಿ ಭಾಗ ತೆಗೆದು ಹೆಚ್ಚಿದ್ದು) - 4 ಕಪ್
ಕಾರ್ನ್ ಫ್ಲೋರ್ : 6-7 ಟೇಬಲ್ ಚಮಚ ಮತ್ತು ಅರ್ಧ ಚಮಚ ಫ್ರೈ ಮಾಡಲು
ಮೈದಾ : 2 ಟೇಬಲ್ ಚಮಚ
ಅಚ್ಚ ಖಾರದ ಪುಡಿ : 1 ಟೀ ಚಮಚ
ಮೊಸರು : 2 ಟೇಬಲ್ ಚಮಚ
ಶುಂಠಿ ಬೆಳ್ಳುಳ್ಳಿ ಪೇಸ್ಟ್: 1 ಟೀ ಚಮಚ
ಕ್ಯಾಪ್ಸಿಕಂ : 1
ಈರುಳ್ಳಿ : 1
ಈರುಳ್ಳಿ ಗಿಡ (sprin onion) : 1/2 ಕಪ್ ಹೆಚ್ಚಿದ್ದು
ಸಣ್ಣದಾಗಿ ಹೆಚ್ಚಿದ ಶುಂಠಿ : 1 ಟೀ ಚಮಚ
ಸಣ್ಣದಾಗಿ ಹೆಚ್ಚಿದ ಬೆಳ್ಳುಳ್ಳಿ : 1 ಟೀ ಚಮಚ
ಸಣ್ಣದಾಗಿ ಹೆಚ್ಚಿದ ಹಸಿಮೆಣಸಿನ ಕಾಯಿ : 1 ಟೀ ಚಮಚ
ಸಣ್ಣದಾಗಿ ಹೆಚ್ಚಿದ ಕೊತ್ತಂಬರಿ ಸೊಪ್ಪು : 1 ಟೇಬಲ್ ಚಮಚ
ಸೋಯಾ ಸಾಸ್ :1  ಟೀ ಚಮಚ
ಟೊಮೇಟೊ ಸಾಸ್ : 1 ಟೇಬಲ್ ಚಮಚ
ರೆಡ್ ಚಿಲ್ಲಿ ಸಾಸ್ / ಗ್ರೀನ್ ಚಿಲ್ಲಿ ಸಾಸ್ : 1 ಟೇಬಲ್ ಚಮಚ
ಸಕ್ಕರೆ : 1/4 ಚಮಚ
ಲಿಂಬು ರಸ : 1/2 ಚಮಚ
ಉಪ್ಪು : ರುಚಿಗೆ
ಎಣ್ಣೆ : ಕರಿಯಲು ಮತ್ತು ಫ್ರೈ ಮಾಡಲು

ವಿಧಾನ :
ಹಲಸಿನಕಾಯಿ ಸಿಪ್ಪೆ ಮತ್ತು ಮಧ್ಯದ ಗಟ್ಟಿ ಭಾಗ (ಮೂಗು ಎನ್ನುತ್ತಾರೆ ಅದನ್ನು) ತೆಗೆದು ಮಂಚೂರಿ ಗಾತ್ರಕ್ಕೆ ಹೆಚ್ಚಿಕೊಳ್ಳಿ ಮತ್ತು ಇದನ್ನು ಕುಕ್ಕರ್ ನಲ್ಲಿ ಇಟ್ಟು 2-3 ವಿಶಲ್ ಕೂಗಿಸಿ ಬೇಯಿಸಿಟ್ಟುಕೊಳ್ಳಿ. 

ಮೊಸರಿಗೆ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಸ್ವಲ್ಪ ಉಪ್ಪು  ಹಾಕಿ ಕಲಸಿ ಹೆಚ್ಚಿದ ಹಲಸಿನಕಾಯಿಗೆ ಹಾಕಿ ಚೆನ್ನಾಗಿ ಕಲಸಿ ಅರ್ಧ ಗಂಟೆ ಫ್ರಿಡ್ಜ್ ನಲ್ಲಿಡಿ. 


ಈರುಳ್ಳಿ ಮತ್ತು ಕ್ಯಾಪ್ಸಿಕಂ ಅನ್ನು ಉದ್ದುದ್ದ ಹೆಚ್ಚಿಕೊಳ್ಳಿ. ಒಂದು ಕಡೆ ಎಣ್ಣೆ ಕಾಯಲು ಇಟ್ಟುಕೊಂಡು, ಇತ್ತ  ಕಾರ್ನ್ ಫ್ಲೋರ್ ಗೆ ಮೈದಾ, ಸ್ವಲ್ಪ ಉಪ್ಪು, ಅಚ್ಚ ಖಾರದ ಪುಡಿ, ನೀರು ಸೇರಿಸಿ ಗಂಟಿಲ್ಲದೇ ಕಲಸಿಕೊಳ್ಳಿ. ಹಿಟ್ಟಿನ ಮಿಶ್ರಣ ಮಂಚೂರಿ ಕರಿಯುವಷ್ಟು ತೆಳ್ಳಗಿರಲಿ. 

ಇದಕ್ಕೆ ತಯಾರಿಸಿಟ್ಟುಕೊಂಡ ಹಲಸಿನ ಕಾಯಿ ಹೋಳುಗಳನ್ನು ಹಾಕಿ ಅದ್ದಿ  ಕಾದ ಎಣ್ಣೆಯಲ್ಲಿ, ಸಣ್ಣ ಉರಿಯಲ್ಲಿ ಗರಿಗರಿಯಾಗಿ ಕರಿಯಿರಿ.

 ಈಗ ಒಂದು ಬಾಣಲೆಗೆ ೪-೫ ಚಮಚ ಎಣ್ಣೆ ಹಾಕಿ ಕಾದ ನಂತರ ಹೆಚ್ಚಿದ ಬೆಳ್ಳುಳ್ಳಿ, ಶುಂಠಿ ಮತ್ತು ಹಸಿಮೆಣಸಿನ ಕಾಯಿ ಹಾಕಿ ಸ್ವಲ್ಪ ಫ್ರೈ ಮಾಡಿ, ಇದಕ್ಕೆ ಈರುಳ್ಳಿ ಮತ್ತು ಕ್ಯಾಪ್ಸಿಕಂ ಹಾಕಿ ಒಂದು ನಿಮಿಷ ಫ್ರೈ ಮಾಡಿ. ನಂತರ ಒನ್ನೊಂದಾಗಿ ಸೋಯಾ ಸಾಸ್, ಟೊಮೇಟೊ ಮತ್ತು ಚಿಲ್ಲಿ ಸಾಸ್ ಹಾಕಿ ಒಮ್ಮೆ ಮಿಕ್ಸ್ ಮಾಡಿ. ಅರ್ಧ ಚಮಚ ಕಾರ್ನ್ ಫ್ಲೋರ್ ಅನ್ನು ಕಾಲು ಕಪ್ ನೀರಿಗೆ ಹಾಕಿ ಗಂಟಿಲ್ಲದಂತೆ ಕಲಸಿಕೊಂಡು ಬಾಣಲೆಯಲ್ಲಿರುವ ಮಿಶ್ರಣಕ್ಕೆ ಹಾಕಿ ಚೆನ್ನಾಗಿ ಕಲಕುತ್ತಾ ಸಕ್ಕರೆ ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಮಿಶ್ರಣ ಸ್ವಲ್ಪ ದಪ್ಪಗಾದಾಗ ಕರಿದಿಟ್ಟ ಹಲಸಿನಕಾಯಿ, ಕೊತ್ತಂಬರಿ ಸೊಪ್ಪು, ಹೆಚ್ಚಿದ ಈರುಳ್ಳಿ ಗಿಡ (spring onion) ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಉರಿ ಆರಿಸಿ. ಬಿಸಿ ಬಿಸಿ ಹಲಸಿನಕಾಯಿ ಮಂಚೂರಿ ಸವಿದು ನೋಡಿ. 

ಸಲಹೆ :
ಪ್ರತಿ ಹಂತದಲ್ಲೂ ಉಪ್ಪು ಹಾಕುವುದರಿಂದ ಸರಿಯಾಗಿ ನೋಡಿಕೊಂಡು ಹಾಕಿ. 






ಶುಕ್ರವಾರ, ಆಗಸ್ಟ್ 19, 2016

ಇಡ್ಲಿ ಮಂಚೂರಿಯನ್ :

ಬೆಳಿಗ್ಗೆ ತಿಂಡಿಗೆ ಮಾಡಿದ ಇಡ್ಲಿ ಉಳಿದುಬಿಟ್ಟರೆ ಮತ್ತೆ ಅದನ್ನು ತಿನ್ನಲು ಬೇಜಾರು. ಅಂತಹ ಸಮಯದಲ್ಲಿ ಉಳಿದ ಇಡ್ಲಿಯಿಂದ ಮಂಚೂರಿಯನ್ ಮಾಡಿಕೊಂಡು ಸಾಯಂಕಾಲಕ್ಕೆ ಸ್ನಾಕ್ಸ್ ತಿನ್ನಬಹುದು. ನೀವೂ ಟ್ರೈ ಮಾಡಿ ನೋಡಿ. 

ಸಾಮಗ್ರಿಗಳು:
ತಣ್ಣಗಾದ ಇಡ್ಲಿ : 8-10 (ಮಧ್ಯಮ ಗಾತ್ರದ್ದು / ಇಡ್ಲಿ ಪ್ಲೇಟ್ ನಲ್ಲಿ ಮಾಡಿರುವಂತದ್ದು)
ಮೈದಾ ಹಿಟ್ಟು : 4 ಟೇಬಲ್ ಚಮಚ
ಕಾರ್ನ್ ಫ್ಲೋರ್ : 2 ಟೇಬಲ್ ಚಮಚ 
ಅಚ್ಚ ಖಾರದ ಪುಡಿ : 1/2 ಟೀ ಚಮಚ 
ಕ್ಯಾಪ್ಸಿಕಂ : 1
ಈರುಳ್ಳಿ : 1
ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ : 1 ಟೇಬಲ್ ಚಮಚ 
ಸಣ್ಣಗೆ ಹೆಚ್ಚಿದ ಶುಂಠಿ : 1/2 ಟೇಬಲ್ ಚಮಚ 
ಕೊತ್ತಂಬರಿ ಸೊಪ್ಪು : 1 ಟೇಬಲ್ ಚಮಚ 
ಸೋಯಾ ಸಾಸ್ : 1/2 ಟೀ ಚಮಚ 
ಗ್ರೀನ್ ಚಿಲ್ಲಿ ಸಾಸ್ : 2-3 ಟೀ ಚಮಚ 
ಟೊಮೇಟೊ ಸಾಸ್: 2 ಟೀ ಚಮಚ 
ವಿನೆಗರ್ ಅಥವಾ ಲಿಂಬುರಸ : 1/2 ಟೀ ಚಮಚ  
ಎಣ್ಣೆ : ಕರಿಯಲು 
ಉಪ್ಪು : ರುಚಿಗೆ 

ವಿಧಾನ :
ತಣ್ಣಗಾದ ಇಡ್ಲಿಯನ್ನು ಸಣ್ಣ ಸಣ್ಣ ಚೂರುಗಳಾಗಿ ಕತ್ತರಿಸಿ (like paneer cubes). ಕ್ಯಾಪ್ಸಿಕಂ, ಈರುಳ್ಳಿಯನ್ನು ಉದ್ದುದ್ದ ಹೆಚ್ಚಿಕೊಳ್ಳಿ. ಒಲೆಯ ಮೇಲೆ ಕರಿಯಲು ಎಣ್ಣೆ ಕಾಯಲು ಇಟ್ಟುಕೊಳ್ಳಿ.  ಮೈದಾ, ಕಾರ್ನ್ ಫ್ಲೋರ್, ಚಿಟಿಕೆ ಉಪ್ಪು, ಅಚ್ಚ ಖಾರದ ಪುಡಿ ಮತ್ತು ನೀರು ಹಾಕಿ ಗಂಟಿಲ್ಲದಂತೆ ತೆಳ್ಳಗೆ ಕಲಸಿಕೊಳ್ಳಿ. ಇದು ಇಡ್ಲಿಗೆ ತೆಳುವಾಗಿ ಅಂಟುವಷ್ಟು ತೆಳ್ಳಗಿರಲಿ.   ಕತ್ತರಿಸಿದ ಇಡ್ಲಿ ಚೂರುಗಳನ್ನು ಈ ಹಿಟ್ಟಿನಲ್ಲಿ ಅದ್ದಿ ಕಾದ ಎಣ್ಣೆಯಲ್ಲಿ ಬಿಟ್ಟು ಮಧ್ಯಮ ಉರಿಯಲ್ಲಿ ಚೆನ್ನಾಗಿ ಕರಿಯಿರಿ. ಈ ಕರಿದ ಇಡ್ಲಿ ಮೇಲಿನ ಭಾಗ ಗರಿಯಾಗಿ, ಒಳಗೆ ಮೆತ್ತಗಿರುತ್ತದೆ. 

ನಂತರ ಇನ್ನೊಂದು ಬಾಣಲೆಗೆ ಈ ಕರಿದ ಎಣ್ಣೆಯನ್ನೇ 4 ಚಮಚ ಹಾಕಿ ಅದಕ್ಕೆ ಹೆಚ್ಚಿದ ಶುಂಠಿ, ಬೆಳ್ಳುಳ್ಳಿ ಹಾಕಿ ಸ್ವಲ್ಪ ಫ್ರೈ ಮಾಡಿ, ಹೆಚ್ಚಿದ ಈರುಳ್ಳಿ, ಕ್ಯಾಪ್ಸಿಕಂ ಹಾಕಿ ಅರ್ಧ ನಿಮಿಷ ಹುರಿಯಿರಿ. ನಂತರ ಇದಕ್ಕೆ ಅರ್ಧ ಟೀ ಚಮಚದಷ್ಟು ಉಪ್ಪು, ಸೋಯಾ ಸಾಸ್, ಗ್ರೀನ್ ಚಿಲ್ಲಿ ಸಾಸ್, ಟೊಮೇಟೊ ಸಾಸ್, ಲಿಂಬು ರಸ / ವಿನೆಗರ್ ಗಳನ್ನೂ ಒಂದೊಂದಾಗಿ ಹಾಕುತ್ತ ಚೆನ್ನಾಗಿ ಮಿಕ್ಸ್ ಮಾಡಿ. ಈಗ ಕರಿದಿಟ್ಟ ಇಡ್ಲಿಯನ್ನು ಹಾಕಿ ಸರಿಯಾಗಿ ಮಿಕ್ಸ್ ಮಾಡಿ, ಕೊತ್ತಂಬರಿ ಸೊಪ್ಪು ಹಾಕಿ ಬಿಸಿ ಬಿಸಿ  ಇಡ್ಲಿ ಮಂಚೂರಿಯನ್ ಸರ್ವ್ ಮಾಡಿ.  







ಸಲಹೆ: 
1) ಈರುಳ್ಳಿ ಗಿಡವನ್ನೂ (spring onion) ಸಹ ಸಣ್ಣಗೆ ಹೆಚ್ಚಿ ಸ್ವಲ್ಪ ಫ್ರೈ ಮಾಡಲು ಹಾಕಿ , ಸ್ವಲ್ಪ ಮೇಲಿಂದ ಹಸಿಯಾಗಿ ಹಾಕಿ ಸರ್ವ್ ಮಾಡಬಹುದು. 
2) ಇಡ್ಲಿಗೆ ಉಪ್ಪು ಹಾಕಿರುವುದರಿಂದ ಉಪ್ಪು ಹಾಕುವಾಗ ಎಚ್ಚರವಿರಲಿ. 
3) ಯಾವುದೇ ಇಡ್ಲಿಯಿಂದ ಕೂಡ ಮಾಡಬಹುದು. ನಾ  ಕೊಟ್ಟಿರುವ ಅಳತೆಗೆ  ನಾನು ಇಡ್ಲಿ ಪ್ಲೇಟ್ ನ ಇಡ್ಲಿ ಎಂದು ಹಾಕಿದ್ದೇನಷ್ಟೆ. 

ಶುಕ್ರವಾರ, ಜುಲೈ 22, 2016

ದೊಡ್ಡಪತ್ರೆ ಸೊಪ್ಪಿನ ವಡೆ :

ಗೆಳತಿಯೊಬ್ಬಳಿಂದ ಕಲಿತ ರೆಸಿಪಿ ಇದು... ಈ ಮಳೆಯ ವಾತಾವರಣಕ್ಕೆ, ಸಂಜೆ ಟೀ/ ಕಾಫೀ ಜೊತೆ ಒಳ್ಳೆಯ ಕಾಂಬಿನೇಷನ್..... 

ಸಾಮಗ್ರಿಗಳು:
ದೊಡ್ಡಪತ್ರೆ ಎಲೆಗಳು : 8-10
ಜೀರಿಗೆ: 1 ಚಮಚ
ಎಳ್ಳು : 1 ಚಮಚ 
ತೆಂಗಿನ ತುರಿ : 1/2 ಕಪ್ 
ಶೇಂಗಾ: 1/4 ಕಪ್ 
ಉಪ್ಪಿಟ್ಟಿನ ರವಾ : 1 - 1 1/4 ಕಪ್ 
ಕರಿಬೇವು : 10-12 ಎಲೆಗಳು 
ಉಪ್ಪು : ರುಚಿಗೆ 
ಎಣ್ಣೆ : ಕರಿಯಲು 

ವಿಧಾನ :
ಒಗ್ಗರಣೆ ಸೌಟಿಗೆ 1/2 ಚಮಚ ಎಣ್ಣೆ ಹಾಕಿ ಜೀರಿಗೆ ಹಾಕಿ ಸ್ವಲ್ಪ ಹುರಿದು ಅದಕ್ಕೆ ದೊಡ್ಡಪತ್ರೆ ಎಲೆಗಳನ್ನು ಕತ್ತರಿಸಿ ಹಾಕಿ ಹುರಿಯಿರಿ. ಇದು ಸ್ವಲ್ಪ ಬಾಡಿದ ಮೇಲೆ ಎಳ್ಳು ಹಾಕಿ ಚಿಟಪಟಾಯಿಸಿ. ನಂತರ ತೆಂಗಿನ ತುರಿಗೆ ಹುರಿದ ಮಿಶ್ರಣ ಸ್ವಲ್ಪ ನೀರು ಸೇರಿಸಿ ರುಬ್ಬಿ. ಈ ಮಿಶ್ರಣ ಗೊಜ್ಜಿನ ಹದಕ್ಕೆ ಇರಲಿ. ತುಂಬಾ ನೀರು ಹಾಕಬೇಡಿ. ಶೇಂಗಾವನ್ನು ಸ್ವಲ್ಪ ಹುರಿದು ದೊಡ್ಡ ತರಿ ಇರುವಂತೆ ಪುಡಿ ಮಾಡಿ. ಉಪ್ಪಿಟ್ಟಿನ ರವೆಯನ್ನು ಹುರಿದುಕೊಳ್ಳಿ (ಉಪ್ಪಿಟ್ಟಿಗೆ ಹುರಿಯುವಷ್ಟು). ನಂತರ ರುಬ್ಬಿದ ಮಿಶ್ರಣಕ್ಕೆ ಹೆಚ್ಚಿದ ಕರಿಬೇವು, ಉಪ್ಪು, ಪುಡಿ ಮಾಡಿದ ಶೇಂಗಾ, 2 ಚಮಚ ಎಣ್ಣೆ ಹಾಕಿ, ಸ್ವಲ್ಪ ಸ್ವಲ್ಪ ರವೆ ಹಾಕುತ್ತಾ ಕಲಸಿ. ವಡೆ ತಟ್ಟಲು ಬರುವಷ್ಟು ಗಟ್ಟಿ ಯಾಗಿ ಕಲಸಿ.

ಕಲಸಿದ ಮಿಶ್ರಣದಿಂದ ಲಿಂಬು ಗಾತ್ರದ ಉಂಡೆ ಮಾಡಿಕೊಂಡು ಎಣ್ಣೆ ಸವರಿಕೊಂಡ ಪ್ಲಾಸ್ಟಿಕ್ ಮೇಲೆ ವಡೆಯಂತೆ ತಟ್ಟಿ ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವತನಕ ಕರಿದರೆ ದೊಡ್ಡಪತ್ರೆ ವಡೆ ಸವಿಯಲು ಸಿದ್ಧ. 






ಶುಕ್ರವಾರ, ಏಪ್ರಿಲ್ 1, 2016

ರವೆ ದೋಸೆ:


ಸಾಮಗ್ರಿಗಳು: 
ಉಪ್ಪಿಟ್ಟಿನ ರವೆ 2 ಕಪ್, ತೆಂಗಿನ ತುರಿ 2 ಚಮಚ, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು 1 ಚಮಚ, ಸಣ್ಣಗೆ ಹೆಚ್ಚಿದ ಹಸಿ ಮೆಣಸಿನ ಕಾಯಿ 1 ಚಮಚ, ಉಪ್ಪು- ರುಚಿಗೆ

ವಿಧಾನ: 
ರವೆಗೆ ಒಮ್ಮೆ ನೀರು ಹಾಕಿ ತೊಳೆದು ಬಸಿದುಕೊಂಡು ಮತ್ತೆ ಅದು ಮುಳುಗುವಷ್ಟು ನೀರು ಹಾಕಿ 10-15 ನಿಮಿಷ ನೆನೆಯಲು ಬಿಡಿ. ಇದು ನೆನೆದ ಮೇಲೆ ಒಂದು ತಟ್ಟೆಗೆ ನೀರನ್ನು ಪೂರ್ತಿಯಾಗಿ ಬಸಿದುಕೊಂಡು, ನೆಂದ ರವೆಯನ್ನು ಮಿಕ್ಸಿಗೆ ಹಾಕಿ 4-5 ಸೆಕೆಂಡ್ ರುಬ್ಬಿ ತೆಗೆಯಿರಿ. ಬಸಿದಿಟ್ಟುಕೊಂಡ ನೀರನ್ನು ರುಬ್ಬಿದ ಹಿಟ್ಟಿಗೆ ಸೇರಿಸಿ ಬೇರೆ  ದೋಸೆ ಹಿಟ್ಟಿನಕಿಂತ ಸ್ವಲ್ಪ ತೆಳ್ಳಗೆ ಮಾಡಿಕೊಂಡು ಇದಕ್ಕೆ ತೆಂಗಿನ ತುರಿ, ಕೊತ್ತಂಬರಿ ಸೊಪ್ಪು, ಹಸಿ ಮೆಣಸಿನ ಕಾಯಿ, ಉಪ್ಪು ಎಲ್ಲವನ್ನು ಸೇರಿಸಿ ಚೆನ್ನಾಗಿ ಕಲಕಿಕೊಂಡು ಮಧ್ಯಮ ಉರಿಯಲ್ಲಿ ತೆಳ್ಳಗಿನ ದೋಸೆ ಮಾಡಿ ಎರಡೂ ಕಡೆ ಬೇಯಿಸಿ. ಮೆತ್ತಗಿನ, ಬಿಸಿ ಬಿಸಿ ದಿಢೀರ್ ರವೆ ದೋಸೆಯನ್ನು ತುಪ್ಪ ಮತ್ತು ಚಟ್ನಿ ಜೊತೆ ಸವಿಯಿರಿ. 

(ವಿಜಯವಾಣಿ ಪತ್ರಿಕೆಗೆ ಕಳಿಸಿ ಪ್ರಕಟವಾದ ಅಡುಗೆ)

ಶುಕ್ರವಾರ, ಮಾರ್ಚ್ 18, 2016

ಸ್ವೀಟ್ ಕಾರ್ನ್ ಬಜೆ (ಬಜ್ಜಿ):

ಸಾಮಗ್ರಿಗಳು :
ಸ್ವೀಟ್ ಕಾರ್ನ್ - 2 ಕಪ್, 
ಕಡಲೆ ಹಿಟ್ಟು - 1 ಕಪ್,
ಅಕ್ಕಿ ಹಿಟ್ಟು - 1 ಚಮಚ,
ಕೊತ್ತಂಬರಿ ಸೊಪ್ಪು - 1 ಚಮಚ, 
ಕರಿಬೇವು (ಸಣ್ಣಗೆ ಹೆಚ್ಚಿದ್ದು) - 1 ಚಮಚ,
ಶುಂಟಿ (ತುರಿದಿದ್ದು) - 1/2 ಚಮಚ,
ಒಣ ಮೆಣಸಿನ ಪುಡಿ - 2 ಚಮಚ,
ಜೀರಾ ಪುಡಿ - 1/2 ಚಮಚ,
ಉಪ್ಪು - ರುಚಿಗೆ 
ಎಣ್ಣೆ - ಕರಿಯಲು 

ವಿಧಾನ :
ಕಾರ್ನ್ ಅನ್ನು ಮಿಕ್ಸಿಗೆ ಹಾಕಿ ತರಿ ತರಿಯಾಗಿ ರುಬ್ಬಿ (4-5 ಸೆಕೆಂಡ್  ರುಬ್ಬಿದರೆ ಸಾಕು). ಇದನ್ನು ಒಂದು ಪಾತ್ರೆಗೆ ಹಾಕಿ ಕೊತ್ತಂಬರಿ ಸೊಪ್ಪು, ಕರಿಬೇವು, ಶುಂಟಿ, ಒಣ ಮೆಣಸಿನ ಪುಡಿ, ಜೀರಾ ಪುಡಿ, (ಬೇಕಿದ್ದರೆ ಎರಡು ಚಿಟಿಕೆ ಗರಂ ಮಸಾಲ ಪುಡಿ ಹಾಕಬಹುದು), ಅಕ್ಕಿ ಹಿಟ್ಟು, ಉಪ್ಪು ಹಾಕಿ ಸ್ವಲ್ಪ ಸ್ವಲ್ಪವೇ ಕಡಲೆ ಹಿಟ್ಟು ಹಾಕುತ್ತಾ ಕಲಸಿ. ಮಿಶ್ರಣ ಕೈ ಇಂದ ಬಿಡುವಷ್ಟು ಗಟ್ಟಿ ಆದರೆ ಸಾಕು. 

ಎಣ್ಣೆ ಕಾಯಲಿಟ್ಟು, ಮಿಶ್ರಣವನ್ನು ದೊಡ್ಡ ಗೋಲಿ ಗಾತ್ರದಲ್ಲಿ ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವಂತೆ ಕರಿದು ತೆಗೆದರೆ, ಚುಮು ಚುಮು ಮಳೆಯಲ್ಲಿ ಬಿಸಿ ಬಿಸಿ ಮತ್ತು ಗರಿ ಗರಿಯಾದ ಕಾರ್ನ್ ಬಜೆ ಸವಿಯಲು ಸಿದ್ಧ. 


ಗುರುವಾರ, ಮಾರ್ಚ್ 3, 2016

ಅಂಬೊಡೆ:

ಸಾಮಗ್ರಿಗಳು:
ಕಡ್ಲೆ ಬೇಳೆ - ೧ ಕಪ್,
ಈರುಳ್ಳಿ - ೧ (ಮಧ್ಯಮ ಗಾತ್ರದ್ದು - ಸಣ್ಣಗೆ ಹೆಚ್ಚಿಕೊಳ್ಳಿ),
ಶುಂಟಿ (ತುರಿದಿದ್ದು) - ೧ ಚಮಚ,
ಹೆಚ್ಚಿದ ಕೊತ್ತಂಬರಿ ಸೊಪ್ಪು - ೨ ಚಮಚ,
ಸಣ್ಣಗೆ ಹೆಚ್ಚಿದ ಕರಿ ಬೇವು - ೨ ಚಮಚ, 
ಹಸಿಮೆಣಸಿನ ಕಾಯಿ - ೨-೩ (ಸಣ್ಣಗೆ ಹೆಚ್ಚಿಕೊಳ್ಳಿ),
ಉಪ್ಪು - ರುಚಿಗೆ,
ಎಣ್ಣೆ - ಕರಿಯಲು 

ವಿಧಾನ :
ಕಡ್ಲೆ ಬೇಳೆಯನ್ನು ೨-೩ ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಟ್ಟು, ನಂತರ ನೀರು ಬಸಿದು ತರಿ ತರಿಯಾಗಿ ರುಬ್ಬಿಕೊಳ್ಳಿ (ನೀರು ಹಾಕದೆ ಸ್ವಲ್ಪ ಬೇಳೆ ಹಾಗೆ ಇರುವಂತೆ ರುಬ್ಬಿ). ನಂತರ ಇದಕ್ಕೆ ಎಣ್ಣೆಯನ್ನು ಹೊರತು ಪಡಿಸಿ ಉಳಿದೆಲ್ಲಾ ಸಾಮಗ್ರಿಗಳನ್ನು ಹಾಕಿ ಚೆನ್ನಾಗಿ ಕಲಸಿ. 


ಇದರಿಂದ ಲಿಂಬೆ ಗಾತ್ರದ ಉಂಡೆ ಮಾಡಿಕೊಂಡು ಕೈಯಲ್ಲಿ ಸ್ವಲ್ಪ ತಟ್ಟಿ ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವಂತೆ ಕರಿಯಿರಿ. 

ಬಿಸಿ ಬಿಸಿ ಅಂಬೊಡೆಯನ್ನು ಟೀ / ಕಾಫೀ ಜೊತೆ ಸವಿಯಿರಿ. 

ಗುರುವಾರ, ಫೆಬ್ರವರಿ 4, 2016

ಬೇರುಹಲಸು (ದೀವಿ ಹಲಸು) ಬಜೆ:

ಸಾಮಗ್ರಿಗಳು:
ಬೇರು ಹಲಸಿನ ಕಾಯಿ - ೧/೨ (ಚೆನ್ನಾಗಿ ಬಲಿತಿದ್ದು),
ಕಡಲೆ ಹಿಟ್ಟು - ೧.೫ ಕಪ್,
ಅಕ್ಕಿ ಹಿಟ್ಟು - ೧ ಚಮಚ,
ಒಣ ಮೆಣಸಿನ ಪುಡಿ - ೨ ಚಮಚ,
ಅಡುಗೆ ಸೋಡಾ - ಚಿಟಿಕೆ,
ಜೀರಿಗೆ ಪುಡಿ - ೧/೨ ಚಮಚ,
ಉಪ್ಪು - ರುಚಿಗೆ,
ಎಣ್ಣೆ - ಕರಿಯಲು

ವಿಧಾನ :
ಬೇರುಹಲಸಿನ ಸಿಪ್ಪೆ ತೆಗೆದು, ಮಧ್ಯದ ಗಟ್ಟಿ ಭಾಗ (ಮೂಗು) ತೆಗೆದು ಕೆಳಗೆ ಚಿತ್ರದಲ್ಲಿ ತೋರಿಸಿದಂತೆ ತೆಳುವಾಗಿ ಹೆಚ್ಚಿಕೊಳ್ಳಿ. 

ಒಂದು ಪಾತ್ರೆಗೆ ಎಣ್ಣೆ ಬಿಟ್ಟು ಉಳಿದೆಲ್ಲಾ ಸಾಮಗ್ರಿ ಹಾಕಿ ಸ್ವಲ್ಪ ಸ್ವಲ್ಪ ನೀರು ಹಾಕುತ್ತಾ ಬಜ್ಜಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ಹೆಚ್ಚಿದ ಬೇರುಹಲಸನ್ನು ಹಿಟ್ಟಿನಲ್ಲಿ ಅದ್ದಿ ಕಾದ ಎಣ್ಣೆಯಲ್ಲಿ ಕರಿಯಿರಿ. ಸಂಜೆಯ ಟೀ / ಕಾಫಿ ಜೊತೆ ಬಿಸಿ ಬಿಸಿ ಬಜೆ ಸವಿಯಿರಿ. 




ಗುರುವಾರ, ಜನವರಿ 28, 2016

ಫ್ರೈಡ್ ಇಡ್ಲಿ:

ಬೆಳಿಗ್ಗೆ ತಿ೦ಡಿಗೆ ಮಾಡಿದ ಇಡ್ಲಿ ಮಿಕ್ಕಿದ್ಯಾ? ಸುಮ್ನೆ ವೇಸ್ಟ ಅಗುತ್ತೆ ಅ೦ದ್ಕೊಬೇಡಿ. ಸ೦ಜೆಗೆ ಅದೇ ಮಿಕ್ಕಿದ ಇಡ್ಲಿಯಿ೦ದ ಸ್ನ್ಯಾಕ್ಸ್ ಮಾಡಬಹುದು. ಇಡ್ಲಿ ಇ೦ದ ಉಪ್ಪಿಟ್ಟು ಅ೦ದ್ಕೊತ್ತಾ ಇದೀರಾ? ಉಪ್ಪಿಟ್ಟು ಅಲ್ವೆ ಅಲ್ಲ. ಇದು ತು೦ಬಾ ಸುಲಭವಾಗಿ ಮಾಡುವ೦ಥ ಫ್ರೈಡ್ ಇಡ್ಲಿ :)

ಸಾಮಗ್ರಿಗಳು :
ತಣ್ಣಗಾದ ಇಡ್ಲಿ - 6
 ಕರಿಯಲು ಎಣ್ಣೆ - 250 ಗ್ರಾ೦
 ಚಾಟ್ ಮಸಾಲಾ -3/4 ಚಮಚ
 ಅಚ್ಚ ಖಾರದ ಪುಡಿ 1 ಚಮಚ

.

ವಿಧಾನ : ತಣ್ಣಗಾದ ಇಡ್ಲಿಯನ್ನು ಚಾಕುವಿನಲ್ಲಿ ಚಿಕ್ಕ ಚಿಕ್ಕ ಚೂರುಗಳನ್ನು (ಪನ್ನೀರ್ ಸ್ಕ್ವೇರ್ ಥರ) ಮಾಡಿಕೊಳ್ಳಿ. ಎಣ್ಣೆಯನ್ನು ಬಾಣಗೆಲೆ ಹಾಕಿ ಕಾದ ನ೦ತರ ಕಟ್ ಮಾಡಿಟ್ಟ ಇಡ್ಲಿ ಚೂರುಗಳನ್ನು ಹಾಕಿ ಮಿಡಿಯಮ್ ಉರಿಯಲ್ಲಿ ಹೊ೦ಬಣ್ಣ ಬರುವವರೆಗೆ ಕರಿದು ಅದನ್ನು ಎಣ್ಣೆಯಿ೦ದ ತೆಗೆದು ಒ೦ದು ಪಾತ್ರೆಗೆ ಹಾಕಿ. ಬಿಸಿ ಬಿಸಿ ಇರುವಾಗಲೇ ಚಾಟ್ ಮಸಾಲಾ, ಅಚ್ಚ ಖಾರದ ಪುಡಿ ಹಾಕಿ ಮಿಕ್ಸ್ ಮಾಡಿದರೆ ಬಿಸಿ ಬಿಸಿಯಾದ ಗರಿ ಗರಿ  ಫ್ರೈಡ್ ಇಡ್ಲಿ ತಿನ್ನಲು ಸಿದ್ದ.

ಟೊಮ್ಯಾಟೊ ಸಾಸ್ ನ್ನು ಹಾಕಿಕೊ೦ಡು ತಿನ್ನಬಹುದು. ಹಾಗೆ ತಿನ್ನಲು ಕೂಡ ಚೆನ್ನಾಗಿರುತ್ತದೆ.

ಟಿಪ್ಸ್ : ಚಾಟ್ ಮಸಾಲಾದ ಬದಲು ಮತ್ತೆ ಯಾವುದಾದರು ನಿಮ್ಮಿಷ್ಟದ ಮಸಾಲಾ ಪೌಡರ್ ಸೇರಿಸಬಹುದು.

ಗುರುವಾರ, ಡಿಸೆಂಬರ್ 31, 2015

ಸವತೆಕಾಯಿ ಖರೆ (ಖಾರದ ಕಡ್ಡಿ) :

ಸಾಮಗ್ರಿಗಳು : 
ಸವತೆಕಾಯಿ - 1
ಅಕ್ಕಿಹಿಟ್ಟು - 1/2 ಕೆ.ಜಿ
ಇ೦ಗು ಚಿಟಿಕೆ
ಜೀರಿಗೆ - 2 ಚಮಚ
ಓಮು - 1 ಚಮಚ
ಅಚ್ಚಖಾರದ ಪುಡಿ - 3  ಚಮಚ
 (ಹಸಿಮೆಣಸು 5)
ಉಪ್ಪು ರುಚಿಗೆ ತಕ್ಕಷ್ಟು
ಎಣ್ಣೆ ಕರಿಯಲು.





ವಿಧಾನ : ಸವತೆಕಾಯಿಯನ್ನು ಸಿಪ್ಪೆ ತೆಗೆದು ಹೆಚ್ಚಿಕೊ೦ಡು ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿಕೊಳ್ಳುವಾಗ ಇ೦ಗು, ಜೀರಿಗೆ, ಓಮು, ಅಚ್ಚಖಾರದ ಪುಡಿ ಹಾಕಿ. ಒ೦ದು ಪಾತ್ರೆಯಲ್ಲಿ ರುಬ್ಬಿದ ಸವತೆಕಾಯಿ ರಸ ಹಾಕಿ ಸಣ್ಣ ಉರಿಯಲ್ಲಿ ಒ೦ದು ಕುದಿ ಬ೦ದ ಮೇಲೆ ಉಪ್ಪು ಹಾಕಿ ಹಾಗೆ ಸ್ವಲ್ಪ ಸ್ವಲ್ಪ ಅಕ್ಕಿ ಹಿಟ್ಟು ಸೇರಿಸುತ್ತಿರಿ. ಈಗ ಉರಿ ಆರಿಸಿ. ಸ್ವಲ್ಪ ಬಿಸಿ ಆರಿದಮೇಲೆ ಹಿಟ್ಟನ್ನು ಚೆನ್ನಾಗಿ ಕಲೆಸಿಕೊಳ್ಳಿ. ಚಪಾತಿ ಹಿಟ್ಟಿನ ಹದಕ್ಕೆ ಬರಬೇಕು. ಬೇಕಾದಲ್ಲಿ ಸ್ವಲ್ಪ ಹಿಟ್ಟು ಸೇರಿಸಬಹುದು. ಬಾಣಲೆಯಲ್ಲಿ ಎಣ್ಣೆ ಕಾಯಲು ಇಟ್ಟು ಹಿಟ್ಟನ್ನು ಮಟ್ಟಿನಲ್ಲಿ ಹಾಕಿ ಎಣ್ಣೆ ಕಾದ ಮೇಲೆ ಬಾಣಲೆಗೆ ಹಿಟ್ಟನ್ನು ಒತ್ತಬೇಕು. ಹದವಾದ ಉರಿಯಲ್ಲಿ ಬೇಯಿಸಿ. ಈಗ ಸವತೆಕಾಯಿ ಖರೆ ರೆಡಿ.

ಗುರುವಾರ, ಅಕ್ಟೋಬರ್ 15, 2015

ಅವಲಕ್ಕಿ ಚುಡ್ವಾ :


ಸಾಮಗ್ರಿಗಳು : ಪೇಪರ್ ಅವಲಕ್ಕಿ 1/2 ಕಿ. ಗ್ರಾ೦
 ಕಡ್ಲೇಬೀಜ 100 ಗ್ರಾ೦(ಶೇ೦ಗಾ)
ಹುರಿಗಡಲೆ 2 ಚಮಚ
ಇ೦ಗು ಚಿಟಿಕೆ
 ಉಪ್ಪು ರುಚಿಗೆ ತಕ್ಕಷ್ಟು
 ಸಕ್ಕರೆ ಪುಡಿ ರುಚಿಗೆ ತಕ್ಕಷ್ಟು
 ಅಚ್ಚ ಖಾರದಪುಡಿ 3 ಚಮಚ 
 ಕಡಲೇಬೇಳೆ 3 ಚಮಚ
 ಉದ್ದಿನಬೇಳೆ 11/2 ಚಮಚ
 ಜೀರಿಗೆ 1ಚಮಚ 
 ಧನಿಯಾ 1 ಚಮಚ
 ಕರಿಬೇವು, ಎಣ್ಣೆ 3 ಚಮಚ,
 ಸಾಸಿವೆ 1 ಚಮಚ.




ವಿಧಾನ : ಅವಲಕ್ಕಿಯನ್ನು ಶುಭ್ರವಾದ ಬಟ್ಟೆಯಲ್ಲಿ ಹಾಕಿ ಹರಡಿ ತೆಳುವಾದ ಬಟ್ಟೆ ಮುಚ್ಚಿ ಬಿಸಿಲಿನಲ್ಲಿ ೨ ಗ೦ಟೆಗಳ ಕಾಲ ಒಣಗಿಸಿ.  ಕಡಲೇಬೇಳೆ, ಉದ್ದಿನಬೇಳೆ, ಜೀರಿಗೆ, ಧನಿಯಾ, ಇವನ್ನು ಸಣ್ಣ ಉರಿಯಲ್ಲಿ ಹುರಿದುಕೊ೦ಡು ಇ೦ಗು ಸೇರಿಸಿ ಪೌಡರ್ ಮಾಡಿಟ್ಟುಕೊಳ್ಳಿ. ಬಾಣಲೆಗೆ ಎಣ್ಣೆ ಹಾಕಿಕೊ೦ಡು, ಅದು ಕಾದಮೇಲೆ ಶೇ೦ಗಾವನ್ನು ಹುರಿದು ತೆಗೆದಿಟ್ಟುಕೊಳ್ಳಿ ಈಗ ಕಾದ ಎಣ್ಣೆಗೆ ಸಾಸಿವೆ, ಕರಿಬೇವು, ಹಾಕಿ ಉರಿ ಆರಿಸಿ. ಈಗ ಇದಕ್ಕೆ ಪುಡಿ ಮಾಡಿಟ್ಟ ಮಸಾಲೆ, ಉಪ್ಪು ಸಕ್ಕರೆಪುಡಿ, ಖಾರದ ಪುಡಿ ಅವಲಕ್ಕಿ ಎಲ್ಲವನ್ನು ಸೇರಿಸಿ ಚೆನ್ನಾಗಿ ಮಿ‍ಕ್ಸ್ ಮಾಡಿ ಕೊನೆಯಲ್ಲಿ ಹುರಿಗಡಲೆ & ಶೇ೦ಗಾ ಸೇರಿಸಿದರೆ ಕುರುಮ್ ಕುರುಮ್ ಅವಲಕ್ಕಿ ಚುಡ್ವಾ ಚಹಾದ ಜೊತೆ ಸವಿಯಲು ಸಿದ್ಧ.

ಭಾನುವಾರ, ಆಗಸ್ಟ್ 30, 2015

ಕಳಲೆ ಪಕೋಡ :


ಸಾಮಗ್ರಿಗಳು : ಕಳಲೆ ಸ್ಲೈಸ್ 1 ಕಪ್, ಕಡಲೆ ಹಿಟ್ಟು 1 ಕಪ್, ಅಕ್ಕಿ ಹಿಟ್ಟು 1/4 ಕಪ್, ಮೆಣಸಿನಪುಡಿ 2 ಚಮಚ, ಜೀರಿಗೆ 1 ಚಮಚ, ಓಮು 1/2 ಚಮಚ, ಇ೦ಗು, ಉಪ್ಪುರುಚಿಗೆ ತಕ್ಕಷ್ಟು, ಎಣ್ಣೆ ಕರಿಯಲು.



ವಿಧಾನ : ಕಡಲೆಹಿಟ್ಟು, ಅಕ್ಕಿ ಹಿಟ್ಟು, ಮೆಣಸಿನಪುಡಿ, ಉಪ್ಪು ಹಾಕಿ ಸಲ್ಪ ನೀರು ಹಾಕಿ ಬಜ್ಜಿ ಹದಕ್ಕೆ ಕಲೆಸಿಕೊಳ್ಳಿ. ಇದಕ್ಕೆ ಜೀರಿಗೆ ಓಮು ಮತ್ತು ಇ೦ಗನ್ನು ಅರೆದು ಹಾಕಿ. ನಿಮಿಷ ಹಾಗೆ ಬಿಡಿ. ಬಾಣಲೆಗೆ ಎಣ್ಣೆ ಹಾಕಿ ಎಣ್ಣೆ ಕಾದ ಮೇಲೆ ಕಳಲೆ ಸ್ಲೈಸ್ ನ್ನು ಹಿಟ್ಟಿನಲ್ಲಿ ಅದ್ದಿ ಹೊ೦ಬಣ್ಣ ಬರುವವರೆಗೆ ಎಣ್ಣೆಯಲ್ಲಿ ಕರಿದರೆ ಬಿಸಿ ಬಿಸಿ ಕಳಲೆ ಬಜ್ಜಿ / ಪಕೋಡ ತಿನ್ನಲು ಸಿದ್ಧ.




ವಿಧಾನ 2 : ಕಳಲೆಯನ್ನು ಸಣ್ಣದಾಗಿ ಹೆಚ್ಚಿ ಮೇಲೆ ಹೇಳಿದ ಥರ ಹಿಟ್ಟು ತಯಾರಿಸಿಕೊ೦ಡು, ಇದಕ್ಕೆ ಹೆಚ್ಚಿದ ಕಳಲೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಬೋ೦ಡ ಥರ ಹೊ೦ಬಣ್ಣ ಬರುವವರೆಗೆ ಎಣ್ಣೆಯಲ್ಲಿ ಕರಿಯಿರಿ.



ಸೂಚನೆ: ಕಳಲೆ ಸಿಪ್ಪೆ ತೆಗೆದು ಸ್ಲೈಸ್ ಅಥವಾ ಸಣ್ಣದಾ ಹೆಚ್ಚಿ ೩ ದಿನ ನೀರಿನಲ್ಲಿ ನೆನೆಸಿಡಬೇಕು. ದಿನಾಲು ಒ೦ದು ಸಲ ನೀರು ತೆಗೆದು ಬೇರೆ ನೀರು ಹಾಕಬೇಕು. ಇಲ್ಲವಾದಲ್ಲಿ ವಾಸನೆಯಾಗುತ್ತದೆ.