ಶುಕ್ರವಾರ, ಆಗಸ್ಟ್ 19, 2016

ಇಡ್ಲಿ ಮಂಚೂರಿಯನ್ :

ಬೆಳಿಗ್ಗೆ ತಿಂಡಿಗೆ ಮಾಡಿದ ಇಡ್ಲಿ ಉಳಿದುಬಿಟ್ಟರೆ ಮತ್ತೆ ಅದನ್ನು ತಿನ್ನಲು ಬೇಜಾರು. ಅಂತಹ ಸಮಯದಲ್ಲಿ ಉಳಿದ ಇಡ್ಲಿಯಿಂದ ಮಂಚೂರಿಯನ್ ಮಾಡಿಕೊಂಡು ಸಾಯಂಕಾಲಕ್ಕೆ ಸ್ನಾಕ್ಸ್ ತಿನ್ನಬಹುದು. ನೀವೂ ಟ್ರೈ ಮಾಡಿ ನೋಡಿ. 

ಸಾಮಗ್ರಿಗಳು:
ತಣ್ಣಗಾದ ಇಡ್ಲಿ : 8-10 (ಮಧ್ಯಮ ಗಾತ್ರದ್ದು / ಇಡ್ಲಿ ಪ್ಲೇಟ್ ನಲ್ಲಿ ಮಾಡಿರುವಂತದ್ದು)
ಮೈದಾ ಹಿಟ್ಟು : 4 ಟೇಬಲ್ ಚಮಚ
ಕಾರ್ನ್ ಫ್ಲೋರ್ : 2 ಟೇಬಲ್ ಚಮಚ 
ಅಚ್ಚ ಖಾರದ ಪುಡಿ : 1/2 ಟೀ ಚಮಚ 
ಕ್ಯಾಪ್ಸಿಕಂ : 1
ಈರುಳ್ಳಿ : 1
ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ : 1 ಟೇಬಲ್ ಚಮಚ 
ಸಣ್ಣಗೆ ಹೆಚ್ಚಿದ ಶುಂಠಿ : 1/2 ಟೇಬಲ್ ಚಮಚ 
ಕೊತ್ತಂಬರಿ ಸೊಪ್ಪು : 1 ಟೇಬಲ್ ಚಮಚ 
ಸೋಯಾ ಸಾಸ್ : 1/2 ಟೀ ಚಮಚ 
ಗ್ರೀನ್ ಚಿಲ್ಲಿ ಸಾಸ್ : 2-3 ಟೀ ಚಮಚ 
ಟೊಮೇಟೊ ಸಾಸ್: 2 ಟೀ ಚಮಚ 
ವಿನೆಗರ್ ಅಥವಾ ಲಿಂಬುರಸ : 1/2 ಟೀ ಚಮಚ  
ಎಣ್ಣೆ : ಕರಿಯಲು 
ಉಪ್ಪು : ರುಚಿಗೆ 

ವಿಧಾನ :
ತಣ್ಣಗಾದ ಇಡ್ಲಿಯನ್ನು ಸಣ್ಣ ಸಣ್ಣ ಚೂರುಗಳಾಗಿ ಕತ್ತರಿಸಿ (like paneer cubes). ಕ್ಯಾಪ್ಸಿಕಂ, ಈರುಳ್ಳಿಯನ್ನು ಉದ್ದುದ್ದ ಹೆಚ್ಚಿಕೊಳ್ಳಿ. ಒಲೆಯ ಮೇಲೆ ಕರಿಯಲು ಎಣ್ಣೆ ಕಾಯಲು ಇಟ್ಟುಕೊಳ್ಳಿ.  ಮೈದಾ, ಕಾರ್ನ್ ಫ್ಲೋರ್, ಚಿಟಿಕೆ ಉಪ್ಪು, ಅಚ್ಚ ಖಾರದ ಪುಡಿ ಮತ್ತು ನೀರು ಹಾಕಿ ಗಂಟಿಲ್ಲದಂತೆ ತೆಳ್ಳಗೆ ಕಲಸಿಕೊಳ್ಳಿ. ಇದು ಇಡ್ಲಿಗೆ ತೆಳುವಾಗಿ ಅಂಟುವಷ್ಟು ತೆಳ್ಳಗಿರಲಿ.   ಕತ್ತರಿಸಿದ ಇಡ್ಲಿ ಚೂರುಗಳನ್ನು ಈ ಹಿಟ್ಟಿನಲ್ಲಿ ಅದ್ದಿ ಕಾದ ಎಣ್ಣೆಯಲ್ಲಿ ಬಿಟ್ಟು ಮಧ್ಯಮ ಉರಿಯಲ್ಲಿ ಚೆನ್ನಾಗಿ ಕರಿಯಿರಿ. ಈ ಕರಿದ ಇಡ್ಲಿ ಮೇಲಿನ ಭಾಗ ಗರಿಯಾಗಿ, ಒಳಗೆ ಮೆತ್ತಗಿರುತ್ತದೆ. 

ನಂತರ ಇನ್ನೊಂದು ಬಾಣಲೆಗೆ ಈ ಕರಿದ ಎಣ್ಣೆಯನ್ನೇ 4 ಚಮಚ ಹಾಕಿ ಅದಕ್ಕೆ ಹೆಚ್ಚಿದ ಶುಂಠಿ, ಬೆಳ್ಳುಳ್ಳಿ ಹಾಕಿ ಸ್ವಲ್ಪ ಫ್ರೈ ಮಾಡಿ, ಹೆಚ್ಚಿದ ಈರುಳ್ಳಿ, ಕ್ಯಾಪ್ಸಿಕಂ ಹಾಕಿ ಅರ್ಧ ನಿಮಿಷ ಹುರಿಯಿರಿ. ನಂತರ ಇದಕ್ಕೆ ಅರ್ಧ ಟೀ ಚಮಚದಷ್ಟು ಉಪ್ಪು, ಸೋಯಾ ಸಾಸ್, ಗ್ರೀನ್ ಚಿಲ್ಲಿ ಸಾಸ್, ಟೊಮೇಟೊ ಸಾಸ್, ಲಿಂಬು ರಸ / ವಿನೆಗರ್ ಗಳನ್ನೂ ಒಂದೊಂದಾಗಿ ಹಾಕುತ್ತ ಚೆನ್ನಾಗಿ ಮಿಕ್ಸ್ ಮಾಡಿ. ಈಗ ಕರಿದಿಟ್ಟ ಇಡ್ಲಿಯನ್ನು ಹಾಕಿ ಸರಿಯಾಗಿ ಮಿಕ್ಸ್ ಮಾಡಿ, ಕೊತ್ತಂಬರಿ ಸೊಪ್ಪು ಹಾಕಿ ಬಿಸಿ ಬಿಸಿ  ಇಡ್ಲಿ ಮಂಚೂರಿಯನ್ ಸರ್ವ್ ಮಾಡಿ.  







ಸಲಹೆ: 
1) ಈರುಳ್ಳಿ ಗಿಡವನ್ನೂ (spring onion) ಸಹ ಸಣ್ಣಗೆ ಹೆಚ್ಚಿ ಸ್ವಲ್ಪ ಫ್ರೈ ಮಾಡಲು ಹಾಕಿ , ಸ್ವಲ್ಪ ಮೇಲಿಂದ ಹಸಿಯಾಗಿ ಹಾಕಿ ಸರ್ವ್ ಮಾಡಬಹುದು. 
2) ಇಡ್ಲಿಗೆ ಉಪ್ಪು ಹಾಕಿರುವುದರಿಂದ ಉಪ್ಪು ಹಾಕುವಾಗ ಎಚ್ಚರವಿರಲಿ. 
3) ಯಾವುದೇ ಇಡ್ಲಿಯಿಂದ ಕೂಡ ಮಾಡಬಹುದು. ನಾ  ಕೊಟ್ಟಿರುವ ಅಳತೆಗೆ  ನಾನು ಇಡ್ಲಿ ಪ್ಲೇಟ್ ನ ಇಡ್ಲಿ ಎಂದು ಹಾಕಿದ್ದೇನಷ್ಟೆ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ