ಗುರುವಾರ, ಮಾರ್ಚ್ 30, 2017

ಅವಲಕ್ಕಿ ಬಾತ್ :

ಸಾಮಗ್ರಿಗಳು :
ದಪ್ಪ ಅವಲಕ್ಕಿ- 1 ಕಪ್,
ಹಸಿ ಬಟಾಣಿ - 1/4 ಕಪ್,
ಈರುಳ್ಳಿ - 1,
ಟೊಮೇಟೊ - 1 (ಬೇಕಿದ್ದಲ್ಲಿ ಮಾತ್ರ) 
ಹಸಿಮೆಣಸಿನಕಾಯಿ - 1,
ತೆಂಗಿನ ತುರಿ - 4 ಚಮಚ,
ರಸಂ ಪುಡಿ - 1/2 ಚಮಚ,
ಅರಿಶಿನ ಪುಡಿ - 1/4 ಚಮಚ,
ಎಣ್ಣೆ - 4-5 ಚಮಚ,
ಉದ್ದಿನ ಬೇಳೆ - 1/2 ಚಮಚ,
ಸಾಸಿವೆ - 1/4 ಚಮಚ,
ಕರಿಬೇವು - 6-8 ಎಲೆಗಳು,
ಸಕ್ಕರೆ- 1 ಚಮಚ,
ಉಪ್ಪು - ರುಚಿಗೆ 

ವಿಧಾನ :
ಮೊದಲು ಅವಲಕ್ಕಿಯನ್ನು ತೊಳೆದು, ನೀರು ಹಾಕಿ 15-20 ನಿಮಿಷ ನೆನೆಸಿಡಿ. ಮೆತ್ತಗಾಗಬೇಕು, ಆದರೆ ತುಂಬಾ ಗಂಜಿಯಾಗುವಷ್ಟು ಮೆತ್ತಗಾಗಬಾರದು. ಈರುಳ್ಳಿ ಮತ್ತು ಟೊಮ್ಯಾಟೊವನ್ನು ಸಣ್ಣಗೆ ಹೆಚ್ಚಿಕೊಳ್ಳಿ. ಹಸಿಮೆಣಸಿನಕಾಯಿಯನ್ನು ಉದ್ದ ಸೀಳಿಕೊಳ್ಳಿ.  ಹಸಿಬಟಾಣಿಗೆ ನೀರು ಮತ್ತು ಚಿಟಿಕೆ ಉಪ್ಪು ಹಾಕಿ ಬೇಯಿಸಿಕೊಳ್ಳಿ. ನೆಂದ ಅವಲಕ್ಕಿಯ ನೀರನ್ನು ಪೂರ್ತಿಯಾಗಿ ಬಸಿದುಕೊಂಡು ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಸಕ್ಕರೆ ಹಾಕಿ ಕಲಸಿಟ್ಟುಕೊಳ್ಳಿ. ಬಾಣಲೆಯನ್ನು ಒಲೆಯ ಮೇಲಿಟ್ಟು ಎಣ್ಣೆ ಹಾಕಿ ಕಾದ ಮೇಲೆ ಉದ್ದಿನ ಬೇಳೆ ಹಾಕಿ, ಅದು ಹೊಂಬಣ್ಣ ಬಂದ ಮೇಲೆ ಸಾಸಿವೆ ಹಾಕಿ ಚಿಟಪಟಾಯಿಸಿ. ಇದಕ್ಕೆ ಹಸಿಮೆಣಸಿನಕಾಯಿ, ಕರಿಬೇವು ಹಾಕಿ ಒಮ್ಮೆ ಹುರಿದು, ಹೆಚ್ಚಿದ ಈರುಳ್ಳಿ ಹಾಕಿ ಫ್ರೈ ಮಾಡಿ. ನಂತರ ಹೆಚ್ಚಿದ ಟೊಮೇಟೊ ಹಾಕಿ ಮೆತ್ತಗಾಗುವವರೆಗೆ ಹುರಿಯಿರಿ. ಇದಕ್ಕೆ ಬೇಯಿಸಿಕೊಂಡ ಬಟಾಣಿ, ತೆಂಗಿನತುರಿ, ಅರಿಶಿನ ಪುಡಿ, ರಸಂ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಅವಲಕ್ಕಿ ಹಾಕಿ ಕಲಸಿ. ಬೇಕಿದ್ದಲ್ಲಿ ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿದರೆ ಬಿಸಿ ಬಿಸಿ ಅವಲಕ್ಕಿ ರೆಡಿ. ಸರ್ವ್ ಮಾಡುವಾಗ ಗರಿ ಗರಿ ಸೇವ್ ಅಥವಾ mixture ಅನ್ನು ಮೇಲಿಂದ ಉದುರಿಸಿ ಕೊಡಿ. ಇದು ಬೆಳಗ್ಗಿನ ಉಪಹಾರಕ್ಕೆ ಅಥವಾ ಸಂಜೆಯ ಟೀ / ಕಾಫೀ ಜೊತೆ ಕೂಡ ಮಾಡಿಕೊಳ್ಳಬಹುದು. 

ಶುಕ್ರವಾರ, ಮಾರ್ಚ್ 24, 2017

ಶಾಬಕ್ಕಿ/ಸಬ್ಬಕ್ಕಿ ಸ೦ಡಿಗೆ:

ಸಾಮಗ್ರಿಗಳು: ಶಾಬಕ್ಕಿ/ಸಬ್ಬಕ್ಕಿ - 100 ಗ್ರಾ೦, ಉಪ್ಪು, ಜೀರಿಗೆ - 1/2 ಚಮಚ.



ವಿಧಾನ : ಶಾಬಕ್ಕಿಯನ್ನು ತೊಳೆದು 5-6 ತಾಸು ನೀರಿನಲ್ಲಿ ನೆನೆಸಿಡಿ. ನೆನೆಸಿದ ಶಾಬಕ್ಕಿಯನ್ನು ಕುಕ್ಕರ್ ಗೆ ಹಾಕಿ 3-4 ವಿಶಲ್ ಕೂಗಿಸಿ, ಬಿಸಿ ಆರಿದ ಮೇಲೆ ಉಪ್ಪು, ಜೀರಿಗೆ ಸೇರಿಸಿ. ಒ೦ದು ಪ್ಲಾಸ್ಟಿಕ್ ಶೀಟ್ ನಲ್ಲಿ ಈ ಮಿಶ್ರಣವನ್ನು ಸಣ್ಣ ಸಣ್ಣದಾಗಿ ಹಾಕಿ ಸಲ್ಪ ಹರಡಿ 2-3 ದಿನ ಬಿಸಿಲಿನಲ್ಲಿ ಒಣಗಿಸಿ. ಇದನ್ನು ಗಾಳಿಯಾಡದ ಡಬ್ಬಿಯಲ್ಲಿ ತು೦ಬಿಡಿ. ಬೇಕಾದಾಗ ಎಣ್ಣೆಯಲ್ಲಿ ಕರಿಯಿರಿ.

ಸೂಚನೆ: ಬೇಯಿಸಿದ ಶಾಬಕ್ಕಿಯನ್ನು ರುಬ್ಬಿ ಕೂಡ ಮಾಡಬಹುದು. (ಬೇಕಾದರೆ ಹಿಟ್ಟಿಗೆ 2 ಹಸಿಮೆಣಸನ್ನು ರುಬ್ಬಿ ಹಾಕಬಹುದು)

ಶುಕ್ರವಾರ, ಮಾರ್ಚ್ 17, 2017

ಹಲಸಿನ ಕಾಯಿ ಮಂಚೂರಿ :

ಸಾಮಗ್ರಿಗಳು:
ಹಲಸಿನ ಕಾಯಿ (ಸಿಪ್ಪೆ, ಮಧ್ಯದ ಗಟ್ಟಿ ಭಾಗ ತೆಗೆದು ಹೆಚ್ಚಿದ್ದು) - 4 ಕಪ್
ಕಾರ್ನ್ ಫ್ಲೋರ್ : 6-7 ಟೇಬಲ್ ಚಮಚ ಮತ್ತು ಅರ್ಧ ಚಮಚ ಫ್ರೈ ಮಾಡಲು
ಮೈದಾ : 2 ಟೇಬಲ್ ಚಮಚ
ಅಚ್ಚ ಖಾರದ ಪುಡಿ : 1 ಟೀ ಚಮಚ
ಮೊಸರು : 2 ಟೇಬಲ್ ಚಮಚ
ಶುಂಠಿ ಬೆಳ್ಳುಳ್ಳಿ ಪೇಸ್ಟ್: 1 ಟೀ ಚಮಚ
ಕ್ಯಾಪ್ಸಿಕಂ : 1
ಈರುಳ್ಳಿ : 1
ಈರುಳ್ಳಿ ಗಿಡ (sprin onion) : 1/2 ಕಪ್ ಹೆಚ್ಚಿದ್ದು
ಸಣ್ಣದಾಗಿ ಹೆಚ್ಚಿದ ಶುಂಠಿ : 1 ಟೀ ಚಮಚ
ಸಣ್ಣದಾಗಿ ಹೆಚ್ಚಿದ ಬೆಳ್ಳುಳ್ಳಿ : 1 ಟೀ ಚಮಚ
ಸಣ್ಣದಾಗಿ ಹೆಚ್ಚಿದ ಹಸಿಮೆಣಸಿನ ಕಾಯಿ : 1 ಟೀ ಚಮಚ
ಸಣ್ಣದಾಗಿ ಹೆಚ್ಚಿದ ಕೊತ್ತಂಬರಿ ಸೊಪ್ಪು : 1 ಟೇಬಲ್ ಚಮಚ
ಸೋಯಾ ಸಾಸ್ :1  ಟೀ ಚಮಚ
ಟೊಮೇಟೊ ಸಾಸ್ : 1 ಟೇಬಲ್ ಚಮಚ
ರೆಡ್ ಚಿಲ್ಲಿ ಸಾಸ್ / ಗ್ರೀನ್ ಚಿಲ್ಲಿ ಸಾಸ್ : 1 ಟೇಬಲ್ ಚಮಚ
ಸಕ್ಕರೆ : 1/4 ಚಮಚ
ಲಿಂಬು ರಸ : 1/2 ಚಮಚ
ಉಪ್ಪು : ರುಚಿಗೆ
ಎಣ್ಣೆ : ಕರಿಯಲು ಮತ್ತು ಫ್ರೈ ಮಾಡಲು

ವಿಧಾನ :
ಹಲಸಿನಕಾಯಿ ಸಿಪ್ಪೆ ಮತ್ತು ಮಧ್ಯದ ಗಟ್ಟಿ ಭಾಗ (ಮೂಗು ಎನ್ನುತ್ತಾರೆ ಅದನ್ನು) ತೆಗೆದು ಮಂಚೂರಿ ಗಾತ್ರಕ್ಕೆ ಹೆಚ್ಚಿಕೊಳ್ಳಿ ಮತ್ತು ಇದನ್ನು ಕುಕ್ಕರ್ ನಲ್ಲಿ ಇಟ್ಟು 2-3 ವಿಶಲ್ ಕೂಗಿಸಿ ಬೇಯಿಸಿಟ್ಟುಕೊಳ್ಳಿ. 

ಮೊಸರಿಗೆ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಸ್ವಲ್ಪ ಉಪ್ಪು  ಹಾಕಿ ಕಲಸಿ ಹೆಚ್ಚಿದ ಹಲಸಿನಕಾಯಿಗೆ ಹಾಕಿ ಚೆನ್ನಾಗಿ ಕಲಸಿ ಅರ್ಧ ಗಂಟೆ ಫ್ರಿಡ್ಜ್ ನಲ್ಲಿಡಿ. 


ಈರುಳ್ಳಿ ಮತ್ತು ಕ್ಯಾಪ್ಸಿಕಂ ಅನ್ನು ಉದ್ದುದ್ದ ಹೆಚ್ಚಿಕೊಳ್ಳಿ. ಒಂದು ಕಡೆ ಎಣ್ಣೆ ಕಾಯಲು ಇಟ್ಟುಕೊಂಡು, ಇತ್ತ  ಕಾರ್ನ್ ಫ್ಲೋರ್ ಗೆ ಮೈದಾ, ಸ್ವಲ್ಪ ಉಪ್ಪು, ಅಚ್ಚ ಖಾರದ ಪುಡಿ, ನೀರು ಸೇರಿಸಿ ಗಂಟಿಲ್ಲದೇ ಕಲಸಿಕೊಳ್ಳಿ. ಹಿಟ್ಟಿನ ಮಿಶ್ರಣ ಮಂಚೂರಿ ಕರಿಯುವಷ್ಟು ತೆಳ್ಳಗಿರಲಿ. 

ಇದಕ್ಕೆ ತಯಾರಿಸಿಟ್ಟುಕೊಂಡ ಹಲಸಿನ ಕಾಯಿ ಹೋಳುಗಳನ್ನು ಹಾಕಿ ಅದ್ದಿ  ಕಾದ ಎಣ್ಣೆಯಲ್ಲಿ, ಸಣ್ಣ ಉರಿಯಲ್ಲಿ ಗರಿಗರಿಯಾಗಿ ಕರಿಯಿರಿ.

 ಈಗ ಒಂದು ಬಾಣಲೆಗೆ ೪-೫ ಚಮಚ ಎಣ್ಣೆ ಹಾಕಿ ಕಾದ ನಂತರ ಹೆಚ್ಚಿದ ಬೆಳ್ಳುಳ್ಳಿ, ಶುಂಠಿ ಮತ್ತು ಹಸಿಮೆಣಸಿನ ಕಾಯಿ ಹಾಕಿ ಸ್ವಲ್ಪ ಫ್ರೈ ಮಾಡಿ, ಇದಕ್ಕೆ ಈರುಳ್ಳಿ ಮತ್ತು ಕ್ಯಾಪ್ಸಿಕಂ ಹಾಕಿ ಒಂದು ನಿಮಿಷ ಫ್ರೈ ಮಾಡಿ. ನಂತರ ಒನ್ನೊಂದಾಗಿ ಸೋಯಾ ಸಾಸ್, ಟೊಮೇಟೊ ಮತ್ತು ಚಿಲ್ಲಿ ಸಾಸ್ ಹಾಕಿ ಒಮ್ಮೆ ಮಿಕ್ಸ್ ಮಾಡಿ. ಅರ್ಧ ಚಮಚ ಕಾರ್ನ್ ಫ್ಲೋರ್ ಅನ್ನು ಕಾಲು ಕಪ್ ನೀರಿಗೆ ಹಾಕಿ ಗಂಟಿಲ್ಲದಂತೆ ಕಲಸಿಕೊಂಡು ಬಾಣಲೆಯಲ್ಲಿರುವ ಮಿಶ್ರಣಕ್ಕೆ ಹಾಕಿ ಚೆನ್ನಾಗಿ ಕಲಕುತ್ತಾ ಸಕ್ಕರೆ ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಮಿಶ್ರಣ ಸ್ವಲ್ಪ ದಪ್ಪಗಾದಾಗ ಕರಿದಿಟ್ಟ ಹಲಸಿನಕಾಯಿ, ಕೊತ್ತಂಬರಿ ಸೊಪ್ಪು, ಹೆಚ್ಚಿದ ಈರುಳ್ಳಿ ಗಿಡ (spring onion) ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಉರಿ ಆರಿಸಿ. ಬಿಸಿ ಬಿಸಿ ಹಲಸಿನಕಾಯಿ ಮಂಚೂರಿ ಸವಿದು ನೋಡಿ. 

ಸಲಹೆ :
ಪ್ರತಿ ಹಂತದಲ್ಲೂ ಉಪ್ಪು ಹಾಕುವುದರಿಂದ ಸರಿಯಾಗಿ ನೋಡಿಕೊಂಡು ಹಾಕಿ. 






ಶುಕ್ರವಾರ, ಮಾರ್ಚ್ 10, 2017

ರಾಯಲ್ ರೈಸ್


ಬೇಕಾಗುವ ಸಾಮಾಗ್ರಿಗಳು: 
 ಅಕ್ಕಿ - 1 ಕಪ್,
 ಕ್ಯಾರೆಟ್ - 1”ಉದ್ದ ಕತ್ತರಿಸಿದ್ದು - ¼ ಕಪ್
 ಬೀನ್ಸ್ - 1” ಉದ್ದ ಕತ್ತರಿಸಿದ್ದು - ¼ ಕಪ್,
 ಬಾದಾಮಿ ಸಣ್ಣದಾಗಿ ಹೆಚ್ಚಿದ್ದು -  2 ಚಮಚ ,
 ಈರುಳ್ಳಿ ಉದ್ದುದ್ದಕ್ಕೆ ಸೀಳಿದ್ದು - 1,
 ಕ್ಯಾಪ್ಸಿಕಮ್ 1”ಉದ್ದ ಕತ್ತರಿಸಿದ್ದು -  ¼ ಕಪ್,
 ಕೊತ್ತ೦ಬರಿ ಸೊಪ್ಪು ಸಣ್ಣಗೆ ಹೆಚ್ಚಿದ್ದು - 2 ಚಮಚ ,
 ಚಕ್ಕೆ - 1”, ಧನಿಯಾ -  2 ಚಮಚ ,
 ಜೀರಿಗೆ - 2 ಚಮಚ,
 ಕೆ೦ಪು ಮೆಣಸು 5-6,
 ಚಿಲ್ಲಿ ಸಾಸ್ 1 ಚಮಚ,
ಸೋಯಾ ಸಾಸ್ 1 ಚಮಚ,
 ನಿ೦ಬೆ ರಸ 2 ಚಮಚ,
 ಗರ೦ ಮಸಾಲ ಪೌಡರ್ ½ ಚಮಚ ,
 ಎಣ್ಣೆ 3-4 ಚಮಚ, ಉಪ್ಪು ರುಚಿಗೆ ತಕ್ಕಷ್ಟು.




ವಿಧಾನ: ಅಕ್ಕಿಯನ್ನು ಉದುರುದುರಾಗಿ ಅನ್ನ ಮಾಡಿಕೊಳ್ಳಿ. ಧನಿಯಾ, ಜೀರಿಗೆ, ಕೆ೦ಪು ಮೆಣಸು, ಚಕ್ಕೆ ಇವನ್ನು ಸಣ್ಣ ಉರಿಯಲ್ಲಿ ಹುರಿದುಕೊ೦ಡು ಅದು ಬಿಸಿ ಆರಿದ ಮೇಲೆ ಮಿಕ್ಸಿಯಲ್ಲಿ ಪೌಡರ್ ಮಾಡಿ ಇಟ್ಟುಕೊಳ್ಳಿ. ಬಾಣಲೆಗೆ 2 ಚಮಚ ಎಣ್ಣೆ ಹಾಕಿ ಈರುಳ್ಳಿ, ಕ್ಯಾರೆಟ್, ಕ್ಯಾಪ್ಸಿಕಮ್, ಬೀನ್ಸ್ ಇವಲ್ಲ ಹಾಕಿ ಉಪ್ಪು ಹಾಕಿ ಅರ್ಧ ಬೇಯುವವರೆಗೆ ಕೈಯಾಡಿಸುತ್ತಿರಿ. ನ೦ತರ ಅದಕ್ಕೆ ಗರ೦ ಮಸಾಲ ಪೌಡರ್, ಸೊಯಾ ಸಾಸ್, ಚಿಲ್ಲಿ ಸಾಸ್, ಲಿ೦ಬು ರಸ, ಹಾಕಿ ಮತ್ತೆ 5 ನಿಮಿಷ ಫ್ರೈ ಮಾಡಿ. ಈಗ ಅನ್ನ ಹಾಕಿ ಸರಿಯಾಗಿ ಮಿಶ್ರಣ ಮಾಡಿ. ಉಪ್ಪು ನೋಡಿಕೊ೦ಡು ಬೇಕಾದಲ್ಲಿ ಸೇರಿಸಿ.ಮೇಲೆ ಬಾದಾಮಿ ಚೂರುಗಳು & ಹೆಚ್ಚಿದ ಕೊತ್ತ೦ಬರಿ ಸೊಪ್ಪನ್ನು ಉದುರಿಸಿ.

(ಬೊ೦ಬಾಟ್ ಭೋಜನ ನೋಡಿ ಕಲಿತಿದ್ದು)

ಶುಕ್ರವಾರ, ಮಾರ್ಚ್ 3, 2017

ತವಾ ಪುಲಾವ್ (ಬಾಂಬೆ ಸ್ಟೈಲ್):

ಸಾಮಗ್ರಿಗಳು:
ಅಕ್ಕಿ : 1.5 ಕಪ್1/2
ಸಣ್ಣ ಹೆಚ್ಚಿದ ಟೊಮೇಟೊ : 3/4 ಕಪ್
ಸಣ್ಣ ಹೆಚ್ಚಿದ ಈರುಳ್ಳಿ : 1/2 ಕಪ್ 
ಸಣ್ಣ ಹೆಚ್ಚಿದ ಕ್ಯಾಪ್ಸಿಕಂ : 1/2 ಕಪ್
ಉದ್ದುದ್ದ ಹೆಚ್ಚಿದ ಕ್ಯಾರೆಟ್ : 1/4 ಕಪ್
ಹಸಿ ಬಟಾಣಿ : 1/2 ಕಪ್
ಹೆಚ್ಚಿದ ಆಲೂಗಡ್ಡೆ : 1/4 ಕಪ್
ಉದ್ದ ಹೆಚ್ಚಿದ ಬೀನ್ಸ್ (ಬೇಕಿದ್ದಲ್ಲಿ ಮಾತ್ರ) : 1/4 ಕಪ್
ಪಾವ್ ಭಾಜಿ ಮಸಾಲಾ ಪೌಡರ್  (Everest) : 1 ಟೇಬಲ್ ಚಮಚ
ಅಚ್ಚ ಖಾರದ ಪುಡಿ : 1/2 ಚಮಚ
ಶುಂಠಿ ಬೆಳ್ಳುಳ್ಳಿ ಪೇಸ್ಟ್ : 1/2 ಚಮಚ
ಹೆಚ್ಚಿದ ಕೊತ್ತಂಬರಿ ಸೊಪ್ಪು : 1 ಚಮಚ
ಬೆಣ್ಣೆ : 3-4 ಟೇಬಲ್ ಚಮಚ
ಜೀರಿಗೆ : 1/2 ಚಮಚ
ಉಪ್ಪು : ರುಚಿಗೆ ತಕ್ಕಷ್ಟು

ವಿಧಾನ :
ಅಕ್ಕಿಯನ್ನು ತೊಳೆದು ಉದುರುದುರಾಗಿ ಅನ್ನ ಮಾಡಿಕೊಳ್ಳಿ. ಟೊಮೇಟೊ, ಈರುಳ್ಳಿ, ಕ್ಯಾಪ್ಸಿಕಂ ಹೊರತುಪಡಿಸಿ ಉಳಿದೆಲ್ಲಾ ತರಕಾರಿ ಮತ್ತು ಹಸಿ ಬಟಾಣಿಯನ್ನು ನೀರು ಸ್ವಲ್ಪವೇ ಉಪ್ಪು ಹಾಕಿ ಬೇಯಿಸಿ ನೀರು ಬಸಿದುಕೊಳ್ಳಿ. ಬಾಣಲೆಗೆ ಬೆಣ್ಣೆ ಹಾಕಿ ಕರಗಿದ ಮೇಲೆ ಜೀರಿಗೆ ಹಾಕಿ ಹುರಿದು ಅದಕ್ಕೆ ಈರುಳ್ಳಿ ಹಾಕಿ ಸ್ವಲ್ಪ ಫ್ರೈ ಮಾಡಿ ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಫ್ರೈ ಮಾಡಿ. ಈಗ ಟೊಮೇಟೊ, ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಮೆತ್ತಗಾಗುವ ತನಕ ಫ್ರೈ ಮಾಡಿ. ಇದಕ್ಕೆ ಕ್ಯಾಪ್ಸಿಕಂ ಹಾಕಿ ಒಂದು ನಿಮಿಷ ಫ್ರೈ ಮಾಡಿಕೊಂಡು ಪಾವ್ ಭಾಜಿ ಮಸಾಲಾ ಪೌಡರ್, ಅಚ್ಚ ಖಾರದ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ಬೇಯಿಸಿದ ತರಕಾರಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಸ್ವಲ್ಪ ಉಪ್ಪು ಬೇಕಿದ್ದಲ್ಲಿ ಹಾಕಿ, ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿ ಉರಿ ಆರಿಸಿ.

 ಇದಕ್ಕೆ ಉದುರುದುರಾಗಿ ಮಾಡಿಕೊಂಡ ಅನ್ನ ಹಾಕಿ ಚೆನ್ನಾಗಿ ಕಲಸಿದರೆ ಮುಂಬೈ ನ ಫೇಮಸ್ ತವಾ ಪುಲಾವ್ ಸಿದ್ಧ......


ಸಲಹೆಗಳು :
1.ಅನ್ನ ಮಾಡುವಾಗ ಸ್ವಲ್ಪ ಉಪ್ಪು ಹಾಕಿ ಬೇಯಿಸಬಹುದು. ಇದರಿಂದ ಅನ್ನಕ್ಕೆ ಉಪ್ಪು ಚೆನ್ನಾಗಿ ಅಂಟುತ್ತದೆ. 
2.ಪ್ರತಿ ಹಂತದಲ್ಲೂ ಉಪ್ಪು ಹಾಕುವುದರಿಂದ ಕೊನೆಯಲ್ಲಿ ಉಪ್ಪು ಹಾಕುವಾಗ ನೋಡಿಕೊಳ್ಳಿ.
3.ಟೊಮೇಟೊ, ಈರುಳ್ಳಿ, ಹಸಿಬಟಾಣಿ, ಆಲೂ, ಕಾಪ್ಸಿಕಂ ಬೇಕೇ ಬೇಕು. ಉಳಿದಂತೆ ನಿಮ್ಮಿಷ್ಟದ ತರಕಾರಿ ಹಾಕಬಹುದು