ಗುರುವಾರ, ಮಾರ್ಚ್ 30, 2017

ಅವಲಕ್ಕಿ ಬಾತ್ :

ಸಾಮಗ್ರಿಗಳು :
ದಪ್ಪ ಅವಲಕ್ಕಿ- 1 ಕಪ್,
ಹಸಿ ಬಟಾಣಿ - 1/4 ಕಪ್,
ಈರುಳ್ಳಿ - 1,
ಟೊಮೇಟೊ - 1 (ಬೇಕಿದ್ದಲ್ಲಿ ಮಾತ್ರ) 
ಹಸಿಮೆಣಸಿನಕಾಯಿ - 1,
ತೆಂಗಿನ ತುರಿ - 4 ಚಮಚ,
ರಸಂ ಪುಡಿ - 1/2 ಚಮಚ,
ಅರಿಶಿನ ಪುಡಿ - 1/4 ಚಮಚ,
ಎಣ್ಣೆ - 4-5 ಚಮಚ,
ಉದ್ದಿನ ಬೇಳೆ - 1/2 ಚಮಚ,
ಸಾಸಿವೆ - 1/4 ಚಮಚ,
ಕರಿಬೇವು - 6-8 ಎಲೆಗಳು,
ಸಕ್ಕರೆ- 1 ಚಮಚ,
ಉಪ್ಪು - ರುಚಿಗೆ 

ವಿಧಾನ :
ಮೊದಲು ಅವಲಕ್ಕಿಯನ್ನು ತೊಳೆದು, ನೀರು ಹಾಕಿ 15-20 ನಿಮಿಷ ನೆನೆಸಿಡಿ. ಮೆತ್ತಗಾಗಬೇಕು, ಆದರೆ ತುಂಬಾ ಗಂಜಿಯಾಗುವಷ್ಟು ಮೆತ್ತಗಾಗಬಾರದು. ಈರುಳ್ಳಿ ಮತ್ತು ಟೊಮ್ಯಾಟೊವನ್ನು ಸಣ್ಣಗೆ ಹೆಚ್ಚಿಕೊಳ್ಳಿ. ಹಸಿಮೆಣಸಿನಕಾಯಿಯನ್ನು ಉದ್ದ ಸೀಳಿಕೊಳ್ಳಿ.  ಹಸಿಬಟಾಣಿಗೆ ನೀರು ಮತ್ತು ಚಿಟಿಕೆ ಉಪ್ಪು ಹಾಕಿ ಬೇಯಿಸಿಕೊಳ್ಳಿ. ನೆಂದ ಅವಲಕ್ಕಿಯ ನೀರನ್ನು ಪೂರ್ತಿಯಾಗಿ ಬಸಿದುಕೊಂಡು ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಸಕ್ಕರೆ ಹಾಕಿ ಕಲಸಿಟ್ಟುಕೊಳ್ಳಿ. ಬಾಣಲೆಯನ್ನು ಒಲೆಯ ಮೇಲಿಟ್ಟು ಎಣ್ಣೆ ಹಾಕಿ ಕಾದ ಮೇಲೆ ಉದ್ದಿನ ಬೇಳೆ ಹಾಕಿ, ಅದು ಹೊಂಬಣ್ಣ ಬಂದ ಮೇಲೆ ಸಾಸಿವೆ ಹಾಕಿ ಚಿಟಪಟಾಯಿಸಿ. ಇದಕ್ಕೆ ಹಸಿಮೆಣಸಿನಕಾಯಿ, ಕರಿಬೇವು ಹಾಕಿ ಒಮ್ಮೆ ಹುರಿದು, ಹೆಚ್ಚಿದ ಈರುಳ್ಳಿ ಹಾಕಿ ಫ್ರೈ ಮಾಡಿ. ನಂತರ ಹೆಚ್ಚಿದ ಟೊಮೇಟೊ ಹಾಕಿ ಮೆತ್ತಗಾಗುವವರೆಗೆ ಹುರಿಯಿರಿ. ಇದಕ್ಕೆ ಬೇಯಿಸಿಕೊಂಡ ಬಟಾಣಿ, ತೆಂಗಿನತುರಿ, ಅರಿಶಿನ ಪುಡಿ, ರಸಂ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಅವಲಕ್ಕಿ ಹಾಕಿ ಕಲಸಿ. ಬೇಕಿದ್ದಲ್ಲಿ ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿದರೆ ಬಿಸಿ ಬಿಸಿ ಅವಲಕ್ಕಿ ರೆಡಿ. ಸರ್ವ್ ಮಾಡುವಾಗ ಗರಿ ಗರಿ ಸೇವ್ ಅಥವಾ mixture ಅನ್ನು ಮೇಲಿಂದ ಉದುರಿಸಿ ಕೊಡಿ. ಇದು ಬೆಳಗ್ಗಿನ ಉಪಹಾರಕ್ಕೆ ಅಥವಾ ಸಂಜೆಯ ಟೀ / ಕಾಫೀ ಜೊತೆ ಕೂಡ ಮಾಡಿಕೊಳ್ಳಬಹುದು. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ