ಸಾಮಗ್ರಿಗಳು :
ಮಂಡಕ್ಕಿ (ಪುರಿ) : 6-7 ಬೌಲ್
ಈರುಳ್ಳಿ : 1
ಟೊಮೇಟೊ : 1
ಹುರಿಗಡಲೆ ಪುಡಿ : 5 ಟೇಬಲ್ ಚಮಚ
ಹಸಿಮೆಣಸು : 5-6
ಅರಿಶಿನ ಪುಡಿ : 1/2 ಚಮಚ
ಶೇಂಗಾ : 4-5 ಟೇಬಲ್ ಚಮಚ
ಉದ್ದಿನಬೇಳೆ : 1 ಚಮಚ
ಸಾಸಿವೆ : 1/2 ಚಮಚ
ಜೀರಿಗೆ : 1/2 ಚಮಚ
ಕರಿಬೇವು : ಸ್ವಲ್ಪ
ಕೊತ್ತಂಬರಿ ಸೊಪ್ಪು : ಸ್ವಲ್ಪ
ಉಪ್ಪು : ಸ್ವಲ್ಪ
ಲಿಂಬುರಸ : 1 ಟೇಬಲ್ ಚಮಚ
ಎಣ್ಣೆ : 4-5 ಟೇಬಲ್ ಚಮಚ
ವಿಧಾನ : ಮಂಡಕ್ಕಿಯನ್ನು ನೀರಿನಲ್ಲಿ ನೆನೆಸಿ ಸ್ವಲ್ಪ ಮೆತ್ತಗಾಗುತ್ತಿದ್ದಂತೇ ತೆಗೆದು ನೀರು ಹಿಂಡಿ ಒಂದು ಪಾತ್ರೆಗೆ ಹಾಕಿಟ್ಟುಕೊಳ್ಳಿ. ಬಾಣಲೆಗೆ ಎಣ್ಣೆ ಹಾಕಿ ಕಾಯಿಸಿ ಶೇಂಗಾ ಹಾಕಿ ಹುರಿಯಿರಿ, ಉದ್ದಿನ ಬೇಳೆ ಹಾಕಿ ಕೆಂಪಗಾದ ಮೇಲೆ ಜೀರಿಗೆ, ಸಾಸಿವೆ ಹಾಕಿ ಸಿಡಿಸಿ. ಇದಕ್ಕೆ ಉದ್ದುದ್ದ ಸೀಳಿದ ಹಸಿಮೆಣಸಿನ ಕಾಯಿ, ಕರಿಬೇವು ಹಾಕಿ ಹುರಿದು, ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಹುರಿಯಿರಿ. ನಂತರ ಸಣ್ಣ ಹೆಚ್ಚಿದ ಟೊಮೇಟೊ ಹಾಕಿ ಸ್ವಲ್ಪ ಉಪ್ಪು ಹಾಕಿ (ಮಂಡಕ್ಕಿಯಲ್ಲಿ ಉಪ್ಪಿನಂಶ ಇರುವುದರಿಂದ ಸ್ವಲ್ಪ ಹಾಕಿದರೆ ಸಾಕು) ಟೊಮೇಟೊ ಮೆತ್ತಗಾಗುವವರೆಗೆ ಹುರಿಯಿರಿ. ಇದಕ್ಕೆ ಅರಿಶಿನ ಪುಡಿ ಹಾಕಿ ಮಿಕ್ಸ್ ಮಾಡಿ. ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪು, ರೆಡಿ ಮಾಡಿಟ್ಟ ಮಂಡಕ್ಕಿ ಹಾಕಿ, ಲಿಂಬು ರಸ, ಹುರಿಗಡಲೆ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಉರಿ ಆರಿಸಿ. ಬಿಸಿ ಬಿಸಿಯಾದ ಉತ್ತರ ಕರ್ನಾಟಕ ಶೈಲಿಯ ಒಗ್ಗರಣೆ ಮಂಡಕ್ಕಿ ಟೀ, ಕಾಫಿ ಜೊತೆ ಸವಿಯಿರಿ. ಇದರ ಜೊತೆ ಖಾರಕ್ಕೆ ಮೆಣಸಿನ ಕಾಯಿ ಬೇಕಿದ್ದಲ್ಲಿ : ಹಸಿಮೆಣಸಿನಕಾಯಿ ಸ್ವಲ್ಪ ಸೀಳಿ ಅದಕ್ಕೆ ಸ್ವಲ್ಪವೇ ಉಪ್ಪು ಹಾಕಿ (ಬೇಕಿದ್ದಲ್ಲಿ ಆಮಚೂರ್ ಪುಡಿ ಹಾಕಿ) ಎಣ್ಣೆಯಲ್ಲಿ ಹುರಿದು ತೆಗೆದಿಟ್ಟುಕೊಳ್ಳಿ. ಖಾರಕ್ಕೆ ಬೇಕಿದ್ದಲ್ಲಿ ಈ ಮೆಣಸನ್ನು ತಿನ್ನಲು ರುಚಿಯಾಗಿರುತ್ತದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ