ಗುರುವಾರ, ಅಕ್ಟೋಬರ್ 8, 2015

ಅಕ್ಕಿ ಹಪ್ಪಳ :

ಸಾಮಗ್ರಿಗಳು :
ದೋಸೆ ಅಕ್ಕಿ : ೧ ಕಿಗ್ರಾಂ,
ಸಬ್ಬಕ್ಕಿ : ೧/೪ ಕಿಗ್ರಾಂ,
ನೀರು & ಉಪ್ಪು

ಹಪ್ಪಳ ಒತ್ತಲು ಪ್ರೆಸ್ಸಿಂಗ್ ಮಷೀನ್ ಅಥವಾ ರೋಟಿ ಮೇಕರ್ ಬೇಕು. ಮತ್ತು ಹಪ್ಪಳ ಒಣಗಿಸಲು ದೊಡ್ಡ ಪ್ಲಾಸ್ಟಿಕ್ ಅಥವಾ ತೆಳ್ಳಗಿನ ಸಿಂಥೆಟಿಕ್ ಸೀರೆ ಆದರೂ ನಡೆದೀತು. 

ಮಸಾಲೆಗೆ ಸಾಮಗ್ರಿಗಳು :
ಹಸಿಮೆಣಸಿನ ಕಾಯಿ : ೧೦-೧೫,
ಜೀರಿಗೆ : ೨ ಚಮಚ,
ಇಂಗು : ೧/೪ ಚಮಚ

ವಿಧಾನ:
    ಅಕ್ಕಿಯನ್ನು ಚೆನ್ನಾಗಿ ತೊಳೆದು ನೆರಳಿನಲ್ಲಿ ಒಣಗಿಸಿಕೊಳ್ಳಿ. ನಂತರ ಇದಕ್ಕೆ ಸಬ್ಬಕ್ಕಿ ಸೇರಿಸಿ ಗಿರಣಿಯಲ್ಲಿ ನುಣ್ಣಗೆ ಹಿಟ್ಟು ಮಾಡಿಸಿಕೊಳ್ಳಿ.
    ಒಂದು ದಪ್ಪ ತಳದ, ದೊಡ್ಡ ಪಾತ್ರೆಯಲ್ಲಿ ೨.೫ - ೩ ಲೀಟರ್ ನಷ್ಟು ನೀರು ಹಾಕಿ ಕುದಿಸಿ. ಮಸಾಲೆ ಸಾಮಗ್ರಿಗಳನ್ನು ಮಿಕ್ಸಿಗೆ ಹಾಕಿ ಪೇಸ್ಟ್ ಮಾಡಿಕೊಳ್ಳಿ. ನೀರು ಚೆನ್ನಾಗಿ ಕುದಿಯುವಾಗ ರುಬ್ಬಿದ ಮಿಶ್ರಣ, ಉಪ್ಪು, ಅಕ್ಕಿ-ಸಬ್ಬಕ್ಕಿ ಹಿಟ್ಟು ಹಾಕಿ ೧೫-೨೦ ನಿಮಿಷ ಸಣ್ಣ ಉರಿಯಲ್ಲಿ, ಕಲಕುತ್ತಾ ಬೇಯಿಸಿ. ನೀರು ಆರಿ ಹಿಟ್ಟು ಗಟ್ಟಿಯಾಗಬೇಕು. ತಿಕ್ಕಿ ಉಂಡೆ ಮಾಡುವಷ್ಟು ಗಟ್ಟಿಯಾಗಬೇಕು. (ಕಮ್ಮಿ ನೀರು ಹಾಕಿ ಜಾಸ್ತಿ ಹೊತ್ತು ಬೇಯಿಸದಿದ್ದರೆ ಹಪ್ಪಳ ಕರಿದಾಗ ಚೆನ್ನಾಗಿ ಅರಳುವುದಿಲ್ಲ.) 

ಹಿಟ್ಟು ಸ್ವಲ್ಪ ತಣ್ಣಗಾದ ಮೇಲೆ ಕೈಗೆ ಸ್ವಲ್ಪ ಎಣ್ಣೆ ಸವರಿಕೊಂಡು ನೆಲ್ಲಿಕಾಯಿ ಗಾತ್ರದ ಹಿಟ್ಟು ತೆಗೆದುಕೊಂಡು ಚೆನ್ನಾಗಿ ತಿಕ್ಕಿ ತಿಕ್ಕಿ ಉಂಡೆ ಮಾಡಿಕೊಳ್ಳಿ. ತೊಳೆದ ಹಾಲಿನ ಕವರ್ ಕತ್ತರಿಸಿಕೊಂಡು, ಎಣ್ಣೆ ಸವರಿ ಒಂದನ್ನು ಪ್ರೆಸ್ಸಿಂಗ್ ಮಷೀನ್ ನಲ್ಲಿಟ್ಟು ಅದರ ಮೇಲೆ ಒಂದು ಉಂಡೆ ಇಟ್ಟು ಮೇಲಿಂದ ಇನ್ನೊಂದು ಪ್ಲಾಸ್ಟಿಕ್ ಇಟ್ಟು ಒತ್ತಿ.



ಹಪ್ಪಳ ಒಣಗಿಸುವ ಪ್ಲಾಸ್ಟಿಕ್/ ಬಟ್ಟೆ ಮೇಲೆ ಒಂದೊಂದಾಗಿ ಹಾಕುತ್ತಾ ಬನ್ನಿ. ಎಲ್ಲಾ ಮುಗಿದ ಮೇಲೆ ಬಿಸಿಲಿನಲ್ಲಿ ಒಣಗಿಸಿ. 

ಖಡಕ್ ಬಿಸಿಲಿದ್ದರೆ ಒಂದು ದಿನ ಒಣಗಿದರೆ ಸಾಕು. ಇದನ್ನು ಗಾಳಿ ಆಡದ ಡಬ್ಬದಲ್ಲಿ ತುಂಬಿಡಿ. ಒಂದು ವರ್ಷಕ್ಕೂ ಹೆಚ್ಚು ದಿನ ಕೆಡದಂತೆ ಇಡಬಹುದು. 
    ಊಟಕ್ಕೆ ಸಾಂಬಾರ್, ತೊವ್ವೆ, ತಿಳಿಸಾರು ಮಾಡಿದಾಗ ಕಾದ ಎಣ್ಣೆಯಲ್ಲಿ ಹಪ್ಪಳ ಕರಿದುಕೊಳ್ಳಿ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ