ಗುರುವಾರ, ನವೆಂಬರ್ 24, 2016

ಅರಳು - ಶೇಂಗಾ ಉಂಡೆ :

ಸಾಮಗ್ರಿಗಳು :
ಅರಳು: 1 ಕಪ್ 
ಶೇಂಗಾ : 1 ಕಪ್ 
ಹುರಿಗಡಲೆ : 1/4 ಕಪ್ 
ತೆಂಗಿನ ತುರಿ / ಕೊಬ್ಬರಿ ತುರಿ : 1 ಕಪ್ 
ಗಸಗಸೆ : 2 ಚಮಚ (ಬೇಕಿದ್ದಲ್ಲಿ ಮಾತ್ರ) 
ಬೆಲ್ಲ : 1 1/4 ಕಪ್ 

ವಿಧಾನ :
ಬೆಲ್ಲಕ್ಕೆ ಸ್ವಲ್ಪ ನೀರು ಹಾಕಿ ಒಲೆಯ ಮೇಲಿಟ್ಟುಕೊಂಡು ಆಗಾಗ ಕಲಕುತ್ತಿರಿ. ಇತ್ತ ಶೇಂಗಾ ಹುರಿದು ಮೇಲಿನ ಹೊಟ್ಟು ತೆಗೆದು ಎರಡು ಭಾಗ ಮಾಡಿಕೊಳ್ಳಿ. ಗಸಗಸೆಯನ್ನು ಹುರಿದಿಟ್ಟುಕೊಳ್ಳಿ. ಅರಳನ್ನು ಬೇಕಾದರೆ ಒಮ್ಮೆ ಮಿಕ್ಸಿ ಗೆ ಹಾಕಿ ತರಿ ತರಿ ಪುಡಿ ಮಾಡಿಕೊಳ್ಳಬಹುದು ಅಥವಾ ಹಾಗೆಯೇ ಹಾಕಬಹುದು. ತೆಂಗಿನ ತುರಿಯನ್ನು ಒಮ್ಮೆ ಮಿಕ್ಸಿಗೆ ಹಾಕಿ ತರಿ ತರಿ ಮಾಡಿಕೊಳ್ಳಿ. ಕೊಬ್ಬರಿ ತುರಿಯಾದರೆ ಸ್ವಲ್ಪ ಹುರಿದು ಹಾಗೆಯೇ ಹಾಕಬಹುದು. ಬೆಲ್ಲ ಒಂದೆಳೆ ಪಾಕಕ್ಕೆ ಬಂದ ಮೇಲೆ ಒಡೆದು ರೆಡಿ ಮಾಡಿಟ್ಟ ಶೇಂಗಾ, ತೆಂಗಿನ ತುರಿ / ಕೊಬ್ಬರಿ ತುರಿ, ಹುರಿಗಡಲೆ, ಅರಳು ಎಲ್ಲವನ್ನೂ ಹಾಕಿ ಕೈ ಬಿಡದೆ ಚೆನ್ನಾಗಿ ಕಲಕುತ್ತಿರಿ. ಮಿಶ್ರಣ ಸುತ್ತಲೂ ಅಂಟಲು ಶುರುವಾದಾಗ ಉರಿ ಆರಿಸಿ ತಣ್ಣಗಾಗಲು ಬಿಡಿ. ಪೂರ್ತಿ ತಣ್ಣಗಾದರೆ ಗಟ್ಟಿಯಾಗುತ್ತದೆ. 

ನಿಮಗೆ ಉಂಡೆ ಕಟ್ಟಲು ಸಾಧ್ಯವಾಗುವಷ್ಟು ಬಿಸಿ ಇರುವಾಗಲೇ ಕೈಗೆ ಸ್ವಲ್ಪ ನೀರು ಮುಟ್ಟಿಕೊಂಡು ನಿಂಬೆ ಗಾತ್ರದ ಉಂಡೆ ಕಟ್ಟಿ. ಕೊನೆಯಲ್ಲಿ ಗಟ್ಟಿಯಾಗಿ ಮಿಶ್ರಣ ಪಾತ್ರೆಗೆ ಅಂಟಿಕೊಂಡರೆ ಮತ್ತೆ ಸ್ವಲ್ಪ ಬಿಸಿ ಮಾಡಿಕೊಂಡು ಉಂಡೆ ಕಟ್ಟಿ. ಅಗಿದಷ್ಟೂ ರುಚಿ ಹೆಚ್ಚಿಸುವ ಉಂಡೆಯನ್ನು ಸವಿದು ನೋಡಿ.... 
 



ಸಲಹೆಗಳು:
1) ಒಂದು ಸಣ್ಣ ಪ್ಲೇಟ್ ಗೆ ನೀರು ಹಾಕಿಕೊಂಡು ಪಾಕವನ್ನು ನೀರೊಳಗೆ ಹಾಕಿ ಬೆರಳಲ್ಲಿ ಮುಟ್ಟಿದರೆ ಉಂಡೆಯಂತೆ ಬಂದರೆ ಪಾಕ ಬಂದಂತೆ. 
2) ಶೇಂಗಾ-ಅರಳು- ಹುರಿಗಡಲೆ - ಕೊಬ್ಬರಿ ಇವುಗಳಲ್ಲಿ ಯಾವುದೇ ಅಳತೆಯನ್ನು ನಿಮ್ಮಿಷ್ಟಕ್ಕೆ ಅನುಸಾರ ಬದಲಿಸಿಕೊಳ್ಳಬಹುದು. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ