ಬೇಕಾಗುವ ಸಾಮಗ್ರಿಗಳು: ಸಣ್ಣಗೆ ಹೆಚ್ಚಿದ ಬದನೇಕಾಯಿ 1/2 ಕಪ್, ಸಣ್ಣಗೆ ಹೆಚ್ಚಿದ ಈರುಳ್ಳಿ 1/4 ಕಪ್, ತೆಂಗಿನ ತುರಿ 1/2 ಕಪ್, ಮೊಸರು 1/2 ಕಪ್, ಎಣ್ಣೆ 3-4 ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಹಸಿಮೆಣಸಿನ ಕಾಯಿ 1-2, ಉದ್ದಿನ ಬೇಳೆ 1/2 ಚಮಚ, ಸಾಸಿವೆ 1/4 ಚಮಚ
ವಿಧಾನ: ಹೆಚ್ಚಿದ ಬದನೆಕಾಯಿಗೆ ಸ್ವಲ್ಪ ಉಪ್ಪು ಉದುರಿಸಿ ಕಲಸಿ 10 ನಿಮಿಷ ಬಿಟ್ಟು ನಂತರ ಅದನ್ನು ಹಿಂಡಿ ನೀರು ತೆಗೆದಿಟ್ಟುಕೊಳ್ಳಿ. ಒಂದು ಬಾಣಲೆಗೆ ಎಣ್ಣೆ, ಉದ್ದಿನಬೇಳೆ ಹಾಕಿ ಸ್ವಲ್ಪ ಕೆಂಪಗಾದ ಮೇಲೆ ಸಾಸಿವೆ ಹಾಕಿ ಸಿಡಿಸಿ, ಹೆಚ್ಚಿದ ಹಸಿ ಮೆಣಸಿನಕಾಯಿ ಹಾಕಿ, ಈರುಳ್ಳಿ ಹಾಕಿ ಹುರಿಯಿರಿ. ಈರುಳ್ಳಿ ಚೆನ್ನಾಗಿ ಹುರಿದ ಮೇಲೆ ತಯಾರಿಸಿಟ್ಟ ಬದನೇಕಾಯಿ ಹಾಕಿ ಸಣ್ಣ ಉರಿಯಲ್ಲಿ ಹುರಿಯಿರಿ. ಬದನೇಕಾಯಿ ಚೆನ್ನಾಗಿ ಹುರಿದು ಬೆಂದ ಮೇಲೆ ಉರಿ ಆರಿಸಿ ತಣ್ಣಗಾಗಲು ಬಿಡಿ. ಅಷ್ಟರಲ್ಲಿ ತೆಂಗಿನ ತುರಿಗೆ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ತಣ್ಣಗಾದ ಬದನೆ ಮಿಶ್ರಣಕ್ಕೆ ರುಬ್ಬಿದ ಮಿಶ್ರಣ, ಮೊಸರು, ಉಪ್ಪು ಹಾಕಿ ಕಲಕಿದರೆ ಬದನೇಕಾಯಿ ಹಶಿ ಅನ್ನದ ಜೊತೆ ಸವಿಯಲು ಸಿದ್ಧ......
ಸಲಹೆ :
1) ಬದನೆಕಾಯಿಗೆ ಉಪ್ಪು ಹಾಕಿ ನೀರನ್ನು ಹಿಂಡುವುದರಿಂದ ಮಾಡಿದ ಅಡುಗೆ ಕಪ್ಪಗಾಗುವುದಿಲ್ಲ.
2) ಮೊಸರು ಜಾಸ್ತಿ ಹುಳಿ ಎನಿಸಿದರೆ ಎರಡು ದೊಡ್ಡ ಚಿಟಿಕೆಯಷ್ಟು ಸಕ್ಕರೆ ಹಾಕಿ.