ಶುಕ್ರವಾರ, ಜುಲೈ 29, 2016

ಕ್ಯಾರೇಟ್ ಕ್ಯಾಪ್ಸಿಕಮ್ ಚಪಾತಿ:

ಸಾಮಗ್ರಿಗಳು : ಗೋಧಿ ಹಿಟ್ಟು 2 ಕಪ್, ಕ್ಯಾರೇಟ್ - 1, ಕ್ಯಾಪ್ಸಿಕಮ್ - 1, ಉಪ್ಪು, ಕಿಚನ್ ಕಿ೦ಗ್ ಮಸಾಲಾ - 1 ಚಮಚ, ಅಚ್ಚ ಖಾರದ ಪುಡಿ, ಎಣ್ಣೆ 1/2 ಕಪ್.





ವಿಧಾನ: ಕ್ಯಾಪ್ಸಿಕಮ್ ನ್ನು ಸಣ್ಣಗೆ ಹೆಚ್ಚಿಕೊಳ್ಳಿ, ಹಾಗೆ ಕ್ಯಾರೇಟ್ ನ್ನು ತುರಿದುಕೊಳ್ಳಿ. ಒ೦ದು ಬಾಣಲೆಗೆ 2 ಚಮಚ ಎಣ್ಣೆ ಹಾಕಿ ಅದು ಕಾದ ಮೇಲೆ ಹೆಚ್ಚಿಟ್ಟ ಕ್ಯಾಪ್ಸಿಕಮ್ & ಕ್ಯಾರೇಟ್ ಹಾಕಿ 5 ನಿಮಿಷ ಫ್ರೈ ಮಾಡಿ. ಸ್ವಲ್ಪ ನೀರು, ಉಪ್,ಪು ಕಿಚನ್ ಕಿ೦ಗ್ ಮಸಾಲ, ಅಚ್ಚ ಖರದ ಪುಡಿ ಹಾಕಿ ಬೇಯಿಸಿ. ಅರ್ಧ ಬೆ೦ದರೆ ಸಾಕು. ಹಾಗೆ ಇದು ಬಿಸಿ ಕಮ್ಮಿ ಆದ ಮೇಲೆ ಗೋಧಿ ಹಿಟ್ಟು ಸೇರಿಸಿ ಚಪಾತಿಯ ಹಿಟ್ಟು ಕಲೆಸಿ. ಈಗ ಉ೦ಡೆ ಮಾಡಿಕೊ೦ಡು ಎಣ್ಣೆ ಸವರಿಕೊಂಡ ಪ್ಲಾಸ್ಟಿಕ್ ಮೇಲೆ ಚಪಾತಿಯನ್ನು ಲಟ್ಟಿಸಿ ಕಾದ ಕಾವಲಿಯ ಮೇಲೆ ಹಾಕಿ ಮೀಡಿಯಮ್ ಉರಿಯಲ್ಲಿ ಬೇಯಿಸಿ. ಬೇಯಿಸುವಾಗ ಸ್ವಲ್ಪ ಎಣ್ಣೆ ಹಾಕಿ. ಈಗ ಬಿಸಿ ಬಿಸಿ ಕ್ಯಾರೇಟ್ ಕ್ಯಾಪ್ಸಿಕಮ್ ಚಪಾತಿ ತಿನ್ನಲು ಸಿದ್ಧ. ಬೇಕಾದರೆ ಚಟ್ನಿ ಜೊತೆ ತಿನ್ನಬಹುದು. ಹಾಗೆ ತಿನ್ನಲು ರುಚಿಯಾಗಿರುತ್ತದೆ.

ಶುಕ್ರವಾರ, ಜುಲೈ 22, 2016

ದೊಡ್ಡಪತ್ರೆ ಸೊಪ್ಪಿನ ವಡೆ :

ಗೆಳತಿಯೊಬ್ಬಳಿಂದ ಕಲಿತ ರೆಸಿಪಿ ಇದು... ಈ ಮಳೆಯ ವಾತಾವರಣಕ್ಕೆ, ಸಂಜೆ ಟೀ/ ಕಾಫೀ ಜೊತೆ ಒಳ್ಳೆಯ ಕಾಂಬಿನೇಷನ್..... 

ಸಾಮಗ್ರಿಗಳು:
ದೊಡ್ಡಪತ್ರೆ ಎಲೆಗಳು : 8-10
ಜೀರಿಗೆ: 1 ಚಮಚ
ಎಳ್ಳು : 1 ಚಮಚ 
ತೆಂಗಿನ ತುರಿ : 1/2 ಕಪ್ 
ಶೇಂಗಾ: 1/4 ಕಪ್ 
ಉಪ್ಪಿಟ್ಟಿನ ರವಾ : 1 - 1 1/4 ಕಪ್ 
ಕರಿಬೇವು : 10-12 ಎಲೆಗಳು 
ಉಪ್ಪು : ರುಚಿಗೆ 
ಎಣ್ಣೆ : ಕರಿಯಲು 

ವಿಧಾನ :
ಒಗ್ಗರಣೆ ಸೌಟಿಗೆ 1/2 ಚಮಚ ಎಣ್ಣೆ ಹಾಕಿ ಜೀರಿಗೆ ಹಾಕಿ ಸ್ವಲ್ಪ ಹುರಿದು ಅದಕ್ಕೆ ದೊಡ್ಡಪತ್ರೆ ಎಲೆಗಳನ್ನು ಕತ್ತರಿಸಿ ಹಾಕಿ ಹುರಿಯಿರಿ. ಇದು ಸ್ವಲ್ಪ ಬಾಡಿದ ಮೇಲೆ ಎಳ್ಳು ಹಾಕಿ ಚಿಟಪಟಾಯಿಸಿ. ನಂತರ ತೆಂಗಿನ ತುರಿಗೆ ಹುರಿದ ಮಿಶ್ರಣ ಸ್ವಲ್ಪ ನೀರು ಸೇರಿಸಿ ರುಬ್ಬಿ. ಈ ಮಿಶ್ರಣ ಗೊಜ್ಜಿನ ಹದಕ್ಕೆ ಇರಲಿ. ತುಂಬಾ ನೀರು ಹಾಕಬೇಡಿ. ಶೇಂಗಾವನ್ನು ಸ್ವಲ್ಪ ಹುರಿದು ದೊಡ್ಡ ತರಿ ಇರುವಂತೆ ಪುಡಿ ಮಾಡಿ. ಉಪ್ಪಿಟ್ಟಿನ ರವೆಯನ್ನು ಹುರಿದುಕೊಳ್ಳಿ (ಉಪ್ಪಿಟ್ಟಿಗೆ ಹುರಿಯುವಷ್ಟು). ನಂತರ ರುಬ್ಬಿದ ಮಿಶ್ರಣಕ್ಕೆ ಹೆಚ್ಚಿದ ಕರಿಬೇವು, ಉಪ್ಪು, ಪುಡಿ ಮಾಡಿದ ಶೇಂಗಾ, 2 ಚಮಚ ಎಣ್ಣೆ ಹಾಕಿ, ಸ್ವಲ್ಪ ಸ್ವಲ್ಪ ರವೆ ಹಾಕುತ್ತಾ ಕಲಸಿ. ವಡೆ ತಟ್ಟಲು ಬರುವಷ್ಟು ಗಟ್ಟಿ ಯಾಗಿ ಕಲಸಿ.

ಕಲಸಿದ ಮಿಶ್ರಣದಿಂದ ಲಿಂಬು ಗಾತ್ರದ ಉಂಡೆ ಮಾಡಿಕೊಂಡು ಎಣ್ಣೆ ಸವರಿಕೊಂಡ ಪ್ಲಾಸ್ಟಿಕ್ ಮೇಲೆ ವಡೆಯಂತೆ ತಟ್ಟಿ ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವತನಕ ಕರಿದರೆ ದೊಡ್ಡಪತ್ರೆ ವಡೆ ಸವಿಯಲು ಸಿದ್ಧ. 






ಸೋಮವಾರ, ಜುಲೈ 18, 2016

ಹಲಸಿನ ಹಣ್ಣಿನ ದೋಸೆ:

ಸಾಮಗ್ರಿಗಳು:
 ಅಕ್ಕಿ - 2ಕಪ್, 
ಹಲಸಿನಹಣ್ಣಿನ ತೊಳೆ - 15 
ಬೆಲ್ಲ - 2 ಟೇ. ಚಮಚ
ಉಪ್ಪು - 1 ಚಮಚ

ವಿಧಾನ: ಅಕ್ಕಿಯನ್ನು 5-6 ಗ೦ಟೆ ನೀರಿನಲ್ಲಿ ನೆನೆಸಿಡಿ. ಬೆಳಿಗ್ಗೆ ದೋಸೆ ಮಾಡುವಿರಾದರೆ ರಾತ್ರಿ ಅಕ್ಕಿಯನ್ನು ನುಣ್ಣಗೆ ರುಬ್ಬಿಟ್ಟುಕೊಳ್ಳಿ. ಬೆಳಗ್ಗೆ ಹಲಸಿನಹಣ್ಣಿನ ತೊಳೆಯನ್ನು ರುಬ್ಬಿ ಇದಕ್ಕೆ ಉಪ್ಪು ಬೆಲ್ಲ ಸೇರಿಸಿ ರುಬ್ಬಿಟ್ಟ ಅಕ್ಕಿ ಹಿಟ್ಟಿಗೆ ಸೇರಿಸಿ. ಕಾವಲಿಯನ್ನು ಇಟ್ಟು ಉರಿಯನ್ನು ಹದವಾಗಿಡಿ ಕಾವಲಿಗೆ ಸ್ವಲ್ಪ ಎಣ್ಣೆ ಹಚ್ಚಿ ದೋಸೆಹಿಟ್ಟು ಹಾಕಿ ಹರಡಿ.ಸ್ವಲ್ಪ ಕೆ೦ಪಾಗುತ್ತಲೆ ಕಾವಲಿಯಿ೦ದ ದೋಸೆ ತೆಗೆದು, ಬಿಸಿ ಬಿಸಿ ದೋಸೆಗೆ ತುಪ್ಪ/ಬೆಣ್ಣೆ ಚಟ್ನಿಪುಡಿ/ ಹಸಿಮೆಣಸಿನ ಚಟ್ನಿ ಜೊತೆ ಸವಿಯಿರಿ.


ಸೂಚನೆ: ಬೆಲ್ಲ & ಹಲಸಿನಹಣ್ಣಿನ ತೊಳೆಯನ್ನು ಹಿಟ್ಟಿನ ಹದ ನೋಡಿಕೊ೦ಡು ಹಾಕಬೇಕು. ಜಾಸ್ತಿ ಹಾಕಿದರೆ ದೋಸೆಯನ್ನು ಕಾವಲಿಯಿ೦ದ ತೆಗೆಯಲು ಕಷ್ಟವಾಗುತ್ತದೆ.

ಶನಿವಾರ, ಜುಲೈ 9, 2016

ಶ್ಯಾವಿಗೆ ಶಿರಾ


ಸಾಮಗ್ರಿಗಳು :
MTR ಶ್ಯಾವಿಗೆ 150 ಗ್ರಾ೦
ಹಾಲು 1 1/4 ಕಪ್
ಸಕ್ಕರೆ 1- 1 1/4 ಕಪ್, 
ತುಪ್ಪ 1/4 ಕಪ್, 
ಗೋಡಂಬಿ 6-7,
ಹಳದಿ / ಕೇಸರಿ ಬಣ್ಣ 3-4 ಚಿಟಿಕೆ (Food Color)

ವಿಧಾನ:
ಶ್ಯಾವಿಗೆಯನ್ನು ಬಾಣಲೆಗೆ ಹಾಕಿ ತುಪ್ಪ ಹಾಕಿ ಹೊಂಬಣ್ಣಕ್ಕೆ ಹುರಿಯಿರಿ. ನಂತರ ಚೂರು ಮಾಡಿದ ಗೋಡಂಬಿ ಹಾಕಿ. ಇದಕ್ಕೆ ಎರಡು ಚಮಚ ಹಾಲಿಗೆ ಹಳದಿ / ಕೇಸರಿ ಬಣ್ಣವನ್ನು ಹಾಕಿ ಕಲಕಿ ಅದನ್ನು ಹಾಕಿ. ನಂತರ ಬಿಸಿ ಬಿಸಿ ಹಾಲನ್ನು ಸ್ವಲ್ಪ ಸ್ವಲ್ಪವೇ ಹಾಕುತ್ತ ಕಲಕುತ್ತಾ ಬನ್ನಿ.  ಶ್ಯಾವಿಗೆ ತುಂಬಾ ಮೆತ್ತಗಾಗಿ, ಮಡ್ಡಿಯಾಗದಂತೆ ನೋಡಿಕೊಳ್ಳಿ. ಶ್ಯಾವಿಗೆ 75% ಬೆಂದು ಉದುರುದುರಾಗಿ ಇರುವಾಗಲೇ ಹಾಲು ಹಾಕುವುದನ್ನು ನಿಲ್ಲಿಸಬೇಕು. ಆಮೇಲೆ ಇದಕ್ಕೆ ಸಕ್ಕರೆ ಹಾಕಿ  ಚೆನ್ನಾಗಿ ಕಲಕಿ. ಸಕ್ಕರೆ ಕರಗಿದ ಮೇಲೆ ಉರಿ ಆರಿಸಿ. ಬಿಸಿ ಬಿಸಿ ಶ್ಯಾವಿಗೆ ಶಿರಾ ತಿನ್ನಲು ರುಚಿ. 

ಸೂಚನೆ: 
1) ಇದರಲ್ಲಿ ಶ್ಯಾವಿಗೆ, ಪಾಯಸದಷ್ಟು ಮೆತ್ತಗಾಗುವುದಿಲ್ಲ. ಸಕ್ಕರೆ ಹಾಕಿದ ಮೇಲೆ ಶ್ಯಾವಿಗೆ ಗಟ್ಟಿ ಆಗುವುದರಿಂದ ಅಗಿದು ತಿನ್ನಲು ಇಷ್ಟ ಪಡುವವರಿಗೆ ಈ ರೆಸಿಪಿ ಇಷ್ಟವಾಗುತ್ತದೆ.  
2) ಸಕ್ಕರೆಯನ್ನು ನಿಮ್ಮ ಅಗತ್ಯಕ್ಕೆ ತಕ್ಕಷ್ಟು ನೋಡಿಕೊಂಡು ಹಾಕಿಕೊಳ್ಳಿ. 

ಶುಕ್ರವಾರ, ಜುಲೈ 1, 2016

ನಿ೦ಬೆಹಣ್ಣಿನ (ಲಿ೦ಬು) ಸಾರು :

ಸಾಮಗ್ರಿಗಳು:
ನಿ೦ಬೆಹಣ್ಣು ದೊಡ್ಡದು -1,
 ಉಪ್ಪು  - ರುಚಿ ನೋಡಿ ಹಾಕಿ
ಹಸಿ ಮೆಣಸು - 1
ಬಿಳಿ ಕಾಳು ಮೆಣಸು (ಬೋಳ್ ಕಾಳು) - 6-7
ಜೀರಿಗೆ, ಓಮು, - 1/2 ಟೀ ಚಮಚ

ಒಗ್ಗರಣೆ (optional) : ಎಣ್ಣೆ, ಸಾಸಿವೆ, ಇ೦ಗು.ಕರಿಬೇವು


ವಿಧಾನ: ಒ೦ದು ಪಾತ್ರೆಗೆ ೩ ಲೋಟ ನೀರು ಹಾಕಿ ೧ ಚಮಚ ಉಪ್ಪು ನಿ೦ಬು ರಸ ಹಾಕಿ ಕಲಕಿ ಒಲೆ ಉರಿಸಿ ಒಲೆಯ ಮೇಲೆ ಇಡಿ ಇದಕ್ಕೆ ಉದ್ದುದ್ದಕ್ಕೆ ಹೆಚ್ಚಿದ ಹಸಿಮೆಣಸು ಹಾಕಿ. ಬೋಳ್ ಕಾಳು, ಜೀರಿಗೆ, ಓಮು ಇವೆಲ್ಲವನ್ನು ಪೌಡರ್ ಮಾಡಿ ಕುದಿಯುತ್ತಿರುವ ನಿ೦ಬು ಸಾರಿಗೆ ಹಾಕಿ. ಕೊನೆಯಲ್ಲಿ ಒಗ್ಗರಣೆ ಸೌಟಿಗೆ ಚಮಚ ಎಣ್ಣೆ ಹಾಕಿ ಕಾದ ಮೇಲೆ ಸಾಸಿವೆ ಇ೦ಗು ಕರಿಬೇವು ಹಾಕಿದರೆ ಬಿಸಿ ಬಿಸಿ ನಿ೦ಬೆಹಣ್ಣಿನ ಸಾರು ಕುಡಿಯಲು ಸಿದ್ಧ. (ರುಚಿ ನೋಡಿಕೊ೦ಡು ಬೇಕಾದಲ್ಲಿ ಉಪ್ಪು ಸೇರಿಸಿ)

ಮಳೆಗಾಲದಲ್ಲಿ ಇದನ್ನು ಕುಡಿಯಲು ಚೆನ್ನಾಗಿರುತ್ತದೆ. ಈ ನಿ೦ಬುಸಾರಿಗೆ ಮೆಣಸಿನ ಸಾರು ಅ೦ತಾನೂ ಕರೆಯುತ್ತಾರೆ.