ಪ್ರೀತಿಯ ಓದುಗರೆಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. ಈ ದೀಪಾವಳಿ ಎಲ್ಲರ ಬಾಳಿನಲ್ಲಿ ಹೊಸ ಬೆಳಕು ತರಲಿ ಎಂದು ಪಾಕಶಾಲೆಯ ಗೆಳತಿಯರು ಆಶಿಸುತ್ತೇವೆ.
ಸಿರಿಧಾನ್ಯಗಳ ಉಪಯೋಗ ಆರೋಗ್ಯಕ್ಕೆ ಒಳ್ಳೆಯದು. ಈ ಧಾನ್ಯಗಳು ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ಒದಗಿಸುವುದರ ಜೊತೆಗೆ ಕಾರ್ಬೋಹೈಡ್ರೇಟ್ ಪ್ರಮಾಣ ಕಮ್ಮಿ ಇರುವುದರಿಂದ ಡಯಟ್ ಮಾಡುವವರಿಗೂ ಸಹಕಾರಿ. ಸ್ವಲ್ಪ ತಿಂದರೆ ಹೊಟ್ಟೆ ಭರ್ತಿ ಆದಂತೆ ಎನಿಸುವುದರ ಜೊತೆಗೆ ಬೇಗನೆ ಹಸಿವಾಗುವುದಿಲ್ಲ. ಸಾಮೆ, ಬರಗು, ಅರ್ಕ, ನವಣೆ ಮುಂತಾದ ಸಿರಿಧಾನ್ಯಗಳಿಂದ ನಮ್ಮ ದೈನಂದಿನ ಎಲ್ಲಾ ತರಹದ ಆಹಾರಗಳನ್ನು ಅಂದರೆ ದೋಸೆ, ಇಡ್ಲಿ, ಪೊಂಗಲ್, ಬಿಸಿಬೇಳೆಬಾತ್, ಪಾಯಸ ಮುಂತಾದ ತಿನಿಸುಗಳನ್ನು ತಯಾರಿಸಿಬಹುದು. ಇಂದು ನಾನು ಸಾಮೆ ಪಾಯಸ ತಿಳಿಸಿಕೊಡಲಿದ್ದೇನೆ.
ಸಾಮಗ್ರಿಗಳು :
ಸಾಮೆ (Little millet) : 1/2 ಕಪ್
ಬೆಲ್ಲ : 1/2 - 3/4 ಕಪ್
ಹಾಲು : 1 ಕಪ್
ತೆಂಗಿನ ತುರಿ : 1 ಕಪ್
ಕೇಸರಿ ದಳ (ಬೇಕಿದ್ದಲ್ಲಿ ಮಾತ್ರ) : 8-10
ಗೋಡಂಬಿ - ದ್ರಾಕ್ಷಿ - ಖರ್ಜೂರ : ಎಲ್ಲಾ ಸೇರಿ 3-4 ಚಮಚ
ತುಪ್ಪ : 2 ಚಮಚ
ಏಲಕ್ಕಿ : 1-2
ಉಪ್ಪು : 2-3 ಚಿಟಿಕೆ
ವಿಧಾನ :
ಸಾಮೆಯನ್ನು ತೊಳೆದು ಅರ್ಧ ಗಂಟೆ ನೀರಿನಲ್ಲಿ ನೆನೆಸಿಡಿ. ನಂತರ ದಪ್ಪ ತಳದ ಪಾತ್ರೆಯಲ್ಲಿ ಹಾಕಿ ಹಾಲು, ನೀರು ಹಾಕಿ ಬೇಯಲು ಇಡಿ. ಕುಕ್ಕರ್ ನಲ್ಲಿ ಬೇಕಿದ್ದರೂ ಬೇಯಿಸಬಹುದು. ಕೇಸರಿ ಹಾಕುವುದಾದರೆ ಅದನ್ನು ಸ್ವಲ್ಪ ಹಾಲಿನಲ್ಲಿ ನೆನೆಸಿಡಿ. ತೆಂಗಿನ ತುರಿಯನ್ನು ಏಲಕ್ಕಿ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಸಾಮೆ ಚೆನ್ನಾಗಿ ಬೆಂದ ಮೇಲೆ ಅದಕ್ಕೆ ಬೆಲ್ಲ ಹಾಕಿ ಚೆನ್ನಾಗಿ ಕಲಕಿ. ನಂತರ ರುಬ್ಬಿದ ತೆಂಗಿನ ಕಾಯಿ ಮಿಶ್ರಣ ಹಾಕಿ, ನಿಮ್ಮ ಅಗತ್ಯಕ್ಕೆ ತಕ್ಕಷ್ಟು ನೀರು ಹಾಕಿ, ಉಪ್ಪು, ನೆನೆಸಿಟ್ಟ ಕೇಸರಿ ಹಾಕಿ ಕಲಕಿ. ಅಚ್ಚು ಬೆಲ್ಲ ಹಾಕುವುದಾದರೆ ಉಪ್ಪು ಬೇಕಿದ್ದಲ್ಲಿ ಮಾತ್ರ ಹಾಕಿ. ತುಪ್ಪ ಕಾಯಲಿಟ್ಟು ಅದಕ್ಕೆ ಚೂರು ಮಾಡಿಕೊಂಡ ಗೋಡಂಬಿ - ಖರ್ಜೂರ, ಒಣ ದ್ರಾಕ್ಷಿ ಹಾಕಿ ಹುರಿದು ಕುದಿಯುತ್ತಿರುವ ಪಾಯಸಕ್ಕೆ ಹಾಕಿ ಒಂದು ಕುದಿ ಕುದಿಸಿ ಉರಿ ಆರಿಸಿ. ಬಿಸಿ ಬಿಸಿ ಸಾಮೆ ಪಾಯಸ ಸಿದ್ಧ.
ಸಲಹೆಗಳು :
1) ಬೆಲ್ಲದ ಬದಲು ಸಕ್ಕರೆಯನ್ನು ಹಾಕಿ ಮಾಡಬಹುದು ಮತ್ತು ಕೇಸರಿ ಬದಲು ವೆನಿಲ್ಲಾ ಎಸೆನ್ಸ್ ಹಾಕಬಹುದು.
2) ಸಾಮೆಯನ್ನು ಬರೀ ಹಾಲಿನಲ್ಲಿ ಬೇಯಿಸಿ, ಸಕ್ಕರೆ ಹಾಕಿ, ಕೇಸರಿ ದಳ ಹಾಕಿ ಮಾಡಿದರೂ ಚೆನ್ನಾಗಿರುತ್ತದೆ. ಹೀಗೆ ಮಾಡುವಾಗ ತೆಂಗಿನಕಾಯಿ ರುಬ್ಬಿ ಹಾಕುವುದು ಬೇಕಾಗುವುದಿಲ್ಲ. ಬೇಕಿದ್ದಲ್ಲಿ ತೆಂಗಿನ ಹಾಲು ಹಾಕಬಹುದು.