ಬಸ್ಸಾರು, ಮಸ್ಸೊಪ್ಪು ಮಾಡಲು ಎಲ್ಲಾ ಥರದ ಸೊಪ್ಪನ್ನು ಸ್ವಲ್ಪ ಸ್ವಲ್ಪ ಹಾಕಿ ಮಿಶ್ರಣ ಮಾಡಿ ಕೊಡುತ್ತಾರೆ. ಅದಕ್ಕೆ ಬೆರಕೆ ಸೊಪ್ಪು ಎಂದು ಹೆಸರು. ತಳ್ಳುಗಾಡಿಗಳಲ್ಲಿ ಹೆಚ್ಚಾಗಿ ಬೆರಕೆ ಸೊಪ್ಪು ಸಿಗುತ್ತದೆ. ಪಾಲಕ್, ಮೆಂತ್ಯ, ದಂಟಿನಸೊಪ್ಪು, ಚಿಲಕ್ ಹರಿವೆ, ಸಬ್ಬಸಿಗೆ, ಚಕ್ಕೋತ ಮುಂತಾದ ಯಾವುದೇ ಸೊಪ್ಪುಗಳನ್ನು ಸೇರಿಸಿ ಅಥವಾ ಒಂದೇ ಜಾತಿಯ ಸೊಪ್ಪಿನಿಂದ ಬಸ್ಸಾರು ಮಾಡಬಹುದು. ಅಲ್ಲದೇ ಹುರುಳಿ ಕಾಯಿ ಅಥವಾ ಕ್ಯಾಬೇಜ್ ಬಳಸಿ ಮಾಡಿದ ಬಸ್ಸಾರು ಕೂಡ ಚೆನ್ನಾಗಿರುತ್ತದೆ. ನಾನು ಕೇವಲ ಪಾಲಕ್ ಸೊಪ್ಪನ್ನು ಉಪಯೋಗಿಸಿ ಮಾಡಿದ್ದೆ. ಅದರ ಜೊತೆ ಯಾವುದೇ ಸೊಪ್ಪು ಸೇರಿಸಿ ಕೂಡ ನೀವು ಮಾಡಬಹುದು.
ಬಸ್ಸಾರಿಗೆ ಸಾಮಗ್ರಿಗಳು :
ಹೆಚ್ಚಿದ ಸೊಪ್ಪು : 2 ಕಪ್
ತೊಗರಿಬೇಳೆ : 1/2 ಕಪ್
ತೆಂಗಿನತುರಿ : 1/4 ಕಪ್
ಈರುಳ್ಳಿ : 1
ಟೊಮೇಟೊ : 1
ಬೆಳ್ಳುಳ್ಳಿ : 8-10 ಎಸಳು
ಒಣಮೆಣಸಿನ ಕಾಯಿ : 5-6
ಧನಿಯಾ ಬೀಜ : 1 ಚಮಚ
ಜೀರಿಗೆ : 1/2 ಚಮಚ
ಕೊತ್ತಂಬರಿ ಸೊಪ್ಪು : 2-3 ಎಸಳು
ಕರಿಬೇವು : 1 ಎಸಳು
ಹುಣಸೆ ಹಣ್ಣು : ನೆಲ್ಲಿಕಾಯಿ ಗಾತ್ರ
ಎಣ್ಣೆ : 2 ಚಮಚ
ಸಾಸಿವೆ : 1/2 ಚಮಚ
ಉಪ್ಪು : ರುಚಿಗೆ ತಕ್ಕಷ್ಟು
ವಿಧಾನ :
ಬೇಳೆ ತೊಳೆದು ನೀರು ಹಾಕಿ ಒಲೆಯ ಮೇಲೆ ಬೇಯಲು ಇಡಿ. ಆ ಸಮಯದಲ್ಲಿ ಟೊಮೇಟೊ, ಈರುಳ್ಳಿ ಹೆಚ್ಚಿಟ್ಟುಕೊಳ್ಳಿ. ಹುಣಸೆಹಣ್ಣು ನೀರಿನಲ್ಲಿ ನೆನಸಿಡಿ. ಬೇಳೆ ಅರ್ಧ ಬೆಂದಾಗ ತೊಳೆದು ಹೆಚ್ಚಿಟ್ಟುಕೊಂಡ ಸೊಪ್ಪನ್ನು ಹಾಕಿ ಸ್ವಲ್ಪ ಉಪ್ಪು ಹಾಕಿ ಬೇಯಿಸಿ. ಸೊಪ್ಪು ಬೆಂದ ಮೇಲೆ ಪಾತ್ರೆಯ ಮೇಲೆ ಜಾಲರಿ ಇಟ್ಟು ಬೆಂದ ಮಿಶ್ರಣವನ್ನು ಹಾಕಿ ಪೂರ್ತಿಯಾಗಿ ಬಸಿದುಕೊಳ್ಳಿ.
ಈಗ ಒಂದು ಪಾನ್ ಒಲೆಯ ಮೇಲಿಟ್ಟು ಅದಕ್ಕೆ ಒಂದು ಚಮಚ ಎಣ್ಣೆ, ಧನಿಯಾ ಬೀಜ, ಜೀರಿಗೆ, ಒಣಮೆಣಸಿನ ಕಾಯಿ, ಬೆಳ್ಳುಳ್ಳಿ ಹಾಕಿ ಹುರಿದು ಅದಕ್ಕೆ ಈರುಳ್ಳಿ ಹಾಕಿ ಸ್ವಲ್ಪ ಫ್ರೈ ಮಾಡಿ. ನಂತರ ಟೊಮೇಟೊ ಹಾಕಿ ಹುರಿಯಿರಿ. ಈಗ ಕೊತ್ತಂಬರಿ ಸೊಪ್ಪು, ತೆಂಗಿನತುರಿ ಹಾಕಿ ಸ್ವಲ್ಪ ಹುರಿದು ಉರಿ ಆರಿಸಿ.
ಇದು ತಣ್ಣಗಾದ ಮೇಲೆ ಮಿಕ್ಸಿಗೆ ಹಾಕಿ ಜೊತೆಗೆ ಬೇಯಿಸಿ ಬಸಿದ ಸೊಪ್ಪು ಬೇಳೆ ಮಿಶ್ರಣವನ್ನು ೨ ಚಮಚ ಸೇರಿಸಿ, ಬಸಿದ ನೀರು ಹಾಕಿ ನುಣ್ಣಗೆ ರುಬ್ಬಿ. ಇದನ್ನು ಒಂದು ಪಾತ್ರೆಗೆ ಹಾಕಿ ಬಸಿದಿಟ್ಟ ನೀರು, ಉಪ್ಪು, ಕರಿಬೇವು ಸೇರಿಸಿ ಕುದಿಸಿ. ಕೊನೆಯಲ್ಲಿ ಎಣ್ಣೆ, ಸಾಸಿವೆ, ಬೇಕಿದ್ದಲ್ಲಿ ಸ್ವಲ್ಪ ಇಂಗು ಸೇರಿಸಿ ಒಗ್ಗರಣೆ ಮಾಡಿ.
ಪಲ್ಯಕ್ಕೆ ಸಾಮಗ್ರಿಗಳು :
ಬಸಿದಿಟ್ಟ ಸೊಪ್ಪು ಮತ್ತು ಬೇಳೆ
ಈರುಳ್ಳಿ : 1
ತೆಂಗಿನತುರಿ : 4 ಚಮಚ
ಹಸಿಮೆಣಸಿನಕಾಯಿ : 3-4
ಲಿಂಬು ರಸ : 2-3 ಚಮಚ
ಅರಿಶಿನ ಪುಡಿ : 1/4 ಚಮಚ (ಬೇಕಿದ್ದಲ್ಲಿ ಮಾತ್ರ)
ಎಣ್ಣೆ : 2 ಚಮಚ
ಸಾಸಿವೆ : 1/2 ಚಮಚ
ಉಪ್ಪು: ರುಚಿಗೆ
ವಿಧಾನ :
ಬಾಣಲೆಗೆ ಎಣ್ಣೆ ಹಾಕಿ ಕಾಯಿಸಿ ಅದಕ್ಕೆ ಸಾಸಿವೆ ಹಾಕಿ ಚಿಟಪಟಾಯಿಸಿ. ಸೀಳಿಟ್ಟುಕೊಂಡ ಹಸಿಮೆಣಸಿನಕಾಯಿ, ಸಣ್ಣ ಹೆಚ್ಚಿದ ಈರುಳ್ಳಿ, ಅರಿಶಿನ ಹಾಕಿ ಹುರಿಯಿರಿ. ನಂತರ ಇದಕ್ಕೆ ತೆಂಗಿನತುರಿ, ಉಪ್ಪು, ಸೊಪ್ಪು - ಬೇಳೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಒಂದೆರಡು ನಿಮಿಷ ಬೇಯಿಸಿ. ಕೊನೆಯಲ್ಲಿ ಲಿಂಬು ರಸ ಸೇರಿಸಿದರೆ ಪಲ್ಯ ತಯಾರು. ಬಿಸಿ ಬಿಸಿ ರಾಗಿ ಮುದ್ದೆ ಅಥವಾ ಅನ್ನದ ಜೊತೆ ಅದ್ಭುತ ಸಂಗಾತಿ ಈ ಬಸ್ಸಾರು ಮತ್ತು ಪಲ್ಯ......