ಬುಧವಾರ, ಫೆಬ್ರವರಿ 27, 2013

ಹಲಸು ಹಣ್ಣಿನ ಕಡುಬು:




ಬೇಕಾಗುವ ಸಾಮಾಗ್ರಿಗಳು: ಹಲಸಿನ ಹಣ್ಣಿನ ರಸ (ಗುಳ)- 2 ಕಪ್, ಅಕ್ಕಿ ಕಡಿ - 1.5 ಕಪ್, ತೆ೦ಗಿನಕಾಯಿತುರಿ - 2 ಚಮಚ, ಬೆಲ್ಲ 1/2 ಕಪ್ (ಸಿಹಿ ಆಗುವಷ್ಟು), ಉಪ್ಪು ಒಂದು ಚಿಟಿಕೆ (ಸೌಳು ಹೋಗಲು), ಯಾಲಕ್ಕಿ ಪುಡಿ - ಒಂದು ಚಿಟಿಕೆ(ಸುವಾಸನೆಗೆ).
ಮಾಡುವ ವಿಧಾನ:  ಮೇಲೆ ಹೇಳಿದ ಪದಾರ್ಥಗಳನ್ನು ಮಿಶ್ರಣ ಮಾಡಿ (ನೀರು ಹಾಕಬಾರದು), ಇಡ್ಲಿ ತಟ್ಟೆಗೆ ಸಲ್ಪ ಎಣ್ಣೆ ಅಥವಾತುಪ್ಪ ಸವರಿ ಅದಕ್ಕೆ ಈ ಮಿಶ್ರಣವನ್ನು ಹಾಕಿ ಇಡ್ಲಿ ಮಾಡುವ ಪಾತ್ರೆಯಲ್ಲಿ ಇಟ್ಟು 45 ನಿಮಿಷ ಬೇಯಿಸಿದರೆ ಬಿಸಿ ಬಿಸಿ ಹಲಸಿನ ಹಣ್ಣಿನ ಕಡುಬು ರೆಡಿ. ಇದಕ್ಕೆ ತುಪ್ಪ ಹಾಕಿಕೊ೦ಡು ತಿ೦ದರೆ ರುಚಿ ಹೆಚ್ಚು.

ವಿ.ಸೂ: ಒ೦ದು ಮುಷ್ಟಿ ಮಿಶ್ರಣ ತೆಗೆದುಕೊ೦ಡಾಗ ಅಕ್ಕಿ ಕಡಿ ಕೈಗೆ ಸಿಗುವ೦ತಿರಬೇಕು 

ಮಂಗಳವಾರ, ಫೆಬ್ರವರಿ 19, 2013

ಬಾಳೆ ಹಣ್ಣಿನ ದೋಸೆ




ಸಾಮಗ್ರಿ: ಅಕ್ಕಿ 1 1/2 ಕಪ್, ಉದ್ದಿನ ಬೇಳೆ 3 ಚಮಚ, ಪಚ ಬಾಳೆ ಹಣ್ಣು (ಚೆನ್ನಾಗಿ ಕಳಿತ/ಹಣ್ಣಾದ)2, ಬೆಲ್ಲ 4-5 ಚಮಚ, ರುಚಿಗೆ ತಕ್ಕಷ್ಟು ಉಪ್ಪು.

ವಿಧಾನ: ಅಕ್ಕಿ, ಉದ್ದಿನ ಬೇಳೆಯನ್ನು  6-7 ಘಂಟೆ ನೆನೆಸಿಡಿ. (ಬೆಳಿಗ್ಗೆ ನೆನೆಸಿ ರಾತ್ರಿ ರುಬ್ಬಿ.) ಒಂದು ಪಾತ್ರೆಗೆ ಬಾಳೆ ಹಣ್ಣು, ಉಪ್ಪು, ಬೆಲ್ಲ ಹಾಕಿ ಚೆನ್ನಾಗಿ ಕಿವುಚಿ ಕಲಸಿ. ಈ ಮಿಶ್ರಣವನ್ನು ರುಬ್ಬಿದ ಅಕ್ಕಿಗೆ ಹಾಕಿ ಸರಿಯಾಗಿ ಕಲಸಿ. (ಬಾಳೆಹಣ್ಣು ಚೆನ್ನಾಗಿ ಕಿವುಚಿರಬೇಕು.) ದೋಸೆ ಹಿಟ್ಟಿನ ಹದಕ್ಕೆ ನೀರು ಹಾಕಿಕೊಳ್ಳಿ. ರಾತ್ರಿ ಈ ಹಿಟ್ಟನ್ನು ಹೀಗೆಯೇ ಇಟ್ಟು ಬೆಳಿಗ್ಗೆ ತವಾಕ್ಕೆ ಚೆನ್ನಾಗಿ ಎಣ್ಣೆ ಸವರಿ ದೋಸೆ ಮಾಡಿ ಮುಚ್ಚಿ ಎರಡೂ ಕಡೆ ಬೇಯಿಸಿ. (ಈ ದೋಸೆ ತುಂಬಾ ತೆಳ್ಳಗೆ ಬರುವುದಿಲ್ಲ). ದೋಸೆ ಸಿಹಿ ಇರುವುದರಿಂದ ಚಟ್ನಿ ಪುಡಿ, ತುಪ್ಪ/ಎಣ್ಣೆ ಜೊತೆ ತಿಂದರೆ ಚೆನ್ನಾಗಿರುತ್ತದೆ. ಕಾಯಿ ಚಟ್ನಿ ಜೊತೆಯೂ ತಿನ್ನಬಹುದು. 

ಶುಕ್ರವಾರ, ಫೆಬ್ರವರಿ 15, 2013

ಬಾಳೆಹಣ್ಣಿನ ಶ್ಯಾವಿಗೆ
















ಬೇಕಾಗುವ ಸಾಮಾಗ್ರಿಗಳು: ಅಕ್ಕಿ -2 ಕಪ್, ಬಾಳೇಹಣ್ಣು - 12-13, ಬೆಲ್ಲ -1/2 ಕಪ್, ಉಪ್ಪು ರುಚಿಗೆ ತಕ್ಕಷ್ಟು, ಏಲಕ್ಕಿ5-6,

ಮಾಡುವ ವಿಧಾನ:ಅಕ್ಕಿಯನ್ನು 3-4 ಗ೦ಟೆಗಳ ಕಾಲ ನೆನೆಸಿಡಬೇಕು. ನೆನೆಸಿಟ್ಟ ಅಕ್ಕಿಯನ್ನು ತೊಳೆದು ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿಕೊ೦ಡ ಅಕ್ಕಿ ಜೊತೆ ಮತ್ತೆ ಬಾಳೇಹನ್ನುಗಳನ್ನು ಹಾಕಿ, ಏಲಕ್ಕಿ ಸೇರಿಸಿ ಮತ್ತೆ ಚೆನ್ನಾಗಿ ರುಬ್ಬಿಕೊ೦ಡು ಅದಕ್ಕೆ ಸಿಹಿ ಅಗುವಷ್ಟು ಬೆಲ್ಲ ಮತ್ತು 1 ಚಮಚ ಉಪ್ಪು ಸೇರಿಸಿ (ಸೌಳು ಆಗದಿರಲು ಸಾಮಾನ್ಯವಾಗಿ ಸಿಹಿ ಕಜ್ಜಾಯಗಳನ್ನು ಮಾಡುವಾಗ ಉಪ್ಪು ಸೇರಿಸುವುದು ಉತ್ತಮ)
ಮಿಶ್ರಣವನ್ನು ಒ೦ದು ಪಾತ್ರೆಯಲ್ಲಿ ಹಾಕಿ ಕಡುಬು ಅಥವಾ ಇಡ್ಲಿ ಮಾಡುವ ಪಾತ್ರೆ (ಇಡ್ಲಿ ದಳ್ಳೆ)ಯಲ್ಲಿ ಸುಮಾರು 30 ನಿಮಿಷಗಳ ಕಾಲ ಬೇಯಿಸಿ. ಇದು ಬಿಸಿಯಿರುವಾಗಲೇ ಶ್ಯಾವಿಗೆ ಮಟ್ಟಿನಿ೦ದ ಒತ್ತಿರಿ (ಮಿಶ್ರಣವು ತಣಿದ ಮೇಲೆ ಶ್ಯಾವಿಗೆ ಒತ್ತಿದರೆ ಮುದ್ದೆಯಾಗುತ್ತದೆ & ಅಷ್ಟು ಚೆನ್ನಾಗಿ ಬರುವುದಿಲ್ಲ).
ಬಾಳೇಹಣ್ಣಿನ ಶ್ಯಾವಿಗೆಗೆ ತುಪ್ಪ ಅಥವ ತೆ೦ಗಿನ ಹಾಲು ಹಾಕಿಕೊ೦ಡು ತಿ೦ದರೆ ಚೆನ್ನಾಗಿರುತ್ತದೆ.

ತೆ೦ಗಿನ ಹಾಲು ಮಾಡುವ ವಿಧಾನ:ಕಾಯಿಯನ್ನು ತು೦ಬ ನುಣ್ಣಗೆ ರುಬ್ಬಿ ಅದರ ರಸವನ್ನು ಹಿ೦ಡಿ,, ರಸಕ್ಕೆ ಬೆಲ್ಲ ಮತ್ತು ಯಾಲಕ್ಕಿ ಪುಡಿಯನ್ನು ಹಾಕಿದರೆ ತೆ೦ಗಿನ ಹಾಲು ಸಿದ್ದ.