ಸಾಮಗ್ರಿ: ಬಲೂನ್ ಬದನೆ(ದಪ್ಪ - ಕರಿ ಬದನೆ ಕಾಯಿ) 1, ಶೇಂಗಾ (ಕಡ್ಲೆ ಕಾಯಿ) ಪುಡಿ 1 ಕಪ್, ಪುಟಾಣಿ (ಹುರಿಗಡಲೆ) ಪುಡಿ 1/2 ಕಪ್, ಸಣ್ಣಗೆ ಹೆಚ್ಚಿದ ಈರುಳ್ಳಿ 2, ಬೆಳ್ಳುಳ್ಳಿ 15-20 ಎಸಳು, ಅಚ್ಚ ಮೆಣಸಿನ ಪುಡಿ ಖಾರಕ್ಕೆ, ಬೆಲ್ಲ/ಸಕ್ಕರೆ 1 - 1.5 ಚಮಚ, ಉಪ್ಪು- ನಿಂಬೆ ರಸ / ವಾಟೆ ಪುಡಿ ರುಚಿಗೆ ತಕ್ಕಷ್ಟು. ಒಗ್ಗರಣೆಗೆ: ಎಣ್ಣೆ, ಜೀರಿಗೆ, ಸಾಸಿವೆ, ಕರಿಬೇವು.
ವಿಧಾನ: ಬದನೆ ಕಾಯಿಯನ್ನು ಮಧ್ಯದಲ್ಲಿ 4 ಭಾಗವಾಗಿ ಸೀಳಿಕೊಂಡು 1.5" ನಷ್ಟು ಉದ್ದಕ್ಕೆ, ತೆಳುವಾಗಿ ಸ್ಲೈಸ್ ಮಾಡಿಕೊಳ್ಳಿ. ಶೇಂಗಾ ಸ್ವಲ್ಪ ಹುರಿದು ತರಿ ತರಿಯಾಗಿ ಪುಡಿ ಮಾಡಿ, ಹುರಿಗಡಲೆಯನ್ನು ಬೇರೆಯಾಗಿಯೇ ತರಿ ತರಿಯಾಗಿ ಪುಡಿ ಮಾಡಿಕೊಳ್ಳಿ. ಬೆಳ್ಳುಳ್ಳಿಯನ್ನು ಸಣ್ಣದಾಗಿ ಹೆಚ್ಚಿಕೊಳ್ಳಿ. ನಂತರ ಬಾಣಲೆಗೆ 5-6 ಟೇಬಲ್ ಸ್ಪೂನ್ ಎಣ್ಣೆ ಹಾಕಿ ಕಾದ ನಂತರ ಜೀರಿಗೆ ಸಾಸಿವೆ ಹಾಕಿ. ಅದು ಚಟ-ಪಟಾಯಿಸಿದಾಗ ಕರಿಬೇವು, ಹೆಚ್ಚಿದ ಬೆಳ್ಳುಳ್ಳಿ ಹಾಕಿ ಬಾಡಿಸಿ. ನಂತರ ಹೆಚ್ಚಿದ ಈರುಳ್ಳಿ ಹಾಕಿ ಬಾಡಿಸಿ. ಅದಕ್ಕೆ ಹೆಚ್ಚಿದ ಬದನೆ ಹಾಕಿ ಅದು ಬೇಯುವಷ್ಟು ನೀರು, ರುಚಿಗೆ ತಕ್ಕಷ್ಟು ಉಪ್ಪು, ವಾಟೆ ಪುಡಿ/ನಿಂಬೆ ರಸ, ಅಚ್ಚ ಮೆಣಸಿನ ಪುಡಿ, ಬೆಲ್ಲ ಹಾಕಿ ಮುಚ್ಚಿ ಬೇಯಿಸಿ. ಚೆನ್ನಾಗಿ ಬೆಂದು ಮೆತ್ತಗಾದಾಗ ಕಡ್ಲೆ ಕಾಯಿ ಪುಡಿ, ಹುರಿಗಡಲೆ ಪುಡಿ ಉದುರಿಸಿ ಚೆನ್ನಾಗಿ ಕಲಸಿ. ನೀರು ಕಮ್ಮಿ ಆದರೆ ಸ್ವಲ್ಪ ನೀರು ಹಾಕಿ, (ಉಪ್ಪು- ಖಾರ ಸರಿಯಾಗಿದೆಯೇ ಎಂದು ಪರೀಕ್ಷಿಸಿ ಸರಿ ಪಡಿಸಿಕೊಳ್ಳಬಹುದು) 2-3 ನಿಮಿಷ ಬೇಯಿಸಿ (ಇದು ಗ್ರೇವಿಯ ಹದಕ್ಕೆ ಇರುವಷ್ಟು ನೀರು ಹಾಕಿ). ಬೇಕಾದರೆ ಕೊತ್ತಂಬರಿ ಸೊಪ್ಪು ಹಾಕಿಕೊಳ್ಳಬಹುದು. ಈ ಮಸಾಲ ಸ್ವಲ್ಪವೇ ಸಿಹಿ, ಹದವಾದ ಖಾರ ಇರಲಿ. ಇದು ಪೂರಿ, ಚಪಾತಿ, ದೋಸೆ ಜೊತೆ ಚೆನ್ನಾಗಿರುತ್ತದೆ.
ಕಾವ್ಯಾ :)