ಶುಕ್ರವಾರ, ಮೇ 27, 2016

ಟೊಮೇಟೊ ಗೊಜ್ಜು:

ಸಾಮಗ್ರಿಗಳು :
ಫಾರ್ಮ್ ಟೊಮೇಟೊ - 4-5,
ಮಧ್ಯಮ ಗಾತ್ರದ ಈರುಳ್ಳಿ - 2,
ತೆಂಗಿನ ತುರಿ - 3-4 ಚಮಚ,
ಬೆಳ್ಳುಳ್ಳಿ - 5-6 ಎಸಳು (ಜಜ್ಜಿಕೊಳ್ಳಿ),
ಎಣ್ಣೆ - 4 ಚಮಚ,
ಜೀರಿಗೆ - ಸಾಸಿವೆ - ತಲಾ 1/2 ಚಮಚ,
ಕರಿಬೇವು - 1 ಎಸಳು,
ಹೆಚ್ಚಿದ ಕೊತ್ತಂಬರಿ ಸೊಪ್ಪು - 1 ಚಮಚ,
ಅಚ್ಚ ಮೆಣಸಿನ ಪುಡಿ - 1 ಚಮಚ (ಅಥವಾ ನಿಮ್ಮ ಖಾರಕ್ಕೆ ತಕ್ಕಷ್ಟು) 
ಗರಂ ಮಸಾಲ ಪುಡಿ - 1/2 ಚಮಚ,
ಅರಿಶಿನ ಪುಡಿ - 1/4 ಚಮಚ, 
ಸಕ್ಕರೆ - 1 ಚಮಚ,
ಉಪ್ಪು - ರುಚಿಗೆ 

ವಿಧಾನ :
ಟೊಮೇಟೊ ತೊಳೆದು ಸಣ್ಣಗೆ ಹೆಚ್ಚಿಕೊಳ್ಳಿ. ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಳ್ಳಿ. ಬಾಣಲೆಗೆ ಎಣ್ಣೆ ಹಾಕಿ ಜೀರಿಗೆ, ಸಾಸಿವೆ ಹಾಕಿ ಸಿಡಿಸಿ. ನಂತರ ಇದಕ್ಕೆ ಕರಿಬೇವು, ಜಜ್ಜಿದ ಬೆಳ್ಳುಳ್ಳಿ ಹಾಕಿ ಸ್ವಲ್ಪ ಫ್ರೈ ಮಾಡಿ. ನಂತರ ಹೆಚ್ಚಿದ ಈರುಳ್ಳಿ, ಅರಶಿನ ಪುಡಿ ಹಾಕಿ ಎರಡು ನಿಮಿಷ ಫ್ರೈ ಮಾಡಿ. ಹೆಚ್ಚಿದ ಟೊಮೇಟೊ ಹಾಕಿ, ಉಪ್ಪು, ಸಕ್ಕರೆ ಹಾಕಿ ಟೊಮೇಟೊ ಮೆತ್ತಗಾಗುವ ತನಕ ಫ್ರೈ ಮಾಡಿ. ನಂತರ ಇದಕ್ಕೆ ಅಚ್ಚ ಮೆಣಸಿನ ಪುಡಿ, ಗರಂ ಮಸಾಲ ಪುಡಿ, ತೆಂಗಿನ ತುರಿ, ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಒಂದೆರಡು ನಿಮಿಷ ಬೇಯಿಸಿದರೆ ಬಿಸಿ ಬಿಸಿ ಟೊಮೇಟೊ ಗೊಜ್ಜು ದೋಸೆ, ಚಪಾತಿ, ರೋಟಿ ಜೊತೆ ಸವಿಯಲು ಸಿಧ್ಧ. 





ಸಲಹೆ:
ಅಚ್ಚ ಖಾರದ ಪುಡಿ ಬದಲು ಹಸಿಮೆಣಸಿನಕಾಯಿ ಹಾಕಬಹುದು. 


ಶುಕ್ರವಾರ, ಮೇ 20, 2016

ತೊಗರಿಬೇಳೆ ಗೊಜ್ಜು:

ಸಾಮಗ್ರಿಗಳು: 
ತೊಗರಿಬೇಳೆ - 3 ಟೇ.ಚಮಚ, 
ಒಣಮೆಣಸು -5-6, 
ಧನಿಯಾ, ಜೀರಿಗೆ, ಎಳ್ಳು - ತಲಾ 1/2 ಚಮಚ 
ಉದ್ದಿನಬೇಳೆ - 1ಚಮಚ , 
ತೆ೦ಗಿನತುರಿ - 3-4 ಟೇ.ಚಮಚ,
 ಈರುಳ್ಳಿ - 1, 
ಉಪ್ಪು ರುಚಿಗೆ ತಕ್ಕಷ್ಟು, 
ಬೆಲ್ಲ - 1 ಚಮಚ , ಹುಣಸೆಹಣ್ಣು ಚಿಕ್ಕ ನೆಲ್ಲಿಕಾಯಿ ಗಾತ್ರದಷ್ಟು


ವಿಧಾನ : ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಅದು ಕಾದ ಮೇಲೆ ತೊಗರಿಬೇಳೆ, ಒಣಮೆಣಸು, ಧನಿಯಾ, ಜೀರಿಗೆ, ಎಳ್ಳು, ಉದ್ದಿನಬೇಳೆ ಇವೆಲ್ಲವನ್ನು ಸಣ್ಣ ಉರಿಯಲ್ಲಿ ಫ್ರೈ ಮಾಡಿ ಬದಿಗೆ ಇಡಿ. ಇದು ಬಿಸಿ ಆರಿದ ಮೇಲೆ, ತೆ೦ಗಿನತುರಿ, ಹುಣಸೆಹಣ್ಣು ಹಾಕಿ ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿದ ಮಿಶ್ರಣಕ್ಕೆ ಉಪ್ಪು, ಬೆಲ್ಲ ಹಾಗು ಉದ್ದುದ್ದಕೆ ಹೆಚ್ಚಿದ ಈರುಳ್ಳಿ ಹಾಕಿ ನೀರು ಸೇರಿಸಿ ಸುಮಾರು ಸಾ೦ಬಾರಿನ ಹದಕ್ಕೆ ನೀರು ಹಾಕಿ ಗೊಜ್ಜಿನ ಹದ ಬರುವವರೆಗೆ ಕುದಿಸಿ. ಆಗಾಗ ಸೌಟಿನ್ನು ಆಡಿಸುತ್ತಿರಬೇಕು ಇಲ್ಲವಾದಲ್ಲಿ ಅಡಿ ಹಿಡಿಯುತ್ತದೆ. ಈಗ ಬಿಸಿ ಬಿಸಿ ತೊಗರಿಬೇಳೆ ಗೊಜ್ಜು ಅನ್ನ/ಚಪಾತಿ ಜೊತೆ ಸವಿಯಲು ಸಿದ್ಧ.

ಗುರುವಾರ, ಮೇ 12, 2016

ಟೊಮೇಟೊ ಸಾರು 3:


ಸಾಮಗ್ರಿಗಳು: 
ಚೆನ್ನಾಗಿ ಹಣ್ಣಾದ ಟೊಮೇಟೊ 5-6, ಹಸಿಮೆಣಸಿನ ಕಾಯಿ 3-4, ಬೆಳ್ಳುಳ್ಳಿ 6-7ಎಸಳು (ಜಜ್ಜಿಕೊಳ್ಳಿ), ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು 1 ಚಮಚ, ತುಪ್ಪ 1 ಚಮಚ, ಹಸಿಮೆಣಸಿನ ಕಾಯಿ 4-5, ಜೀರಿಗೆ 1/4 ಚಮಚ, ಸಾಸಿವೆ 1/4 ಚಮಚ, ಸಕ್ಕರೆ 1 ಚಮಚ, ಉಪ್ಪು ರುಚಿಗೆ ತಕ್ಕಷ್ಟು

ವಿಧಾನ: 
ಟೊಮೇಟೊಗಳನ್ನೂ ಸೀಳಿಕೊಂಡು ಬೀಜ ತೆಗೆದುಕೊಳ್ಳಿ.  ಮಿಕ್ಸಿಗೆ ಹಾಕಿ ಜೊತೆಗೆ ಹಸಿಮೆಣಸಿನ ಕಾಯಿ ಹಾಕಿ ನುಣ್ಣಗೆ ರುಬ್ಬಿ. ಬಾಣಲೆಗೆ ತುಪ್ಪ  (ತುಪ್ಪದ ಬದಲು ಎಣ್ಣೆ ಬಳಸಬಹುದು), ಜೀರಿಗೆ, ಸಾಸಿವೆ ಒಗ್ಗರಣೆ ಮಾಡಿಕೊಂಡು ಅದಕ್ಕೆ ಜಜ್ಜಿದ ಬೆಳ್ಳುಳ್ಳಿ ಹಾಕಿ ಸ್ವಲ್ಪ ಬಾಡಿಸಿಕೊಂಡು ರುಬ್ಬಿದ ಟೊಮೇಟೊ ಪ್ಯೂರಿ ಹಾಕಿ ಸ್ವಲ್ಪ ನೀರು ಹಾಕಿ ( ಸಾಂಬಾರ್ ಕಿಂತ ಸ್ವಲ್ಪ ತೆಳ್ಳಗಾದರೆ ಸಾಕು), ಹೆಚ್ಚಿದ ಕೊತ್ತಂಬರಿ ಸೊಪ್ಪು, ಸಕ್ಕರೆ, ಉಪ್ಪು ಹಾಕಿ ಕುದಿಸಿದರೆ ಹುಳಿ - ಸಿಹಿ ಟೊಮೇಟೊ ಸಾರು ಬಿಸಿ ಬಿಸಿ ಅನ್ನದ ಜೊತೆ ಸವಿಯಲು ಸಿದ್ಧ.  


(ವಿಜಯವಾಣಿ ಪತ್ರಿಕೆಗೆ ಕಳಿಸಿ ಪ್ರಕಟವಾದ ಅಡುಗೆ)

ಸೋಮವಾರ, ಮೇ 9, 2016

ದೊಡ್ಡಪತ್ರೆ / ಸಾ೦ಬಾರ್ ಸೊಪ್ಪಿನ ತ೦ಬುಳಿ:

ಸಾಮಗ್ರಿಗಳು: ದೊಡ್ಡಪತ್ರೆ ಎಲೆಗಳು - 8-10, ಜೀರಿಗೆ 1/4 ಚಮಚ , ಬಿಳಿ ಎಳ್ಳು 1/4 ಚಮಚ, ಎಣ್ಣೆ, ಹಸಿಮೆಣಸು 1, ತೆ೦ಗಿನತುರಿ 1/2 ಕಪ್, ಸಕ್ಕರೆ 1/4 ಚಮಚ , ಉಪ್ಪು.
ಒಗ್ಗರಣೆ : ಎಣ್ಣೆ, ಸಾಸಿವೆ, ಒಣಮೆಣಸು. (Optional)




ವಿಧಾನ : ಒ೦ದು ಚಿಕ್ಕ ಬಾಣಗೆಗೆ ಎಣ್ಣೆ ಹಾಕಿ ಅದು ಕಾದ ಮೇಲೆ ದೊಡ್ಡಪತ್ರೆ, ಜೀರಿಗೆ, ಬಿಳಿ ಎಳ್ಳು,ಹಸಿಮೆಣಸು ಹಾಕಿ ಸಣ್ಣ ಉರಿಯಲ್ಲಿ ನಿಮಿಷ ಬಾಡಿಸಿ. ಇದು ಬಿಸಿ ಆರಿದ ಮೇಲೆ ಮಿಕ್ಸಿ ಜಾರಿಗೆ ತೆ೦ಗಿನ ತುರಿ ಜೊತೆ ಹಾಕಿ ನುಣ್ಣಗೆ ರುಬ್ಬಿ ಉಪ್ಪು ಸಕ್ಕರೆ ಸೇರಿಸಿ ತೆಳ್ಳಗೆ ಆಗುವಷ್ಟು ನೀರು ಹಾಕಿ. ಕೊನೆಯಲ್ಲಿ ಸಾಸಿವೆ ಒಣಮೆಣಸಿನ ಒಗ್ಗರಣೆ ಹಾಕಿದರೆ ದೊಡ್ಡಪತ್ರೆ ತ೦ಬುಳಿ ಅನ್ನದ ಜೊತೆ ತಿನ್ನಲು ಸಿದ್ಧ.