ಗುರುವಾರ, ನವೆಂಬರ್ 16, 2017

ಧಿಡೀರ್ ಅವಲಕ್ಕಿ :

ಶಾಲೆಗೆ ಹೋಗುವ, ಹೊರಗಡೆ ಆಡಿ ಕುಣಿಯುವ ಮಕ್ಕಳಿಗೆ ಪದೇ ಪದೇ ಹಸಿವಾಗುವುದು ಸಹಜ. ಸಣ್ಣ ಪುಟ್ಟ ಹಸಿವುಗಳಿಗೆ ಬಿಸ್ಕಿಟ್, ಚೊಕೊಲೇಟ್, ಬೇಕರಿ ಆಹಾರ, ಜಂಕ್ ಫುಡ್ ಕೊಟ್ಟು ಮಕ್ಕಳ ಆರೋಗ್ಯ ಹಾಳು ಮಾಡದಿರಿ...! ಮಕ್ಕಳಿಗೆ ತಿಂಡಿ ಮಾಡಿಕೊಡಲು ಸಮಯವೇ ಇಲ್ಲದ ಈಗಿನ ಕಾಲಕ್ಕೆ ಐದೇ ನಿಮಿಷಕ್ಕೆ ತಯಾರಿಸುವ ಈ ಅವಲಕ್ಕಿ ಮಾಡಿ ನೋಡಿ. ರುಚಿಯಾದ ಚಟ್ನಿಪುಡಿ ಇದ್ದಷ್ಟೂ ಅವಲಕ್ಕಿಗೆ ರುಚಿ ಜಾಸ್ತಿ...! 

ಸಾಮಗ್ರಿಗಳು :
ಪೇಪರ್ ಅವಲಕ್ಕಿ 2-3 ಮುಷ್ಠಿ 
ತೆಂಗಿನ ತುರಿ 1/2 ಕಪ್ 
ಸಕ್ಕರೆ 2 ಚಮಚ 
ಚಟ್ನಿ ಪುಡಿ 2 ಚಮಚ (ಕೊಬ್ಬರಿ, ಕಡ್ಲೆಬೇಳೆ ಚಟ್ನಿಪುಡಿ ಆದರೆ ರುಚಿ ಜಾಸ್ತಿ)
ಉಪ್ಪು ಚಿಟಿಕೆ 

ವಿಧಾನ :
ಪೇಪರ್ ಅವಲಕ್ಕಿಯನ್ನು ಒಂದು ಬೌಲ್ ಗೆ ಹಾಕಿ. ತೆಂಗಿನ ತುರಿಗೆ ಉಪ್ಪು, ಸಕ್ಕರೆ, 4-5 ಚಮಚ ನೀರು ಹಾಕಿ ಚೆನ್ನಾಗಿ ಕಲಸಿ. ಇದಕ್ಕೆ ಚಟ್ನಿಪುಡಿ ಹಾಕಿ ಕಲಸಿ. ಚಟ್ನಿಪುಡಿಗೆ ಉಪ್ಪು ಇರುವುದರಿಂದ ನೋಡಿಕೊಂಡು ಬೇಕಿದ್ದಲ್ಲಿ ಮಾತ್ರ ಹಾಕಿ. (ನಿಮ್ಮನೆ ಚಟ್ನಿಪುಡಿ ತುಂಬಾ ಖಾರವಿದ್ದರೆ ಸ್ವಲ್ಪ ಕಮ್ಮಿ ಹಾಕಿ. ಮಕ್ಕಳಿಗೆ ಖಾರವಾಗಬಹುದು) ನಂತರ ಇದನ್ನು ಅವಲಕ್ಕಿಗೆ ಹಾಕಿ ಚೆನ್ನಾಗಿ ಕಲಸಿ. ಬೇಕಿದ್ದಲ್ಲಿ ಮತ್ತೆ ಒಂದೆರಡು ಚಮಚ ನೀರು ಹಾಕಿ ಕಲಸಿ. ಧಿಡೀರ್ ಅವಲಕ್ಕಿ ಆಡುವ ಮಕ್ಕಳ ಸಣ್ಣ ಸಣ್ಣ ಹಸಿವನ್ನು ನೀಗಿಸಲು ಸಿದ್ಧ...! 

ಶುಕ್ರವಾರ, ನವೆಂಬರ್ 3, 2017

ಕೆಸುವಿನ ಬೀಳು (ಬಿಳಲು) ಸಾಸಿವೆ :


ಮಲೆನಾಡಿನಲ್ಲಿ ಮಳೆಗಾಲದ ಸಮಯದಲ್ಲಿ ಸಣ್ಣ ಕೆಸುವಿನ ಎಳೆಗಳ ಬುಡದಲ್ಲಿ ಬೇರುಗಳಂತೆ ಬಿಳಲುಗಳು ಹಬ್ಬುತ್ತವೆ. ಅದನ್ನು ತಂದು ಅದರ ಮೇಲಿರುವ ಸಿಪ್ಪೆಯಂತ ನಾರನ್ನು ತೆಗೆದು ವಿವಿಧ ಅಡುಗೆಗಳನ್ನು ಮಾಡುತ್ತಾರೆ. ಇದರ ನಾರನ್ನು ತೆಗೆಯುವುದು ಸ್ವಲ್ಪ ಕಿರಿಕಿರಿಯ ಕೆಲಸವಾದರೂ ನಂತರ ಮಾಡುವ ಅಡುಗೆಯ ರುಚಿ ಇದನ್ನು ಮರೆಸಿಬಿಡುತ್ತದೆ. ಮಲೆನಾಡಲ್ಲಿ ಈಳಿಗೆ ಮಣೆಯ ಕಾವಿನ ಹಿಂಭಾಗಕ್ಕೆ ತಿಕ್ಕಿ ನಾರು ತೆಗೆಯುತ್ತಾರೆ. ಚಾಕುವಿನ ಹಿಂಭಾಗ (ಮೊಂಡು ಇರುವ ಭಾಗ) ದಿಂದ ಕೂಡ ತೆಗೆಯಬಹುದು. ತೆಗೆದ ತಕ್ಷಣ ಕೈ ತೊಳೆದರೆ ಕೈ ಅಲ್ಲಿ ಸ್ವಲ್ಪ ಕಡಿತ ಕಾಣಿಸಬಹುದು. ಲಿಂಬು ರಸ ತಿಕ್ಕಿ ಕೈ ತೊಳೆದರೆ ಹೋಗುತ್ತದೆ.

ಸಾಮಗ್ರಿಗಳು:
ನಾರು ತೆಗೆದು ಅರ್ಧ ಇಂಚು ಉದ್ದ ಹೆಚ್ಚಿದ ಕೆಸುವಿನ ಬೀಳು : 1 ಕಪ್
ತೆಂಗಿನ ತುರಿ : 1/2 ಕಪ್
ಮೊಸರು : 1/2 ಕಪ್ (ಸ್ವಲ್ಪ ಹುಳಿ ಇರಲಿ, ತುಂಬಾ ಹುಳಿ ಬೇಡ)
ಹಸಿ ಮೆಣಸಿನಕಾಯಿ : 2
ಸಾಸಿವೆ : 2ಚಮಚ
ಅರಿಶಿನ ಪುಡಿ : 1/4 ಚಮಚ
ವಾಟೆ ಪುಡಿ / ಆಮ್ಚುರ್ ಪುಡಿ / ಹುಣಸೆ ರಸ : 1/2 ಚಮಚ
ಎಣ್ಣೆ : 1 ಚಮಚ
ಒಣಮೆಣಸಿನಕಾಯಿ : 1
ಉಪ್ಪು : ರುಚಿಗೆ

ವಿಧಾನ :
ಕೆಸುವಿನ ಬೀಳನ್ನು ತೊಳೆದು ವಾಟೆ ಪುಡಿ / ಆಮ್ಚುರ್ ಪುಡಿ / ಹುಣಸೆ ರಸ ಇವುಗಳಲ್ಲಿ ಯಾವುದಾದರೂ ಒಂದು ಹುಳಿಯನ್ನು ಹಾಕಿ ನೀರು ಸೇರಿಸಿ ಬೇಯಲು ಇಡಿ. ಹೋಳುಗಳಿಗೆ ಫೋರ್ಕ್ ಅಥವಾ ಚಾಕು ತುದಿ ಚುಚ್ಚಿ ನೋಡಿದರೆ ಬೆಂದಿದೆಯೋ ಇಲ್ಲವೋ ತಿಳಿಯುತ್ತದೆ. ಬೆಂದ ಮೇಲೆ ನೀರು ಬಸಿದು ಇಟ್ಟುಕೊಳ್ಳಿ. ಮಿಕ್ಸಿ ಜಾರಿಗೆ ತೆಂಗಿನ ತುರಿ, 1.5 ಚಮಚ ಸಾಸಿವೆ. ಹಸಿಮೆಣಸಿನಕಾಯಿ, ಅರಿಶಿನ ಪುಡಿ ಮತ್ತು ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಇದನ್ನು ಬೆಂದ ಕೆಸುವಿನ ಬೀಳಿಗೆ ಹಾಕಿ, ಮೊಸರು ಹಾಕಿ, ಬೇಕಿದ್ದಲ್ಲಿ ಸ್ವಲ್ಪ ನೀರು ಹಾಕಿ, ಉಪ್ಪು ಹಾಕಿ ಕಲಕಿ. ಒಗ್ಗರಣೆ ಸೌಟಿಗೆ ಎಣ್ಣೆ, ತುಂಡು ಮಾಡಿದ ಒಣ ಮೆಣಸಿನಕಾಯಿ, ಉಳಿದ ಅರ್ಧ ಚಮಚ ಸಾಸಿವೆ ಹಾಕಿ ಚಿಟಪಟಾಯಿಸಿ ಮಿಶ್ರಣಕ್ಕೆ ಸೇರಿಸಿದರೆ ಸಾಸಿವೆ ಸಿದ್ಧ. ಬಿಸಿ ಅನ್ನದ ಜೊತೆ ಒಳ್ಳೆಯ ಸಂಗಾತಿ.