ಶನಿವಾರ, ಏಪ್ರಿಲ್ 13, 2013

ಹಲಸಿನ ಕಾಯಿ ಪಲ್ಯ - 2

ಸಾಮಗ್ರಿ: ಎಳೆ ಹಲಸಿನ ಕಾಯಿ 1/2, ತೆಂಗಿನ ತುರಿ 1 ಕಪ್, ಸಣ್ಣಗೆ ಹೆಚ್ಚಿದ ಈರುಳ್ಳಿ 1 ಕಪ್, ಬೆಳ್ಳುಳ್ಳಿ 12 - 15 ಎಸಳು, ಎಣ್ಣೆ 5 - 6 ಚಮಚ, ಹಸಿ ಮೆಣಸಿನ ಕಾಯಿ 5 - 6,  ಸಾಸಿವೆ 1/4 ಚಮಚ, ಕರಿಬೇವು ಸ್ವಲ್ಪ, ಉಪ್ಪು ರುಚಿಗೆ, ವಾಟೆ ಪುಡಿ / ನಿಂಬೆ ರಸ ರುಚಿಗೆ ತಕ್ಕಷ್ಟು, ಅರಿಶಿನ ಪುಡಿ 1/4 ಚಮಚ.  


ವಿಧಾನ : ಹಲಸಿನ ಕಾಯಿಯ ಸಿಪ್ಪೆ ಕೆತ್ತಿ ಉದ್ದಕ್ಕೆ ಸೀಳಿ ಅದರ ಮಧ್ಯದಲ್ಲಿರುವ ಗಟ್ಟಿ ಭಾಗ (ಮೂಗು) ಕೆತ್ತಿ (ಮೇಲಿನ ಚಿತ್ರ ನೋಡಿ) ಒಂದು ಪಾತ್ರೆಗೆ ಹಾಕಿ ಸ್ವಲ್ಪ (1 ಕಪ್ ನಷ್ಟು ಸಾಕು) ನೀರು, 1 ಚಮಚ ಎಣ್ಣೆ ಹಾಕಿ ಕುಕ್ಕರ್ ನಲ್ಲಿಟ್ಟು ಬೇಯಿಸಿಕೊಳ್ಳಿ. (ಎಣ್ಣೆ ಹಾಕಿ ಬೇಯಿಸುವುದರಿಂದ ಪಾತ್ರೆಗೆ ಅದರ ಮೇಣ ಅಂಟುವುದಿಲ್ಲ). ನಂತರ ಬೆಂದ ಹಲಸಿನ ಕಾಯಿ ಹೋಳುಗಳನ್ನು ಸಣ್ಣಗೆ ಹೆಚ್ಚಿಕೊಳ್ಳಿ. ಒಂದು ಬಾಣಲೆಗೆ ಎಣ್ಣೆ, ಸಾಸಿವೆ ಹಾಕಿ ಅದು ಸಿಡಿದ ಮೇಲೆ ಜಜ್ಜಿದ ಬೆಳ್ಳುಳ್ಳಿ, ಕರಿಬೇವು ಹಾಕಿ ಸ್ವಲ್ಪ ಹುರಿಯಿರಿ. ನಂತರ ಹೆಚ್ಚಿದ ಈರುಳ್ಳಿ ಹಾಕಿ 1 ನಿಮಿಷ ಹುರಿಯಿರಿ. ಇದಕ್ಕೆ ಅರಿಶಿನ ಪುಡಿ ಹಾಕಿ, ಉಪ್ಪು, ವಾಟೆ ಪುಡಿ / ನಿಂಬೆ ರಸ, ತೆಂಗಿನ ತುರಿ ಹಾಕಿ ಸ್ವಲ್ಪ ಹುರಿಯಿರಿ. (ನಿಂಬೆ ರಸವನ್ನು ಕೊನೆಯಲ್ಲಿ ಹಾಕಿದರೆ ಹಲಸಿನ ಕಾಯಿಗೆ ಸರಿಯಾಗಿ ಹಿಡಿಯುವುದಿಲ್ಲ). ನಂತರ ಇದಕ್ಕೆ ಬೇಯಿಸಿ ಹೆಚ್ಚಿಟ್ಟುಕೊಂಡ ಹಲಸಿನ ಕಾಯಿ ಹಾಕಿ 1/4 ಕಪ್ ನಷ್ಟು ನೀರು ಹಾಕಿ ಚೆನ್ನಾಗಿ ಕಲಸಿ. ಇದಕ್ಕೆ ಒಂದು ಪ್ಲೇಟ್ ಮುಚ್ಚಿ ಸಣ್ಣ ಉರಿಯಲ್ಲಿ ಬೇಯಿಸಿ. ಮಿಶ್ರಣ ಚೆನ್ನಾಗಿ ಮಿಕ್ಸ್ ಆಗುವಂತೆ ಚೆನ್ನಾಗಿ ಕಲಸಿ, ನೀರು ಆರಿದ ನಂತರ ಉರಿ ಆರಿಸಿದರೆ ರುಚಿಯಾದ ಹಲಸಿನ ಕಾಯಿ ಪಲ್ಯ ಸಿಧ್ಧ. ಇದು ಅನ್ನದ ಜೊತೆ ಒಳ್ಳೆಯ ಕಾಂಬಿನೇಶನ್. 


ಕಿವಿ ಮಾತು : ಬೇಯಿಸಿ ಹೆಚ್ಚಿದ ಮೇಲೆ ಹಲಸಿನಕಾಯಿ ಹೋಳುಗಳು ತುಂಬಾ ಮೆತ್ತಗಿದ್ದರೆ ಒಗ್ಗರಣೆಗೆ ಹಾಕಿ ನೀರು ಹಾಕುವುದು ಬೇಡ. 

ಅಡುಗೆ ಮನೆಗೊಂದು ಟಿಪ್ಸ್ : ಯಾವುದೋ ಒಂದು ಪದಾರ್ಥವನ್ನು ಹಾಕಿಟ್ಟ ಡಬ್ಬವನ್ನು ಎಷ್ಟು ತೊಳೆದರೂ ಆ ಪದಾರ್ಥದ ವಾಸನೆ ಹೋಗುತ್ತಿಲ್ಲವಾದರೆ ಅದರಲ್ಲಿ ಕಿತ್ತಳೆ ಸಿಪ್ಪೆ ಚೂರುಗಳನ್ನು ಹಾಕಿಡಿ. ವಾಸನೆ ಮಾಯವಾಗುತ್ತದೆ. 



7 ಕಾಮೆಂಟ್‌ಗಳು:

  1. ಆದಷ್ಟು ಬೇಗ ನಮ್ಮ ಮನೆಯಲ್ಲೂ ಈ ತಿನಿಸು ಮಾಡುತ್ತೇವೆ. ಧನ್ಯವಾದಗಳು.
    http://badari-poems.blogspot.in

    ಪ್ರತ್ಯುತ್ತರಅಳಿಸಿ
  2. ಬೇರಸ್ನ ಕಾಯಿ ಪಲ್ಯ ನೂ ಚೋಲೊ ಆಗ್ತಡ ಇದರಂಗೆ.

    ಪ್ರತ್ಯುತ್ತರಅಳಿಸಿ