ಭಾನುವಾರ, ಜೂನ್ 2, 2013

ತೊಂಡೆಕಾಯಿ ಫ್ರೈ

ಸಾಮಗ್ರಿಗಳು: ತೊಂಡೆಕಾಯಿ 200 ಗ್ರಾಂ, ಕಡ್ಲೆ ಕಾಯಿ ಎಣ್ಣೆ / ಶೇಂಗಾ ಎಣ್ಣೆ 5-6 ಚಮಚ, ಜೀರಿಗೆ - ಸಾಸಿವೆ 1/4 ಚಮಚ, ಇಂಗು ಚಿಟಿಕೆ, ಅರಿಶಿನ ಪುಡಿ 3-4 ಚಿಟಿಕೆ, ಕರಿಬೇವು 7-8 ಎಲೆ, ಅಚ್ಚ ಮೆಣಸಿನ ಪುಡಿ ಖಾರಕ್ಕೆ ತಕ್ಕಷ್ಟು, ಧನಿಯ ಪುಡಿ 1/2 ಚಮಚ, ಜೀರಿಗೆ ಪುಡಿ 1 ಚಮಚ, ವಾಟೆ ಪುಡಿ / amchroor powder 1/2 ಚಮಚ, ಬೆಲ್ಲದ ಪುಡಿ / ಸಕ್ಕರೆ 1/2 ಚಮಚ, ತುರಿದ ಕೊಬ್ಬರಿ 1/4 ಕಪ್, ಉಪ್ಪು ರುಚಿಗೆ ತಕ್ಕಷ್ಟು. 

ವಿಧಾನ: ತೊಂಡೆಕಾಯಿಯನ್ನು ತೆಳ್ಳಗೆ ಉದ್ದುದ್ದ ಹೆಚ್ಚಿಕೊಳ್ಳಿ. ಕೊಬ್ಬರಿಯನ್ನು ಒಮ್ಮೆ ಮಿಕ್ಸಿಗೆ ಹಾಕಿ ತರಿ ತರಿ ಪುಡಿ ಮಾಡಿಟ್ಟುಕೊಳ್ಳಿ. ಒಂದು ದಪ್ಪ ತಳದ ಬಾಣಲೆಗೆ ಎಣ್ಣೆ ಹಾಕಿ ಕಾದ ನಂತರ ಜೀರಿಗೆ, ಸಾಸಿವೆ ಹಾಕಿ. ಅದು ಚಿಟಪಟಾಯಿಸಿದಾಗ ಇಂಗು, ಸಣ್ಣದಾಗಿ ಚೂರು ಮಾಡಿದ ಕರಿಬೇವು ಹಾಕಿ. ಇದಕ್ಕೆ ತೊಂಡೆಕಾಯಿ ಹೋಳುಗಳನ್ನು ಹಾಕಿ ಮುಚ್ಚಳ ಮುಚ್ಚಿ 8-10 ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿ. ಆಗಾಗ ತಳ ಹಿಡಿಯದಂತೆ ಕೈ ಆಡಿಸುತ್ತಿರಿ. ಮುಕ್ಕಾಲು ಬೆಂದ ಮೇಲೆ ಇದಕ್ಕೆ ಉಪ್ಪು, ಅರಿಶಿನ, ಅಚ್ಚ ಮೆಣಸಿನ ಪುಡಿ, ಧನಿಯ ಮತ್ತು ಜೀರಿಗೆ ಪುಡಿ, ವಾಟೆ ಪುಡಿ / amchoor powder, ಬೆಲ್ಲದ ಪುಡಿ / ಸಕ್ಕರೆ ಹಾಕಿ ತುಂಬಾ ಸಣ್ಣ ಉರಿಯಲ್ಲಿ ಫ್ರೈ ಮಾಡಿ. ತೊಂಡೆ ಕಾಯಿ ಪೂರ್ತಿ ಫ್ರೈ ಆದಮೇಲೆ ಅದಕ್ಕೆ ಕೊಬ್ಬರಿ ಪುಡಿ ಹಾಕಿ, ಉಪ್ಪು ಸರಿಯಾಗಿದೆಯೇ ಎಂದು ಪರೀಕ್ಷಿಸಿ 1 ನಿಮಿಷ ಚೆನ್ನಾಗಿ ಕಲಸಿ ಉರಿಯನ್ನು ಆರಿಸಿ. ಬಿಸಿ ಬಿಸಿಯಾದ ತೊಂಡೆಕಾಯಿ ಫ್ರೈ ಊಟದ ಜೊತೆ ಸೈಡ್ ಡಿಶ್ ಆಗಿ ಚೆನ್ನಾಗಿರುತ್ತದೆ. ರೋಟಿ / ಚಪಾತಿ ಜೊತೆ ಕೂಡ ಸವಿಯಬಹುದು. 
ಸೂಚನೆ: 1) ಕಡ್ಲೆ ಕಾಯಿ ಎಣ್ಣೆ ಬದಲು ಯಾವುದೇ ಅಡುಗೆ ಎಣ್ಣೆ ಉಪಯೋಗಿಸಬಹುದು. 
           2) ಬೇಯಿಸುವಾಗ ನೀರು ಹಾಕುವ ಅವಶ್ಯಕತೆಯಿಲ್ಲ, ಆಗಾಗ ತಳ ಹಿಡಿಯದಂತೆ ನೋಡಿಕೊಳ್ಳಿ ಅಷ್ಟೇ. 



ಅಡುಗೆ ಮನೆಗೊಂದು ಟಿಪ್ಸ್: ಹೆಸರು ಕಾಳನ್ನು ಕುಕ್ಕರ್ ನಲ್ಲಿ ಬೇಯಿಸುವಾಗ 1-2 ಲವಂಗ ಹಾಕಿದರೆ ಕಾಳುಗಳು ಪೂರ್ತಿ ಬೆಂದು ಮುದ್ದೆಯಾಗದೇ ಬಿಡಿ ಬಿಡಿಯಾಗಿರುತ್ತವೆ.

8 ಕಾಮೆಂಟ್‌ಗಳು: