ಸೋಮವಾರ, ಫೆಬ್ರವರಿ 17, 2014

ಬದನೇಕಾಯಿ ಚಟ್ನಿ:


ಸಾಮಾಗ್ರಿಗಳು: ಬದನೇಕಾಯಿ - 1, ಒಣಮೆಣಸು 5-6 ಅಥವ ಹಸಿಮೆಣಸು (ನಾನು ಬಳಸಿದ್ದು ಒಣಮೆಣಸು),ಎಳ್ಳು ½ ಚಮಚ, ಉದ್ದಿನಬೇಳೆ ½ ಚಮಚ, ಧನಿಯಾ ½ ಚಮಚ, ತೆ೦ಗಿನತುರಿ 3-4 ಚಮಚ , ಈರುಳ್ಳಿ-1,ಹುಣಸೆಹಣ್ಣು, ಉಪ್ಪು ರುಚಿಗೆ ತಕ್ಕಷ್ಟು.





ವಿಧಾನ: ಬದನೇಕಾಯಿಯನ್ನು ಬಜ್ಜಿಗೆ ಹೇಳಿದ ರೀತಿಯಲ್ಲಿ ಬೇಯಿಸಬೇಕು. ಅಥವ ಇನ್ನೊ೦ದು ಸುಲಭ ಉಪಾಯ ಅಕ್ಕಿಯನ್ನು ಕುಕ್ಕರ್ ನಲ್ಲಿ ಇಡುವಾಗ ಅನ್ನದ ಪಾತ್ರೆಯಮೇಲೆ ಒ೦ದು ಬಟ್ಟಲನ್ನು ಇಟ್ಟು ಅದರ ಮೇಲೆ ಬದನೇಕಾಯಿಯನ್ನು ಇಟ್ಟು ಬೇಯಿಸಿ (ಬಟ್ಟಲಿಗೆ ನೀರು ಹಾಕುವ ಅಗತ್ಯವಿಲ್ಲ) ಬೆ೦ದ ನ೦ತರ ಅದರ ತೆಗೆದು ಸಿಪ್ಪೆ ತೆಗೆದು ಸೌಟಿನಲ್ಲಿ ಸಣ್ಣಗೆ ಹೆಚ್ಚಿ ಪಕ್ಕಕ್ಕಿಡಿ. ಒಣಮೆಣಸು, ಎಳ್ಳು,ಉದ್ದಿನಬೇಳೆ,ಧನಿಯಾ,ಇವನ್ನು ಸಣ್ಣ ಬೆ೦ಕಿಯಲ್ಲಿ ಹುರಿದುಕೊ೦ಡು ಕಾಯಿತುರಿ ಹುಣಸೆಹಣ್ಣು ಹಾಕಿ ರುಬ್ಬಿ ಹೆಚ್ಚಿಟ್ಟ ಬದನೇಕಾಯಿಗೆ ಸೇರಿಸಿ ಮತ್ತು ಅದಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ ಉಪ್ಪು ಹಾಕಿ ಎಲ್ಲವನ್ನು ಸರಿಯಾಗಿ ಸೇರಿಸಿ. ಇದು ಅನ್ನ & ಚಪಾತಿ ಎರಡರ ಜೊತೆ ಚೆನ್ನಾಗಿರುತ್ತದೆ.

ಹೀಗೊ೦ದು ಸಲಹೆ:ಬದನೇಕಾಯಿ ಹೆಚ್ಚಿಟ್ಟು ಸ್ವಲ್ಪ ಸಮಯದ ನ೦ತರ ಅದನ್ನು ಉಪಯೋಗಿಸುವ ಹಾಗಿದ್ದಲ್ಲಿ ನೀರಿನ ಜೊತೆ ವಾಟೆಪುಡಿ ಅಥವಾ ಹುಣಸೆಹಣ್ಣಿನ ರಸ ಸೇರಿಸಿಟ್ಟರೆ ಕಪ್ಪಾಗುವುದಿಲ್ಲ.

ಸೋಮವಾರ, ಫೆಬ್ರವರಿ 10, 2014

ಬದನೇಕಾಯಿ ಬಜೆ :

ಸಾಮಗ್ರಿಗಳು: ಬಲೂನ್ ಬದನೇಕಾಯಿ 1, ಕಡಲೆ ಹಿಟ್ಟು 2 ಕಪ್, ಅಕ್ಕಿಹಿಟ್ಟು 1 ಚಮಚ, ಉಪ್ಪು ರುಚಿಗೆ. ಲಿಂಬು ರಸ 3-4 ಚಮಚ, ಅಡುಗೆ ಸೋಡಾ ಚಿಟಿಕೆ, ಕರಿಯಲು ಎಣ್ಣೆ.  

ಪೇಸ್ಟ್ ತಯಾರಿಸಲು ಸಾಮಗ್ರಿಗಳು: ಕೊತ್ತಂಬರಿ ಸೊಪ್ಪು  - ಪುದೀನಾ ಸೊಪ್ಪು ತಲಾ 1 ಹಿಡಿ, ಓಂ ಕಾಳು 3-4 ಚಿಟಿಕೆ, ಹಸಿಮೆಣಸಿನ ಕಾಯಿ 6-7, ಶುಂಟಿ ಸಣ್ಣ ಚೂರು, ಬೆಳ್ಳುಳ್ಳಿ 2-3 ಎಸಳು

ವಿಧಾನ: ಪೇಸ್ಟ್ ಸಾಮಗ್ರಿಗಳನ್ನು ಮಿಕ್ಸರ್ ಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಆದಷ್ಟೂ ನೀರು ಹಾಕದೇ ರುಬ್ಬಿಕೊಂಡರೆ ಒಳ್ಳೆಯದು. ಈ ಮಿಶ್ರಣಕ್ಕೆ ಲಿಂಬುರಸ, ಉಪ್ಪು ಹಾಕಿ ಕಲಸಿಕೊಳ್ಳಿ. (ಲಿಂಬು ರಸದ ಬದಲು ವಾಟೆಪುಡಿ / amchoor powder ಕೂಡ ಬಳಸಬಹುದು). ಇದಕ್ಕೆ ಖಾರ, ಹುಳಿ ಸ್ವಲ್ಪ ಜಾಸ್ತಿಯೇ ಇರಬೇಕು. 
           ಕಡಲೇ ಹಿಟ್ಟಿಗೆ ಅಕ್ಕಿ ಹಿಟ್ಟು, ಅಡುಗೆ ಸೋಡಾ, ಉಪ್ಪು ಸೇರಿಸಿ ಸ್ವಲ್ಪ ಸ್ವಲ್ಪವೇ ನೀರು ಹಾಕುತ್ತಾ ಗಂಟಾಗದಂತೆ ಕಲಸಿಕೊಳ್ಳಿ. ಪೇಸ್ಟ್ ಖಾರವಿರುವುದರಿಂದ ಇದಕ್ಕೆ ಮೆಣಸಿನ ಪುಡಿ ಬೇಡ. ಹಿಟ್ಟು ಸ್ವಲ್ಪ ಗಟ್ಟಿಯಾಗೇ ಇರಲಿ (ಮಿರ್ಚಿ ಬಜೆಯ ಹಿಟ್ಟಿನ ಹದಕ್ಕೆ).  ಬದನೆಕಾಯಿಯನ್ನು ತೆಳ್ಳಗೆ ಗೋಲಾಕಾರವಾಗಿ ಸ್ಲೈಸ್ ಮಾಡಿಕೊಳ್ಳಿ. ಎಣ್ಣೆ ಕಾಯಲು ಇಡಿ.



ಒಂದು ಬದನೇಕಾಯಿ ಸ್ಲೈಸ್ ಮೇಲೆ ಪೇಸ್ಟ್ ಸವರಿಕೊಂಡು ಮೇಲಿಂದ ಇನ್ನೊಂದು ಸ್ಲೈಸ್ ಮುಚ್ಚಿ ನಿಧಾನವಾಗಿ ಕಡಲೆ ಹಿಟ್ಟಿನ ಮಿಶ್ರಣದಲ್ಲಿ ಮುಳುಗಿಸಿ, ಕಾದ ಎಣ್ಣೆಯಲ್ಲಿ ಕರಿದು, ಬಿಸಿ ಬಿಸಿಯಾಗಿ ಚಹಾ / ಕಾಫೀ ಜೊತೆ ಸವಿಯಿರಿ. 



ಸೂಚನೆಗಳು : 
1) ಪೇಸ್ಟ್ ಗೆ ಉಪ್ಪು ಹಾಕಿರುವುದರಿಂದ ಕಡಲೆ ಹಿಟ್ಟು ಕಲಸುವಾಗ ತುಂಬಾ ಉಪ್ಪು ಹಾಕುವುದು ಬೇಡ. 
2) ಪೇಸ್ಟ್ ನೀರಾದರೆ ಹಿಟ್ಟಿನಲ್ಲಿ ಅದ್ದುವಾಗ ಮತ್ತು ಎಣ್ಣೆಯಲ್ಲಿ ಬಿಡುವಾಗ ನೀರು ಹೊರಚೆಲ್ಲಿಬಿಡುತ್ತದೆ. 
3) ತಯಾರಾದ ಬದನೇಕಾಯಿ ಸ್ಲೈಸ್ ಅನ್ನು ಹಿಟ್ಟಿನ ಮಿಶ್ರಣದಲ್ಲಿ ನಿಧಾನವಾಗಿ ಮುಳುಗಿಸಬೇಕು. ತುಂಬಾ ಆಕಡೆ ಈಕಡೆ ಮಾಡಿದರೆ ಒಳಗಿನ ಮಿಶ್ರಣ ಹೊರಚೆಲ್ಲುತ್ತದೆ. 

ಬದನೇಕಾಯಿ ಬಜೆ (2) : ಮೇಲೆ ಹೇಳಿದಂತೆ ಬದನೇಕಾಯಿಯನ್ನು ಸ್ಲೈಸ್ ಮಾಡಿಕೊಳ್ಳಿ. ಮೇಲಿನ ಕಡಲೇ ಹಿಟ್ಟಿನ ಮಿಶ್ರಣಕ್ಕೆ ಖಾರಕ್ಕೆ ತಕ್ಕಷ್ಟು ಅಚ್ಚ ಮೆಣಸಿನ ಪುಡಿ, ಚಿಟಿಕೆ ಓಂ ಕಾಳು ಹಾಕಿ ಕಲಸಿಕೊಂಡು ಕತ್ತರಿಸಿದ ಬದನೆ ಕಾಯಿಯನ್ನು ಅದ್ದಿ ಕಾದ ಎಣ್ಣೆಯಲ್ಲಿ ಕರಿಯಿರಿ. ಇದು ಸರಳ ವಿಧಾನವಾದರೂ ರುಚಿಯಾಗಿಯೇ ಇರುತ್ತದೆ. 

ಇಲ್ಲೊಂದು ಟಿಪ್ಸ್: ಯಾವುದೇ ಬಜೆ / ಪಕೋಡ / ಬಜ್ಜಿ ಮಾಡುವಾಗ ಕಡಲೆಹಿಟ್ಟಿಗೆ ಒಂದು ಚಮಚದಷ್ಟು ಅಕ್ಕಿಹಿಟ್ಟು ಸೇರಿಸಿಕೊಂಡರೆ ಬಜೆ ಗರಿ-ಗರಿಯಾಗಿರುತ್ತದೆ. 

ಬುಧವಾರ, ಫೆಬ್ರವರಿ 5, 2014

ಬದನೇಕಾಯಿ ಬಜ್ಜಿ (ಹಿ೦ಡಿ):













ಸಾಮಾಗ್ರಿಗಳು: ಬದನೇಕಾಯಿ (ದೊಡ್ಡದು) 1, ಈರುಳ್ಳಿ 1, ತೆ೦ಗಿನಕಾಯಿ ತುರಿ 2-3 ಚಮಚ ,ವಾಟೆಪುಡಿ/ amchroor powder ½ ಚಮಚ, ಸಕ್ಕರೆ ½ ಚಮಚ, ಉಪ್ಪು ರುಚಿಗೆ ತಕ್ಕಷ್ಟು,  

ಒಗ್ಗರಣೆಗೆ: ಎಣ್ಣೆ, ಸಾಸಿವೆ, ಹಸಿ ಮೆಣಸು 3 (ಸ್ವಲ್ಪ ಖಾರ ಇದ್ದರೆ ಚೆನ್ನ) , ಒಣ ಮೆಣಸು 2, ಉದ್ದಿನಬೇಳೆ




 ಮಾಡುವ ವಿಧಾನ: ಬದನೇಕಾಯಿಗೆ ಸ್ವಲ್ಪ ಎಣ್ಣೆ ಸವರಿ ಚಿತ್ರದಲ್ಲಿ ತೋರಿಸಿದ೦ತೆ ಸುಡಬೇಕು. ಆಗಾಗ ಅದನ್ನು ಮಗ್ಗಲು ಬದಲಿಸುತ್ತ ಚೆನ್ನಾಗಿ ಬೇಯಿಸಬೇಕು. ಚೆನ್ನಾಗಿ ಬೆ೦ದು ಬಿಸಿ ಆರಿದಮೇಲೆ ಅದರ ಸಿಪ್ಪೆ ಬಿಡಿಸಿ ಸೌಟಿನಲ್ಲಿ ಹೆಚ್ಚಬೇಕು. ನ೦ತರ ಅದಕ್ಕೆ ಹೆಚ್ಚಿದ ಈರುಳ್ಳಿ, ಕಾಯಿತುರಿ, ಉಪ್ಪು, ವಾಟೆಪುಡಿ, ಸಕ್ಕರೆ ಸೇರಿಸಿ ಕಲಸಿ. ಒಗ್ಗರಣೆ ಪಾತ್ರೆಗೆ ಎಣ್ಣೆ ಹಾಕಿ (3-4 ಚಮಚ) ಬಿಸಿಯಾದ ಮೇಲೆ ಉದ್ದಿನಬೇಳೆ, ಸಾಸಿವೆ, ಹೆಚ್ಚಿದ ಹಸಿಮೆಣಸು, ಒಣಮೆಣಸು ಹಾಕಿ ಬದನೆ ಮಿಶ್ರಣಕ್ಕೆ ಒಗ್ಗರಣೆ ಕೊಡಿ. ಈಗ ಬದನೇಕಾಯಿ ಬಜ್ಜಿ ಸವಿಯಲು ಸಿದ್ದ.