ಸೋಮವಾರ, ಫೆಬ್ರವರಿ 10, 2014

ಬದನೇಕಾಯಿ ಬಜೆ :

ಸಾಮಗ್ರಿಗಳು: ಬಲೂನ್ ಬದನೇಕಾಯಿ 1, ಕಡಲೆ ಹಿಟ್ಟು 2 ಕಪ್, ಅಕ್ಕಿಹಿಟ್ಟು 1 ಚಮಚ, ಉಪ್ಪು ರುಚಿಗೆ. ಲಿಂಬು ರಸ 3-4 ಚಮಚ, ಅಡುಗೆ ಸೋಡಾ ಚಿಟಿಕೆ, ಕರಿಯಲು ಎಣ್ಣೆ.  

ಪೇಸ್ಟ್ ತಯಾರಿಸಲು ಸಾಮಗ್ರಿಗಳು: ಕೊತ್ತಂಬರಿ ಸೊಪ್ಪು  - ಪುದೀನಾ ಸೊಪ್ಪು ತಲಾ 1 ಹಿಡಿ, ಓಂ ಕಾಳು 3-4 ಚಿಟಿಕೆ, ಹಸಿಮೆಣಸಿನ ಕಾಯಿ 6-7, ಶುಂಟಿ ಸಣ್ಣ ಚೂರು, ಬೆಳ್ಳುಳ್ಳಿ 2-3 ಎಸಳು

ವಿಧಾನ: ಪೇಸ್ಟ್ ಸಾಮಗ್ರಿಗಳನ್ನು ಮಿಕ್ಸರ್ ಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಆದಷ್ಟೂ ನೀರು ಹಾಕದೇ ರುಬ್ಬಿಕೊಂಡರೆ ಒಳ್ಳೆಯದು. ಈ ಮಿಶ್ರಣಕ್ಕೆ ಲಿಂಬುರಸ, ಉಪ್ಪು ಹಾಕಿ ಕಲಸಿಕೊಳ್ಳಿ. (ಲಿಂಬು ರಸದ ಬದಲು ವಾಟೆಪುಡಿ / amchoor powder ಕೂಡ ಬಳಸಬಹುದು). ಇದಕ್ಕೆ ಖಾರ, ಹುಳಿ ಸ್ವಲ್ಪ ಜಾಸ್ತಿಯೇ ಇರಬೇಕು. 
           ಕಡಲೇ ಹಿಟ್ಟಿಗೆ ಅಕ್ಕಿ ಹಿಟ್ಟು, ಅಡುಗೆ ಸೋಡಾ, ಉಪ್ಪು ಸೇರಿಸಿ ಸ್ವಲ್ಪ ಸ್ವಲ್ಪವೇ ನೀರು ಹಾಕುತ್ತಾ ಗಂಟಾಗದಂತೆ ಕಲಸಿಕೊಳ್ಳಿ. ಪೇಸ್ಟ್ ಖಾರವಿರುವುದರಿಂದ ಇದಕ್ಕೆ ಮೆಣಸಿನ ಪುಡಿ ಬೇಡ. ಹಿಟ್ಟು ಸ್ವಲ್ಪ ಗಟ್ಟಿಯಾಗೇ ಇರಲಿ (ಮಿರ್ಚಿ ಬಜೆಯ ಹಿಟ್ಟಿನ ಹದಕ್ಕೆ).  ಬದನೆಕಾಯಿಯನ್ನು ತೆಳ್ಳಗೆ ಗೋಲಾಕಾರವಾಗಿ ಸ್ಲೈಸ್ ಮಾಡಿಕೊಳ್ಳಿ. ಎಣ್ಣೆ ಕಾಯಲು ಇಡಿ.ಒಂದು ಬದನೇಕಾಯಿ ಸ್ಲೈಸ್ ಮೇಲೆ ಪೇಸ್ಟ್ ಸವರಿಕೊಂಡು ಮೇಲಿಂದ ಇನ್ನೊಂದು ಸ್ಲೈಸ್ ಮುಚ್ಚಿ ನಿಧಾನವಾಗಿ ಕಡಲೆ ಹಿಟ್ಟಿನ ಮಿಶ್ರಣದಲ್ಲಿ ಮುಳುಗಿಸಿ, ಕಾದ ಎಣ್ಣೆಯಲ್ಲಿ ಕರಿದು, ಬಿಸಿ ಬಿಸಿಯಾಗಿ ಚಹಾ / ಕಾಫೀ ಜೊತೆ ಸವಿಯಿರಿ. ಸೂಚನೆಗಳು : 
1) ಪೇಸ್ಟ್ ಗೆ ಉಪ್ಪು ಹಾಕಿರುವುದರಿಂದ ಕಡಲೆ ಹಿಟ್ಟು ಕಲಸುವಾಗ ತುಂಬಾ ಉಪ್ಪು ಹಾಕುವುದು ಬೇಡ. 
2) ಪೇಸ್ಟ್ ನೀರಾದರೆ ಹಿಟ್ಟಿನಲ್ಲಿ ಅದ್ದುವಾಗ ಮತ್ತು ಎಣ್ಣೆಯಲ್ಲಿ ಬಿಡುವಾಗ ನೀರು ಹೊರಚೆಲ್ಲಿಬಿಡುತ್ತದೆ. 
3) ತಯಾರಾದ ಬದನೇಕಾಯಿ ಸ್ಲೈಸ್ ಅನ್ನು ಹಿಟ್ಟಿನ ಮಿಶ್ರಣದಲ್ಲಿ ನಿಧಾನವಾಗಿ ಮುಳುಗಿಸಬೇಕು. ತುಂಬಾ ಆಕಡೆ ಈಕಡೆ ಮಾಡಿದರೆ ಒಳಗಿನ ಮಿಶ್ರಣ ಹೊರಚೆಲ್ಲುತ್ತದೆ. 

ಬದನೇಕಾಯಿ ಬಜೆ (2) : ಮೇಲೆ ಹೇಳಿದಂತೆ ಬದನೇಕಾಯಿಯನ್ನು ಸ್ಲೈಸ್ ಮಾಡಿಕೊಳ್ಳಿ. ಮೇಲಿನ ಕಡಲೇ ಹಿಟ್ಟಿನ ಮಿಶ್ರಣಕ್ಕೆ ಖಾರಕ್ಕೆ ತಕ್ಕಷ್ಟು ಅಚ್ಚ ಮೆಣಸಿನ ಪುಡಿ, ಚಿಟಿಕೆ ಓಂ ಕಾಳು ಹಾಕಿ ಕಲಸಿಕೊಂಡು ಕತ್ತರಿಸಿದ ಬದನೆ ಕಾಯಿಯನ್ನು ಅದ್ದಿ ಕಾದ ಎಣ್ಣೆಯಲ್ಲಿ ಕರಿಯಿರಿ. ಇದು ಸರಳ ವಿಧಾನವಾದರೂ ರುಚಿಯಾಗಿಯೇ ಇರುತ್ತದೆ. 

ಇಲ್ಲೊಂದು ಟಿಪ್ಸ್: ಯಾವುದೇ ಬಜೆ / ಪಕೋಡ / ಬಜ್ಜಿ ಮಾಡುವಾಗ ಕಡಲೆಹಿಟ್ಟಿಗೆ ಒಂದು ಚಮಚದಷ್ಟು ಅಕ್ಕಿಹಿಟ್ಟು ಸೇರಿಸಿಕೊಂಡರೆ ಬಜೆ ಗರಿ-ಗರಿಯಾಗಿರುತ್ತದೆ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ