ಗುರುವಾರ, ಏಪ್ರಿಲ್ 24, 2014

ಬದನೆ ಕಾಯಿ ಪಲ್ಯ- 2 :

ಸಾಮಗ್ರಿಗಳು : ಸಣ್ಣಗೆ ಹೆಚ್ಚಿದ ಯಾವುದೇ ತರಹದ ಬದನೇ ಕಾಯಿ 3 ಕಪ್, ಈರುಳ್ಳಿ (ದೊಡ್ಡದು) 1, ಹಸಿ  ಮೆಣಸಿನ ಕಾಯಿ 4-5, ತೆಂಗಿನ ತುರಿ 1/4 ಕಪ್, ಎಣ್ಣೆ 4-5 ಚಮಚ, ಉದ್ದಿನ ಬೇಳೆ 1/2 ಚಮಚ, ಸಾಸಿವೆ 1/4 ಚಮಚ, ಕರಿಬೇವು 1 ಎಸಳು, ಅರಿಶಿನ 1/4 ಚಮಚ, ಉಪ್ಪು ಮತ್ತು ವಾಟೆ ಪುಡಿ / ಅಮ್ಚೂರ್ ಪೌಡರ್ ರುಚಿಗೆ ತಕ್ಕಷ್ಟು. 

ವಿಧಾನ : ಮೊದಲು ಸಣ್ಣಗೆ ಹೆಚ್ಚಿದ ಬದನೆಕಾಯಿಗೆ 1/4 ಚಮಚದಷ್ಟು ಉಪ್ಪು ಹಾಕಿ ಕಲಸಿ 10-15 ನಿಮಿಷ ಹಾಗೆಯೇ ಬಿಡಿ. ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಳ್ಳಿ. ಹಸಿಮೆಣಸಿನ ಕಾಯಿಯನ್ನು ಉದ್ದುದ್ದ ಸೀಳಿಕೊಳ್ಳಿ. ಬಾಣಲೆಗೆ ಎಣ್ಣೆ ಉದ್ದಿನಬೇಳೆ ಹಾಕಿ ಕೆಂಪಗಾದ ಮೇಲೆ ಸಾಸಿವೆ ಹಾಕಿ ಸಿಡಿಸಿ, ಹಸಿಮೆಣಸಿನ ಕಾಯಿ, ಕರಿಬೇವು ಹಾಕಿ ಕಲಕಿ. ನಂತರ ಹೆಚ್ಚಿದ ಈರುಳ್ಳಿ ಹಾಕಿ 3-4 ನಿಮಿಷ ಹುರಿದು ಅರಿಶಿನ ಪುಡಿ ಹಾಕಿ ಕಲಸಿ. ಇದಕ್ಕೆ ಉಪ್ಪು ಹಾಕಿ ಕಲಸಿಟ್ಟ ಬದನೆಕಾಯಿಯನ್ನು ಹಿಂಡಿ ರಸ ತೆಗೆದು ಹಾಕಿ ಕಲಸಿ, ಉಪ್ಪು, ವಾಟೆ ಪುಡಿ ಹಾಕಿ ಮುಚ್ಚಿ (ನೀರು ಹಾಕಬೇಡಿ). ಉರಿ ಸಣ್ಣದಿರಲಿ. ಆಗಾಗ ಕೈ ಆಡಿಸುತ್ತಿರಿ. ಎಣ್ಣೆ ಕಮ್ಮಿ ಎನಿಸಿದರೆ ಸ್ವಲ್ಪ ಎಣ್ಣೆ ಸೇರಿಸಿಕೊಳ್ಳಬಹುದು. ಬದನೆ ಹೋಳುಗಳು ಮೆತ್ತಗಾದ ಮೇಲೆ ತೆಂಗಿನ ತುರಿ ಸೇರಿಸಿ ಮತ್ತೆ ಒಂದೆರಡು ನಿಮಿಷ ಚೆನ್ನಾಗಿ ಹುರಿದು ಉರಿ ಆರಿಸಿ. ಊಟದ ಜೊತೆ ಬಿಸಿ ಬಿಸಿ ಪಲ್ಯ ಬಡಿಸಿ. 


ಬುಧವಾರ, ಏಪ್ರಿಲ್ 23, 2014

ಶಂಕರಪೋಳಿ:



ಸಾಮಾಗ್ರಿಗಳು: ಮೈದಾ ಹಿಟ್ಟು ½ ಕಿ.ಗ್ರಾ೦, ಬೆಣ್ಣೆ 2 ಚಮಚ , ಸಕ್ಕರೆ 6 ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಹಾಲು 1 ಲೋಟ, ಕರಿಯಲು ಎಣ್ಣೆ ½ ಲೀ.



ಮಾಡುವ ವಿಧಾನ: ಹಾಲಿಗೆ ಸ್ವಲ್ಪ ನೀರು ಸೇರಿಸಿ ( 1 ಲೋಟ ಹಾಲಿಗೆ ½  ಲೋಟ ನೀರು ಸೇರಿಸಿ) ಚೆನ್ನಾಗಿ ಬಿಸಿ ಮಾಡಿ ಇಳಿಸಿಡಿ. ಬಿಸಿ ಹಾಲಿಗೆ ಉಪ್ಪು ಸಕ್ಕರೆ ಬೆಣ್ಣೆ ಹಾಕಿ ಕದಡಬೇಕು. ಹಾಲಿನ ಬಿಸಿ ಸ್ವಲ್ಪ ಆರಿದಮೇಲೆ ಅದಕ್ಕೆ ಮೈದಾ ಹಿಟ್ಟು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲೆಸಿಕೊಳ್ಳಬೇಕು. ನ೦ತರ ಚಪಾತಿ ಥರ ಲಟ್ಟಿಸಿ (ಲಟ್ಟಿಸುವಾಗ ಹಿಟ್ಟಿನ ಬದಲು ಎಣ್ಣೆ ಸವರಿ) ಚೌಕಾಕಾರದ ಚಿಕ್ಕ ಚಿಕ್ಕ ಚೂರುಗಳನ್ನು ಮಾಡಿ. ಬಾಣಲಿಗೆ ಎಣ್ಣೆಯನ್ನು ಹಾಕಿ ಅದು ಕಾದ ನ೦ತರ ಮಾಡಿಟ್ಟ ಚೌಕಾಕಾರದ ಚೂರುಗಳನ್ನು ಹೊ೦ಬಣ್ಣ ಬರುವವರೆಗೆ ಕರಿಯಿರಿ.




ಗುರುವಾರ, ಏಪ್ರಿಲ್ 17, 2014

ಬದನೆಕಾಯಿ ಎಣ್ಣೆಗಾಯಿ

ಸಾಮಾಗ್ರಿಗಳು:  ಸಣ್ಣ ಬದನೆಕಾಯಿ 6-7, ಈರುಳ್ಳಿ 2, ವಾಟೆಪುಡಿ 1 ಚಮಚ.

ಮಸಾಲೆ:ಶೇ೦ಗಾ ½ ಕಪ್, ಕಡ್ಲೆಬೇಳೆ 5-6 ಚಮಚ, ಕಾಯಿತುರಿ ¼ ಕಪ್, ಉದ್ದಿನ ಬೇಳೆ 3-4 ಚಮಚ, ಇ೦ಗು ಚಿಟಿಕೆ, ಜೀರಿಗೆ 1 ½ ಚಮಚ, ಧನಿಯ 1 ½ ಚಮಚ, ಲವ೦ಗ- 1, ಒಣಮೆಣಸು – 6-7. 
ಒಗ್ಗರಣೆಗೆ: ಎಣ್ಣೆ, ಸಾಸಿವೆ, ಕರಿಬೇವು.



ಮಾಡುವ ವಿಧಾನ: ಶೇ೦ಗಾ,ಕಡ್ಲೆಬೇಳೆ,ಉದ್ದಿನ ಬೇಳೆ,ಜೀರಿಗೆ,ಧನಿಯ,ಒಣಮೆಣಸು ಇವೆಲ್ಲವನ್ನು ಸಣ್ಣ ಉರಿಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಹುರಿದು ಪಕ್ಕಕ್ಕಿಡಿ. ಕೊನೆಯಲ್ಲಿ ಇ೦ಗು ಹಾಕಬೇಕು. ಬದನೆಕಾಯಿಯನ್ನು ಸ್ವಲ್ಪ ದೊಡ್ದದಾಗಿ ಕಟ್ ಮಾಡಿ(ಚಿತ್ರದಲ್ಲಿ ತೋರಿಸಿದ೦ತೆ - ಬದನೇಕಾಯಿಯನ್ನು ಮಧ್ಯದಲ್ಲಿ ಸೀಳಿ ಬುಡದಲ್ಲಿ ಸೇರಿಕೊ೦ಡಿರುವ೦ತೆ ಮಾಡಬಹುದು ಇಡೀ ಬದನೇಕಾಯಿ ಥರ ಕಾಣಿಸುತ್ತದೆ. ಆದರೆ ಬದನೇಕಾಯಿ ಬೇಯಲು ಜಾಸ್ತಿ ಸಮಯ ಬೇಕು. ಅದಕ್ಕೆ ಇಲ್ಲಿ ಭಾಗಗಳನ್ನು ಮಾಡಿದ್ದೇನೆ.) ಬಾಣಲೆಗೆ ಎಣ್ಣೆ (ಜಾಸ್ತಿನೆ ಬೇಕು ಬದನೆಕಾಯಿ ಎಣ್ಣೆಯಲ್ಲೆ ಬೇಯಬೇಕು) ಹಾಕಿ ಸ್ವಲ್ಪ ಕಾದ ನ೦ತರ ಸಾಸಿವೆ, ಕರಿಬೇವು ಹಾಕಿ, ಬದನೆಕಾಯಿಯನ್ನು ಹಾಕಬೇಕು. ಇದಕ್ಕೆ ಸ್ವಲ್ಪ ಉಪ್ಪು & ವಾಟೆಪುಡಿ ಹಾಕಿ. 




ಹುರಿದಿಟ್ಟ ಮಸಾಲೆಗೆ ಕಾಯಿತುರಿ ಹಾಕಿ ನೀರು ಹಾಕದೆ ತರಿ ತರಿ ಪುಡಿ ಮಾಡಿಕೊಳ್ಳಿ. ಬದನೆಕಾಯಿ ಅರ್ಧ ಬೆ೦ದ ಮೇಲೆ ಉದ್ದುದ್ದ ಸೀಳಿದ ಈರುಳ್ಳಿ ಹಾಕಿ. ಬದನೇಕಾಯಿ ಬೇಯುವವರೆಗೂ ಅಗಾಗ ಅದನ್ನು ಕೈಯಾಡಿಸುತ್ತಿರಬೇಕು. ಇಲ್ಲವಾದಲ್ಲಿ ಅದು ಸೀದು ಹೊಗುವ ಸಾಧ್ಯತೆ ಇದೆ. ಬದನೆಕಾಯಿ ಬೆ೦ದ ನ೦ತರ ಅದಕ್ಕೆ ಪುಡಿ ಮಾಡಿಟ್ಟ ಮಸಾಲೆ ಹಾಕಿ, ಅಗತ್ಯವಿದ್ದಲ್ಲಿ ಸ್ವಲ್ಪ ನೀರು ಹಾಕಿ. ಎಣ್ಣೆಗಾಯಿ ಗೊಜ್ಜಿನ ಥರ ಬೇಕೆ೦ದು ಇಷ್ಟಪಡುವವರು ಮಸಾಲೆ ರುಬ್ಬುವಾಗ ನೀರು ಸೇರಿಸಬಹುದು. ಇದು ಎಲ್ಲ ಥರಹದ ರೋಟಿಯ ಜೊತೆ ಮತ್ತು ಅನ್ನದ ಜೊತೆ ಕೂಡ ಚೆನ್ನಾಗಿರುತ್ತದೆ.




ಗುರುವಾರ, ಏಪ್ರಿಲ್ 10, 2014

ಬದನೇಕಾಯಿ ಪಲ್ಯ - 1 :

ಸಾಮಗ್ರಿಗಳು: ಮಧ್ಯಮ ಗಾತ್ರದ ಬಲೂನ್ ಬದನೇಕಾಯಿ 1, ತೆಂಗಿನ ತುರಿ 2 ಕಪ್, ಬೆಳ್ಳುಳ್ಳಿ 10-15 ಎಸಳು, ಹಸಿ ಮೆಣಸಿನ ಕಾಯಿ (ಅಥವಾ ಸೂಜು ಮೆಣಸು / ಜೀರಿಗೆ ಮೆಣಸು) ಖಾರಕ್ಕೆ, ವಾಟೆ ಪುಡಿ / ಅಮ್ಚೂರ್ ಪೌಡರ್ 1 ಚಮಚ, ಎಣ್ಣೆ 4-5 ಚಮಚ, ಕರಿಬೇವು ಸ್ವಲ್ಪ, ಸಾಸಿವೆ - ಜೀರಿಗೆ ಸ್ವಲ್ಪ, ಅರಿಶಿನ ಪುಡಿ 1/4 ಚಮಚ, ಉಪ್ಪು ರುಚಿಗೆ ತಕ್ಕಷ್ಟು. 

ವಿಧಾನ: ಬದನೆಕಾಯಿಯನ್ನು ಕೆಳಗೆ ಚಿತ್ರದಲ್ಲಿ ತೋರಿಸಿದಂತೆ ಹೆಚ್ಚಿಕೊಳ್ಳಿ. 
                                       
ಬೆಳ್ಳುಳ್ಳಿಯನ್ನು ಜಜ್ಜಿಕೊಳ್ಳಿ (ಸೂಜು ಮೆಣಸಾದರೆ ಬೆಳ್ಳುಳ್ಳಿ ಜೊತೆಯೇ ಜಜ್ಜಿ), ಹಸಿ ಮೆಣಸನ್ನು ಉದ್ದಕ್ಕೆ ಸೀಳಿಕೊಳ್ಳಿ. ನಂತರ ಬಾಣಲೆಗೆ ಎಣ್ಣೆ, ಜೀರಿಗೆ, ಸಾಸಿವೆ, ಕರಿಬೇವು ಹಾಕಿ ಒಗ್ಗರಣೆ ಮಾಡಿ ಅದಕ್ಕೆ ಜಜ್ಜಿದ ಬೆಳ್ಳುಳ್ಳಿ, ಮೆಣಸಿನ ಕಾಯಿ, ಅರಿಶಿನ ಪುಡಿ ಹಾಕಿ. ಬೆಳ್ಳುಳ್ಳಿ ಹುರಿದ ಮೇಲೆ ಹೆಚ್ಚಿಟ್ಟುಕೊಂಡ ಬದನೇಕಾಯಿ ಹಾಕಿ, ಅದು ಮುಳುಗುವಷ್ಟು ನೀರು ಹಾಕಿ, ಉಪ್ಪು, ವಾಟೆ ಪುಡಿ / ಅಮ್ಚೂರ್ ಪುಡಿ ಹಾಕಿ ಕಲಕಿ, ಮುಚ್ಚಿ ಚೆನ್ನಾಗಿ ಬೇಯಿಸಿ.  


ಬದನೇಕಾಯಿ ಮೆತ್ತಗೆ ಬೆಂದ ಮೇಲೆ (ಸ್ವಲ್ಪ ಪ್ರಮಾಣದಲ್ಲಿ ನೀರು ಇರಲಿ, ಪೂರ್ತಿ ಆರುವುದು ಬೇಡ, ಬೇಕಿದ್ದರೆ ಸ್ವಲ್ಪ ನೀರು ಸೇರಿಸಿ) ತುರಿದಿಟ್ಟ ತೆಂಗಿನಕಾಯಿ ಹಾಕಿ ಚೆನ್ನಾಗಿ ಕಲಕಿ. ಉಳಿದ ನೀರಿನಲ್ಲಿ ತೆಂಗಿನ ಕಾಯಿ ಬೇಯಲಿ. ಉಪ್ಪು, ಹುಳಿ ಸರಿಯಿದೆಯೇ ಎಂದು ಪರೀಕ್ಷಿಸಿಕೊಳ್ಳಬಹುದು, ಖಾರ ಸ್ವಲ್ಪ ಜಾಸ್ತಿ ಇರಲಿ. ನೀರು ಪೂರ್ತಿ ಆರಿದ ಮೇಲೆ ಉರಿ ಆರಿಸಿ.  ಈ ಪಲ್ಯವನ್ನು ಬಿಸಿ ಬಿಸಿ ಅನ್ನದೊಡನೆ ಮತ್ತು ಚಪಾತಿಯೊಡನೆ ಸವಿದು ನೋಡಿ.  
                                 

ಸೂಚನೆ : ಈ ಪಲ್ಯಕ್ಕೆ ತೆಂಗಿನ ಕಾಯಿ ಮತ್ತು ಖಾರ ಜಾಸ್ತಿ ಇದ್ದರೆ ಮಾತ್ರ ರುಚಿ ಜಾಸ್ತಿ.