ಗುರುವಾರ, ಆಗಸ್ಟ್ 28, 2014

ಕ್ಯಾರೆಟ್ ಹಲ್ವ :

ಸಾಮಗ್ರಿಗಳು : 
ಕ್ಯಾರೆಟ್ (ಮಧ್ಯಮ ಗಾತ್ರದ್ದು) : 6-7
ಹಾಲು : 5 ಕಪ್ 
ಸಕ್ಕರೆ : 10-11 ಟೇಬಲ್ ಚಮಚ 
ಉಪ್ಪು : ಚಿಟಿಕೆ
ತುಪ್ಪ : 2 ಟೀ ಚಮಚ  
ಗೋಡಂಬಿ : 8-10 
ಒಣ ದ್ರಾಕ್ಷಿ : 2 ಚಮಚ 
ಖೋವ : 2-3 ಚಮಚ (optional)

ವಿಧಾನ : 
ಕ್ಯಾರೆಟ್ ಅನ್ನು ತುರಿದುಕೊಂಡು ದಪ್ಪ ತಳದ ಬಾಣಲೆ ಅಥವಾ ಪಾತ್ರೆಗೆ ಹಾಕಿ ಹಾಲು ಹಾಕಿ ಒಲೆಯ ಮೇಲಿಡಿ. ಕ್ಯಾರೆಟ್ ತುರಿ ಪೂರ್ತಿ ಹಾಲಿನಲ್ಲಿ ಮುಳುಗುವಷ್ಟು ಹಾಲು ಬೇಕು. Medium flame ನಲ್ಲಿ ಆಗಾಗ ಕಲಕುತ್ತಿರಿ. ಹಾಲಿನಲ್ಲೇ ಕ್ಯಾರೆಟ್ ಬೇಯುತ್ತಾ ಹಾಲಿನ ಪ್ರಮಾಣ ಕಡಿಮೆಯಾಗುತ್ತಾ ಬರುತ್ತದೆ. ಸುಮಾರು ಅರ್ಧ ಗಂಟೆ ಬೇಕಾಗಬಹುದು. ಸ್ವಲ್ಪವೇ ಹಾಲು ಉಳಿದಿದೆ ಎನ್ನುವಾಗ (ಕೆಳಗಿನ ಚಿತ್ರದಲ್ಲಿರುವಂತೆ) ಸಕ್ಕರೆ ಹಾಕಿ ಸಣ್ಣ ಉರಿಯಲ್ಲಿಡಿ. 



ಇದಕ್ಕೆ ಚಿಟಿಕೆ ಉಪ್ಪು, ಒಣ ದ್ರಾಕ್ಷಿ, ಕತ್ತರಿಸಿದ ಗೋಡಂಬಿ ಹಾಕಿ ಕಲಕುತ್ತಿರಿ. ಮಿಶ್ರಣದ ದ್ರವ ಪೂರ್ತಿ ಆರಿದ ಮೇಲೆ ತುಪ್ಪ ಹಾಕಿ ಸರಿಯಾಗಿ ಕಲಕಿ ಉರಿ ಆರಿಸಿ. ರುಚಿಯಾದ ಕ್ಯಾರೆಟ್ ಹಲ್ವಾ ಸವಿದು ನೋಡಿ.... ಇದು ವೆನಿಲ್ಲಾ ಐಸ್ ಕ್ರೀಮ್ ಜೊತೆಯೂ ಒಳ್ಳೆಯ ಕಾಂಬಿನೇಶನ್...... :) 



ಸಲಹೆಗಳು : 
1) ಇದಕ್ಕೆ ಬೇರೆ ಸಿಹಿ ತಿನಿಸುಗಳಿಗೆ ಹಾಕುವಷ್ಟು ಉಪ್ಪು ಬೇಡ. ಒಂದೇ ಒಂದು ಚಿಟಿಕೆ ಉಪ್ಪು ಹಾಕಿ. ಕ್ಯಾರೆಟ್ ಮತ್ತು ಹಾಲಿನಲ್ಲೇ ಮಾಡುವುದರಿಂದ  ಕಮ್ಮಿ ಸಾಕು.  
2) ಖೋವ ಹಾಕದಿದ್ದರೂ ಹಾಲು ಜಾಸ್ತಿ ಹಾಕಿರುವುದರಿಂದ ರುಚಿಗೆ ಯಾವುದೇ ಅಡ್ಡಿಯಿಲ್ಲ. 
ಆರೋಗ್ಯ / ಸೌಂದರ್ಯ ಸಲಹೆ : ಟೊಮೇಟೊ ಹಣ್ಣನ್ನು ನಿಮ್ಮ ಅಡುಗೆಯಲ್ಲಿ ಉಪಯೋಗಿಸುವಾಗ ಅದರ ಬೀಜಮಿಶ್ರಿತ ತಿರುಳನ್ನು ಉಪಯೋಗಿಸಿದರೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಆದ್ದರಿಂದ ಅದನ್ನು ತೆಗೆದು ಅದಕ್ಕೆ ಹಾಲಿನ ಕೆನೆ ಅಥವಾ 1 ಚಮಚ ಮೊಸರು, ಅರಿಶಿನ ಪುಡಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ ಮಸಾಜ್ ಮಾಡಿದರೆ ನಯವಾದ ತ್ವಚೆ ನಿಮ್ಮದಾಗುತ್ತೆ...!! 

ಗುರುವಾರ, ಆಗಸ್ಟ್ 21, 2014

ಶೇ೦ಗಾ ಚಿಕ್ಕಿ / ಶೇ೦ಗಾ ಬರ್ಫಿ:



ಸಾಮಾಗ್ರಿಗಳು: ಶೇ೦ಗಾ 1 ಕಪ್, ಸಕ್ಕರೆ 3/4 ಕಪ್, ತುಪ್ಪ 1 ಚಮಚ.



ವಿಧಾನ:ಶೇ೦ಗಾವನ್ನು ಸಣ್ಣ ಉರಿಯಲ್ಲಿ ಗರಿ ಗರಿಯಾಗಿ ಹುರಿದುಕೊಳ್ಳಿ, ಅದು ಬಿಸಿ ಆರಿದಮೇಲೆ ಅದರ ಮೇಲಿನ ತೆಳುವಾದ ಸಿಪ್ಪೆಯನ್ನು ತೆಗೆಯಬೇಕು. ಅರ್ಧ ಶೇ೦ಗಾವನ್ನು ಮಿಕ್ಸಿ ಜಾರಿನಲ್ಲಿ ಹಾಕಿ ಒ೦ದು ಸುತ್ತು ತಿರುಗಿಸಿ ಅ೦ದರೆ ಶೇ೦ಗಾ ೨-೩ ಚುರು ಅಗಬೇಕಷ್ಟೆ, ಉಳಿದದ್ದನ್ನು ಹಾಗೆ ಸೇರಿಸಿ.  ದಪ್ಪ ತಳದ ಬಾಣಲೆಗೆ ಸಕ್ಕರೆಯನ್ನು ಹಾಕಿಕೊ೦ಡು ½ ಚಮಚ ತುಪ್ಪ ಹಾಕಿ ಸಣ್ಣ ಉರಿಯಲ್ಲಿ ಅದು ಕರಗುವವರೆಗೆ ಕೈ ಆಡಿಸುತ್ತಿರಬೇಕು. ಸಕ್ಕರೆ ಪೂರ್ತಿಯಾಗಿ ಕರಗಿದಮೇಲೆ ಅದರ ಪಾಕವು ಹೊ೦ಬಣ್ಣ ಬರುತ್ತದೆ. ನ೦ತರ ಶೇ೦ಗಾವನ್ನು ಹಾಕಿ ಚೆನ್ನಾಗಿ ಕಲೆಸಬೇಕು. ಒ೦ದು ನುಣುಪಾದ ಕಲ್ಲಿನ ಮೇಲೆ (ನಾನು ಮಾಡಿದ್ದು ಗ್ಯಾಸ್ ಕಟ್ಟೆಯ ಮೇಲೆ) ತುಪ್ಪವನ್ನು ಸವರಿ ಈ ಮಿಶ್ರಣವನ್ನು ಅದರ ಮೇಲೆ ಹಾಕಿ ಲಟ್ಟಣಗೆಯಿ೦ದ ಅದನ್ನು ಲಟ್ಟಿಸಿ, ಅದು ಪೂರ್ತಿ ಬಿಸಿ ಆರುವುದರೊಳಗಾಗಿ ಚಾಕುವಿನಿ೦ದ ಹಲ್ವ ಥರ ಕತ್ತರಿಸಿ.
 ಸೂಚನೆ: ಪ್ಲೇಟಿನಲ್ಲಿ ಈ ಮಿಶ್ರಣವನ್ನು ಹರವಬಾರದು. ಆಮೇಲೆ ಅದನ್ನು ಪ್ಲೇಟಿನಿ೦ದ ತೆಗೆಯುವುದು ತು೦ಬಾ ಕಷ್ಟ.
 

ಬುಧವಾರ, ಆಗಸ್ಟ್ 13, 2014

ಬೆಂಡೆ ಮಸಾಲಾ :




ಬೇಕಾಗುವ ಸಾಮಗ್ರಿಗಳು : ಬೆಂಡೆ ಕಾಯಿ 15 - 20 , ಎಣ್ಣೆ - 6 ಚಮಚ,  ಜೀರಿಗೆ - 1  ಚಮಚ, ಕೊತ್ತಂಬರಿ -3 ಚಮಚ, ಅಚ್ಚ ಮೆಣಸಿನ ಪುಡಿ - 1  ಚಮಚ, ತೆಂಗಿನ ತುರಿ - 1/2  ಕಪ್, ಹಸಿ ಮೆಣಸಿನ ಕಾಯಿ 2  -3,  ಬೆಳ್ಳುಳ್ಳಿ - 5  ಎಸಳು, ಶುಂಟಿ ಅರ್ಧ ಇಂಚು, ಕರಿಬೇವು 6-7 ಎಲೆಗಳು, ಬೆಲ್ಲ ಸ್ವಲ್ಪ (1-2 ಚಮಚ), ವಾಟೆ ಪುಡಿ ( or amchoor powder) ಅಥವಾ ನಿಂಬೆ ರಸ - 1 ಚಮಚ, ಅರಿಶಿನ ಪುಡಿ- 3-4 ಚಿಟಿಕೆ.

 ಮಾಡುವ ವಿಧಾನ: ಬೆಂಡೆಕಾಯಿಯನ್ನು ತೊಳೆದು ನೀರು ಒರೆಸಿಕೊಂಡು ಸಿಗಿದು ಅರ್ಧ ಇಂಚು ಉದ್ದಕ್ಕೆ ಹೆಚ್ಚಿಕೊಳ್ಳಿ.  ಚಿಕ್ಕ ಒಗ್ಗರಣೆ ಪಾತ್ರೆಗೆಚಮಚ ಎಣ್ಣೆ ಹಾಕಿ ಕಾದ ನಂತರ ಜೀರಿಗೆ , ಕೊತ್ತಂಬರಿ ಹಾಗೂ  ಕರಿಬೇವು ಹಾಕಿ ಹುರಿದುಕೊಳ್ಳಿ. ಮಿಕ್ಸರ್ ಗೆ  ಅಚ್ಚ ಮೆಣಸಿನ ಪುಡಿ, ಶುಂಟಿ, ಬೆಳ್ಳುಳ್ಳಿ, ಹಸಿ ಮೆಣಸಿನ ಕಾಯಿ , ತೆಂಗಿನ ತುರಿ,  ಹುರಿದುಕೊಂಡ ಮಿಶ್ರಣ, ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಬಾಣೆಲೆಗೆ  4  ಚಮಚ ಎಣ್ಣೆ ಹಾಕಿ , ಕಾದ ನಂತರ ಹೆಚ್ಚಿದ ಬೆಂಡೆ ಕಾಯಿ, ಉಪ್ಪು, ವಾಟೆ ಪುಡಿ ಅಥವಾ ಲಿಂಬೆ ರಸ ಹಾಕಿ ಲೋಳೆ ಬಿಡುವ ತನಕ ಚೆನ್ನಾಗಿ ಹುರಿಯಿರಿ. ನಂತರ ಅರಿಶಿನ ಪುಡಿ, ರುಬ್ಬಿದ ಮಿಶ್ರಣ, ಉಪ್ಪು, ಸ್ವಲ್ಪ ಬೆಲ್ಲ ಹಾಗೂ ನೀರು ಹಾಕಿ ಕುದಿಸಿ (ಗಟ್ಟಿ ಸಾಂಬಾರ್ ಹದಕ್ಕೆ ನೀರು ಹಾಕಿದರೆ ಸಾಕು). ಬಿಸಿ ಬಿಸಿ ಅನ್ನದ ಜೊತೆ ಬೆಂಡೆ ಮಸಾಲಾ ಸವಿದು ನೋಡಿ. ಚಪಾತಿ / ರೋಟಿ ಜೊತೆ ಕೂಡ ಚೆನ್ನಾಗಿರುತ್ತದೆ.