ಶುಕ್ರವಾರ, ಆಗಸ್ಟ್ 21, 2015

ಅಕ್ಕಿ ರೊಟ್ಟಿ ಮತ್ತು ಶೇಂಗಾ ಚಟ್ನಿ :

ಅಕ್ಕಿ ರೊಟ್ಟಿಗೆ ಸಾಮಗ್ರಿಗಳು :
ಅಕ್ಕಿ ಹಿಟ್ಟು : ೧.೫ ಕಪ್,
ಸೌತೆಕಾಯಿ : ೨,
ಜೀರಿಗೆ : ೧/೪ ಚಮಚ,
ಉಪ್ಪು: ೧/೨ ಚಮಚ 

ವಿಧಾನ :
ಸೌತೆಕಾಯಿಯನ್ನು ಹೆಚ್ಚಿ (ಬಲಿತಿದ್ದರೆ ಬೀಜ ತೆಗೆಯಿರಿ). ಮಿಕ್ಸಿಗೆ ಹಾಕಿ ನುಣ್ಣಗೆ  ರುಬ್ಬಿ. ರಸ  ೩ ಕಪ್ ನಷ್ಟು ಆಗಬೇಕು ಆಗಿಲ್ಲವಾದರೆ ಸ್ವಲ್ಪ ನೀರು ಸೇರಿಸಿ. ದಪ್ಪ ತಳದ ಬಾಣಲೆ / ಪಾತ್ರೆಗೆ ಸೌತೆಕಾಯಿ ರಸ, ಉಪ್ಪು ಮತ್ತು ಜೀರಿಗೆ ಹಾಕಿ ಕುದಿಯಲು ಬಿಡಿ. ರಸ ಕುದಿಯುತ್ತಿರುವಾಗ ಸ್ವಲ್ಪ ಸ್ವಲ್ಪವೇ ಅಕ್ಕಿಹಿಟ್ಟು ಹಾಕುತ್ತಾ ಕಲಕುತ್ತ ಬನ್ನಿ. ಮಿಶ್ರಣವನ್ನು ಚೆನ್ನಾಗಿ ಕಸುತ್ತಿರಿ. ಹಿಟ್ಟು ಚೆನ್ನಾಗಿ ಬೇಯಬೇಕು. ಅಂದರೆ ಸುಮಾರು ೨-೩ ನಿಮಿಷ ಸಣ್ಣ ಉರಿಯಲ್ಲಿ ಕಲಸುತ್ತಿರಿ.  


ಹಿಟ್ಟು ತಳಕ್ಕೆ ಅಂಟುತ್ತಿರುತ್ತದೆ, ಆದರೂ ಬಿಡದೇ ಕಲಕಿ. ಇಲ್ಲವಾದರೆ ರೊಟ್ಟಿ ಗಟ್ಟಿಯಾಗುತ್ತದೆ. ಮಿಶ್ರಣ ಸ್ವಲ್ಪ ತಣ್ಣಗಾದ ಮೇಲೆ ಚೆನ್ನಾಗಿ ಮೆದ್ದು ಕಲಸಿ. ತುಂಬಾ ಕೈಗೆ ಅಂಟುತ್ತಿದ್ದರೆ (ಮೆತ್ತಗಿದ್ದರೆ) ಸ್ವಲ್ಪ ಅಕ್ಕಿಹಿಟ್ಟು ಸೇರಿಸಿ ಕಲಸಿ. ದೊಡ್ಡ ಲಿಂಬು ಗಾತ್ರದ ಉಂಡೆ ಮಾಡಿ ಲಟ್ಟಿಸಿ. ಕೆಳಗೆ ಚಿತ್ರದಲ್ಲಿ ತೋರಿಸಿದಂತೆ ಅಂಚು ಸರಿ ಪಡಿಸುತ್ತಾ ತೆಳ್ಳಗೆ ಲಟ್ಟಿಸಿ. 

ಕಾದ ತವಾ ಮೇಲೆ ಎರಡೂ ಕಡೆ ಒಮ್ಮೆ ತಿರುಗಿಸಿ ನಂತರ ದೊಡ್ಡ ಉರಿಯಲ್ಲಿ ಒಲೆಯ ಮೇಲೆ ಹಾಕಿದರೆ ರೊಟ್ಟಿ ಚೆನ್ನಾಗಿ ಉಬ್ಬುತ್ತದೆ. 

ಬಿಸಿ ಬಿಸಿ ರೊಟ್ಟಿಯನ್ನು ತುಪ್ಪ, ಚಟ್ನಿ ಜೊತೆ ಸವಿಯಿರಿ. ಶೇಂಗಾ ಚಟ್ನಿಗೆ ಬೇಕಾದ ಸಾಮಗ್ರಿಗಳು:
ತೆಂಗಿನ ತುರಿ : ೧/೨ ಕಪ್,
ಶೇಂಗಾ : ೩-೪ ಟೇಬಲ್ ಚಮಚ,
ಒಣಮೆಣಸಿನ ಕಾಯಿ : ೪-೫,
ಎಣ್ಣೆ : ೧/೨ ಚಮಚ,
ಸಕ್ಕರೆ: ೧/೪ ಚಮಚ,
ಉಪ್ಪು: ರುಚಿಗೆ 

ವಿಧಾನ:
ಶೇಂಗಾ ಮತ್ತು ಒಣಮೆಣಸಿನ ಕಾಯಿಗೆ ಸ್ವಲ್ಪ ಎಣ್ಣೆ ಹಾಕಿ ಚೆನ್ನಾಗಿ ಹುರಿಯಿರಿ. (ಬೇರೆ ಬೇರೆ ಹುರಿದರೆ ಒಳ್ಳೆಯದು). ನಂತರ ಇದನ್ನು ತೆಂಗಿನ ತುರಿ, ಉಪ್ಪು, ಸಕ್ಕರೆ ಸೇರಿಸಿ ರುಬ್ಬಿದರೆ ಶೇಂಗಾ ಚಟ್ನಿ ಸಿದ್ಧ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ