ಶುಕ್ರವಾರ, ಏಪ್ರಿಲ್ 28, 2017

ದ್ರಾಕ್ಷಿ ಹಣ್ಣಿನ ಸಾಸಿವೆ:

ಈಗ ದ್ರಾಕ್ಷಿ ಹಣ್ಣಿನ ಸೀಸನ್. ತಿನ್ನಲು ತಂದ ದ್ರಾಕ್ಷಿ ಸಿಹಿಯ ಜೊತೆ ಸ್ವಲ್ಪ ಹುಳಿ ಇದ್ದರೆ ಈ ಸಾಸಿವೆ ಮಾಡಿ ನೋಡಿ. 
ಸಾಮಗ್ರಿಗಳು :
ಹಸಿ ದ್ರಾಕ್ಷಿ : 18-20 
ತೆಂಗಿನ ತುರಿ : 1/4 ಕಪ್ 
ಮೊಸರು : 1/4 ಕಪ್ (ಹುಳಿ ಇರಬಾರದು) 
ಸಾಸಿವೆ : 1/2 ಚಮಚ 
ಹಸಿಮೆಣಸಿನ ಕಾಯಿ : 1
ಅರಿಶಿನ ಪುಡಿ : 1/4 ಚಮಚ
ತುಪ್ಪ : 1-2 ಚಮಚ  
ಉಪ್ಪು : ರುಚಿಗೆ ತಕ್ಕಷ್ಟು 

ಒಗ್ಗರಣೆಗೆ : 
ಎಣ್ಣೆ : 1 ಚಮಚ 
ಸಾಸಿವೆ : 1/4 ಚಮಚ 

ವಿಧಾನ :
ದ್ರಾಕ್ಷಿ ಹಣ್ಣನ್ನು ಸಣ್ಣದಾಗಿ ಹೆಚ್ಚಿ.  ಅಂದರೆ  ಅಡ್ಡವಾಗಿ ಎರಡು ಭಾಗ ಮಾಡಿದರೆ ಸಾಕು, ತುಂಬಾ ದೊಡ್ಡ ದ್ರಾಕ್ಷಿಯಾದರೆ ನಾಲ್ಕು ಭಾಗ ಮಾಡಿ. ದಪ್ಪ ತಳದ ಪಾತ್ರೆಗೆ ತುಪ್ಪ ಹಾಕಿ, ಹೆಚ್ಚಿದ ದ್ರಾಕ್ಷಿ ಹಾಕಿ ಮೆತ್ತಗಾಗುವ ತನಕ ಹುರಿಯಿರಿ. ಮಿಕ್ಸಿ ಜಾರ್ ಗೆ ತೆಂಗಿನ ತುರಿ, ಹಸಿಮೆಣಸಿನ ಕಾಯಿ, ಸಾಸಿವೆ ಹಾಕಿ ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಹುರಿದಿಟ್ಟ ಮಿಶ್ರಣ ತಣ್ಣಗಾದ ಮೇಲೆ ಮೊಸರು, ರುಬ್ಬಿದ ಮಿಶ್ರಣ, ಉಪ್ಪು, ಬೇಕಿದ್ದಲ್ಲಿ ಸ್ವಲ್ಪ ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇದಕ್ಕೆ ಎಣ್ಣೆ, ಸಾಸಿವೆ ಒಗ್ಗರಣೆ ಮಾಡಿದರೆ ದ್ರಾಕ್ಷಿ ಸಾಸಿವೆ ಅನ್ನದ ಜೊತೆ ಸವಿಯಲು ಸಿದ್ಧ. 

ಶುಕ್ರವಾರ, ಏಪ್ರಿಲ್ 21, 2017

ಕೋಕ೦ (ಮುರುಗಲು ಸಿಪ್ಪೆಯ ಪಾನಕ):

ಸಾಮಗ್ರಿಗಳು : 
ಮುರುಗಲು ಹಣ್ಣು - 30,
 ಸಕ್ಕರೆ - 400 ಗ್ರಾ೦


ವಿಧಾನ : ಮುರುಗಲು ಹಣ್ಣನ್ನು ತೊಳೆದು ಒ೦ದು ಬಟ್ಟೆಯಲ್ಲಿ ನೀರು ಒರೆಸಿ. ಹಣ್ಣನ್ನು ಒಡೆದು ಬೀಜ ತೆಗಿಯಿರಿ. ಸಿಪ್ಪೆಯನ್ನು ಒ೦ದು ಪಾತ್ರೆಯಲ್ಲಿ ಹಾಕಿ ಅದಕ್ಕೆ ಸಕ್ಕರೆ ಸೇರಿಸಿ 3-4 ದಿನ ತೆಳುವಾದ ಬಟ್ಟೆ ಮುಚ್ಚಿ ಬಿಸಿಲಿಗೆ ಒಣಗಿಸಿ. ನ೦ತರ ಸಕ್ಕರೆಯು ಕರಗಿ ನೀರಾಗಿರುತ್ತದೆ. ಈಗ ಸಿಪ್ಪೆಯನ್ನು ಕೈಯಲ್ಲಿ ಗಟ್ಟಿಯಾಗಿ ಹಿ೦ಡಿ. ರಸವನ್ನು ಸೋಸಿ ಮತ್ತೆ ಬಿಸಿಲಿನಲ್ಲಿ 3-4 ದಿನ ತೆಳುವಾದ ಬಟ್ಟೆ ಮುಚ್ಚಿ ಇಡಿ. ಇದನ್ನು ಒ೦ದು ಗಾಜಿನ ಬಾಟಲಿಯಲ್ಲಿ ಶೇಖರಿಸಿ ಇಡಿ. ಬೇಕಾದಾಗ ಒ೦ದು ಚಮಚ ಕೋಕ೦ ನೀರಿಗೆ ಸೇರಿಸಿ ಸ್ವಲ್ಪ ಸಕ್ಕರೆ ಹಾಕಿದರೆ ರುಚಿಯಾದ ಹಾಗೆ ಆರೋಗ್ಯಕ್ಕು ಒಳ್ಳೆಯದಾದ ಪಾನಕ ಕುಡಿಯಬಹುದು.

ಶನಿವಾರ, ಏಪ್ರಿಲ್ 15, 2017

ಕಲ್ಲಂಗಡಿ ಸಿಪ್ಪೆಯ ದೋಸೆ :

ಕಲ್ಲಂಗಡಿ ಹಣ್ಣಿನ ಕೆಂಪು ಭಾಗವನ್ನು ಮಾತ್ರ  ತಿಂದು ಅದರ ಸಿಪ್ಪೆಯ ಜೊತೆ ಇರುವ ಬಿಳಿಯ ಭಾಗವನ್ನು ಹಾಗೆಯೇ ಬಿಸಾಡುವುದು ರೂಢಿ.... ಅದರ ಬದಲು ಸಿಹಿಯಾದ ಕೆಂಪು ಭಾಗವನ್ನು ಕತ್ತರಿಸಿ ತಿಂದು, ಸಪ್ಪೆಯಾಗಿರುವ ಬಿಳಿಯ ಭಾಗವನ್ನು ಹಾಕಿ ಗರಿ ಗರಿ ದೋಸೆ ಮಾಡಿಕೊಳ್ಳಬಹುದು.... ಇಲ್ಲಿದೆ ಮಾಡುವ ವಿಧಾನ... 

ಸಾಮಗ್ರಿಗಳು :
ಹೆಚ್ಚಿದ ಕಲ್ಲಂಗಡಿ ಸಿಪ್ಪೆ : 2 ಕಪ್ (ಸಿಪ್ಪೆಯ ಹಸಿರು ಭಾಗ ತೆಗೆದು ಒಳಗಿನ ಬಿಳಿಯ ಭಾಗವನ್ನು ಹೆಚ್ಚಿಕೊಳ್ಳಿ) 
ಅಕ್ಕಿ : 2 ಕಪ್ 
ಅವಲಕ್ಕಿ : 1 ಟೇಬಲ್ ಚಮಚ 
ಮೆಂತ್ಯ : 1/4 ಚಮಚ 
ಉದ್ದಿನ ಬೇಳೆ : 1/2 ಚಮಚ 
ಉಪ್ಪು : ರುಚಿಗೆ 
ಎಣ್ಣೆ : ದೋಸೆ ತವಾಗೆ ಸವರಲು 

ವಿಧಾನ :
ಅಕ್ಕಿ, ಅವಲಕ್ಕಿ, ಉದ್ದಿನ ಬೇಳೆ, ಮೆಂತ್ಯ ಕಾಳು  ಎಲ್ಲವನ್ನೂ ತೊಳೆದು ಒಟ್ಟಿಗೆ ಸೇರಿಸಿ 4-5 ಘಂಟೆಗಳ ಕಾಲ ನೆನೆಸಿಡಿ. 

ನಂತರ ನೀರು ಬಸಿದಿಟ್ಟುಕೊಂಡು  ಹೆಚ್ಚಿದ ಕಲ್ಲಂಗಡಿ ಜೊತೆ ಸೇರಿಸಿ ರುಬ್ಬಿ. ಬೇಕಿದ್ದಲ್ಲಿ ಬಸಿದಿಟ್ಟುಕೊಂಡ ನೀರನ್ನೇ ಸ್ವಲ್ಪ ಸೇರಿಸಿಕೊಂಡು ನುಣ್ಣಗೆ ರುಬ್ಬಿಕೊಳ್ಳಿ. ಈ ಹಿಟ್ಟನ್ನು 7-8 ಘಂಟೆಗಳ ಕಾಲ ಹುದುಗಲು ಬಿಡಿ. ರಾತ್ರಿ ರುಬ್ಬಿಟ್ಟರೆ ಬೆಳಿಗ್ಗೆ ತಿಂಡಿಗೆ ಮಾಡಬಹುದು. ಇದಕ್ಕೆ ಉಪ್ಪು, ಬೇಕಿದ್ದಲ್ಲಿ ಸ್ವಲ್ಪ ನೀರು ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. 

ದೋಸೆ ತವಾಗೆ  ಎಣ್ಣೆ ಸವರಿ ಚೆನ್ನಾಗಿ ಕಾಯಿಸಿ ತೆಳ್ಳಗೆ ದೋಸೆ ಮಾಡಿ ಮುಚ್ಚಿ ಬೇಯಿಸಿ. 

ಗರಿಗರಿಯಾದ ಕಲ್ಲಂಗಡಿ ದೋಸೆಯನ್ನು ಕಾಯಿ ಚಟ್ನಿ ಜೊತೆ ಸವಿಯಿರಿ.
ಸಲಹೆಗಳು : 
1) ಇದೇ ಹಿಟ್ಟಿನಿಂದ ದೋಸೆಯ ಬದಲು ತೆಳ್ಳೇವು ಕೂಡ ಮಾಡಬಹುದು.
2) ನಿಮಗೆ ಇಷ್ಟವಿದ್ದರೆ ದೋಸೆ ಮಾಡುವಾಗ ಎಣ್ಣೆ / ತುಪ್ಪ ಹಾಕಿಕೊಳ್ಳಬಹುದು.

ಶುಕ್ರವಾರ, ಏಪ್ರಿಲ್ 7, 2017

ಕಾಯಿ ಉ೦ಡೆ :

ಸಾಮಗ್ರಿಗಳು : 
ತೆ೦ಗಿನತುರಿ - 2 ಕಪ್ 
ಬೆಲ್ಲ - 1 ಕಪ್,
ಏಲಕ್ಕಿ ಪುಡಿ - 1/2 ಟೀ ಚಮಚ, 
ಗೋಡ೦ಬಿ - 15



ವಿಧಾನ : ಒ೦ದು ದಪ್ಪ ತಳದ ಪಾತ್ರೆ/ಬಾಣಲೆಗೆ ತೆ೦ಗಿನತುರಿ, ಬೆಲ್ಲ ಸೇರಿಸಿ ೧೫-೨೦ ನಿಮಿಷ ಸಣ್ಣ ಉರಿಯಲ್ಲಿ ಕುದಿಸಿ ಸೌಟಿನಲ್ಲಿ ಆಗಾಗ ತೊಳೆಸುತ್ತಿರಿ. ಇಲ್ಲವಾದಲ್ಲಿ ಬೆಲ್ಲ ತಳಕ್ಕೆ ಹಿಡಿಯುತ್ತದೆ. ಈ ತೆ೦ಗಿನತುರಿ ಬೆಲ್ಲದ ಮಿಶ್ರಣವು ಬದಿ & ಸೌಟು ಬಿಡುವವರೆಗು ತೊಳೆಸುತ್ತಲೆ ಇರಬೇಕು. ನ೦ತರ ಒಲೆಯಿ೦ದ ಇಳಿಸಿ ಏಲಕ್ಕಿ ಪುಡಿ ಗೋಡ೦ಬಿ ಚೂರುಗಳನ್ನು ಸೇರಿಸಿ ಸರಿಯಾಗಿ ಕಲೆಸಿ. ಸ್ವಲ್ಪ ಬಿಸಿ ಆರಿದ ಮೇಲೆ ಉ೦ಡೆಯನ್ನು ಮಾಡಿದರೆ ಕಾಯಿ ಉ೦ಡೆ ಸಿದ್ಧ.

(ಗೋಡ೦ಬಿಯ ಬದಲು ಶೇ೦ಗಾ ಕೂಡ ಹಾಕಬಹುದು. ಶೇ೦ಗಾ ಹಾಕುವಿರಾದರೆ ಅದನ್ನು ಹುರಿದು ಹಾಕಿ ಇಲ್ಲವಾದರೆ ಹಸಿ ವಾಸನೆ ಬರುತ್ತದೆ.)